ಮಲಯಾಳಂ ಕಾವ್ಯಲೋಕದಲ್ಲಿ ಕಿಳಿಪ್ಪಾಟ್ ಪ್ರಕಾರದ ಹರಿಕಾರ ತುಂಜತ್ತ್ ರಾಮಾನುಜನ್ ಎಳುತ್ತಚ್ಚನ್. ಸಂಸ್ಕೃತದ ಅಧ್ಯಾತ್ಮ ರಾಮಾಯಣದ ಕಥೆಯನ್ನು ಗಿಣಿಯ ಬಾಯಿಂದ ಹೇಳಿಸುವ ವಿಶಿಷ್ಟ ತಂತ್ರ ಕಿಳಿಪ್ಪಾಟ್ ಅರ್ಥಾತ್ ಗಿಣಿ ಹಾಡು. ಕೇರಳದಲ್ಲಿ ಸಾಂಸ್ಕೃತಿಕ ಮತ್ತು ಭಾಷಿಕ ಬೆಳವಣಿಗೆಯ ಪಥದಲ್ಲಿ ನವೋತ್ಥಾನಕ್ಕೆ ಕಾರಣವಾದ ಕೃತಿ ಅಧ್ಯಾತ್ಮ ರಾಮಾಯಣಂ ಕಿಳಿಪ್ಪಾಟ್. ಎಳುತ್ತಚ್ಚನ್ ಕಾವ್ಯಶೈಲಿ ಮತ್ತು ಲಯದಲ್ಲಿ ಕನ್ನಡದ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಇದೀಗ ಮಲಯಾಳಂ ಓದುಗರ ಕೈಸೇರಲು ಸಜ್ಜಾಗಿದೆ.

ವಾಲ್ಮೀಕಿ ರಾಮಾಯಣದ ಕಥಾತಂತುವಿನ ಆಧಾರದಲ್ಲಿ ವಿಚಾರ, ವಿಜ್ಞಾನ, ನವೋದಯ, ಸರ್ವ ಸಮಾನತೆಯನ್ನು ಪ್ರತಿಪಾದಿಸುವ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕಾವ್ಯದ ಸಾರವನ್ನು ಮಲಯಾಳಂ ಓದುಗರಿಗಾಗಿ ಅನುವಾದ ಮಾಡಿದ್ದಾರೆ ಎ.ಎಂ. ಶ್ರೀಧರನ್. ಹಿಂದಿನ ಮಲಯಾಳಂ ಕಾವ್ಯಗಳಲ್ಲಿ ಕಂಡುಬರುವ ಭಾಷಾ ಶೈಲಿ ಈ ಅನುವಾದದ ಮಹತ್ವದ ಅಂಶ. ಎಳುತ್ತಚ್ಚನ್ ಅವರ ಭಾಷೆ ಮತ್ತು ಲಯ ಶ್ರೀಧರನ್ ಅವರ ಅನುವಾದದಲ್ಲಿ ಎದ್ದುಕಾಣಿಸುತ್ತದೆ.

‘ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ಕಾವ್ಯಾತ್ಮಕ ಶೈಲಿಯಲ್ಲಿ ಭಾಷಾಂತರ ಮಾಡುವುದು ಕಷ್ಟ ಎಂದು ಆರಂಭದಲ್ಲಿ ಅನಿಸಿತ್ತು. ಆದ್ದರಿಂದ ಗದ್ಯ ರೂಪಕ್ಕೆ ಮೊರೆಹೋಗಿದ್ದೆ. ತಜ್ಞರ ಸಲಹೆ ಕೇಳಿದಾಗ ಗದ್ಯಾನುವಾದ ಬೇಡವೆಂಬ ಅಭಿಪ್ರಾಯ ಬಂತು. ಹೀಗಾಗಿ ಪದ್ಯರೂಪದಲ್ಲಿ ಬರೆಯಲು ಪ್ರಯತ್ನಿಸಿದೆ. ಆರಂಭದ ಕೆಲವು ಸಾಲುಗಳನ್ನು ಅವಲೋಕಿಸಿದ ಭಾಷಾ ಪಂಡಿತರು ವಳ್ಳತ್ತೋಳ್ (ನಾರಾಯಣ ಮೇನೋನ್) ಅವರ ಕಾವ್ಯದ ಛಾಯೆ ಇದರಲ್ಲಿದೆ ಎಂದರು. ನನ್ನ ಉತ್ಸಾಹ ನೂರ್ಮಡಿಯಾಯಿತು. ಅನುವಾದ ಮುಂದುವರಿದಾಗ ನನ್ನ ಮನಸ್ಸಿನಲ್ಲಿ ಎಳುತ್ತಚ್ಚನ್ ಅವರ ಕಾವ್ಯದ ಭಾಷೆ ಅಲೆಯಾಡುತ್ತಿತ್ತು. ಅದನ್ನೇ ಪ್ರಯೋಗಿಸುವುದು ಸೂಕ್ತ ಎನಿಸಿತು. ಹೀಗಾಗಿ ಅನುವಾದದಲ್ಲಿ ಕಿಳಿಪ್ಪಾಟಿನ ಲಯವನ್ನು ಉಳಿಸಿಕೊಂಡಿದ್ದೇನೆ’ ಎನ್ನುತ್ತಾರೆ ಶ್ರೀಧರನ್.

ಸರಳ ರಗಳೆಯನ್ನು ಪುನರ್ ರೂಪಿಸಿಕೊಂಡ ಮಹಾಛಂದಸ್ಸಿನಲ್ಲಿರುವ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕಾವ್ಯ ಮಹೋಪಮೆ, ಛಂದಸ್ಸು, ಅಲಂಕಾರದ ಮೂಲಕ ಸಾಹಿತ್ಯಕವಾಗಿ ಮೇರು ಕೃತಿ ಎನಿಸಿದರೆ ಪ್ರಸ್ತುತಿಯಲ್ಲಿ ವಿಶಿಷ್ಟವೂ ಯುಗಧರ್ಮದಲ್ಲಿ ಸಾಮಾಜಿಕ ಕಾಳಜಿಯುಳ್ಳದ್ದೂ ಆಗಿ ಸಾರ್ವಕಾಲಿಕ ಎನಿಸಿದೆ. ಕುವೆಂಪು ಕಾವ್ಯದ ಈ ‘ದರ್ಶನ’ವೇ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಶ್ರೀಧರನ್ ಅವರಿಗೆ ಪ್ರಮುಖ ಪ್ರೇರಣೆ.

‘ವಚನ ಸಾಹಿತ್ಯದ ಅನುವಾದ ಮಾಡುವಾಗ ಕುವೆಂಪು ಸಾಹಿತ್ಯ ಗಮನಕ್ಕೆ ಬಂತು. ಅವರ ಕೆಲವು ಕವಿತೆಗಳನ್ನು ಅನುವಾದ ಮಾಡಿದೆ. ಆಗ ‘ಶ್ರೀ ರಾಮಾಯಣ ದರ್ಶನಂ’ ಓದುವ ಸಂದರ್ಭ ಒದಗಿತು. ಈ ಕಾವ್ಯ ಪ್ರಸ್ತುತ ಕಾಲಘಟ್ಟಕ್ಕೆ, ವಿಶೇಷವಾಗಿ ಕೇರಳದ ರಾಜಕೀಯ, ಸಾಮಾಜಿಕ ಸ್ಥಿತ್ಯಂತರದ ಸಂದರ್ಭಕ್ಕೆ ಅತ್ಯಗತ್ಯ ಎನಿಸಿತು. ಈ ಮಹಾಕಾವ್ಯವನ್ನು ಸಾಹಿತ್ಯ ಕೃತಿಯಾಗಿ ಮಾತ್ರವಲ್ಲ, ಸಾಮಾಜಿಕ ರೋಗಕ್ಕೆ ಚಿಕಿತ್ಸಕ ಗುಳಿಗೆಯಾಗಿಯೂ ಕಂಡಿದ್ದೇನೆ’ ಎನ್ನುತ್ತಾರೆ ಅವರು.

‘ರಾಜಕೀಯ ಕೊಲೆಗಳು ನಡೆಯುವ, ತಂದೆ–ಮಗ, ಮಗಳು–ತಾಯಿ, ಸಹೋದರ–ಸಹೋದರಿ ಮುಂತಾದ ಯಾವ ಸಂಬಂಧಗಳನ್ನೂ ಲೆಕ್ಕಿಸದೆ ನರಹತ್ಯೆಗಳಿಗೆ ಸಾಕ್ಷಿಯಾಗುವ, ಧಾರ್ಮಿಕ ಅಸಹಿಷ್ಣುತೆ ಮೆರೆಯುವ ಇಂದಿನ ಸಮಾಜಕ್ಕೆ ‘ಶ್ರೀ ರಾಮಾಯಣ ದರ್ಶನಂ’ನಂಥ ಕೃತಿಯೊಂದರ ಅಗತ್ಯವಿದೆ. ಅನಾಚಾರಗಳನ್ನು ಕಂಡು ಸುಮ್ಮನಿರುವ ಹಾಗೂ ಕೆಲವೊಮ್ಮೆ ಅದನ್ನು ಸಮರ್ಥಿಸುವ ಸಮಾಜವು ಪಶ್ಚಾತ್ತಾಪಪಡುವ ಗುಣವನ್ನೇ ಕಳೆದುಕೊಂಡಿದೆ. ಅವರವರ ತಪ್ಪುಗಳ ಭಾರವನ್ನು ಹೊತ್ತುಕೊಳ್ಳಲು ಯಾರೂ ಸಿದ್ಧರಿಲ್ಲ. ತಪ್ಪುಗಳನ್ನು ಒಪ್ಪಿಕೊಂಡರೆ ಎಲ್ಲರೂ ಮನುಷ್ಯರಾಗಬಲ್ಲರು. ಪಶ್ಚಾತ್ತಾಪದ ಮೂಲಕ ಮಾನವನಾಗುವ ಉದಾತ್ತ ಚಿಂತನೆಯ ಪಾಠ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯದಲ್ಲಿದೆ. ರಾಮನನ್ನು ಕುವೆಂಪು ದೇವರಾಗಿ ಕಂಡಿಲ್ಲ. ಅವರ ರಾಮಾಯಣದಲ್ಲಿ ರಾಮ ಲೋಕಪ್ರಿಯ. ಬೇಡನಾಗಿದ್ದ ವಾಲ್ಮೀಕಿಗೆ ಕವಿತ್ವ ತಂದುಕೊಟ್ಟ ರಾಮಾಯಣದ ‘ದರ್ಶನ’ದಲ್ಲಿ ಕುವೆಂಪು ಮಾನವೀಯ ಪಾತ್ರಗಳನ್ನು ಚಿತ್ರಿಸಿದ್ದಾರೆ. ತಪ್ಪಿನ ಅರಿವಾದ ಮಂಥರೆಗೆ ಎದುರಾಗುವ ಕಾಡಿನ ಬೆಂಕಿ ವಾಸ್ತವದಲ್ಲಿ ಪಶ್ಚಾತ್ತಾಪದ ಅಗ್ನಿ. ಭರತನ ಮುಂದೆ ಆಕೆ ದೈವತ್ವದ ಎತ್ತರಕ್ಕೆ ಏರುತ್ತಾಳೆ. ವಾಲಿ–ಸುಗ್ರೀವ ಪ್ರಸಂಗದಲ್ಲೂ ಇಂಥ ಉದಾತ್ತ ಭಾವ ಇದೆ. ರಾವಣನಿಗೆ ಕನಸಿನಲ್ಲಿ ಸೀತೆ ತಾಯಿಯಾಗಿ ಕಾಣುವುದೂ, ಕುಂಭಕರ್ಣನೊಂದಿಗೆ ತಾನು ಕೂಡ ಸೀತಾ‘ಮಾತೆ’ಯ ಮೊಲೆಹಾಲು ಕುಡಿಯುವಂತೆ ಭಾಸವಾಗುವುದೂ ಇಂಥ ಉದಾತ್ತ ಚಿಂತನೆಗಳ ಫಲ. ಒಟ್ಟು 301 ಬಗೆಯ ರಾಮಾಯಣಗಳು ಇದೆ ಎನ್ನಲಾಗುತ್ತದೆ. ಅಲ್ಲೆಲ್ಲೂ ಇಂಥ ಪಾತ್ರಗಳು ಬರುವುದಿಲ್ಲ. ಆದ್ದರಿಂದ ರಾಮಾಯಣಗಳಲ್ಲೇ ಕುವೆಂಪು ರಾಮಾಯಣ ಅತಿವಿಶಿಷ್ಟ. ಪಾಶ್ಚಾತ್ಯ ಮತ್ತು ಪೌರಾತ್ಯ ಚಿಂತನೆಗಳ ಸಮನ್ವಯವಿರುವ ಈ ಕೃತಿಯಲ್ಲಿ ವಿಶ್ವಮಾನವ ವಾದ ಎದ್ದುಕಾಣುತ್ತದೆ. ಇದೆಲ್ಲವೂ ಅನುವಾದಕ್ಕೆ ಪ್ರೇರಣೆಯಾಯಿತು’ ಎಂಬುದು ಅವರ ವಿವರಣೆ.

ಒಂಬತ್ತು ತಿಂಗಳಲ್ಲಿ ಶ್ರೀಧರನ್ ಅವರು ಅನುವಾದ ಕಾರ್ಯ ಪೂರ್ಣಗೊಳಿಸಿದ್ದಾರೆ. ‘ಮೂಲ ಕೃತಿಯ ನಡೆಗೆ ಧಕ್ಕೆಯಾಗಬಾರದು ಎಂಬ ಕಾಳಜಿ ಇತ್ತು. ಅದನ್ನು ಪಾಲಿಸಿದ್ದೇನೆ’ ಎಂದು ಹೇಳುವ ಅವರ ಮಾತು ಪ್ರತಿ ಸಾಲಿನಲ್ಲೂ ಕಾಣಿಸುತ್ತದೆ.

ನಾಗಚಂದ್ರನಿಂದ ಕುವೆಂಪುವರೆಗೆ ಅದರ ಹರಹು ಇದೆ. ಒಬ್ಬೊಬ್ಬರದು ಒಂದೊಂದು ಬಗೆಯ ದರ್ಶನ. ಧರ್ಮದರ್ಶನ ಮತ್ತು ಜೀವನಸಿದ್ಧಾಂತದಲ್ಲೂ ಒಬ್ಬೊಬ್ಬರದು ಒಂದೊಂದು ಬಗೆ. ನಾಗಚಂದ್ರನು ರಾವಣನ ಮೂಲಕ ಕರ್ಮದ ಬಲವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದರೆ, ಕುಮಾರ ವಾಲ್ಮೀಕಿ ಕಾವ್ಯನಾಮದ ನರಹರಿಯು ವಿಷ್ಣುವಿನ ಆಧಿಪತ್ಯ ಪ್ರಕಟಿಸಲು ರಾಮಾಯಣವನ್ನು ಬಳಸಿಕೊಂಡರು. ಮಾಸ್ತಿಯವರು ಶ್ರೀರಾಮ ಪಟ್ಟಾಭಿಷೇಕದಲ್ಲಿ ಸಾಮಾಜಿಕ ಕಾಳಜಿಯನ್ನೂ ಜೀವನ ಸಿದ್ಧಾಂತವನ್ನೂ ಪ್ರಕಟಪಡಿಸಿದ್ದಾರೆ ಎಂಬುದು ಕನ್ನಡ ರಾಮಾಯಣ ಕಾವ್ಯ ಪರಂಪರೆಯ ಬಗ್ಗೆ ಶ್ರೀಧರನ್ ಅವರ ಅಭಿಪ್ರಾಯ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.