ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು |ಮಣ್ಣಿನ ಕಸುವು: ಲಂಕೇಶರ ಮಣ್ಣಿನ ಕಸುವಿಗೆ ಮಸೂರ

Published 16 ಸೆಪ್ಟೆಂಬರ್ 2023, 23:31 IST
Last Updated 16 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಪಿ. ಲಂಕೇಶ್ ಅವರ ಬರಹಗಳನ್ನು ಈ ಹೊತ್ತಿಗೆ ಅನ್ವಯಿಸಿ ನೋಡುವ ಮನಸ್ಸುಗಳು ನಮ್ಮ ನಡುವೆ ಇವೆ. ಅವರ ಓದನ್ನು ಪುನರ್‌ವಿಮರ್ಶಿಸುತ್ತಾ, ಸಾಲುಗಳ ನಡುವಿನ ಅರ್ಥ–ತತ್ವವನ್ನು ಅರ್ಥೈಸುತ್ತಾ ಬಂದ ಕೆಲವರೂ ಇದ್ದಾರೆ. ಕೃತಿಕಾರ ಸುರೇಶ್‌ ನಾಗಲಮಡಿಕೆ ಅದನ್ನು ಅಕಡೆಮಿಕ್ ಶಿಸ್ತಿನಿಂದ ಮಾಡಿದ್ದಾರೆ. ಲಂಕೇಶರು ಬದುಕನ್ನು ನೋಡಿದ್ದ ರೀತಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಗಳು ಉಂಟುಮಾಡಿದ್ದ ಅವಸ್ಥೆಗಳನ್ನು ಅವರು ಪರಾಮರ್ಶಿಸಿದ್ದು ಹೇಗೆನ್ನುವುದಕ್ಕೆ ಸುರೇಶ್ ನಾಗಲಮಡಿಕೆ ಪಾತಾಳಗರಡಿ ಹಾಕಿದ್ದಾರೆ. ಲಂಕೇಶರ ನೆಪದಲ್ಲಿ ಕನ್ನಡ ಕಥನ, ಬಹುನೆಲೆಯ ಸಮಾಜ ಮತ್ತು ಲಂಕೇಶರ ಕಥಾಲೋಕ, ಲಂಕೇಶರ ಕಾದಂಬರಿ ಲೋಕ ಎಂದು ಕೃತಿಕಾರರು ಭಾಗಗಳಾಗಿ ವಿಂಗಡಿಸಿಕೊಂಡು, ತಮ್ಮ ಅರ್ಥೈಸುವಿಕೆಯನ್ನು ಮಂಡಿಸಿದ್ದಾರೆ. ಲಂಕೇಶರ ಸಾಹಿತ್ಯದ ಈ ಹಿಂದಿನ ವಿಮರ್ಶೆಗಳನ್ನು ಅಲ್ಲಗಳೆಯದೆ, ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯದ ವಿದ್ಯಾರ್ಥಿಯಾಗಿ ತಾವು ಅವರನ್ನು ಗ್ರಹಿಸುತ್ತಿರುವುದು ಹೇಗೆ ಎನ್ನುವುದನ್ನು ಹೇಳಲು ಹೊರಟಿರುವುದಾಗಿ ಲೇಖಕರು ಮೊದಲೇ ತಿಳಿಸಿರುವುದು ಅವರ ವಿನಯಕ್ಕೆ ಸಾಕ್ಷಿ.

‘ಲಂಕೇಶರು ತಮ್ಮ ಕತೆಗಳಲ್ಲಿ ಹುಡುಕುವ ಮನುಷ್ಯನ ಕೇಡಿಗುಣಗಳು ಹುಟ್ಟುಗುಣದಿಂದ ಬರುವವಲ್ಲ; ಅಥವಾ ತಾವಾಗಿ ರೂಢಿಸಿಕೊಂಡವೂ ಅಲ್ಲ. ಹಲವು ಬಾರಿ ಅವು ತಮ್ಮ ವರ್ತನೆಗಳಿಗೆ ಮತ್ತು ಕಾಲಕ್ಕೆ ಅನುಗುಣವಾಗಿ ಬರುತ್ತವೆ. ಕೆಲವರು ಇದರಿಂದ ಎಚ್ಚೆತ್ತು ಬದಲಾಗಬಹುದು, ಇನ್ನೂ ಹಲವರು ಬದಲಾವಣೆಗೆ ಒಗ್ಗುವುದಿಲ್ಲ. ಹಾಗಂತ ಮನುಷ್ಯನನ್ನು ಸದಾ ಸಂಶಯದಿಂದ, ಮನಸ್ಸಿನ ರೋಗಿಷ್ಟತನದಿಂದ ನೋಡಿದರೂ ಕಷ್ಟವೇ. ಇಲ್ಲಿ ಜೀವನಪ್ರೇಮ ಮತ್ತು ಬದುಕುವ ಆಸೆ ಭಗ್ನವಾಗುತ್ತದೆ. ಹೀಗೆ ಗ್ರಹಿಸಬೇಕಾದಾಗ ಅನುಭವ ಜಗತ್ತು ಪ್ರಾಮಾಣಿಕತೆಯಿಂದ ಮಾಗಬೇಕಾಗುತ್ತದೆ...’ ಹೀಗೆ ಕೃತಿಯಲ್ಲಿ ಒಂದೆಡೆ ಸುರೇಶ್ ನಾಗಲಮಡಿಕೆ ಬರೆಯುತ್ತಾ ಹೋಗಿದ್ದಾರೆ. ಲಂಕೇಶರ ಸಾಹಿತ್ಯಸೃಷ್ಟಿಗೆ ಸಂವಾದಿಯಾಗಿ ಅವರು ಈ ಹೊತ್ತಿನ ಚೌಕಟ್ಟಿಗೆ ಅದನ್ನು ಒಗ್ಗಿಸುವ ಬಗೆಗೆ ಇದೊಂದು ಉದಾಹರಣೆಯಷ್ಟೆ. ಪುಸ್ತಕದಲ್ಲಿ ಇಂತಹ ವಿಚಾರಗಳು ಭರ್ತಿಯಾಗಿವೆ. ⇒v

ಮಣ್ಣಿನ ಕಸುವು–ಲಂಕೇಶ್ ಕಥನ ಕುರಿತ ಅಧ್ಯಯನ

ಲೇ: ಸುರೇಶ್ ನಾಗಲಮಡಿಕೆ

ಪ್ರ: ದೀಪಂಕರ ಪುಸ್ತಕ ನಾಗಲಮಡಿಕೆ ಪಾವಗಡ

ಸಂ: 9886279441

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT