ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೈಕೋರ್ಟ್‌ನಲ್ಲಿ ಪುಸ್ತಕ ಪ್ರದರ್ಶನ

Published 24 ಆಗಸ್ಟ್ 2024, 0:02 IST
Last Updated 24 ಆಗಸ್ಟ್ 2024, 0:02 IST
ಅಕ್ಷರ ಗಾತ್ರ

ಪುಸ್ತಕ ಮಾರಾಟ ಎನ್ನುವುದು ಬೇರೆ ವಸ್ತುಗಳ ಮಾರಾಟದಂತೆ ಅಲ್ಲ. ಅದಕ್ಕೊಂದು ವಿಶೇಷ ಪರಿಣತಿ ಬೇಕು. ಬೆರಳಿನ ತುದಿಯಲ್ಲಿ ಮಾಹಿತಿ ಇದ್ದರೂ ಕರಾರುವಾಕ್ಕು ಜ್ಞಾನ ಪುಸ್ತಕಗಳಿಂದ ಮಾತ್ರ ಸಾಧ್ಯ.

ಎಷ್ಟೋ ಸಾವಿರ ವರ್ಷಗಳಿಂದ ಬೇರೆ ಬೇರೆ ವಿಧಾನಗಳ ಮೂಲಕ ಜ್ಞಾನ ಎನ್ನುವುದು ನಿರಂತರವಾಗಿ ಹರಿದು ಬರುತ್ತಿದೆ. ಮೌಖಿಕವಾಗಿ, ತಾಮ್ರಪಟ, ಕಲ್ಲಚ್ಚು ಶಾಸನ, ತಾಳೆ ಓಲೆ. ಈಗ ಆಧುನಿಕ ಮಾಧ್ಯಮಗಳ ಮೂಲಕ. ಜ್ಞಾನ ಪ್ರಸರಣದಲ್ಲಿ ಲೇಖಕ, ಪ್ರಕಾಶಕ ಮತ್ತು ಓದುಗರ ಸಂಬಂಧ ತ್ರಿವೇಣಿ ಸಂಗಮದಂತೆ. ಅದರಲ್ಲಿಯೂ ಓದುಗರು ಮತ್ತು ಲೇಖಕರನ್ನು ಬೆಸೆಯುವ ಕಾರ್ಯ ಪ್ರಕಾಶಕರದ್ದು.

ಸಂಸ್ಕೃತಿಯ ಪ್ರಸರಣದಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು. ಇದನ್ನರಿತ ಕುಲಪತಿ ಕೆ. ಎಂ. ಮುನ್ಷಿ ಅವರು ಮಹಾತ್ಮಗಾಂಧಿ ಅವರ ಸಲಹೆಯ ಮೇರೆಗೆ ಭಾರತೀಯ ವಿದ್ಯಾಭವನ ಸ್ಥಾಪಿಸಿದರು. ಇವತ್ತು ಬೆಂಗಳೂರು ಸೇರಿ ವಿಶ್ವದ ಬೇರೆಬೇರೆ ದೇಶಗಳಲ್ಲಿ 300ಕ್ಕೂ ಹೆಚ್ಚು ಕೇಂದ್ರಗಳು ಶಿಕ್ಷಣದ ಮೂಲಕ ಭಾರತೀಯ ಪರಂಪರೆಯನ್ನು ಕಲಿಸುವ ಕೆಲಸದಲ್ಲಿ ತೊಡಗಿಕೊಂಡಿವೆ.  ಪುಸ್ತಕ ಪ್ರಕಟಣೆಯ ಮೂಲಕ ಇತಿಹಾಸವನ್ನೇ ನಿರ್ಮಿಸಿದೆ. ಕುಲಪತಿ ಮುನ್ಷಿ ಅವರ ಕೃತಿಗಳ ಅನುವಾದವಿರಬಹುದು; ರಾಮಾಯಣ ಮಹಾಭಾರತ, ಯೋಗ, ಆಧ್ಯಾತ್ಮ, ದೇವಾಲಯ ಶಿಲ್ಪ ಸಂಗೀತ ಭಗವದ್ಗೀತೆ, ಉಪನಿಷತ್ತು, ವೇದಾಂತ, ಆರೋಗ್ಯ, ಯೋಗ ಮತ್ತು ಜ್ಯೋತಿಷ್ಯ ಸೇರಿ  ಹಲವು ವಿಚಾರಗಳ ಪುಸ್ತಕಗಳನ್ನು ಭವನ ಪ್ರಕಟಿಸಿದೆ. ಪುಸ್ತಕ ಪ್ರಕಟಣೆಯನ್ನು ಲಾಭದಾಯಕವಾಗಿಸಿಕೊಳ್ಳದೆ, ಸುಲಭ ಬೆಲೆಯಲ್ಲಿ ಆಕರ್ಷಕ ಗುಣಮಟ್ಟ, ವಿನ್ಯಾಸದೊಂದಿಗೆ ನಿಖರ ಮಾಹಿತಿಯೊಂದಿಗೆ ಪ್ರಕಟಿಸುವುದು ಭವನದ ವಿಶೇಷತೆಗಳಲ್ಲಿ ಒಂದು.

ಕಾಲಕಾಲಕ್ಕೆ ಓದುಗರ ಬಳಿಗೆ ಪುಸ್ತಕಗಳನ್ನು ಕೊಂಡೊಯ್ಯುವ ಕೆಲಸವನ್ನು ಭವನ ಮಾಡುತ್ತಾ ಬಂದಿದೆ. ಹಿಂದೊಮ್ಮೆ ಮತ್ತೂರು ಕೃಷ್ಣಮೂರ್ತಿ ಅವರು ಅಧ್ಯಕ್ಷರಾಗಿದ್ದಾಗ ಭವನ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು ಆಗ ದಾಖಲೆಯ ಮಾರಾಟವಾಗಿತ್ತು. ಬೆಂಗಳೂರು ಕೇಂದ್ರದ ಅಧ್ಯಕ್ಷರೂ, ಹಿರಿಯ ವಕೀಲರೂ, ವಿದ್ವಾಂಸರು ಆದ ಕೆ. ಜಿ. ರಾಘವನ್ ಅವರ ಪ್ರಯತ್ನದಿಂದ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಭವನದ ಮತ್ತು ಕೆಲಪ್ರಕಾಶಕರ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಇದೇ 30ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

 ವಕೀಲರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅನಂತರ ಕೂಡ ಸಾಂಸ್ಕೃತಿಕ ಪರಿವರ್ತನೆಯಲ್ಲಿ ವಕೀಲರ ಪ್ರಯತ್ನವೂ ಮುಖ್ಯವಾದುದು. ಯುವ ಸಮುದಾಯಕ್ಕೆ ಇತಿಹಾಸ, ಧರ್ಮ, ಸಮಾಜವಿಜ್ಞಾನ ವಿಷಯಗಳ ಕುರಿತು ಆಸಕ್ತಿ ಮೂಡಿಸಲು ಪುಸ್ತಕ ಪ್ರದರ್ಶನ ಏರ್ಪಡಿಸಿದೆ  ಎನ್ನುತ್ತಾರೆ. ಈ ಪ್ರಯತ್ನದ ಹಿಂದಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ.

ಭಾರತೀಯ ಜ್ಞಾನವು ಜಗತ್ತಿಗೇ ಬೆಳಕುನೀಡುವಷ್ಟು ಶಕ್ತಿಯುತವಾಗಿವೆ. ಅವುಗಳ ಕಡೆಗೆ ಗಮನ ಸೆಳೆಯುವ ಪುಸ್ತಕಗಳನ್ನು ಭಾರತೀಯ ವಿದ್ಯಾಭವನ ಪ್ರದರ್ಶನ ಏರ್ಪಡಿಸುತ್ತೇವೆ ಎಂದಾಗ ಅವರಿಗೆ ಉಚಿತವಾಗಿ ಸ್ಥಳಾವಕಾಶ ನೀಡಿದ್ದೇವೆ ಎನ್ನುತ್ತಾರೆ ಅವರು. 

ಭವನಕ್ಕೆ ಈಗ ಅರವತ್ತರ ವಸಂತ. ನಾಡಿನ ಹಲವು ಸಂಘ ಸಂಸ್ಥೆಗಳ ಜತೆಗೂಡಿ ಹಲವು ವಿವಿಧ್ಯಮಯ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೇವೆ. ಇನ್ಫೊಸಿಸ್‌ ಪ್ರತಿಷ್ಠಾನ, ವಿ ಕೃ ಗೋಕಾಕ್ ಟ್ರಸ್ಟ್ ಮುಂತಾಗಿ ವರ್ಷಕ್ಕೆ 250 ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಗ್ರಾಮೀಣ ಪ್ರದೇಶದ ಮತ್ತು ಬುಡಕಟ್ಟು ಕಲಾವಿದರಿಗೂ ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ. ವಕೀಲರ ಸಂಘದ ಜತೆಗೂಡಿ ಅರ್ಪಿಸಿರುವ ಪುಸ್ತಕ ಪ್ರದರ್ಶನವು ತುಂಬ ಯಶಸ್ವಿಯಾಗುವುದೆಂಬ ನಂಬಿಕೆ ಇದೆ. ಸಂಕೀರ್ಣವಾಗುತ್ತಿರುವ ನಮ್ಮ ಸಂಬಂಧಗಳು, ಬದುಕು, ಕೆಲಸ ಎಲ್ಲದರ ನಡುವೆ ಸಾಹಿತ್ಯ ಸಂಸ್ಕೃತಿ ಮಾತ್ರ ನಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯಬಲ್ಲವು ಎನ್ನುತ್ತಾರೆ ವಿದ್ಯಾಭವನದ ನಿರ್ದೇಶಕ  ಎಚ್. ಎನ್ ಸುರೇಶ್. 

ಪುಸ್ತಕ ಪ್ರದರ್ಶನದ ಸಂಚಾಲಕರಾದ ಅಭಿನವ ರವಿಕುಮಾರ್ ಹೇಳುವಂತೆ ಕನ್ನಡದಲ್ಲಿ ಓದುಗರು ಕಡಿಮೆ, ಕೊಳ್ಳುವವರಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಒಳ್ಳೆಯ ಪುಸ್ತಕಗಳಿಗೆ ಓದುಗರು ಇದ್ದೇ ಇರುತ್ತಾರೆ. ಹೈಕೋರ್ಟ್ ಆವರಣದ ಪುಸ್ತಕ ಪ್ರದರ್ಶನ ನನಗೆ ಬೇರೊಂದು ಭರವಸೆಯ ದಾರಿಯನ್ನೇ ತೆರೆದಿದೆ. ಯುವ ವಕೀಲರು ಪುಸ್ತಕಗಳ ಬಗೆಗೆ ಆಸಕ್ತಿ ತೋರಿಸುತ್ತಿದ್ದಾರೆ.

ನಮ್ಮ ಮಕ್ಕಳಿಗೆ ದೇಶದ ಸಂಸ್ಕೃತಿಯನ್ನು ಪರಿಚಯಿಸಲು ಇರುವ ಶಕ್ತಮಾಧ್ಯಮ ಪುಸ್ತಕಗಳೇ, ಇಂಥ ಪ್ರಯತ್ನಗಳು ನಡೆಯುವುದು ಒಳ್ಳೆಯದು ಎನ್ನುತ್ತಾರೆ ಅವರು.

ಸೀಮಾ ಎಸ್ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT