ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದ ಬೆಳ್ಳಿಮಿಂಚು ‘ಕಥಾಗುಚ್ಛ’

Published 2 ಜುಲೈ 2023, 1:27 IST
Last Updated 2 ಜುಲೈ 2023, 1:27 IST
ಅಕ್ಷರ ಗಾತ್ರ

- ಪಟ್ನ೦ ಅನಂತಪದ್ಮನಾಭ

ಸಾಮಾಜಿಕ ಜಾಲತಾಣಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಅವುಗಳ ಬಗ್ಗೆ ಒಲವನ್ನು ತೋರಿದರೆ ಮತ್ತೆ ಕೆಲವರು ಅವು ಕೆಲಸಕ್ಕೆ ಬಾರದವು ಎಂಬ ಅಸಡ್ಡೆ ತೋರುತ್ತಾರೆ. ಈ ಸಾಮಾಜಿಕ ಜಾಲತಾಣದಿಂದಲೇ ಸದ್ದಿಲ್ಲದೇ ಕನ್ನಡ ಸಾಹಿತ್ಯ ಸೇವೆಯನ್ನು ಅಭೂತಪೂರ್ವವಾಗಿ ಮಾಡಬಹುದು ಎಂಬುದನ್ನು ಕನ್ನಡ 'ಕಥಾಗುಚ್ಛ' (ಬರಹಗಳ ಕೈಪಿಡಿ) ತೋರಿಸಿಕೊಟ್ಟಿದೆ.

ಇದೊಂದು ಫೇಸ್ಬುಕ್ ಗುಂಪು. ಈ ಗುಂಪಿನ ಸದಸ್ಯರ ಸಂಖ್ಯೆ 60 ಸಾವಿರದ ಗಡಿಯಲ್ಲಿದೆ! ಹೆಸರು ‘ಕಥಾಗುಚ್ಛ’ ಎಂದಿದ್ದರೂ ಇದು ಕೇವಲ ಕಥೆಗಳಿಗೆ ಸೀಮಿತವಾಗಿಲ್ಲ. ಇದರಲ್ಲಿ ಸಾಹಿತ್ಯ ಪ್ರಾಕಾರದ ಎಲ್ಲವೂ ಇದೆ. ಹೊಸ ಆವಿಷ್ಕಾರಗಳೂ ಇವೆ. ಕಥೆ, ಕವನ, ಧಾರಾವಾಹಿ, ಪ್ರವಾಸ ಕಥನ ಮುಂತಾದವುಗಳು ಇವೆ.

ಇಲ್ಲಿನ ವಿಶೇಷವೆಂದರೆ, ವಾರದ ಎಲ್ಲಾ ದಿನಗಳಲ್ಲಿ  ಒಂದೊಂದು ಪ್ರಕಾರಕ್ಕೆ ಒತ್ತುಕೊಡುವುದು. ಸೋಮವಾರ  'ವಾರದ ವಿಶೇಷ' ವಿಷಯವೊಂದನ್ನು ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಬರಹ, ಕತೆ ಬರೆಯಬಹುದು. ಮಂಗಳವಾರ 'ನನ್ನಿಷ್ಟದ ಬರಹ' ಕಳುಹಿಸಲು ಅವಕಾಶ. ಬುಧವಾರ ಶೀರ್ಷಿಕೆಯೊಂದನ್ನು ನೀಡಲಾಗುತ್ತದೆ. ಅದಕ್ಕೆ ಪೂರಕವಾಗಿ ಕಥೆಯನ್ನು ಹೆಣೆಯಬೇಕು. ಗುರುವಾರ ಅಪೂರ್ಣ ಕತೆಯನ್ನು ಪೂರ್ಣಗೊಳಿಸುವವರಿಗೆ ಮುಕ್ತ ಅವಕಾಶ. ಶುಕ್ರವಾರ ಕೂಡ 'ನನ್ನಿಷ್ಟದ ಬರಹ' ಕಳುಹಿಸಲು ಅವಕಾಶ. ಶನಿವಾರ ತುಣುಕು ಮಿಣುಕು, ನ್ಯಾನೋ ಕಥೆ ಬರೆಯಬಹುದು. ಭಾನುವಾರ ಪದಬಂಧಕ್ಕೆ ಮೀಸಲು. ಭಾನುವಾರವೇ ಮುದ್ದುರಾಮನ ಚೌಪದಿಯ ಕಥಾ ಅಭಿಯಾನಕ್ಕೆ ಮುಕ್ತಕವನ್ನು ನೀಡಲಾಗುತ್ತದೆ. ಅದನ್ನು ಕೆ.ಸಿ.ಶಿವಪ್ಪ ಅವರ 'ಮುದ್ದುರಾಮನ ಮನಸು' ಇಂದ ಆಯ್ದುಕೊಳ್ಳಲಾಗುತ್ತದೆ. ಮುಕ್ತಕದ ಭಾವಾರ್ಥಕ್ಕೆ ಸರಿಹೊಂದುವ ಕಥೆಯನ್ನು ರಚಿಸಲು ಅವಕಾಶ ನೀಡಲಾಗುತ್ತದೆ. 

ಚಿತ್ರವೊಂದನ್ನು ನೀಡಿ ಅದಕ್ಕೆ ಅನುಗುಣವಾಗಿ ಕವನ ರಚಿಸಲು ಕವಿತಾಪ್ರಿಯರಿಗೆ ಅವಕಾಶ ಕೊಡುತ್ತಾರೆ .  ಅಲ್ಲದೇ ಆಗಿಂದಾಗ್ಗೆ 'ಕವನ ಸ್ಪರ್ಧೆ' ಯನ್ನು ಹಮ್ಮಿಕೊಂಡು ಕವನಪ್ರಿಯರ ಕವನಗಳ ರಚನೆಗೆ ಸದವಕಾಶ, ಇದೇ ರೀತಿ 'ಕಥಾ ಸ್ಪರ್ಧೆ' ನಡೆಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. 

ಕಥಾಗುಚ್ಛದ ‘ಚಿಂತನ ಮಂಥನ’ ಅಂಕಣ ಆಸಕ್ತಿಕರ. ಪ್ರಬುದ್ಧ ಬರಹಗಾರರ ತಂಡವೊಂದನ್ನು ರಚಿಸಲಾಗುತ್ತದೆ. ತಂಡದ ಪ್ರತಿಯೊಬ್ಬ ಬರಹಗಾರ ಹದಿನೈದು ದಿನಗಳಿಗೊಮ್ಮೆ ಒಂದು ವಿಷಯದ ಬಗ್ಗೆ ಬರೆಯುವುದು ಹಾಗೂ ಅದೇ ವಿಷಯವನ್ನು ಅಂಕಣದ ರೀತಿಯಲ್ಲಿ ಮುಂದುವರೆಸುವುದೇ ಈ ಅಂಕಣ. ಸೀರೆಯ ಕುರಿತ ಬರಹವೂ ಇದ್ದುದು ವಿಷಯ ವೈವಿಧ್ಯಕ್ಕೆ ಉದಾಹರಣೆ.

ಸದಸ್ಯರೇ ಬರಹಗಾರರಿಗೆ ಪ್ರೋತ್ಸಾಹ ನೀಡುವ ಕ್ರಮ ಇಲ್ಲಿನ ವಿಶೇಷ. ಮಕ್ಕಳ–ಮೊಮ್ಮಕ್ಕಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇದ್ದಾಗ ನಗದು, ಪುಸ್ತಕ, ಪ್ರಶಸ್ತಿಪತ್ರ ಮುಂತಾದವುಗಳನ್ನು ಪ್ರಾಯೋಜಿಸುತ್ತಾರೆ. ಪ್ರತಿ ವರ್ಷ ನವೆಂಬರ್ ತಿಂಗಳು ಪೂರ್ತಿ ಪ್ರತಿದಿನ ‘ಕನ್ನಡದ ತೇರು’ ಎಂಬ ಹೆಸರಿನಲ್ಲಿ ಪುಸ್ತಕವನ್ನು ಬಹುಮಾನವಾಗಿ ಕೊಡುವ ಪ್ರಾಯೋಜಕರೂ ಇಲ್ಲಿದ್ದಾರೆ. 

ಕ್ಲಬ್ ಹೌಸ್: ಪ್ರತಿ ಭಾನುವಾರ ಸಂಜೆ  6ರಿಂದ 7ರವರೆಗೆ ನಡೆಯುವ ಸಾಹಿತ್ಯ ಸಂಜೆಯಲ್ಲಿ ಸದಸ್ಯರು ತಾವೇ ಬರೆದ ಕತೆ ಅಥವಾ ಮತ್ತೊಬ್ಬರ ಕತೆಯನ್ನು ವಾಚಿಸಬಹುದು. ಸದಸ್ಯರು ವಾಚನ ಮತ್ತು ಕತೆಯ ಬಗ್ಗೆ ವಿಮರ್ಶಿಸಿ ಮಾತನಾಡಲು, ತಮ್ಮ ಅನಿಸಿಕೆ ತಿಳಿಸಲು ಅವಕಾಶವಿದೆ. ಕ್ಲಬ್ ಹೌಸ್ ನಲ್ಲಿ ಇತ್ತೀಚೆಗೆ 'ಪುಸ್ತಕ ಪರಿಚಯ' ಕಾರ್ಯಕ್ರಮ ಆರಂಭಿಸಲಾಗಿದೆ. ಪ್ರತಿ ಬುಧವಾರ ಪುಸ್ತಕ ಬರೆದವರಿಗಾಗಿ ಅದನ್ನು ಪರಿಚಯಿಸುವ ಹಾಗೂ ಶೋತೃಗಳ ಜೊತೆ ಅದರ ಬಗ್ಗೆ ಸಂಭಾಷಿಸುವ ಅವಕಾಶವಿದೆ.

ಸಾಹಿತ್ಯದ ಬಗ್ಗೆ ಅಮಿತಾಸಕ್ತಿ ಹೊಂದಿರುವ ಲತಾ ಜೋಶಿ ಅವರಿಗೆ ಎಷ್ಟು ಓದಿದರೂ ಸಾಕಾಗುತ್ತಿರಲಿಲ್ಲ. ಏನಾದರೂ ಮಾಡಬೇಕು ಎಂದುಕೊಂಡು ಗೆಳತಿ ಸುಮಾ ಕಳಸಾಪುರ ಅವರ ಜೊತೆ ಚರ್ಚಿಸಿದ್ದರ ಪರಿಣಾಮವೇ ಕನ್ನಡ ಕಥಾಗುಚ್ಛದ ಹುಟ್ಟು. ಐದು ವರ್ಷಗಳಲ್ಲಿ 60 ಸಾವಿರ ಸದಸ್ಯರನ್ನು ಹೊಂದಿರುವುದು ವಿಶೇಷ. ಸುಂದರವಾದ ಲೋಗೋ ಅನ್ನು ಲತಾ ಜೋಶಿ ಅವರ ಪುತ್ರಿ ರಚಿಸಿಕೊಟ್ಟಿದ್ದಾರೆ. 

ಲತಾ ಜೋಶಿ, ಸುಮಾ ಕಳಸಾಪುರ ಸೇರಿ ಒಂದು ಡಜನ್ ನಿರ್ವಾಹಕಿಯರು ಈ ಗುಂಪಿನಲ್ಲಿದ್ದಾರೆ. ಬರಹಗಳನ್ನು ಪತ್ರಿಕೆ ಅಥವಾ ನಿಯತಕಾಲಿಕೆಗೆ ಕಳುಹಿಸಿದರೆ ಅದು ಸ್ವೀಕೃತವಾದ ನಂತರ ಪ್ರಕಟವಾಗಲು ಹಲವಾರು ದಿನಗಳು ಅಥವಾ ವಾರಗಳೇ ಬೇಕಾಗುತ್ತದೆ. ಅದೇ ಈ ಸಾಮಾಜಿಕ ಜಾಲತಾಣಕ್ಕೆ ಕಳುಹಿಸಿದರೆ ಕೆಲವೇ ಸಮಯದಲ್ಲಿ ಪ್ರಕಟವಾಗುತ್ತದೆ, ಬರಹಗಾರರ ಮೊಗ ಅರಳಿಸುತ್ತದೆ. 

ಬರಹಗಳ ಉಸ್ತುವಾರಿಯನ್ನು ನಿರ್ವಾಹಕಿಯರು ನೋಡಿಕೊಂಡರೆ ನವ(ಒಂಬತ್ತು) ಪುರುಷ ಸಂಘಟಕರು ಕಥಾಗುಚ್ಛ ನಡೆಸುವ ಕಾರ್ಯಕ್ರಮಗಳಲ್ಲಿ ಶ್ರದ್ದೆಯಿಂದ ಸೇವೆ ಸಲ್ಲಿಸುತ್ತಾರೆ. 

ಕಥಾಗುಚ್ಛ ಒಬ್ಬೊಬ್ಬರ ಜೀವನಕ್ಕೆ ಒಂದೊಂದು ರೀತಿಯ ತಿರುವುಗಳನ್ನು ನೀಡಿದೆ. ಸದಸ್ಯರಾದ ನಂತರ ಮೊದಲ ಬಾರಿಗೆ ಬರೆಯಲು ಆರಂಭಿಸಿ ಪ್ರಬುದ್ಧ ಬರಹಗಾರಾಗಿರುವವರು ಲೆಕ್ಕವಿಲ್ಲದಷ್ಟು. ವರ್ಷಗಳ ಕಾಲ ಬರಹ ನಿಲ್ಲಿಸಿದ್ದವರು ಮತ್ತೆ ಕ್ರಿಯಾಶೀಲರಾಗಿದ್ದಾರೆ. ಮಾನಸಿಕ ಕ್ಷೋಭೆಗೊಳಗಾದ ಹಲವರು ಅದರಿಂದ ಹೊರಬಂದು ಸಂತಸದ ಜೀವನ ನಡೆಸಲು ಕಥಾಗುಚ್ಛ ಕಾರಣೀಭೂತವಾಗಿದೆ. 

ಸಾಹಿತ್ಯದ ಆಚೆ : ಲಾಕ್ಡೌನ್ ಸಮಯದಲ್ಲಿ ಸದಸ್ಯರೊಬ್ಬರು ತಮ್ಮ ತಾಯಿ ಹಾಡಿದ ‘ಹೋಗಿ ಬಾರಮ್ಮ ಗಂಡನ ಮನೆಗೆ’ ಜನಪದ ಹಾಡನ್ನು ಜನರ ಮನರಂಜನೆ ಮತ್ತು ತಮ್ಮ ಖುಷಿಗಾಗಿ ಕಥಾಗುಚ್ಛದಲ್ಲಿ ಹಂಚಿಕೊಂಡಿದ್ದರು. ಇದನ್ನು ಸಹಸ್ರಾರು ಸದಸ್ಯರು ಮೆಚ್ಚಿದರು. ಸದಸ್ಯರೊಬ್ಬರು ₹5000 ರೂಗೌರವಧನ ನೀಡುವ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತೀರಾ ತುರ್ತಿನ ಅಗತ್ಯವಿದ್ದ ಸಮಯವದು. ದಿನಸಿಗಾಗಿ ಅದನ್ನು ಅವರು ಬಳಸಿಕೊಂಡಿದ್ದರು. ಕಳೆದ ವರ್ಷದ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆಯ ಬುರ್ರಕಥಾ ಕಮಲಮ್ಮ ಪಡೆದರು. ಮೇಲೆ ತಿಳಿಸಿದ ವ್ಯಕ್ತಿ ಅವರೇ. ಕಥಾಗುಚ್ಛ ಹಲವಾರು ಪುಸ್ತಕಗಳನ್ನು ಕೂಡ ಹೊರತಂದಿದೆ. 

ಮುಖಾಮುಖಿ: ಫೇಸ್ಬುಕ್ ಮೂಲಕ ಪರಿಚಯವಾಗಿ ಆತ್ಮೀಯರಾದವರು ಮುಖಾಮುಖಿಯಾದರೆ ಹೇಗೆ ಎಂಬ ಚಿಂತನೆ ನಡೆಸಿದ ಕೆಲವು ಸದಸ್ಯರು ಮೊದಲ ಬಾರಿ ಬೆಂಗಳೂರಿನ ರಾಮಾಂಜನೇಯ ಗುಡ್ಡದಲ್ಲಿ ಸೇರಿ  ಸಂಭ್ರಮಿಸಿದರು.

ಆನಂತರ ನಿಯಮಿತವಾಗಿ ವಾರ್ಷಿಕೋತ್ಸವ ಮತ್ತು ಸ್ನೇಹ ಕೂಟ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಆತ್ಮೀಯ ಬಂಧುಗಳಿಗಿಂತ ಮಿಗಿಲಾಗಿ ಸದಸ್ಯರು ಭಾಗಿಯಾಗುತ್ತಿದ್ದಾರೆ. ಒಂದೇ ಕಾರ್ಯಕ್ರಮದ ಬಗ್ಗೆ ವಿಭಿನ್ನವಾಗಿ ನೂರಾರು ಕೋನಗಳಿಂದ ದೃಷ್ಟಿಸಿ ನೂರಾರು ಬರಹಗಳನ್ನು ಸೃಷ್ಟಿಸುತ್ತಾರೆ.

ವಾರ್ಷಿಕೋತ್ಸವಗಳು ಧಾರವಾಡ, ಬೆಂಗಳೂರು, ಚಿತ್ರದುರ್ಗಗಳಲ್ಲಿ ನಡೆದರೆ, ಕುಪ್ಪಳ್ಳಿ, ಮೈಸೂರು, ಪುತ್ತೂರು, ಹಾಸನದ ಪುಷ್ಪಗಿರಿಯಲ್ಲಿ ಸ್ನೇಹ ಕೂಟಗಳು ನಡೆದಿವೆ. 

‘ಕಥಾಗುಚ್ಛ’ದ ಕ್ರಿಯಾಶೀಲರು
‘ಕಥಾಗುಚ್ಛ’ದ ಕ್ರಿಯಾಶೀಲರು

  ಐದನೇ ವಾರ್ಷಿಕೋತ್ಸವ ಈ ಬಾರಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜುಲೈ ೨ ರಂದು ನಡೆಯುತ್ತಿದೆ. 

(ಇಂದು, ಜುಲೈ 2ರ ಭಾನುವಾರ ಹಂಪಿನಗರ ಪಶ್ಚಿಮ ವಲಯದ ಕೇಂದ್ರ ಗ್ರಂಥಾಲಯದಲ್ಲಿ ಕಥಾಗುಚ್ಛದ ಐದನೇ ವಾರ್ಷಿಕೋತ್ಸವ ನಡೆಯಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT