ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಬೆಳೆದಿದ್ದಾಳೆ

ದೀಪಾವಳಿ ಕವನಸ್ಪರ್ಧೆ 2015 -ತೀರ್ಪುಗಾರರ ಮೆಚ್ಚುಗೆ ಪಡೆದ ಕವನ
Last Updated 12 ಡಿಸೆಂಬರ್ 2015, 19:36 IST
ಅಕ್ಷರ ಗಾತ್ರ

ಅಮ್ಮನೂ ಬೆಳೆದಿದ್ದಾಳೆ
ಗೋಣು ತಗ್ಗಿಸಿ, ತಾಳಿ ಕಟ್ಟಿಸಿಕೊಂಡ
ಎಳೆ ಹುಡುಗಿಯಾಗೇನೂ ಉಳಿದಿಲ್ಲ

ಹಳೇ ಕಪ್ಪು ಬಿಳುಪಿನ ಛಾಯಾಚಿತ್ರದಲ್ಲಿ
ಅಪ್ಪನಿಗೆ ಭುಜಕ್ಕಿದ್ದಾಳೆ
ಈಗ ಆ ಅಂತರ
ಅಷ್ಟಾಗಿ ಉಳಿದಿಲ್ಲ
ಹೆಚ್ಚೆಂದರೆ ನಾಲ್ಕು ಬೆಟ್ಟು

ಅಮ್ಮ ಬೆಳೆದಿದ್ದಾಳೆ
ಮುಂಗೋಪಿ ಅಪ್ಪನ ಎದುರಿಸುವಷ್ಟು
ಮಾತಿಗೆ ಮಾತು ಬೆಳೆಸುವಷ್ಟು
ಅದೆಷ್ಟೋ ವರ್ಷಗಳ ಮೌನ
ಮುರಿದು ಹಳೆ ಟ್ರಂಕಿನೊಳಗೆ
ಗೆದ್ದಲು ಹಿಡಿಯಬಹುದಾಗಿದ್ದ
ಅವೆಷ್ಟೋ ಪದಗಳನ್ನು ಹೊರ ತೆಗೆದು
ಬಳಸುವಷ್ಟು.

ಹಿಂದು ಮುಂದಿನದನೆಲ್ಲಾ ಎತ್ತಾಡುತ್ತೀಯಾ?!

ಎಂದು ತಬ್ಬಿಬ್ಬಾಗುತ್ತಾನೆ ಅಪ್ಪ
ಗಂಟಲೊಳಗೇ ವಿಷದಂತೆ ಅದುಮಿಟ್ಟುಕೊಂಡಿದ್ದ
ಅದೆಷ್ಟೋ ಸಂದರ್ಭಗಳ ಮಾತುಗಳನ್ನು
ಆಡುತ್ತಿರುವ ಅಮ್ಮ
ಮೈ ಮರೆತು ಮಾತನಾಡುತ್ತಿದ್ದಾಳೆ
ಸಂದರ್ಭನುಚಿತವಾಗಿ

ಒಮ್ಮೊಮ್ಮೆ ತೀರಾ ಆಗಂತುಕಳಂತೆ
ಕಾಣುತ್ತಾಳೆ, ಕಾಡುತ್ತಾಳೆ.
ನಾ ನೋಡಿ ಬೆಳೆದ ಅಮ್ಮ
ಇವಳಲ್ಲವೇ ಅಲ್ಲ ಎನಿಸುವಷ್ಟು

ಅಪ್ಪನ ಅಟ್ಟಹಾಸದ ಎದುರು ಸಪ್ಪಗಾಗುತ್ತಿದ್ದ
ಸೆರಗಿನ ತುದಿಯಲ್ಲಿ ತನ್ನೆಲ್ಲ ದುಃಖ ದುಮ್ಮಾನಗಳನ್ನು
ಕಟ್ಟಿ, ಹಿಂದಕ್ಕೆ ಚಿಮ್ಮುತ್ತಿದ್ದ,
ಕೂಗುವ ದನಿಗಳಿಗೆ ಸದಾ
ಜೀ ಹುಜೂರ್‌ ಎನ್ನುತ್ತಿದ್ದ ಅಮ್ಮ
ಇವಳಲ್ಲ ಎನಿಸಿಬಿಡುತ್ತಾಳೆ

ಉರಿದು ಹೋಗಿರುವ ಬದುಕಿನ ಬೂದಿಯನ್ನೆಲ್ಲಾ

ಹಿಡಿಹಿಡಿಯಾಗಿ ಒಟ್ಟುಗೂಡಿಸುತ್ತಿರುವಂತೆ
ಕಾಣುವ ಅವಳು, ಮತ್ತೆ ಫೀನಿಕ್ಸ್  ನಂತೆ
ಹಾರುವ ತಯಾರಿಯಲ್ಲಿದ್ದಂತೆ
ತೋರುತ್ತದೆ

ದೀರ್ಘ ಉಸಿರೊಂದನ್ನು ಎಳೆದು ಹೊರಬಿಡುತ್ತೇನೆ
ನನ್ನಮ್ಮ ಆತ್ಮವಿಶ್ವಾಸವಾಗಿ ಆವರಿಸುತ್ತಾಳೆ
ನನ್ನ ಬದುಕಿನ ಲಯವೀಗ ಗೋಚರಿಸುತ್ತದೆ
ನನ್ನಮ್ಮನೊಳಗೆ.

ಎಲ್ಲವನ್ನೂ ಕುಬ್ಜವಾಗಿಸುತ್ತ ಬೆಳೆದ ಅಮ್ಮ
ಹೆಮ್ಮರದ ಸೂಚನೆಯನ್ನು ನೀಡುತ್ತಾ
ನನ್ನೊಳಗೂ ಬೀಜವಾಗಿದ್ದಾಳೆ
ಅಮ್ಮನಂತಿದ್ದೂ ಅಮ್ಮನಂತಾಗದಿರುವ
ಆದರೂ ಮೆಟ್ಟಿ ನಿಲ್ಲುವ
ಎಚ್ಚರವಾಗಿದ್ದಾಳೆ ನನ್ನೊಳಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT