ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲವೇ ನಮ್ಮ ಬದುಕು | ನಿರ್ದೇಶಕಿ ಸುಮನ್ ಕಿತ್ತೂರು ಬರಹ; ಅಲೆಗಳ ನಡುವೆ ಅಲೆದ ಮನಗಳು

ಪ್ರೇಮಿಗಳ ದಿನ
Last Updated 11 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಮತ್ತೊಂದು ‘ಪ್ರೇಮಿಗಳ ದಿನ’ ಬಂದಿದೆ. ಗುಲಾಬಿಗಳ ಬಿಕರಿಯೂ ಜೋರಾಗಿಯೇ ನಡೆಯುತ್ತಿದೆ. ‘ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು, ಕಾಣದೊಂದ ಕನಸ ಕಂಡು, ಮಾತಿಗೊಲಿಯದಮೃತವುಂಡು, ದುಃಖ ಹಗರುವೆನುತಿರೆ ಪ್ರೇಮವೆನಲು ಹಾಸ್ಯವೇ’ ಎಂದು ದಾಂಪತ್ಯ ಕವಿ ಕೆಎಸ್‌ನ ಬಲು ಹಿಂದೆಯೇ ಹಾಡಿದ್ದಾರಲ್ಲವೇ? ಅಂತಹ ಪ್ರೇಮಕ್ಕೆ ದೇಶ, ಭಾಷೆ ಗಡಿಗಳ ಹಂಗಿಲ್ಲ ಎನ್ನುತ್ತವೆ ಇಲ್ಲಿನ ಎರಡು ಪ್ರೇಮ ಬರಹಗಳು. ಈ ವಿಶಿಷ್ಟ ದಾಂಪತ್ಯ ಗೀತಗಳನ್ನು ಗುನಗುನಿಸೋಣ ಬನ್ನಿ...

***

ನಮ್ಮಿಬ್ಬರ ಏಕಾಂತದ ಮಾತುಗಳನ್ನು ಹೆಚ್ಚು ಕೇಳಿಸಿಕೊಂಡಿದ್ದು ಪಾಂಡಿಚೆರಿಯ ಕಡಲ ಅಲೆಗಳು. ನನಗೆ ಈಗಲೂ ಅನಿಸುತ್ತಿದೆ. ನಮ್ಮ ಮಾತುಗಳನ್ನು ಆ ಅಲೆಗಳು, ಅವುಗಳ ಮೇಲೆ ಬೀಸಿದ ಗಾಳಿಯ ಮೂಲಕ ಎಲ್ಲೆಲ್ಲಿಗೆ ತಲುಪಿಸಿವೆಯೋ ಏನೋ ಎಂದು.

ಹೌದು, ಅದೊಂದು ಸುಂದರ ಕಥೆ. ನಾನು ಹೇಳಲು ಹೊರಟಿದ್ದು ಬಯಲು ಸೀಮೆಯ ಹುಡುಗಿ ಮತ್ತು ಬಿಸಿಲು ಸೀಮೆಯ ಹುಡುಗನ ಕಥೆ. ಇದು ಸಿನಿಮಾ ಕಥೆ ಅಲ್ಲ. ಆದರೆ, ಅದರಷ್ಟೇ ರಮ್ಯವಾಗಿದೆ. ಈ ಕಥೆಯ ಪಾತ್ರಧಾರಿಗಳಾಗಿರುವ ನನ್ನ ಮತ್ತು ಶ್ರೀನಿವಾಸ್‌ ಬದುಕು ಕೂಡ ಸುಂದರವಾಗಿದೆ. ಈ ಪೀಠಿಕೆ ಓದಿದ ಮೇಲೆ ನಿಮಗೂ ಈ ಕಥೆ ಕೇಳುವ ಹಂಬಲ ಆಗಿದೆಯಲ್ವೆ?

ಅದು 2017ರಿಂದ 2019ರ ಅವಧಿ. ಗ್ರಾಮೀಣ ಮಹಿಳೆಯರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಫ್ರೆಂಚ್‌ ಕಂಪನಿಯೊಂದರಿಂದ ಆಹ್ವಾನ ಬಂದಿತ್ತು. ಕೆಲದಿನಗಳ ಮಟ್ಟಿಗೆ ಎಂದು ಹೋದವಳಿಗೆ ಅಲ್ಲಿ ಸುಮಾರು ಆರು ತಿಂಗಳು ಉಳಿದುಕೊಳ್ಳಬೇಕಾಗಿ ಬಂತು. ಅಲ್ಲಿನ ಚಿತ್ರೋತ್ಸವದಲ್ಲಿ ತೀರ್ಪುಗಾರಳಾಗಿ ಪಾಲ್ಗೊಂಡಿದ್ದೆ. ನಮ್ಮ ಕಚೇರಿ ಇದ್ದದ್ದು ಪಾಂಡಿಚೆರಿಯ ಕಡಲ ತಡಿಯ ಹತ್ತಿರದಲ್ಲೇ. ಹೀಗೆ ತಿರುಗಿ ನೋಡಿದರೆ ಸಮುದ್ರ. ಅಲೆಗಳ ಮೇಲೆ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿದ್ದುದು ಕಾಣುತ್ತಿತ್ತು.

ಒಮ್ಮೆ ನನಗೆ ಯಾವುದೋ ಲೊಕೇಷನ್‌ನ ಫೋಟೊ ತೆಗೆಯಬೇಕಿತ್ತು. ನನಗೊಬ್ಬರು ಫೋಟೊಗ್ರಾಫರ್‌ ಬೇಕಿತ್ತು. ತಕ್ಷಣಕ್ಕೆ ಯಾರೂ ಸಿಗಲಿಲ್ಲ. ಒಬ್ಬರು ಹವ್ಯಾಸಿ ಛಾಯಾಗ್ರಾಹಕರಿದ್ದಾರೆ, ಆಗಬಹುದೇ ಎಂದು ನನ್ನ ಸಹೋದ್ಯೋಗಿ ಕೇಳಿದರು. ಹಾಗೆ ಪರಿಚಯವಾದವರೇ ಶ್ರೀನಿವಾಸ್‌.

ಈಗ ನನ್ನ–ಶ್ರೀನಿವಾಸ್‌ ಪರಿಚಯದ ಕುರಿತು ಹೇಳುತ್ತೇನೆ ಕೇಳಿ. ಶ್ರೀನಿವಾಸ್‌ ಅವರ ತಂದೆ ಆಂಧ್ರಪ್ರದೇಶದವರು. ತಾಯಿ ಕರ್ನಾಟಕದವರು. ಶ್ರೀನಿವಾಸ್‌ ಹುಟ್ಟಿ ಬೆಳೆದದ್ದು ಪಾಂಡಿಚೆರಿಯಲ್ಲಿ. ಅವರು ಓದಿದ್ದು ಪ್ರವಾಸೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಅವರು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು. ಸಂಪ್ರದಾಯಸ್ಥ ಕುಟುಂಬ ಅವರದ್ದು. ಇರಲಿ, ಈಗ ನನ್ನ ಅವರ ನಂಟು ಬೆಳೆದ ಸಂಗತಿಯನ್ನು ಹೇಳಬೇಕು.

ಒಮ್ಮೆ ಫೋಟೊಗ್ರಫಿಗೆಂದು ಹೋದಾಗ ಶ್ರೀನಿವಾಸ್‌ ಯಾರ ಜೊತೆಗೋ ಕನ್ನಡದಲ್ಲಿ ಮಾತನಾಡುವುದು ಕೇಳಿಸಿತು. ಅದು ತಮಿಳ್ಗನ್ನಡ. ನನಗೋ ಅಲ್ಲಿ ಕನ್ನಡ ಕೇಳಿ ಖುಷಿಯೋ ಖುಷಿ. ಆಗ ಶ್ರೀನಿವಾಸ್‌ ಅವರಲ್ಲಿ ವಿವರ ಕೇಳಿದಾಗ ಅವರ ಕುಟುಂಬದ ಬಗ್ಗೆ ಹೇಳಿದರು. ನೋಡಿ ಭಾಷೆ ಹೇಗೆ ಮನಸ್ಸು, ಸಂಬಂಧಗಳನ್ನು ಬೆಸೆಯುತ್ತದೆ. ನೆನಪಿಸಿಕೊಂಡರೆ ಈಗಲೂ ಆಹ್ಲಾದದ ಸುಳಿಯೊಂದು ಹಾದು ಹೋಗುತ್ತದೆ. ಹೀಗೆ ನಮ್ಮ ಶುದ್ಧ ಸ್ನೇಹ ಸಾಗಿತ್ತು.

ನನಗೆ ಮದುವೆ ಬಗ್ಗೆ ಅಂಥ ಆಸಕ್ತಿ ಇರಲೇ ಇಲ್ಲ. ವೃತ್ತಿ, ಪ್ರವಾಸ ಇತ್ಯಾದಿಗಳಲ್ಲೇ ಮುಂದುವರಿಯಬೇಕು ಅಂತಿದ್ದವಳು ನಾನು. ಹೀಗಿರಬೇಕಾದರೆ, ಒಂದು ದಿನ ಶ್ರೀನಿವಾಸ್‌, ನಾನು ನಿಮಗೆ ಪ್ರಪೋಸ್‌ ಮಾಡ್ತಿದ್ದೀನಿ’ ಅಂತ ಹೇಳಿದರು. ನಾನು ನಕ್ಕು ಸುಮ್ಮನಾದೆ. ಅರೇ ಈ ಹುಡುಗ ಪರ್ವಾಗಿಲ್ಲ ಅಂತ ಒಳಮನಸ್ಸು ಹೇಳಿತ್ತು.

ನನ್ನ ತೀವ್ರ ಸಂಕಷ್ಟದ ಕಾಲದಲ್ಲಿ ಶ್ರೀನಿವಾಸ್‌ ಧೈರ್ಯ ತುಂಬಿದ್ದು, ಅವರು ನಡೆದುಕೊಂಡ ರೀತಿ, ಪರಿಸ್ಥಿತಿ ನಿಭಾಯಿಸಿದ್ದು... ಅವರ ಮೇಲೆ ಗೌರವವನ್ನು ನೂರ್ಮಡಿಗೊಳಿಸಿತ್ತು. ಶ್ರೀನಿವಾಸ್‌ ಅವರು ಪ್ರಪೋಸ್‌ ಮಾಡಿದ ವಿಷಯವನ್ನು ನನ್ನ ಆತ್ಮೀಯರಾದ ಅಗ್ನಿ ಶ್ರೀಧರ್‌ ಅವರ ಜೊತೆ ಚರ್ಚಿಸಿದೆ. ಗೆಳೆಯರ ಜೊತೆಗೂ ಮಾತನಾಡಿದೆ. ಎಲ್ಲರೂ ಖುಷಿಪಟ್ಟು ಅಭಿನಂದಿಸಿದರು.

ಈ ನಡುವೆ ನಾನು ‘ಕಿರಗೂರಿನ ಗಯ್ಯಾಳಿಗಳು’, ‘ಎದೆಗಾರಿಕೆ’ ಸಿನಿಮಾ ನಿರ್ದೇಶಿಸಿದ್ದನ್ನು ಹೇಳಿದೆ. ‘ಎದೆಗಾರಿಕೆ’ ಸಿನಿಮಾ ನೋಡಿದ ಮೇಲೆ ಈ ಹುಡುಗ ಮತ್ತೆ ನನ್ನ ಬಳಿ ಬರಲಾರ ಅಂದುಕೊಂಡಿದ್ದೆ. ಹಾಗಾಗಲಿಲ್ಲ, ಶ್ರೀನಿವಾಸ್‌ ಮತ್ತೆ ಇಮ್ಮಡಿ ಮೆಚ್ಚುಗೆಯಿಂದಲೇ ಬಂದರು.

ಪೊಲೀಸರಿಂದ ಪೆಟ್ಟುತಿಂದರು: ಅಂತೂ 2020ರ ಏಪ್ರಿಲ್‌ 17ಕ್ಕೆ ಅಗ್ನಿ ಶ್ರೀಧರ್‌ ಅವರ ಕಚೇರಿಯಲ್ಲಿ ಮಂತ್ರ ಮಾಂಗಲ್ಯ ಮಾಡಿಕೊಳ್ಳುವುದಾಗಿ ಸಿದ್ಧತೆ ಮಾಡಿದೆವು. ಸಿದ್ಧತೆಯೇನೋ ಆಗಿತ್ತು. ಆದರೆ, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆಯಾಯಿತು. ಪಾಂಡಿಚೆರಿಯಲ್ಲಿ ನಾನು ನನ್ನ ಮನೆಯಲ್ಲಿ, ಶ್ರೀನಿವಾಸ್‌ ಅವರ ಮನೆಯಲ್ಲಿ ಬಂದಿಯಾಗಿಬಿಟ್ಟೆವು. ಕೊನೆಕೊನೆಗೆ ನನ್ನಲ್ಲಿದ್ದ ಅಡುಗೆ ಸಾಮಗ್ರಿಯೂ ಖಾಲಿಯಾಯಿತು. ಆ ಸಂದರ್ಭದಲ್ಲಿ ಶ್ರೀನಿವಾಸ್‌ ನನಗಾಗಿ ಊಟ ತರಲು ಮುಂದಾದರು. ಈ ವೇಳೆ ಪೊಲೀಸರು ಅವರಿಗೆ ಹಲವಾರು ಬಾರಿ ಹೊಡೆದದ್ದು ಇದೆ.

ಕೋವಿಡ್‌ ಸಂತ್ರಸ್ತರಿಗೆ ನೆರವಾಗುವ ಸ್ವಯಂ ಸೇವಕರಾದ ಶ್ರೀನಿವಾಸ್‌, ಬೇರೆಯವರಿಗೂ ಊಟ ಕೊಡುತ್ತಾ ನನಗೂ ಊಟ ಕೊಟ್ಟು ಹೋಗುತ್ತಿದ್ದರು. ನನಗೆ ಊಟ ಸಿಗದಿದ್ದರೆ ಅವರಿಗಾಗುತ್ತಿದ್ದ ಕಸಿವಿಸಿ ಅಷ್ಟಿಷ್ಟಲ್ಲ. ನಾನಿರುವ ಕಟ್ಟಡದಲ್ಲಿ ಉಳಿಯಲೂ ಅಸಾಧ್ಯವಾದ ಹೊತ್ತಿನಲ್ಲಿ ಶ್ರೀನಿವಾಸ್‌ ತಮ್ಮ ಮನೆಗೆ ಬಂದಿರುವಂತೆ ಹೇಳಿದರು. ಆದರೆ, ಮದುವೆ ಆಗದೇ ಅಲ್ಲಿಗೆ ಹೋಗುವುದು ಸರಿಯಲ್ಲ ಅನಿಸಿತು.

ಶ್ರೀನಿವಾಸ್‌ ಅವರೇ ಆಗ ಪಾಂಡಿಚೆರಿಯ ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರನ್ನು ಭೇಟಿಯಾಗಿ, ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಎಲ್ಲರಿಗೂ ಪರಿಸ್ಥಿತಿ ವಿವರಿಸಿ ಮದುವೆಗೆ ಅನುಮತಿ ಪಡೆದರು. ತೀವ್ರ ನಿರ್ಬಂಧದ ನಡುವೆ ಬೆರಳೆಣಿಕೆಯ ಗೆಳೆಯರ ನಡುವೆ ನಮ್ಮ ಮದುವೆ ಆಯಿತು. ಮಂತ್ರ ಮಾಂಗಲ್ಯಕ್ಕಿಂತಲೂ ಸರಳವಾಗಿ ನಮ್ಮ ಮದುವೆ ನಡೆಯಿತು.

ಇಂದಿಗೂ ನಾವು ಕುವೆಂಪು ಹೇಳಿದಂತೆ ಬಾಳುತ್ತಿದ್ದೇವೆ. ‘ಎಲ್ಲಿಯೂ ನಿಲ್ಲದಿರು...’ ಹೌದು ಒಂದಿಷ್ಟು ದಿನ ಕರ್ಮಭೂಮಿ ಬೆಂಗಳೂರಿನಲ್ಲಿ, ಹುಟ್ಟೂರು ಪಿರಿಯಾಪಟ್ಟಣದ ಬಳಿಯ ಕಿತ್ತೂರಿನಲ್ಲಿ, ಕೊಡಗಿನ ಸೋದರತ್ತೆಯ ಮನೆಯಲ್ಲಿ, ಪಾಂಡಿಚೆರಿಯಲ್ಲಿ... ಹೀಗೆ ಅಲೆದಾಡುತ್ತಲೇ ಇದ್ದೇವೆ. ಶ್ರೀನಿವಾಸ್‌ ನನಗೆ ಪಾಂಡಿಚೆರಿಯ ಮೂಲೆ ಮೂಲೆಗಳನ್ನು, ವ್ಯಕ್ತಿಗಳನ್ನು ವಿವರವಾಗಿ ಪರಿಚಯಿಸಿದ್ದಾರೆ. ಈಗ ನಾವು ಬೆಳೆದ, ನಲಿದ, ಅಲೆದ ಭೂಮಿಗೆ ಕೃತಜ್ಞರಾಗಿದ್ದೇವೆ. ನಮಗೆ ಆತ್ಮತೃಪ್ತಿ ಕೊಡುವ ಕೆಲಸಗಳನ್ನು ಮಾಡುತ್ತಲೇ ಮುಂದುವರಿದಿದ್ದೇವೆ. ಅಲೆಗಳೊಂದಿಗೆ ತೇಲಿದ ಮಾತುಗಳಿವು. ಹಿಡಿಯಲ್ಲಿಟ್ಟು ಕೊಡುವುದು ಕಷ್ಟ. ಆದರೂ ಒಂದಿಷ್ಟು ಹಂಚಿಕೊಂಡಿದ್ದೇನೆ. ಇನ್ನೂ ಇದೆ... ಏನು ಮಾಡಲಿ? ನಮ್ಮ ಮಾತು, ಮೌನಗಳನ್ನು ಅಲೆಗಳೇ ಎಲ್ಲೆಲ್ಲಿಗೋ ಕೊಂಡೊಯ್ದಿವೆ. ನಮ್ಮಿಬ್ಬರನ್ನು ಬಂಧಿಸಿಟ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT