ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪಾತೀರದಲ್ಲಿ ಅಕ್ಷರಗಳ ಕಲರವ

Last Updated 8 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ನಗರಗಳ ಹೆಸರುಗಳೊಂದಿಗೆ ತಳಕು ಹಾಕಿಕೊಂಡ ‘ಸಾಹಿತ್ಯದ ಹಬ್ಬಗಳು’ ಅದ್ದೂರಿಯಾಗಿ ನಡೆಯುವ ಸಾಹಿತ್ಯ ಜಾತ್ರೆಗಳ ಸಂದರ್ಭ ಇಂದಿನದು. ಈ ಹಬ್ಬದಲ್ಲಿ ಸಂಭ್ರಮದ ಪಾಲೆಷ್ಟು, ಹೂರಣದ ಪಾಲೆಷ್ಟು ಎನ್ನುವುದು ಚರ್ಚೆಯ ವಿಷಯ. ಕೇರಳದ ಚೆಂಗನೂರಿನಲ್ಲಿ ನಡೆದ (ಜುಲೈ 24–26) ‘ದಕ್ಷಿಣ ಭಾರತ ಲೇಖಕರ ಸಮಾವೇಶ’ದಲ್ಲಿ ಭಾಗವಹಿಸಿದ್ದ ಕಥೆಗಾರ್ತಿ ಜಯಶ್ರೀ ಕಾಸರವಳ್ಳಿ ಅವರು, ಆ ಸಮ್ಮೇಳನದ ಕುರಿತು ಬರೆದ ಈ ಬರಹ, ಸಾಹಿತ್ಯ ಸಮಾವೇಶಗಳಿಗೊಂದು ಮಾದರಿಯನ್ನು ಸೂಚಿಸುವಂತಿದೆ.

ರಮ್ಯ ಪ್ರಕೃತಿಯ ಮಡಿಲಿನಲ್ಲಿ, ಅಬ್ಬರವಿಲ್ಲದ ಸ್ತಬ್ಧ ಅಲೆಗಳೊಂದಿಗೆ ಚಿನ್ನಾಟವಾಡುತ್ತಾ ಜುಳುಜುಳು ನಿನಾದದೊಂದಿಗೆ ಪ್ರಶಾಂತವಾಗಿ ಹರಿಯುತ್ತಿರುವ ಪಂಪಾ ನದಿ ತೀರದಲ್ಲಿರುವ ಕೇರಳದ ಒಂದು ಪುಟ್ಟ ಊರು ಚೆಂಗನೂರು. ಇಲ್ಲಿನ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ದಟ್ಟ ಹಸಿರಿನಿಂದ ಸುತ್ತುವರಿದಿದೆ. ಆಸ್ವತೆಯ ಇಕ್ಕೆಲಗಳಲ್ಲಿ ಮುಗಿಲೆತ್ತರ ಬೆಳೆದು ನಿಂತ ಮರಗಿಡಗಳ ಕೊರಳೊಳಗಿನಿಂದ  ಕಿವಿಗೆ ಕಚಗುಳಿಯಿಡುವಂತೆ ಹೊಮ್ಮುತ್ತಿರುವ ನಿರಂತರ ಮರ್ಮರ, ಹಳೇಗಾಲದ ಭಾರಿ ಕಂಬಗಳ ಹಜಾರ, ಅರಾಮವಾಗಿ ಕುಳಿತು ನಿಸರ್ಗವನ್ನು ಆಸ್ವಾದಿಸಲು ಹಜಾರದ ಸುತ್ತಲೂ ಕಟ್ಟಿರುವ ಕಲ್ಲಿನ ಚಿಟ್ಟೆಗಳು, ಸೂರಿಗೆ ಹಚ್ಚಿದ ಹೆಂಚಿನ ಇಳಿಜಾರು ಮಾಡುಗಳು, ಮಾಡಿಗೆ ಹಬ್ಬಿಕೊಂಡಿರುವ ಯಾವ ಯಾವುದೋ ಅಗಾಧ ಸಸ್ಯಗಳ ಬಳ್ಳಿಗಳಲ್ಲಿ ಅರಳಿರುವ ಕೆಂಪು, ಗಾಢ ನೀಲಿ, ಕಡು ಹಳದಿ ಬಣ್ಣದ ತರಹಾವಾರಿ ಪುಷ್ಪಗುಚ್ಛಗಳು, ಬಾಲ್ಯದಲ್ಲೆಲ್ಲೋ ಕಂಡು, ಇದೀಗ ಕಣ್ಮರೆಯೇ ಆಗಿ ಹೋಗಿರುವ ಗುಬ್ಬಚ್ಚಿ ಜಾತಿಗೆ ಸೇರಿದಂತಹ ಹಲವು ಚಿಕ್ಕ-ಪುಟ್ಟ ಹಕ್ಕಿ ಪಕ್ಷಿಗಳ ಕಲರವ... 

ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಮೈತುಂಬಾ ಹೊದ್ದು ನಿಂತ ರಮಣೀಯ ನಿಸರ್ಗದ ಒಡಲಲ್ಲಿನ ಒಂದು ಸುಂದರ ಊರಿನಲ್ಲಿ ಸಾಹಿತ್ಯ ಸಮ್ಮೇಳನ ಜರುಗುವ ಹಾಗಿದ್ದರೆ ಹೇಗಿರಬಹುದು? ಪ್ರಾಯಶಃ ಇಂತಹ ಒಂದು ಆಲೋಚನೆ ಕರ್ನಾಟಕದಿಂದ ಚೆಂಗನೂರಿಗೆ ಮದುವೆಯಾಗಿ ಹೋದ ನಮ್ಮ ಕನ್ನಡದ ಕವಯಿತ್ರಿ ಕನಕ ಹಾ.ಮ. ಅವರಿಗೆ ಅನ್ನಿಸಿದ ಒಂದು ಶುಭ ಗಳಿಗೆಯಲ್ಲೇ ಅವರು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆಂಬುದಕ್ಕೆ ಈಗ ಮೂರು ವರ್ಷದಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ‘ಪಂಪಾ’ (People for performing Arts and More…)  ಎಂಬ ಒಂದು ಸ್ವಯಂಸೇವಾ ಸಾಂಸ್ಕೃತಿಕ ಸಂಸ್ಥೆಯ ಜನನವೇ ಕಾರಣವಾಗಿರಲಿಕ್ಕೆ ಸಾಕು.

ಇಂದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನಗಳ ರೂಪುರೇಷೆಗಳು ಸಂಪೂರ್ಣ ಬದಲಾದಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ದೊಡ್ಡ ದೊಡ್ಡ ನಗರಗಳಲ್ಲಿ, ‘ಲಿಟರೆರಿ ಫೆಸ್ಟ್ಸ್’ ಎಂಬ ಹೊಸ ರೂಪಗಳಲ್ಲಿ ಕಾರ್ಪೋರೇಟ್ ಜಗತ್ತಿನ ಚುಕ್ಕಾಣಿ ಹಿಡಿದು ಐಷಾರಾಮ ಹೋಟೆಲುಗಳಲ್ಲಿ ಸಮ್ಮೇಳನಗಳು ಜರುಗುವುದು ಸಾಮಾನ್ಯ ಸಂಗತಿಯಾಗಿದೆ. ಮಾಧ್ಯಮಗಳಲ್ಲಿ ಮಿಂಚುವ ಇಂತಹ ಸಮಾರಂಭಗಳು ಎಲ್ಲರ ಗಮನ ಸೆಳೆಯುತ್ತಿವೆ.

ಬದಲಾವಣೆಯ ಮುಂಚೂಣಿಯಲ್ಲಿರುವಾಗ ಇವೆಲ್ಲಾ ಎಷ್ಟೇ ಸಹಜವೆನ್ನಿಸಿದರೂ, ಕೆಲವೊಮ್ಮೆಯಾದರೂ ಜನಸಾಮಾನ್ಯರ ಕೈಬೆರಳ ಸಂಧಿಯಿಂದ ಕಲೆ, ಸಾಹಿತ್ಯ ಸಾಂಗತ್ಯಗಳೆಲ್ಲಾ ಜಾರಿ ಹೋಗುತ್ತಿವೆಯೇನೋ ಎನ್ನುವಂತಹ ತಳಮಳಗಳು ಕೆಲವರಲ್ಲಿಯಾದರೂ ಉಂಟಾಗದೆ ಇರದು. ನಾವು ಚಿಕ್ಕವರಿರುವಾಗ ವರ್ಷಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳ ವರದಿಗಳನ್ನು ಒಂದಕ್ಷರವೂ ಬಿಡದೆ ಕುತೂಹಲದಿಂದ ಓದುತ್ತಿದ್ದಾಗಿನ ಆಸ್ಥೆ, ಇಂತಹ ಮಹಾನ್ ಸಮ್ಮೇಳನಗಳ ವರದಿಗಳನ್ನು ಓದುವಾಗ ಅನುಭವಿಸಿದ ನೆನಪಿಲ್ಲ.

ಯಾವುದೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ನೆಲ, ಮಣ್ಣು, ಇಲ್ಲಿನ ಕಂಪು, ಸೊಗಡು, ದೂಳು, ಬಿಸಿಲು, ಮಳೆ, ಜನ, ಜಾತ್ರೆ, ಸಂಭ್ರಮ ಸಡಗರಗಳನ್ನು ಹೊತ್ತಾಗಲೇ ಅವು ಸಂಪೂರ್ಣ ನಮ್ಮದೆನ್ನುವ ಒಂದು ಅವಿನಾಭಾವ ಸಂಬಂಧವನ್ನು ನಮ್ಮಲ್ಲಿ ಮೇಳೈಸಿ, ಅಂಥದೆಲ್ಲವನ್ನೂ ಮುಕ್ತವಾಗಿ ಸ್ವೀಕರಿಸಲು ಸಾಧ್ಯ ಮಾಡುತ್ತದೇನೋ. ಎಲ್ಲರಿಗೂ ಎಟುಕದ ರೀತಿಯಲ್ಲಿ ಸಮ್ಮೇಳನಗಳು ದೊಡ್ಡ ಪ್ರಮಾಣದಲ್ಲಿ ಕೆಲವೇ ಪ್ರತಿಷ್ಠಿತ ಗುಂಪಿನೊಡನೆ ಜರುಗಿದರೆ, ಅವು ಜನಸಾಮಾನ್ಯರನ್ನು ತಲುಪಲು ಅಸರ್ಮಪಕವಾಗಬಹುದೇನೋ ಎಂಬ ಶಂಕೆ.

ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಕೆಲವೊಂದು ಕ್ರಿಯಾಶೀಲ ಚಟುವಟಿಕೆಗಳು ಘಟಿಸುತ್ತಿರುವುದನ್ನು ಕಾಣುತ್ತಿದ್ದೇವೆ (ಎಷ್ಟೋ ವರ್ಷಗಳಿಂದ ‘ನೀನಾಸಂ’ ದೇಶದ ಉದ್ದಗಲದಿಂದ ಪ್ರತಿಷ್ಠಿತ ವ್ಯಕ್ತಿಗಳನ್ನು ಹೆಗ್ಗೋಡಿನಂತಹ ಪುಟ್ಟ ಊರಿಗೆ ಕರೆಸಿ, ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಲೇ ಇದೆ). ಹಳ್ಳಿಯ ತಣ್ಣಗಿನ ವಾತಾವರಣ ಸಾಹಿತ್ಯಾಸ್ವಾದಕ್ಕೆ ಹೇಳಿ ಮಾಡಿಸಿದ ಪ್ರಶಸ್ತ ಸ್ಥಳವಾಗಿರುವುದರಿಂದ, ನಗರ ಜೀವನದ ಹತ್ತಾರು ಕರ್ಕಶಗಳೊಂದಿಗೆ ಆಡಿದ ಮಾತುಗಳೆಲ್ಲಾ ಉಡುಗಿ ಹೋಗಿಬಿಡುವ ಅಪಾಯವೂ ಇಲ್ಲದಿರುವುದರಿಂದ ಪ್ರತಿಯೊಂದು ಪದ, ಮಾತು, ವಾಕ್ಯಗಳ ನಡುವಿನ ಮೌನ, ನಿಟ್ಟುಸುರೂ ಕೇಳುಗನ ಹೃದಯಕ್ಕೆ ನೇರ ರವಾನೆಯಾಗುತ್ತಿರುತ್ತವೆ.

ಕಡೆಗೆ ಒಂದಷ್ಟು ಜನರ ಅಂತರಂಗದಲ್ಲಾದರೂ ಅದು ಕಲರವ ಮೂಡಿಸಿ, ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಾದರೆ, ಕಾರ್ಯಕ್ರಮ ಕೈಗೊಂಡದ್ದಕ್ಕೆ ಸಾರ್ಥಕ. ಅಲ್ಲದೆ, ಚಿಕ್ಕ ಚಿಕ್ಕ ಊರುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ, ತನ್ನ ಕಾರ್ಯೋದ್ದೇಶಕ್ಕಾಗಿ ಯಾವುದರೊಂದಿಗೂ ರಾಜಿ, ಒಪ್ಪಂದಗಳಿಗಿಳಿಯದೆ ಸ್ವತಂತ್ರವಾಗಿ ಹಮ್ಮಿಕೊಳ್ಳಲೂ ಸಾಧ್ಯವಾಗಬಹುದು. ಕೆಲವೊಮ್ಮೆ ಅದು ಅನೇಕ ರೀತಿಯಲ್ಲಿ ಸ್ಥಳೀಯರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ವೇದಿಕೆಯಾಗಬಹುದಲ್ಲದೆ, ಪ್ರಾದೇಶಿಕತೆಗೆ ಹೆಚ್ಚಿನ ಒತ್ತೂ ಕೊಟ್ಟಂತಾಗುವುದರಿಂದ ಸಹಜವಾಗಿಯೇ ಸ್ಥಳೀಯರಿಗೆ ಆ ಕುರಿತು ಅಭಿಮಾನವೂ ಮೂಡಿದಂತಾಗುವುದು.

ಪ್ರಾಯಶಃ ಇಂತಹ ಹಲವು ಸದುದ್ದೇಶಗಳಿಂದ ಜನ್ಮ ತಳೆದ ಪಂಪಾ, ಈ ವರುಷ ಕೇರಳದ ಚೆಂಗನೂರಿನಲ್ಲಿ ಜುಲೈ 24ರಿಂದ 26ರವರೆಗೆ ಏರ್ಪಡಿಸಿದ್ದ ‘ದಕ್ಷಿಣ ಭಾರತ ಲೇಖಕರ ಸಮಾವೇಶ’ - ಸಿವೆ– (South India Writer’s Ensemble  - SIWE) ಈ ಎಲ್ಲಾ ನಿಟ್ಟಿನಿಂದಲೂ ಬಹಳ ವಿಶಿಷ್ಟವಾದದ್ದಾಗಿತ್ತು. ಕಳೆದ ಎರಡು ವರ್ಷಗಳಿಂದ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದರೂ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕೈ ಹಾಕಿದ್ದು ಮಾತ್ರ ಈ ಬಾರಿಯ ವಿಶೇಷ.

ಈ ಸಲ ಚರ್ಚೆಗೆ ಆಯ್ದುಕೊಂಡ ಅಪರೂಪದ ವಿಷಯ ‘ಈಶಾನ್ಯ ಭಾರತದ ಸಾಹಿತ್ಯ’. ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಮ್, ತ್ರಿಪುರಾ, ಮೇಘಾಲಯ, ಮಣಿಪುರ್ ರಾಜ್ಯಗಳಿಂದ ಅನೇಕ ಪ್ರತಿಷ್ಠಿತರನ್ನು ಆಹ್ವಾನಿಸಲಾಗಿತ್ತು. ಭಾರತದ ಮುಖ್ಯ ವಾಹಿನಿಯಿಂದ ಸದಾ ದೂರವಿರುವ ಈ ಈಶಾನ್ಯ ಪ್ರಾಂತ್ಯಗಳಲ್ಲಿ ಕಲೆ, ಕಾವ್ಯ, ಸಾಹಿತ್ಯ, ಸಂಗೀತಗಳು ದೇಶದ ಮತ್ತುಳಿದ ಪ್ರದೇಶಗಳಲ್ಲಿದ್ದಂತೆ ಸಮೃದ್ಧವಾಗಿದ್ದು, ಅನೂಚಾನವಾಗಿ ಸಾಗುತ್ತಲೇ ಬಂದಿದ್ದರೂ, ಅದು ಯಾಕೋ ಅಷ್ಟಾಗಿ ಮುಂಚೂಣಿಗೆ ಬಂದಿಲ್ಲ.

ಭಾರತದ ಇತರೆಡೆಗಳಲ್ಲಿ ಒಂದು ರೀತಿಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಆ ರಾಜ್ಯಗಳ ಸಾಹಿತ್ಯವನ್ನು ಪ್ರಚಲಿತಗೊಳಿಸುವ ಉದ್ದೇಶದಿಂದ ಮೂರೂ ದಿನಗಳ ಸಾಹಿತ್ಯಿಕ ಚರ್ಚೆಗಳಲ್ಲಿ ಅಲ್ಲಿನ ಬರಹಗಾರರಿಗೆ ಪ್ರಾಮುಖ್ಯ ಕೊಡಲಾಗಿತ್ತು. ಈಶ್ಯಾನ್ಯ ಪ್ರಾಂತ್ಯದ ಸೃಜನಾತ್ಮಕ ಸಾಹಿತ್ಯ, ಕಲೆ, ಸಂಸ್ಕೃತಿ, ಗಡಿ ಸಮಸ್ಯೆ, ಭೌಗೋಳಿಕ ಮಿತಿ, ಭಯೋತ್ವಾದಕರ ಹಾವಳಿಗಳೆಂದು ಹತ್ತು ಹಲವು ವಿಷಯಗಳು ಮುಂಚೂಣಿಗೆ ಬಂದು, ಚರ್ಚೆಗೆ ಗ್ರಾಸವಾದದ್ದು ವಿಶೇಷ.

‘ಜೀವನ ಸೌಂದರ್ಯ ಮತ್ತು ಆತಂಕವಾದ: ಸಾಹಿತ್ಯ, ಬಂಡಾಯ ಮತ್ತು ಅಸ್ಮಿತೆಯ ಪ್ರಶ್ನೆ’ ಎಂಬ ವಿಶಿಷ್ಟ ವಿಷಯದಡಿ ನಡೆದ ವಿಚಾರ ಸಂಕಿರಣದಲ್ಲಿ ನಮ್ಮ ದೇಶದ ಗಡಿಭಾಗಗಳಲ್ಲಿ ಸಂಭವಿಸುವ ಅದೆಷ್ಟೋ ಸಂಗತಿಗಳು ಬೆಳಕಿಗೆ ಬಂದವು. ವಾಸ್ತವದಲ್ಲಿ ಘಟಿಸುವ ಘಟನೆಗಳ ಕಾಲು ಭಾಗದಷ್ಟು ವಿವರ ಕೂಡ ಭಾರತದ ಮತ್ತುಳಿದ ಪ್ರಾಂತ್ಯದವರಿಗೆ ತಲುಪಲಾಗದ ವಿಷಾದ, ಅವರೆಲ್ಲರ ಹೋರಾಟದ ನೋವು ಒಂದು ಪ್ರತ್ಯೇಕ ಕೂಗಾಗಿ ಹಾಗೇ ದೂರದಲ್ಲುಳಿದು, ಕ್ಷೀಣಿಸಿಬಿಡಬಹುದಾದ ಅಪಾಯ, ಇವು ಚರ್ಚೆಯಲ್ಲಿ ಮೊಳಗಿದ ಕೆಲವು ವಸ್ತುನಿಷ್ಠ ಅಂಶಗಳು. 

ಭೌಗೋಳಿಕ ವೈವಿಧ್ಯತೆಯುಳ್ಳ ವಿಭಿನ್ನ ಪ್ರಾದೇಶಿಕ ಭಾಷಾ ಸಂಸ್ಕೃತಿಯಲ್ಲಿ, ತನ್ನ ಸೀಮಿತ ವಲಯದಲ್ಲಷ್ಟೇ ಪ್ರಚಲಿತದಲ್ಲಿರುವ ಅತ್ಯುತ್ತಮ ಸಾಹಿತ್ಯಕ್ಕೆ, ತನ್ನ ಗಡಿಮೀರಿ ಪಸರಿಸುವುದಕ್ಕೂ ಮತ್ತು ಹಲವು ಭಾಷಾ ಸಾಹಿತಿಗಳನ್ನು ಒಂದೆಡೆ ಒಗ್ಗೂಡಿಸುವುದರೊಂದಿಗೆ, ಪ್ರತಿ ಸಾಹಿತಿಗೂ ಅವಶ್ಯವಿರುವ ಸೀಮೋಲ್ಲಂಘನದ ಮಾರ್ಗವನ್ನು ಒದಗಿಸುವುದಕ್ಕೂ ಸಾಹಿತ್ಯ ಸಮ್ಮೇಳನಗಳು ನೆರವಾಗುತ್ತಿರುತ್ತವೆ.  ಚೆಂಗನೂರಿನಲ್ಲಿ ನಡೆದ ಸಮಾವೇಶ ಕೂಡ ಹಲವು ಬರಹಗಾರರಿಗೆ ಆ ರೀತಿಯಲ್ಲಿ ನಿರ್ಮಾಣಗೊಂಡ ಒಂದು ವೇದಿಕೆಯೇ ಸರಿ.

ಪ್ರಾದೇಶಿಕ ಭಾರತದ ವಿಭಿನ್ನ ಭಾಷಾ ಸಂಸ್ಕೃತಿ, ಸದ್ಯದ ಭಾರತದ ಸನ್ನಿವೇಶ, ಜಾತ್ಯತೀತ ಭಾರತದಲ್ಲಿ ಸಾಂಸ್ಕೃತಿಕ ವಿಧಿವಿಧಾನಗಳು, ಪ್ರಸಕ್ತ ಸಾಹಿತ್ಯಿಕ ಸ್ಥಿತಿಗತಿ, ಜ್ವಲಂತ ಸಮಸ್ಯೆಗಳು, ಬರಹಗಾರನ ಸವಾಲುಗಳು, ಬರಹಗಾರನ ಇತಿಮಿತಿ, ಗದ್ದಲದ ಪ್ರಪಂಚದಲ್ಲಿ ಬರಹಗಾರನ ಅಸ್ಮಿತೆ, ನಶಿಸಿಹೋಗುತ್ತಿರುವ ಕಲ್ಪನಾ ಲೋಕದಲ್ಲಿ ಕ್ಷೀಣಿಸುತ್ತಿರುವ ಸೃಜನಶೀಲತೆ, ಮುಕ್ತ ಅಭಿವ್ಯಕ್ತಿಯಲ್ಲಿ ಸೊರಗುತ್ತಿರುವ ಉನ್ನತ ಸಾಹಿತ್ಯ, ವಿಮರ್ಶೆಯ ಮಾನದಂಡದ ಪುನರ್‌ಪರಿಶೀಲನೆಯ ಅಗತ್ಯ, ಸಾಹಿತ್ಯದ ಒಳ-ಹೊರಗಿನ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಹರಣ, ನಿರರ್ಥಕತೆಯಿಂದ ಅರ್ಥಪೂರ್ಣದೆಡೆಗಿನ ಕಾವ್ಯಯಾನ, ಜಾಗತಿಕ ಮಾರುಕಟ್ಟೆಯ ಹೊಸ ಸವಾಲುಗಳಲ್ಲಿ ನಲುಗುತ್ತಿರುವ ಕಲಾಪ್ರಪಂಚ,  ಜಾತ್ಯತೀತ ಭಾರತದಲ್ಲಿ ಲೇಖಕನ ಪಾತ್ರ, ಸೃಜನಶೀಲತೆಗೆ ಹಾಕುವ ಕಡಿವಾಣ, ಅಭಿವ್ಯಕ್ತಿಯ ಮಾನದಂಡಗಳು ಎದುರಿಸುತ್ತಿರುವ ಸವಾಲು, ಇಂತಹ ಅನೇಕ ವಿಷಯಗಳು ವಿಚಾರಸಂಕಿರಣಗಳಲ್ಲಿ ಚರ್ಚಿತವಾದುವು.

ಮಲೆಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಿಂದಲೂ ಮರಾಠಿ, ಹಿಂದಿ ಭಾಷೆಗಳಿಂದಲೂ ಅನೇಕ ಲೇಖಕ ಲೇಖಕಿಯರು ಸಮಾವೇಶಕ್ಕೆ ಆಗಮಿಸಿದ್ದರು. ವಿಭಿನ್ನ ಭಾಷಾ ಸಾಹಿತಿಗಳೊಂದಿಗೆ ಓಡಾಟ, ಒಡನಾಟ, ಹಲವಾರು ವಿಷಯಗಳ ಚರ್ಚೆ, ವಿನಿಮಯಗಳಿಗೆ ಅವಕಾಶವಿತ್ತು. ಪ್ರಸಕ್ತ ಆಧುನಿಕೋತ್ತರ ಭಾರತದಲ್ಲಿ ಯುವ ಲೇಖಕರು ಬಹುತೇಕ ಇಂಗ್ಲೀಷಿನಲ್ಲೇ ಬರೆಯುತ್ತಿರುವುದರಿಂದ ನಮ್ಮ ನಮ್ಮ ಭಾಷೆಗಳ ಸಮೃದ್ಧ ಸಾಹಿತ್ಯ ಮೂಲೆಗುಂಪಾಗುತ್ತಿರಬಹುದೆನ್ನುವ ಆತಂಕದ ಧ್ವನಿಯೂ ಮೊಳಗಿತು. 

ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, ತಮಿಳಿನ ಹಿರಿಯ ಲೇಖಕಿ ಅಂಬೈ (ಸಿ.ಎಸ್, ಲಕ್ಷ್ಮಿ) ‘ನಮ್ಮ ಬದುಕಿನೊಡನೆ ಸಹಜವಾಗಿ ಬೆಸೆದುಕೊಂಡಿರುವ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳುವುದೇ ಇಂತಹ ಸಮ್ಮೇಳನಗಳ ಉದ್ದೇಶವಾಗಬೇಕು!’ ಎಂದದ್ದು ಅರ್ಥಪೂರ್ಣವಾಗಿತ್ತು. ಆಹ್ವಾನಿತರೆಲ್ಲರಿಗೂ ಉಳಿದುಕೊಳ್ಳಲು ಸುಸಜ್ಜಿತವಾದ ಆಯುರ್ವೇದ ಶಾಲಾ ಕೊಠಡಿಗಳನ್ನು ಬಿಟ್ಟಿಕೊಟ್ಟಿದ್ದಲ್ಲದೇ, ಆತಿಥೇಯರು ವೈಯಕ್ತಿಕವಾಗಿ ಪ್ರತಿಯೊಬ್ಬರನ್ನೂ ಮುತುವರ್ಜಿಯಿಂದ ವಿಚಾರಿಸಿಕೊಳ್ಳುತ್ತಿದ್ದರು. ಕಾರ್ಯಕರ್ತೆ ತುಳಸಿ ವೇಣುಗೋಪಾಲ್, ಸಂಚಾಲಕಿ ಕನಕ ಹಾ.ಮ. ಹಾಗೂ ಅವರ ಪತಿ ಪಿ.ಸಿ. ವಿಷ್ಣುನಾಥ್ (ಕೇರಳದ ಶಾಸಕರು) ಅಷ್ಟೆಲ್ಲಾ ಜವಾಬ್ದಾರಿಗಳ ನಡುವೆ ಅತಿಥಿಗಳನ್ನು ಹೆಜ್ಜೆಹೆಜ್ಜೆಗೂ ವಿಚಾರಿಸಿಕೊಳ್ಳುತ್ತಿದ್ದದ್ದು ಹೃದಯಸ್ವರ್ಶಿಯಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT