ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಗೆದ್ದು ಬಂದ ದಿಟ್ಟ ಮಹಿಳೆ

Published 31 ಮಾರ್ಚ್ 2024, 0:30 IST
Last Updated 31 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ವ್ಯಕ್ತಿಯ ಬದುಕು, ಪರಿವಾರ ಎರಡನ್ನೂ ನುಂಗಿನೊಣೆಯುವ ಮಹಾಮಾರಿ ಎಂದರೆ ಅದು ಕ್ಯಾನ್ಸರ್. ಒಮ್ಮೆ ಈ ಅರ್ಬುದ ವಕ್ಕರಿಸಿತೆಂದರೆ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ದೈಹಿಕ, ಮಾನಸಿಕ, ಸಾಮಾಜಿಕ, ಕೌಟುಂಬಿಕ, ಆರೋಗ್ಯವನ್ನು ಸಂಪೂರ್ಣ ಹದಗೆಡಿಸುವ ಕ್ಯಾನ್ಸರ್ ಈಗೀಗ ಬಡವ–ಶ್ರೀಮಂತ, ಎಳೆವಯಸ್ಸು, ಹದಿವಯಸ್ಸು, ಮುದಿವಯಸ್ಸು ಎನ್ನದೆ ಎಲ್ಲ ವರ್ಗದವರನ್ನೂ ಕಾಡುತ್ತಿದೆ. ಕೆಲವು ಧೈರ್ಯವಂತರು ಕ್ಯಾನ್ಸರ್‌ ಬಂದಿದೆ ಎಂದು ಗೊತ್ತಾದರೂ ಎದೆಗುಂದದೆ ದಿಟ್ಟತನದಿಂದ ಎದುರಿಸುತ್ತಾರೆ. ಈ ಮಹಾರೋಗವನ್ನು ಮೆಟ್ಟಿನಿಂತು, ಆತ್ಮವಿಶ್ವಾಸ, ಛಲದೊಂದಿಗೆ ಮುಂದಿನ ಬದುಕನ್ನು ಸಾಗಿಸುತ್ತಾರೆ. ಅಂಥವರಲ್ಲಿ ದೊಡ್ಡಕರುಳಿನ ಕ್ಯಾನ್ಸರ್‌ ಬಂದಿದ್ದರೂ ಅದನ್ನು ಧೈರ್ಯವಾಗಿ ಎದುರಿಸಿ ಮರುಜನ್ಮ ಪಡೆದವರು ಭೌತಶಾಸ್ತ್ರ ಪ್ರಾಧ್ಯಾಪಕಿ ಗಾಯತ್ರಿಮೂರ್ತಿ.

ಕ್ಯಾನ್ಸರ್‌ನೊಂದಿಗೆ ಹೋರಾಡಿ, ಅಪಾಯದಿಂದ ಪಾರಾಗಿ ಬಂದ ಪರಿಯನ್ನು ಈ ಕಿರುಹೊತ್ತಗೆಯಲ್ಲಿ ಹೃದಯಂಗಮವಾಗಿ, ಕಣ್ಣಿಗೆ ಕಟ್ಟುವ ಹಾಗೆ ಕಟ್ಟಿಕೊಟ್ಟಿದ್ದಾರೆ. ಕಾಯಿಲೆಯ ಆರಂಭದ ರಕ್ತಪರೀಕ್ಷೆ, ಸ್ಕ್ಯಾನಿಂಗ್‌, ಬಯಾಪ್ಸಿಯಿಂದ ಹಿಡಿದು ರೇಡಿಯೊಥೆರಪಿ, ಕಿಮೋಥೆರಪಿ, ಸರ್ಜರಿವರೆಗಿನ ಹೋರಾಟದ ಹಂತ ಹಂತವನ್ನು ಯಥಾವತ್ತಾಗಿ ವಿವರಿಸಿ, ಕ್ಯಾನ್ಸರ್‌ ಅನ್ನು ಗೆಲ್ಲಬಹುದು, ಸಹಜ ಜೀವನ ನಡೆಸಬಹುದು ಎಂಬುದನ್ನು ಕೃತಿಯಲ್ಲಿ ವಿವರಿಸಿದ್ದಾರೆ.

ಕ್ಯಾನ್ಸರ್‌ ಎಂದರೆ ಧೈರ್ಯ ಕಳೆದುಕೊಂಡು, ಆಕಾಶವೇ ತಲೆಮೇಲೆ ಬಿದ್ದ ಹಾಗೆ ಹೆದರಿ, ಹೃದಯಾಘಾತವಾಗಿ ಪ್ರಾಣ ಬಿಡುವ ಮಂದಿಗೆ ಈ ಬರಹ ಸ್ಫೂರ್ತಿ ನೀಡಬಲ್ಲದು. ಈ ಹೊತ್ತಗೆಯಲ್ಲಿ ತಮ್ಮ ಅನುಭವ ಕಥನ ಮಾತ್ರವಲ್ಲದೆ ವೈದ್ಯಕೀಯ ಪರಿಭಾಷೆಗಳಾದ ಪೆಟ್ ಸ್ಕ್ಯಾನ್‌, ಕಿಮೋಥೆರಪಿಗಳ ಸ್ವರೂಪ, ಇದರಿಂದ ಉಂಟಾಗುವ ಅಡ್ಡಪರಿಣಾಮಗಳು, ಮಾನಸಿಕ ವೇದನೆ ಎಲ್ಲವನ್ನೂ ಚಿತ್ರಿಸಿರುವುದು ಓದುಗರಿಗೆ ಕ್ಯಾನ್ಸರ್‌ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಅನುವಾಗುವಂತಿದೆ. ಕ್ಯಾನ್ಸರ್‌ ರೋಗಿಯ ಮನೋಬಲ ಹೆಚ್ಚಿಸಲು ಕುಟುಂಬದವರ ಸಹಕಾರ, ಪ್ರೀತಿ ವಾತ್ಸಲ್ಯ ಎಷ್ಟು ಅಗತ್ಯ ಎಂಬುದನ್ನೂ ಪುಸ್ತಕದಲ್ಲಿ ವಿವರಿಸಿರುವುದು ಈ ರೋಗದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಒಟ್ಟಿನಲ್ಲಿ ‘ಅಂಜದಿರು ಮನವೇ’ ಕೃತಿ ಸಂಗ್ರಹಯೋಗ್ಯ.  

ಅಂಜದಿರು ಮನವೇ

ಲೇ: ಗಾಯತ್ರಿ ಮೂರ್ತಿ

ಪ್ರ: ನವಕರ್ನಾಟಕ

ಸಂ: 080221 61900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT