ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಸನ್ಸ್: ಕಲೆಯ ಬಲೆ, ಕಲಾವಿದರಿಗೂ ಬೆಲೆ!

ರಾಮಸನ್ಸ್ ಕಲಾ ಪ್ರತಿಷ್ಠಾನದ ಪ್ರವೇಶ ದ್ವಾರವನ್ನು ನಾವು ಪ್ರವೇಶಿಸಿದೊಡನೆ ಎರಡು ಬೃಹತ್‌ ಗಾತ್ರದ ಹಾಗೂ ಮಧ್ಯಮ ಗಾತ್ರದ ಬೀಟೆ ಮರದಲ್ಲಿ ಕೆತ್ತನೆ ಮಾಡಿದ ಆನೆಗಳು ಸ್ವಾಗತಿಸುತ್ತವೆ.
Published 9 ಜುಲೈ 2023, 1:17 IST
Last Updated 9 ಜುಲೈ 2023, 1:17 IST
ಅಕ್ಷರ ಗಾತ್ರ

–ಕಾರ್ತಿಕ್ ವಿ. ಕಾಳೆ

ರಾಮಸನ್ಸ್ ಕಲಾ ಪ್ರತಿಷ್ಠಾನದ ಪ್ರವೇಶ ದ್ವಾರವನ್ನು ನಾವು ಪ್ರವೇಶಿಸಿದೊಡನೆ ಎರಡು ಬೃಹತ್‌ ಗಾತ್ರದ ಹಾಗೂ ಮಧ್ಯಮ ಗಾತ್ರದ ಬೀಟೆ ಮರದಲ್ಲಿ ಕೆತ್ತನೆ ಮಾಡಿದ ಆನೆಗಳು ಸ್ವಾಗತಿಸುತ್ತವೆ. ಒಳಕ್ಕೆ ಹೋದಂತೆ ತರಹೇವಾರಿ ಬೊಂಬೆಗಳ ಸಂಗ್ರಹ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಯಾವುದೋ ಬೇರೆಯದೇ ಲೋಕದಲ್ಲಿರುವ ಭಾವ. ಇಲ್ಲಿ ಸಂಗ್ರಹಿಸಿದ ಮರ, ಕಂಚಿನ, ಕಲ್ಲಿನ ಪ್ರತಿಮೆಗಳು ಅಲ್ಲದೇ ಬೇರೆ ಬೇರೆ ಮಾಧ್ಯಮಗಳಲ್ಲಿ ತಯಾರಿಸಿದ ಕಲಾಕೃತಿಗಳು ಕಣ್ಣು ಕೀಲಿಸಿಕೊಳ್ಳುತ್ತವೆ. ಒಳಗೋಡೆಗಳು, ಹೊರಗೋಡೆಗಳ ಮೇಲೆ ಪಾರಂಪರಿಕ ಶೈಲಿಯ ಭಿತ್ತಿಚಿತ್ರಗಳ ಆಕರ್ಷಣೆ. ಒಬ್ಬ ಖಾಸಗಿ ಕಲಾಪ್ರೇಮಿ ಇಂಥ ಸಂಗ್ರಹವನ್ನು ಮಾಡಲು ಸಾಧ್ಯವೇ ಎಂದು ಸಹಜವಾಗಿಯೇ ಹುಬ್ಬೇರೀತು. ಆ ಕಲಾಪ್ರೇಮಿಯೇ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ. ಸಿಂಗ್.

ಆರ್.ಜಿ ಸಿಂಗ್ ಅವರೇ ಹೇಳುವಂತೆ ಇಲ್ಲಿ ಸಂಗ್ರಹಿಸಿದ ಎಲ್ಲ ಕರಕುಶಲ ಕಲಾಕೃತಿಗಳು ಕರ್ನಾಟಕದ ಜನಪದ ಕಲಾಕೃತಿಗಳು ಮಾತ್ರವಲ್ಲ, ಅಖಂಡ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಿಸಿದ ಜನಪದ ಶೈಲಿಯ ಕರಕುಶಲ ಕಲಾಕೃತಿಗಳು.

ಭಾರತದ ಸಾಂಸ್ಕೃತಿಕ ಪ್ರಭೆಯನ್ನೇ ರಾಮಸನ್ಸ್ ಕಲಾ ಪ್ರತಿಷ್ಠಾನದಲ್ಲಿ ಕಾಣಬಹುದಾಗಿದೆ. ಆರ್.ಜಿ. ಸಿಂಗ್ ಅವರಲ್ಲದೆ ಪ್ರತಿಷ್ಠಾನದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಘು ಧರ್ಮೇಂದ್ರ ಪ್ರೇಕ್ಷಕರಿಗೆ ಪ್ರತಿಯೊಂದು ಕಲಾಕೃತಿಯು ಎಲ್ಲಿ, ಯಾರಿಂದ ಮತ್ತು ಯಾವ ಮಾಧ್ಯಮದಲ್ಲಿ ತಯಾರಿಸಿದೆ ಎಂಬ ಪರಿಪೂರ್ಣ ಮಾಹಿತಿಯನ್ನು ನೀಡುತ್ತಾರೆ.

ರಾಮಸನ್ಸ್ ಕಲಾ ಪ್ರತಿಷ್ಠಾನವು ಕಲಾಕೃತಿಗಳ ಮಾರಾಟದ ಕೇಂದ್ರವಾಗಿದ್ದರೂ ಸಂಗ್ರಹಿತ ಕಲಾಕೃತಿಗಳೆಲ್ಲ ಮಾರಾಟವಾಗುತ್ತವೆ ಎಂಬ ಭರವಸೆ ಆರ್. ಜಿ. ಸಿಂಗ್ ಅವರಿಗಿಲ್ಲ. ಅವರು ಸಂಗ್ರಹಿಸಿದ ಕಲಾಕೃತಿಗಳಲ್ಲಿ ಮೈಸೂರು, ವಿಜಯನಗರ, ತಂಜಾವೂರು, ಮೊಗಲ್ ಶೈಲಿಯ ಕಲಾಕೃತಿಗಳನ್ನೂ ಕಾಣಬಹುದು.

ರಾಮಸನ್ಸ್ ಪ್ರತಿಷ್ಠಾನವು ಪ್ರತಿ ದಸರಾ ಹಬ್ಬದಲ್ಲಿ ಬೊಂಬೆಗಳನ್ನು ಪ್ರದರ್ಶಿಸುವ ಪರಿಪಾಠವನ್ನು ಉಳಿಸಿಕೊಂಡು ಬಂದಿದೆ. ಕಳೆದ ವರ್ಷ ಪ್ರದರ್ಶಿಸಿದ ಬೊಂಬೆಗಳನ್ನು ಈ ವರ್ಷ ಮತ್ತೆ ಪ್ರದರ್ಶಿಸುವುದಿಲ್ಲ.

ದಸರಾ ಹಬ್ಬದ ದಿನಗಳಲ್ಲದೇ ವರ್ಷದ ಬೇರೆ ದಿನಗಳಲ್ಲಿ ಬೇರೆ ಬೇರೆ ವಿಶಿಷ್ಟ ಪ್ರದರ್ಶನಗಳನ್ನು ಏರ್ಪಡಿಸುತ್ತದೆ.  ಇಂಥದೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿತ್ತು. ಅದೇ ‘ಹಸ್ತಿ ಮಂಗಲ’ ಎಂಬ ಕಾರ್ಯಕ್ರಮ. ಈ ಪ್ರದರ್ಶನದಲ್ಲಿ ವಿವಿಧ ಮಾದರಿಯ ಸಾವಿರಾರು ಆನೆಗಳ ಶಿಲ್ಪ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಈ ಎಲ್ಲ ಕರಕುಶಲ ವಸ್ತುಗಳೂ ಮಿನಿಯೇಚರ್ ಕೃತಿಗಳಾಗಿದ್ದವು.

ಆರ್.ಜಿ. ಸಿಂಗ್ ಅವರ ಅಚ್ಚುಕಟ್ಟುತನದ ಪಾರಮ್ಯವನ್ನು ನಾನು ಈ ಪ್ರದರ್ಶನದಲ್ಲಿ ಕಂಡುಕೊಂಡೆ.  ಒಪ್ಪೋರಣವಾಗಿ, ವಿವೇಚನೆಯಿಂದ ಯಾವ ಕಲಾಕೃತಿ ಎಲ್ಲಿರಬೇಕೋ ಹೇಗಿರಬೇಕೋ ಹಾಗೆಯೇ ಅವುಗಳ ಜೋಡಣೆಯಾಗಿರುವುದು ಸೌಂದರ್ಯಾಭಿವ್ಯಕ್ತಿಯೇ ಹೌದು.

ಹ್ಯಾಂಡಿಕ್ರಾಫ್ಟ್ಸ್‌ ಸೇಲ್ಸ್ ಎಂಪೋರಿಯಮ್ ಹೆಸರಿನಲ್ಲಿ ಮೈಸೂರಿನ ಮೈಸೂರು ಮೃಗಾಲಯದ ಎದುರು 1966ರಲ್ಲಿ ರಾಮ್‌ಸಿಂಗ್ ಅವರು ಒಂದು ಪುಟ್ಟ ಕರಕುಶಲಕಲಾ ಮಳಿಗೆಯನ್ನು ಹುಟ್ಟುಹಾಕಿದ್ದರು. ಇಂದು ಈ ಮಳಿಗೆಯು ‘ರಾಮ್‌ಸನ್ಸ್’ ಹೆಸರಿನಿಂದ ಹೆಮ್ಮರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಮಳಿಗೆಯ 25ನೆಯ ವರ್ಷದ ಸವಿ ನೆನಪಿಗಾಗಿ ರಾಮ್‌ ಸಿಂಗ್ ಅವರು ತಮ್ಮ ವಾವೆಯ ಅಣ್ಣ ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್ ಅವರ ಸಲಹೆಯಂತೆ ‘ರಾಮ್‌ಸನ್ಸ್ ಕಲಾ ಪ್ರತಿಷ್ಠಾನ’ ಎಂಬ, ನಾಡಿನ ಕಲೆಯ ಅಭಿವೃದ್ಧಿಗಾಗಿ ಸೇವಾಪರವಾದ ಸಂಸ್ಥೆಯನ್ನು ಹುಟ್ಟುಹಾಕಿದರು. ಇದಕ್ಕೆ ಕಾರಣೀಭೂತರಾದವರು ಆರ್.ಜಿ. ಸಿಂಗ್. ತಮ್ಮ ತಂದೆ ಹಾಗೂ ದೊಡ್ಡಪ್ಪನವರ ಕನಸಿನ ಈ ಸಂಸ್ಥೆಯನ್ನು ಆರ್.ಜಿ. ಅವರು ಬಹಳ ಸಮರ್ಪಕವಾಗಿ ನಡೆಸುತ್ತಿದ್ದಾರೆ.

ಮೈಸೂರಿನ ಅರಸರು ಆಡಳಿತ ಮಾತ್ರವಲ್ಲದೆ ಸಂಗೀತ, ಸಾಹಿತ್ಯ, ಜನಪದ ಕಲೆಗಳ ಪೋಷಣೆಯಲ್ಲಿ ಕೂಡ ಸಾರ್ವಭೌಮರಾಗಿದ್ದರು. ಅರಸರ ಕೃಪಾಶ್ರಯದಲ್ಲಿ ಕಲೆಗಳಿಗೆ ಸರ್ವತೋಮುಖ ಬೆಳವಣಿಗೆಯಾಯಿತಲ್ಲದೇ ಕಲಾವಿದರೂ ಬೆಳೆದರು.

ಆರ್.ಜಿ. ಸಿಂಗ್ ಅವರು ಕರ್ನಾಟಕದ ಅನೇಕ ಕಲಾವಿದರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.  ದೇಶದ ಮೂಲೆ ಮೂಲೆಗಳಲ್ಲಿ ತಿರುಗಾಡಿದ್ದಾರೆ. ಅವರಿಗೆ ಇಂತಹದೇ ರಾಜ್ಯದಲ್ಲಿ ಇಂತಹದೇ ಊರಿನಲ್ಲಿ ಇಂತಹದೇ ಶೈಲಿಯಲ್ಲಿ ಕಲಾಕೃತಿಗಳನ್ನು ತಯಾರಿಸುವ ಕಲಾವಿದರಿದ್ದಾರೆ ಎನ್ನುವ ಪಕ್ಕಾ ಜ್ಞಾನವಿದೆ. ಆಧುನಿಕ ಕಲಾವಿದರಿಂದಲೂ ಸಾವಿರಾರು ಚಿತ್ರಗಳನ್ನು ಮಾಡಿಸಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಹೆಸರಾಂತ ಚಿತ್ರಕಲಾವಿದರಾದ ಆದ ಜಿ.ಎಲ್.ಎನ್. ಸಿಂಹ, ಕೆ.ಎಸ್. ಶ್ರೀಹರಿ, ವಿಜಯ ಹಾಗರಗುಂಡಗಿ, ಕಮಲ್ ಅಹ್ಮದ್, ಕೆ.ವಿ. ಕಾಳೆ, ಮುಂತಾದ ಕಲಾವಿದರಿಂದ ವಿಷ್ಣುವಿನ ದಶಾವತಾರದ, ಅದರಲ್ಲೂ ಮುಖ್ಯವಾಗಿ, ನರಸಿಂಹ ಅವತಾರದ ಚಿತ್ರಗಳನ್ನು ಮಾಡಿಸಿದರು. ಬೆಲ್ಜಿಯಮ್ ದೇಶದಲ್ಲಿರುವ ಇಸ್ಕಾನಿನ ಅಂಗವಾದ ರಾಧಾದೇಶ್ ದೇವಾಲಯಕ್ಕೆ ಸೇರಿದ ‘ಮ್ಯೂಸಿಯಮ್ ಆಫ್ ಸೇಕ್ರೆಡ್‌ ಆರ್ಟ್ಸ್‌ ಸಂಗ್ರಹಾಲಯಕ್ಕಾಗಿ ವಿಶೇಷವಾಗಿ ಈ ಚಿತ್ರಗಳನ್ನು ಮಾಡಿಸಲಾಯಿತು. ಈ ಕಲಾವಿದರ ಜೊತೆಗೆ ಇನ್ನೂ ಹತ್ತಾರು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರ ನೂರಾರು ಚಿತ್ರಗಳನ್ನು ‘ನರಸಿಂಹ ಅವತಾರ’ ಎಂಬ ಹೆಸರಿನಡಿ ಒಂದು ವರ್ಷದ ಪರ್ಯಂತ ನಡೆಯುವ ಬೃಹತ್ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಈ ಕಲಾ ಪ್ರದರ್ಶನವನ್ನು ಸುಷ್ಮಾ ಕೆ. ಬಹಲ್ ಕ್ಯುರೇಟ್ ಮಾಡಿದ್ದರು. ಈ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿ ಪತ್ರವನ್ನು ಬರೆದಿದ್ದಾರೆ.

ತಮ್ಮ ಸಂಪರ್ಕದಲ್ಲಿರುವ ಕಲಾವಿದರನ್ನು ಸ್ವತಃ ಆರ್‌.ಜಿಯವರೇ ಫೋನ್ ಮಾಡಿ ಕರೆಸಿಕೊಳ್ಳುತ್ತಾರೆ. ಸದ್ಯ ಏನಾದರೂ ಕೆಲಸವಿದೆಯಾ? ಎಂದು ಕೇಳುತ್ತಾರೆ. ಕೆಲವು ಕಲಾವಿದರು ಕೆಲಸವಿಲ್ಲದೇ ಖಾಲಿ ಇದ್ದಾಗ ಅವರನ್ನು ಕರೆದು ಅಥವಾ ಸ್ವತಃ ಅವರೇ ಕಲಾವಿದರಿದ್ದಲ್ಲಿಗೇ ಹೋಗಿ ಕೆಲಸವನ್ನು ಕೊಟ್ಟು, ಹಣವನ್ನೂ ಕೊಟ್ಟು ಕಾರ್ಯ ಪ್ರವೃತ್ತರಾಗುವಂತೆ ಪ್ರಚೋದಿಸುತ್ತಾರೆ. ನಿಸ್ವಾರ್ಥ ಜೀವಿಯಾದ ಆರ್.ಜಿಯವರು ಪ್ರತಿ ವರ್ಷ ತಮ್ಮ ಕಲಾ ಪ್ರತಿಷ್ಠಾನದಿಂದ ಕಲಾವಿದರಿಗೆ ರಾಮಸನ್ಸ್ ಕಲಾ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.

ರಾಮಸನ್ಸ್ ಕಲಾ ಪ್ರತಿಷ್ಠಾನವು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಸಂಶೋಧಕರೂ ಇತಿಹಾಸ ತಜ್ಞರೂ ಆದ ರಘು ಧರ್ಮೇಂದ್ರ ಅವರ ಕೊಡುಗೆಯೂ ಇದೆ.

ವಿಜಯ್‌ ಹಗರಗುಂದಿ ಅವರ ‘ಅಗ್ನಿ’ ಕಲಾಕೃತಿ
ವಿಜಯ್‌ ಹಗರಗುಂದಿ ಅವರ ‘ಅಗ್ನಿ’ ಕಲಾಕೃತಿ
ಕಮಲ್ ಅಹಮದ್ ಅವರ ಕಲಾಕೃತಿ ‘ರಾಮ ಪಟ್ಟಾಭಿಷೇಕ’
ಕಮಲ್ ಅಹಮದ್ ಅವರ ಕಲಾಕೃತಿ ‘ರಾಮ ಪಟ್ಟಾಭಿಷೇಕ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT