ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ನಟ–ನಟಿಯರ ಕಸುಬುದಾರಿಕೆಗೆ ಕೈಪಿಡಿ

ವೆಂಕಟೇಶ್ವರ ಕೆ.
Published 20 ಜನವರಿ 2024, 23:42 IST
Last Updated 20 ಜನವರಿ 2024, 23:42 IST
ಅಕ್ಷರ ಗಾತ್ರ

ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ರಂಗಶಿಕ್ಷಣ ನೀಡಲು ಹಲವಾರು ಪ್ರಮುಖ ರಂಗ ಪ್ರಯೋಗ ಶಾಲೆಗಳಿವೆ. ಹಾಗೆಯೇ ಅವುಗಳಿಗೆ ಪ್ರವೇಶ ಕೋರಿ ಬರುತ್ತಿರುವ ರಂಗಾಭ್ಯಾಸಿಗಳಿಗೂ ಕೊರತೆಯಿಲ್ಲ. ಇತ್ತೀಚಿನವರೆಗೂ ಕನ್ನಡದ ಎಲ್ಲಾ ರಂಗಶಿಕ್ಷಣ ಕೇಂದ್ರಗಳಲ್ಲೂ ಅಭಿನಯದ ಕುರಿತಾಗಿ ಲಭ್ಯವಿರುವ ಆಕರ ಗ್ರಂಥಗಳಲ್ಲಿ ವಾಸ್ತವವಾದಿ ಅಭಿನಯ ಸಿದ್ಧಾಂತಕಾರ ಸ್ತಾನಿಸ್ಲಾವಸ್ಕಿಯವರು ಬರೆದಿರುವ ‘ಆ್ಯನ್‌ ಆ್ಯಕ್ಟರ್‌ ಪ್ರಿಪೇರ್ಸ್‌‘ ಪುಸ್ತಕದ ಕನ್ನಡ ಅವತರಣಿಕೆಯಾದ ‘ರಂಗದಲ್ಲಿ ಅಂತರಂಗ’ ಪುಸ್ತಕವು ಪ್ರಮುಖವಾದುದಾಗಿತ್ತು. ಸುಮಾರು ನಾಲ್ಕು ದಶಕಗಳ ಹಿಂದೆ ಕೆ.ವಿ ಸುಬ್ಬಣ್ಣನವರ ಅನುವಾದದಲ್ಲಿ ಮೂಡಿಬಂದ ಈ ಪುಸ್ತಕವು ಕನ್ನಡದ ರಂಗನಟರ ಪಾಲಿಗೆ ವಾಸ್ತವವಾದಿ ನಟನೆಯ ಕುರಿತಾಗಿ ಸ್ಪಷ್ಟತೆಯನ್ನು ಕಂಡುಕೊಳ್ಳಲು ಅತ್ಯುಪಯುಕ್ತ ಆಕರ ಗ್ರಂಥವಾಗಿ ಬಳಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ‘ನಟನೆಯ ಪಾಠಗಳು‘, ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ತರಹದ ನಟನೆಯ ಕುರಿತಾದ ಕನ್ನಡದ್ದೇ ಪುಸ್ತಕಗಳು ಬಂದಿವೆಯಾದರೂ, ಅಭಿನಯ ಸಿದ್ಧಾಂತದ ಕುರಿತು ಪಾಶ್ಚಿಮಾತ್ಯ ಸಿದ್ಧಾಂತತಕಾರರ ಕೃತಿಗಳ ಕನ್ನಡೀಕರಣ ಅತಿ ವಿರಳ. ಇಂತಹ ಸಂದರ್ಭದಲ್ಲಿ ‘ಥಿಯೇಟರ್‌ ತತ್ಕಾಲ್‌ ಬುಕ್ಸ್‌’ನವರು ಸ್ತಾನಿಸ್ಲಾವಸ್ಕಿಯ ‘ಬಿಲ್ಡಿಂಗ್‌ ಎ ಕ್ಯಾರೆಕ್ಟರ್‌’ ಪುಸ್ತಕವನ್ನು ಶ್ರೀಧರ ಹೆಗ್ಗೋಡು ಅವರಿಂದ ‘ಪಾತ್ರಪ್ರವೇಶ’ ಎಂದು ಅನುವಾದ ಮಾಡಿಸಿ, ಪ್ರಕಾಶಿಸಿರುವುದು ಅಭಿನಂದನೀಯ.

ನಟನೆಯ ಕುರಿತಾಗಿ ಸ್ಟಾನಿಸ್ಲಾವ್ಸ್ಕಿಯು ಬರೆದಿರುವ ಮೂರು ಸಂಪುಟಗಳಲ್ಲಿ ‘ಬಿಲ್ಡಿಂಗ್‌ ಎ ಕ್ಯಾರೆಕ್ಟರ್‌ʼ ಕೂಡ ಒಂದು. ನೀನಾಸಂ ಪದವೀಧರರಾದ ಹಾಗೂ ಅಲ್ಲಿ ರಂಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿರುವ ಶ್ರೀಧರ ಹೆಗ್ಗೋಡು ತಮ್ಮ ರಂಗಾನುಭವದ ಹಿನ್ನೆಲೆಯಲ್ಲಿ ಇದನ್ನು ಕನ್ನಡೀಕರಿಸಿದ್ದಾರೆ. ಆಕಸ್ಮಿಕ ಅಪಘಾತದಿಂದಾಗಿ ದೇಹ ಸ್ವಾಧೀನ ಕಳೆದುಕೊಂಡಿದ್ದರೂ ತಮ್ಮ ಮನೋಸ್ಥೈರ್ಯ ಹಾಗೂ ರಂಗಭೂಮಿಯ ಕುರಿತಾದ ತಮ್ಮ ತುಡಿತದಿಂದ ಕೃತಿಯ ಅನುವಾದ ಮಾಡಿರುವುದು ಯುವ ರಂಗಕರ್ಮಿಗಳಿಗೆ ಪ್ರೇರಣಾದಾಯಕ. ಮೊದಲ ಸಂಪುಟವನ್ನು ಕೆ.ವಿ. ಸುಬ್ಬಣ್ಣನವರು 1982ರಲ್ಲಿ ಕನ್ನಡಕ್ಕೆ ತಂದಿದ್ದು, ಇದುವರೆವಿಗೂ ಹಲವಾರು ನಟರಿಗೆ ಅಭ್ಯಾಸಕ್ಕಾಗಿ ಮಾರ್ಗ ತೋರುವ ಪುಸ್ತಕವಾಗಿದೆ. ಅದಾದ ನಂತರ ಇಲ್ಲಿಯವರೆವಿಗೂ ವಾಸ್ತವವಾದೀ ಅಭಿನಯದ ಕುರಿತಾದ ಇನ್ನೊಂದು ಪುಸ್ತಕ ಕನ್ನಡದಲ್ಲಿ ಲಭ್ಯವಿರಲಿಲ್ಲ. ನಟನೆಗೆ ವಿಪುಲ ಅವಕಾಶಗಳಿರುವ ಈ ಕಾಲದಲ್ಲಿ ಪಾತ್ರ ಈ ಪುಸ್ತಕವು ವೃತ್ತಿಪರ ನಟರಿಗೆ ನೆರವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ನಟರಾಗುವ ಕನಸು ಹೊತ್ತು ರಂಗಶಾಲೆಗಳಿಗೆ ಸೇರಿರುವ, ಮುಂದೆ ಸೇರ ಬಯಸುವ ರಂಗ ವಿದ್ಯಾರ್ಥಿಗಳಿಗೆ ಇದು ದಾರಿ ದೀಪವಾಗಬಲ್ಲದು. ಅಭಿನಯ ಸಿದ್ಧಾಂತವನ್ನು ಬೋಧಿಸುತ್ತಿರುವ ಅಧ್ಯಾಪಕರಿಗೆ ಪರಿಪೂರ್ಣ ಕೈಪಿಡಿಯೂ ಆಗಬಲ್ಲದು.

‘ರಂಗದಲ್ಲಿ ಅಂತರಂಗ’ ಪುಸ್ತಕವು ನಟನೊಬ್ಬ ಪಾತ್ರ ತಯಾರಿಯ ವೇಳೆ ಒಳಗೊಳ್ಳಬೇಕಾದ ಕಾಲ್ಪನಿಕ ಪ್ರಕ್ರಿಯೆಗಳು ಮತ್ತು ಒಂದು ಪಾತ್ರವನ್ನು ಪೂರ್ಣವಾಗಿ ಅನ್ವೇಷಿಸಲು ನಟನು ಒಳಪಡಬೇಕಾದ ಆಂತರಿಕ ಸಿದ್ಧತೆಯ ಪ್ರಕ್ರಿಯೆಗಳ ಕುರಿತು ನಿರೂಪಿಸಿತ್ತು. ‘ಪಾತ್ರ ಪ್ರವೇಶ’ ಪುಸ್ತಕವು, ರಂಗದ ಮೇಲೆ ಪಾತ್ರದ ಭೌತಿಕ ಸಾಕ್ಷಾತ್ಕಾರಕ್ಕಾಗಿ, ದೈಹಿಕ ಅಭಿವ್ಯಕ್ತಿಗಳು, ಚಲನೆ, ಚಲನೆಯಲ್ಲಿನ ತಾಳ – ಲಯ, ಸಂಗೀತ ಮತ್ತು ಹಾಡು, ಮಾತುಗಾರಿಕೆ, ಮಾತಿನಲ್ಲಿ ತಾಳ-ಲಯ, ಉಚ್ಚಾರ- ಒತ್ತು-ಕಾಕು- ಅಭಿವ್ಯಂಜಕತೆ, ಪಾತ್ರ ರಚನೆ... ಇವುಗಳೆಲ್ಲದರ ಜೊತೆಗೆ ನಟನೊಬ್ಬ ಹೇಗೆ ವ್ಯವಹರಿಸುತ್ತಾನೆ ಎಂಬುದನ್ನು ವಿಸ್ತಾರವಾಗಿ, ಪ್ರಾಯೋಗಿಕವಾಗಿ ಚರ್ಚೆ ಮಾಡುತ್ತದೆ.

ಪ್ರತಿಯೊಂದು ಸಿದ್ಧಾಂತವು ಪ್ರಾಯೋಗಿಕ ಅಭ್ಯಾಸದೊಂದಿಗೆ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿರುವ, ನಟನೆಯಂತಹ ಭೌತಿಕ ಕಲೆಯಲ್ಲಿ ಕುಶಲತೆಯನ್ನು ಸಾಧಿಸುವ ನಿಟ್ಟಿನಲ್ಲಿರುವ ನಟರ ಕಸುಬುದಾರಿಕೆಗೆ ಒಂದು ಪರಿಪೂರ್ಣ ಕೈಪಿಡಿಯಾಗಿದೆ. ಆಂಗಿಕ ಮತ್ತು ವಾಚಿಕ ಅಭ್ಯಾಸಗಳ ಕುರಿತು ದೃಷ್ಟಾಂತಗಳ ಸಹಿತ ಕೃತಿಯಲ್ಲಿ ವಿವರಿಸಲಾಗಿದೆ. ಅಭಿನಯದ ಕುರಿತಾದ ಪ್ರಾಯೋಗಿಕ ಚಟುವಟಿಕೆಗಳಿಂದ ಕೂಡಿರುವ ವಿವರಣಾತ್ಮಕ ಟಿಪ್ಪಣಿಗಳು ಇದರಲ್ಲಿ ಇವೆ. ಇಂತಹ ಪುಸ್ತಕವನ್ನು ಅನುವಾದಿಸುವಾಗ ಯಥಾವತ್ತಾಗಿ ಮೂಲಕ್ಕೆ ಧಕ್ಕೆಯಾಗದಂತೆ ಅನುವಾದಿಸುವುದು ಸವಾಲಿನ ಕೆಲಸ. ನಮ್ಮ ಭಾಷೆ ಮತ್ತು ಪರಿಸರಕ್ಕೆ ಅನ್ವಯಿಸದ ಹಲವು ಅಂಶಗಳನ್ನು ಕೈಬಿಟ್ಟು, ಎಲ್ಲಾ ನಟರಿಗೂ ಅವಶ್ಯವಾಗುವಂತಹ ಪ್ರಮುಖ ವಿಷಯಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸಲೀಸಾಗಿ ಓದಲು ನೆರವಾಗುವಂತೆ ಆಡುಮಾತಿನ ಧಾಟಿಯ ಭಾಷಾ ಬಳಕೆಯಿದೆ. ಈ ಪುಸ್ತಕವನ್ನು ಓದಿ, ನಟ–ನಟಿಯರು ತಮ್ಮ ವೃತ್ತಿ ಜೀವನದಲ್ಲಿ ಹಲವು ಆಶಯಗಳನ್ನು ಅಳವಡಿಸಿಕೊಳ್ಳಬಹುದು ಎನ್ನುವುದೂ ಅಗ್ಗಳಿಕೆ.

ಕೃ: ಪಾತ್ರ ಪ್ರವೇಶ

ಮೂ: ಕೋನ್‌ಸ್ತಂತಿನ್ ಸ್ತಾನಿಸ್ಲಾವಸ್ಕಿಯ

ಕನ್ನಡಕ್ಕೆ: ಶ್ರೀಧರ ಹೆಗ್ಗೋಡು

ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್‌

ಪು: 402

ಬೆ: ₹300

ಸಂ: 9901234161

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT