ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ಕುಮಾರವ್ಯಾಸನ ಜಾಗತೀಕರಣ

Published 20 ಜನವರಿ 2024, 23:31 IST
Last Updated 20 ಜನವರಿ 2024, 23:31 IST
ಅಕ್ಷರ ಗಾತ್ರ

ಕುಮಾರವ್ಯಾಸನ ‘ಕರ್ನಾಟ ಭಾರತ ಕಥಾಮಂಜರಿ’ಯನ್ನು ಇಂಗ್ಲಿಷ್‌ಗೆ ಅನುವಾದಿಸುವ ಕೆಲಸ ಶುರುವಾಗಿ ವರ್ಷಗಳೇ ಆಗಿವೆ. ಇನ್ಫೊಸಿಸ್ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ವರ ಮಗ ರೋಹನ್ ಮೂರ್ತಿ ಹಾರ್ವರ್ಡ್  ವಿಶ್ವವಿದ್ಯಾಲಯದಲ್ಲಿ ಒಂದು ಟ್ರಸ್ಟ್‌ ಸ್ಥಾಪಿಸಿ, ಅದರ ಮೂಲಕ ಪ್ರಾಚೀನ ಭಾರತೀಯ ಸಾಹಿತ್ಯ ಕೃತಿಗಳ ಇಂಗ್ಲಿಷ್ ಅನುವಾದಗಳ ಪ್ರಕಟಣೆಗೆ ಅನುವು ಮಾಡಿಕೊಟ್ಟಿದ್ದಾರಷ್ಟೆ. ಅದರ ಫಲವೇ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’.

ನ್ಯೂಯಾರ್ಕ್‍ನಲ್ಲಿ ಸ್ಟೋನಿಬ್ರೂಕ್ ವಿಶ್ವವಿದ್ಯಾಲ ಯದಲ್ಲಿ ‘ಭಾರತೀಯ ಅಧ್ಯಯನ ಕೇಂದ್ರ’ದ ಮುಖ್ಯಸ್ಥರಾಗಿರುವ ಎಸ್.ಎನ್. ಶ್ರೀಧರ್ ಅವರು ಆ ಸಂಸ್ಥೆಯ ನಿರ್ದೇಶಕರಾದ ಶೆಲ್ಡನ್ ಪೊಲಾಕ್ ಅವರೊಟ್ಟಿಗೆ ಚರ್ಚಿಸಿ, ಕುಮಾರವ್ಯಾಸ ಭಾರತದ ಅನುವಾದಕ್ಕೆ ಅವರ ಒಪ್ಪಿಗೆ ಪಡೆದಿದ್ದರು. ಎಚ್‌.ಎಸ್. ಶಿವಪ್ರಕಾಶ್, ನಾರಾಯಣ ಹೆಗ್ಡೆ, ಎಚ್.ಎಸ್. ರಾಘವೇಂದ್ರ ರಾವ್, ಸಿ.ಎನ್. ರಾಮಚಂದ್ರನ್ (ಸಿ.ಎನ್‌.ಆರ್‌.) ಹಾಗೂ ಖುದ್ದು ಶ್ರೀಧರ್ ಕೃತಿಯನ್ನು ಅನುವಾದಿಸುತ್ತಿದ್ದಾರೆ. ಅನುವಾದದ ಮೊದಲ ಭಾಗದ ಕೃತಿ ಇತ್ತೀಚೆಗೆ ಬಿಡುಗಡೆಯಾಯಿತು. ಕುಮಾರವ್ಯಾಸ ಭಾರತವನ್ನು ಅನುವಾದ ಮಾಡುವ ಪ್ರಕ್ರಿಯೆ ಕುರಿತು ಶ್ರೀಧರ್, ಸಿ.ಎನ್‌.ಆರ್. ಹಾಗೂ ಈ ಯೋಜನೆಯ ಸಲಹೆಗಾರರಲ್ಲಿ ಒಬ್ಬರಾಗಿರುವ ಕೃಷ್ಣಮೂರ್ತಿ ಹನೂರು ಅವರು ‘ಭಾನುವಾರದ ಪುರವಣಿ’ ಜೊತೆಗೆ ಮಾತಿಗೆ ತೆರೆದುಕೊಂಡರು..

ಕುಮಾರವ್ಯಾಸ ಕಾವ್ಯದ ಆಯ್ಕೆಗೆ ಕಾರಣ

ಎಸ್‌.ಎನ್. ಶ್ರೀಧರ್: ಕಾಳಿದಾಸ, ವ್ಯಾಸ, ವಾಲ್ಮೀಕಿ ಸಾಹಿತ್ಯದ ಕುರಿತೇ ಹೆಚ್ಚು ಮಾತನಾಡುತ್ತೇವೆ. ಆದರೆ, ಕುಮಾರವ್ಯಾಸನ ಬಗೆಗೆ ಎಲ್ಲೂ ಮಾತಿಲ್ಲ. ಅದಕ್ಕೇ ಕರುಳು ಚುರ‍್ರೆನ್ನುತ್ತದೆ. ಅಯ್ಯಪ್ಪ ಫಣಿಕ್ಕರ್ ಅವರು ಸಂಪಾದಿಸಿದ ‘ಮೆಡಿವಲ್ ಇಂಡಿಯನ್ ಲಿಟರೇಚರ್’ ಕೃತಿಗಾಗಿ ಎಚ್‍.ಎಸ್. ಶಿವಪ್ರಕಾಶ್ ಕೆಲವು ಷಟ್ಪದಿಗಳನ್ನು ಅನುವಾದ ಮಾಡಿಕೊಟ್ಟಿದ್ದರು. ಅದನ್ನು ಹೆಚ್ಚು ಜನರು ಓದಿಲ್ಲ. ಕುಮಾರವ್ಯಾಸನದ್ದು ವಿಶ್ವಮಾನ್ಯತೆ ಗಳಿಸಬೇಕಾದ ಕೃತಿ. ಶೇಕ್ಸ್‌ಪಿಯರ್, ಹೋಮರ್, ಡಾಂಟೆ ಅವರ ಸಾಲಿಗೆ ಸೇರಬೇಕಾದುದು.

ಪ್ರಾರಂಭ, ಅಂತ್ಯ, ಸಸ್ಪೆನ್ಸ್‌, ಸಾರ್ವತ್ರಿಕತೆ, ಸಾರ್ವಕಾಲಿಕತೆ, ನೈತಿಕತೆ ಕುರಿತ ಪ್ರಶ್ನೆಗಳು – ಎಲ್ಲವನ್ನೂ ಒಳಗೊಂಡ ಕಾವ್ಯವನ್ನು ಕುಮಾರವ್ಯಾಸ ಹೇಳಿರುವ ರೀತಿಯಲ್ಲಿಯೇ ಪರಿಣತಿ ಇದೆ.

ನಾನು ಈ ಕೃತಿ ಸಂಪುಟಗಳ ಸಂಪಾದಕ. ಗುಣಮಟ್ಟ ನಿರ್ವಹಣೆಯ ಕಾರಣಕ್ಕೆ ಎರಡು ತತ್ತ್ವಗಳನ್ನು ಒಪ್ಪಿಕೊಂಡೆವು. ಮೂಲದ ಅರ್ಥಛಾಯೆ ಬಿಡದಂತೆ ಅನುವಾದಿಸಬೇಕು ಎನ್ನುವುದು ಮೊದಲನೆಯದು. ಎರಡನೆಯದು, ಮೂಲದಲ್ಲಿ ಇಲ್ಲದ ಏನನ್ನೂ ಸೇರಿಸಬಾರದು ಎನ್ನುವುದು.

ಹನೂರರ ಪಾತ್ರವೇನು?

ಶ್ರೀಧರ್: ಹಳಗನ್ನಡ ಪಂಡಿತರು ನಾವಲ್ಲ. ಹನೂರರು ಅದನ್ನು ನಮಗೆ ಹೇಳಿಕೊಡುವ ಗುರುಗಳಂತೆ. ನಾವು ಮೊದಲಿನಿಂದಲೂ ಕೆಲವು ತಪ್ಪುಗಳನ್ನೇ ಸರಿ ಅಂದುಕೊಂಡಿರುತ್ತೇವೆ. ಅವನ್ನು ಅವರು ತಿದ್ದುತ್ತಾರೆ. ಕುಮಾರವ್ಯಾಸನ ಕಾವ್ಯದ ಕುರಿತು ಒಳನೋಟ, ತತ್ತ್ವ, ಲೋಕಜ್ಞಾನ ಅವರಿಗೆ ಇದೆ. ಜೊತೆಗೆ ಅವರು ಜನಪದ ವಿದ್ವಾಂಸರು.

ಯೋಜನೆ ಶುರುವಾದದ್ದು ಯಾವಾಗ?

ಶ್ರೀಧರ್: 2011ರಲ್ಲಿ ಶುರುವಾಯಿತು. 2015ರಿಂದ ಗಂಭೀರವಾಗಿ ಕೆಲಸಗಳು ಶುರುವಾದವು. ಅರಣ್ಯಪರ್ವ, ಶಲ್ಯಪರ್ವದ ಅನುವಾದವನ್ನು ನಾನು ಮಾಡಿದೆ. ಆದಿಪರ್ವ, ಭೀಷ್ಮಪರ್ವ– ಸಿಎನ್‌ಆರ್‌, ಸಭಾಪರ್ವ, ಗದಾಪರ್ವ– ನಾರಾಯಣ ಹೆಗ್ಡೆ, ಉದ್ಯೋಗಪರ್ವ, ಕರ್ಣಪರ್ವ– ಎಚ್‌.ಎಸ್. ಶಿವಪ್ರಕಾಶ್, ವಿರಾಟಪರ್ವ, ದ್ರೋಣ ಪರ್ವ– ರಾಘವೇಂದ್ರ ರಾವ್ ಅನುವಾದಿಸಿದರು. ‘ಆದಿಪಂಚಕ’ದಿಂದ ಒಂದು ಪರ್ವ, ‘ಯುದ್ಧ ಪಂಚಕ’ದಿಂದ ಒಂದು ಪರ್ವದಂತೆ ತೆಗೆದುಕೊಂಡು, ರಸವತ್ತಾದ ಭಾಗಗಳನ್ನು ಮಾತ್ರ ಅನುವಾದಿಸುತ್ತಿದ್ದೇವೆ. ಕೆ.ಎಸ್. ಮಧುಸೂದನ, ಕೆ.ವಿ. ನಾರಾಯಣ ಅವರೂ ಸಲಹೆಗಾರರು. ಒಂದು ಸಂಪುಟ ಬಂದಿದೆ. ಇನ್ನೂ ಮೂರು ಸಂಪುಟಗಳು ಬರಲಿವೆ. 2026ರ ಹೊತ್ತಿಗೆ ಎಲ್ಲ ಕೆಲಸ ಮುಗಿಯಬಹುದು.

ಹನೂರು: ಒಟ್ಟು 2500 ಷಟ್ಪದಿಗಳನ್ನು ಆಯ್ದುಕೊಂಡಿದ್ದು, ಅನುವಾದಗಳೆಲ್ಲ ಮುಗಿದಿವೆ. ಏಕರೂಪತೆ, ಗುಣಮಟ್ಟಕ್ಕಾಗಿ ಕರಡುಗಳನ್ನು ತಿದ್ದುವ ಕೆಲಸ ನಡೆಯುತ್ತಿದೆ.

ಕುಮಾರವ್ಯಾಸನ ಸೃಷ್ಟಿಕ್ರಿಯೆಯ ಝಲಕ್

ಶ್ರೀಧರ್: ವ್ಯಾಸರ ಹೂರಣವನ್ನು ಯಥಾವತ್ ತೆಗೆದುಕೊಳ್ಳದೆ, ತನಗೆ ಬೇಡದೇ ಇರುವುದನ್ನು ಕುಮಾರವ್ಯಾಸ ಬಿಟ್ಟ. ಭಗವದ್ಗೀತೆಯಂತಹ ಮುಖ್ಯವಾದ ಭಾಗವನ್ನೇ ಸಂಕ್ಷಿಪ್ತಗೊಳಿಸಿದ. ಶಾಂತಿಪರ್ವದಂತಹ ಮುಖ್ಯವಾದ ಭಾಗವನ್ನೇ ಬಿಟ್ಟ. 18 ಪರ್ವಗಳನ್ನು 10 ಪರ್ವಗಳಿಗೆ ಇಳಿಸಿದ. ಪಾತ್ರಗಳನ್ನು ಅವನು ಪುನರ್ ಸೃಷ್ಟಿ ಮಾಡಿದ. ಕೃಷ್ಣನನ್ನು ಕೇಂದ್ರವಾಗಿಸಿದ. ಕರ್ಣನಿಗೆ ಅವನು ಕೊನೆಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದ, ಕರ್ಣನನ್ನು ಕೊಲ್ಲುವಂತೆ ಅರ್ಜುನನಿಗೆ ಹೇಳಿದ್ದ ಅವನೇ ಹೀಗೆ ಕೊನೆಯಲ್ಲಿ ಮೋಕ್ಷ ಕಾಣಿಸುತ್ತಾನೆ.

ದ್ರೌಪದಿ ಇವನಲ್ಲಿ ತುಂಬಾ ಬಲಶಾಲಿ ಪಾತ್ರವಾಗಿದ್ದಾಳೆ. ಇವನಷ್ಟು ಸ್ತ್ರೀ ಪರವಾದ ಸಾಹಿತಿ ಕನ್ನಡದಲ್ಲಿ ಬೇರೆ ಯಾರೂ ಇಲ್ಲವೆನಿಸುತ್ತದೆ. ‘ಧರ್ಮರಾಯ ಜೂಜಿನಲ್ಲಿ ತನ್ನನ್ನು ಮೊದಲು ಸೋತು ಆಮೇಲೆ ನನ್ನನ್ನು ಸೋತನೋ ಹೇಗೆ’ ಎಂಬ ತರ್ಕಬದ್ಧ ಪ್ರಶ್ನೆಯನ್ನು ಹಾಕಿದ ಬುದ್ಧಿವಂತೆ.

ಹನೂರು: ‘ಯಥಾರ್ಥ ಭಾಷಣ ಭೀತ ಚೇತನರು’ ಎಂದು ಅವಳು ಸಭೆಯಲ್ಲೇ ಕೇಳುವ ಪರಿ, ‘ನೀವೇನು ಗಂಡರೋ ಷಂಡರೋ?’ ಎನ್ನುವ ರೀತಿ, ‘ತೋಳಹೊರೆ’ ಎಂದು ವ್ಯರ್ಥ ಭುಜಬಲವನ್ನು ಹಂಗಿಸುವ ಜಾಣತನ ಅವಳಲ್ಲಿ ಇವೆ.

ಶ್ರೀಧರ್: ಅವಳು ಕಾಲಿಗೆ ಬಿದ್ದು ನಮಸ್ಕಾರ ಮಾಡಿಯೇ ಇವನ್ನೆಲ್ಲ ಹೇಳುತ್ತಾಳೆ. ಸುಂದರವೂ ಸಂಕೀರ್ಣವೂ ಆದ ಪಾತ್ರವಿದು. ಸಾರ್ವತ್ರಿಕ ಸ್ತ್ರೀ ಸಮಸ್ಯೆ ಹೇಳುವ ಶೈಲಿ ಇದು.

ಕುಮಾರವ್ಯಾಸನ ಕಾವ್ಯಮೀಮಾಂಸೆ ಬಹಳ ವಿಭಿನ್ನ. ಅವನು ಜನರ ಕವಿ. ‘ಇಳೆಯ ಜಾಣರು ಮೆಚ್ಚುವಂತಿರೆ’ ಎನ್ನುವುದು ಅವನ ಉದ್ದೇಶ. ಮಹಾಕಾವ್ಯವನ್ನು ಸೃಜಿಸುವ ಸಾಂಪ್ರದಾಯಿಕ ಕ್ರಮವನ್ನು ಅವನು ಅನುಸರಿಸಿಲ್ಲ. ಉದಾಹರಣೆಗೆ, ಅಷ್ಟಾದಶ ವರ್ಣನೆ ಅವನಲ್ಲಿ ಇಲ್ಲ. ತನಗೆ ಮುಖ್ಯವಾದುದನ್ನು ಮಾತ್ರ ಅವನು ಹೇಳುತ್ತಾನೆ. ಪಾಂಡುವಿನ ಮರಣದ ಪ್ರಸಂಗವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.

ಹನೂರು: ಮರಣ ಭೀತಿಯಿಂದಾಗಿ ಹೆಂಡತಿ ಜೊತೆ ಅವನು ದೈಹಿಕ ಸಂಪರ್ಕ ಇಟ್ಟುಕೊಂಡಿರುವುದಿಲ್ಲ. ಆದರೆ, ವಸಂತ ಬರುತ್ತದೆ. ವಸಂತ ಋತುವೇ ಇವನ ಮೇಲೆ ದಂಡೆತ್ತಿ ಬಂತೆನೋ ಎನ್ನುವ ಸಾವಯವ ಸಂಕೇತವನ್ನು ಅವನು ತರುತ್ತಾನೆ.

ಅನುವಾದದ ಸವಾಲು

ಹನೂರು: ‘ಹೌದು, ಅಲ್ಲ’ ಎನ್ನುವ ಸಿದ್ಧಾಂತವನ್ನು ಕುಮಾರವ್ಯಾಸ ಬಹಳ ಮಟ್ಟಿಗೆ ಸಾಧಿಸಿಬಿಟ್ಟಿದ್ದಾನೆ. ಭಾಷಾಂತರದ ವಿಷಯದಲ್ಲಿ ಪಂಪ ಸುಲಭ, ಕುಮಾರವ್ಯಾಸ ಕಷ್ಟ. ಪಂಪ ಕಥನಕಾರ, ಇವನು ವ್ಯಾಖ್ಯಾನಕಾರ. ವಸ್ತುವಿನ ಆಯ್ಕೆ, ಭಾಷಾ ಪ್ರಯೋಗ ಎರಡರಲ್ಲೂ ಇವನು ನಿಸ್ಸೀಮ. ಪಂಪ–ವ್ಯಾಸರ ವಸ್ತು, ವಚನಕಾರರ ಭಾಷೆ, ತನ್ನ ಕಾಲದ ಭಕ್ತಿ ಮೂರನ್ನೂ ಏಕಕಾಲಕ್ಕೆ ಇವನು ಬಳಸಿರುವುದು ನಮಗೆ ಸವಾಲೊಡ್ಡುತ್ತಿದೆ. ಇದನ್ನು ಜನಪದ ಭಾಷೆಯ ಭಾಷಾಂತರದ ಸವಾಲು ಎನ್ನಬಹುದು.

ಶ್ರೀಧರ್: ‘ಮಗುವುತನದಲಿ ಬೊಂಬೆಯಾಟಕೆ/ಮಗುವನೇ ತಹೆನೆಂದು ಬಂದಳು’ ಎನ್ನುವುದನ್ನು ‘As a childish prank, the young girl,/hoping to get a living doll for her games’ ಎಂದು ಅನುವಾದಿಸಿದ್ದೇವೆ. ಆರು ಸಾಲುಗಳಿಗೆ ಅಷ್ಟೇ ಸಾಲಿನ ಅನುವಾದ. ಕಾವ್ಯದ ಗುಣವನ್ನೂ ಉಳಿಸಿಕೊಂಡಿದ್ದೇವೆ. 10–12 ಕರಡುಗಳನ್ನು ತಿದ್ದಿ ಮಾಡಿರುವ ಅನುವಾದ ಇದು. ಒಂದು ಕಡೆ ಮೂಲ ಷಟ್ಪದಿ ಇರುತ್ತದೆ, ಇನ್ನೊಂದು ಕಡೆ ಇಂಗ್ಲಿಷ್ ಅನುವಾದ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪದಾರ್ಥದ ಹುಡುಕಾಟ

ಸಿ.ಎನ್‌.ಆರ್.: ವಿಜಯನಗರದ ಕಾಲದಲ್ಲಿ ಚಾಲ್ತಿಯಲ್ಲಿದ್ದ ಕನ್ನಡ, ಅರೇಬಿಕ್, ಪರ್ಷಿಯನ್, ಮರಾಠಿ, ತೆಲುಗು, ಸಂಸ್ಕೃತದ ಪದಗಳೆಲ್ಲವನ್ನೂ ಕುಮಾರವ್ಯಾಸ ಬಳಸಿದ್ದಾನೆ. ಅವುಗಳಲ್ಲಿ ಎಷ್ಟೋ ಈಗ ಬಳಕೆಯಲ್ಲಿಲ್ಲ. ಹೀಗಾಗಿ ಅವುಗಳ ಅರ್ಥಕ್ಕಾಗಿ ಹೆಚ್ಚು ಹುಡುಕಾಟ ನಡೆಸಿದೆವು.

‘ತೋಳುಗಳ ಲೌಡಿಗಳ’ ಎಂದು ಷಟ್ಪದಿಯೊಂದರಲ್ಲಿ ಬಳಕೆಯಾಗಿದೆ. ‘ಲೌಡಿ’ ಎನ್ನುವುದು ಈಗ ಬೈಗುಳ. ಆದರೆ, ಕುಮಾರವ್ಯಾಸನು ದ್ರೌಪದಿಯ ತೋಳುಗಳ ಬಣ್ಣನೆಯಲ್ಲಿ ಅದನ್ನು ಬಳಸಿದ್ದಾನೆ. ಅದರ ಅರ್ಥ ‘ಕಬ್ಬಿಣದ ಸರಳುಗಳಂತಹ’ ಎಂದು.

ಹನೂರು: ಲಾಕುಳ, ಲವಡಿ ಎನ್ನುವುದೇ ಲೌಡಿ ಆಗಿದೆ.

ಸಿ.ಎನ್‌.ಆರ್.: ಹಲ್ಲಣಿಸು (ಮುಂದೆ ಹೋಗದೆ ನೋಡುತ್ತಾ ನಿಂತುಬಿಡುವುದು), ವಿಡಾಯ (ವೈಭವ), ತಿಗುರು (ಪೂಸುವುದು), ಜವಾದಿ (ಕಸ್ತೂರಿ), ತೇಜಿ (ಕುದುರೆ) ಇಂತಹ ಪದಗಳು ಸವಾಲೊಡ್ಡಿದವು.

ಕೃಷ್ಣ, ಬಲರಾಮನ ನಡುವಿನ ಸಂಭಾಷಣೆಯಂತೆ ಕಾಣುವ ‘ಏನಹರು ನಿಮಗಿಂದು ಕುಂತಿ ಮಾನಿನಿಯರು’ ಎಂಬ ಷಟ್ಪದಿಯಲ್ಲಿ ಪ್ರಶ್ನೆಯೇ, ಉದ್ಗಾರವೇ, ಹೇಳಿಕೆಯೇ ಎಂಬ ಅನುಮಾನವೂ ಕಾಡಿದ್ದಿದೆ. ಶ್ರೀಧರ್ ಜೊತೆ ಐದು ಸುತ್ತಿನ ಚರ್ಚೆ ನಡೆಸಿದ ಮೇಲೆ, ಅದು ಕೃಷ್ಣನು ಪ್ರಶ್ನೆಯನ್ನು ತನಗೆ ತಾನೇ ಹಾಕಿಕೊಂಡು, ಉತ್ತರ ಕೊಟ್ಟಂತಹ ಮಾದರಿ ಎನ್ನುವ ನಿರ್ಧಾರಕ್ಕೆ ಬಂದೆವು. ಪೂರ್ಣವಿರಾಮ, ಅಲ್ಪವಿರಾಮ ಹೊರತುಪಡಿಸಿ ಬೇರೆ ಯಾವುದೇ ಚಿಹ್ನೆಗಳನ್ನು ಕುಮಾರವ್ಯಾಸ ಹಾಕದೇ ಇರುವುದರಿಂದ ಮೂಡಿದ ಸಮಸ್ಯೆ ಇದು.

ಕುಮಾರವ್ಯಾಸ ಭಾರತ ಅನುವಾದದ ಮೊದಲ ಸಂಪುಟದ ಮುಖಪುಟ
ಕುಮಾರವ್ಯಾಸ ಭಾರತ ಅನುವಾದದ ಮೊದಲ ಸಂಪುಟದ ಮುಖಪುಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT