ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದಸೃಷ್ಟಿ –ಪಳಿವೀಡು

Published 26 ಮೇ 2024, 0:00 IST
Last Updated 26 ಮೇ 2024, 0:00 IST
ಅಕ್ಷರ ಗಾತ್ರ

ಪಳಿವೀಡು

ಪಳಿವೀಡು (ನಾ). ನಿಂದೆಯನೆಲೆ; ದೂಷಣೆಯ ಬೀಡು.

(ಪಳಿ + ಬೀಡು)

ಸೀತೆಯನ್ನು ಹುಡುಕಲು ಹೋಗಿದ್ದ ಮೈಂದ ಮಹಾವಾನರನು ಕವಿ. ಅಂಗದನು ಕರೆದಿದ್ದ ಸಭೆಗೆ ಅವನು ತನ್ನ ಪಡೆಯ ಅನುಭವವನ್ನು ವಿಶದವಾಗಿ ವಿವರಿಸುವನು. ‘ಶುದ್ಧಿ ಮೇಣ್ ಶ್ರದ್ಧೆಯಿರೆ ತುದಿಗೆ ತಪ್ಪದು ಸಿದ್ಧಿ ಸಾಧನೆಗೆ’ ಎನ್ನುವ ತನ್ನ ಅನುಭವಾಮೃತವನ್ನು ತಿಳಿಸುವನು. ಅವರು ಮರಳುಗಾಡಿನಲ್ಲಿ ತೊಳಲಾಡಿದ್ದು, ಮೃಕಂಡು ಆಶ್ರಮದ ಆಶ್ರಯ, ಸ್ವಯಂಪ್ರಭೆಯ ದಿವ್ಯಾಶ್ರಮದ ಅನುಭವ ಹೇಳುವನು. ಆ ಧರ್ಮಚಾರಿಣಿಯಿಂದ ತಾವು ಮಹೇಂದ್ರಾಚಲಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸುವನು. ನಿರಾಶೆ ತೊಲಗಲಿ, ಹೇಡಿತನದ ಭಾವನಾಶವಾಗಲಿ, ನಿಂದನೆಯ ನೆಲೆ ಇಲ್ಲವಾಗಲಿ, ಉತ್ಸಾಹಕ್ಕೆ ಕೋಡು ಮೂಡಲಿ ಎಂದು ಆಶಾಭಾವನೆ ವ್ಯಕ್ತಪಡಿಸುವನು.

ಕುವೆಂಪು ಅವರು ‘ನಿಂದನೆಯನೆಲೆ’ ಗೆ ‘ಪಳಿವೀಡು’ ಎಂಬ ಪದ ಬಳಸಿ ಅದರ ಭಾವವನ್ನು ಹಳಗನ್ನಡದಲ್ಲಿ ಅಭಿವ್ಯಕ್ತಿಸಿದ್ದಾರೆ.

ತೊಲಗುಗೆ ನಿರಾಶೆ. ಪೇಡಿತನಮಂ

ಕೊಲ್ಗೆ ಬಗೆ, ಸಾಲ್ಗುಮಾ ಪಳಿವೀಡು; ಸೋಲ್ಮನಂ.

ಮೂಡುಗುರ್ಕಿಗೆ ಕೋಡು. ಬರ್ಕೆಮ ವಿಜಯ ಬುದ್ಧಿ.

ಬರ್ದಿಲವಟ್ಟೆ

ಬರ್ದಿಲವಟ್ಟೆ (ನಾ). ಸ್ವರ್ಗದ ದಾರಿ; ದೇವಲೋಕದ ಮಾರ್ಗ, ಆಕಾಶ

(ಬರ್ದಿಲ + ಬಟ್ಟೆ)

ಹನುಮಂತನು ಆಕಾಶ ಮಾರ್ಗದಲ್ಲಿ ಸಾಗರೋಲ್ಲಂಘನವನ್ನು ಮಾಡುತ್ತಿರುತ್ತಾನೆ. ಅವನು ದೂರದ ಆಕಾಶದಲ್ಲಿ ಚುಕ್ಕಿಯಂತಿರುತ್ತಾನೆ. ರಾವಣನ ಆಜ್ಞೆಯ ಕಡಲ ಕಾವಲುಗಾರ್ತಿ ಛಾಯಾಗ್ರಹಿ ರಾಕ್ಷಸಿ ಸಿಂಹಿಕೆಯು ಅವನನ್ನು ತಿಳಿಯುತ್ತಾಳೆ.

ದೇವತೆಗಳಲೋಕ ಬರ್ದಿಲ. ಆ ಬಟ್ಟೆ- ಹಾದಿಯಲ್ಲಿ ಆಕಾಶದಲ್ಲಿ ಸಾಗುತ್ತಿದ್ದವನು ಆಂಜನೇಯ. ಆ ಮಾರ್ಗವನ್ನು ಚಿತ್ರಿಸುವಾಗ ಕವಿಯು ‘ಬರ್ದಿಲವಟ್ಟೆ’ ಎಂಬ ಹೊಸ ಪದವನ್ನು ಆ ದಾರಿಗೆ ಪಡಿಮೂಡಿಸಿದ್ದಾರೆ

ಬರ್ದಿಲವಟ್ಟೆಯೊಳೈ ತರುತಲಿರ್ದ ಹನುಮನಂ,

ದೂರದಾಕಾಶದೊಳ್ ಚುಕ್ಕಿಯೋಲಿರ್ದನಂ,

ತಿಳಿದಳಾ ಸಿಂಹಿಕೆ, ದಶಗ್ರೀವನಾಜ್ಞೆಯಿಂ

ಕಡಲ ಕಾವಲುಗಾರ್ತಿ, ಕಾಮರೂಪಿಣಿ, ಕಾಳಿ

ಛಾಯಾಗ್ರಾಹಿ ದನುಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT