ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಕ್ಟಿಕ್‌ನ ಹಿಮಾದ್ರಿಯಲ್ಲಿ ಕನ್ನಡಿಗನ ಪ್ರಯೋಗ

Published 3 ಫೆಬ್ರುವರಿ 2024, 23:56 IST
Last Updated 3 ಫೆಬ್ರುವರಿ 2024, 23:56 IST
ಅಕ್ಷರ ಗಾತ್ರ

ಆರ್ಕ್ಟಿಕ್‌. ಹಿಮವನ್ನೇ ಹೊದ್ದಿರುವ, ಅಕ್ಟೋಬರ್‌ನಿಂದ ಫೆಬ್ರುವರಿಯವರೆಗೆ ಸೂರ್ಯನ ರಶ್ಮಿಗಳನ್ನೇ ಕಾಣದ ಪ್ರದೇಶ. ನೈಸರ್ಗಿಕವಾಗಿ ಮತ್ತು ಮಾನವ ತಪ್ಪಿನಿಂದ ಸಂಭವಿಸುವ ಯಾವುದೇ ಅವಘಡಗಳ ಪರಿಣಾಮ ಆರ್ಕ್ಟಿಕ್‌ನಲ್ಲಿ ಕಾಣಿಸುತ್ತದೆ. ಹಾಗೆಯೇ, ಇಲ್ಲಿನ ಯಾವುದೇ ವ್ಯತ್ಯಾಸಗಳ ಪರಿಣಾಮ ಪ್ರಪಂಚದ ಮೇಲಾಗುತ್ತದೆ. ಆದ್ದರಿಂದಲೇ ಇಲ್ಲಿ ಸಂಶೋಧನೆ ಕೈಗೊಳ್ಳುವುದು ಎಲ್ಲ ಪ್ರಮುಖ ದೇಶಗಳ ಆದ್ಯತೆ ಮತ್ತು ಹೆಮ್ಮೆ. ಆರ್ಕ್ಟಿಕ್‌ಗೆ ಬೇಸಿಗೆಯಲ್ಲಿ ಹೋಗುವುದೇ ಸವಾಲಾಗಿರುವಾಗ ಚಳಿಗಾಲದಲ್ಲಿ ಸಂಶೋಧನಾ ಯಾತ್ರೆ ಕೈಗೊಂಡವರು ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿ, ಕನ್ನಡಿಗ ಬಿ.ಎಸ್. ಗಿರೀಶ್‌.

‘ನಾವು ಆರ್ಕ್ಟಿಕ್‌ಗೆ ಹೋಗಿದ್ದ ವೇಳೆ ಕಡು ಚಳಿ. ಡಿಸೆಂಬರ್‌ 21ರಿಂದ ಜನವರಿ 15ರ ವರೆಗೆ ಅಲ್ಲಿದ್ದೆವು. ಆರ್ಕ್ಟಿಕ್‌ನಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ 28ರ ವೇಳೆಗೆ ಸೂರ್ಯಾಸ್ತವಾದರೆ, ಸೂರ್ಯನ ಬೆಳಕು ಮತ್ತೆ ಕಾಣೋದು ಫೆ.16ರ ವೇಳೆಗೆ. ಅಂದರೆ, ಸುಮಾರು ನಾಲ್ಕು ತಿಂಗಳು ಆರ್ಕ್ಟಿಕ್‌ನಲ್ಲಿ ಸಂಪೂರ್ಣ ಕತ್ತಲು ಆವರಿಸಿರುತ್ತದೆ. ನಾವು ನಾರ್ವೆಯ ಆರ್ಕ್ಟಿಕ್‌ ಪ್ರದೇಶದಲ್ಲಿ ಕಾಲಿಟ್ಟ ಸಂದರ್ಭದಲ್ಲಿ ಹುಣ್ಣಿಮೆ ಸಮೀಪದಲ್ಲಿದ್ದುದರಿಂದ ಸ್ವಲ್ಪ ಬೆಳಕೂ ಇತ್ತು. ಆ ಬೆಳಕಿನಲ್ಲಿಯೇ ಸಾಗಿದಾಗ ನಮಗೆ ಸುತ್ತಮುತ್ತ ಬೆಟ್ಟ ಗುಡ್ಡ, ಸಮುದ್ರ ಕಾಣಿಸಿತು. ಹುಣ್ಣಿಮೆಯ ನಂತರ, ದಿನದ 24 ತಾಸುಗಳೂ ಕತ್ತಲೆಯಲ್ಲೇ ಕಳೆಯಬೇಕಿತ್ತು’ ಎಂದು ಅನುಭವ ಹಂಚಿಕೊಂಡರು ಗಿರೀಶ್.

ಭಾರತ ಇದೇ ಮೊದಲ ಬಾರಿಗೆ ಚಳಿಗಾಲದಲ್ಲಿ ಆರ್ಕ್ಟಿಕ್‌ಗೆ ಸಂಶೋಧನಾ ಯಾತ್ರೆಗೆ ತಂಡವೊಂದನ್ನು ಕಳಿಸಿತ್ತು. ಆ ತಂಡದ ನಾಯಕತ್ವ ವಹಿಸಿದ್ದವರು ಗಿರೀಶ್.

‘ಹಿಮಾದ್ರಿ’ಯ ಪ್ರಯೋಗಾಲಯದಲ್ಲಿ ದತ್ತಾಂಶ ಸಂಗ್ರಹಿಸುತ್ತಿರುವ ಗಿರೀಶ್‌

‘ಹಿಮಾದ್ರಿ’ಯ ಪ್ರಯೋಗಾಲಯದಲ್ಲಿ ದತ್ತಾಂಶ ಸಂಗ್ರಹಿಸುತ್ತಿರುವ ಗಿರೀಶ್‌ 

‘ಆರ್ಕ್ಟಿಕ್‌ನಲ್ಲಿ ಭಾರತದ ಕಾಯಂ ಸ್ಟೇಷನ್‌ ‘ಹಿಮಾದ್ರಿ’. ನಾರ್ವೆಯ ನ್ಯೂಅಲ್ಸನ್‌ನಲ್ಲಿದೆ. ಏಕಕಾಲಕ್ಕೆ ಕೇವಲ ಎಂಟು ಜನ ಉಳಿದುಕೊಳ್ಳಬಹುದಾದಷ್ಟಿರುವ ಜಾಗ ಅದು. ಅದರೊಳಗೇ ಪ್ರಯೋಗಾಲಯ ಇದೆ. ವಿಶ್ರಾಂತಿ ಕೊಠಡಿಯೂ ಇದೆ. ದಿನದ 24 ತಾಸು ಬಿಸಿನೀರಿನ ವ್ಯವಸ್ಥೆ ಇರುತ್ತದೆ. ಊಟ–ತಿಂಡಿಗಾಗಿ ಸ್ವಲ್ಪ ದೂರದಲ್ಲಿರುವ ‘ಸರ್ವೀಸ್‌ ಬಿಲ್ಡಿಂಗ್‌’ಗೆ ಹೋಗಬೇಕಾಗುತ್ತದೆ. ಅಲ್ಲಿಗೆ ಮೊಬೈಲ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ ತೆಗೆದುಕೊಂಡು ಬರಬೇಡಿ ಎಂದು ಅಲ್ಲಿನವರು ಮನವಿ ಮಾಡುತ್ತಾರೆ. ಕಾರಣ, ಬೇರೆ ದೇಶಗಳಿಂದಲೂ ಬಂದವರೊಂದಿಗೆ ಮಾತನಾಡಲಿ, ಸಂವಹನ ನಡೆಸಲಿ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ’ ಎಂದು ಅವರು ಮಾತು ಮುಂದುವರಿಸಿದರು.

2008ರ ಜುಲೈ 1ರಂದು ಈ ‘ಹಿಮಾದ್ರಿ’ಯನ್ನು ಸ್ಥಾಪಿಸಲಾಗಿತ್ತು. ಅಂತರರಾಷ್ಟ್ರೀಯ ಆರ್ಕ್ಟಿಕ್‌ ಸಂಶೋಧನಾ ನೆಲೆ ನಾರ್ವೆಯಸ್ವಾಲ್‌ಬಾರ್ಡ್‌ನಲ್ಲಿ ಇದೆ.

ಭಾರತದ್ದಷ್ಟೇ ಅಲ್ಲದೆ, ಸುಮಾರು 11 ಬೇರೆ ದೇಶಗಳ ರಿಸರ್ಚ್‌ ಸ್ಟೇಷನ್‌ಗಳು ಸದ್ಯ ಆರ್ಕ್ಟಿಕ್‌ನಲ್ಲಿವೆ. ಇವುಗಳಲ್ಲಿ ವರ್ಷದ 365 ದಿನಗಳೂ ಕಾರ್ಯನಿರ್ವಹಿಸುವ ಸ್ಟೇಷನ್‌ಗಳ ಸಂಖ್ಯೆ 4ರಿಂದ 5 ಮಾತ್ರ. ಈ ಎಲ್ಲ ದೇಶಗಳ ಪ್ರತಿನಿಧಿಗಳೂ ಸೇರಿಸಿದರೆ, ಏಕಕಾಲಕ್ಕೆ 30ರಿಂದ 35 ಜನ ಮಾತ್ರ ಚಳಿಗಾಲದಲ್ಲಿ ಆರ್ಕ್ಟಿಕ್‌ನಲ್ಲಿ ಇರುತ್ತಾರೆ.

‘ಈ ಸ್ಥಳದಲ್ಲಿ ಸೂರ್ಯನ ಬೆಳಕು ಇರದ ಕಾರಣ ವಿಟಮಿನ್‌ ಡಿ ಕೊರತೆ ಬಾಧಿಸುತ್ತದೆ. ಆದರೆ, ನಾವು ಕೇವಲ 25 ದಿನಗಳು ಇದ್ದುದರಿಂದ ಹೆಚ್ಚು ಸಮಸ್ಯೆ ಎನಿಸಲಿಲ್ಲ. ಮೂರರಿಂದ ಐದು ತಿಂಗಳುವರೆಗೆ ಇರುವವರಿಗೆ ಸಮಸ್ಯೆ ಬಾಧಿಸುತ್ತದೆ. ಅಂಥವರಿಗೆ ವಿಟಮಿನ್‌ ಡಿ ಸಪ್ಲಿಮೆಂಟ್‌ ಕೊಡುತ್ತಾರೆ. ಮಾಂಸಾಹಾರಿಗಳಿಗೆ ಮೀನಿನ ಆಹಾರ ಸೇವಿಸಲು ಹೇಳುತ್ತಾರೆ. ನಮ್ಮ ಆರೋಗ್ಯ ಪರಿಶೀಲನೆಗಾಗಿ ಒಬ್ಬರು ಶುಶ್ರೂಷಕಿಯನ್ನೂ ಇಟ್ಟಿರುತ್ತಾರೆ’ ಎಂದು ಗಿರೀಶ್‌ ಹೇಳಿದರು.

ಈ ‘ಹಿಮಾದ್ರಿ’ ವರ್ಕ್‌ಸ್ಟೇಷನ್‌ನ ಸಂಪೂರ್ಣ ಚಟುವಟಿಕೆ ನಿರ್ವಹಿಸುವುದು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (ಎನ್‌ಸಿಪಿಒಆರ್‌). ವಿಜ್ಞಾನಿಗಳನ್ನು, ಸಂಶೋಧಕರನ್ನು ಆರ್ಕ್ಟಿಕ್‌ಗೆ ಕಳುಹಿಸುವುದು, ಅವರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡುವುದು ಈ ಕೇಂದ್ರದ ಕೆಲಸ.

‘ನಾನು ರಾಮನ್‌ ಸಂಶೋಧನಾ ಸಂಸ್ಥೆಯಲ್ಲಿ (ಆರ್‌ಆರ್‌ಐ) ಪ್ರಯೋಗ ಕೈಗೊಂಡಿರುವುದು ರೇಡಿಯೊ ಖಗೋಳವಿಜ್ಞಾನದ ಬಗ್ಗೆ. ಮೂಲತಃ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್‌ ಆಗಿರುವ ನಾನು, ಆರ್‌ಆರ್‌ಐನ ಸರಸ್‌ (SARAS) ತಂಡದಲ್ಲಿದ್ದೇನೆ. ರೇಡಿಯೊ ಖಗೋಳವಿಜ್ಞಾನದಲ್ಲಿ ಪ್ರಮುಖವಾಗಿ, ಮೊದಲ ಬಾರಿಗೆ ನಕ್ಷತ್ರಗಳು ಹೇಗೆ ರಚನೆಯಾದವು, ಮೊದಲ ನಕ್ಷತ್ರಪುಂಜಗಳ ಸಂಕೇತಗಳ (ಸಿಗ್ನಲ್ಸ್‌) ಬಗ್ಗೆ ಅಧ್ಯಯನ ಮಾಡುವುದು ನಮ್ಮ ಆದ್ಯತೆ. ಈ ಬಗ್ಗೆ ಅಧ್ಯಯನ ಮಾಡುವ ಪ್ರಪಂಚದ ಕೆಲವೇ ತಂಡಗಳಲ್ಲಿ ನಮ್ಮ ತಂಡ ಪ್ರಮುಖವಾಗಿದೆ’ ಎಂದು ಗಿರೀಶ್‌ ತಮ್ಮ ಸಂಶೋಧನೆಯ ಬಗ್ಗೆ ಹೇಳುತ್ತಾರೆ.

ಆರ್ಕ್ಟಿಕ್‌ನಂತಹ ದೂರದ ಪ್ರದೇಶಗಳಲ್ಲಿ ರೇಡಿಯೊ ತರಂಗಾಂತರ ಅಥವಾ ರೇಡಿಯೊ ಫ್ರೀಕ್ವೆನ್ಸಿ ವಾತಾವರಣ ಹೇಗಿದೆ ಎಂದು ಪರೀಕ್ಷೆ ಮಾಡಲು ನಾವು ಆರ್ಕ್ಟಿಕ್‌ಗೆ ತೆರಳಿದ್ದೆವು. ನಮ್ಮ ವಾಯುಮಂಡಲದಲ್ಲಿ ಮಧ್ಯದ ಗೋಳದ ನಂತರ ಇರುವ ಪದರವಾದ ಅಯಾನುಗೋಳ (ಅಯನೊಸ್ಪಿಯರ್‌) ಸೂರ್ಯ ಇಲ್ಲದೇ ಇರುವ ಸಮಯದಲ್ಲಿ ಯಾವ ರೀತಿ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವುದು ನಮ್ಮ ಸಂಶೋಧನೆಯ ಮತ್ತೊಂದು ಉದ್ದೇಶ. ಹೀಗಾಗಿ, ದೂರದ ‘ಹಿಮಾದ್ರಿ’ಯಂತಹ ಸ್ಟೇಷನ್‌ಗಳಲ್ಲಿ ಇಂತಹ ಸಂಶೋಧನೆ ಕೈಗೊಂಡಾಗ ನಮಗೆ ಹೆಚ್ಚು ನಿಖರವಾದ ದತ್ತಾಂಶಗಳು ಸಿಗುವ ಸಾಧ್ಯತೆ ಇರುತ್ತದೆ. ಸದ್ಯ, ಅಲ್ಲಿನ ಎಲ್ಲ ದತ್ತಾಂಶಗಳನ್ನು ಸಂಗ್ರಹಿಸಿಕೊಂಡು ಬಂದಿದ್ದೇವೆ. ದತ್ತಾಂಶಗಳನ್ನು ವಿಶ್ಲೇಷಿಸಿದ ನಂತರ, ರೇಡಿಯೊ ಖಗೋಳವಿಜ್ಞಾನ ಸಂಶೋಧನೆಗೆ ಅಗತ್ಯವಾದ ಅತ್ಯಾಧುನಿಕ ಉಪಕರಣಗಳನ್ನು ಆರ್ಕ್ಟಿಕ್‌ಗೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಅವರು ಹೇಳಿದರು.

ಇಲ್ಲಿ ಹಲವು ದೇಶಗಳು ಸಂಶೋಧನೆಗೆ ಮುಂದಾಗುತ್ತಿರುವುದಕ್ಕೆ ಈಗಿನ ಪ್ರಮುಖ ಕಾರಣ ಹವಾಮಾನ ಬದಲಾವಣೆ. ಆರ್ಕ್ಟಿಕ್‌ನಲ್ಲಿ ಹಿಮಗಡ್ಡೆಗಳು ಕರಗುತ್ತಿವೆ. ಸಮುದ್ರದ ನೀರಿನ ಮಟ್ಟ ಏರುತ್ತಿದೆ. ಅತಿ ವೇಗದ ಪ್ರಮಾಣದಲ್ಲಿ ಹಿಮ ಕರಗುತ್ತಿರುವುದಕ್ಕೆ ಕಾರಣವೇನು, ಸಾಗರ ಜೀವವಿಜ್ಞಾನದ ಮೇಲೆ ಆಗುತ್ತಿರುವ ಪರಿಣಾಮಗಳೇನು ಎನ್ನುವುದರ ಬಗ್ಗೆ ಆಯಾ ಕ್ಷೇತ್ರದ ವಿಜ್ಞಾನಿಗಳು ಬಂದು ಅಧ್ಯಯನ ನಡೆಸುತ್ತಾರೆ.

ಕುಸಿಯುತ್ತಿದೆ ಪ್ರಯೋಗಾಲಯದ ಸ್ಥಳ!:

‘ನಾನು ಇಲ್ಲಿಗೆ (ಹಿಮಾದ್ರಿ) ಬಂದಾಗ ಗಮನಿಸಿದ ಪ್ರಮುಖ ಅಂಶ ಅಂದರೆ ಪರ್ಮಾಫ್ರಾಸ್ಟ್‌ ಕರಗುವಿಕೆ. ಆ ಜಾಗದಲ್ಲಿ ನೆಲದಿಂದ ಒಂದೂವರೆಯಿಂದ ಎರಡು ಮೀಟರ್‌ ಒಳಗೆ ಹೋದರೆ ಹಿಮದ ದೊಡ್ಡ ಪದರವೇ ಇದೆ. ಅದು ಒಂದು ರೀತಿಯಲ್ಲಿ ಕಾಂಕ್ರೀಟ್‌ನಂತೆ ಇರುತ್ತದೆ. ಈ ಪದರದ ಮೇಲ್ಭಾಗ, ಸಕ್ರಿಯ ಪದರ ಬೇಸಿಗೆಯಲ್ಲಿ ಕರಗಬೇಕು, ಚಳಿಗಾಲದಲ್ಲಿ ಗಟ್ಟಿಯಾಗಬೇಕು. ಆದರೆ, ಚಳಿಗಾಲದಲ್ಲಿಯೂ ಈ ಹಿಮಪದರ ಎಷ್ಟು ಕರಗುತ್ತಿದೆ ಎಂದರೆ, ನಮ್ಮ ಹಿಮಾದ್ರಿ ಸ್ಟೇಷನ್‌ನಿಂದ ಸುಮಾರು 1.25 ಕಿಲೊಮೀಟರ್‌ ದೂರ ಇರುವ ಗ್ರುವೆಬಾಡೆಟ್‌ ಪ್ರಯೋಗಾಲಯದ ಕೆಳಗಿರುವ ಭೂಮಿಯು ಮೊದಲು ಇದ್ದುದಕ್ಕಿಂತ ಈಗ ಒಂದೂವರೆ ಅಡಿಯಷ್ಟು ಕೆಳಗೆ ಕುಸಿದಿರುವುದನ್ನು ಗಮನಿಸಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಕಾಲಿಕವಾಗಿ ಮಳೆ ಸುರಿಯುವುದು, ಕೆಲವೊಮ್ಮೆ ಮಳೆಯೇ ಬಾರದಿರುವುದಕ್ಕೆ ಆರ್ಕ್ಟಿಕ್‌ನಲ್ಲಿ ಆಗುತ್ತಿರುವ ಇಂತಹ ಬದಲಾವಣೆಗಳು ಕಾರಣವಿರಬಹುದು. ಹೀಗೆ, ಮಾನ್ಸೂನ್‌ ಮೇಲಿನ ಇಂತಹ ಪರಿಣಾಮಗಳು ದೇಶದ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರುತ್ತವೆ. ಈ ಕಾರಣಕ್ಕೆ ಆರ್ಕ್ಟಿಕ್‌ನ ಅಧ್ಯಯನಕ್ಕೆ ಪ್ರಮುಖ ದೇಶಗಳು ಮಹತ್ವ ನೀಡುತ್ತಿವೆ.

ಆರ್ಕ್ಟಿಕ್‌– ಅಂಟಾರ್ಕ್ಟಿಕ್‌ ವ್ಯತ್ಯಾಸ–ಸವಾಲು
‘ನಾನು ಅಂಟಾರ್ಕ್ಟಿಕ್‌ಗೆ ಈವರೆಗೆ ಹೋಗಿಲ್ಲ. ಅಂಟಾರ್ಕ್ಟಿಕ್‌ನಲ್ಲಿ 1980ರ ದಶಕದಿಂದಲೇ ಸಂಶೋಧನಾ ಯಾತ್ರೆಗಳು ಪ್ರಾರಂಭವಾಗಿವೆ. ಈಗ ಹಲವು ಬೇಸ್‌ ಸ್ಟೇಷನ್‌ಗಳು ಅಂಟಾರ್ಕ್ಟಿಕ್‌ನಲ್ಲಿವೆ. ಆರ್ಕ್ಟಿಕ್‌ಗೆ ಹೋಲಿಸಿದರೆ, ಅಂಟಾರ್ಕ್ಟಿಕ್‌ನಲ್ಲಿ ಹೆಚ್ಚು ಸೌಲಭ್ಯ–ವ್ಯವಸ್ಥೆ ಇದೆ. ಭಾರತೀಯ ವೈದ್ಯರು, ಶುಶ್ರೂಷಕರು ಎಲ್ಲ ಇದ್ದಾರೆ’ ಎಂದು ಗಿರೀಶ್ ಹೇಳಿದರು. ‘ಆರ್ಕ್ಟಿಕ್‌ನಲ್ಲಿ ಮತ್ತೊಂದು ದೊಡ್ಡ ಸವಾಲು ಅಂದರೆ ಹಿಮ ಕರಡಿಗಳ ಕಾಟ. ಹಿಮ, ಭಾರಿ ಗಾಳಿಯ ಜೊತೆಗೆ ಹಿಮ ಕರಡಿಗಳನ್ನೂ ಎದುರಿಸಬೇಕಾಗುತ್ತದೆ. ಅವು ಪ್ರಯೋಗಾಲಯದೊಳಗೇ ನುಗ್ಗುವ ಅಪಾಯವಿರುತ್ತದೆ. ಅದಕ್ಕಾಗಿ, ರೈಫಲ್‌, ಫ್ಲೇರ್‌ ಗನ್‌ನಂತಹ ಶಸ್ತ್ರಾಸ್ತ್ರಗಳನ್ನು ಹೊಂದುವುದು ಅವಶ್ಯಕ’ ಎಂದರು.

ಎಲ್ಲರಿಗೂ ಇದೆ ಅವಕಾಶ

ಗಿರೀಶ್‌ ಅವರು ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಸರಸ್‌‌ನ ಪ್ರೊ.ಸೌರಭ್‌ ಸಿಂಗ್ ಅವರ ನೇತೃತ್ವದಲ್ಲಿ ಗಿರೀಶ್‌ ಈ ಸಂಶೋಧನೆ ಮಾಡುತ್ತಿದ್ದಾರೆ. ತಮ್ಮಂತೆಯೇ ಕನ್ನಡದ ಯುವ ಪ್ರತಿಭಾವಂತರು ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಂಬಲಿಸುವ ಅವರು, ‘ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ’ಕ್ಕೆ(ಎನ್‌ಸಿಪಿಒಆರ್‌) ಯುವಕರು ಪ್ರಸ್ತಾವ ಕಳುಹಿಸುವಂತೆ ಸಲಹೆ ನೀಡುತ್ತಾರೆ.

ಸೆಪ್ಟೆಂಬರ್‌ನಲ್ಲಿ ಎನ್‌ಸಿಪಿಒಆರ್‌ ಪ್ರಸ್ತಾವಗಳನ್ನು ಆಹ್ವಾನಿಸುತ್ತದೆ. ಈ ಪ್ರಸ್ತಾವಗಳಲ್ಲಿ ಕೆಲವನ್ನು ಆಯ್ದುಕೊಳ್ಳಲಾಗುತ್ತದೆ. ಆಯ್ಕೆಗೆ ಒಳಪಟ್ಟವರು, ಯಾವ ಪ್ರಯೋಗ ಮಾಡುತ್ತಾರೆ, ಏಕೆ ಆ ಪ್ರಯೋಗ ಮಾಡುತ್ತಿದ್ದಾರೆ ? ಅದರ ಮಹತ್ವ ಏನು ಎಂದು ಸಮರ್ಪಕವಾಗಿ ವಿವರಿಸಿದರೆ ಅಂಥವರನ್ನು ಅಂತಿಮ ಹಂತಕ್ಕೆ ಮಾಡಲಾಗುತ್ತದೆ. ಯಾರೇ ಆಗಲಿ, ಉತ್ತಮ ಪ್ರಸ್ತಾವ (ಪ್ರಪೋಸಲ್‌) ಇದ್ದರೆ ಅವರು ಎನ್‌ಸಿಪಿಒಆರ್‌ ಸಂಪರ್ಕಿಸಬಹುದು ಎಂದು ಗಿರೀಶ್‌ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT