ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಖವಿಲ್ಲದ ಧಾವತಿಯನ್ನು ತಿರಸ್ಕರಿಸಬೇಕು’

Published 23 ಜುಲೈ 2023, 4:10 IST
Last Updated 23 ಜುಲೈ 2023, 4:10 IST
ಅಕ್ಷರ ಗಾತ್ರ

ಸಂದರ್ಶನ: ನಿಂಗಪ್ಪ ಮುದೇನೂರು

ಬಯಲು ನಾಡಿನ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿಯಲ್ಲಿ ಜನಿಸಿದ ಪ್ರೊ.ಎಚ್.ಟಿ. ಪೋತೆಯವರು ನಾಡಿನ ಸಂವೇದನಾಶೀಲ ಕತೆಗಾರ, ಕಾದಂಬರಿಕಾರ, ಕವಿ, ಪ್ರಬಂಧಕಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕ. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಫಿಲ್, ಪಿಎಚ್.ಡಿ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಪ್ರಸಾರಾಂಗ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕಲಾ ನಿಕಾಯದ ಡೀನರಾಗಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಸೃಜನಶೀಲ, ವೈಚಾರಿಕ, ಜಾನಪದ, ಸಾಹಿತ್ಯ, ಸಂಶೋಧನೆ, ಸಂಘಟನೆ ಇವರ ಮುಖ್ಯ ಕ್ಷೇತ್ರಗಳು. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್ ಚಿಂತನೆಗಳನ್ನು ಮೈಗೂಡಿಸಿಕೊಂಡು ಗಂಭೀರವಾದ ಅಧ್ಯಯನದಲ್ಲಿ ತೊಡಗಿದ್ದಾರೆ. ಹೈದರಾಬಾದ್ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು, ಕನ್ನಡ ಜಾನಪದ ಶಾಸ್ತ್ರ, ದಲಿತ ಅಸ್ಮಿತೆ, ಅಂಬೇಡ್ಕರ್ ವಾಚಿಕೆ, ಅಂಬೇಡ್ಕರ್ ಭಾರತ, ಅಂಬೇಡ್ಕರ್ ಕಥನ, ಅಂಬೇಡ್ಕರ್ ಫಸಲು, ಎಲ್ಲರ ಅಂಬೇಡ್ಕರ್ ಅಲ್ಲದೆ ಚಮ್ಮಾವುಗೆ, ಬೆತ್ತಲಾದ ಚಂದ್ರ, ಕರುಳರಿಯುವ ಹೊತ್ತು, ಮಾದನ ಕರೆಂಟ್ ಕುತಂತ್ರ, ಅನೇಕಲವ್ಯ, ಗಾಂಧಿ ಪ್ರತಿಮೆ, ಬಯಲೆಂಬೊ ಬಯಲು, ಮಹಾಬಿಂದು, ರಮಾಬಾಯಿ ಮೊದಲಾದ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಪೋತೆಯವರು ನಾಡಿನ ಹಲವಾರು ಪ್ರಶಸ್ತಿ-ಗೌರವಕ್ಕೂ ಪಾತ್ರರಾದವರು. ಇವರ ಅನೇಕ ಬರಹಗಳು ಮರಾಠಿ, ಹಿಂದಿ, ತೆಲುಗು, ಇಂಗ್ಲಿಷ್, ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡಿವೆ.

ಜುಲೈ 29, 30ರಂದು ವಿಜಯಪುರದಲ್ಲಿ ನಡೆಯಲಿರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇವರು ಆಯ್ಕೆಯಾಗಿರುವುದರಿಂದ ನಡೆಸಿದ ಸಂದರ್ಶನವಿದು.

ಬರವಣಿಗೆ ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಿದ್ದು ಹೇಗೆ? ದಲಿತರ ಬದುಕು ಇಂದಿಗೂ ಊರಾಚೆಯಲ್ಲಿಯೇ ಇದೆಯಲ್ಲವೇ?

ಲೋಕದಲ್ಲಿ ಎರಡು ರೀತಿಯ ಬರಹಗಾರರಿರುತ್ತಾರೆ. ಬರೆಯುವುದಕ್ಕಾಗಿ ಬರೆಯುವವರು, ವಿಷಯ ಪ್ರತಿಪಾದನೆಗಾಗಿ ಬರೆಯುವವರು. ನನ್ನದು ಎರಡನೆಯ ಗುಂಪು. ಮೊದಲನೆಯವರಲ್ಲಿ ಭಾವಗಳು ಹೆಚ್ಚು, ನನ್ನಲ್ಲಿ ಆಲೋಚನೆಗಳು ಅಧಿಕ. ವಾಸ್ತವ ಬದುಕಿನ ಕುರಿತಾದ ಆಲೋಚನೆಗಳೇ ನನಗೆ ನನ್ನ ಬರೆಹಕ್ಕೆ ಆತ್ಮವಿಶ್ವಾಸ ತುಂಬುತ್ತವೆ. ದೇಶ ಸ್ವಾತಂತ್ರ್ಯಗೊಂಡು ಮುಕ್ಕಾಲು ಶತಮಾನ ಕಳೆದರೂ ಈ ನೆಲದ ಸಾಂಪ್ರದಾಯಿಕ ಚಿಂತನೆಗಳಲ್ಲಿ ಬದಲಾವಣೆಯಾಗಿಲ್ಲ. ಈಗಲೂ ಮುಖದ ಮೇಲೆ ಮೂತ್ರ ಮಾಡುವವರಿದ್ದಾರಲ್ಲವೆ?

ಈ ಹನುಮಂತ ಯಾರು ಮತ್ತು ರೂಪುಗೊಂಡದ್ಹೇಗೆ?

ನನ್ನೂರು ಭೀಮಾ ತಟದ ಹಂಜಗಿ. ಅಪಮಾನದಲ್ಲಿ ನೊಂದುಬೆಂದಿದ್ದ ಅಪ್ಪ ‘ನಾಲ್ಕಕ್ಷರ ಕಲಿತು ಪಟ್ಟಣ ಸೇರಿಬಿಡು, ಅಪಮಾನಿಸುವ ಈ ಊರಲ್ಲಿ ಇರಬೇಡ’ ಎಂದು ಹೇಳಿದ್ದೇ ಈ ಹನುಮಂತನನ್ನು ರೂಪಿಸಿತು. ಹಾಗೆಯೇ ಅಪ್ಪ ‘ಹೆಸರಿನಿಂದ ಕೆಟ್ಟದ್ದಾಗಿದ್ದರೆ ಹೆಸರು ಬದಲಿಸು, ಊರಿಂದ ಅಪಮಾನವಾದರೆ ಊರು ಬಿಡು, ಧರ್ಮದಿಂದ ಅಪಮಾನವಾಗಿದ್ದರೆ ಧರ್ಮ ಬದಲಿಸು’ ಎಂದಿದ್ದರು, ಇದನ್ನೇ ನಾಮಾಂತರ, ಸ್ಥಳಾಂತರ, ಧರ್ಮಾಂತರ ಎಂದು ಅಂಬೇಡ್ಕರ್‌ರೂ ಹೇಳಿದ್ದುಂಟು.

ಕಲಿಕೆ ಮತ್ತು ತಿಳಿವಳಿಕೆಗಳನ್ನು ನೀವು ದಕ್ಕಿಸಿಕೊಂಡದ್ದು ಹೇಗೆ?

ಮಗ ಅಕ್ಷರಸ್ಥನಾಗಬೇಕೆಂಬ ಅಪ್ಪನ ಹಂಬಲ ಅಕ್ಷರ ಕಲಿಕೆಗೆ ಪ್ರೋತ್ಸಾಹಿಸಿತು. ಅಕ್ಷರ ಮೂಡಿಸಿದ ಅರಿವು ಅಂಬೇಡ್ಕರ್‌ರ ಆಲೋಚನೆಗಳನ್ನು ದಕ್ಕಿಸಿತು. ಇವರಿಬ್ಬರೂ ನನ್ನ ಬದುಕನ್ನು ರೂಪಿಸಿದವರು.

ಜಾನಪದ ಮೀಮಾಂಸೆ ಬಲ್ಲ ನೀವು ಅವರ ಅಂಬೇಡ್ಕರ್‌ರ ಅರಿವನ್ನು ನಿಮ್ಮ ಬರಹದ ಕೇಂದ್ರಪ್ರಜ್ಞೆಯಾಗಿಸಿಕೊಂಡದ್ದು ಹೇಗೆ?

ಜಾನಪದವೆನ್ನುವುದು ಸಮಾಜ ವಿಜ್ಞಾನವೂ ಹೌದು, ಸಾಹಿತ್ಯವೂ ಹೌದು. ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಜನಪದ ಸಾಹಿತ್ಯವನ್ನು ದಲಿತ ಸಾಹಿತ್ಯವೆಂದೇ ಪರಿಭಾವಿಸುತ್ತೇನೆ. ಅಲ್ಲಿ ಬಡತನವಿದೆ, ಅಸ್ಪೃಶ್ಯತೆಯಿದೆ, ಆಕ್ರಂದನವಿದೆ, ಪ್ರತಿಭಟನೆಯಿದೆ. ಜನಪದವೆನ್ನುವುದು ಈ ಮಣ್ಣಿನ ಬದುಕಿನ ಮೀಮಾಂಸೆ. ಜನಪದದ ಬದುಕಿಗೂ ಅಸ್ಪೃಶ್ಯತೆ ಅಂಟಿಸಿ ಬಿಟ್ಟಿದ್ದಾರಲ್ಲ! ಯಾರೊ ಅಂಟಿಸಿದ್ದನ್ನು ತೊಳೆಯಲು ಅಂಬೇಡ್ಕರ್ ಬರಬೇಕಾಯಿತು. ಈ ನೆಲದ ನೈಜ ಬದುಕಿಗೆ ಹೊರಿಸಿದ ಭಾರವನ್ನು ಇಳಿಸಲು ಪ್ರಯತ್ನಿಸಿದ್ದು ಅಂಬೇಡ್ಕರ್. ಅದಕ್ಕಾಗಿಯೇ ಅಂಬೇಡ್ಕರ್ ನನಗೆ ಮುಖ್ಯವಾಗುತ್ತಾರೆ. ಆ ನಿಟ್ಟಿನಲ್ಲಿ ಅವರು ತೋರಿದ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದ್ದೇನೆ.

ನಿಮ್ಮ ಆರಂಭಿಕ ಬರಹಗಳಿಗೂ, ಇಂದಿನವಕ್ಕೂ ವ್ಯತ್ಯಾಸವುಂಟೆ? ನಿಮ್ಮದು ಅವೈದಿಕ ಚಿಂತನೆಯಲ್ಲವೆ?

ನಿಜ, ಸಮುದಾಯಗಳನ್ನು ವಿರೋಧ ಮಾಡುವ ಗುಣ ಆರಂಭದ ಬರಹಗಳಲ್ಲಿರುವುದು ಸಹಜ. ಪ್ರತಿಯೊಬ್ಬ ಬರಹಗಾರನು ಏಕ ಮಾದರಿಯ ಚಿಂತನಾ ಸ್ಥಿತಿಯಲ್ಲಿ ನಿಲ್ಲುವುದಿಲ್ಲ. ಹಾಗೆ ನಿಲ್ಲುವುದು ಅವನ ಸ್ಥಗಿತತೆಯನ್ನು ಸೂಚಿಸುತ್ತದೆ. ಬದುಕು ಬದಲಾದಂತೆಲ್ಲಾ ನಮ್ಮ ಚಿಂತನಾ ಮಾದರಿಗಳೂ ಬದಲಾಗಬೇಕು. ಅದಕ್ಕನುಗುಣವಾಗಿಯೇ ನನ್ನ ಬರಹಗಳು ಬದಲಾಗುತ್ತಾ ಸಾಗಿವೆ. ಸಮಕಾಲೀನತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಬರಹಗಾರ ತನ್ನ ಕಾಲಕ್ಕೆ, ಆ ಕಾಲದ ಸ್ಥಿತ್ಯಂತರಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಬಲ್ಲ. ಅದರಂತೆ ವೈದಿಕವೆನ್ನವುದು ಸಮಾನಲ್ಲದ್ದು. ಅವೈದಿಕವೆನ್ನವುದು ಸಮಾನತೆ ನೆಲೆಗೊಳಿಸುವ ಚಿಂತನೆಯಾಗಿದೆ. ವೈದಿಕವೆನ್ನುವುದು ಯಾರನ್ನೋ ಗುರಿಯಾಗಿಟ್ಟುಕೊಂಡು ಹೇಳುವಂತಹದ್ದಲ್ಲ. ದಲಿತನಾಗಿಯೂ ಬ್ರಾಹ್ಮಣ್ಯ ಪ್ರತಿಪಾದನೆ ಮಾಡಿದರೂ ಅವರ ವಿರುದ್ಧವೂ ಪ್ರತಿಭಟಿಸಲೇಬೇಕು. ಅಂದಾಗ ಮಾತ್ರ ಅದು ಅವೈದಿಕ ಧಾರೆಯಾಗುತ್ತದೆ.

ನಿಮ್ಮ ಸೃಜನಶೀಲತೆಯ ಸ್ಥಿತ್ಯಂತರದ ಬಗೆಗೆ ಒಂದೆರಡು ಮಾತು.

ಆರಂಭದಲ್ಲಿ ಎಲ್ಲರಂತೆ ನಾನೂ ಕವಿತೆಗಳನ್ನು ಬರೆದೆ, ಪ್ರಕಟಿಸುವ ಧೈರ್ಯ ಮಾಡಲಿಲ್ಲ. ದಲಿತ-ಬಂಡಾಯದ ಪ್ರಧಾನ ಅಭಿವ್ಯಕ್ತಿ ಕಾವ್ಯವಾದರೂ ಶೋಷಿತ ಸಮುದಾಯವನ್ನು ಎಚ್ಚರಿಸಿದ್ದು ಆ ಕಾಲದ ಒಟ್ಟು ಬರೆಹ. ಸೃಜನಶೀಲ ಬರೆಹ ಲೇಖಕನನ್ನು ಬಲುಬೇಗ ಜನಪ್ರಿಯಗೊಳಿಸುತ್ತದೆ. ಹಾಗಾಗಿ ಕಥೆ, ಕಾದಂಬರಿಗಳನ್ನು ಬರೆಯಬೇಕಾಯಿತು. ನಾನು ಕೂಡು ಕುಟುಂಬದಿಂದ ಬಂದವನು. ಕೂಡು ಕುಟುಂಬದಲ್ಲಿ ಅಂತಃಕರಣದ ಸಂಸ್ಕಾರ ರಕ್ತಗತವಾಗಿಯೇ ಬಂದಿರುತ್ತದೆ. ಹಸಿವು, ಬಡತನ ಅಂತಃಕರಣಕ್ಕೆ ಹೆಚ್ಚು ಜೀವ ತುಂಬುತ್ತದೆ. ಕೂಡಿಬಾಳುವ ಹಂಚಿ ತಿನ್ನುವುದನ್ನು ಜನಪದ ಬದುಕು ಕಲಿಸುತ್ತದೆ. ಅಂತಃಕರಣ ಇಲ್ಲದ ಬದುಕು ಅದು ಬದುಕಾಗಲು ಸಾಧ್ಯವಿಲ್ಲ.

ಕಲ್ಯಾಣ ಕರ್ನಾಟಕ ನಿಮ್ಮಲ್ಲಿ ಹೇಗೆ ನಿರೂಪಿತಗೊಂಡಿದೆ?

ಸಾಹಿತ್ಯಕ, ಸಮಾಜೋ-ಸಾಂಸ್ಕೃತಿಕ ಕಾರ್ಯ ಮಾಡುವವರಿಗೆ ಇದು ಕನ್ನೆನೆಲ. ಕವಿರಾಜಮಾರ್ಗಕಾರನ ಕಾಲದ ಬದುಕು, ವಡ್ಡರಾಧನೆಯ ಅಹಿಂಸಾವಾದದ ವಿಚಾರಗಳು, ವಚನಕಾರರ ವೈಚಾರಿಕತೆ ಹಾಸು ಹೊಕ್ಕಾಗಿದ್ದಾಗಲೂ ಅರಿವಿನ ಕೊರತೆಯಿಂದ ಈ ನೆಲ ಬಳಲುತ್ತಿದೆ. ಅದಕ್ಕಾಗಿ ಗತಿಸಿದ ಘಟನಾವಳಿಗಳಿಂದಲೇ ನಮ್ಮಿರುವಿಕೆಯನ್ನು ಪರಿಯನ್ನು ಗ್ರಹಿಸುತ್ತಿದ್ದೇನೆ, ಚಲಿಸುವ ವರ್ತಮಾನವನ್ನು ನಿರ್ವಚಿಸುತ್ತಿದ್ದೇನೆ.

ನಿಮ್ಮ ಕಥೆ, ಕಾದಂಬರಿಗಳು ದೇವನೂರ, ಕುಂವೀ, ಶಾಂತರಸ, ಚೆನ್ನಣ್ಣನವರಿಗಿಂತ ಭಿನ್ನವಾದ ಬಯೋಪಿಕ್ ಬರೆಹದ ಮಾದರಿಯನ್ನು ಅನುಸರಿಸಿದ್ದು ಹೇಗೆ?

ನಾನು ಕಥೆ ಬರೆಯಲು ಪ್ರಾರಂಭ ಮಾಡಿದಾಗ ದಲಿತ ಚಳವಳಿ, ಚಿಂತನೆಗೆ ಕಾರಣರಾದವರು ಕವಲುದಾರಿ ಕಂಡುಕೊಂಡಿದ್ದರು. ಮೇಲಾಗಿ ಓಲೈಕೆ ರಾಜಕಾರಣ ಹೆಚ್ಚಾಗಿದ್ದ ಕಾಲವೂ ಹೌದು. ನೀವು ಹೆಸರಿಸಿದ ಬರಹಗಾರರು ತಮ್ಮ ಕಾಲದ ಅಗತ್ಯವನ್ನು ಪೂರೈಸಿ ಹೊಸ ಬಗೆಯ ಎಚ್ಚರವನ್ನುಂಟುಮಾಡಿದರು. ಆ ಎಚ್ಚರವು ಮತ್ತಷ್ಟು ಜಾಗೃತಿಯನ್ನು ಬಯಸುವ ಕಾಲದಲ್ಲಿ ನಾನು ಬರೆಯಲು ಆರಂಭಿಸಿದೆ. ಅದಕ್ಕಾಗಿ ತುಸು ಭಿನ್ನವಾದ ಅಭಿವ್ಯಕ್ತಿಯ ಕ್ರಮವನ್ನು ಅನುಸರಿಸಿದೆ.

ನಿಮ್ಮ ಬರಹಗಳಲ್ಲಿ 1970-80ರ ದಶಕದ ಸಾಹಿತ್ಯ ಚಳವಳಿಯ ವಿಷಾದದ ಛಾಯೆ ಇರುವಂತೆ ಭಾಸವಾಗುತ್ತಿದೆಯಲ್ಲ?

ವಿಷಾದದ ಛಾಯೆ ಇರುವುದಂತು ನಿಜ. ಗಮ್ಯವನ್ನು ಮುಟ್ಟುವಲ್ಲಿ ವಿಫಲವಾದುದರ ಬಗೆಗಿನ ವಿಷಾದವದು. ಆದರೆ ಚಳವಳಿಯ ಅರಿವು ಪಡೆದ ನನಗೆ ಆ ಚಳವಳಿಯ ಬಗ್ಗೆ ಹೆಮ್ಮೆಯಿದೆ, ಅದರ ಗಾಢಪ್ರಭಾವವೂ ನನ್ನ ಮೇಲಾಗಿದೆ.

ರಾಜಕೀಯ ಮೀಸಲಾತಿಯಂತೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೂ ಮೀಸಲಾತಿ ಬೇಕೆ?

ಕನ್ನಡ ಸಾಹಿತ್ಯ ಸಂಸ್ಕೃತಿಗೆ ಜೀವಕಳೆ ತಂದವರೆ ಜನಪದರು, ಶರಣರು, ದಲಿತರು. ಸಮಬಾಳು-ಸಮಪಾಲು ತುಂಬಾ ಅಗತ್ಯ. ಅದಿಲ್ಲದಿದ್ದರೆ ಬಹುತ್ವದ ಸೌಂದರ್ಯಕ್ಕೆ ಬೆಲೆಯೇ ಇರುವುದಿಲ್ಲ.

ಹೊಸ ತಲೆಮಾರಿನ ವಿವೇಕವನ್ನು ಬೆಳೆಸುವ ಸಾಂಸ್ಕೃತಿಕ ಮಾದರಿಗಳಾವುವು?

ಸಾಂಸ್ಕೃತಿಕ ಚಿಕಿತ್ಸಕ ದೃಷ್ಟಿಕೋನವನ್ನು ವೃದ್ಧಿಸಿಕೊಳ್ಳುವುದು, ಧ್ಯಾನದ ಅಧ್ಯಯನ, ವರ್ತಮಾನವನ್ನು ವಾಸ್ತವ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳುವುದು, ಸುಖವಿಲ್ಲದ ಧಾವತಿಯನ್ನು ತಿರಸ್ಕರಿಸುವುದು.

ನೀವೀಗ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು. ಆ ಸ್ಥಾನದಲ್ಲಿ ಕೂತ ನಿಮಗೆ ಮುಖ್ಯವೆನಿಸುವುದೇನು?

ಅಲ್ಪ ಶ್ರಮಕ್ಕೆ ಅಧಿಕ ಗೌರವ ಸಂದಿದೆ. ನನಗೀಗ ಮುಖ್ಯವೆನಿಸುವುದು ಬದಲಾದ ಮುಖವಾಡದ ಬಣ್ಣದ ಹಿಂದೆ ಬಳಲುತ್ತಿರುವ ಜೀವಗಳು; ವರ್ತಮಾನದ ರಾಜಕೀಯವು ಸೃಷ್ಠಿಸಿರುವ ಸಾಂಸ್ಕೃತಿಕ ಸಂದಿಗ್ಧತೆ; ಅನುಷ್ಠಾಗೊಳ್ಳದ ಅವಶ್ಯಕ ಸಾಮಾಜಿಕ ಅನುಕೂಲತೆಗಳು; ಹಕ್ಕುಗಳಿಗಾಗಿ ಹಂಬಲಿಸುತ್ತಿರುವ ಅಸಹಾಯಕ ಬದುಕುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT