ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇಕೆ ಕನ್ನಡದಲ್ಲಿ ಬರೆಯುತ್ತೇನೆ?

Last Updated 20 ಫೆಬ್ರುವರಿ 2016, 19:40 IST
ಅಕ್ಷರ ಗಾತ್ರ

ಬರಹಗಾರನೊಬ್ಬ ತನ್ನ ಮಾತೃಭಾಷೆಯಲ್ಲಿ ಘನವಾದುದನ್ನು ಬರೆದರೂ, ಅದು ಇಂಗ್ಲಿಷ್‌ನಲ್ಲಿ ಇಲ್ಲದ ಕಾರಣಕ್ಕೆ ಅಪಾರ ಸಂಖ್ಯೆಯ ಓದುಗರನ್ನು ಕಳೆದುಕೊಳ್ಳುತ್ತದೆ. ಹೀಗೆ, ಬರಿಯ ಭಾಷೆಯ ಕಾರಣಕ್ಕೆ ತಾನು ಬರೆದದ್ದು ಮುಂದಿನ ಪೀಳಿಗೆಗೆ ತಲುಪುವುದಿಲ್ಲ ಎನ್ನುವುದನ್ನು ಒಬ್ಬ ಲೇಖಕ ಅರಗಿಸಿಕೊಳ್ಳುವುದು ಕಷ್ಟ.

ನನ್ನ ಈ ಹೊತ್ತಿನ ಪೀಳಿಗೆಯ ಬರಹಗಾರರಲ್ಲಿ ‘ನಾನೇಕೆ ಬರೆಯುತ್ತೇನೆ’ ಎನ್ನುವ ಪ್ರಶ್ನೆಗಿಂತ ತೀವ್ರವಾಗಿ ‘ನಾನೇಕೆ ಕನ್ನಡದಲ್ಲಿ ಬರೆಯುತ್ತೇನೆ’ ಎನ್ನುವ ಪ್ರಶ್ನೆ ಹೆಚ್ಚು ಕಾಡಿದಂತಿದೆ. ಕನ್ನಡದಲ್ಲಿ ಪ್ರಕಟವಾಗುವ ಗಂಭೀರ ಲೇಖನಗಳನ್ನು ಓದುವವರ ಸರಾಸರಿ ವಯಸ್ಸು ಖಂಡಿತಕ್ಕೂ ನಲವತ್ತು ದಾಟಿರುತ್ತದೆ ಎನ್ನುವುದು ನನ್ನ ಅಂದಾಜು. ‘ಯಾರಿಗಾಗಿ ಕನ್ನಡದಲ್ಲಿ ಬರೆಯುತ್ತಿದ್ದೇನೆ’ ಎಂದು ಯೋಚಿಸಿಕೊಂಡರೆ ಹೊಳೆಯುವ ಉತ್ತರಗಳು ಭಾಷೆಯ ಮತ್ತು ಬರಹಗಾರನ ಭವಿಷ್ಯದ ದೃಷ್ಟಿಯಿಂದ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಒಮ್ಮೆ ನನ್ನ ಅಕ್ಕನ ಮಗಳು ಫೋನ್ ಮಾಡಿ ‘ಮಾವ, ಇಂದು ನಿನ್ನ ಲೇಖನ ಪ್ರಕಟವಾಗಿದೆಯಂತಲ್ಲಾ. ಚೆನ್ನಾಗಿದೆ ಎಂದು ಅಮ್ಮ ಹೇಳುತ್ತಿದ್ದಳು. ನನಗೆ ಆ ಮಟ್ಟದ ಕನ್ನಡವನ್ನು ಅರ್ಥಮಾಡಿಕೊಳ್ಳುವುದು ಕಷ್ಟ.

ಇಂಗ್ಲಿಷಿಗೆ ಅನುವಾದ ಮಾಡಿಕೊಟ್ಟರೆ ನೋಡು ನಾನೂ ನಿನ್ನ ಓದುಗಳಾಗುತ್ತೇನೆ’ ಎಂದಿದ್ದಳು. ಇಂದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರಾಗಿರುವ, ಆದರೆ ಭದ್ರಾವತಿಯಲ್ಲಿ ಬೆಳೆದ ಹುಡುಗಿ ಅವಳು. ಓದಿದ್ದೆಲ್ಲಾ ಇಂಗ್ಲಿಷ್ ಮಾಧ್ಯಮದಲ್ಲೇ. ಮಾತೃಭಾಷೆಯಾಗಿ ಕನ್ನಡ ಬರುವ ಆದರೆ ಅದರಲ್ಲಿಯೇ ಸಾಹಿತ್ಯವನ್ನು ಓದುವ ಮಟ್ಟದಲ್ಲಿ ಭಾಷಾಜ್ಞಾನ, ಅಭ್ಯಾಸ ಮತ್ತು ಪರಿಶ್ರಮಗಳಿಲ್ಲದ ನನ್ನ ಅಕ್ಕನ ಮಗಳು ಒಂದು ಅಪವಾದವಲ್ಲ. ಅವಳು ಆ ಬಗೆಯ ಪೀಳಿಗೆಯ ಪ್ರತಿನಿಧಿಯಾಗುತ್ತಾಳೆ. ಆ ಸಾಲಿಗೆ ನನ್ನ ಮಕ್ಕಳು ಮತ್ತು ನನ್ನ ಪೀಳಿಗೆಯ ಇತರ ಲೇಖಕರ ಮಕ್ಕಳೂ ಸೇರುತ್ತಾರೆ. ಬರಿಯ ಭಾಷೆಯ ಕಾರಣಕ್ಕೆ ತಾನು ಬರೆದದ್ದು ಮುಂದಿನ ಪೀಳಿಗೆಗೆ ತಲುಪುವುದಿಲ್ಲ ಎನ್ನುವುದನ್ನು ಒಬ್ಬ ಲೇಖಕ ಅರಗಿಸಿಕೊಳ್ಳುವುದು ಕಷ್ಟ.

ನನ್ನ ಅಕ್ಕನ ಮಗಳ ರೀತಿಯಲ್ಲೇ ನನ್ನ ಆಫೀಸಿನಲ್ಲಿಯೂ ಭಾಷೆ ಮತ್ತು ಸಾಹಿತ್ಯ ನನ್ನನ್ನು ಕಾಡಿದ್ದಿದೆ. ನನ್ನ ಪುಸ್ತಕಗಳು ಪ್ರಕಟವಾದಾಗ ಆ ವಿಚಾರ ತಿಳಿದ ಆಫೀಸು ಮಂದಿ ‘ಹೌ ನೈಸ್’ ಎಂದು ಕೈಕುಲುಕುವಷ್ಟಕ್ಕೆ ಸಾಹಿತ್ಯಾಭಿಮಾನ ಮುಗಿಯುತ್ತದೆ. ಇನ್ನೂ ಕೆಲವರು ‘ನಿಮ್ಮ ಬರಹಗಳನ್ನು ಇಂಗ್ಲೀಷಿಗೇಕೆ ಅನುವಾದ ಮಾಡಬಾರದು’ ಎಂದು ಕಳಕಳಿಯಿಂದ ಕೇಳಿದ್ದೂ ಇದೆ. ಕನ್ನಡಿಗರ ಸಂಖ್ಯೆಯೇ ಗಣನೀಯವಾಗಿ ಕಡಿಮೆಯಿರುವಲ್ಲಿ ಇದು ಸಹಜ ಕೂಡಾ. ಒಮ್ಮೆ ನನ್ನ ಆಫೀಸಿನ ವತಿಯಿಂದ ಹೈದರಾಬಾದಿನಲ್ಲಿ ನಡೆದ ದೇಶಮಟ್ಟದ ಸಮಾವೇಶಕ್ಕೆ ಇಂಗ್ಲಿಷ್ ನಾಟಕವೊಂದನ್ನು ಬರೆದು ಆಡಿಸಿದ್ದೆ.

ಅಂದಿನಿಂದ ನನ್ನ ಆಫೀಸು ವರ್ತುಲದಲ್ಲಿ ನಾಟಕ ರಚನಕಾರನೆಂಬ ಬಿರುದನ್ನು ಹೊತ್ತು ಖ್ಯಾತನಾಗಿದ್ದೇನೆ. ಇಪ್ಪತ್ತು ಪುಟಗಳ ಒಂದು ಸಣ್ಣ ನಾಟಕ, ಅದೂ ಅಪ್ರಕಟಿತ, ನೂರಾರು ಪುಟಗಳ ನನ್ನೆಲ್ಲಾ ಕನ್ನಡ ಪ್ರಕಟಿತ ಪುಸ್ತಕಗಳಿಗೆ ಸವಾಲೆಸೆಯುವಂತೆ ಕಪಾಟಿನಲ್ಲಿದೆ. ಕಬಡ್ಡಿ ಆಟದಂತೆ ಎದುರುಬದುರಿನ ಅಂಕಣವನ್ನು ಹಿಡಿದು ಒಂದನ್ನೊಂದು ದುರುಗುಟ್ಟಿನೋಡುತ್ತವೆ. ಆದರೂ ನಾನು ಕನ್ನಡದಲ್ಲಿ ಬರೆಯುತ್ತೇನೆ. ಏಕೆಂದರೆ ಬರೆದ ಸಂತೋಷ ಮತ್ತು ತೃಪ್ತಿ ನನಗೆ ದಕ್ಕುವುದು ಕನ್ನಡದಲ್ಲಿ ಬರೆದಾಗ ಮಾತ್ರವೆ ಎನ್ನುವುದು ನನಗೆ ಮನದಟ್ಟಾಗಿದೆ. ಮೇಲಾಗಿ, ನಾನು ಬದುಕುತ್ತಿರುವ ಪರಿಸರವನ್ನು ಬರವಣಿಗೆಯಲ್ಲಿ ಹಿಡಿದಿಡಲು ಕನ್ನಡದಲ್ಲಿ ಮಾತ್ರವಲ್ಲದೆ ಮತ್ಯಾವ ಭಾಷೆಯಿಂದಲೂ ನನ್ನಿಂದಾಗದು ಎನ್ನುವುದೂ ನನಗೆ ಮನದಟ್ಟಾಗಿದೆ.

ಅದರಲ್ಲೂ ಕಲ್ಪಿತ ಕಥನದಂತಹ (fiction) ಸಾಹಿತ್ಯದಲ್ಲಿ ಪಾತ್ರಗಳ ಸಂಭಾಷಣೆ ಮತ್ತು ಭಾವೋದ್ವೇಗಗಳೇ ಮುಖ್ಯ ಭೂಮಿಕೆಯಾಗಿರುವಾಗ ಪಾತ್ರಗಳು ಸಹಜವಾಗಿ ಮಾತನಾಡಬಲ್ಲ ತಮ್ಮ ಸಮಾಜದ ಭಾಷೆಯ ಹೊರತಾಗಿ ಬೇರೆ ಭಾಷೆಯನ್ನು ಕಲ್ಪಿಸಿಕೊಳ್ಳುವುದು ಎಷ್ಟು ಅಸಹಜ ಮತ್ತು ಕಷ್ಟವೆನ್ನುವುದು ನನಗೆ ನನ್ನದೇ ಅನುಭವಗಳಿಂದ ವೇದ್ಯವಾಗಿದೆ. ನಾನು ನನ್ನ ಮೊದಲ ಕಾದಂಬರಿ ‘ದ್ವೀಪವ ಬಯಸಿ’ ಬರೆದಾಗ ಈ ಭಾಷಾಸಮಸ್ಯೆ ನನ್ನನ್ನು ಬಹಳವಾಗಿ ಕಾಡಿತು. ಕಥೆಯು ಹಂಚಿಕೊಂಡಂತೆ ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲಿ ನಡೆಯುತ್ತದೆ. ನನ್ನ ಕಥಾನಾಯಕ ಬೇಲೂರಿನ ಹತ್ತಿರದ ಹಳ್ಳಿಯವನು. ಮುಂದೆ ಅವನು ತನ್ನ ಪತ್ನಿಯೊಂದಿಗೆ ಅಮೆರಿಕಕ್ಕೆ ವಲಸೆ ಹೋಗುತ್ತಾನೆ.

ಬೇಲೂರಿನ ಪರಿಸರದ ಚಿತ್ರಣದಲ್ಲಿ ಬರವಣಿಗೆಗೆ ಸಹಜವಾಗಿ ಬಂದ ಮಾತುಗಳು– ಒಕ್ಕಲಿಗ ಉಚ್ಚಾರಣೆಯ ಅದರ ರೀತಿ, ಸಂದರ್ಭಕ್ಕನುಗುಣವಾಗಿ ಬದಲಾಗುವ ಮಾತಿನ ರಸಾವಸ್ಥೆಗಳು, ಗಾದೆಗಳು, ಬೈಗುಳಗಳು, ಹಾಡು, ಕವಿತೆ– ಎಲ್ಲವೂ ಅಮೆರಿಕದ ಪರಿಸರದಲ್ಲಿ ಗಂಟಲು ಕಳೆದುಕೊಂಡು ಮೂಕಾಗಿಬಿಟ್ಟವು. ಅಲ್ಲಿನ ಮಾತೇ ಬೇರೆ, ಬೈಗುಳಗಳೇ ಬೇರೆ ಮತ್ತು ಮಾತಿಗೂ ಭಾವಕ್ಕೂ ಇರುವ ರಸಸ್ಥಲಗಳೇ ಬೇರೆ. ಕಾಡಿನ ಹುಲಿಯನ್ನು ಪಂಜರದಲ್ಲಿಟ್ಟಂತೆ ನನ್ನ ಕಥೆಯ ಅಭಿವ್ಯಕ್ತ ಭಾಷೆ ಆ ಸಣ್ಣ ಚೌಕಟ್ಟಿಗೆ ಖಿನ್ನವಾಗಿ ಮುದುರಿ ಕುಳಿತುಬಿಟ್ಟಿತು. ಅಮೆರಿಕದ ಕಥೆಗೆ ಕನ್ನಡ ಹೊರಗಿನ ಭಾಷೆಯಾಯಿತು; ಹಾಗೆಯೇ ಬೇಲೂರಿನ ಸನ್ನಿವೇಶಗಳಿಗೆ ಇಂಗ್ಲಿಷ್ ಪರಕೀಯವಾಯಿತು.

ಯಾರನ್ನಾದರೂ ಕೆಲಸದಿಂದ ವಜಾ ಮಾಡಬೇಕಾದರೆ You are fired ಎನ್ನುವ ಮಾತು ಅಮೆರಿಕನ್ ಇಂಗ್ಲಿಷ್‌ನಲ್ಲಿ ಜನಪ್ರಿಯ. ಅಮೆರಿಕದ ಸನ್ನಿವೇಶದಲ್ಲಿ ನಡೆಯುವ ಕಥೆಯಲ್ಲಿ ಅಂತಹ ಒಂದು ಸಣ್ಣ ಮಾತನ್ನು ಅಷ್ಟೇ ತೀವ್ರತೆಯನ್ನು ಉಳಿಸಿಕೊಳ್ಳುವಂತೆ ಕನ್ನಡದಲ್ಲಿ ಬರೆಯುವುದು ಒಂದು ಅಸಾಧ್ಯ ಸಾಹಸವಾಯಿತು. ಭಾಷೆ ಮತ್ತು ಅದರ ಪರಿಸರಕ್ಕೆ ಬಿಡಿಸಲಾರದ ಸಂಬಂಧವಿರುತ್ತದೆ. ಭಾಷೆಯಿಂದ ಸನ್ನಿವೇಶಗಳು ಹುಟ್ಟಿಕೊಂಡರೆ ಸನ್ನಿವೇಶಗಳಿಂದ ಭಾಷೆಯು ಬೆಳೆಯುತ್ತದೆ. ಕಥೆಯೊಂದರ ರಸಾನುಭವದಲ್ಲಿ ಭಾಷೆಯ ಪಾತ್ರ ಹಿರಿಯದು. ಒಂದು ಭಾಷೆಯ ಸಹಜ ನುಡಿಗಟ್ಟು ಮತ್ತೊಂದು ಭಾಷೆಯಲ್ಲಿ ಸಂಪೂರ್ಣ ಪರಕೀಯವಾಗಬಹುದು.

ಪರಿಸ್ಥಿತಿ ಹಾಗಿರುವಾಗ ಬರೀ ಸನ್ನಿವೇಶವನ್ನು ಉಳಿಸಿಕೊಂಡು ಭಾಷೆಯನ್ನು ಬದಲಿಸಿಬಿಡುತ್ತೇನೆ ಎನ್ನುವುದು ಹಾಲನ್ನಷ್ಟೇ ಉಳಿಸಿಕೊಂಡು ಅದರಿಂದ ನೀರಿನಂಶವನ್ನು ಹೀರಿ ಹಾಕುತ್ತೇನೆ ಎನ್ನುವಷ್ಟೇ ಸಾಹಸ. ಅನುವಾದಕರು ಎದುರಿಸುವ ಈ ದೊಡ್ಡ ಸವಾಲು ಪರದೇಶದಲ್ಲಿ ಕುಳಿತು ಕಥೆ ಬರೆಯಲು ಹೊರಟ ನನ್ನನ್ನೂ ಸಮವಾಗಿ ಕಾಡಿತು. ನನ್ನ ಎರಡನೆಯ ಕಾದಂಬರಿಯನ್ನು ಬರೆಯುವ ಹೊತ್ತಿಗೆ ಈ ಸಮಸ್ಯೆ ಹೇಳಹೆಸರಿಲ್ಲವಾಯಿತು. ಕಥೆ ನಡೆಯುವುದು ಚಿಕ್ಕಮಗಳೂರಿನ ಪರಿಸರ. ಪಾತ್ರಗಳು ಸ್ಥಳೀಯ. ಕಥೆಯಲ್ಲಿ ‘You are fired’ ಬಗೆಯ ಸನ್ನಿವೇಶವೇ ಮತ್ತೆ ಎದುರಾದಾಗ ಮ್ಯಾನೇಜರ್ ಪಾತ್ರ ಸಿಟ್ಟಿನಿಂದ ಎದ್ದುನಿಂತು ‘ತೊಲಗಾಚೆ! ಇನ್ನೊಂದು ಸಲ ಈ ಕಡೆ ತಲೆಹಾಕುದ್ರೆ ನೋಡು ಸೂಳೆಮಗನೆ...’ ಎಂದು ಕೂಗಾಡುತ್ತದೆ.

ಭಾಷೆ ಮತ್ತು ಸನ್ನಿವೇಶಗಳು ಒಂದೇ ನೆಲೆಯಿಂದ ಬಂದಾಗ ಬರವಣಿಗೆ ಸುಲಭ ಮತ್ತು ಸಹಜವಾಗುತ್ತದೆ. ಬರೀ ಸಂಭಾಷಣೆಯ ತಂತ್ರಗಳಿಗಳಿಗಷ್ಟೇ ಅಲ್ಲ, ಭಾಷೆ ವ್ಯಕ್ತಿತ್ವವನ್ನು ತೋರಿಸುವ ಸಾಧನವೂ ಆಗಿರುತ್ತದೆ. ಸನ್ನಿವೇಶಕ್ಕೆ ತಕ್ಕನಾಗಿ ಸಿನಿಮಾ ಗೀತೆ ಹಾಡುವ ಮತ್ತು ಸನ್ನಿವೇಶಗಳಿಗೆ ತಕ್ಕನಾಗಿ ವಚನಗಳನ್ನು ಹೇಳುವ ಪಾತ್ರಗಳ ನಡುವೆ ದೊಡ್ಡ ವ್ಯಕ್ತಿತ್ವ ಭೇದವಿರುತ್ತದೆ. ಮಾತುಗಳಲ್ಲಿ ಪರಿಸರದ ಪುರಾಣೇತಿಹಾಸಗಳೂ ಅಡಕವಾಗಿರುತ್ತವೆ. ‘ಅಲ್ಲೊಂದು ರಂಪರಾಮಾಯಣವೇ ನಡೆಯಿತು’ ಎನ್ನುವ ಮಾತು ಬಂದರೆ ಪರಿಸ್ಥಿತಿಯ ತೀವ್ರತೆ ಅಥವಾ ಪೀಕಲಾಟ ಓದುಗರನ್ನು ಸುಲಭವಾಗಿ ಮುಟ್ಟುತ್ತದೆ. ಕನ್ನಡ ಭಾಷೆಯಲ್ಲಿ ಸೃಷ್ಟಿಯಾಗುವ ಅಮೆರಿಕನ್ ಪಾತ್ರದಿಂದ ಈ ಮಾತನ್ನು ಆಡಿಸಲು ಸಾಧ್ಯವಿಲ್ಲ. ಕರ್ನಾಟಕದ ನೆಲೆಯಲ್ಲಿ ಹುಟ್ಟುವ ಪಾತ್ರಗಳಿಗೆ ಸಹಜವಾಗಿ ಕನ್ನಡದಲ್ಲಿ ಮಾತ್ರ ಮಾತನಾಡುವುದು ಸಾಧ್ಯ. ಬರವಣಿಗೆಯೂ.

ನಮ್ಮ ಬದಲಾದ ಕಾಲದಲ್ಲಿ ಭಾರತೀಯ ಮಹಾನಗರಗಳನ್ನು ಸಾಹಿತ್ಯದಲ್ಲಿ ಹಿಡಿಯಬಯಸುವ ಲೇಖಕನೂ ದೊಡ್ಡ ಭಾಷಾ ಸಮಸ್ಯೆಯನ್ನೇ ಅನುಭವಿಸುತ್ತಿದ್ದಾನೆ. ಬೆಂಗಳೂರಿನ ಐಟಿ ಪರಿಸರದಲ್ಲಿ ಕನ್ನಡ ಸಹಜ ಮಾತಲ್ಲ. ಅಲ್ಲಿ ಯಾರೂ ‘ರಂಪರಾಮಾಯಣ’ ಎನ್ನುವ ಪದವನ್ನು ಬಳಸುವುದಿಲ್ಲ. ತಮ್ಮತಮ್ಮಲ್ಲೇ ಪರಸ್ಪರ ಮಾತನಾಡಿಕೊಳ್ಳುವಾಗ ಕನ್ನಡ, ತಮಿಳು, ತೆಲುಗು, ಮರಾಠಿ ಮುಂತಾದ ಭಾರತೀಯ ಭಾಷೆಗಳಲ್ಲಿ ಸಂಭಾಷಿಸುವ ಜನ ಗುಂಪಿನೊಂದಿಗೆ ಅಥವಾ ಸಾರ್ವಜನಿಕವಾದ ಕ್ಷಣದಲ್ಲೇ ಇಂಗ್ಲಿಷನ್ನು ಬಳಸುತ್ತಾರೆ. ಇಂಗ್ಲಿಷ್ ಇಲ್ಲಿ ಯಾವ ರಸಾನುಭವವಿಲ್ಲದ ವ್ಯವಹಾರಿಕೆಯ ಭಾಷೆ ಮಾತ್ರ.

ಮಾತುಗಳಲ್ಲಿ ಪೂರ್ವದ ರಾಮಾಯಣವೂ ಕೇಳುವುದಿಲ್ಲ, ಪಶ್ಚಿಮದ ಟ್ರೋಜಾನ್ ವಾರ್ ಕೂಡಾ. ಬರೀ ಅಗತ್ಯ ಪೂರೈಕೆಗಾಗಿ ಮತ್ತು ಹೆಚ್ಚಾಗಿ ಕ್ರಿಯಾಪದಗಳನ್ನೇ ಹೊಂದಿರುವ ಭಾಷೆ ಇಲ್ಲಿ ಸಂಪರ್ಕ ಭಾಷೆ. ಸಾಹಿತ್ಯದ ಸಾರವೇ ಇಲ್ಲದ ಆ ಭಾಷೆಯಲ್ಲಿ ಕಂಪನಿಯ ರಿಪೋರ್ಟುಗಳನ್ನು ಬರೆಯಬಹುದೇ ಹೊರತು ಸೃಜನಶೀಲ ಸಾಹಿತ್ಯವನ್ನಲ್ಲ. ಬಹುಶಃ ಈ ಕಾರಣಗಳಿಗೇ ಇರಬೇಕು, ಭಾರತದಲ್ಲಿ ಹುಟ್ಟುವ ಇಂಗ್ಲಿಷ್ ಸಾಹಿತ್ಯದ ಗುಣಮಟ್ಟ ಭಾರತೀಯ ಭಾಷೆಗಳಲ್ಲಿ ಹುಟ್ಟುವ ಸಾಹಿತ್ಯದ ಸಮೀಪಕ್ಕೂ ಬರಲಾಗಿಲ್ಲ. ಬದಲಾದ ಕಾಲಕ್ಕೆ ಹೊಂದಿಕೊಳ್ಳದ ಭಾಷೆಯಿಂದಾಗಿ ದಿನದಿನಕ್ಕೂ ಓದುಗರನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಕೊರಗು ಭಾರತೀಯ ಭಾಷೆಯ ಲೇಖಕರನ್ನು ಕಾಡಿದಷ್ಟೇ ತೀವ್ರವಾಗಿ ಭಾಷೆಯ ಗಂಭೀರ ಮಿತಿಯಿಂದಾಗಿ ಪ್ರಬುದ್ಧ ಓದುಗರನ್ನು ಮುಟ್ಟಲಾಗುತ್ತಿಲ್ಲ ಎನ್ನುವ ಕೊರಗು ಭಾರತೀಯ ಇಂಗ್ಲಿಷ್ ಲೇಖಕರನ್ನು ಕಾಡುತ್ತದೆ.

ಭಾಷೆಯ ಸಮಸ್ಯೆಗಳೇನೇ ಇರಲಿ, ‘ನಾನೇಕೆ ಕನ್ನಡದಲ್ಲಿ ಬರೆಯುತ್ತೇನೆ’ ಎನ್ನುವ ಪ್ರಶ್ನೆ ಬಂದಾಗ ನಾನು ಕಂಡುಕೊಂಡ ಉತ್ತರ ಬಹಳ ಸರಳ. ಕನ್ನಡ ನನ್ನ ಮತ್ತು ನನ್ನ ಪಾತ್ರಗಳ ಜಾಯಮಾನಕ್ಕೆ ಒಗ್ಗುವ ಭಾಷೆ. ಅಭಿಮಾನದ ಪ್ರಶ್ನೆ ಬದಿಗಿರಲಿ, ಕನ್ನಡ ನನ್ನ ಬರವಣಿಗೆಯ ಒಂದು ಅಗತ್ಯ. ನಾನು ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದಿದ್ದರೆ ಇಂಗ್ಲಿಷನ್ನು, ಬೆಂಗಾಲದಲ್ಲಿ ಹುಟ್ಟಿ ಬೆಳೆದಿದ್ದರೆ ಬೆಂಗಾಲಿಯನ್ನು, ರಷ್ಯಾದಲ್ಲಿ ಹುಟ್ಟಿ ಬೆಳೆದಿದ್ದರೆ ರಷ್ಯನ್ ಭಾಷೆಯನ್ನು ಬರೆಯಬಹುದಾದಷ್ಟೇ ಸಹಜವಾಗಿ, ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದರ ಕಾರಣಕ್ಕೆ ಕನ್ನಡದಲ್ಲಿ ಬರೆಯುತ್ತೇನೆ. ಪ್ರಶ್ನೆಯನ್ನು ಹಸಿಬಟ್ಟೆಯಂತೆ ಎಷ್ಟೇ ಹಿಂಡಿದರೂ ಇದಕ್ಕಿಂತ ಭಿನ್ನವಾದ ಉತ್ತರ ನನಗೆ ಹೊಳೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT