ನನ್ನಪ್ಪನಲ್ಲಿ ಒಂದು ಅಭ್ಯಾಸವಿತ್ತು- ಬಿಸಿಸಾರು ಕುಡಿಯುವುದು. ಅದು ಹೋಟೆಲ್ಗಳಲ್ಲಿ ಊಟಕ್ಕೆ ಮೊದಲು ಹೀರುವ ಸೂಪಲ್ಲ; ಭೋಜನಾ ನಂತರ ಗುಟುಕರಿಸುವ ರಸಮ್ಮಲ್ಲ. ಅನ್ನ- ಮುದ್ದೆಗೆಂದು ಕುದಿಸಲಾಗುತ್ತಿದ್ದ ಗಟ್ಟಿಸಾರು. ಅದರಲ್ಲೂ ಕೋಳಿ ಮೀನು ಪದಾರ್ಥವಿದ್ದಾಗ ಈ ಪದ್ಧತಿ ತಪ್ಪಿಸುವಂತಿರಲಿಲ್ಲ. ವಿವಿಧ ಮಸಾಲೆಗಳು ಪಾತ್ರೆಯಲ್ಲಿ ಬೆರೆತು ಕೆಳಗಿನ ಶಾಖಕ್ಕೆ ಕುದಿಯುತ್ತ ಆಸ್ಫೋಟಕ ಪರಿಮಳ ಉತ್ಪಾದಿಸುವ ಹದ ಗಳಿಗೆಯಲ್ಲಿ, ಆತ ಒಮ್ಮೆ ಸಣ್ಣಗೆ ಕೆಮ್ಮುತ್ತಿದ್ದನು. ಅದು ಅಡುಗೆಮನೆಗೆ ರವಾನೆಯಾಗುವ ನೋಟಿಸು.

ಸಾರಿನ ಅಂತಿಮ ಕಾರ್ಯಾಚರಣೆ ಬಾಕಿಯಿರುವಾಗಲೂ ಈ ನೋಟಿಸು ಬರುತ್ತಿತ್ತು. ಆಗ ಅಮ್ಮ ಏಕಾಗ್ರತೆ ಭಂಗಗೊಂಡ ಮುನಿಸಿನಲ್ಲಿ ಹೊರಬಂದು ‘ಸ್ವಲ್ಪತಡಿ, ಮಸಾಲೆ ಹಸಿವಾಸನೆ ಹೋಗಬ್ಯಾಡವೇ? ತುಂಡು ಒಂದು ಹದವಾದರೂ ಬೆಂದಿಲ್ಲ ಎಂದು ಒಲವಿನಿಂದ ಗದರುವಳು. ಹುಲಿಯಂಥ ಗಂಡ, ತನ್ನ ಕೈಸಾರಿಗಾಗಿ ಹಂಬಲಿಸಿ ಕೂರುವುದು ಅವಳಿಗೆ ಹೆಮ್ಮೆಯ ವಿಷಯವೇ.

ಕೊಂಚ ಹೊತ್ತಿಗೆ ಸಾರುತ್ಪಾದನಾ ಕಾರ್ಯದ ಸಮಾಪ್ತಿ ಘೋಷಣೆಯ ಸಂಕೇತವಾಗಿ ಒಗ್ಗರಣೆಯ ಭರಾಟೆ. ಘಾಟು ಹೊಮ್ಮುವುದು. ಪಂಚೇಂದ್ರಿಯಗಳನ್ನು ಜಾಗೃತಾವಸ್ಥೆಗೆ ತಂದುಕೊಂಡು ಚಡಪಡಿಸುತಿದ್ದ ಅಪ್ಪನ ಕೈಗೆ ಸಾರು ತುಂಬಿದ ಪಿಂಗಾಣಿ ಬಟ್ಟಲು ಕೈಸೇರುವುದು. ಆತ ತುಂಡುಗಳನ್ನು ಖುಶಿಯಿಂದ ಗಮನಿಸುತ್ತ ‘ಇದನ್ಯಾಕೆ ಹಾಕಿದೆ? ಬರೇ ಶೇರವಾ ಸಾಕಾಗಿತ್ತು’ ಎಂದು ಗೊಣಗುವನು. ಈ ಆಕ್ಷೇಪಕ್ಕೆ ಅಮ್ಮ ಕಿರುನಗು ಸುಳಿಸುವಳು. ತುಂಡಿಲ್ಲದ ಸಾರು ಕೊಟ್ಟಾಗ ಅವನ ಸಿಡಿಮಿಡಿ ಬಟ್ಟಲು ಕುಕ್ಕುವಲ್ಲಿ ಪ್ರಕಟವಾಗುವುದು ಆಕೆ ಅರಿಯಳೆ?

ಅಪ್ಪ ಹಬೆಯಾಡುವ ಬಟ್ಟಲನ್ನು ಮೂಗಿನ ಕೆಳಗೊಯ್ದು ಪರಿಮಳ ಆಘ್ರಾಣಿಸುವನು; ತುಟಿ ಚೂಪಾಗಿಸಿ ಪರೀಕ್ಷಾರ್ಥವಾಗಿ ಪ್ರಥಮ ಸಿಪ್ಪನ್ನು ಸೊರ್ರನೆಳೆಯುವನು. ಸಾರನ್ನು ತಲ್ಲಣಿಸುವ ನಾಲಗೆ ಮೇಲೆ ಹರಡಿ ಗಂಟಲನ್ನು ದಾಟಿಸಿ ‘ಆಹಹಾ ಎಂದು ಕೆನೆಯುವನು. ಅದು ಖಾರ, ಉಪ್ಪು, ಹುಳಿ ಸರಿಯಾಗಿವೆ ಎಂದು ನೀಡುವ ಸರ್ಟಿಫಿಕೇಟು. ನಮ್ಮನೆಯಲ್ಲಿ ಸಾರು ಕುಡಿವ ಹಕ್ಕು ‘ವಯಸ್ಕರಿಗೆ ಮಾತ್ರ. ಆದರೆ ಅವರು ಕುಡಿದುಳಿಸಿದ್ದನ್ನು ಕಬಳಿಸಲು ಸಿಂಹದ ಹಿಂದೆ ನರಿಗಳಂತೆ ನಾವಲ್ಲೇ ಠಳಾಯಿಸುತ್ತಿದ್ದೆವು. ಈ ಪ್ರಕಾರವಾಗಿ ನನಗೆ ಅಪ್ಪನಲ್ಲಿದ್ದ ದುಡಿಮೆತನ, ಧೈರ್ಯ, ಸಾಹಸಗಳಂತಹ ಸದ್ಗುಣಗಳ ಬದಲು, ಗೊಡ್ಡೆಮ್ಮೆ ಮುಸುರೆ ಹೀರುವಂತೆ ಸಾರುಕುಡಿವ ಚಟ ಅಂಟಿತು.

ಸಮಾಧಾನವೆಂದರೆ, ಸದರಿ ಪಿತ್ರಾರ್ಜಿತವು ನನ್ನ ಮಗಳಲ್ಲೂ ಮುಂದುವರೆದಿರುವುದು. ನಮ್ಮ ಮೇಲಿರುವ (ಅಪ್ಪಟ ಸುಳ್ಳು) ಆಪಾದನೆಯೆಂದರೆ- ಅಗತ್ಯಕ್ಕಿಂತ ಹೆಚ್ಚು ಸಾರನ್ನು ಬಳಿಯುತ್ತೇವೆಂದು; ಉಳಿದವರಿಗೆ ಇದೆಯೊಇಲ್ಲವೊ ಗಮನಿಸುವುದಿಲ್ಲವೆಂದು. ಕೊಂಚ ಹೆಚ್ಚು ಮಾಡಿದರೆ ಗಂಟೇನು ಹೋಗುತ್ತದೆ? ಇಷ್ಟಕ್ಕೂ ತಪ್ಪು ಸಾರು ಕುಡುಕರದ್ದೊ ರುಚಿಕರವಾಗಿ ಮಾಡುವವರದ್ದೊ? ಹುಲ್ಲು ಹಸಿರಾಗಿದ್ದರಿಂದ ತಾನೇ ಹಸು ತಿನ್ನಲೆಳೆಸಿದ್ದು?
ಈ ಸಾರುಗುಡುಕ ಪದ್ಧತಿ ಅನೇಕ ಪ್ರದೇಶಗಳಲ್ಲಿದೆ ಎಂದು ತಿಳಿದು ನನಗೆ ಖುಶಿಯಾಯಿತು. ಮಂಡ್ಯ ಸೀಮೆಯಲ್ಲಿ ಕುರಿ ಕೋಳಿಯಿದ್ದ ದಿನ, ಮನೆ ಯಜಮಾನರಿಗೆ ತುಂಡು ಬೆಣ್ಣೆ ಹಾಕಿದ ಸಾರನ್ನು ಕೊಡುವ ಪದ್ಧತಿಯಿದೆ. ಒಮ್ಮೆ ಅತಿಥಿಯಾಗಿದ್ದ ನನಗೂ ಈ ಮರ್ಯಾದೆ ಸಂದಿತು. ಹಾಗೆಂದು ಎಲ್ಲ ಸಾರು ಪೇಯ ಯೋಗ್ಯವಲ್ಲ. ಎಷ್ಟೋ ಸಾರು ಈ ಗೌರವದಿಂದ ವಂಚಿತವಾಗಿವೆ.

ಟೇಬಲ್ ಮೇಲೆ ಅಡುಗೆಯಿಟ್ಟುಕೊಂಡು ಶಿಸ್ತಾಗಿ ಕುಳಿತು ಉಣ್ಣುವ ಮನೆಯಿಂದ ಬಂದ ಬಾನುಗೆ, ಗಂಡಸರು ಊಟಕ್ಕೆ ಮೊದಲು ಕಾಫಿ– ಟೀಯಂತೆ ಸಾರು ಕುಡಿಯುವ ರಿವಾಜು ಅನಾಗರಿಕವಾಗಿ ಕಂಡಿತು. ಆಘಾತದಿಂದ ಚೇತರಿಸಿಕೊಳ್ಳಲು ಅವಳಿಗೆಷ್ಟೊ ದಿನ ಹಿಡಿಯಿತು. ಮೊದಮೊದಲು ಸಾರು ಕೊಡಲು ನಿರಾಕರಿಸಿದಳು. ದಶ ದಿಕ್ಕುಗಳಿಗೂ ಮೊರೆಯಿಟ್ಟೆ. ಆಗ ನೆರವಿಗೆ ಧಾವಿಸಿದವರು ಅಕ್ಕಂದಿರು. ‘ಮುತ್ತಲ್ಲ ರತ್ನವಲ್ಲ, ಬರೇ ಸಾರು. ಅಷ್ಟೊಂದು ಓದಿ ನೌಕರಿ ಮಾಡುವ ತಮ್ಮಯ್ಯ ಕೇಳಿದರೆ ಇಲ್ಲ ಅಂತೀಯಲ್ಲಮ್ಮ?’ ಎಂದು ವಕಾಲತ್ತು ವಹಿಸಿದರು. ಮೊಕದ್ದಮೆ ಗೆದ್ದಿತು. ಬಾನು ಪ್ರಕಾರ ನಾನು ಕೆಡಲು ಅಕ್ಕಂದಿರ ಬೇಶರತ್ ಬೆಂಬಲವೇ ಕಾರಣ.

ಆದರೂ ಆಕೆ ಹೆಬ್ಬೆಟ್ಟು ಚೀಪುವ ಮಕ್ಕಳ ದುರಭ್ಯಾಸ ಬಿಡಿಸುವ ತಾಯಂದಿರಂತೆ ಅನೇಕ ಉಪಾಯ ಹೂಡಿದಳು. ಕಡೆಗೆ ರಿಪೇರಿಯಾಗುವ ಕೇಸಲ್ಲವೆಂದು ಸೋಲೊಪ್ಪಿಕೊಂಡು ನಮ್ಮ ಕುಟುಂಬದ ಭವ್ಯ ಪರಂಪರೆಗೆ ಹೊಂದಿಕೊಂಡಳು. ನನಗಾದರೂ ವಿಜಯ ಸಾಧಿಸಿದ ಗರ್ವವಿಲ್ಲ. ಸಾರು ಕುಡಿವುದ್ಯಾವ ಅಪರಾಧ? ಇಂತಹ ನಿರಪಾಯಕರ ಸತ್ಸಂಪ್ರದಾಯಗಳನ್ನು ಕೈಬಿಡುತ್ತ ಹೋದರೆ ನಮ್ಮ ಸಂಸ್ಕೃತಿಯ ಪಾಡೇನು? ಇದನ್ನೇ ದೊಡ್ಡ ಹೋಟೆಲುಗಳಲ್ಲಿ ಗೌರವವೆಂದು ತಿಳಿಯುವವರು ಮನೆಯಲ್ಲೇಕೆ ಅಪಮಾನವೆಂದು ಭಾವಿಸುವರೊ? ಬಾನು ಕಾಳಗ ಸೋತರೂ ಕಡಿವಾಣ ಹಾಕಲು ಜಾಗ ಹುಡುಕಿದಳು- ಸಾರನ್ನು ಚಿಕ್ಕ ಬೋಗುಣಿಯಲ್ಲಿ ತೆಗೆದಿಡುವುದು; ಬಡಿಸಿಕೊಳ್ಳಲು ಸಣ್ಣ ಸೌಟು ಇಡುವುದು; ಅರ್ಧ ಸಾರನ್ನು ಅಡಗಿಸಿ ಇಷ್ಟೇ ಮಾಡಿದ್ದೆನ್ನುವುದು; ಒಳ್ಳೊಳ್ಳೆಯ ಸಾರನ್ನು ನಾನಿಲ್ಲದಾಗ ಮಾಡಿ ಮಕ್ಕಳಿಗೆ ಉಣಿಸುವುದು- ಇತ್ಯಾದಿ. ಸಾರು ಕುಡಿತ ಬಾಯ್ಚಟಕ್ಕೆಂದು ಭಾವಿಸಿದವರಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ. ಸಹಸ್ರಾರು ವರ್ಷಗಳ ಪ್ರಯೋಗಗಳಿಂದ ಸಾಧಿತವಾಗಿರುವ ಒಂದು ಕಲೆಯನ್ನು ನಾವು ಗೌರವಿಸುತ್ತಿದ್ದೇವೆ ಎಂಬುದನ್ನರಿಯರು. ನನ್ನ ಪ್ರಕಾರ ಒಳ್ಳೇ ಸಾರನ್ನು ಕುಡಿಯುವುದು ಶ್ರೇಷ್ಠ ಸಂಗೀತ ಆಲಿಸುವುದಕ್ಕೆ ಕಿಂಚಿತ್ತೂ ಕಮ್ಮಿಯಲ್ಲ.

ಅನ್ನ, ಮುದ್ದೆ, ರೊಟ್ಟಿಗೆ ಹೋಲಿಸಿದರೆ ಸಾರು ಕಠಿಣ ಕಲೆ- ಕತ್ತಿಯಲುಗಿನ ಮೇಲೆ ನಡೆದಂತೆ. ಇಷ್ಟೊಂದು ರುಚಿ ಕಂಪುಳ್ಳ ವ್ಯಂಜನಗಳು ಒಟ್ಟಿಗೇ ಕೂಡುವ ಇನ್ನೊಂದು ಪದಾರ್ಥ ಲೋಕದಲ್ಲಿ ಎಲ್ಲಿದೆ? ಎತ್ತಣ ಮಾಮರ ಎತ್ತಣ ಕೋಗಿಲೆಯೆಂಬ ಅಲ್ಲಮನ ವಿಸ್ಮಯ ಸಾರಿಗೇ ಹೆಚ್ಚು ಅನ್ವಯಿಸುತ್ತದೆ. ಕಡಲುಪ್ಪು, ಗಿಡಮರದಿಂದ ಇಳಿದುಬಂದ ಹುಣಿಸೆ, ತೆಂಗು; ಬಳ್ಳಿಗಳಿಂದ ಮೆಣಸು; ಹೊಲಗದ್ದೆಯ ಸಾಸಿವೆ ಎಳ್ಳು ಜೀರಿಗೆ ಕಾಯಿಪಲ್ಲೆ; ಭೂಗರ್ಭದಿಂದ ನೀರುಳ್ಳಿ, ಬೆಳ್ಳುಳ್ಳಿ, ಅರಿಸಿನ ಶುಂಠಿ; ಜಲಮೂಲದ ಮೀನು, ಪಶುಪಕ್ಷಿಗಳ ಮಾಂಸ... ಓಹ್! ಉಣ್ಣುವ ತಟ್ಟೆಯೊಂದು ಕೂಡಲಸಂಗಮ; ವಿದೇಶದಿಂದ ಬಂದ ಚಿಲ್ಲಿ, ಆಲೂ, ಬೀನ್ಸುಗಳನ್ನು ನೆನೆದರೆ ಜಾಗತೀಕರಣ!

ಹತ್ತಾರು ವ್ಯಂಜನಗಳು ಕುಟ್ಟಿಸಿಕೊಂಡು, ಅರೆಸಿಕೊಂಡು, ಕುದಿಸಿಕೊಂಡು ಸಾರಿನ ರೂಪಾಂತರ ಪಡೆಯುವುದೇ ಒಂದು ಪವಾಡ. ‘ಬಾಳಿನ ಸಾರ್ಥಕತೆ ಒಂಟಿತನದಲ್ಲಲ್ಲ. ಕೂಡಿ ಬಾಳುವಲ್ಲಿದೆ ಎಂಬ ದರ್ಶನ ಹೊಮ್ಮಿಸುವ ಸಾರಿನಿಂದ ದೇಶಪ್ರೇಮಿಗಳು ಕಲಿಯಬೇಕಾದ ಪಾಠಗಳಿವೆ. ವೈವಿಧ್ಯದಲ್ಲಿ ಏಕತೆ ಎಂಬ ತತ್ವ ಹುಟ್ಟಿದ್ದು ಸಾರಿನಿಂದ. ಬೆಳ್ಳುಳ್ಳಿ, ಲವಂಗ, ಶುಂಠಿ, ಜೀರಿಗೆಗಳನ್ನು ಒಂದೊಂದಾಗಿ ಕಚ್ಚಿ ನೋಡಿದವರಿಗೆ ಗೊತ್ತು- ಒಂದರ ರುಚಿಗಂಪು ಮತ್ತೊಂದಕ್ಕಿಲ್ಲ. ಎಷ್ಟೇ ರುಚಿಗಳಿರಲಿ, ಅಂತಿಮ ರುಚಿಯನ್ನು ನಿಲ್ಲಿಸುವುದು ಉಪ್ಪು, ಹುಳಿ, ಖಾರ. ಮಾನವ ದೇಹವನ್ನು ವೇದಾಂತಿಗಳೂ ವಿಜ್ಞಾನಿಗಳೂ ಬಗೆಬಗೆಯಾಗಿ ವ್ಯಾಖ್ಯಾನಿಸಿದ್ದಾರೆ. ಅನುಭವಸ್ಥರಾದ ಸಾಮಾನ್ಯರು ಸರಳವಾಗಿ ಉಪ್ಪುಹುಳಿಖಾರ ತಿಂದಮೈ ಎಂದಿದ್ದಾರೆ. ಎಂಥ ಸತ್ಯ! ತ್ರಿಮೂರ್ತಿಗಳಿಂತಿರುವ ಇವು ಬದುಕಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ; ಮನುಷ್ಯರ ಸೃಜನಶೀಲ ತಪ್ಪುಗಳಿಗೆ ಪ್ರಚೋದಕ; ಅದಕ್ಕೆಂದೇ ಅಲ್ಲವೇ ಯಾರನ್ನೂ ಲೆಕ್ಕಿಸದ ಸನ್ಯಾಸಿಗಳು ಮಸಾಲೆಗೆ ಹೆದರುವುದು?

ಸಾರಿಲ್ಲದ ಆಹಾರಸಂಸ್ಕೃತಿ ನಿಜಕ್ಕೂ ಸಪ್ಪೆ. ನನ್ನ ಮೇಷ್ಟರೊಬ್ಬರು ವಿಷಾದದಿಂದ ಹೇಳುತ್ತಿದ್ದರು- ‘ಭಾರತಕ್ಕೆ ಬಂದ ಬ್ರಿಟಿಷರು ಕೊಂಡುಹೋಗಿದ್ದು ನಮ್ಮ ಆಧ್ಯಾತ್ಮಿಕ ವಿದ್ಯೆಯನ್ನಲ್ಲ, ಮೆಣಸಿನ ಸಾರನ್ನು ಎಂದು. ಆಲೋಚಿಸಿ ನೋಡಿದರೆ ಅವರು ನಿಜವಾದ ವಿದ್ಯೆಯನ್ನೇ ಒಯ್ದಿದ್ದಾರೆಂದು ಹೊಳೆಯುತ್ತದೆ. ಸಾರಲ್ಲೇ ಸಮಸ್ತ ಅಧ್ಯಾತ್ಮವಿದೆ; ಬಿಡಿಗಳು ಕೂಡಿ ಇಡಿಯಾಗುವ ಅದ್ವೈತವಿದೆ. ಪಾಪ, ಎಲ್ಲಿ ಸಿಗಬೇಕು ಸಾರು ಅವರ ದೇಶದಲ್ಲಿ? ಕಿಟೆಲನ ಅವಸ್ಥೆ ಗಮನಿಸಿ. ಸಾರಿಗೆ ಸಮಾನಾರ್ಥಕ ಕೊಡಲು ತಿಣುಕಾಡಿ ಸೋತು ಕಡೆಗೆ ‘ಸೂಪ್, ಪೆಪರ್ವಾಟರ್’ ಎಂದು ಕೈತೊಳೆದುಕೊಳ್ಳುತ್ತಾನೆ.

ಇನ್ನು ಸಾರಿನ ಅನಂತರೂಪಗಳಾದ ಕಟ್ಟು, ತಿಳಿ, ಗಸಿ, ಕಾಡ, ಶೆರವಾ, ಚರಟ, ತೊಕ್ಕು, ಎಸರು, ಒಡ್ಮುರ್ಕ, ಮಸ್ಕಾಯಿ, ಪಚ್ಕುಳಿ, ಬಸ್ಸಾರು, ಮಸೊಪ್ಪು- ಪಲ್ಟಿ ಹೊಡೆದರೂ ಅರ್ಥ ಕೊಡಲು ಸಾಧ್ಯವಿಲ್ಲ. ಇಷ್ಟು ಸಾಕಲ್ಲವೇ ಬಿಳಿಯರ ಗರ್ವಭಂಗಕ್ಕೆ? ನಮ್ಮವರು ಮಾಡಿರುವ ನಿಘಂಟಲ್ಲೂ ತಾನೇ ಎಲ್ಲಿವೆ ಈ ಶಬ್ದಗಳು? ಕೃತಘ್ನರು. ಆದರೆ ಎಲ್ಲರೂ ಅಂಥವರಲ್ಲ. ಸಮ್ಮೇಳನವೊಂದರಲ್ಲಿ ಮಂಗರಸನ ಪಾಕಶಾಸ್ತ್ರದ ಮೇಲೆ ಸಂಶೋಧನೆಗೈದ ಪಂಡಿತರೊಬ್ಬರ ಪಕ್ಕ ಊಟಕ್ಕೆ ಕೂತಿದ್ದೆ. ಚಾಪೆಯಗಲ ಬಾಳೆಲೆ ಮೇಲೆ ಪಸರಿಸಿದ ಅನ್ನಕ್ಕೆ, ಮಸಾರಿ ಭೂಮಿಯಲ್ಲಿ ಮುಂಗಾರು ಮಳೆ ಪ್ರವಾಹದಂತೆ ಸಾರು ಹೊಯಿಸಿಕೊಂಡು ಸುರಿದು ಉಣ್ಣುತಿದ್ದರು. ಪೂರ್ವಜನ್ಮದ ಬಂಧುವೊ ಎಂಬಂತೆ ಮುಖ ನೋಡಿದೆ. ಇದೊಂದು ನನ್ನ ವೀಕ್ನೆಸ್ಸು ಎಂದರು ತಪ್ಪಿತಸ್ಥ ದನಿಯಲ್ಲಿ. ನಾನೂ ನಿಮ್ಮ ಕುಲದವನೇ ಎಂದೆ. ಮುಖ ಅರಳಿತು. ಇಬ್ಬರೂ ಸೇರಿ ಅಡುಗೆಯವನನ್ನು ಕಂಡು ನಮ್ಮ ಮೆಚ್ಚನ್ನು ಸಲ್ಲಿಸಿದೆವು.

ಚರಿತ್ರೆಕಾರರ ಪ್ರಕಾರ, ಯೂರೋಪಿನ ಸಾಹಸಿಗಳು ಸಮುದ್ರ ಮಾರ್ಗ ಶೋಧಿಸಿದ್ದೇ ಸಾಂಬಾರ ಪದಾರ್ಥಕ್ಕೆ ಅರ್ಥಾತ್ ಸಾರಿಗೆ. ಇಸ್ತಾನ್ಬುಲ್ ಶಹರಿಗೆ ಹೋದಾಗ, ಅಲ್ಲಿನ ಸುಪ್ರಸಿದ್ಧ ಸ್ಪೈಸ್ ಮಾರ್ಕೆಟ್ಟಿನಲ್ಲಿ ನಮ್ಮ ಕಾಡಡವಿಗಳಿಂದ ಹೋದ ರಾಂಪತ್ರೆ, ದಾಲ್ಚಿನ್ನಿ, ಏಲಕ್ಕಿ, ಕರಿಮೆಣಸು, ಲವಂಗಗಳು ದೊರೆಗಳಂತೆ ಮೆರೆಯುವುದನ್ನು ಕಂಡು ನನ್ನೆದೆ ಉಬ್ಬಿತು. ನಾವು ಪರಕೀಯರಿಗೆ ರಾಜಕೀಯ ಗುಲಾಮರಾಗಿದ್ದು ನಿಜ. ಆದರೆ ನಮ್ಮ ಸಂಬಾರಗಳು ಅವರನ್ನೂ ದಾಸ್ಯಕ್ಕೊಳ್ಳಪಡಿಸಿವೆ. ನಮ್ಮಲ್ಲಿ ಒಬ್ಬಾಕೆಗೆ ಮೆಣಸಿನ ರಾಣಿ ಎಂದೇ ಹೆಸರಿತ್ತಲ್ಲ. ಪುಟ್ಟಕಾಳು ಆಳುವವರ ಮುಕುಟಮಣಿಯಾಗಿ ಮೆರೆಯಿತು. ಸಾಮ್ರಾಜ್ಯಗಳ ಏಳುಬೀಳುಗಳಿಗೆ ಕಾಳುಮೆಣಸು ಕಾರಣ ಎಂದರೆ ಜನ ನಂಬಲಿಕ್ಕಿಲ್ಲ. ಚಿಕ್ಕದ್ದು ಮೂರ್ತಿಯ ಹೊರತು ಕೀರ್ತಿಯಲ್ಲ. ಗರಂ ಮಸಾಲೆಯಿಲ್ಲದ ಸಾರು ಸೇವಿಸಿದರೆ ಬಾಳೇ ನಿಸ್ಸಾರವೆನಿಸುತ್ತದೆ.

ಚಿತ್ರ: ಮದನ್ ಸಿ.ಪಿ.

ಹಾಗೆಂದು ಅದನ್ನು ಹಿಡಿತ ತಪ್ಪಿ ಹಾಕಿದರೆ ಉಂಡವರ ಗತಿ ಗಂಗಮ್ಮನ ಪಾಲೇ. ಲಗ್ನವಾದ ಹೊಸತರಲ್ಲಿ ನಮ್ಮಿಬ್ಬರಿಗೆ ಪ್ರಿನ್ಸಿಪಾಲರು ಅಕ್ಕರೆಯಿಂದ ಕೊಟ್ಟ ಊಟ ನೆನಪಾಗುತ್ತಿದೆ. ಕೋಳಿಸಾರು! ಆ ದಿನವೇ ಶ್ರೀಯುತರು ಮಡದಿಯೊಂದಿಗೆ ಜಗಳ ಮಾಡಿಕೊಳ್ಳಬೇಕಿತ್ತೇ? ಹಂಗಾಮಿನಲ್ಲಿ ಹೊಲದೊಳಗೆ ಎತ್ತನ್ನೂ ಬೀಗರೂಟದ ದಿನ ಅಡುಗೆಯವರನ್ನೂ ಕೆಣಕಬಾರದು ಎಂಬ ವಿವೇಕವಿಲ್ಲದ ಮನುಷ್ಯ. ಗುಂಟೂರು ಮೂಲದ ಆಕೆ ಅನಪೇಕ್ಷಿತ ಅತಿಥಿಗಳಾದ ನಮಗೂ ಪತಿದೇವರಿಗೂ ಬುದ್ಧಿಕಲಿಸಲು ಮೆಣಸಿನಹುಡಿ ಮುಂದುಮಾಡಿದ್ದರು.

ಪ್ರಥಮ ತುತ್ತು ಬಾಯಿಗಿಟ್ಟೆ. ಕೆಂಡ ನುಂಗಿದಂತಾಯಿತು. ಗಂಟಲು ಸುಟ್ಟು ಖಾರ ನೆತ್ತಿಗೇರಿತು. ಕಣ್ಣಲ್ಲೂ ಬಾಯಲ್ಲೂ ದಳದಳ ನೀರುಸುರಿಸುತ್ತ ಬಾನು ಬಾಯಿ ಹೊಯ್ಕೊಂಡಳು. ನಾಲಗೆ ಚಾಚಿ ತೇಕುವ ನಾಯಿಗಳಾಗಿದ್ದ ನಾವು, ಬೆಲ್ಲ ಮೊಸರು ತಿಂದು ಜ್ವಾಲಾಮುಖಿ ಶಮನಿಸಿದೆವು. ಮುಂದೆ ಬಾನು ಯಾವ ಭೋಜನಾಹ್ವಾನವನ್ನೂ ಒಪ್ಪಿಕೊಳ್ಳಲಿಲ್ಲ. ಈಗಲೂ ಹೋದ ಕಡೆ ಸಾರಿನೊಳಗೆ ಬೆರಳನ್ನು ನೆನೆಸಿ ನಾಲಗೆಗಿಟ್ಟು ನಂತರ ಊಟ ಶುರುಮಾಡುತ್ತಾಳೆ.

ಲೋಕದಲ್ಲಿ ಅನ್ನ, ಮುದ್ದೆ, ರೊಟ್ಟಿ ಮಾಡುವವರು ಬೇಕಾದಷ್ಟು ಮಂದಿ ಸಿಕ್ಕಾರು. ಸಾರು ಎಲ್ಲರ ಮಾತಲ್ಲ. ದೊಡ್ಡಾಸ್ಪತ್ರೆಯಲ್ಲಿ ತಜ್ಞವೈದ್ಯರಂತೆ ಪಾಕಲೋಕದಲ್ಲಿ ಸಾರುತಜ್ಞರು. ಯಾವ ಸಾಮಗ್ರಿಯನ್ನು ಹೇಗೆ ಯಾವಾಗ ಎಷ್ಟು ಹಾಕಬೇಕು ಎನ್ನುವುದರ ಮೇಲೆ ಅದರ ರುಚಿ. ಅಡುಗೆ ಗುಣ ಸಾರಲ್ಲಿ ನೋಡಬೇಕಂತೆ. ಸಾರು ಕೆಟ್ಟಾಗ ಅಟ್ಟವರ ಮುಖ, ಗೆಲ್ಲುವ ಮ್ಯಾಚಿನಲ್ಲಿ ಕ್ಯಾಚುಬಿಟ್ಟ ಕ್ರಿಕೆಟಿಗನಂತಿರುತ್ತದೆ. ಸಾರು ಚಂದವಾದರೆ ಅರ್ಧಯುದ್ಧ ಗೆದ್ದಂತೆ. ನನ್ನಮ್ಮ ತನ್ನ ಶ್ರೇಷ್ಠ ಸಾರುಗಳಿಂದ ಖ್ಯಾತವಾಗಿದ್ದಳು.

ಬೂಬಮ್ಮನ ಸಾರು ಮೂರು ದಿನ ಕೈವಾಸನೆ ಹೋಗಲ್ಲ ಎಂದು ಆಕೆ ಸತ್ತ ಎಷ್ಟೊ ವರ್ಷಗಳವರೆಗೆ ಜನ ಗುಣಗಾನಿಸುತ್ತಿದ್ದರು. ‘ಅಪ್ಪನಿಗೆ ಬಾಯಿ ಕೆಟ್ಟಿದೆಯಂತೆ, ಸ್ವಲ್ಪ ಸಾರು ಬೇಕಂತೆ ಎಂಬ ಒಕ್ಕಣೆಯೊಂದಿಗೆ ಬೀದಿಯ ಬಟ್ಟಲು ಮನೆಗೆ ಬಾರದ ದಿನವಿಲ್ಲ. ಅವಳ ಸಾರು ರವಿವರ್ಮನ ಚಿತ್ರದಂತೆ, ಬೇಂದ್ರೆ ಕಾವ್ಯದಂತೆ. ಆಕೆ ಅಡುಗೆಯಲ್ಲಿ ನಿರತವಾಗಿರುವಾಗ ತಪಸ್ವಿಯಂತೆ ತೋರುತಿದ್ದಳು. ಸೇನಾನಿ ಯುದ್ಧಕ್ಕೆ ಶಸ್ತ್ರಾಗಾರದಿಂದ ಆಯುಧ ಹಿರಿದು ಜೋಡಿಸಿಕೊಳ್ಳುವಂತೆ, ಸಾರಿನ ಸಾಹಿತ್ಯಗಳನ್ನು ಒಂದೊಂದಾಗಿ ತೆಗೆದು ಜೋಡಿಸಿಕೊಳ್ಳುತ್ತಿದ್ದಳು. ದನಿಯಾ ಮೆಣಸಿನಕಾಯಿ ಜೀರಿಗೆ ಸಣ್ಣಗೆ ಹುರಿದುಕೊಳ್ಳುತ್ತಿದ್ದಳು; ಈರುಳ್ಳಿಯನ್ನು ಕೆಂಡದಲ್ಲಿ ಸುಡುತ್ತಿದ್ದಳು. ಹುರಿತದಿಂದ ಸಾರಿಗೆ ಬೇರೊಂದೇ ಪರಿಮಳ- ರುಚಿ ಪ್ರಾಪ್ತವಾಗುತ್ತಿತ್ತು.

ಸಾಮಗ್ರಿಯನ್ನೆಲ್ಲ ಅರೆದು ವರ್ಣರಂಜಿತ ಮುದ್ದೆಗಳನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಳು. ಕಾದೆಣ್ಣೆಯಲ್ಲಿ ಈರುಳ್ಳಿ ಸೀಳು ಕೆಂಚಗಾದ ಬಳಿಕ ಅವನ್ನು ಕ್ರಮಬದ್ಧವಾಗಿ ಹಾಕುತ್ತ ಕಮ್ಮಗೆ ತಾಳಿಸುತ್ತಿದ್ದಳು. ಬಳಿಕ ತರಕಾರಿಯೊ ಮಾಂಸವೊ ಬೀಳುತಿತ್ತು. ಕೊನೆಯಲ್ಲಿ ತೆಂಗಿನ ರಸ, ಹುಣಿಸೆ ಹುಳಿ. ‘ಹುಳಿಹಿಂಡು ಶಬ್ದಕ್ಕೆ ಜೀವನದಲ್ಲಿ ಒಳ್ಳೆಯ ಅರ್ಥವಿಲ್ಲ; ಸಾರಲೋಕದಲ್ಲಿ ಅದುವೇ ಜೀವ. ಬಾನುವಿನ ಸಾರುಗಳಲೆಲ್ಲ ಮೊಳೆ ಹುರುಳಿ ಕಡಿ ಹಾಗೂ ಹುಳ್ಸೊಪ್ಪು ಅಪ್ರತಿಮ. ಕಲಸಿದ ಮೆಹಂದಿಯಂತಿರುವ ಹುಳ್ಸೊಪ್ಪನ್ನು ಬಿಸಿಯನ್ನಕ್ಕೆ ಬಡಿಸಿಕೊಂಡು ತಿನ್ನುತ್ತಿದ್ದರೆ, ಮಾಡಿದ ಕೈಗಳನ್ನು ಚುಂಬಿಸಬೇಕೆನಿಸುತ್ತದೆ.

ಸಾರಿಗೂ ಸೀಜನ್ನಿಗೂ ನಂಟಿದೆ. ಮಳೆ ಬಿದ್ದರೆ ಸಾಕು, ಕಾರೇಡಿಯ, ಹಳ್ಳದ ಮೀನಿನ, ಹುರಿಗಾಳಿನ ಸಾರು ಪ್ರತ್ಯಕ್ಷ. ಚಳಿಗಾಲದಲ್ಲಿ ಹಸಿಯವರೆಕಾಳಿನ ಸಾರಾದರೆ, ಬೇಸಿಗೆಗೆ ಬಸ್ಸಾರು, ಮಜ್ಜಿಗೆ ಸಾರು, ತಂಬುಳಿ. ಹಸಿಸಾರು ಒಂದೇ ಹೊತ್ತಿನವು. ಕುದಿಸಿ ನಾಳೆಗೂ ತಿನ್ನಬಹುದು- ರುಚಿಯಿರುವುದಿಲ್ಲ. ಮೀನ್ಹುಳಿ ಮಾತ್ರ ಹಳತಾಗಲೇಬೇಕು. ಸಾರೊಳಗೆ ತುಂಡು ಅರ್ಧ ದಿನವಿದ್ದರೆ ಉಪ್ಪು ಹುಳಿ ಖಾರ ಹೀರಿಕೊಂಡು ರುಚಿ ಗಳಿಸುತ್ತದೆ. ಅಮ್ಮ ನಾವೆಲ್ಲ ಉಂಡು ಮಲಗಿದ ಬಳಿಕ ಸದ್ದಿಲ್ಲದೆ ಮೀನ್ಹುಳಿ ಮಾಡುತ್ತಿದ್ದಳು. ಹೊತ್ತಾರೆ ತಣ್ಸಾರಿಗೆ ಬಿಸಿಮುದ್ದೆ ಇಲ್ಲವೇ ಅಕ್ಕಿರೊಟ್ಟಿ. ಹಳತಾದಷ್ಟು ರುಚಿ ಕೊಡುವ ಮತ್ತೊಂದು ಸಾರೆಂದರೆ ಹುರುಳಿ ಕಟ್ಟು.

ಶಿವಮೊಗ್ಗೆಯಲ್ಲಿ ಟಾಂಗಾದವರ ಮನೆಮುಂದೆ ಚೆಂಬಿಗೆ ಐದು ರೂಪಾಯಂತೆ ಸಿಗುವ ಹುರುಳಿಕಟ್ಟಿಗೆ ಜನ, ಎ.ಟಿ.ಎಂ ಮುಂದೆ ಕ್ಯೂನಿಂತಂತೆ ನಿಲ್ಲುತ್ತಿದ್ದರು. ಮಾತೃಸಮಾನರಾದ ನಮ್ಮತ್ತೆಯವರು ಜೀವಿಸಿದ್ದಾಗ ಅಳಿಯೋಪಚಾರದ ಶಿಖರಸ್ಥಿತಿಯಂತೆ ಕಟ್ಟಿನಸಾರು ತಯಾರಿಸುತ್ತಿದ್ದರು. ಅಳಿಯಂದಿರು ಅನ್ನದ ಬೆಟ್ಟಗಳನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುವುದನ್ನು ಮರೆಯಲ್ಲಿ ನಿಂತು ಸಂತೋಷದಿಂದ ವೀಕ್ಷಿಸುತ್ತಿದ್ದರು. ಅವರು ಕಣ್ಮುಚ್ಚಿದ್ದೇ ಕಟ್ಟುವೈಭವವೆಲ್ಲ ನಿಂತಿತು.

ಇಂಗು– ತೆಂಗು ಇದ್ದಾಗ ಸಾರು ಮಾಡುವುದು ಸುಲಭ; ಅರೆಕೊರೆಯಲ್ಲಿ ಹೊಂಚಿಕೊಂಡು ಮಾಡುವುದು ನಿಜವಾದ ಕಸುಬುದಾರಿಕೆ. ಅಮ್ಮ ಬೇಳೆ ಬೇಯಲಿಟ್ಟು ಹಿತ್ತಲಿಗೆ ಹೋದವಳೆ, ಕುಂಬಳ ಕುಡಿ, ನುಗ್ಗೆ, ಮುಳ್ಳರಿವೆ, ಬಸಳೆ ಉಪ್ಪಿನ ಚಲ್ಟ ಕಿತ್ತು ತಂದು ಸೋಸಿ ಹೆಚ್ಚಿ ಹಾಕಿ ಮಸೆದು ಒಗ್ಗರಣೆ ಕೊಡುತ್ತಿದ್ದಳು. ಬಿಸಿ ಮುದ್ದೆಗೆ ಅಪೂರ್ವ ಸಂಗಾತಿಯದು. ಈಗಲೂ ಹೊಲಗೆಲಸಕ್ಕೆ ಹೋಗುವ ಹೆಂಗಸರ ಮಡಿಲಿನಲ್ಲಿ ಪಯಣಿಸಿ ಬರುವ ಬೆರಕೆ ಸೊಪ್ಪು ಸಾರಾಗಿ ಮುದ್ದೆಗೆ ಜೊತೆಯಾಗುತ್ತವೆ-ಅಗಲಿದ ಪ್ರೇಮಿಗಳು ಒಂದಾದಂತೆ.

ಅಡುಗೆಮನೆ ಸೃಷ್ಟಿಕರ್ತನ ಕಮ್ಮಟ. ಅಲ್ಲಿ ಹೊಸಹೊಸ ಪ್ರಯೋಗ ನಡೆಸಬಹುದು. ಅಡುಗೆಯಷ್ಟು ಸೃಜನಶೀಲವಾದ ಕೆಲಸ ಇನ್ನೊಂದಿಲ್ಲ. ನನಗೆ ಬಾಣಸಿಗನಾಗುವ ಬಯಕೆಯಿತ್ತು. ಇದಕ್ಕಾಗಿ ಅಡುಗೆಮನೆಯಲ್ಲಿ ಸಹಾಯಕ ಕೆಲಸಗಳಿಗೆ ಸ್ವಯಂ ನೇಮಿಸಿಕೊಳ್ಳುತ್ತಿದ್ದೆ. ಈಗಲೂ ನೀರುಳ್ಳಿಯನ್ನು ತೆಳ್ಳಗೆ ವೇಗವಾಗಿ ಹೆಚ್ಚುವಲ್ಲಿ ನನ್ನನ್ನು ಮೀರಿಸಿದವರಿಲ್ಲ. ಆದರೆ ಕೈಕಾಲಿಗೆ ಅಡ್ಡಬರುತ್ತಿದ್ದ ನನ್ನನ್ನು ಅಮ್ಮ ‘ನಡಿಯೋ ಆಚೆ ಎಂದು ನಿರ್ದಯವಾಗಿ ಅಟ್ಟುತ್ತಿದ್ದಳು. ಅಡುಗೆಗೂ ಸ್ತ್ರೀಯರಿಗೂ ಯಾರು ಗಂಟು ಹಾಕಿದರೋ? ನನ್ನಂಥವರು ಪಾಕತಜ್ಞರಾಗುವುದಕ್ಕೆ ಕಲ್ಲುಬಿತ್ತು. ಅಡುಗೆ ಕೆಲಸ ನಮ್ಮದಲ್ಲವೆಂದು ಭಾವಿಸಿರುವ ಗಂಡಸರು ಅವಕಾಶ ವಂಚಿತರೇ ನಿಜ. ಈಗಲೂ ಬಾನು ಕಿಚನನ್ನು ಅಸ್ತವ್ಯಸ್ತಗೊಳಿಸುವೆ ಎಂದು ನನ್ನನ್ನು ಒಳಬಿಡುವುದಿಲ್ಲ.

ಆದರೆ ಆಕೆ ಊರಿಗೆ ಹೋದಾಗ ಕಿಚನನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳುತ್ತೇನೆ. ಬಗೆಬಗೆಯ ಸಾರು ಮಾಡಿ ಸೇಡು ತೀರಿಸಿಕೊಳ್ಳುತ್ತೇನೆ. ಅವಳು ವಾಪಸಾಗುವುದರೊಳಗೆ ನನ್ನ ಪ್ರಯೋಗಫಲಗಳನ್ನು ಗುರುತಿಲ್ಲದಂತೆ ಮಾಡುತ್ತೇನೆ. ಕಾರಣ, ಅವಳು ನನ್ನ ಸಾರಿನ ರುಚಿನೋಡಲೂ ನಿರಾಕರಿಸುತ್ತಾಳೆ. ಅದನ್ನು ಕೆಲಸದಮ್ಮನಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಾಳೆ. ನನ್ನ ಸಾರುಂಡು ಅವಳ ಮೈಕೆಟ್ಟೀತೆಂದು ಮದ್ದಿಗೆಂದು ಮೇಲೆ ರೊಕ್ಕವನ್ನೂ ಕೊಡುತ್ತಾಳೆ.

ಅಮ್ಮನ ಸಾರುಪ್ರತಿಭೆ ಅನೇಕ ಅಗ್ನಿಪರೀಕ್ಷೆಗಳ ಮೂಲಕ ಅಕ್ಕನಿಗೆ ವರ್ಗಾವಣೆಯಾಯಿತು. ಸಾರು ಕೆಟ್ಟಾಗಲೆಲ್ಲ ಆಕೆ ‘ಕಾಲು ತೊಳೆದ ನೀರಾಗಿದೆಯಲ್ಲೇ ಎಂದು ಗರ್ಜಿಸುತ್ತಿದ್ದಳು; ತುಂಬಿದ ತಟ್ಟೆಯಲ್ಲೆ ಕೈತೊಳೆದುಕೊಂಡು ಉಪವಾಸ ಇರುತ್ತಿದ್ದಳು. ಈ ತಾಪತ್ರಯವೇ ಬೇಡವೆಂದು ಅಕ್ಕ ಸಾರು ಕುದಿವಾಗ ಚಮಚೆಯಲ್ಲಿ ತಂದು ಆಕೆಯ ಅಂಗೈಮೇಲೆ ಹಾಕುತ್ತಿದ್ದಳು. ಅಮ್ಮ ಬಾಯಲ್ಲಿದ್ದ ಕವಳವುಗಿದು, ಚುಳುಕದಲ್ಲಿ ಹೊಯ್ದಾಡುವ ಸಾರನ್ನುರುಬಿ ನೆಕ್ಕಿ ಅರೆಕ್ಷಣ ಕಣ್ಮುಚ್ಚುತ್ತಿದ್ದಳು. ಜಿಹ್ವೆಯಯಲ್ಲಿರುವ ರಸಗ್ರಾಹಕ ಲ್ಯಾಬಿಗೆ ಕಳಿಸಿ ವರದಿ ತರಿಸುವ ಗಳಿಗೆಯದು. ಅಲ್ಲಿತನಕ ಆಪರೇಶನ್ ಥೇಟರ್ ಹೊರಗೆ ನಿಂತ ರೋಗಿಬಂಧುವಿನಂತೆ ಅಕ್ಕ ತಲ್ಲಣದಲ್ಲಿ ನಿಂತಿರುತ್ತಿದ್ದಳು. ಅಮ್ಮ ಕಣ್ಣರಳಿಸಿ ನಾಲಗೆಯಿಂದ ಗಾಳಿ ಎಳೆದುಕೊಂಡಳೊ ಪಾಸ್; ಕಣ್ಣರೆಪ್ಪೆ ಬಿಗಿದು ಮೂಗೇರಿಸಿ ಮುಖ ಸೊಟ್ಟವಾಯಿತೊ ಮುಗೀತು ಕತೆ.

ಸಾರನ್ನು ಕುದಿತದ ಆಧಾರದಲ್ಲೇ ಇಂಥದೆಂದು ಹೇಳಬಲ್ಲ ರಸತಜ್ಞರುಂಟು. ಅದರಲ್ಲೂ ಕೋಳಿ, ಮೀನು, ಮೂಲಂಗಿ, ನುಗ್ಗೆ, ಹುರುಳಿ, ಸಾರುಗಳು ಬೇಯುವಾಗ ವಿಶಿಷ್ಟ ಕಂಪು ಹೊಮ್ಮಿಸುತ್ತವೆ. ಕೆಲಸಗಾರರೇ ತುಂಬಿದ್ದ ನಮ್ಮ ಬೀದಿ, ಪ್ರತಿಬೆಳಿಗ್ಗೆ ಮುದ್ದೆಕೂಡಿಸುವ ಕಂಪಿನ ಜತೆ ಸಾರಿನ ಗಮಲಿನಿಂದ ತುಂಬಿಹೋಗುತ್ತಿತ್ತು. ಅದೊಂದು ಸುವಾಸನಾರಂಜಿತ ಲೋಕ. ಮಾಂಸಾಹಾರಿ ಜಾತ್ರೆ-ಉರುಸುಗಳಲ್ಲಿ ಈ ಲೋಕ ಮತ್ತೂ ಅದ್ಭುತ. ಅಲ್ಲಿ ಪೂಜಾ ಸಾಮಾನಿನ ಅಂಗಡಿಗಿಂತ ಮಸಾಲೆ ಸ್ಟಾಲುಗಳೇ ಹೆಚ್ಚಿರುವುದುಂಟು. ಭಕ್ತಾದಿಗಳಾದರೂ ಗುಡಿ- ದರ್ಗಾಕ್ಕೆ ಹೋಗಿ ಪೂಜೆ- ಫಾತೆಹಾ ಮಾಡಿಸುವುದಕ್ಕಿಂತ ತನ್ಮಯವಾಗಿ ತೊಡಗುವುದು ಅಡುಗೆಯಲ್ಲೇ. ರಾಕೆಟ್ ಉಡಾವಣಾ ಕ್ಷೇತ್ರದಲ್ಲಿ ವಿವಿಧ ವಿಜ್ಞಾನಿಗಳು ತೊಡಗಿರುವಂತೆ, ಹಿರಿಯ ಬಾಣಸಿಗರ ನೇತೃತ್ವದಲ್ಲಿ ಸಮಸ್ತ ಬಳಗವು ಈರುಳ್ಳಿ ಬೆಳ್ಳುಳ್ಳಿ ಶುಂಠಿ ಸುಲಿವ, ಬಾಡು ಕಡಿವ ಕೆಲಸದಲ್ಲಿ ಮಗ್ನವಾಗಿರುತ್ತದೆ.

ಮಧ್ಯಾಹ್ನ ಹೊತ್ತಿಗೆ ನೂರಾರು ಒಲೆಗಳಲ್ಲಿ ಸಾರು ಬೇಯುತ್ತ ಹೊಮ್ಮಿಸುವ ಕಂಪು ದೈವಕ್ಕೇ ನಶೆಯೇರಿಸುತ್ತದೆ. ಬಾಡ್ಸಾರು ಮಾಡುವುದು ಸುಲಭ. ಬಡಿಸಲು ಎಂಟೆದೆ ಬೇಕು. ಕಾರಣ, ಒಳ್ಳೇಪೀಸು ಬೀಳಲಿಲ್ಲವೆಂದು ಜೀವಮಾನವಿಡೀ ಮುನಿಸಿಕೊಳ್ಳುವ ಗಿರಾಕಿಗಳಿರುತ್ತಾರೆ.

ಕರ್ನಾಟಕದಲ್ಲಿ ಸಹಸ್ರಾರು ಸಾರುಗಳಿವೆ. ಪುನರುಕ್ತಿ ಆಗದಂತೆ ವರ್ಷವಿಡೀ ದಿನಕ್ಕೊಂದು ಮಾಡುವರುಂಟು. ಸಾರೆನ್ನುವುದು ಬಹುರೂಪಿ ಲೋಕಕ್ಕೆ ಇಡಲಾದ ಏಕರೂಪಿ ನಾಮಕರಣ. ಪ್ರತಿ ರೂಪಕ್ಕೂ ಬೇರೆಯೇ ಹೆಸರುಂಟು. ಮೇಲೋಗರ, ತೊಗೆ, ಪಳದಿ, ಕಟ್ಟು, ತಾಳು, ಪದಾರ್ಥ, ಹುಳಿ, ಆಮ್ರ, ಕೊದ್ದೆಲು, ಎಸರು, ಉದುಕ, ಸಾಂಬಾರು, ಪಳದಿ, ಪಪ್ಪು, ಬ್ಯಾಳಿ, ಕೂಟು, ತೊವ್ವೆ, ಗೊಜ್ಜು, ತಾಳದ-ಒಂದೇ ಎರಡೇ? ಉದಕಗಳಲ್ಲಿ ಮಳ್ಳುದಕ, ಹಸಿಯುದಕ; ಆಮ್ರಗಳಲ್ಲಿ ಹಸೆ ಕಾಳಮ್ರ, ಹುರದ ಕಾಳಮ್ರ, ಕಟ್ಟಿನಾಮ್ರ; ಸೊಪ್ಪುಗಳಲ್ಲಿ ಮಸೊಪ್ಪು ಗಟ್ಸೊಪ್ಪು; ಎಸರುಗಳಲ್ಲಿ ಸೊಪ್ಪೆಸರು, ಕಾಳೆಸರು, ಕೂಡೆಸರು, ಬಾಡೆಸರು, ಉಪ್ಪೆಸರು, ಕಿವುಚೆಸರು; ಇಲ್ಲಿರುವ ಬಸಿ, ಅರೆ, ಕಿವುಚು, ಹುರಿ, ಕೂಡಿಸು, ಮಸೆ ಎಂಬ ಕ್ರಿಯಾಪದಗಳು ಗಮನಾರ್ಹ.

ಕಿವುಚಿ ಮಾಡುವ ಸಾರುಗಳು ಉಣ್ಣಲು ಚಂದ; ಕಣ್ಣಿಂದ ನೋಡಬಾರದು. ಹುಳಿಗಳಲ್ಲಿ ಮಜ್ಜಿಗೆ ಹುಳಿ ಮೀನು ಹುಳಿ ಬೆಂಡೆ ಹುಳಿ ಕಡ್ಲೆ ಹುಳಿ ಬ್ಯಾಳೆ ಹುಳಿ; ನಮ್ಮಲ್ಲಿ ಮೀನುಸಾರಿಗೆ ಮೀನ್ಹುಳಿ ಎಂದೇ ಹೆಸರು. ‘ಮೀನ್ಹುಳಿ ಸಂದ್ ಸಂದೀಗೆಲ್ಲ ಇಳಿ’ ಎಂದು ಗಾದೆಯೇ ಇದೆ. ಬೇಳೆಗಳಲ್ಲಿ ಸಪ್ಪನ ಬ್ಯಾಳಿ ಹುಳಿ ಬ್ಯಾಳಿ ಖಾರ ಬ್ಯಾಳಿ ಗಟ್ಟ ಬ್ಯಾಳಿ. ಇವುಗಳಲೆಲ್ಲ ಆಂಧ್ರದವರ ಪಪ್ಪುವೇ ಉತ್ತಮ. ಒಮ್ಮೆ ‘ಹಳ್ಳಬಂತುಹಳ್ಳ ಓದುತ್ತಿದ್ದೆ. ಅಲ್ಲಿ ಗುರುಗಳಿಗೆ ಬಡಿಸುವ ಶ್ರೀಮದ್ ಬ್ಯಾಳಿಹುಳಿಯ ಪ್ರಸ್ತಾಪವಿತು. ಲೇಖಕರಿಗೆ ಕರೆ ಮಾಡಿ ‘ಬ್ಯಾಳಿಹುಳಿಯ ರುಚಿ. ಮ್ಲೇಚ್ಛನಾದ ನಾನು ಸವಿಯಬಹುದೇ? ಎಂದೆ. ಅದಕ್ಕವರು ‘ಸಂತೋಷವಾಗಿ ಬನ್ನಿ ಎಂದರು. ಹೋದೆ. ಉಂಡೆ. ಕಥನದಲ್ಲಿ ವರ್ಣಿತವಾಗಿರುವಷ್ಟು ಅಮೋಘವಾಗಿರಲಿಲ್ಲ. ಕಲ್ಪನೆಯ ಉಪ್ಪುಹುಳಿಖಾರಗಳಿಂದ ಹುಟ್ಟುವ ಕಲೆಯ ಮಾಂತ್ರಿಕತೆಯನ್ನು ವಾಸ್ತವವೆಂದು ನಂಬಿದ್ದು ನನ್ನ ತಪ್ಪಿರಬಹುದು ಅಥವಾ ಮೀನ್ಹುಳಿ ತಿಂದು ಕೆಟ್ಟಿರುವ ನನ್ನ ಜಿಹ್ವಾದೋಷವಿರಬಹುದು.

ಕೆಲವು ವಿಶಿಷ್ಟ ವ್ಯಕ್ತಿತ್ವವುಳ್ಳ ಸಾರುಗಳಿವೆ. ಉದಾಹರಣೆಗೆ ಗೊಡ್ಸಾರು. ಹುಣಿಸೆ ಹುಳಿ ಉಪ್ಪು, ಮೆಣಸಿನ ಹುಡಿ ಕಲಸಿ ಮಾಡುವ ಬಡವರ ಮೇಲೋಗರವಿದು. ಗಾಂಧೀಜಿಯಂತೆ ಸರಳವಾದ ಇದನ್ನು ಗೊಡ್ಡೆಂದೇಕೆ ಬೀಳುಗಳೆದರೊ ಕಾಣೆ. ಇನ್ನು ಉಪ್ಸಾರು. ಬೆಳ್ಳುಳಿ ಕೊತ್ತಂಬರಿ ಸೊಪ್ಪು ಸುಟ್ಟ ಮೆಣಸು ಜೀರಿಗೆ ಉಪ್ಪು ಹಾಕಿದ ಮಸಾಲೆಯನ್ನು ಅಗತ್ಯವಿದ್ದಷ್ಟು ಕಟ್ಟಿನೊಳಗೆ ಕಲಸಿಕೊಂಡು ತಿನ್ನುವ ಸ್ವಾತಂತ್ರ್ಯವಿರುವ ಏಕೈಕ ಡೆಮಾಕ್ರಟಿಕ್ ಸಾರಿದು. ನೋಡಲು ಮುಗ್ಧ. ಬಾಯಿಯೊಳಗಿಟ್ಟರೆ ಆಸಿಡ್ಡು. ಹೊಸಬರು ಹುಷಾರಾಗಿರಬೇಕು. ಮುಸುರೆಗೆ ಚೆಲ್ಲಬೇಕಾದ ಹಳೇ ಸಾರನ್ನು ಜಾಣೆಯರು ಕೂಡಿಸಿ ಕುದಿಸಿ ಒಗ್ಗರಣೆ ಕೊಡಲಾಗುವ ಸಾರಿಗೆ ಕೂಡ್ಸಾರೆಂದು ಹೆಸರು.

ಮುದುಕರನ್ನು ತಾರುಣ್ಯಕ್ಕೆ ತರುವ ಈ ಜಾದುವಿಗೆ ರೀಸೈಕಲ್ ಸಾರೆಂದೂ ಕರೆಯಬಹುದು. ಬಿಸೇ ರೊಟ್ಟಿಗಿದು ಒಳ್ಳೇ ಗೆಣೆಕಾರ. ನಾವು ಸಣ್ಣವರಿದ್ದಾಗ ರಾತ್ರಿಯೂಟದ ಹೊತ್ತಿಗೆ ಒಬ್ಬ ವ್ಯಕ್ತಿ-ಭಿಕ್ಷುಕನಲ್ಲ- ದೇವರ ಹೆಸರನ್ನು ಕೂಗುತ್ತ ಬೀದಿಯಲ್ಲಿ ಬರುತ್ತಿದ್ದ. ಗೃಹಿಣಿಯರು ಅವನನ್ನು ನಿಲ್ಲಿಸಿ, ಅವನ ಬಕೇಟಿಗೆ ಹಳೇಸಾರು ಸುರಿಯುತ್ತಿದ್ದರು. ಅದನ್ನಾತ ಕುದಿಸಿ ಬಡವರಿಗೆ ಹಂಚುತ್ತಾನೆಂದು ಪ್ರತೀತಿಯಿತ್ತು.

ಅವನ ಶರೀರ ಮಾತ್ರ ಕೂಡ್ಸಾರಿನ ಜೀವಸತ್ವಗಳಿಂದ ಥಳಥಳಿಸತ್ತಿತ್ತು. ನಮ್ಮಲ್ಲಿ ಬೀಳ್ಕೊಡಿಗೆ ಸಾರೊಂದಿದೆ. ನಂಟರಿಷ್ಟರು ವಾರ ಮುಗಿದರೂ ಝೇಂಡಾ ಕೀಳುವ ಸೂಚನೆ ತೋರದಾಗ ಮಾಡುವ ಕರಿಮೆಣಸಿನ ಅಥವಾ ಸಾದಾಬೇಳೆಯ ಸಾರಿದು. ಕೋಳಿ ಕುರಿ ಮೊಟ್ಟೆ ಮೀನು ಹುಳಾಹುಪ್ಪಟೆ ಎಲ್ಲ ಮುಗೀತು, ಇನ್ನು ಗಂಟುಕಟ್ಟಿ ಎಂಬ ಸ್ಪಷ್ಟ ಸಂದೇಶವದು. ಅಷ್ಟಕ್ಕೂ ಹೊರಡಲಿಲ್ಲವೆಂದರೆ ಖಾರವಾದ ಚಟ್ನಿಗಳು ಶುರುವಾಗುತ್ತವೆ. ಸಾರೂ ಒಂದು ಸಂಕೇತ ಭಾಷೆ.

ಆಹಾರದಲ್ಲಿ ವೈವಿಧ್ಯ ಸೃಷ್ಟಿಸಿರುವುದು ರೊಟ್ಟಿ ಮುದ್ದೆಗಳಲ್ಲ, ಸಾರು. ಲೆಕ್ಕದಲ್ಲಿ ಅದಕ್ಕೆ ಸ್ವತಂತ್ರ ವ್ಯಕ್ತಿತ್ವವಿಲ್ಲ-ಪಕ್ಕವಾದ್ಯದವರಂತೆ. ಆದರೆ ವ್ಯಂಜ್ಯನಗಳಿಲ್ಲದೆ ಸ್ವರ ತಬ್ಬಲಿಯಾಗುವಂತೆ, ಸಾರಿಲ್ಲದೆ ಮುದ್ದೆ ಅನ್ನ ಮೂಸುವರ್ಯಾರು? ಸಾರೇನು ಎಂಬುದರ ಮೇಲೆಯೇ ಊಟದ ಮಹತ್ವ. ಮೀನು, ಕೋಳಿ, ಕಳಲೆ, ಅಣಬೆ, ಅವರೆ, ಮೊಳೆಹುರುಳಿ ಸಾರಿದ್ದರೆ ಮುದ್ದೆ ನೆಪಮಾತ್ರ. ಒಂದೇ ಸಾರು, ಪ್ರದೇಶ ಜಾತಿ ಕುಟುಂಬವಾರು ವಿಭಿನ್ನವಾಗಬಲ್ಲದು. ಕರಾವಳಿಯಲ್ಲಿ ಬ್ಯಾರಿ ಬಂಟ ಕೊರಗ ಮೊಗವೀರ ಗೌಡಸಾರಸ್ವತರ ಮೀನ್ಸಾರಿಗೆ ಬೇರೆ ರುಚಿಯಿದೆ. ಈಚೆಗೆ ರಾಗಿಮುದ್ದೆ- ನಾಟಿಕೋಳಿ ಸಾರಿನ ಹೋಟೆಲು ಜನಪ್ರಿಯವಾಗಿವೆ. ಕೇರಳಾಪುರ ಹೋಟೆಲುಗಳ ಬೋಟಿಸಾರು ತಲೆಕಾಲ್ಸಾರು ಉತ್ಕೃಷ್ಟ. ಕೋಳಿಸಾರುಗಳ ಸ್ಪರ್ಧೆಯಿಟ್ಟರೆ ದೇವನಹಳ್ಳಿಯ ನನ್ನ ಮಿತ್ರನಿಗೆ ಪ್ರಥಮ ಬಹುಮಾನ ಸಲ್ಲಬೇಕು. ವಿದೇಶದಲ್ಲಿರುವ ಆತ ಹಿಂತಿರುಗುವುದನ್ನು ಇಡೀ ಕುಟುಂಬ ರಾಮನಿಗೆ ಶಬರಿ ಕಾದಂತೆ ಕಾಯುತ್ತದೆ- ಕೋಳಿಸಾರು ಮಾಡಿಸಲು. ಎರಡನೇ ಬಹುಮಾನ ರಾಮದುರ್ಗದ ಐಬಿಯ ರಜಾಕನಿಗೆ. ಕೆಲವು ಸಾಹಿತಿಗಳು ರಜಾಕನ ಕೈಮಾಟ ಸವಿಯಲೆಂದೇ ಬೆಳಗಾವಿ ಸೀಮೆಗೆ ಭಾಷಣಕ್ಕೆ ಹಾಕಿಸಿಕೊಂಡು ಹೋಗುತ್ತಿದ್ದದುಂಟು.

ನಾನು ಹೋದೆಡೆಯೆಲ್ಲ ಆಯಾ ಸೀಮೆಯ ಸಾರನ್ನು ಸವಿಯುತ್ತೇನೆ. ಒಮ್ಮೆ ದೊಡ್ಡಬಳ್ಳಾಪುರ ಭಾಗದ ಹಳ್ಳಿಯಲ್ಲಿದ್ದೆ. ಸಹಪಾಠಿಯ ತಾಯಿ, ಹಳಗಾಲದ ಮುದುಕಿ, ಅವರೆಕಾಳಿನ ಸಾರನ್ನು ಕುದಿಸುತ್ತಿದ್ದರು. ಪರಿಮಳ ಸಮ್ಮೋಹಕವಾಗಿತ್ತು. ನಾನು ಲೋಟ ಹಿಡಿದು ‘ಅಮ್ಮಾ, ಸ್ವಲ್ಪ ಕೊಡುವಿರಾ? ಎಂದೆ. ‘ಅಯ್ಯೋ ಸ್ವಾಮಿ, ನೀವು ಕೇಳೋದು ಹೆಚ್ಚೊ ನಾನು ಕೊಡೋದು ಹೆಚ್ಚೊ? ಬಡವರ ಮನೆ ಸಾರು. ಒಂದಿದ್ದರೆ ಒಂದಿಲ್ಲ ಎಂದು ಸಂಕೋಚಪಡುತ್ತ ಎರಡು ಸೌಟು ಹೊಯ್ದುಕೊಟ್ಟರು. ಕುಡಿದೆ. ಬೇನೆಗಳೆಲ್ಲ ಬಿಟ್ಟೋಡಿದವು. ಸಾರು ಜಿಹ್ವಾನಂದದ ವಸ್ತುವಲ್ಲ. ಸಾರೋಪತಿ ಮದ್ದು ಕೂಡ. ನಮ್ಮ ಅಡುಗೆಮನೆಗಳು ಯಾವತ್ತೂ ದವಾಖಾನೆಗಳಂತೆ ಕಾರ್ಯನಿರ್ವಹಿಸಿವೆ.

ಕರಿಮೆಣಸಿನ ಸಾರಿದ್ದರೆ ನೆಗಡಿ ಗಡಿಪಾರು; ಜ್ವರಕ್ಕೆ ಒಣಸೀಗಡಿಯೊ ಕರಿಮೀನೊ ಹುರಿದು ಹಾಕಿದ ಸಪ್ಪನ್ನಬೇಳೆ; ಬಾಣಂತಿಗೆ ಏಡಿಯ ಕಾಡ; ಕೈಕಾಲು ಮುರಕೊಂಡವರಿಗೆ ಕಾಲ್ಸೂಪು. ಕಾಲ್ಸೂಪೆಂದಾಗ ನೆನಪಾಯಿತು. ಹಿಂದೊಮ್ಮೆ, ನೆರೆಮನೆಯವರು ಬೈಕ್ ಅಪಘಾತದಲ್ಲಿ ಕಾಲುಮುರಿದು ಆಸ್ಪತ್ರೆ ಸೇರಿದ್ದರು. ನೋಡಲು ಹೋದಾಗ ಬಾನು ಸುಮ್ಮನಿರದೆ ‘ಕಾಲುಸೂಪು ಕುಡೀತೀರಾ? ಎಂದಳು. ತಿನ್ನುಣ್ಣದ ಮನೆಯಿಂದ ಬಂದ ಅವರು ದೈನೇಸಿ ಸ್ವರದಲ್ಲಿ ‘ಕಾಲು ಸರಿ ಆಗೋದಾದರೆ ವಿಷವಾದರೂ ಕುಡಿತೀನಿ ಮೇಡಂ ಎಂದರು. ಬಾನು ಮಾಡಿಕೊಟ್ಟಳು. ರುಚಿ ಸರಿಯಾಗಿಯೇ ಏರಿತು. ತತ್ಪರಿಣಾಮ, ಕಾಲು ನೆಟ್ಟಗಾದ ಕೂಡಲೇ ಶ್ರೀಯುತರು ಸೂಪುಬೇಟೆ ಆರಂಭಿಸಿದರು. ‘ಇಷ್ಟು ದಿನ ಕುಡೀದೆ ಜೀವನ ವ್ಯರ್ಥ ಮಾಡಿಕೊಂಡೆ ಸಾರ್ ಎನ್ನುತ್ತಿದ್ದರು. ಕಾಲ್ಸೂಪು ಇದ್ದರೆ ಮಾತ್ರ ಹೋಟೆಲೊಳಗೆ ಕಾಲಿಡುತ್ತಿದ್ದರು.

ಸೂಪಿನ ದೆಸೆಯಿಂದ ಮತ್ತೆಲ್ಲಿ ಮತ್ತೆಲ್ಲಿ ಬೈಕು ಅಪಘಾತಕ್ಕೆ ಈಡಾಗುವುದೊ ಎಂದು ನಮಗೆ ಆತಂಕ. ನಾನು ಅತ್ಯುತ್ಕೃಷ್ಟ ಕಾಲುಸೂಪನ್ನು ಹೈದರಾಬಾದಲ್ಲಿ ಸೇವಿಸಿದ್ದೇನೆ. ದೊಡ್ಡ ಕಡಾಯಿಯಲ್ಲಿ ಸುಟ್ಟು ಚೊಕ್ಕಗೊಳಿಸಿದ ಕುರಿಕಾಲನ್ನು ಮಸಾಲೆಜತೆ ಹಾಕಿ ರಾತ್ರಿಯಿಡಿ ಕುದಿಸುವರು. ಬೆಳಿಗ್ಗೆ ಪಿಂಗಾಣಿ ಬಟ್ಟಲಿನಲ್ಲಿ ಹಬೆಹಬಿಸುವ ಸೂಪಿನ ಮೇಲೆ ಕೊಚ್ಚಿದ ಕೊತ್ತಂಬರಿಸೊಪ್ಪು ಪುದಿನ ಉದುರಿಸಿ ಕೊಡುವರು. ಒಂದು ಬಟ್ಟಲು ಕುಡಿದರೆ ಎರಡು ದಿನ ಆಗಸದಲ್ಲಿ ಹಾರಾಡಿಕೊಂಡಿರಬಹುದು.

ನನ್ನ ಪ್ರಕಾರ ರೊಟ್ಟಿಸೀಮೆಯವರಿಗೆ ಒಳ್ಳೆಯ ಸಾರು ಸಿದ್ಧಿಸಿಲ್ಲ. ಅವರ ಬೇಳೆಕಟ್ಟು ನೀರಸ. ಪಲ್ಯಗಳು ಶ್ರೇಷ್ಠ. ಎಣಗಾಯಿಯಂತೂ ಗ್ರೇಟ್. ಅಮೃತಸಮಾನ ಸಾರುಗಳನ್ನು ಸೃಷ್ಟಿಸುತ್ತಿರುವ ಕೀರ್ತಿಮಾತ್ರ ಅನ್ನಮುದ್ದೆಯ ಸೀಮೆಗೇ ಸಲ್ಲುತ್ತದೆ. ಮುದ್ದೆಗೆ ಹಸಿಗಾಳಿನ ಸಾರು ಹೇಳಿಮಾಡಿಸಿದವು. ಮಾಗಡಿ ಸೀಮೆಯ ನನ್ನ ಅಭಿಮಾನಿಗಳು ಚಳಿಗಾಲ ಬಂದರೆ ‘ಸಾ, ಸೊಗಡಕಾಯಿ ಬಂದವೆ. ಹಿಸಕಿದವರೆ ಸಾರು-ಮುದ್ದೆ ತಿನ್ನೋಣ ಬನ್ನಿ ಎಂದು ಆಹ್ವಾನಿಸುವರು. ‘ಹಂಪೆಯಿಂದ ಪ್ರೊಫೆಸರ್ ಬಂದವರೆ ಅವರೆಸಾರು ತಿನ್ನೋಕೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ, ವಾರಕಾಲ ಅವರೆಯ ವಿವಿಧ ಪದಾರ್ಥಗಳನ್ನು ಬಡಿಸುವರು. ಸಾಹಿತ್ಯದ ಪ್ರಯೋಜನಗಳಲ್ಲಿ ಯಶಸ್ಸು ಹಣ ಕೀರ್ತಿ ಎಂದೆಲ್ಲ ಮೀಮಾಂಸಕರು ಪಟ್ಟಿ ಮಾಡಿದ್ದೇನೋ ಸರಿ. ಆದರೆ ಅದರಲ್ಲಿ ಸಾರನ್ನು ಸೇರಿಸದೆ ಲೋಪವೆಸಗಿದರು.

ಪ್ರತಿ ಪ್ರದೇಶವೂ ಒಂದೊಂದು ಸಾರಿಗೆ ಹೆಸರಾಗಿದೆ. ಕೊಳ್ಳೆಗಾಲವು ಕಡಲೆಕಾಳ ಕೂಟಿಗೆ; ಉಡುಪಿ ಬೂದುಗುಂಬಳ ತುಂಡಿನ ಮಜ್ಜಿಗೆ ಹುಳಿಗೆ. ತಮಿಳುನಾಡಿನವರ ಹಾಗೆ ರಸಂ ಮಾಡಲು ನಮಗೆ ಬಾರದು; ನಾನು ಅಮೋಘ ಬಸ್ಸಾರು ಮೆದ್ದಿರುವುದು ಮದ್ದೂರಿನಲ್ಲಿ- ಮಳವಳ್ಳಿ ಕ್ರಾಸಲ್ಲಿರುವ ತಟ್ಟಿ ಹೋಟೆಲಲ್ಲಿ; ಐದಾರು ಜಾತಿಯ ಕಾಳುಹಾಕಿ ಮಾಡುವ ಕೋಲಾರ ಸೀಮೆಯ ಸಾರಿನ ಅನನ್ಯತೆಯನ್ನು ಯಾರೂ ಕಸಿಯಲಾರರು; ಮಲೆನಾಡಿನ ಹುಳಿಮಾವಿನ ಸಾರಿದ್ದರೆ ಪಾವಕ್ಕಿಯವನು ಅಚ್ಚೇರಿಗೆ ಬಡ್ತಿ ಪಡೆಯುವನು. ನಮ್ಮ ಮನೆತನದ ಹುಚ್ಚೆಳ್ಳುಹುಳಿಯಂತೂ ಲೋಕೋತ್ತರ.

ಹುಚ್ಚೆಳ್ಳ್ಳನ್ನು ಸಣ್ಣಗೆ ಹುರಿದು ರುಬ್ಬಿ ರಸತೆಗೆದು, ಸುಟ್ಟ ಬದನೆ ಹಸಿಟೊಮೊಟೊ ಹಸಿಮೆಣಸಿನಕಾಯಿಗಳನ್ನು ಕಿವುಚಿ, ಬೆಳ್ಳುಳ್ಳಿ ಜೀರಿಗೆ ಕೊತ್ತಂಬರಿಸೊಪ್ಪು ನುರಿದು, ಹಸಿ ಈರುಳ್ಳಿ, ಸೌತೆ ತುಂಡು, ಹುರಿಗಡಲೆಕಾಳು ಹಾಕಿ ಸಿದ್ಧಪಡಿಸುವ ಜೀವಾಮೃತವಿದು. ಇಡ್ಲಿ– ಸಾಂಬಾರಿನ ವಿಷಯಕ್ಕೆ ಬಂದರೆ ಎನ್ಎಂಎಚ್ ಹೋಟೆಲಿಗೆ ನನ್ನ ಅಮೂಲ್ಯಮತ. ಅಲ್ಲಿ ದುಂಡನೆಯ ಸಣ್ಣೀರುಳ್ಳಿ ಹಾಕಿದ ಪರಮಾಯಿಶಿ ಸಾಂಬಾರು ತಯಾರಾಗುತ್ತದೆ. ಲಾಲ್ಬಾಗಿನಲ್ಲಿ ವಾಕಿಂಗ್ ಮುಗಿಸಿ ದಿನಪತ್ರಿಕೆಯನ್ನು ಗುರಾಣಿಯಂತೆ ಹಿಡಿದು ಅಲ್ಲಿಗೆ ಬರುವ ಬಹುತೇಕರು ಸಾಂಬಾರು ಪ್ರಿಯರು. ಮಾಣಿಗಳಾದರೂ ಎಷ್ಟು ಉದಾರ! ಸಿಂಗಲ್ ಇಡ್ಲಿ ಕೇಳಿದರೂ ಎರಡು ಬಟ್ಟಲು ಮುಂದಿಡುವರು; ನಮ್ಮ ಸಾಮರ್ಥ್ಯಕ್ಕೆ ಅನುಸಾರ ಜಗ್ಗಿನಲ್ಲಿ ತಂದು ಸುರಿವರು- ಅವರ ಹೊಟ್ಟೆ ತಣ್ಣಗಿರಲಿ. ನಾನು ‘ನಿಮ್ಮ ತಟ್ಟೆಯನ್ನು ನೀವೇ ತೊಳೆಯಬೇಕು ಹೋಟೆಲಿಗೆ ಹೋದೇನು; ‘ಎಕ್ಸ್ಟ್ರಾ ಸಾಂಬಾರಿಗೆ ಪ್ರತ್ಯೇಕ ಚಾರ್ಜು ಹೋಟೆಲಿಗೆ ಕಾಲಿಡಲಾರೆ.

ತಂಜಾವೂರಿಗೆ ಹೋದರೆ ಅಲ್ಲಿನ ಊಟ ಮರೆಯಬೇಡಿ ಎಂದು ಯಾರೊ ಹೇಳಿದ್ದರು. ನಾವು ಹೋಗಿದ್ದ ಹೋಟೆಲಿನಲ್ಲಿ ಸಾಂಬಾರು ಬಡಿಸುವುದಕ್ಕೆಂದೇ ಬಕೇಟು ಕೊಟ್ಟು ವೃದ್ ಧಮಾಣಿಯನ್ನು ನೇಮಿಸಲಾಗಿತ್ತು. ನಾನು ಸಾಂಬಾರ ಸುವಾಸನೆಗೆ ಹೂಗಂಪಿಗೆ ಮನಸೋತ ಭ್ರಮರದಂತೆ ಅಮಲೇರಿ, ಬಾಳೆಲೆಯಲ್ಲಿ ಚದುರಿದ್ದ ಅನ್ನವನ್ನು ಲಗುಬಗೆಯಿಂದ ರಾಶಿಮಾಡಿ, ಹೆಚ್ಚುಸಾರು ಹಿಡಿವಂತೆ ಕುಳಿ ನಿರ್ಮಿಸಿಕೊಂಡೆ. ಆತ ಎರಡು ಸೌಟು ಬಡಿಸಿ ಹೊರಡುತ್ತಿರಲು, ಕರೆದು ಇನ್ನೊಂದು ಸೌಟು ಹಾಕೆಂದೆ. ‘ಮೊದಲ್ ಅದೈ ಸಾಪಾಡ್ರಾ ಎಂದು ಸರ್ರನೆ ರೇಗಿದ. ‘ನಾವು ಮಾಡುವುದನ್ನು ಗಂಧರ್ವರು ಮಾಡಿದರು ಎಂಬಂತೆ ಬಾನುವಿಗೆ ಆನಂದ. ಹೋಟೆಲ ಹೆಸರೂ ಆನಂದಭವನ! ಆದರೆ ಜತೆಯಲ್ಲಿದ್ದ ಕರುಣಾಳು ಗೆಳೆಯರು, ಕನ್ನಡ ಲೇಖಕನ ಮಾನ ತಮಿಳುನಾಡಲ್ಲಿ ಹೋಯ್ತೆಂದು ಪೇಚಾಡಿದರು. ಎಷ್ಟೊ ಸಾರಾಪಮಾನ ಕಂಡಿರುವ ನನಗೇನೂ ಬೇಸರವಾಗಲಿಲ್ಲ. ಗಂಟೆ ಮೂರಾಗಿತ್ತು. ವೃದ್ಧಮಾಣಿ ಹಸಿದಿದ್ದನೆಂದು ಕಾಣುತ್ತದೆ. ಮನೆಯಲ್ಲಿ ಏನಾಗಿತ್ತೊ, ಅದರ ಸಂಕಟ ನನ್ನ ಮೇಲೆ ಹರಿಸಿದ. ಪರರ ಸಂಕಟ ಹಂಚಿಕೊಳ್ಳುವುದೂ ಪುಣ್ಯದ ಕೆಲಸವೇ.

ಬಾಳಿನ ಸಾರ್ಥಕತೆ ರುಚಿಕಟ್ಟಾದ ಅಡುಗೆ ಮಾಡುವುದರಲ್ಲಿದೆ ಎಂಬ ನಂಬುಗೆ, ಸ್ತ್ರೀಚೈತನ್ಯವನ್ನೇ ಕಟ್ಟಿಹಾಕಿದೆ, ನಿಜ. ಹಾಗೆಂದು ಪುರುಷರು ಹಿಂಬಿದ್ದಿಲ್ಲ. ನಿರ್ದಶನಕ್ಕೆ ನಮ್ಮೂರ ಪರಣ್ಣ. ಅವನ ದೆಸೆಯಿಂದ ಲಗ್ನಪತ್ರಿಕೆ ನೀಡಬಂದವರಿಗೆ ಅಡಿಗೆ ಯಾರದು ಎಂದು ವಿಚಾರಿಸುವ ಪದ್ಧತಿ ಹುಟ್ಟಿದೆ. ಪರಣ್ಣನದು ಎಂದರೆ ಮನೆಯಲ್ಲಿ ಹೆಣ ಬಿದ್ದರೂ ಲಗ್ನದೂಟ ತಪ್ಪಿಸುವುದಿಲ್ಲ; ಒಮ್ಮೆ ಈ ನಳಮಹಾಶಯನನ್ನು ಕಾಣಲೆಂದೇ ಪಾಕಶಾಲೆಗೆ ಹಾಜರಿಕೊಟ್ಟೆ. ಸಾರು ಕತಕತಿಸುತ್ತಿತ್ತು. ಕಡಾಯಿಯ ಬದಿಗೆ ಒಬ್ಬರು ಸಣ್ಣಬಕೆಟನ್ನು ಹಿಡಿದು ನಿಂತಿದ್ದರು. ಪರಣ್ಣ ಅದಕ್ಕೆ ಸಾರು ತುಂಬಿಸಿಕೊಟ್ಟು ಅವರ ಕಾಲುಮುಟ್ಟಿ ನಮಸ್ಕರಿಸಿದ.

‘ಇದೇನಪ್ಪಾ? ಎಂದೆ. ‘ಸಾರ್, ದಿಕ್ಕಿಲ್ಲದ ನನ್ನನ್ನು ಬೆಳೆಸಿದ ಗುರುಗಳು. ಎಲ್ಲೇ ಅಡುಗೆ ಮಾಡಲಿ, ಅವರಿಗೆ ಮೀಸಲು ಸಲ್ಲಿಸಬೇಕು. ಆಮ್ಯಾಲೇ ನಿಮ್ಮ ಊಟ. ಅವರ ಆಶೀರ್ವಾದದಿಂದ ಇಲ್ಲಿಮಟ ಅಡುಗೆ ಕೆಟ್ಟಿಲ್ಲ ಎಂದ. ಈ ಸಾರೊಪ್ಪಂದಕ್ಕೆ ಅಚ್ಚರಿಪಡುತ್ತ ಗುರುಗಳತ್ತ ಕಣ್ಣುಹಾಯಿಸಿದೆ, ಹೊಲಗಳ ಮೇಲೆ ಅಡ್ಡಾಡಿ ಮೇದ ಬಸವನ ಹಾಗೆ ಸುಪುಷ್ಠವಾಗಿದ್ದರು. ಹೊಟ್ಟೆಯೂ ಬಂದಿತ್ತು. ನನ್ನ ಸಂಶೋಧನೆ ಪ್ರಕಾರ, ಯಾವ ಮನೆಯಲ್ಲಿ ಸದಸ್ಯರ ಹೊಟ್ಟೆ ಅನಗತ್ಯವಾಗಿ ಮುಂದೆ ಬಂದಿದೆಯೊ, ಅಲ್ಲಿ ರುಚಿಕರ ಸಾರು ಉತ್ಪಾದನೆ ಆಗುತ್ತಿರುತ್ತದೆ. ಅನ್ನ-ಮುದ್ದೆಯ ಪ್ರಮಾಣ ನಿರ್ಧರಿಸುವುದೇ ಅದು. ಗೊರೂರರು ಹೇಳಿದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸಬೇಕು.

ಜಾತ್ರೆಯ ದಿನ. ಮೊದಲಪಂಕ್ತಿ ಎಷ್ಟು ಹೊತ್ತಾದರೂ ಏಳುವುದಿಲ್ಲ. ಜನ, ಸ್ಪರ್ಧೆಯ ಮೇಲೆ ಅನ್ನ ಬಡಿಸಿಕೊಳ್ಳುತ್ತ ಸಾರು ಹುಯಿಸಿಕೊಂಡು ಬಡಿಯುತ್ತಿರುತ್ತಾರೆ. ಯಜಮಾನರಿಗೆ ಅನಾಹುತದ ಕಾರಣ ಹೊಳೆಯುತ್ತದೆ. ‘ಎಲಾ ಓಡಿರೊ, ಹೊಳೆಯಿಂದ ಅಡ್ಡೆ ನೀರು ತನ್ನಿ ಎಂದು ಕೂಗುತ್ತಾನೆ. ಪಂಕ್ತಿ, ಅನ್ಯಮಾರ್ಗವಿಲ್ಲದೆ ಎಲೆ ಬಿಟ್ಟೇಳುತ್ತದೆ. ಶ್ರೇಷ್ಠಸಾರಿನ ಕಲೆ ಹೊಸ ತಲೆಮಾರಿಗೆ ದಾಟುತ್ತಿದೆಯೊ ಚರಿತ್ರೆಯ ಪುಟ ಸೇರುತ್ತಿದೆಯೊ ಎಂದು ನನಗೆ ಶಂಕೆಯಿತ್ತು. ನನ್ನ ಶಂಕೆಗೆ ಸಮಾಧಾನ, ಹಿತ್ತಲಕಡೆ ನಡೆಯುವ ಗೃಹಿಣಿಯರ ಮಾತುಕತೆಯಲ್ಲಿ ಸಿಕ್ಕಿತು. ‘ಏನ್ರೀ ಸಾರಿವತ್ತು? ಎಂಬ ಒಂದಂಕದ ಪ್ರಶ್ನೆಗೆ ಉತ್ತರ ಒಂದು ಪುಟವಿರುತ್ತದೆ. ಮೊದಮೊದಲು ಇದನ್ನು ದೇಶದ ವಿದ್ಯಮಾನಗಳಲ್ಲಿ ಆಸಕ್ತಿಯಿಲ್ಲದ ಮುಗ್ಧ ಹೆಂಗಳೆಯರ ಕಾಡುಹರಟೆಯೆಂದು ಭಾವಿಸಿದ್ದೆ.

ಪಾಕಜ್ಞಾನ ಹಂಚಿಕೊಳ್ಳುವ ಕ್ರಮವಿದೆಂದು ನಂತರ ಅರಿವಾಯಿತು. ಸಾರುಪರಂಪರೆ ಅಬಾಧಿತವಾಗಿದೆ. ಮಾತ್ರವಲ್ಲ, ತನ ಮಾಯಾಜಾಲದಲ್ಲಿ ಜನರನ್ನು ಸಿಲುಕಿಸಿ ಆಡುವಾಡುತ್ತಿದೆ. ಖ್ಯಾತ ಲೇಖಕರೊಬ್ಬರು ವಿದೇಶ ಪ್ರವಾಸದಿಂದ ಸ್ವದೇಶಕ್ಕೆ ಇಳಿದೊಡನೆ ಒಂದು ಹೋಟೆಲಿಗೆ ಹೋಗಿ ಸಾಂಬಾರು ಕುಡಿದೆ ಎಂದು ಬರಕೊಂಡಿದ್ದಾರೆ. ಅಚ್ಚರಿಯಲ್ಲ. ಸರಾಯಿಯಂತೆ ಸಾರೂ ಒಂದು ವ್ಯಸನ.

ನಾವೇ ಒಮ್ಮೆ ಹೆಪ್ಪುಗೊಳಿಸಿದ ಹುರುಳಿಕಟ್ಟನ್ನು ವಿದೇಶಕ್ಕೆ ಒಯ್ದಿದ್ದೆವಲ್ಲ? ಏರ್ಪೋರ್ಟಿನಲ್ಲಿ ಅಧಿಕಾರಿಗಳು ಬಾಂಬೆಂದು ಶಂಕಿಸಿದರು. ‘ನಿಮ್ಮ ಊಟ ಸಪ್ಪೆ. ಅದಕ್ಕಾಗಿ ತಂದಿದ್ದೇವೆ ಎಂದು ಮನವರಿಕೆ ಮಾಡಲು ಸೋತೆವು. ಕಡೆಗೆ ನಾನೆಂದೆ: ‘ನಮ್ಮ ಸಾರಿಗೆ ಪ್ರವೇಶವಿಲ್ಲದಿದ್ದರೆ ನಮಗೂ ಬೇಡ. ಅಧಿಕಾರಿಗಳು ಬೆರಗಾಗಿ ಬಾಟಲಿಯಲ್ಲಿರುವ ಕೆಂಪು ದ್ರವ ತುಸು ಸೇವಿಸಲು ಸೂಚಿಸಿದರು. ನಾನು ಚಕಚಕ ನಾಲ್ಕು ಚಮಚೆ ಭಕ್ಷಿಸಿದೆ-ನನ್ನಾಕೆ ತಡೆಯದಿದ್ದರೆ ಬಾಟಲಿ ಖಾಲಿ ಮಾಡಲೂ ಸಿದ್ಧನಾಗಿದ್ದೆ. ಅಧಿಕಾರಿಗಳ ಶಂಕೆ ನಿವಾರಣೆಯಾಯಿತು. ಪ್ರವೇಶ ಸಿಕ್ಕಿತು. ಸಾರಿನಿಂದ ನಾಡಿನ ಸ್ವಾಭಿಮಾನ ಉಳಿಯಿತು.

ಸಾರೆಂಬ ಜೀವರಸ ಮನೆಗಳಲ್ಲಿ ಹುಟ್ಟಿಸಿದ ವ್ಯಾಜ್ಯಗಳ ಹರಿಸಿರುವ ಪ್ರೀತಿಯ ಲೆಕ್ಕವಿಟ್ಟವರಾರು? ಈಗಲೂ ಮಕ್ಕಳು ಮನೆಗೆ ಬರುವಾಗ ನಾವಿರುವಷ್ಟು ದಿನ ಇಂತಿಂಥ ಸಾರೇ ಮಾಡಬೇಕೆಂದು ತಾಯಿಗೆ ಪೂರ್ವಶರತ್ತು ವಿಧಿಸುವರು. ನಾನಾದರೂ ಊರಿಗೆ ಹೋದರೆ ನಮ್ಮ ವಂಶದ ಕೀರ್ತಿ ಪತಾಕೆ ಹಾರಿಸಿರುವ ಸಾರನ್ನೆಲ್ಲ ಅಕ್ಕಂದಿರು ಮಾಡುವರು. ನಾನು ಹಪಹಪಿಸಿ ಉಣ್ಣುವಾಗ ಬಾನು ಲಂಕಾದಹನ ನೋಟದಲ್ಲಿ ನೋಡುವಳು. ನೋಡಲಿ. ಸಾರುಶರಣನಾರಿಗೂ ಅಂಜುವನಲ್ಲ. ನನಗನಿಸುತ್ತದೆ: ನಾಡ ಹೆಮ್ಮೆಯಾಗಿ ಜೋಗದಸಿರಿ ಸಹ್ಯಾದ್ರಿ ಹೇಳುವುದರ ಜತೆ ಸಾರೂ ನಮ್ಮ ಅಸ್ಮಿತೆಯೆಂದು ಘೋಷಿಸಬೇಕೆಂದು. ನನಗೇನಾದರೂ ನಿಸಾರರ ಗೀತೆ ತಿದ್ದುವುದಕ್ಕೆ ಹೇಳಿದರೆ ‘ನಿತ್ಯಅಡುಗೆ ಮನೆಗಳಲ್ಲಿ ಜನಿಸುವ ಸಹಸ್ರ ಸಾರುಗಳಲ್ಲಿ ನಿತ್ಯೋತ್ಸವ ಎಂದು ಸೇರಿಸಿಯೇನು. ಇದರಿಂದ ಸ್ವರ್ಗದೂಟದಲ್ಲಿ ಸಾರಿಲ್ಲದೆ ಪರಿತಪಿಸುತ್ತಿರುವ ಎಷ್ಟೋ ಆತ್ಮಗಳಿಗೆ ಸಮಾಧಾನವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.