ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ರಾಗದಲ್ಲಿ ಇದೇ ತಾಳದಲ್ಲಿ...

Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಲೇಖಕರು: ಶೈಲಜ

ಕರ್ನಾಟಕದ ನಾಡಗೀತೆಯ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಕಾವ್ಯ-ಸಂಗೀತ, ಕವಿ-ಸಂಗೀತ ಸಂಯೋಜಕ, ಸಂಗೀತ-ಧರ್ಮ, ಕಾವ್ಯ-ಪ್ರಭುತ್ವ, ಸಂಗೀತ-ಬದಲಾವಣೆ ಇವುಗಳ ಕುರಿತು ಮರುಚಿಂತನೆಯನ್ನು ಈ ಬೆಳವಣಿಗೆ ಮತ್ತೆ ಮುನ್ನೆಲೆಗೆ ತಂದಿದೆ. ಸಂಗೀತದಲ್ಲಿ ಇಂತಹ ಬದಲಾವಣೆಗಳು ನಿರಂತರ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

ಹಿಂದೆ ನಾಡಗೀತೆ ಅಥವಾ ರಾಷ್ಟ್ರಗೀತೆಯ ಕಲ್ಪನೆ ಈಗ ಇರುವಂತೆ ಇರಲಿಲ್ಲ, ಅನಿಶ್ಚಿತವಾಗಿತ್ತು. ರಾಷ್ಟ್ರಗೀತೆ ಮತ್ತು ನಾಡಗೀತೆ ಎನ್ನುವ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತಿದ್ದವು. ನಾಡಗೀತೆ ಎನ್ನುವುದು ಒಂದು ನಿರ್ದಿಷ್ಟ ಹಾಡಾಗಿರಲಿಲ್ಲ. 1924ರ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಮೊದಲನೆಯ ದಿನ ಶಾಂತಕವಿಯ ರಚನೆ ‘ನಮ್ಮದೈ ನಮ್ಮದೀ ಭರತ ಭೂಮಿ’ ಎಂಬ ಗೀತೆಯನ್ನು ಭಾರತದ ರಾಷ್ಟ್ರಗೀತೆ ಎಂದು ಹಾಡಲಾಯಿತು. ಎರಡನೆಯ ದಿನ, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಗೀತೆಯನ್ನು ‘ಕನ್ನಡ ರಾಷ್ಟ್ರಗೀತೆ’ ಎಂದು ಹಾಡಲಾಯಿತು. ಬೇರೊಂದೆಡೆ ಗೋವಿಂದ ಪೈ ಅವರ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’ ಹಾಡುತ್ತಿದ್ದರು. ಇನ್ನೂ ವಿಶೇಷವೆಂದರೆ ಸ್ಥಳ, ಭಾಷೆ, ಉಪಭಾಷೆಗೆ ಅನುಗುಣವಾಗಿ ನಾಡಗೀತೆ, ರಾಷ್ಟ್ರಗೀತೆಗಳು ಬದಲಾಗುತ್ತಿದ್ದವು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರದಲ್ಲಿ ತೆಲುಗು ಹೀಗೆ, ಒಂದೇ ಹಾಡನ್ನು ಬೇರೆ ಬೇರೆ ಮಟ್ಟುಗಳಲ್ಲಿ ಹಾಡಲಾಗುತ್ತಿತ್ತು. ‘ವಂದೇ ಮಾತರಂ’ ಅನ್ನು 70 ವಿಭಿನ್ನ ಮಟ್ಟುಗಳಲ್ಲಿ ಹಾಡಲಾಗುತ್ತಿತ್ತಂತೆ. ಅದರಲ್ಲಿ ಸುಮಾರು 45 ಮಟ್ಟುಗಳನ್ನು ತಾವು ಕೇಳಿರುವುದಾಗಿ ಗಾಯಕ ಟಿ.ಎಂ. ಕೃಷ್ಣ ಹೇಳುತ್ತಾರೆ. ನಮ್ಮ ಇಂದಿನ ನಾಡಗೀತೆಯೂ ನಾಲ್ಕು ವಿಭಿನ್ನ ರಾಗಗಳಲ್ಲಿ ಲಭ್ಯವಿದೆ ಎನ್ನುತ್ತಾರೆ ಖ್ಯಾತ ಸುಗಮ ಸಂಗೀತ ಕಲಾವಿದೆ ಮತ್ತು ನಾಡಗೀತೆ ಸಮಿತಿಯ ಅಧ್ಯಕ್ಷೆ ಎಚ್‌.ಆರ್.ಲೀಲಾವತಿಯವರು. ಹಾಗಾಗಿ ನಾಡಗೀತೆ ಎಂಬ ಕಲ್ಪನೆಯೇ ಹೆಚ್ಚು ಮುಕ್ತವಾಗಿದ್ದು, ಪ್ರಾದೇಶಿಕ ಜನರ ಭಾಷಾವೈವಿಧ್ಯ, ಉಪಭಾಷೆಗಳ ಸೊಗಡಿಗೆ ಹೆಚ್ಚಿನ ಅವಕಾಶವಿತ್ತು. ಬಹುಶಃ ರಾಷ್ಟ್ರೀಯತೆಯ ಕಲ್ಪನೆ ಬಲವಾದಂತೆಲ್ಲಾ ಒಂದು ರಾಷ್ಟ್ರ, ಒಂದು ರಾಷ್ಟ್ರಗೀತೆ, ಒಂದು ರಾಷ್ಟ್ರಭಾಷೆ, ಮುಂತಾದ ಕಲ್ಪನೆಗಳು ಬಲವಾದವು. ಎಲ್ಲವೂ ‘ಸ್ಟಾಂಡರ್ಡೈಸ್’ ಆಗಬೇಕೆಂಬ ಚಿಂತನೆ ಮೊದಲಾಯಿತು.

ಬದಲಾವಣೆ ಎನ್ನುವುದು ಸಂಗೀತ ಪರಂಪರೆಯ ಭಾಗವೇ ಆಗಿತ್ತು. ಭಾವಗೀತೆಗಳು, ದೇವರನಾಮ, ವಚನಗಳು, ಸಂತವಾಣಿ, ಮುಂತಾದವನ್ನು ಕಲಾವಿದರು ತಮ್ಮ ಕಲ್ಪನೆಗನುಗುಣವಾಗಿ ಹಾಡುತ್ತಿದ್ದರು. ಸ್ವರ, ಸಾಹಿತ್ಯ ಮತ್ತು ರಾಗ-ತಾಳಗಳ ನಿರ್ದೇಶನ ಇರುವ ವಾಗ್ಗೇಯ ರಚನೆಗಳನ್ನು ಆದಷ್ಟೂ ಬದಲಿಸದೆ ಹಾಡುತ್ತಿದ್ದರು. ಆದರೆ ಅಲ್ಲಿಯೂ ಬದಲಾವಣೆಗಳಾಗುತ್ತಲೇ ಇವೆ. ತ್ಯಾಗರಾಜರ ಕೃತಿಗಳನ್ನು ಅವರ ಶಿಷ್ಯರು ಹಾಡುವ ಕ್ರಮದಲ್ಲಿ ವ್ಯತ್ಯಾಸಗಳಿವೆ. ಕಾಲಕ್ರಮೇಣ ಹೊಸ ಸಂಗತಿಗಳು ಸೇರ್ಪಡೆಯಾಗಿವೆ. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಹಲವು ಶಾಸ್ತ್ರೀಯ ಸಂಗೀತಗಾರರೇ ಭಿನ್ನವಾಗಿ ಹಾಡಿದ್ದಾರೆ. ಕೃತಿಯ ರಾಗವೇ ಬದಲಾಗಿದೆ. ಕಾಲದಿಂದ ಕಾಲಕ್ಕೆ ರಾಗಗಳ ಸ್ವರೂಪ ಬದಲಾವಣೆಯಾಗಿದೆ. ಅಣ್ಣಮಾಚಾರ್ಯರ ಕೃತಿಗಳಿಗೆ ರಾಗ ನಿರ್ದೇಶನವಿದ್ದರೂ ಎಂ.ಎಸ್. ಸುಬ್ಬುಲಕ್ಷ್ಮೀ, ನೇದನೂರಿ ಕೃಷ್ಣಮೂರ್ತಿಯಂಥ ಖ್ಯಾತ ಗಾಯಕರು ಬೇರೆಯೇ ರಾಗದಲ್ಲಿ ಹಾಡಿದ್ದಾರೆ. ಬದಲಾವಣೆ ಕ್ರಾಂತಿಕಾರಕವಾದಾಗ ಮಾತ್ರ ವಿರೋಧ ವ್ಯಕ್ತವಾಗಿದೆ. ಇಳೆಯರಾಜ ಅವರು ‘ಸಿಂಧುಭೈರವಿ’ ಎಂಬ ಚಲನಚಿತ್ರದಲ್ಲಿ ತ್ಯಾಗರಾಜರ ಕಾಂಬೋಧಿ ರಾಗದ ‘ಮರಿ ಮರಿ ನಿನ್ನೇ’ ಎನ್ನುವ ಕೃತಿಯ ರಾಗವನ್ನೇ ಬದಲಿಸಿ ಸಾರಮತಿ ರಾಗದಲ್ಲಿ ಹಾಡಿಸಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತು.

ಸಂಗೀತ ಮತ್ತು ಧರ್ಮದ ಸಂಬಂಧವೂ ನಿರಂತರ ಬದಲಾಗುತ್ತಲೇ ಇದೆ. ಆಯಾ ಕಾಲಘಟ್ಟದ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿ, ಪ್ರಭುತ್ವದ ಧೋರಣೆಗಳು ಇದನ್ನು ಗಾಢವಾಗಿ ಪ್ರಭಾವಿಸಿವೆ. ಕರ್ನಾಟಕದ ಸೂಫಿ ಗಾಯನ ಪರಂಪರೆ, ಮೊಹರಂ ಹಾಡುಗಳ ಗಾಯನ, 19ನೇ ಶತಮಾನದಲ್ಲಿ ಕ್ರೈಸ್ತರು ಮತ್ತು ಕರ್ನಾಟಕ ಸಂಗೀತಗಾರರಿಗೂ ಇದ್ದ ಆತ್ಮೀಯ ಸಂಬಂಧಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಎ.ಎಂ. ಚಿನ್ನಸ್ವಾಮಿ ಮುದಲಿಯಾರರು ಕ್ರೈಸ್ತರಾಗಿದ್ದರೂ ರೂತ್ ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ನೇರ ಶಿಷ್ಯರು ಅವರಿಗೆ ಸಂಗೀತ ಕಲಿಸಿದರು.

ಖ್ಯಾತ ಸಂಗೀತ ಶಾಸ್ತ್ರಜ್ಞ ಪಿ. ಸಾಂಬಮೂರ್ತಿ ಸಮ್ಮರ್ ಸ್ಕೂಲ್‌ನಲ್ಲಿ ಕ್ರೈಸ್ತರಿಗೆ ಸಂಗೀತ ಕಲಿಸುತ್ತಿದ್ದರು. ಮುಸಲ್ಮಾನರಾದ ಶೇಕ್‌ ಚಿನ್ನಾ ಮೌಲಾನ ಸಾಹೇಬರು ತಿರುಪತಿಯ ದೇವಾಲಯದಲ್ಲಿ ನಾಗಸ್ವರ ನುಡಿಸುತ್ತಿದ್ದರು. ಇತ್ತೀಚಿನ ತನಕ ಯಾರಿಗೂ ಅದು ಅಸಹಜ, ಧರ್ಮ ವಿರೋಧಿ ಅನ್ನಿಸಿರಲಿಲ್ಲ. ಆದರೆ ಕಳೆದ ದಶಕದಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದ ಕ್ರಿಸ್ತಗೀತೆಗಳ ಕಛೇರಿ ಮಾಡುತ್ತಾನೆ ಎನ್ನುವುದು, ಖ್ಯಾತ ಗಾಯಕಿಯರಾದ ಅರುಣಾ ಸಾಯಿರಾಂ, ನಿತ್ಯಶ್ರೀ ಮಹಾದೇವನ್, ಒ.ಎಸ್‌. ಅರುಣ್‌ ಚರ್ಚಿನಲ್ಲಿ ಹಾಡಿದರು ಎನ್ನುವುದು ವಿವಾದಕ್ಕೀಡಾಯಿತು.

ಒಂದು ಕವನ ಅಥವಾ ಕೃತಿ ರಚನೆಯಾದ ಕಾಲಘಟ್ಟದಲ್ಲಿ ವಿವಾದಾತ್ಮಕ ಆಗದಿರಬಹುದು. ಆದರೆ ಬದಲಾದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪರಿಸರದಲ್ಲಿ ವಿವಾದಕ್ಕೊಳಗಾಗಬಹುದು. 18ನೇ ಶತಮಾನದಲ್ಲಿ ದೇವದಾಸಿ ಮುದ್ದುಪಳನಿ ರಚಿಸಿದ ಶೃಂಗಾರ ಕಾವ್ಯ ‘ರಾಧಿಕಾ ಸಾಂತ್ವನಮು’ ಅಶ್ಲೀಲ ಎನಿಸಿಕೊಳ್ಳಲಿಲ್ಲ. ಆದರೆ 20ನೇ ಶತಮಾನದಲ್ಲಿ ಬೆಂಗಳೂರು ನಾಗರತ್ನಮ್ಮ ಅದನ್ನು ಮತ್ತೆ ಪ್ರಕಟಿಸಿದಾಗ ಅಶ್ಲೀಲ ಕೃತಿಯೆಂದು ಅದನ್ನು ನಿಷೇಧಿಸಲಾಯಿತು. 1924ರಲ್ಲಿ ರಚನೆಯಾದ ಜಯಭಾರತ ಜನನಿಯ ತನುಜಾತೆಯಲ್ಲಿ ಮಧ್ವ, ಬಸವಣ್ಣ, ಕುಮಾರವ್ಯಾಸರ ಹೆಸರುಗಳಿಲ್ಲದ ವಿವಾದ ಮತ್ತು ನಂತರದ ಸೇರ್ಪಡೆಯನ್ನೂ ಇಂತಹ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.

ನಾಡಗೀತೆ, ರಾಷ್ಟ್ರಗೀತೆಗಳು ನಿರ್ದಿಷ್ಟವೂ ಏಕರೂಪವೂ ಆಗಿರಬೇಕೆಂಬ ಗ್ರಹಿಕೆ ಇರುವ ಈ ಕಾಲಘಟ್ಟದಲ್ಲಿ ಸಂಗೀತ ಮತ್ತು ಕಲಾವಿದರ ಕಲ್ಪನಾ ಸ್ವಾತಂತ್ರ್ಯವನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಇಟ್ಟು ನೋಡಬೇಕಾಗುತ್ತದೆ. ಗೀತೆಗಳು ಸರಳವಾಗಿಯೂ ಇರಬೇಕಾಗುತ್ತದೆ ಎನ್ನುವುದನ್ನು ಖ್ಯಾತ ಸಂಗೀತಗಾರರೆಲ್ಲ ಗುರುತಿಸಿದ್ದಾರೆ.

ಎಚ್‌.ಆರ್. ಲೀಲಾವತಿಯವರು ಹೇಳುವಂತೆ, ‘ಈ ಗೀತೆಗೆ ನನ್ನದೂ ಸೇರಿದಂತೆ ನಾಲ್ಕು ಜನರ ಸಂಗೀತ ಸಂಯೋಜನೆಯಿದೆ. ಆದರೆ ಎಲ್ಲ ಸಮಿತಿಗಳೂ ಅನಂತಸ್ವಾಮಿಯವರ ಸಂಯೋಜನೆಯನ್ನೇ ಶಿಫಾರಸು ಮಾಡಿದವು. ನೂರಾರು ಮಂದಿ ಒಟ್ಟಿಗೆ ಹಾಡಲು ಅನುವಾಗುವಂತೆ ಅವರ ಸಂಯೋಜನೆ ಸರಳವಾಗಿ, ಸುಲಲಿತವಾಗಿತ್ತು. ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕೆನ್ನುವುದು ಕಲಾವಿದನ ಸ್ವಾತಂತ್ರ್ಯ ಹರಣವಾದರೆ, ಕವಿಯ ಸಾವಿನ ನಂತರ ಕಾವ್ಯದ ಸಾಲುಗಳನ್ನೇ ಬದಲಿಸುವುದು ಕವಿಯ ಸ್ವಾತಂತ್ರ್ಯದ ಹರಣವಲ್ಲವೇ? ನಾಡಿನ ದೃಷ್ಟಿಯಿಂದ ನೋಡುವಾಗ ನನ್ನ ಇಷ್ಟ ಮುಖ್ಯವಾಗುವುದಿಲ್ಲ, ರಾಜ್ಯದ ಮರ್ಯಾದೆಯ ಪ್ರಶ್ನೆ ಮುಖ್ಯವಾಗುತ್ತದೆ.’ 

‘ನಾಡಗೀತೆ ಬೇಕೇ ಬೇಕು ಎಂದರೆ ಒಂದು ನಿರ್ದಿಷ್ಟ ಮಾದರಿಗೆ ಅಂಟಿಕೊಳ್ಳಲೇಬೇಕಾಗುತ್ತದೆ. ಇದೊಂದು ವಾಸ್ತವಿಕ ಸಮಸ್ಯೆ. ಜನಗಣಮನವನ್ನು ‘ಸ್ಟಾಂಡರ್ಡೈಸ್‌’ ಮಾಡಲು 1960ರ ತನಕ ಭಾರತ ಸರ್ಕಾರವೂ ಸಾಕಷ್ಟು ಹೆಣಗಾಡಿದೆ’ ಎಂದು ಹೇಳುತ್ತಲೇ ಗಾಯಕ ಟಿ.ಎಂ. ಕೃಷ್ಣ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಾರೆ. ‘ಭಾರತದಂತಹ ವೈವಿಧ್ಯಮಯ ಸಂಸ್ಕೃತಿಗಳಿರುವ ದೇಶದ ಸಂಗೀತದಲ್ಲಿ, ಸಂಯೋಜನೆಯಲ್ಲಿ ವೈವಿಧ್ಯವಿರುವುದು ತುಂಬಾ ಮುಖ್ಯ. ಗೀತೆಯೊಂದನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿದರೆ ಬಾಧಕವೇನು? ಅರ್ಥ ಮತ್ತು ಅದರ ಉದ್ದೇಶ ಬದಲಾಗಬಾರದು. ಸಂಸ್ಕೃತಿಗೆ ಸಂಬಂಧಿಸಿದಂತೆ ಏನನ್ನಾದರೂ ಸ್ಟಾಂಡರ್ಡೈಜ್ ಮಾಡಬೇಕೆಂಬುದು ಒಂದು ರೀತಿಯಲ್ಲಿ ಮಿಲಿಟರಿ ಮನೋಭಾವ. ಒಂದು ಹಾಡನ್ನು ಎಲ್ಲರೂ ಒಕ್ಕೊರಲಿನಲ್ಲಿ ಹಾಡಿದ ಮಾತ್ರಕ್ಕೆ ಅದು ಅವರ ಮನಸ್ಸಿನಲ್ಲಿ ಏಕತೆಯನ್ನು ಹುಟ್ಟುಹಾಕುತ್ತದೆಯೇ? ಅದು ಕೇವಲ ಏಕರೂಪಗೊಳಿಸುತ್ತದೆ. ಏಕರೂಪತೆಯನ್ನೇ ಏಕತೆ ಎಂದು ತಪ್ಪಾಗಿ ಗ್ರಹಿಸಬಾರದು.’

‘ನಾಡಗೀತೆಗೆ ಸಂಬಂಧಿಸಿದಂತೆ ನಾನು ಒಬ್ಬ ಕಲಾವಿದೆಗಿಂತ ಹೆಚ್ಚಾಗಿ ನಾಡಪ್ರಜೆಯಾಗಿ ಯೋಚಿಸುತ್ತೇನೆ,’ ಎನ್ನುತ್ತಾರೆ ಖ್ಯಾತ ಕರ್ನಾಟಕ ಸಂಗೀತ ಕಲಾವಿದೆ, ಸಂಗೀತಶಾಸ್ತ್ರಜ್ಞೆ ಡಾ. ಟಿ.ಎಸ್. ಸತ್ಯವತಿ. ‘ನಾಡಿನ ಏಕತೆಯನ್ನು ಬಿಂಬಿಸುವ ಗೀತೆಗೆ ವ್ಯಾಪಕತೆ ಮತ್ತು ಸ್ವೀಕೃತಿ ಬೇಕಾಗುತ್ತದೆ. ಅದರ ಸ್ವರಮಟ್ಟು ಸ್ಥಿರವಾಗಿ, ಏಕರೂಪವಾಗಿರಬೇಕು. ಇಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಪ್ರಭುಸಂಹಿತೆ ಮುಖ್ಯವಾಗುತ್ತದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಮಿತಿಗೊಳಿಸಿಕೊಳ್ಳಬೇಕಾಗುತ್ತದೆ. ವಿವಾದ ವಿಕೋಪಕ್ಕೆ ಹೋಗುತ್ತದೆ ಎಂದಾದಲ್ಲಿ, ನಾಡಗೀತೆಗೆಂದೇ ಹೊಸ ರಚನೆ ಮಾಡಿಸಿ, ಸ್ವರ ಸಂಯೋಜಿಸಿ, ಅದನ್ನು ಜಾರಿಗೆ ತರಬೇಕಾಗುತ್ತದೆ. ಆಗಲೂ ಯಾರೂ ವಿವಾದವನ್ನು ಹುಟ್ಟುಹಾಕುವುದಿಲ್ಲ ಅಂತೇನಿಲ್ಲವಲ್ಲ?’ ಎಂದು ಪ್ರಶ್ನೆ ಮುಂದಿಡುತ್ತಾರೆ.

ಸಂಗೀತ ಮತ್ತು ಸಮಾಜದ ಸಂಬಂಧದಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ಲಿಂಗ, ಧರ್ಮ, ಜಾತಿ, ಭಾಷೆ ಮುಂತಾದ ಪ್ರಮುಖ ಚರ್ಚೆಗಳೆಲ್ಲವೂ ಅಂತರ್ಗತವಾಗಿವೆ. ಬಹುಶಃ ಅದರಿಂದ ಹೊರತುಪಡಿಸಿ ಈ ವಿಚಾರವನ್ನು ನೋಡುವುದೇ ಸಾಧ್ಯವಿಲ್ಲವೆನಿಸುತ್ತದೆ. 

ಎಚ್‌.ಆರ್. ಲೀಲಾವತಿ
ಎಚ್‌.ಆರ್. ಲೀಲಾವತಿ
ಟಿ.ಎಂ. ಕೃಷ್ಣ
ಟಿ.ಎಂ. ಕೃಷ್ಣ
ಸಾಂದರ್ಭಿಕ 
ಸಾಂದರ್ಭಿಕ 
ಟಿ.ಎಸ್. ಸತ್ಯವತಿ
ಟಿ.ಎಸ್. ಸತ್ಯವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT