ಭಾಗ–1
ಹಲವು ವರ್ಷಗಳ ಹಿಂದೆ ಓದು ಮುಗಿಸಿದ ನಾನು ಮನೆಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡ ಸಂದರ್ಭ. ನಮ್ಮ ಮನೆಯಿಂದ ತುಸು ದೂರದಲ್ಲಿದ್ದ ಹೊಸ ಜಮೀನಿಗೆ ಸಂಜೆ ನಾಲ್ಕರ ಸುಮಾರಿಗೆ ಯಾವುದೋ ಕೆಲಸಕ್ಕಾಗಿ ಹೊರಟಿದ್ದೆ. ದಾರಿಯಲ್ಲಿ ನಾನು ಎಂದೂ ನೋಡದ ದೃಶ್ಯವೊಂದು ಕಣ್ಣಿಗೆ ಬಿತ್ತು.

ಯಾವುದೋ ಜಾತಿಯ ಬಾತುಕೋಳಿಯೊಂದು ದಾರಿ ತಪ್ಪಿಸಿಕೊಂಡು ಎಂದೆಂದೂ ತನ್ನ ವಾಸಸ್ಥಾನವಾಗಲಾರದ ಆ ಜಾಗಕ್ಕೆ ಪುಟ್ಟ ಮರಿಯೊಂದಿಗೆ ಬಂದುಬಿಟ್ಟಿತ್ತು. ಹಾರಲಾರದ ಆ ಮರಿಯನ್ನು ಕುಕ್ಕಿ ಸಾಯಿಸಲು ಅಲ್ಲೇ ಪಕ್ಕದಲ್ಲೇ ‘ಕಾ ಕಾ’ ಎಂದು ಹೊಂಚುಹಾಕುತ್ತ ಕಾಗೆಯೊಂದು ನಿಂತಿದೆ.

ತಾಯಿ, ಮರಿಯನ್ನು ತೊರೆಯಲಾರದೆ ಕೂಗುತ್ತಾ ಮರಿಯೊಂದಿಗೆ ಮುಂದೆ ಮುಂದೆ ಓಡುತ್ತಿದೆ. ಮೊದಲ ಬಾರಿಗೆ ಇದನ್ನು ನೋಡಿದ ನನಗೆ ಗಾಬರಿ. ಇತ್ತ ಕಾಗೆಯೊಂದಿಗೆ ಸೆಣಸುತ್ತಿದ್ದ ಬಾತುಕೋಳಿಗೆ ನನ್ನನ್ನು ಕಂಡು ಮತ್ತೂ ಹೆದರಿಕೆ. ನಾನು ಕಾಗೆಯನ್ನು ಓಡಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಬಾತುಕೋಳಿಯ ಹಿಂದೆ ಓಡಿದೆ.

ನಾವು ನಾಲ್ವರೂ ಮಣ್ಣು ರಸ್ತೆಯಲ್ಲಿ ಓಡುತ್ತಿರುವ ಆ ದೃಶ್ಯ ನನ್ನ ಮನಸ್ಸಿಗೆ ಇದು ಯಾವುದೋ ಮಹಾಕಥೆಯ ರೂಪಕವೇನೋ ಎನ್ನಿಸಿತು. ಆದರೆ ಆ ರೂಪಕವನ್ನು ಎಲ್ಲಿ ಹೇಗೆ ಕೂರಿಸಬೇಕೆಂದು ತಿಳಿಯದೆ ಒದ್ದಾಡತೊಡಗಿದೆ. ‘ನೀನಾಸಮ್’ನಲ್ಲಿ ಇದ್ದಾಗಿನ ನನ್ನ ಅರೆಬರೆ ಹಸಿ ಓದು, ತಿಳಿವಳಿಕೆಗಳು, ಮನುಷ್ಯ ಪ್ರಪಂಚದ ವಾದ–ವಿವಾದ, ವಿತಂಡವಾದಗಳು, ಪ್ರಾಣಿ ಪ್ರಪಂಚದ ಆದಿಮ ಶಕ್ತಿಯೊಂದಿಗೆ ಡಿಕ್ಕಿ ಹೊಡೆದಂತೆ ಭಾಸವಾಗಿ ಅತ್ಯಂತ ಅಸಹಾಯಕ ಭಾವವೊಂದು ಆವರಿಸಿತು.

ಅದು ಎಷ್ಟು ಗಾಢವಾಗಿತ್ತೆಂದರೆ – ತಾಯಿ ತನ್ನ ಮರಿಯನ್ನು ಬಿಟ್ಟು ಹಾರಿತೇ? ಮರಿ ಜೀವಂತ ಉಳಿಯಿತೇ? ಎಂಬಿತ್ಯಾದಿ ವಿವರಗಳು ನಂತರದಲ್ಲಿ ಮನಸ್ಸಿನಲ್ಲಿ ಉಳಿಯಲೇ ಇಲ್ಲ.

ಈಗ ಎರಡು ತಿಂಗಳ ಹಿಂದೆ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ ಗಮನಸೆಳೆಯಿತು. ತುಮರಿ ಸಮೀಪ ತುಂಬು ಗರ್ಭಿಣಿಯೊಬ್ಬಳಿಗೆ ಡಾಕ್ಟರ್ ಸಿಗದೆ ಕಾರಿನಲ್ಲೇ ಹೆರಿಗೆಯಾಗಿರುವ ಸುದ್ದಿಯದು.

ಇದ್ದಕ್ಕಿದ್ದಂತೆ ನೋವು ಆರಂಭವಾದಾಗ ಕಾರಿನಲ್ಲಿ ಡಾಕ್ಟರನ್ನು ಕಾಣಲು ಹೋಗಿದ್ದಾರೆ. ಆದರೆ ಯಾವ ಆಸ್ಪತ್ರೆಯಲ್ಲಿ ಡಾಕ್ಟರ್ ಲಭ್ಯವಿದ್ದಾರೆ ಎಂದು ಫೋನ್ ಮಾಡಿ ವಿಚಾರಿಸಲು ಪ್ರಯತ್ನಿಸಿದಾಗ, ಆ ಸಂಜೆ ಅದ್ಯಾವುದೋ ಕಾರಣಕ್ಕೆ ಮೊಬೈಲ್ ಸಂಪರ್ಕ ದೊರೆತಿಲ್ಲ.

ಕಾರಿನಲ್ಲಿ ಅತ್ತಿಂದಿತ್ತ ಓಡಾಡುವುದರಲ್ಲಿ, ಹತ್ತಿರದ ನಿಟ್ಟೂರಿನಲ್ಲಿ ಡಾಕ್ಟರಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುವುದರಲ್ಲಿ, ಮೂರು ಗಂಟೆಯ ದಾರಿ ಸಾಗಿ ಸಾಗರದ ಆಸ್ಪತ್ರೆಗೆ ಹೋಗುವುದೋ ಬೇಡವೋ ಎಂದು ತೀರ್ಮಾನಿಸುವುದರಲ್ಲಿ... ಕಾರಿನಲ್ಲಿಯೇ ಹೆರಿಗೆ ಆಗಿಹೋಗಿದೆ.

ಮರುದಿನ ವೃತ್ತಪತ್ರಿಕೆಯಲ್ಲಿ ‘ಕಾರಿನಲ್ಲಿಯೇ ಹೆರಿಗೆ’ ಎಂಬ ಸುದ್ದಿ.

‘ಇಂಡಿಯಾ ಮಾರ್ಟ್’ ಎಂಬೊಂದು ಜಾಲತಾಣವಿದೆ. ‘ಬಿ ಟು ಬಿ’ – ಅಂದರೆ ಬಿಜಿನೆಸ್ನಿಂದ ಬಿಜಿನೆಸ್‌ಗೆ ಎಂದರ್ಥ. ಸುಮ್ಮನೆ ಹೊತ್ತು ಹೋಗದ ಕಾರಣಕ್ಕೆ ಅಲ್ಲಿ ಕರಿಮೆಣಸು ಮತ್ತು ಕತ್ತರಿಸಿದ ಶುಂಠಿ ಎಂದು ಹುಡುಕಿದೆ.

ಅದಾದ ಮಾರನೇ ದಿನ ನನಗೊಂದು ಫೋನ್.
‘ಇದು ಆದಿತ್ಯ ಅವರಾ?’
‘ಹೌದು’.

‘ನೀವು ಇಂಡಿಯಾಮಾರ್ಟ್‌ನಲ್ಲಿ ಕರಿಮೆಣಸು ಎಂದು ಹುಡುಕಿದ್ದೀರಿ. ನಿಮಗೇನಾದರೂ ಅದರ ಅಗತ್ಯವಿದೆಯೇ?’
‘ಇಲ್ಲ’.

‘ಹಾಗೆಯೇ ಕತ್ತರಿಸಿದ ಶುಂಠಿ ಏನಾದರೂ ಬೇಕಿತ್ತೆ?’
‘ಇಲ್ಲ’.

ಫೋನ್ ಇಟ್ಟ ಎಷ್ಟೋ ಹೊತ್ತಿನವರೆಗೂ ಇವರಿಗೆ ನನ್ನ ಫೋನ್ ನಂಬರ್ ಹೇಗೆ ಸಿಕ್ಕಿತಪ್ಪಾ ಎಂಬ ಯೋಚನೆಯಲ್ಲಿ ತಲೆ ಕೆರೆದುಕೊಳ್ಳುತ್ತಲೇ ಇದ್ದೆ.

‘ಫೇಸ್‌ಬುಕ್’ನಲ್ಲಿ ‘ನೀವು ವಾಸಿಸುವ ಸ್ಥಳ’ ಎಂಬುದೊಂದು ಕಾಲಂ ಇದೆ. ಎಷ್ಟೇ ಪ್ರಯತ್ನಿಸಿದರೂ ಅಲ್ಲಿ ‘ಮಡೋಡಿ’ ಎಂದು ತುಂಬಲು ಆಗಲಿಲ್ಲ. ಅವರು ತೋರಿಸಿದ ಸ್ಥಳಗಳಲ್ಲಿಯೇ ಯಾವುದಾದರೊಂದನ್ನು ನಾವು ಆಯ್ದುಕೊಳ್ಳಬೇಕು. ಸುಳ್ಳು ಹೇಳುವುದಾದರೆ, ಶಿವಮೊಗ್ಗ ಎಂದೇ ಯಾಕೆ ಹೇಳಬೇಕು ಎಂದುಕೊಂಡು, ನ್ಯೂ ಮೆಕ್ಸಿಕೋ ಎಂದೇನೋ ತುಂಬಿದ ನೆನಪು.

ಭಾಗ–2
ನಾನು ವಾಸವಾಗಿರುವುದು ಪಶ್ಚಿಮ ಘಟ್ಟದ ಪುಟ್ಟ ಹಳ್ಳಿಯೊಂದರಲ್ಲಿ. ಅಲ್ಲಿ ಕೊಡಚಾದ್ರಿ ಎಂಬ ಸುಂದರ ಬೆಟ್ಟವೊಂದಿದೆ. ಕೊಲ್ಲೂರು ಇಲ್ಲಿಗೆ ಬಲು ಸಮೀಪ.
ಇಲ್ಲಿಯ ಸಹಸ್ರಾರು ವರ್ಷಗಳ ಹಿಂದಿನ ಕಾಡು, ಗುಡ್ಡಗಳು, ಎಡಬಿಡದೆ ಮೂರು ತಿಂಗಳು ಸುರಿಯುವ ಧಾರಾಕಾರ ಮಳೆ, ಶೋಲಾ ಕಾಡುಗಳು, ಮಳೆಗಾಲದಲ್ಲಿ ಮಾತ್ರ ಹರಿಯುವ ತೊರೆಗಳು, ಮಳೆಯ ವಿರಾಮದಲ್ಲಿ ಹಾರಾಡುವ ಬಗೆ ಬಗೆಯ ಚಿಟ್ಟೆಗಳು,

ದಾರಿಯ ಮೇಲೆ ಹಾಯ್ದು ಬರುವ ಕಾವಳಿ, ತನ್ನ ನೆತ್ತಿಯಲ್ಲಿ ಕರಿಮೋಡಗಳನ್ನು ಧರಿಸಿ, ಹಸಿರು ಅಂಗಿ ತೊಟ್ಟು ಕುಣಿಯುವ ಗುಡ್ಡಗಳು, ಬಾಳೆಮೂತಿಯ ಮಕರಂದ ಹೀರಲು ಬರುವ ಪುಟ್ಟ ಹಸಿರು ಗಿಳಿಗಳು, ಉದ್ದ ಕೊಕ್ಕಿನ ಸ್ಪೈಡರ್ ಹಂಟರ್ ಎಂಬ ಹಕ್ಕಿಗಳು, ಚಳಿಗಾಲದ ನಡುಕದ ಮುಂಜಾವಿನಲ್ಲಿ ರಮಣೀಯ ಬಣ್ಣಗಳೊಂದಿಗೆ ಕೊಡಚಾದ್ರಿ ನೆತ್ತಿಯಲ್ಲಿ ಉದಯಿಸುವ ಸೂರ್ಯ,

ಆ ಚಳಿಯ ಇಬ್ಬನಿಯಲ್ಲಿ ಮಿಂದು ಹೊಳೆಯುವ ಜೇಡನ ಬಲೆಗಳು, ಆ ಬಲೆಯಲ್ಲಿ ನಿಂತ ನೀರಿನ ಹನಿಗಳು, ಆ ಹನಿಯಲ್ಲಿ ತೂರಿ ಬಂದು ಏಳಾಗುವ ಸೂರ್ಯನ ಕಿರಣಗಳು... ಹೀಗೆ ಇಲ್ಲಿನ ಪ್ರಕೃತಿಯ ಎಲ್ಲವೂ ನನ್ನನ್ನು ಬಹುವಾಗಿ ಆಕರ್ಷಿಸುತ್ತವೆ.

ಈ ಎಲ್ಲ ಸೌಂದರ್ಯವನ್ನೂ ಬರಿಯ ಸೌಂದರ್ಯವಷ್ಟೇ ಅಲ್ಲದ ಹಾಗೆ ತೋರಿಸುವುದು ಹೇಗೆ? ಪ್ರಕೃತಿ ಛಾಯಾಗ್ರಹಣವನ್ನು ಸೃಜನಶೀಲಗೊಳಿಸುವುದು ಹೇಗೆ?

ಫೋಟೊಗ್ರಫಿ ಎನ್ನುವುದು ನನಗೆ ತೀರಾ ವೈಯಕ್ತಿಕವೇ? ನನ್ನ ಬದುಕಿಗೂ ಸಮಾಜಕ್ಕೂ ಇದರೊಂದಿಗೆ ಯಾವ ಸಂಬಂಧವಿದೆ? ನನ್ನ ಅಂತರಂಗದಾಳದ ತವಕ ತಲ್ಲಣಗಳು ಮತ್ತೊಬ್ಬ ವ್ಯಕ್ತಿಯದೂ ಆಗಿರಬಹುದೇ?

ಈ ಎಲ್ಲ ಪ್ರಶ್ನೆಗಳು ನನ್ನನ್ನು ಸದಾ ಕಾಡುತ್ತಿರುತ್ತವೆ. ಇವೇ ಛಾಯಾಗ್ರಹಣ ಎಂಬ ಮಾಧ್ಯಮದ ಮೂಲಕ ಶೋಧಿಸಲು ಹೊರಟಿರುವ ಸಂಗತಿಗಳ ಮೂಲವೂ ಇರಬಹುದೇನೋ.

ಈ ತುಂಡು ತುಂಡು ಚಿತ್ರಗಳಿಗೂ ನನ್ನ ಫೋಟೊಗ್ರಫಿಗೂ ಏನು ಸಂಬಂಧ? ಫೋಟೊಗ್ರಫಿ ಎಂದತಕ್ಷಣ ಇವೆಲ್ಲ ನನಗೆ ಯಾಕೆ ನೆನಪಾದವು? ಉತ್ತರ ನನಗೂ ಗೊತ್ತಿಲ್ಲ.

‘ಕಾಡಿನ ರಹಸ್ಯ’ ಎಂಬ ಹೆಸರಿನ ಚಿತ್ರಸರಣಿಯನ್ನು ಆರಂಭಿಸಿದ್ದು 2013ರಲ್ಲಿ. ಆಗ ಆರು ತಿಂಗಳು ಈ ಸರಣಿಗಾಗಿ ಕೆಲಸ ಮಾಡಿದೆ. ಈ ಎಲ್ಲ ಚಿತ್ರಗಳನ್ನೂ ನನ್ನ ಮನೆ ಸುತ್ತಮುತ್ತಲಿನ ಕಾಡು, ನದಿ ತಟಗಳಲ್ಲಿ ತೆಗೆದಿದ್ದು.

ಕ್ಯಾಮೆರಾದಲ್ಲಿ ಮಲ್ಟಿಪಲ್ ಎಕ್ಸ್‌ಪೋಸರ್ ತಂತ್ರಜ್ಞಾನ ಬಳಸಿಕೊಂಡು ತೆಗೆದ ಚಿತ್ರಗಳು ಇವು. ಅಂದರೆ ಒಂದು ಚಿತ್ರದ ಮೇಲೆಯೇ ಇನ್ನೊಂದು ಚಿತ್ರವನ್ನು ತೆಗೆಯುವ ತಂತ್ರ ಅದು. ಹಾಗೆ ತೆಗೆದಾಗ ಆ ಎರಡೂ ಚಿತ್ರಗಳ ವಿವರಗಳೂ ಸೇರಿಕೊಳ್ಳುತ್ತವೆ.

ಯಾವ ವಿವರಗಳು ಎಷ್ಟು ಪ್ರಧಾನವಾಗಿರಬೇಕು ಎಂಬ ಸಂಗತಿಗಳೆಲ್ಲ ಕೆಲಸ ಮಾಡುತ್ತ ತಿಳಿಯುತ್ತ ಹೋಗುತ್ತದೆ. ಈ ಎಲ್ಲ ಚಿತ್ರಗಳನ್ನು ಟ್ರೈಪಾಡ್‌ನಲ್ಲಿ ಕ್ಯಾಮೆರಾ ಇಟ್ಟು ಟೈಮರ್ ಬಳಸಿ ತೆಗೆದ ಚಿತ್ರಗಳು (ಕ್ಯಾಮೆರಾ: ನಿಕಾನ್ ಡಿ90. ಲೆನ್ಸ್: 18–105).
ಪ್ರಕೃತಿ ಮತ್ತು ಮನುಷ್ಯನ ಸಂಬಂಧಗಳ ಶೋಧದ ರೂಪದಲ್ಲಿ ಈ ಸರಣಿ ರೂಪುಗೊಂಡಿದೆ.

ಈ ಚಿತ್ರಗಳಲ್ಲಿನ ಪರಿಣಾಮಗಳನ್ನು ನಾನು ಫೋಟೊಶಾಪ್ ತಂತ್ರಜ್ಞಾನ ಬಳಸಿ ಮನೆಯಲ್ಲಿಯೇ ಕುಳಿತು ಮಾಡಬಹುದಿತ್ತೇನೋ. ಆದರೆ ನನ್ನ ಪ್ರಕಾರ ಫೋಟೊಗ್ರಫಿ ಎಂಬುದು ಚಿತ್ರ ಮಾತ್ರ ಅಲ್ಲ. ಆ ಜಾಗಕ್ಕೆ ಹೋಗುವುದು, ಜನರೊಂದಿಗೆ ಮಾತನಾಡುವುದು, ಅಲ್ಲಿನ ಪರಿಸರವನ್ನು ಅರಿತುಕೊಳ್ಳುವುದು – ಇವೆಲ್ಲವೂ ಫೋಟೊಗ್ರಫಿ ಪ್ರಕ್ರಿಯೆಯ ಭಾಗವೇ.

ಈ ಸರಣಿಯನ್ನು ಆರಂಭಿಸುವಾಗ ಮನುಷ್ಯನೊಳಗಿನ ಕಾಡನ್ನು ಶೋಧಿಸುವುದು ಮತ್ತು ಅದು ಇತರರನ್ನೂ ಕಾಡುವಂತೆ ಮಾಡಬೇಕು ಎನ್ನುವ ಅಮೂರ್ತ ಪರಿಕಲ್ಪನೆಯೊಂದು ನನ್ನ ಮನಸ್ಸಿನಲ್ಲಿತ್ತು.

ಹಾಗೆಂದರೆ ಏನು? ಹೇಗೆ? ಅದು ಎಷ್ಟು ಯಶಸ್ವಿಯಾಗುತ್ತದೆ ಎಂಬುದಕ್ಕೆಲ್ಲ ನನ್ನ ಬಳಿ ಸ್ಪಷ್ಟ ಉತ್ತರ ಇರಲಿಲ್ಲ. ಈಗಲೂ ಇಲ್ಲ. ಅದೊಂದು ಹುಡುಕಾಟ ಅಷ್ಟೆ. ಇನ್ನೂ ನಡೆಯುತ್ತಿರುವ, ಮುಂದೆಯೂ ನಡೆಯುವ ಹುಡುಕಾಟ.

ಈ ಸರಣಿಯ ಪ್ರತಿಯೊಂದು ಹಂತದಲ್ಲಿಯೂ ಬೇರೆ ಬೇರೆಯದೇ ಅನುಭವಕ್ಕೆ ನಾನು ಎರವಾಗುತ್ತಿದ್ದೆ. ಕಾಡಿನೊಳಗೆ ಹೋಗಿ ಚಿತ್ರ ತೆಗೆದಾಗ ಒಂದು ರೀತಿ, ಹೊಳೆಯ ಬಳಿ ಇನ್ನೊಂದು ರೀತಿ ಹೀಗೆ... ನನಗೇ ಗೊತ್ತಿಲ್ಲದೇ ಅನೇಕ ಹೊಳಹುಗಳು ಅಚಾನಕ್ಕಾಗಿ ಸಿಕ್ಕಿಬಿಡುತ್ತಿದ್ದವು. ಹೀಗೇ ಎಂದು ಹೇಳಲು ಸಾಧ್ಯವಿಲ್ಲದಂಥ ವಿಶಿಷ್ಟ ಅನುಭವಗಳವು.
ಪ್ರಕೃತಿಯ ಬೇರೆ ಬೇರೆ ಕಾಲದ ರೂಪಗಳೂ ಈ ಸರಣಿಯ ಭಾಗವಾಗಬೇಕು ಎಂಬ ಉದ್ದೇಶದಿಂದ ಹಗಲು–ರಾತ್ರಿ, ಮಳೆಗಾಲ, ಚಳಿಗಾಲ, ಹೀಗೆ ಬೇರೆ ಬೇರೆ ಕಾಲಗಳಲ್ಲಿ ಚಿತ್ರಗಳನ್ನು ತೆಗೆದಿದ್ದೇನೆ.

ಈ ಸರಣಿ ಇನ್ನೂ ಮುಗಿದಿಲ್ಲ. ಈಗಷ್ಟೇ ಶುರುವಾಗಿದೆಯಷ್ಟೆ. ಪ್ರಕೃತಿಯ ಕಾಲವಷ್ಟೇ ಅಲ್ಲ, ನನ್ನ ಬದುಕಿನ ಬೇರೆ ಬೇರೆ ಕಾಲಗಳಲ್ಲಿಯೂ ಚಿತ್ರಗಳನ್ನು ತೆಗೆಯಬೇಕು. ಆದ್ದರಿಂದ ಈ ಸರಣಿ ಮುಗಿಯಲು ಇನ್ನೊಂದು ಆರೆಂಟು ವರ್ಷವಾದರೂ ಬೇಕೇನೋ.

ಕೊಡಚಾದ್ರಿ ಪರಿಸರದ ಆದಿತ್ಯ ಬೀಳೂರ್ ಅವರಿಗೆ ಕ್ಯಾಮೆರಾ ಎಂಬುದು ಒಂದು ಸಲಕರಣೆ ಮಾತ್ರವಲ್ಲ; ತೋರುವುದರಾಚೆಗೆ ಇರುವ ಬದುಕಿನ ಸಂಕೀರ್ಣ ಸತ್ಯಗಳನ್ನು ಕಾಣುವ ಕಿಟಕಿ. ಆ ಮೂಲಕ ತನ್ನನ್ನು ತಾನೇ ಕಂಡುಕೊಳ್ಳುವ ಕನ್ನಡಿಯೂ ಹೌದು.

ನೀನಾಸಮ್‌ನಲ್ಲಿ ರಂಗತರಬೇತಿ ಪಡೆದಿರುವ ಅವರ ‘ಕ್ಯಾಮೆರಾ ದೃಷ್ಟಿಕೋನ’ ರೂಪುಗೊಳ್ಳುವಲ್ಲಿ ಸಾಹಿತ್ಯ–ರಂಗಭೂಮಿ, ಸುತ್ತಾಟ ಎಲ್ಲದರ ಪ್ರಭಾವವೂ ಇದೆ. ತಮ್ಮ ಯೋಚನೆಯಲ್ಲಿ ಸುಳಿಯುವ ಅಮೂರ್ತವನ್ನು ಚಿತ್ರಗಳಲ್ಲಿ ಬಿಂಬಿಸಲು ಹೆಣಗುವ ಪ್ರಕ್ರಿಯೆ ಅವರಿಗೆ ಜಗವನ್ನು ಅರಿಯುವ ಹೊಸ ಹೊಸ ದಾರಿಗಳನ್ನು ತೆರೆದಿಟ್ಟಿದೆ. ಆದಿತ್ಯ ಅವರ ಇನ್ನಷ್ಟು ಚಿತ್ರಗಳನ್ನು lensandtales.com ಜಾಲತಾಣದಲ್ಲಿ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.