ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ನೆಲದ ದುಡಿತಕ್ಕೆ ನುಡಿಯಾದವರು  

Published 2 ಮಾರ್ಚ್ 2024, 23:31 IST
Last Updated 2 ಮಾರ್ಚ್ 2024, 23:31 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ತಲ್ಲಣಗಳಿಗೆ ಪೂರ್ಣ ತೆರೆದುಕೊಂಡು, ಅವು ಒತ್ತಾಯಿಸುವ ಭಿನ್ನ ಅಭಿವ್ಯಕ್ತಿಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡವರಲ್ಲಿ ವಿಷ್ಣು ನಾಯ್ಕರು ಪ್ರಮುಖರು. ಅವರ ಬಹುಮುಖಿ ಪ್ರತಿಭೆಗೆ ನೆಲೆಯಾಗಿ ದಿನಕರ ದೇಸಾಯಿಯವರ ಕಾವ್ಯ ಮತ್ತು ಹೋರಾಟ, ಗೌರೀಶ್ ಕಾಯ್ಕಿಣಿಯವರ ವೈಚಾರಿಕ ಓದು, ಯಶವಂತ ಚಿತ್ತಾಲರ ಕಥನ ಪ್ರಭೆ ಮತ್ತು ಪಿಕಳೆಯವರ ಮಾಸ್ತರಿಕೆಯನ್ನು ಹೆಣೆದ ಪರಂಪರೆ ಒದಗಿತು. ತಾನು ಜನಿಸಿದ ಜಾಗದಲ್ಲಿ ತನ್ನ ದೈವವನ್ನು ಜಾಗ್ರತಗೊಳಿಸಿಕೊಳ್ಳುವಲ್ಲಿ ಸಫಲರಾದರು. ಬಡತನ, ಅವಮಾನ, ಅಸಮಾನತೆ, ಪ್ರತಿಭಟನೆ ಮತ್ತು ಮಾನವೀಯ ಅನುಭವದ ಹಾಲಕ್ಕಿ ಒಕ್ಕಲಿಗರ ಸಮುದಾಯದ ಸಂಯುಕ್ತ ಪ್ರಜ್ಞೆಯ ಭಾಗವಾಗಿ ಸಾಹಿತ್ಯ ಬೇಸಾಯಕ್ಕೆ ಅಂಬಾರಕೊಡ್ಲನ್ನು ಫಲವತ್ತಾದ ಪರಿಸರವನ್ನಾಗಿ ರೂಪಿಸಿದರು. ಶಿಕ್ಷಕ, ಎಲ್ಲ ಪ್ರಕಾರಗಳ ಲೇಖಕ, ಪ್ರಕಾಶಕ, ರಂಗಭೂಮಿಯ ನಟ, ಪತ್ರಕರ್ತ, ಹೋರಾಟಗಾರ, ಸಂಘಟಕಾರ, ಸಂಘ-ಸಂಸ್ಥೆಗಳ ರೂವಾರಿ–ಹೀಗೆ ತನಗೆ ಸಾಧ್ಯವಾದ ಪಾತ್ರಗಳನ್ನು ಬದ್ಧತೆಯಿಂದ ಸಮರ್ಥವಾಗಿ ಅವರು ನಿರ್ವಹಿಸಿದರು.

ಗೌರೀಶ್‌ರಿಗೆ ಗೋಕರ್ಣ, ಎಕ್ಕುಂಡಿಯವರಿಗೆ ಬಂಕಿಕೊಡ್ಲು, ಚಿತ್ತಾಲರಿಗೆ ಹನೇಹಳ್ಳಿ ಹೇಗೆ ವಿಶ್ವವನ್ನು ನೋಡಲು ತೆರೆದಿದ್ದ ‘ನೂರೆಂಟು ಕಿಟಕಿಗಳು’ ಆಗಿದ್ದವೊ ಅವುಗಳನ್ನೇ ವಿಷ್ಣು ನಾಯ್ಕರು ಅಂಕೋಲೆಯ ಅಂಬಾರಕೊಡ್ಲಿನ ತನ್ನ ಪರಿಮಳದ ಅಂಗಳದಲ್ಲಿ ತೆರೆದಿಟ್ಟರು. ರಾಜ್ಯದ ಭಿನ್ನ ಪ್ರದೇಶಗಳಿಂದ ಹಿರಿ-ಕಿರಿಯ ಲೇಖಕರನ್ನು ಆಹ್ವಾನಿಸಿ ಕಥೆ-ಕಾವ್ಯ ಕಮ್ಮಟ, ವಿಚಾರ ಗೋಷ್ಠಿ, ಸಂವಾದ, ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆಯ ಪ್ರಯೋಗ ಶಾಲೆಯನ್ನಾಗಿಸಿದರು. ಅವರ ಮನೆಯಂಗಳದ ಟಂಕಶಾಲೆಯನ್ನು ಪ್ರವೇಶಿಸಿದ ಎಳೆಯರಲ್ಲಿ ಸಾಹಿತ್ಯದ ಅಂತರ್ಜಲವನ್ನು ಕಾಣಿಸಿ, ಬರೆಯಿಸಿ, ಪ್ರಕಟಿಸಿ ಪ್ರೋತ್ಸಾಹಿಸಿದ್ದನ್ನು ಹೊಸತಲೆಮಾರಿನ ಲೇಖಕರು ಮರೆಯಲು ಸಾಧ್ಯವಿಲ್ಲ.

ಹಸಿವು-ನೋವು ಇಂಗಿದ ನೆಲದ ನಿಜಕ್ಕೆ ನುಡಿರೂಪ ಕೊಟ್ಟ ವಿಷ್ಣು ನಾಯ್ಕರು ಹಾಲುಣಿಸಿದ ಹಾಲಕ್ಕಿ ಸಮುದಾಯಕ್ಕೆ ಋಣಿಯಾಗಿದ್ದಾರೆ. ಬಾಲ್ಯದಲ್ಲಿ ಬಡತನವಿತ್ತು; ಉಳ್ಳವರ ಮನೆಯ ಪಾಯಸದ ವಾಸನೆಗೆ ಮಾತ್ರ ತೃಪ್ತನಾಗಬೇಕಿತ್ತು. ಮೊಲೆಹಾಲು ಕುಡಿಯುವ ಕೂಸನ್ನು ಬಿಡಾರದಲ್ಲೇ ಬಿಟ್ಟು ಅವರ ಹೆತ್ತವ್ವ ಕೂಲಿಗೆ ಹೋಗಬೇಕಿತ್ತು. ಹಸಿದಿರುತ್ತಿದ್ದ ಕೂಸು ವಿಷ್ಣುಗೆ ಹಾಲಕ್ಕಿ ಸಣ್ಣು ಎದೆಯುಣಿಸುತ್ತಿದ್ದಳು. ‘ಒಕ್ಕಲ್ತಿ ಮೊಲೆ ಕುಡಿದ ಮಾಸ್ತರು ಈ ತಮ್ಮಾ’ ಎಂದು ಸಣ್ಣು ಜಾತ್ರೆಯಲ್ಲಿ ಸಿಕ್ಕಿದವರಿಗೆಲ್ಲ ಪರಿಚಯಿಸುತ್ತಿದ್ದಾಗ ಅಭಿಮಾನ ಉಕ್ಕುತ್ತಿತ್ತಂತೆ. ಆತ್ಮಕಥನದ ಧಾಟಿಯಲ್ಲಿರುವ ಅವರ ‘ಅವ್ವ ಮತ್ತು ನಾನು’ ಪದ್ಯದಲ್ಲಿ ತಾಯಿ ಸಂಗ್ರಹಿಸಿಟ್ಟ ಪುಡಿಗಾಸು ಕರಡಿಗೆಯಿಂದ ಬಾಲಕ ವಿಷ್ಣು ನಾಣ್ಯ ಕದ್ದು ಸಿಕ್ಕಿ ಬೀಳುವ ಪ್ರಸಂಗವಿದೆ. ‘ಯಾಕ್ಮಗನೇ ಖರೆ ಹೇಳು/ಹೀಗ್ಮಾಡ್ದೆ?’ ಎಂಬ ಪ್ರಶ್ನೆಗೆ ‘ಹೊಟ್ತುಂಬಿ ಯಾವೊತ್ತು ಬಡಿಸಿದ್ದೆ/ಹೇಳವ್ವ?’ ಎಂಬ ಮರು ಪ್ರಶ್ನೆಗೆ ಇಡೀ ಸಮಾಜವೇ ಉತ್ತರಿಸಬೇಕಾಗಿದೆ.

ವಿಷ್ಣು ನಾಯ್ಕರ ಸಾಹಿತ್ಯದ ಹಲವು ವಿವರಗಳು ಆತ್ಮಚರಿತ್ರೆಯಿಂದ ಆಯ್ದುಕೊಂಡದ್ದು. ‘ಒನಕೆ ಹಾಕುವ ಕೆಲಸ, ರಾಗಿ ಬೀಸುವ ಕೆಲಸ/ ಕಪಡ ಸಳಿಯುವ ಕೆಲಸ/ ಮಾಡುತ್ತಿದ್ದೆ./ಹೂಕೊಯ್ದು ಹಾಕಿ ಜಡೆ, ಹುಲ್ಕೊಯ್ದು/ ಕಟ್ಟಿ ಹೊರೆ ಅಂಕೋಲೆ ಪೇಟೆಯಲಿ/ ಮಾರುತ್ತಿದ್ದೆ’ ಇವು ಕವಿಯ ವೈಯಕ್ತಿಕ ಅನುಭವ ಮಾತ್ರವಾಗಿರದೆ ಸಮುದಾಯದ ಸಂಕಟದ ಸಾರ್ವತ್ರಿಕ ನಿರೂಪಣೆಯೂ ಆಗುತ್ತದೆ. ಗುಮಟೆ ಪಾಂಗು, ಸುಗ್ಗಿಯ ಕೋಲಾಟ, ಹಾಡು, ಅವರ ಆಡುಮಾತಿನ ಲಯ, ಗೇಯತೆ, ಹಬ್ಬದೊಂದಿಗೆ ಹಾಲಕ್ಕಿ ಸಮುದಾಯದೊಂದಿಗೆ ಬೆರೆತು, ಅದಮ್ಯ ಪ್ರೀತಿ ಮತ್ತು ನಂಬಿಕೆಯಿಂದ ಒಡನಾಡುತ್ತ ರೈತ ಚಳವಳಿಗೆ ಸಿದ್ಧಗೊಳಿಸುವ ನೆಲೆಯಲ್ಲೇ ಅವರ ಜನಪರ ನಿಲುವಿನ ಪ್ರಗತಿಪರ ಕಾವ್ಯದ ಸತ್ವವಿದೆ. ಕಾವ್ಯ ಚಳವಳಿಯನ್ನು ಕೂಡಿ ಚಲಿಸಿದಾಗ ಸಿದ್ಧಗೊಳ್ಳುವ ರಾಜಕೀಯ ಹೋರಾಟಕ್ಕೆ ಇದೊಂದು ಮಾದರಿ.

‘ಜಂಗುಂ ಜಕ್ಕುಂ’ಕಾದಂಬರಿಯಲ್ಲಿ ವಿಷ್ಣು ನಾಯ್ಕರು ತನ್ನ ಸಾಹಿತ್ಯಕ್ಕೆ ಅನುಭವದ ಅನುದಾನ ಪಡೆದ ಹಾಲಕ್ಕಿ ಒಕ್ಕಲಿಗರ ಸಾಂಸ್ಕೃತಿಕ ಒಕ್ಕೂಟ ಪ್ರಜ್ಞೆಯ ರೂಪಕವಾದ ‘ಬಾಳಮರ’ ನಿರೂಪಣೆಯ ಮೂಲಕ ಬುಡಕಟ್ಟು ಸಮುದಾಯವೊಂದರ ಜಾನಪದ ಅಸ್ಮಿತೆಯನ್ನೂ ಹಾಲಕ್ಕಿ ಸ್ತ್ರೀಯರು ಕರಿಮಣಿ ಸರದಿಂದ ಮುಚ್ಚುತ್ತಿದ್ದ ಎದೆಗೆ ಕುಪ್ಪಸ ತೊಟ್ಟು ಗುಲಾಮಗಿರಿಯ ಸಂಕೇತವನ್ನು ಕಳಚಿಕೊಳ್ಳುವ ಆಧುನಿಕತೆಯನ್ನೂ ಹಾಲಕ್ಕಿಯರು ಬಳಸುವ ಪ್ರಾದೇಶಿಕ ಜೀವಂತಿಕೆಯ ಉಪಭಾಷೆಯನ್ನೂ ದಾಖಲಿಸುತ್ತಾರೆ.

ಜಿಲ್ಲೆಯ ಚಾರಿತ್ರಿಕ ದಾಖಲೆಗಳಾಗಿ ವಿಷ್ಣು ನಾಯ್ಕರ ‘ಹಾಲಕ್ಕಿಗಳು: ಒಂದು ಅಧ್ಯಯನ’, ‘ಅರೆಖಾಸಗಿ’ ಮತ್ತು ‘ದುಡಿಯುವ ಕೈಗಳ ಹೋರಾಟದ ಕತೆ’ ಮಹತ್ವದ ಕೃತಿಗಳಾಗಿವೆ. ಅಲಕ್ಷಿತ ಬುಡಕಟ್ಟು ಸಮುದಾಯವಾದ ಹಾಲಕ್ಕಿಗಳ ಜೀವನ ವಿಧಾನವನ್ನು ಶ್ರಮ ಸಂಸ್ಕೃತಿ ಮತ್ತು ಯಜಮಾನ ಸಂಸ್ಕೃತಿಯ ಸಂಘರ್ಷದಲ್ಲಿ ಮಥಿಸಿ ಬಂದ ಜೀವಪೋಷಕ ಜಾನಪದೀಯ ಅನುಭವದ ಕಥನ ನಿರೂಪಣೆ ಇಲ್ಲಿದೆ. ಪ್ರಕೃತಿಯ ಸಹಜ ಲಯದೊಳಗೆ ಮಿಳಿತ, ಕೃಷಿಯ ಮೂಲಕ ಮಣ್ಣಿನ ಭಾಷೆಯನ್ನು ಮರೆಯದ, ನಿರಂತರ ಹೋರಾಟದ ನೈತಿಕ ಎಚ್ಚರದಲ್ಲಿ ದುಡಿವ ಭೂರಹಿತ ಸಮುದಾಯದ ಸಾಂಸ್ಕೃತಿಕ ಒಳನೋಟಗಳ ಅರಿವಿಲ್ಲದೆ ಓದುವ ಇತಿಹಾಸ ಅಪೂರ್ಣ ಎಂಬ ವಾಸ್ತವವನ್ನು ಕಳಕಳಿಯಿಂದ ಈ ಅಧ್ಯಯನ ನಿವೇದಿಸುತ್ತದೆ.

ಅಂಕಣ ಬರಹ ‘ಅರೆಖಾಸಗಿ’ ಜಿಲ್ಲೆಯ ಜೀವಸ್ಪಂದನಕ್ಕೆ ಸಾಕ್ಷಿಯಾಗಿದೆ. ಮುಗ್ಧ ಅಂತಃಕಣದಿಂದ ಆಪ್ತರಾಗುವ ಸುಕ್ರು, ಬಡಗೇರಿ ಬೀರ, ಜೈನುದ್ದೀನ, ಓಮಜ್ಜ, ನಾಗಪ್ಪಯ್ಯ, ಸಣ್ಣು ಮುಂತಾದ ಅಪ್ಪಟ ಮನುಷ್ಯರ ಮಾನವೀಯ ಸಂಬಂಧವನ್ನು ಲೇಖಕರು ನೆನಪಿನಲ್ಲಿ ನೇಯ್ದು ಕೊಡುತ್ತಾರೆ. ಇವರೆಂತಹ ಪ್ರಕೃತಿ ಪುರುಷರೆಂದರೆ ‘ಬತ್ತದ ಭೂಮಿ’ಯ ಅಂತರ್ಜಲ ಹುಡುಕುತ್ತ ಹೊರಟ ಜೀವಬೇರುಗಳು; ಅಪ್ಪ ನೆಟ್ಟ ತೆಂಗಿನಿಂದ, ಒಣ ಅಟ್ಲಕಾಯಿ ಮತ್ತು ಕತ್ಸುಂಬಿನಿಂದ ಮೈಯುಜ್ಜಿ ಅವ್ವ ಮಾಡಿದ ತಣ್ಣೀರಿನ ಯುಗಾದಿ ಸ್ನಾನದಿಂದ, ಚಂದ್ರಶಾಲೆಯಲ್ಲಿ ಕನಸೊಡೆದು ಬಂದವಳಿಂದ, ಬಾವಿಯ ನೀರಲ್ಲಿ ಮುಖ ನೋಡಿಕೊಳ್ಳಲು ಬಂದ ಚಂದ್ರನಿಂದ, ‘ಅಂಕೋಲ’ ಎಂಬ ವೃಕ್ಷದ ಹೆಸರಿನ ಊರಿನಿಂದ ಭಾರತದ ಇತಿಹಾಸ ಬರೆದವರು. ಈ ಅಪೂರ್ವ ಚಿತ್ರಕೂಟ ಪ್ರಪಂಚದಲ್ಲಿ ಬದುಕುತ್ತಿರುವವರ ಭಾಷೆ ಮತ್ತು ವೇಷಗಳನ್ನು ವಿಷಯದಿಂದ ಬೇರ್ಪಡಿಸಲಾರದಷ್ಟು ಹಾಸುಹೊಕ್ಕಾಗಿದೆ. ಭಾವ-ಭೂಗೋಲಗಳ ಅಪರೂಪದ ಸಂಯೋಗ ಲೇಖಕರ ಕಲಾಪರಿಣಿತಿಗೆ ಉದಾಹರಣೆಯಾಗಿದೆ.

ಭೂ ಹೋರಾಟಗಳ ಚಾರಿತ್ರಿಕ ದಾಖಲೆಯಾಗಿ ‘ದುಡಿಯುವ ಕೈಗಳ ಹೋರಾಟದ ಕತೆ’ ಮಹತ್ವದ ಕೃತಿಯಾಗಿದೆ. ಸಮಾಜವಾದಿ ಹೆಜ್ಜೆ ಹಾಕುತ್ತ ದಿನಕರ ದೇಸಾಯಿಯವರ ಹಾದಿಯಲ್ಲಿ ನಾಯ್ಕರು ನಡೆದರು. ಕೃಷಿ ಕಸುಬಿನ ಕೌಶಲ್ಯವಿದ್ದೂ ಭೂಮಿಯನ್ನು ಕಳೆದುಕೊಂಡ ಹಾಲಕ್ಕಿ ಸಮುದಾಯ ಅನ್ಯಾಯ, ಶೋಷಣೆಗೆ ಒಳಗಾಗಿದ್ದ ಸತ್ಯವನ್ನು ಚರಿತ್ರೆಯ ಅಂತರ್‌ರಚನೆಯಲ್ಲಿ ಅಡಗಿರುವುದನ್ನು ತಾರ್ಕಿಕವಾಗಿ ವಿಶ್ಲೇಷಿಸುವುದರ ಮೂಲಕ ಶೋಧಿಸುತ್ತಾರೆ. ಈ ಹೋರಾಟ ಭೂಮಾಲಿಕರ, ಬ್ರಿಟಿಷರ, ರಾಷ್ಟ್ರೀಯ ಯೋಜನೆಯನ್ನು ಹೇರುವ ಸರಕಾರದವರ ಮತ್ತು ಜಾಗತೀಕರಣದ ಆಕ್ರಮಣದಾರರ ವಿರುದ್ಧ ತೋರಿದ ಪ್ರತಿಭಟನೆಗೆ ಮಾದರಿಯಾಗಿದೆ.

‘ನಿಚ್ಚಣಿಕೆಯ ಮೆಟ್ಟಿಲು ಮುಗಿದಿದೆ ಹೆಜ್ಜೆಗಳೇ, ಇಳಿಯುವ ಸರದಿ ಇನ್ನು ನಿಮಗೆ’ ಎನ್ನುತ್ತಲೆ ಅವರು ನಿರ್ಗಮಿಸಿದ್ದಾರೆ. ಅಂಕೋಲೆಯ ಸಂದಿ ಬೀದಿಗಳ ಬದಿಯ ಜಗಲಿ ಮಾಡಿನಡಿ ಹಣಕಿ ಹೊಲಿಯುವ ದರ್ಜಿಗಳ ಹೊಲಿಗೆ ಯಂತ್ರದ ಸದ್ದಿನಲ್ಲಿ, ನಸುಕಿನಲ್ಲೇ ಬೆವರುತ್ತ ನೀರಿಗೋಡುವ ಸವಾರರ ಸೈಕಲ್ ಚಕ್ರದ ದನಿಯಲ್ಲಿ ವಿಷ್ಣು ನಾಯ್ಕರು ಸದಾ ನೆನಪಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT