ಇಂದು ಶಿಕ್ಷಕರ ದಿನ. ವಿದ್ಯಾರ್ಥಿಗಳು ಹಾಗೂ ಸಮಾಜಕ್ಕಾಗಿ ತನು ಮನ ಧನವನ್ನು ಸಮರ್ಪಿಸಿದ ಶಿಕ್ಷಕರ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ನಮಗೆ ದಾರಿ ತೋರಿದ ಗುರುಗಳನ್ನು ಸ್ಮರಿಸುವ ಈ ಹೊತ್ತಿನಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಕೆಲವು ಕೆಲವು ಶಿಕ್ಷಕರ ಪರಿಚಯ ಇಲ್ಲಿದೆ..
––––––
ಕೊಪ್ಪಳ: ಸಾಕಷ್ಟು ಹಣ ಪಡೆದು ಟ್ಯೂಷನ್ ನೀಡುವ ಹಾವಳಿ ಹೆಚ್ಚಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ 75 ವರ್ಷ ವಯಸ್ಸಿನ ಅಜ್ಜ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನೂರಿನ ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅವರ ಹೆಸರು ಲಿಂಗಪ್ಪ ಬೇವೂರು. ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಮುಸಲಾಪುರ ಗ್ರಾಮದವರು. ಓದಿದ್ದು ಆರನೇ ತರಗತಿ ಮಾತ್ರ. ಹಾಗಿದ್ದರೂ 19 ವರ್ಷಗಳಿಂದ ಪುಟ್ಟ ಮಕ್ಕಳಿಗೆ ಮೇಷ್ಟ್ರಾಗಿದ್ದಾರೆ. ಪ್ರತಿ ವರ್ಷವೂ 30ರಿಂದ 40 ಮಕ್ಕಳು ಅವರ ಬಳಿ ಟ್ಯೂಷನ್‌ಗೆ ಬರುತ್ತಾರೆ. ಹೀಗಾಗಿ ಲಿಂಗಪ್ಪ ಅವರ ಟ್ಯೂಷನ್, ‘ಅಜ್ಜನ ಶಾಲೆ’ ಎಂದೇ ಜನಜನಿತವಾಗಿದೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ತರಗತಿ ನಡೆಯುತ್ತದೆ.
ನಾಲ್ಕು ಜನ ಮಕ್ಕಳಿರುವ ಲಿಂಗಪ್ಪ ಅವರಿಗೆ 15 ಎಕರೆ ಜಮೀನು ಇದೆ. ದೇಹದಲ್ಲಿ ಕಸುವು ಇರುವವರೆಗೂ ಕೃಷಿ ಕಾಯಕ ಮಾಡಿದ್ದ ಲಿಂಗಪ್ಪ, ಈಗ ಭೂಮಿಯನ್ನು ಮಕ್ಕಳಿಗೆ ಹಂಚಿ ತಮ್ಮ ಜೀವನಕ್ಕೆ ಬೇಕಾದಷ್ಟು ಹಣ ಸಂಗ್ರಹಿಸಿಟ್ಟುಕೊಂಡಿದ್ದಾರೆ. ತಮಗೆ ತಿಳಿದ ಜ್ಞಾನವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ವೃದ್ಧಾಪ್ಯದ ದಿನಗಳನ್ನು ಕಳೆಯುತ್ತಿದ್ದಾರೆ.
1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ 7ರಿಂದ 9.30ರ ತನಕ ಹಾಗೂ ಸಂಜೆ 5ರಿಂದ 7.30ರ ತನಕ ಪಠ್ಯ ಬೋಧನೆ, ಮಗ್ಗಿಗಳು, ಮಾಸಗಳು, ವರ್ಷ, ಋತುಗಳ ಮಾಹಿತಿ, ಪದಗಳ ಅರ್ಥ, ಬಿಟ್ಟಸ್ಥಳ ತುಂಬುವುದು, ಪ್ರಶ್ನೋತ್ತರ ಹೀಗೆ ಸಾಮಾನ್ಯ ಜ್ಞಾನ ಮತ್ತು ಪಠ್ಯಕ್ಕೆ ಅಗತ್ಯವಿರುವ ಮಾಹಿತಿಗಳನ್ನು ನೀಡುತ್ತಿದ್ದಾರೆ.
‘ಕೆಲ ವಿದ್ಯಾರ್ಥಿಗಳು ಮಾಸಿಕ ₹ 50, ₹ 30 ಹೀಗೆ ತಮ್ಮ ಶಕ್ತಿಗೆ ಅನುಗುಣವಾಗಿ ಕೊಡುತ್ತಾರೆ. ಕೆಲವರಿಗೆ ಕೊಡಲು ಆಗುವುದಿಲ್ಲ. ಮಕ್ಕಳು ಹಣ ಕೊಡಲಿ ಬಿಡಲಿ ನನ್ನ ಖುಷಿಗಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ’ ಎಂದು ಹೇಳುತ್ತಾರೆ ಲಿಂಗಪ್ಪ.
ಲಿಂಗಪ್ಪ ಬೇವೂರು
*****
ಬೇಲೂರು(ಹಾಸನ): ತರಗತಿಯಲ್ಲಿ ಪಾಠ ಮಾಡಿದರಷ್ಟೇ ಸಾಲದು, ಪ್ರಾಯೋಗಿಕ ಪಾಠದ ಮೂಲಕ ವ್ಯಾವಹಾರಿಕ ಜ್ಞಾನವನ್ನೂ ಹೇಳಿಕೊಡಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ತಾಲ್ಲೂಕಿನ ಮಾವಿನಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಏಕೈಕ ಶಿಕ್ಷಕಿ ಜಯಲಕ್ಷ್ಮಿ ಅವರು ಅದೇ ಕಾರಣದಿಂದ ಮಕ್ಕಳ ಮನಸ್ಸು ಗೆದ್ದಿದ್ದಾರೆ.
ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸಿ, ಕಲಿಕಾ ಉಪಕರಣಗಳ ಮೂಲಕ ವೈವಿಧ್ಯಮಯ ಆಟಗಳ ಮೂಲಕವೇ ಪಾಠ ಮಾಡಿ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ. 2021ರಲ್ಲಿ ಅವರು ವರ್ಗಾವಣೆಯಾಗಿ ಬರುವ ಮುನ್ನ ಶಾಲೆಯಲ್ಲಿ 8 ಮಕ್ಕಳಿದ್ದರು. ಈಗ 22 ಮಕ್ಕಳಿದ್ದಾರೆ.
ಶಾಲೆಯ ಎರಡು ಕೊಠಡಿಗಳಲ್ಲಿ ಒಂದು ಕೊಠಡಿಯ ಒಳಭಾಗಕ್ಕೆ ಸ್ವಂತ ಖರ್ಚಿನಲ್ಲಿ ಸುಣ್ಣ–ಬಣ್ಣ ಮಾಡಿಸಿ, ಮಕ್ಕಳ ಮನಸ್ಸನ್ನು ಸೆಳೆಯುವಂತೆ ಅತ್ಯಾಕರ್ಷಕ ಹಾಗೂ ವಿನೂತನ ಕಲಿಕಾ ಸಾಮಗ್ರಿಗಳೊಂದಿಗೆ ನಲಿಕಲಿ ಕೊಠಡಿ ಬಲವರ್ಧನೆ ಮಾಡಿದ್ದಾರೆ.
ಸಮುದಾಯ, ಪೋಷಕರು, ಎಸ್‌ಡಿಎಂಸಿಯವರ ಮೆಚ್ಚುಗೆಗೆ ಪಾತ್ರವಾಗಿರುವ ಶಿಕ್ಷಕಿಯು ಶಾಲೆಯ ಸುತ್ತ ರಕ್ಷಣಾ ಬೇಲಿ ಮಾಡಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಹೊಸ ಟ್ಯಾಂಕ್ ಅಳವಡಿಸಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಹಿರಿಗರ್ಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷ ಕೆಲಸ ಮಾಡಿದ ಸಂದರ್ಭದಲ್ಲೂ ಆಕರ್ಷಕ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡಿದ್ದರು. ಚಟುವಟಿಕೆ ವಿಧಾನ, ತಂತ್ರಜ್ಞಾನ ಬಳಕೆ, ಹೊರ ಸಂಚಾರ, ಕ್ಷೇತ್ರ ಭೇಟಿ ಮೂಲಕ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ‘ವಿದ್ಯಾಗಮ’ ಯೋಜನೆ ಬರುವುದಕ್ಕಿಂತ ಮುಂಚಿತವಾಗಿಯೇ ಮನೆ, ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದರು.
ಜಯಲಕ್ಷ್ಮಿ
****
ಕಾರವಾರ: ಹಳಿಯಾಳ ತಾಲ್ಲೂಕಿನ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನ್ಯೂಟನ್ ಚಲನೆಯ ನಿಯಮ, ಜಾಗತಿಕ ತಾಪಮಾನದ ಪಾಠಗಳು ಮನದಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಏಕೆಂದರೆ ಅವರಿಗೆ ಗೊಂಬೆಗಳು ಪಾಠ ಮಾಡುತ್ತವೆ!
ಈ ಗೊಂಬೆಗಳನ್ನು ಆಡಿಸುವಾತ ಈ ಶಾಲೆಯ ವಿಜ್ಞಾನ ಶಿಕ್ಷಕ ಸಿದ್ದು ಬಿರಾದಾರ. ಅವರ ಕೈಬೆರಳ ತುದಿಯಲ್ಲಿ ಆಡುವ ಗೊಂಬೆಗಳಿಂದ ಬೋಧಿಸುವ ಪಾಠವನ್ನು ಮಕ್ಕಳು ಮರೆಯುವುದು ಕಷ್ಟ.
ಪಠ್ಯದಲ್ಲಿ ಇರವುದಷ್ಟನ್ನೇ ಪಾಠ ಮಾಡದೆ ಅದರಾಚೆಯ ವೈಜ್ಞಾನಿಕ ಸಂಗತಿಗಳನ್ನು ಗೊಂಬೆಯಾಟದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡುವಲ್ಲಿ ಶಿಕ್ಷಕ ಸಿದ್ದು ನಿಷ್ಣಾತರು. ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕು ಮುದ್ದಾಪುರದ ಅವರು 13 ವರ್ಷಗಳಿಂದ ಹಳಿಯಾಳದ ಹಳ್ಳಿಯಲ್ಲಿ ಶಿಕ್ಷಕರಾಗಿದ್ದಾರೆ.
‘2005ರಲ್ಲಿ ಹೈದರಾಬಾದ್‍ನಲ್ಲಿ ಕೇಂದ್ರೀಯ ಸಾಂಸ್ಕೃತಿಕ ಸಂಪನ್ಮೂಲ ತರಬೇತಿ ಕೇಂದ್ರ (ಸಿಸಿಆರ್‌ಟಿ) ಆಯೋಜಿಸಿದ್ದ ಪಠ್ಯಕ್ರಮ ಬೋಧನೆಯಲ್ಲಿ ಗೊಂಬೆಗಳ ಪಾತ್ರದ ತರಬೇತಿಯಲ್ಲಿ ಪಾಲ್ಗೊಂಡಿದ್ದೆ. ಮಕ್ಕಳಿಗೆ ಗೊಂಬೆಗಳ ಮೂಲಕ ಪಾಠ ಬೋಧಿಸಿದರೆ ಪರಿಣಾಮಕಾರಿ ಬೋಧನೆ ಸಾಧ್ಯ ಎಂಬುದನ್ನು ಅರಿತು ಅದೇ ಕ್ರಮ ಅನುರಿಸಿದೆ. 35ಕ್ಕೂ ಹೆಚ್ಚು ವಿಜ್ಞಾನ ರೂಪಕ ರಚಿಸಿ ವಿದ್ಯಾರ್ಥಿಗಳಿಗೆ ತೋರಿಸಿದ್ದೇನೆ. ದೇಶದ ಹಲವೆಡೆಯೂ ಕಾರ್ಯಕ್ರಮ ನೀಡಿದ್ದೇನೆ’ ಎನ್ನುತ್ತಾರೆ ಸಿದ್ದು ಬಿರಾದಾರ.
ಗೊಂಬೆಯಾಟದಲ್ಲಿ ಅವರ ನೈಪುಣ್ಯ ಗಮನಿಸಿ ಸಿ.ಸಿ.ಆರ್.ಟಿಯು ಸಿಕ್ಕಿಂ, ಅಸ್ಸಾಂ ಸೇರಿ ಹಲವು ರಾಜ್ಯದಲ್ಲಿಯೂ ಗೊಂಬೆಯಾಟದ ಮೂಲಕ ಪಾಠದ ಕುರಿತು ತರಬೇತಿ ನೀಡುವ ಜವಾಬ್ದಾರಿ ನೀಡಿದೆ.
ಸಿದ್ದು ಬಿರಾದಾರ
*****
ಬಂಟ್ವಾಳ (ದಕ್ಷಿಣ ಕನ್ನಡ): ಬಂಟ್ವಾಳ ತಾಲ್ಲೂಕಿನ ಮಾಣಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಚಂದ್ರಾವತಿ ಅವರು, ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಮೂರೂ ಶಾಲೆಗಳನ್ನೂ ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಿದ್ದಾರೆ.
ಮಂಗಳೂರಿನ ಚಿಲಿಂಬಿಯವರಾದ ಇವರು 10ನೇ ತರಗತಿಯಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಆ ನೋವಿನಲ್ಲಿ ಅವಿವಾಹಿತರಾಗಿಯೇ ಉಳಿದಿದ್ದಾರೆ. ಸ್ವಂತ ಗಳಿಕೆಯನ್ನೂ ಶಾಲಾಭಿವೃದ್ಧಿಗೆ ವಿನಿಯೋಗಿಸಿ ಸಾರ್ಥಕತೆ ಕಾಣುತ್ತಿದ್ದಾರೆ. ‘ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಬೆಳೆಸಬೇಕು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ತಾಲ್ಲೂಕಿನ ನಲ್ಕೆಮಾರು ಸರ್ಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿಯಾಗಿ 24 ವರ್ಷ, ಬೋಳಂತೂರು ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ 5 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಮಾಣಿ ಶಾಲೆಯಲ್ಲಿ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮೂರೂ ಶಾಲೆಗಳಲ್ಲಿ ಪಠ್ಯದ ಜೊತೆಗೆ ನೃತ್ಯ, ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಚಟುವಟಿಕೆ ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳ ಯಕ್ಷಗಾನ ತಂಡ ರಚಿಸಿದ್ದಾರೆ.
ದಾನಿಗಳ ಸಹಕಾರದಿಂದ ಹೊಸ ತರಗತಿ ಕೊಠಡಿ, ಆವರಣಗೋಡೆ, ಧ್ವಜಸ್ತಂಭ ನಿರ್ಮಿಸಿದ್ದಾರೆ. ಶಾಲಾ ಕೈತೋಟ ರಚಿಸಿ ಬಿಸಿಯೂಟಕ್ಕೆ ಅದರ ತರಕಾರಿ ಬಳಸಲು ಕ್ರಮವಹಿಸಿದ್ದಾರೆ. ಹಣ್ಣಿನ ಗಿಡಗಳನ್ನು ನೆಟ್ಟುಬೆಳೆಸಿದ್ದಾರೆ. ನಲ್ಕೆಮಾರು ಶಾಲೆಯಲ್ಲಿ ಇಬ್ಬರು ಹಾಗೂ ಮಾಣಿ ಶಾಲೆಯಲ್ಲಿ ನಾಲ್ವರು ಅತಿಥಿ ಶಿಕ್ಷಕಿಯರಿಗೆ ಗೌರವಧನ ನೀಡಲು ತಮ್ಮ ಸಂಬಳ ವಿನಿಯೋಗಿಸಿದ್ದಾರೆ.
ಚಂದ್ರಾವತಿ
********
ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕೊಂಡ್ಲೂರು ಗ್ರಾಮದ ಶ್ರೀ ಶಾಂತವೇರಿ ಗೋಪಾಲಗೌಡ ಸರ್ಕಾರಿ ಪ್ರೌಢಶಾಲೆಗೆ ಸೇರಿದ 7 ಎಕರೆಯಷ್ಟು ಜಮೀನು ಹಸಿರು ಹೊದ್ದು ನಳನಳಿಸುತ್ತಿದೆ. ಅಲ್ಲಿ ತಲಾ ಒಂದು ಎಕರೆ ಅಡಿಕೆ, ತೆಂಗು ಹಾಗೂ ಅಪ್ಪೆ ಮಿಡಿ ಬೆಳೆ ಇದೆ. ನಾಲ್ಕು ಎಕರೆ ಉಳ್ಳಾಲ ತಳಿಯ ಗೇರು ಈಗ ಫಲ ಬಿಡಲು ಆರಂಭಿಸಿದೆ. ಕಾಳು ಮೆಣಸಿನ ಬಳ್ಳಿ, ಸೀಬೆ, ಮಾವು, ಹಲಸು ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳಿವೆ. ತೋಟದಲ್ಲಿನ ಕೊಳದಲ್ಲಿ 11 ಬಣ್ಣಗಳ ಕಮಲ, ನಾಲ್ಕು ಬಣ್ಣದ ಗ್ಲಾಡಿಯಸ್, ಬಗೆ ಬಗೆಯ ಆರ್ಕಿಡ್ ನಗೆ ಚೆಲ್ಲಿವೆ.
ಇದರ ಹಿಂದೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಎಚ್.ವಿ.ಸಂಪತ್ ಪರಿಶ್ರಮವಿದೆ. ಈ ತೋಟ ಬೆಳೆಸಲು ಅವರು ಸತತ ಎಂಟು ವರ್ಷ ಶ್ರಮ ಹಾಕಿದ್ದಲ್ಲದೆ, ತಮ್ಮ ಜೇಬಿನಿಂದ ₹ 4 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ. ಈ ವರ್ಷ ಗೇರು ಹಾಗೂ ಅಡಿಕೆ ಮಾರಾಟದಿಂದ ಶಾಲೆಗೆ ₹ 1 ಲಕ್ಷ ಆದಾಯ ಬಂದಿದೆ. ಅಲ್ಲಿನ ಹಣ್ಣು, ಕಾಯಿ, ತರಕಾರಿ ಮಧ್ಯಾಹ್ನದ ಬಿಸಿಯೂಟಕ್ಕೂ ಬಳಕೆಯಾಗುತ್ತಿದೆ.
ಶಾಲೆಯ ಆ ಜಾಗದಲ್ಲಿ ಹಿಂದೆ ಅಕೇಶಿಯಾ ನೆಡುತೋಪು ಇತ್ತು. ಅದರ ಕಡಿತಲೆಯ ನಂತರ ಆ ಜಾಗದಲ್ಲಿ ಸಂಪತ್ ತೋಟ ಬೆಳೆಸಿದ್ದಾರೆ. ತರಗತಿಯ ವಿರಾಮದ ಅವಧಿಯಲ್ಲಿ ತಾವೇ ಮಾರ್ಕ್ ಮಾಡಿ ಗುಂಡಿ ತೋಡಿ ಮನೆಯಿಂದ ಅಡಿಕೆ ಸಸಿ ತಂದು ಹಾಕಿದ್ದಾರೆ. ಆರಂಭದಲ್ಲಿ ಅಲ್ಲಿದ್ದ ಕುಡಿಯುವ ನೀರಿನ ಬಾವಿ ಬಳಸಿ ತೋಟಕ್ಕೆ ನೀರುಣಿಸಿದ್ದಾರೆ. ಕಿಮ್ಮನೆ ರತ್ನಾಕರ ಅವರು ಶಾಸಕರಾಗಿದ್ದಾಗ ಕೊಳವೆಬಾವಿ ಹಾಕಿಸಿಕೊಟ್ಟಿದ್ದಾರೆ.
ಶಾಲೆಯ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆಯುವುದಿಲ್ಲ. ಗೇರು ಹಣ್ಣು ಕೀಳುವುದು, ಅಡಿಕೆ ಕೊಯ್ಲು ಎಲ್ಲವನ್ನೂ ಅವರೇ ಮಾಡುತ್ತಾರೆ. ಕೆಲವೊಮ್ಮೆ ಮಕ್ಕಳಿಂದಲೂ ನೆರವು ಸಿಗುತ್ತದೆ. ಸಂಪತ್ ಅವರ ಪರಿಶ್ರಮದಿಂದ ತೋಟವು ಶಾಲೆಗೆ ₹ 1 ಕೋಟಿ ಮೌಲ್ಯದ ಆಸ್ತಿಯಾಗಿ ರೂಪುಗೊಂಡಿದೆ. ಅದು ಪೂರ್ಣ ಪ್ರಮಾಣದಲ್ಲಿ ಫಲ ಕೊಟ್ಟರೆ ಶಾಲೆಗೆ ವಾರ್ಷಿಕ ಕನಿಷ್ಠ ₹5 ಲಕ್ಷ ಆದಾಯ ಬರಲಿದೆ.
ಎಚ್.ವಿ.ಸಂಪತ್
******
ತುಮಕೂರು: ಈ ಶಾಲೆಯಲ್ಲಿ 2017–18ನೇ ಸಾಲಿನಲ್ಲಿದ್ದುದು ಕೇವಲ 10 ಮಕ್ಕಳು. ಈಗ 100 ಚಿಣ್ಣರಿದ್ದಾರೆ. ಬಿಕೋ ಎನ್ನುತ್ತಿದ್ದ ಶಾಲೆಯಲ್ಲೀಗ ಮಕ್ಕಳು ಕೂರಲು ಜಾಗವಿಲ್ಲ! ಇದಕ್ಕೆ ಕಾರಣ ಅಲ್ಲಿನ ಶಿಕ್ಷಕಿ ಡಿ.ಹೇಮಲತಾ.
ಮಧುಗಿರಿ ತಾಲ್ಲೂಕಿನ ಇಂದಿರಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿತ್ತು. ಅದಕ್ಕೆ ‘ಸಂಜೀವಿನಿ’ಯಾದವರು ಹೇಮಲತಾ.
ಐದಾರು ವರ್ಷಗಳ ಹಿಂದೆ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿದ್ದರು. 2017–18ರಲ್ಲಿ ಒಬ್ಬ ವಿದ್ಯಾರ್ಥಿ ಕೂಡ 1ನೇ ತರಗತಿಗೆ ಪ್ರವೇಶ ಪಡೆದಿರಲಿಲ್ಲ. ಈಗ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ದುಂಬಾಲು ಬೀಳುತ್ತಿದ್ದಾರೆ.
ಮಕ್ಕಳನ್ನು ಶಾಲೆಗೆ ಕರೆತರಲು ವಿಭಿನ್ನ ಆಲೋಚನೆ ಮಾಡಿದ ಹೇಮಲತಾ, ಲಭ್ಯ ಇರುವ ಎರಡು ಕೊಠಡಿಗಳ ಪೈಕಿ ಒಂದರಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಿದರು. ಅದಕ್ಕೆ ‘ಮಕ್ಕಳ ಮನೆ’ ಎಂದು ಹೆಸರಿಟ್ಟರು.
ಶಾಲೆ ಮುನ್ನಡೆಸಲು ಊರೂರು ಸುತ್ತಿದರು. ಕರಪತ್ರ ಹಂಚುವ ಮುಖಾಂತರ ಜನರಲ್ಲಿ ಅರಿವು ಮೂಡಿಸಿದರು. ಶಾಲೆ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಇವರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತರು. ಎಲ್‌ಕೆಜಿ, ಯುಕೆಜಿಗೆ ಹೋಗುವವರು ‘ಮಕ್ಕಳ ಮನೆ’ ಸೇರಿದರು. ಇದರ ಪರಿಣಾಮ ದಾಖಲಾತಿ ಹೆಚ್ಚಾಯಿತು.
ಹೇಮಲತಾ ತಮ್ಮ ಸ್ವಂತ ಖರ್ಚಿನಲ್ಲೇ ಮಕ್ಕಳಿಗೆ ಸಮವಸ್ತ್ರ, ಬಟ್ಟೆ, ಟೈ ವಿತರಿಸುವ ಕೆಲಸವೂ ಮಾಡುತ್ತಿದ್ದಾರೆ. ಇದರಿಂದ ಹೊಸಹಳ್ಳಿ, ತಿಪ್ಪನಹಳ್ಳಿ ಸೇರಿ ಸುತ್ತಮುತ್ತಲಿನ ಚಿಣ್ಣರು ಆಸಕ್ತಿಯಿಂದಲೇ ಶಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಡಿ.ಹೇಮಲತಾ
*******
ಮಾಹಿತಿ: ಪ್ರಮೋದ ಕುಲಕರ್ಣಿ, ಅನಿತಾ ಎಚ್., ಮೈಲಾರಿ ಲಿಂಗಪ್ಪ, ವೆಂಕಟೇಶ ಜಿ.ಎಚ್., ಮಲ್ಲೇಶ, ಮೋಹನ್ ಕೆ.ಶ್ರೀಯಾನ್, ಗಣಪತಿ ಹೆಗಡೆ.
*******
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.