ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಡೋಡ್ತಾ ಆಯುಷ್ಯ!

Last Updated 30 ಮೇ 2015, 19:30 IST
ಅಕ್ಷರ ಗಾತ್ರ

ಓಡುವುದು ನನ್ನಲ್ಲಿ ಹೇಗೆ ಯಾವಾಗ ಶುರುವಾಯಿತು ಎನ್ನುವುದನ್ನು ಹೇಳುವುದು ಕಷ್ಟ. ನನ್ನ ನೆನಪಿನ ಪರಿಧಿಯೊಳಗಿನ ಮೊದಲ ಓಟದ ನೆನಪೆಂದರೆ– ನನ್ನ ಹತ್ತೋ ಹನ್ನೊಂದೋ ವಯಸ್ಸಿನದಿರಬಹುದು. ನಮ್ಮದೊಂದು ನಾಲ್ಕೈದು ಗೆಳೆಯರ ಗುಂಪಿತ್ತು. ಅವರಲ್ಲಿ ಇಬ್ಬರಿಗ ಅನುಕೂಲಸ್ಥರಾಗಿದ್ದ ಅವರಪ್ಪ ಸ್ಕೇಟಿಂಗ್ ತೆಗೆಸಿಕೊಟ್ಟರು. ಕಾಲಿಗೆ ಧರಿಸುವುದು ಹವಾಯಿ ಚಪ್ಪಲಿ ಮಾತ್ರ ಎಂದು ತಿಳಿದಿದ್ದ ಆ ಕಾಲದಲ್ಲಿ, ಸ್ಕೇಟಿಂಗ್ ಅನ್ನುವುದು ನಮಗೆ ಜಗತ್ತಿನ ಅದ್ಭುತಗಳಲ್ಲಿ ಒಂದೆಂಬಂತೆ ಕಂಡಿತ್ತು. ಆ ಇಬ್ಬರೂ ಸಹಜವೆಂಬಂತೆ ಉಳಿದ ಆಟಗಳನ್ನೆಲ್ಲ ಬಿಟ್ಟು, ಬರೀ ಸ್ಕೇಟಿಂಗಿಗೇ ಆತುಕೊಂಡರು. ಇದರಿಂದಾಗಿ ನಾನು ಮತ್ತು ನನ್ನ ಇನ್ನೊಬ್ಬ ಗೆಳೆಯ ಒಂದು ರೀತಿಯ ಆಟ ವಂಚಿತರಾದದ್ದಲ್ಲದೇ, ಅವರ ಸ್ಕೇಟಿಂಗ್ ಕಲಿಯುವಿಕೆಯ ಸಾಹಸಗಳನ್ನೇ ನಮ್ಮ ಆಟದ ಒಂದು ಭಾಗವಾಗಿ ಸ್ವೀಕರಿಸುವುದು ಅನಿವಾರ್ಯ ಆಗಿತ್ತು. ಹೀಗೇ ಸ್ಕೇಟಿಂಗ್ ಕಲಿತು ‘ಎಕ್ಸ್‌ಪರ್ಟ್‌’ ಆದ ಅವರುಗಳು, ದಿನಾ ಮುಂಜಾನೆ ಸ್ಕೇಟಿಂಗ್ ಕಟ್ಟಿಕೊಂಡು ಮೈಲುಗಟ್ಟಲೆ ದೂರ ಹೋಗತೊಡಗಿದರು. ನಾವೂ ಕೂಡ (ಅವರೊಮ್ಮೆಯಾದರೂ ನಮಗೂ ಸ್ಕೇಟಿಂಗ್ ಆಡಲು ಕೊಡಬಹುದು ಎಂಬ ಆಸೆಯನ್ನು ಅದುಮಿಟ್ಟುಕೊಂಡು) ಅವರ ಹಿಂದೆಯೇ ಓಡುತ್ತಿದ್ದೆವು. ಎಷ್ಟು ಓಡುತ್ತಿದ್ದೆವು ಎಂಬುದಂತೂ ಗೊತ್ತಿಲ್ಲ. ‘ಸಿಕ್ಕಾಪಟ್ಟೆ ದೂರ’ ಓಡಿದೆವು ಅಂತ ಅನ್ನಿಸುತ್ತಿದ್ದುದಂತೂ ನಿಜ.

ಶಾಲಾ-ಕಾಲೇಜು ದಿನಗಳಲ್ಲೂ ಓಟದ ಸ್ಪರ್ಧೆಗೆ ತಯಾರಿ, ಮುಂಜಾನೆಯ ವ್ಯಾಯಾಮ, ಫಿಟ್‌ನೆಸ್‌ ಇತ್ಯಾದಿ ಕಾರಣಗಳಿಂದಾಗಿ ಓಟ ಆಗಾಗ ನಡೆಯುತ್ತಲೇ ಇತ್ತು. ಅವಿರತವಾಗಿ ಓಡುವುದನ್ನು ರೂಢಿಸಿಕೊಂಡಿದ್ದೆ ಎಂದು ಹೇಳಲಾರೆ. ಆದರೂ ಈ ಓಟದ ‘ಟಚ್’ ಮಾತ್ರ ಬಿಟ್ಟಿರಲಿಲ್ಲ. ನಂತರ ಓಮಾನ್ ದೇಶದಲ್ಲಿ ನೌಕರಿ ಮಾಡುತ್ತಿದ್ದ ನಾನು ಅನಪೇಕ್ಷಿತವಾಗಿ ತೂಕ ಹೆಚ್ಚಿಸಿಕೊಂಡಿದ್ದರಿಂದ ಓಡುವುದು ಅನಿವಾರ್ಯ­ವಾಯ್ತು. ಜಿಮ್‌ಗೆ ಹೋಗುವ ಆಯ್ಕೆಯೊಂದು ಇತ್ತಾದರೂ ಕೊಬ್ಬು ಇಳಿಸಿಕೊಳ್ಳಲು ಓಟಕ್ಕಿಂತ ಒಳ್ಳೆಯ ವ್ಯಾಮಾಮ ಬೇರೆಯಿಲ್ಲ ಎನ್ನುವುದು ನನಗೆ ತಿಳಿದಿತ್ತು. ನನ್ನ ಓಟಕ್ಕೆ ಜೊತೆ ನೀಡಲು ಇನ್ನೊಬ್ಬ ಕೊಬ್ಬಿದ ಮನುಷ್ಯ ಕೂಡ ದೊರಕಿದ್ದ. ಅಂದ ಹಾಗೆ ಉರಿಬಿಸಿಲಿನ ದೇಶವಾದ ಓಮಾನ್‌ನಲ್ಲಿ ಓಡಲು ಪ್ರಶಸ್ತವಾದ ವಾತಾವರಣವೇನೂ ಇರಲಿಲ್ಲ (ಚಳಿಗಾಲದ 3-4 ತಿಂಗಳು ಹೊರತುಪಡಿಸಿ). ಮುಂಜಾನೆಯಾಗಲೀ ಸಂಜೆ ಯಾಗಲೀ ಒಂದರ್ಧ ಮೈಲಿ ಓಡುತ್ತಲೇ ಮೈಯಲ್ಲಿ ಬೆವರಿಳಿದು ಅಂಗಿ ಅಂಡರ್‌ವೇರ್‌ ಗಳೆಲ್ಲ ದೇಹಕ್ಕಂಟಿ ಬಹಳ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಬರೀ ಒಳಚಡ್ಡಿ ಹಾಕಿ ಓಡಿದರೆ ಹೇಗೆ ಎಂದು ನಾನು ಮತ್ತು ನನ್ನ ಕೊಬ್ಬಿದ ಗೆಳೆಯ ಆರ್ಕಿಮಿಡೀಸನ ಲೆವೆಲ್ಲಿನ ವಿಚಾರ ಮಾಡಿದೆವು. ಅದಕ್ಕೆಂದೇ ಬೆಳಕು ಹರಿಯುವ ಮೊದಲೇ– ನಾಲ್ಕು ಗಂಟೆಗೇ ಎದ್ದು ಒಂದೆರಡು ದಿನ ಓಡಿದೆವು. ಈ ನಮ್ಮ ಸಾಹಸ ತಿಳಿದ ಆಫೀಸಿನ ಕೆಲ ಸಹೋದ್ಯೋಗಿಗಳು, ಒಂದು ವೇಳೆ ಪೋಲೀಸರ ಕೈಗೇನಾದರೂ ಸಿಕ್ಕಿಬಿದ್ದರೆ ನೇರ ಜೈಲೇ ಗತಿಯೆಂದೂ, ‘ಇದರಲ್ಲಿ ತಪ್ಪೇನಿದೆ’ ಎಂದು ಕೇಳುತ್ತಾ ಕೋರ್ಟು ಕಚೇರಿ ಅಲೆಯಲು ಇದು ಭಾರತವಲ್ಲವೆಂದೂ, ಹೆದರಿಸಿದರು. ನಮ್ಮ ಹೊಸ ಹುರುಪಿನ-ಉಡುಪಿನ ಓಟಕ್ಕೆ ನೀರೆರಚಿದಂತಾಗಿ; ಬೆವರಿಳಿಸುವುದು ಅನಿವಾರ್ಯವಾಯ್ತು.

ಓಟದ ಗುರು ಮುರಾಕಾಮಿ
ಆಗಾಗ ಓಡುತ್ತ, ನಡುನಡುವೆ ಬಿಡುತ್ತ ಇದ್ದ ನನಗೆ ಓಟವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದು ಹಾರೂಕಿ ಮುರಾಕಾಮಿ. ಪುಸ್ತಕಗಳು ನನ್ನ ಮನವನ್ನು ಮುದಗೊಳಿಸುತ್ತವೆಯೇ ವಿನಃ, ಪರಿಣಾಮ ಬೀರಿದ್ದು ಅದೇ ಮೊದಲು. ಸ್ವತಃ ಮ್ಯಾರಥಾನ್ ಓಟಗಾರನಾದ ಜಪಾನಿನ ಪ್ರಸಿದ್ಧ ಬರಹಗಾರ ಮುರಾಕಾಮಿ ನನ್ನ ನೆಚ್ಚಿನ ಲೇಖಕ ಕೂಡ. ಆತನ What I Talk About When I Talk About Running ಎನ್ನುವ ಪುಸ್ತಕ ನನ್ನನ್ನು ಆವರಿಸಿದ ಪರಿಯ ಪರಿಣಾಮವಾಗಿಯೇ ನಾನೂ ಮ್ಯಾರಥಾನ್ ಓಟಗಾರನಾಗಿ ಪರಿವರ್ತಿತನಾದದ್ದು.
ನನ್ನ ಮೊದಲನೇ ಮ್ಯಾರಥಾನ್ ರಾಮನಗರದಲ್ಲಿ; ಬೆಂಗಳೂರಿಂದ ಹೊರಗೆ. ಬೆಳಿಗ್ಗೆ ಮೂರು ಗಂಟೆಗೇ ಹೊರಟು ಓಟದ ಸ್ಥಳವನ್ನು ತಲುಪಿ ನೋಡಿದರೆ ಅಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದರು! ಬೆಂಗಳೂರಿನಲ್ಲಿ ರವಿವಾರದ ಸೂರ್ಯೋದಯ ಎಂದಿಗಿಂತಲೂ ತಡ ಎಂದು ನಂಬಿದ್ದ ನನಗೆ ಅಲ್ಲಿ ನೆರೆದಿದ್ದ ಜನರನ್ನು ನೋಡಿ, ಓಟದಲ್ಲಿಯ ಆಕರ್ಷಣೆಯ ಬಗ್ಗೆ ಆಶ್ಚರ್ಯವಾಯಿತು. ರಾಮನಗರ ಪಟ್ಟಣದ ಹೊರಗಿರುವ ಹಳ್ಳಿಗಳ ನಡುವಲ್ಲಿ ಓಟದ ಟ್ರಾಕ್ ನಿಗದಿಪಡಿಸಲಾಗಿತ್ತು. ನಾವೆಲ್ಲಾ ಓಡುತ್ತಿರುವಾಗ ಬದಿಯಲ್ಲಿ ನಿಂತು ಹಳ್ಳಿಯ ಜನ ಇದೆಂಥ ವಿಚಿತ್ರ ಎನ್ನುವಂತೆ ನೋಡುತ್ತಿದ್ದರು. ಅಂದು ನಿಗದಿಯಾಗಿದ್ದ ಅರ್ಧ-ಮ್ಯಾರಥಾನ್ (21 ಕಿ.ಮೀ.) ಓಡದಿದ್ದರೂ, ಹನ್ನೊಂದು ಕಿಲೋಮೀಟರುಗಳಷ್ಟು ಓಡಿ ನನ್ನ ಮೊದಲ ಅಧಿಕೃತ ಮ್ಯಾರಥಾನಿಗೆ ಪದಾರ್ಪಣೆ ಮಾಡಿದೆ. ಅದು ನನಗೆ ಅನನ್ಯ ಅನುಭವದ ಜೊತೆಗೆ ಹೊಸ ಹುರುಪನ್ನೂ ನೀಡಿತ್ತು. ಹತ್ತಿಪ್ಪತ್ತು ಕಿಲೋಮೀಟರುಗಳನ್ನು ಓಡಲು 50- 60 ಕಿ.ಮೀ.  ಕ್ರಮಿಸಿ ಬಂದ ಜನಸಾಗರವನ್ನು (ನನ್ನನ್ನೂ ಸೇರಿ!) ನೋಡಿ ನನಗೆ ಅಚ್ಚರಿಯಾಯಿತು. ಇಷ್ಟೊಂದು ಜನ ಬರುವುದು ಯಾಕೆ, ಅವರಿಗೆ ನಿಜವಾಗಿಯೂ ಕ್ರೀಡೆಯಲ್ಲಿ ಆಸಕ್ತಿಯೇ, ಅಥವಾ ಇದು ಬಿಡುಗಡೆಗೊಂದು ನೆವವೇ; ಬೆಂಗಳೂರಿಂದ ಹೊರಬರುವ ಹಪಹಪಿಯೇ? ನಾವು ಮನರಂಜನೆಗೆಂದು, ಬದಲಾವಣೆಗೆಂದು ಆಗಾಗ ಗುಂಪುಗಟ್ಟಿಕೊಂಡು ‘ಹೊರಗೆ’ ಹೋಗುತ್ತಲೇ ಇರುತ್ತೇವೆ. ನಮ್ಮ ಖುಷಿಗೆ, ನಮ್ಮ ಸಾಂತ್ವನಕ್ಕೆ ಬಾಹ್ಯ ಪರಿಕರಗಳಿಗೆ ಜೋತು ಬಿದ್ದ ಪರಿಣಾಮವೇ ಇದು? ನಮ್ಮೊಳಗೇ ಕಂಡುಕೊಳ್ಳಲಾಗದ ನೆಮ್ಮದಿಯನ್ನು ನಾವಿರುವ ಜಾಗದಿಂದ ದೂರ ಹೋಗಿ ಪಡೆಯಬಹುದೆಂಬ ಭ್ರಮೆಯೇ? ಆ ಕ್ಷಣಕ್ಕೆ ನನಗೆ ರಮಣಮಹರ್ಷಿಗಳು ನೆನಪಾದರು. ಅರುಣಾಚಲ ಬೆಟ್ಟವೇರಿದ ಅವರು ಅಲ್ಲಿಂದ ಕೆಳಗಿಳಿಯಲೇ ಇಲ್ಲವಲ್ಲ!

ನಗರದ ಬೀದಿಗಳಲ್ಲಿ...
ಮ್ಯಾರಥಾನ್ ಓಡಬೇಕೆಂದರೆ ಸತತ ಅಭ್ಯಾಸದ ಅಗತ್ಯವಿದೆ. ಹೀಗಾಗಿ ಕಾರ್ಯ ನಿಮಿತ್ತ ಹೋಗುವ ಬೇರೆ ಬೇರೆ ಊರುಗಳಲ್ಲಿ ಅಭ್ಯಾಸಕ್ಕಾಗಿ ಓಡುವ ಸಾಧ್ಯತೆಗಳನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಹೋಗುವಾಗಲೆಲ್ಲ ನನ್ನ ಓಡುವ ಉಪಕರಣಗಳನ್ನು ಜೊತೆಗೆ ಒಯ್ಯುವುದು ವಾಡಿಕೆ. ಹೊಸ ಊರುಗಳಲ್ಲಿ, ಮೊದಲ ಬಾರಿಗೆ ಓಡುತ್ತಿರುವ ದಾರಿಗಳಲ್ಲಿ ಓಡುವುದೂ ಒಂದು ರೀತಿಯ ಥ್ರಿಲ್! ಆದರೂ ಈ ಶಹರದ ಓಟದಲ್ಲಿ ಅಂಥಾ ಹೊಸ ಅನುಭವಗಳೇನೂ ಆಗುವುದಿಲ್ಲ ಎಂಬುದು ನನ್ನ ಅನುಭವದ ಮಾತು. ಮುಂಬೈ, ಚೆನ್ನೈ, ಕೊಚ್ಚಿ ನಗರಗಳಲ್ಲೆಲ್ಲ ಓಡಿದ್ದೇನೆ. ಹೊಸ ಪರಿಸರ, ರಸ್ತೆ, ಜನ ಎನ್ನುವುದು ಬಿಟ್ಟರೆ ಅಲ್ಲಿ ಮತ್ತೇನಿಲ್ಲ. ಬಹುಶಃ ‘ಓಟ’ ನಗರದ ಅವಿಭಾಜ್ಯ ಅಂಗವಾಗಿರುವುದೂ ಇದಕ್ಕೆ ಕಾರಣವಿರಬಹುದು. ಮುಂಬೈನ ‘ಕ್ವೀನ್ಸ್ ನೆಕ್ಲೆಸ್’ ಎಂದು ಕರೆಯಲಾಗುವ ಸಮುದ್ರ ತೀರದ ಗುಂಟ ಸೂರ್ಯಾಸ್ತದ ವೇಳೆಯಲ್ಲಿ ಓಡಬೇಕೆಂಬ ಬಯಕೆ ಮರೈನ್ ಡ್ರೈವ್‌ನ ರಸ್ತೆಯ ಮೇಲೆ ಸಂಚರಿಸುವಾಗಲೆಲ್ಲ ನನ್ನನ್ನು ಕಾಡುತ್ತಿತ್ತು. ಹೀಗೊಂದು ಭಾನುವಾರ ಮುಂಜಾನೆ ಅಲ್ಲಿ ಓಡಲು ಹೋದರೆ, ಸರಾಗವಾಗಿ ಓಡಲೂ ಸಾಧ್ಯವಾಗದಷ್ಟು ಓಡುಗರು, ನಡೆಯುವವರು! ಹೀಗೆ ಜನರ ನಡುವೆ ಓಡುತ್ತ, ನಡುನಡುವೆ ‘excuse me’, ‘sorry’ ಎನ್ನುತ್ತ, ನಾಲ್ಕು ಕಿ.ಮೀ. ಕ್ರಮಿಸಿ ಹಿಂದಿರುಗಿದೆ. ಬೆಳ್ಳಂಬೆಳಿಗ್ಗೆಯೇ ಇಷ್ಟು ಜನದಟ್ಟಣೆಯಿರುವಾಗ, ಸಂಜೆಯ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಿಕೊಂಡು ನಾನು ನನ್ನ ಸೂರ್ಯಾಸ್ತದ ಓಟಕ್ಕೆ ಪ್ರಯತ್ನಿಸಲಿಲ್ಲ. ಹೀಗೇ ಇತರೇ ಊರುಗಳಲ್ಲಿಯ ಓಟ ನನಗೆ ಅನೇಕ ಮರೆಯಲಾಗದ ಅನುಭವಗಳನ್ನು ಕಟ್ಟಿಕೊಟ್ಟಿವೆ. ಅವುಗಳಲ್ಲಿ ಕೆಲವು ಹೀಗಿವೆ:

ಕರ್ಕಿ ಗುಡ್ಡದಲ್ಲಿ ಮಳ್ಳು ಓಟ!
ಕರ್ಕಿ– ಕರ್ನಾಟಕದ ಕರಾವಳಿಯ ಸುಂದರ ಹಳ್ಳಿ. ಅಲ್ಲಿಯ ಗುಡ್ಡದ ಮೇಲಿಂದ ಕಾಣುವ ಸೂರ್ಯಾಸ್ತ ಮನಮೋಹಕ. ಆ ಗುಡ್ಡದ ಮೇಲೆ ಇನ್ನೊಂದು ಊರನ್ನು ಕೂಡಿಸುವ ರಸ್ತೆ 4-5 ಕಿ.ಮೀಗಳಷ್ಟು ಸಮತಟ್ಟಾಗಿದೆ. ಸಾಯಂಕಾಲದ ವೇಳೆ ಓಡಲು ಇದಕ್ಕಿಂತ ಪ್ರಶಸ್ತ ಸ್ಥಳ ಮತ್ತೊಂದಿರಲಿಕ್ಕಿಲ್ಲ. ಗುಡ್ಡದ ಮೇಲಿಂದ ಕಾಣುವ ಹಸಿರು ಗದ್ದೆ, ಅದರ ಇನ್ನೊಂದು ಅಂಚಿನಲ್ಲಿ ಕಾಣುವ ಸಮುದ್ರ ಹಾಗೂ ಅದರಲ್ಲಿ ಇಂಚಿಂಚಾಗಿ ಜಾರುತ್ತಿರುವ ತಂಪು ಸೂರ್ಯನ ಸೊಗಸು ನೋಡುತ್ತ ನಾನೊಮ್ಮೆ ಓಡುತ್ತಲಿದ್ದೆ. ರಸ್ತೆಯಲ್ಲೋರ್ವ ಎರಡು ಮಕ್ಕಳೊಂದಿಗೆ ಬರುತ್ತಿದ್ದ. ಅದೇ ಊರಿನವನಿರಬೇಕು. ನಾನಾಗಲೇ ಎಂಟು ಕಿಲೋಮೀಟರುಗಳಷ್ಟು ಓಟ ಮುಗಿಸಿದ್ದೆ.

ಮೈ ಬೆವರಿ, ಅಂಗಿ ಒದ್ದೆಯಾಗಿತ್ತು. ಏದುಸಿರು ಬಿಡುತ್ತ ನಾನು ಅವರನ್ನು ದಾಟಿ ಹೋಗುತ್ತಲೇ ಆ ವ್ಯಕ್ತಿಯೊಡನಿದ್ದ ಹುಡುಗಿ (ಐದಾರು ವರ್ಷದವಳಿರಬೇಕು)– ‘ಅಪ್ಪಾ ಅವನ್ಯಾಕೆ ಮಳ್ಳನಂತೆ ಹಾಗೆ ಓಡುತ್ತಿದ್ದಾನೆ..?’ ಎಂದು ಕೇಳಿದ್ದು ನನಗೆ ಕೇಳಿಸಿತು. ಅಪ್ಪ ಕೊಡಬಹುದಾದ ಉತ್ತರದಲ್ಲಿ ನನಗೆ ಕುತೂಹಲವಿತ್ತಾದರೂ, ನಾನಾಗಲೇ ಅವರಿಂದ ತುಸು ದೂರ ಬಂದಿದ್ದೆನಾದ್ದರಿಂದ ನನಗದು ಕೇಳಿಸಲಿಲ್ಲ. ನನಗೆ ವಿವೇಕ ಶಾನಭಾಗರ ಕಾದಂಬರಿಯೊಂದರ ‘ಈ ನಗರದ ಜನರ ಜಾಗಿಂಗ್ ಎಂಬ ಅರ್ಥವಿಲ್ಲದ ಓಟ ನನಗಿನ್ನೂ ಅರ್ಥವಾಗಿಲ್ಲ’ ಎಂಬ ಸಾಲು ನೆನಪಾಯಿತು. ಅಲ್ಲದೇ ನನ್ನ ಹೆಂಡತಿ ‘ಕರ್ಕಿಯಲ್ಲಿ ಓಡುವಾಗ ಹುಷಾರು. ಈ ಬೆಂಗಳೂರಿನಲ್ಲಿ ಮಾಡುವ ಸ್ಟೈಲ್ ಎಲ್ಲ ಮಾಡಲಿಕ್ಕೆ ಹೋಗಬೇಡಿ. ನಿಮ್ಮ ಸೊಂಟಕ್ಕೆ ಕಟ್ಟಿದ ನೀರಿನ ಬಾಟಲಿಯ ಬೆಲ್ಟ್ ನೋಡಿ ಅವರು, ಇವನ್ಯಾವನೋ ಅಡಿಕೆ ಕೊಯ್ಯಲು ಹೊರಟವನಿರಬೇಕು ಅಂದುಕೊಂಡಾರು’ ಎಂದು ಹೇಳಿದ್ದು ನೆನಪಾಗಿ ನಕ್ಕೆ.

ದಾಂಡೇಲಿ ಕಾಡಿನ ನಡುವೆ!
ದಂಡಕಾರಣ್ಯದ ನಡುವೆ ದಾಂಡೇಲಿಯಿಂದ ಗಣೇಶಗುಡಿಗೆ ಹೋಗುವ ಕಿರಿದಾದ ಟಾರ್ ರಸ್ತೆಯಲ್ಲಿನ ಓಟ ರೋಮಾಂಚಕಾರಿ. ಒಂದು ಸಲ, ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಎತ್ತರದ ಮರಗಳ ನಡುವೆ ಸುಮಾರು ಏಳೆಂಟು ಕಿ.ಮೀ. ಓಡಿದ ನಾನು, ಹೀಗೇ ನೋಡೋಣವೆಂದು ರಸ್ತೆಯಿಂದ ಕಾಡೊಳಗೆ ಹೋಗುತ್ತಿದ್ದ ಕಾಲುದಾರಿಯೊಂದನ್ನು ಹಿಡಿದು ಓಟ ಮುಂದುವರಿಸಿದೆ. ಕಾಡಿನ ಕಾಲ್ದಾರಿಯಲ್ಲಿ ಹೋದುದು ಅದೇ ಮೊದಲಲ್ಲವಾಗಿದ್ದರೂ, ಆ ಓಟ ತುಸು ಹೆಚ್ಚೇ ಪ್ರಯಾಸಕರ ಎಂದು ಅನ್ನಿಸತೊಡಗಿತು. ಶುರುವಿನಲ್ಲಿ, ಮೈಗೆ ತಾಕುತ್ತಿರುವ, ಕಾಲಿಗೆ ತಡರುತ್ತಿರುವ ಗಿಡ ಎಲೆ ಬಳ್ಳಿಗಳ ನಡುವೆ ಓಡುವುದು ಒಂಥರಾ ಮಜ ನೀಡುತ್ತಿತ್ತು. ಜೊತೆಗೆ ಹೀಗೊಂದು ಆನೆಯ ಹಿಂಡು ಧುತ್ತನೆ ಎದುರಿಗೆ ಸಿಕ್ಕರೆ ಎಂಬ ಭಯವೂ ಒಳಗೊಳಗೇ ಕಾಡುತ್ತಿತ್ತು. ಆ ಕಾಲ್ದಾರಿ ಮುಂದೆ ಹೋಗುತ್ತಿರುವಂತೆಯೇ ಕಿರಿದಾಗುತ್ತ, ಅಂಕುಡೊಂಕಾಗುತ್ತ, ಕಲ್ಲು, ಗಿಡಗಂಟಿಗಳಿಂದ ಆವೃತ್ತವಾಗತೊಡಗಿತು. ದಟ್ಟ ಕಾಡಿನ ನಡುವೆ ಆಮ್ಲಜನಕದ ಕೊರತೆಯೂ ಇತ್ತೇನೋ. ನಾನು ಬಹಳ ದಣಿದು ಏದುಸಿರು ಬಿಡತೊಡಗಿದೆ. ಇನ್ನು ಓಡಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಬಂದಿದ್ದೆ. ನನ್ನ ಮೊಬೈಲ್‌ನಲ್ಲಿನ Running App ಹದಿನೈದು ಕಿ.ಮೀ.ಗಳನ್ನು ಸೂಚಿಸುತ್ತಿತ್ತು. ನನಗೇಕೋ ಈ App ಸರಿಯಾಗಿ ತೋರಿಸಿರಲಿಕ್ಕಿಲ್ಲ, ನಾನು ಹೆಚ್ಚೇ ಓಡಿದ್ದೇನೆ ಅನ್ನಿಸುತ್ತಿತ್ತು. ಇಷ್ಟೇ ದೂರ ಹಿಂದಿರುಗಿ ಹೋಗಬೇಕಲ್ಲ ಎಂದು ಕಳವಳವೂ ಆಯಿತು. ಅಲ್ಲೇ ಪಕ್ಕದಲ್ಲೇ ಇದ್ದ ಇಳಿಜಾರಿನ ಕೆಳಗೆ ನೀರು ಹರಿಯುವ ಸದ್ದು ಕೇಳಿದಂತಾಗಿ ನನ್ನ ಕುತೂಹಲ ಹೆಚ್ಚಿತು. ನೋಡೇ ಬಿಡುವಾ ಎಂದು ಕೈಗೆ ಸಿಕ್ಕ ಸಣ್ಣ ಮರದ ಕೊಂಬೆಗಳನ್ನು, ಗಿಡಗಳನ್ನು ಹಿಡಿದುಕೊಳ್ಳುತ್ತ ಕೆಳಗೆ ಹೋದೆ. ಕೆಳಗೆ ನಿಜಕ್ಕೂ ಸಣ್ಣ ನದಿ ಹರಿಯುತ್ತಿತ್ತು. ಅದು ಕಾಳಿ ನದಿಯೋ, ಅಥವಾ ಅದಕ್ಕೆ ಹೋಗಿ ಕೂಡುವ ಉಪನದಿಯೋ ಇರಬೇಕು. ಆ ದೃಶ್ಯ ನನ್ನನ್ನು ಉಲ್ಲಸಿತಗೊಳಿಸಿತು. ಮೊದಲೇ ಬಸವಳಿದಿದ್ದ ನಾನು ತಣ್ಣನೆಯ ನೀರನ್ನು ಮುಖಕ್ಕೆ ಎರಚಿಕೊಂಡೆ. ಸ್ನಾನವನ್ನೇ ಮಾಡಿದರೆ ಇನ್ನೂ ಸುಖವಿದೆ ಎನ್ನಿಸಿತು. ತಂಪು ನೀರಿಗೆ ಮೈಒಡ್ಡಿ ತುಸು ವೇಳೆ ಕಳೆದ ನಾನು ನಂತರ ನಿಧಾನಗತಿಯಲ್ಲಿ ನಡೆದುಕೊಂಡು ಟಾರ್ ರಸ್ತೆಗೆ ಬಂದೆ. ಅದೃಷ್ಟವಶಾತ್, ಅಲ್ಲೇ ಅರಣ್ಯ ಇಲಾಖೆಯ ಜೀಪೊಂದು ಸಿಕ್ಕಿತು. ಅದರಲ್ಲೇ ದಾಂಡೇಲಿಗೆ ಬಂದು ತಲುಪಿದೆ.

ಶಾಂಘೈನ ಬೀದಿಗಳಲ್ಲಿ ದಿಕ್ಕುತಪ್ಪಿ...
ಬೇರೆ ಪ್ರದೇಶಗಳಿಗೆ ಹೋದಾಗ ವಾಹನಗಳಲ್ಲಿ ಎಷ್ಟೇ ಓಡಾಡಿದರೂ ಅಲ್ಲಿಯ ಪರಿಸರ ನಮ್ಮ ಮನಕ್ಕೆ ಗಾಢವಾಗಿ ತಟ್ಟುವುದಿಲ್ಲ. ಅದಕ್ಕೇನಿದ್ದರೂ ಕಾಲ್ನಡಿಗೆಯೇ ಸೈ. ಹೆಚ್ಚು ದೂರ ಓಡುತ್ತ ಕ್ರಮಿಸಿದರೆ ಹೆಚ್ಚು ಪ್ರದೇಶಗಳನ್ನು ಅನುಭವಿಸಬಹುದು. ಚೀನಾದ ಶಾಂಘೈನ ಮುಂಜಾವಿನ ವಾತಾವರಣ ನನ್ನನ್ನು ಈಗಲೂ ಕಾಡುತ್ತದೆ. ಆದಷ್ಟು ದೂರ ಒಂದೇ ದಿಕ್ಕಿನಲ್ಲಿ ಓಡಿ, ಹಿಂದಿರುಗಿ ಬರುವಾಗ ಟ್ಯಾಕ್ಸಿಯಲ್ಲಿ ಬರುವುದೆಂಬುದು ನನ್ನ ವಿಚಾರವಿತ್ತು. ಓಟ ಪ್ರಾರಂಭಿಸಿದ ತುಸು ಹೊತ್ತಿನವರೆಗೂ ನಾನು ಮಂಜು ಕವಿದಿದೆ ಎಂದೇ ಅಂದುಕೊಂಡಿದ್ದೆ. ಆದರೆ ಆ ಮಂಜು ಬಿಸಿಲೇರುವವರೆಗೂ ಕಡಿಮೆಯಾಗದೇ ಹಾಗೆಯೇ ಇತ್ತು! ಅದು ಮಂಜಲ್ಲವೆಂದೂ, ಅತಿ ಕಲುಷಿತ ವಾತಾವರಣದ ಪರಿಣಾಮ ಅದೆಂದೂ ನನಗೆ ನಂತರ ತಿಳಿಯಿತು. (ಶಾಂಘೈ ಜಗತ್ತಿನ ಅತೀ ಹೆಚ್ಚು ವಾಯು ಮಾಲಿನ್ಯಯುಕ್ತ ನಗರ ಎಂದು ಇತ್ತೀಚೆಗೆ ಓದಿದ ನೆನಪು). ಹುಆಂಗ್ಫು ನದಿಯ ಸೇತುವೆಯನ್ನೂ ದಾಟಿ ನಾನು ಸುಮಾರು ಹದಿನೈದು ಕಿ.ಮೀ. ಓಡಿದ್ದೆ. ಹಿಂದಿರುಗಬೇಕು ಅಂದುಕೊಂಡಾಗಲೇ ನನಗೆ ಅಲ್ಲಿಯ ನಿಜವಾದ ಸಮಸ್ಯೆಯೇನೆಂಬುದು ಅರಿವಾದುದು.

ನಾನು ತಂಗಿರುವ ಹೊಟೇಲಿನ Access Card ನನ್ನಲ್ಲಿತ್ತು. ಅದನ್ನು ಯಾವುದೇ ಟ್ಯಾಕ್ಸಿಯವನಿಗೆ ತೋರಿಸಿದರೂ ಅಲ್ಲಿಗೆ ನನ್ನನ್ನು ತಂದು ಬಿಡುತ್ತಾನೆಂಬುದು ನನ್ನ ವಿಚಾರ. ಆದರೆ ಕಾರ್ಡಿನಲ್ಲಿ ವಿಳಾಸ ಇಂಗ್ಲಿಷಿನಲ್ಲಿದೆ ಹಾಗೂ ಅದನ್ನು ಯಾರೂ ಓದಲಾರರು ಎಂದು ನನಗೆ ತಡವಾಗಿ ತಿಳಿಯಿತು. ಯಾವುದೇ ಟ್ಯಾಕ್ಸಿಯವನಿಗೆ ತೋರಿಸಿದರೂ ಆತ ಓದಲಾಗದೇ ಕೈತಿರುವಿಸಿ ಹೋಗಿಬಿಡುತ್ತಿದ್ದ. ನಾನು ದಾರಿಯಲ್ಲಿ ಓಡಾಡುವವರಿಗೆ ಕಾರ್ಡ್ ತೋರಿಸಿ ಅದರಲ್ಲಿಯ ವಿಳಾಸ ಟ್ಯಾಕ್ಸಿಯವರಿಗೆ ತಿಳಿಸುವಂತೆ ದುಂಬಾಲು ಬೀಳತೊಡಗಿದೆ. ಆದರೆ, ಯಾರನ್ನೇ ಕೇಳಿದರೂ ಅವರು ಇಂಗ್ಲಿಷ್ ಓದಲಾರದವರಾಗಿದ್ದರು. ನನಗೆ ನಿಜಕ್ಕೂ ಫಜೀತಿಗಿಟ್ಟುಕೊಂಡಿತ್ತು. ಆಗಲೇ ಒಂಬತ್ತು ಗಂಟೆಯಾಗಿ ನಾನು ಹೋಗಬೇಕಿರುವ ಮೀಟಿಂಗಿಗೆ ತಡವಾಗತೊಡಗಿತ್ತು. ಶಾಂಘೈನ ಬೀದಿಗಳಲ್ಲೂ ಆಫೀಸಿಗೆ ಹೋಗುವ ಜನರ ಓಡಾಟ ಹೆಚ್ಚಾಗತೊಡಗಿತು. ನಾನು ಕೋಟು ಧರಿಸಿದವರನ್ನೇ ಹುಡುಕಿ ಹೋಗಿ ಕಾರ್ಡ್ ತೋರಿಸತೊಡಗಿದೆ. ಆದರೆ ಅವರಿಗೂ ಓದಲು ಬರುತ್ತಿಲ್ಲ! ಕೊನೆಗೆ ಯಾರೋ ಒಬ್ಬ ಪುಣ್ಯಾತ್ಮ ಸಿಕ್ಕು, ಆತನ ಹತ್ತಿರ ವಿಳಾಸವನ್ನು ಚೀನೀ ಭಾಷೆಯಲ್ಲಿ ನನ್ನ ಅಂಗೈ ಮೇಲೆ ಬರೆಸಿಕೊಂಡು, ಅದನ್ನು ಟ್ಯಾಕ್ಸಿಯವನಿಗೆ ತೋರಿಸಿ ನನ್ನ ಹೊಟೇಲಿನ ಕೋಣೆ ಸೇರಿಕೊಂಡೆ.

ಕಲ್ಪಿತ ಓಟದಿಂದ ನಿಜ ಓಟದತ್ತ!
ನಾನು ಅಂಥ ದೊಡ್ಡ ಓಟಗಾರನೇನಲ್ಲ. ಓಟದಲ್ಲಿ ಸಾಧಿಸಬೇಕೆನ್ನುವುದೇನೂ ನನಗಿಲ್ಲ. ಓಡುವಾಗ ಯಾರಾದರೂ ನನ್ನನ್ನು ನಿಲ್ಲಿಸಿ ‘ನೀನೇಕೆ ಓಡುತ್ತೀ’ ಎಂದು ಕೇಳಿದರೆ ನನ್ನಲ್ಲಿ ನಿಖರವಾದ ಉತ್ತರವೇ ಇಲ್ಲ. ನಾನು ಹೀಗೇ ಸುಮ್ಮನೇ ಓಡುತ್ತೇನೆ. ನನ್ನದೇ ಲೋಕದಲ್ಲಿ, ಮನದ ಏಕಾಂತದಲ್ಲಿ ಓಡುವುದೆಂದರೆ ನನಗಿಷ್ಟ. ಸಾಲದೆಂಬಂತೆ Running can also be a meditation ಎಂದು ಓಶೋ ಹೇಳಿದ್ದಾರೆಂಬುದು ನನ್ನ ತಲೆಯಲ್ಲಿರುವುದಕ್ಕೋ ಏನೋ, ಈ ಓಟ ನನಗೊಂಥರಾ ಮೆಡಿಟೇಷನ್ನಿನಿಂದ ಸಿಗಬಹುದಾಗಿದ್ದ ಖುಷಿಯನ್ನು ನೀಡಿದೆ.

ಅಂದಹಾಗೆ, ಓಟದ ನಿಜವಾದ ಮಜಾ ಸಿಗುವುದು ಆರೇಳು ಕಿಲೋಮೀಟರುಗಳು ಓಡಿದ ನಂತರವೇ. ಎಷ್ಟೋ ಬಾರಿ ನನಗೆ ಎಂಟು-ಒಂಬತ್ತು-ಹತ್ತು ಕಿಲೋಮೀಟರುಗಳನ್ನು ಓಡುತ್ತಿರುವಾಗ ಮಿದುಳು ಒಂದು ರೀತಿಯ ‘ನೋ-ಮೈಂಡ್’ ಸ್ಥಿತಿಗೆ ಹೋಗುತ್ತಿರುವಂತೆ ಭಾಸವಾಗಿದೆ. ನಾನು ಗಮನಿಸಿದಂತೆ ನಗರಗಳಲ್ಲಿ ಇಂದು ಈ ಮ್ಯಾರಥಾನ್ ಓಟದ ಆಕರ್ಷಣೆ ಹೆಚ್ಚುತ್ತಿದೆ. ಅದರಲ್ಲೂ ಮೂವತ್ತೈದು ದಾಟಿದವರಲ್ಲಿ ಇದು ಹೆಚ್ಚು. ಈ ಓಟಕ್ಕೆ, ಆರೋಗ್ಯ, ಫಿಟ್‌ನೆಸ್‌– ಇವುಗಳನ್ನೆಲ್ಲ ಮೀರಿದ ಮತ್ಯಾವುದೋ ಆಯಾಮ ಇದೆಯಾ?

ಶಹರ ಜೀವನದ ದಿನನಿತ್ಯದ virtual ಓಟದಿಂದ ಬಸವಳಿದವರಿಗೆ ಈ actual ಓಟ ಪರ್ಯಾಯದಂತೆಯೂ ನನಗೆ ಕಂಡಿದೆ. ಈ ನಲವತ್ತರ ಹೊಸ್ತಿಲಲ್ಲಿ ಕಾಲಿಗೆ ಬೂಟು ಕಟ್ಟಿ ಓಡಲು ನಿಂತ ನಾನು ಅಂದುಕೊಳ್ಳುತ್ತೇನೆ– ‘ನಲವತ್ತರ ನಂತರ ಜೀವನ ಆರಂಭವಾಗುತ್ತದೆ’ ಎನ್ನುವುದನ್ನು, ‘ನಲವತ್ತರ ನಂತರ ಜೀವನದ ಓಟ ಶುರುವಾಗುತ್ತದೆ’ ಎಂದು ಬದಲಾಯಿಸಿಕೊಳ್ಳಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT