ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಛಂದೋರೂಪದ ಚೆಂದದ ಅನುವಾದ

Published 18 ನವೆಂಬರ್ 2023, 23:34 IST
Last Updated 18 ನವೆಂಬರ್ 2023, 23:34 IST
ಅಕ್ಷರ ಗಾತ್ರ

ಜಗತ್ತಿನ ನಾಲ್ವರು ಮಹಾನ್ ದುರಂತ ನಾಟಕಕಾರರಲ್ಲಿ ಮೂವರು ಗ್ರೀಕರು: ಈಸ್ಕಿಲಸ್, ಸೊಫೊಕ್ಲೀಸ್ ಮತ್ತು ಯೂರಿಪಿಡೀಸ್; ನಾಲ್ಕನೆಯವನು ಶೇಕ್ಸ್‌ಪಿಯರ್. ಜಗತ್ತನ್ನು ಸ್ಪಷ್ಟವಾಗಿ, ಅಷ್ಟೇ ಸುಂದರವಾಗಿ ಗ್ರಹಿಸಿ, ದುರಂತವನ್ನು ಮೊಟ್ಟಮೊದಲು ಪರಿಗಣಿಸಿ, ಅದನ್ನು ಉನ್ನತ ಕಲೆಯನ್ನಾಗಿ ಮಾರ್ಪಡಿಸಿದವರು ಗ್ರೀಕರು. ದುರಂತ ನಾಟಕ ಅವರ ವಿಶಿಷ್ಟ ಸಾಧನೆ.

ಈಸ್ಕಿಲಸ್ ಮತ್ತು ಸೊಫೊಕ್ಲೀಸ್‌ರ ನಾಟಕಗಳಲ್ಲಿ ದೂರ ಸಂಬಂಧದ ಇಂಗಿತವಿರುವಂತೆಯೇ ಅಭಿಜಾತ ಕೃತಿಯ ಭವ್ಯತೆಯೂ ಇದೆ. ಅವುಗಳಲ್ಲಿ ಅತ್ಯಂತ ಗಾಢವಾದ ವಿಚಾರಗಳಿದ್ದರೂ ಅವು ಸಾಮಾನ್ಯ ಅನುಭವಕ್ಕೆ ಸ್ವಲ್ಪಮಟ್ಟಿಗೆ ಅತೀತವಾಗಿರುತ್ತವೆ. ಮತ್ತೆ ಅವುಗಳ ಭಾಷೆ ಭಾವಗೀತಾತ್ಮಕವಾಗಿರುವಂತೆಯೇ ಭವ್ಯವೂ ಆಗಿದ್ದು ಸಾಮಾನ್ಯರ ಭಾಷೆಗಿಂತ ತೀರ ಭಿನ್ನವಾಗಿರುತ್ತದೆ. ಆದರೆ ಯೂರಿಪಿಡೀಸ್ ಪ್ರಜಾಪ್ರಭುತ್ವದ ಮೊದಲ ನಾಟಕಕಾರ; ಅಥೆನ್ಸಿನ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕುರಿತು ತೀವ್ರ ವಿಡಂಬನೆಯಿಂದ, ವಿಶಿಷ್ಟ ಒಳನೋಟಗಳಿಂದ ಬರೆದವನು. ಸ್ತ್ರೀ ಮನೋವ್ಯಾಪಾರದಲ್ಲೂ ಅವನಿಗೆ ಆಸಕ್ತಿಯಿತ್ತು.

ಕ್ರಿ.ಪೂ. 485ರಲ್ಲಿ ಹುಟ್ಟಿದ ಈತ 92 ನಾಟಕಗಳನ್ನು ಬರೆದನಂತೆ. ಸಿಕ್ಕಿರುವುದು 18 ಮಾತ್ರ. ನಾಟಕಗಳಲ್ಲಿ ಜರ್ಜರ ಹೀರೋಗಳನ್ನೂ ಅನೈತಿಕ ಮಹಿಳೆಯರನ್ನೂ ಪರಿಚಯಿಸಿದನೆಂದು ಅವನನ್ನು ಅವನ ಕಾಲದ ಸಂಪ್ರದಾಯಸ್ಥರು ಖಂಡಿಸಿದ್ದುಂಟು. ಅವರ ದೃಷ್ಟಿಯಲ್ಲಿ ಪರಿಶುದ್ಧವೂ ಆಢ್ಯವೂ ಆದ ದುರಂತ ನಾಟಕಕ್ಕೆ ಅಂಥವರ ಪ್ರವೇಶದಿಂದ ಕಳಂಕವಾಗುತ್ತಿತ್ತು. ಆದರೆ ಪ್ರೇಕ್ಷಕರ ಪಾಲಿಗೆ ಅವನ ನಾಟಕಗಳು ಚಿತ್ತಾಕರ್ಷಕವಾಗಿದ್ದವು. ಅವನ ನಿಧನಾನಂತರ ಅವನ ಜನಪ್ರಿಯತೆ ಇತರ ನಾಟಕಕಾರರಿಗಿಂತ ಮಿಗಿಲಾಯಿತು.

ಹೊಸತರ ಹರಿಕಾರನೆನಿಸಿದ ಯೂರಿಪಿಡೀಸನ ನಾಟಕಗಳ ಕೇಂದ್ರದಲ್ಲಿ ಮಹಾನ್ ವ್ಯಕ್ತಿಗಳಿದ್ದು, ಅವರು ದುರ್ವಿಧಿಯ ಜೊತೆ ಸೆಣಸಾಡದೆ ತಮ್ಮೊಳಗಿನ ‘ಭೂತ’ಗಳ ಜೊತೆಗೇ ಹೋರಾಡುತ್ತಾರೆ. ಮೇಳದವರು ಕಥಾಸಂವಿಧಾನದ ಒಂದು ಅನನ್ಯ ಭಾಗವಾಗುವುದಕ್ಕೆ ಬದಲಾಗಿ ತಾವೇ ವ್ಯಾಖ್ಯಾನಕಾರರಾಗಿ ರಂಗಕ್ಕೆ ಬರುತ್ತಾರೆ. ಪ್ರಾಚೀನ ದಂತಕತೆಗಳ ಹಾಗೂ ಮಿಥಕಗಳ ಪ್ರಸಿದ್ಧ ಪಾತ್ರಗಳು ನಿಜ ಜೀವನದ ಪಾತ್ರಗಳಾಗಿ ಪುನರೂಪಗೊಂಡು ಮಾನವೀಯ ಸಮಸ್ಯೆಗಳನ್ನು ಸಮಕಾಲೀನ ಭಾಷೆಯಲ್ಲಿ ಚರ್ಚಿಸುತ್ತವೆ.

ಪ್ರಸ್ತುತ ಕೃತಿಯಲ್ಲಿ ಯೂರಿಪಿಡೀಸನ ‘ಅಲ್ಸೆಸ್ಟಿಸ್’, ‘ಔಲಿಸ್‌ನಲ್ಲಿ ಇಫಿಜೀನಿಯಾ’ ಮತ್ತು ‘ಮೀಡಿಯಾ’ ನಾಟಕಗಳಿವೆ. ಇವುಗಳನ್ನು ಅನುವಾದಿಸಿರುವ ಮಾಧವ ಚಿಪ್ಪಳಿ ತಮ್ಮ ಸುದೀರ್ಘ ಪ್ರಸ್ತಾವನೆಯಲ್ಲಿ ಯೂರಿಪಿಡೀಸ್‌ನ ಕಾಲ, ಅವನ ನಾಟಕಗಳ ವೈಶಿಷ್ಟ್ಯ, ಇಲ್ಲಿನ ಮೂರು ನಾಟಕಗಳ ವಸ್ತು, ಸ್ವರೂಪ ಮೊದಲಾದವುಗಳನ್ನು ಚರ್ಚಿಸಿದ್ದಾರೆ ಮತ್ತು ತಮ್ಮ ಅನುವಾದವಿಧಾನದ ಬಗೆಗೂ ನಾಲ್ಕು ಮಾತು ಹೇಳಿದ್ದಾರೆ. ಶಬ್ದಮಿತಿಯಲ್ಲಿ ಇಂಥ ಕೃತಿಯನ್ನು ವಿವರವಾಗಿ ಚರ್ಚಿಸುವುದಂತೂ ಸಾಧ್ಯವೇ ಇಲ್ಲ. ಹಾಗಾಗಿ ಇಲ್ಲಿನ ಅನುವಾದದ ಬಗ್ಗೆ ಒಂದೆರಡು ಮಾತು: ಮೋಸೆಸ್ ಹಡಾಸ್ ಮತ್ತು ಜಾನ್ ಮೆಕ್ಲೀನ್ ಅವರ ಇಂಗ್ಲಿಷ್ ಅನುವಾದಗಳನ್ನು ಇಟ್ಟುಕೊಂಡು ಈ ಕನ್ನಡಾನುವಾದಗಳನ್ನು ಸ್ಥೂಲವಾಗಿ ಪರಿಶೀಲಿಸಿರುವ ನಾನು ಯೂರಿಪಿಡೀಸನ ರಚನೆಯ ನೆಲೆಗಟ್ಟಷ್ಟೇ ಅಲ್ಲ, ಅವನ ಆಶಯವೂ, ಅದರ ಧ್ವನಿಯೂ ಲಾಲಿತ್ಯವೂ ಇಲ್ಲಿವೆಯೆಂದು ಧಾರಾಳವಾಗಿ ಹೇಳಬಲ್ಲೆ.

ವಿಮರ್ಶಕ ಜಾರ್ಜ್ ಸ್ಟೈನರ್‌ನ ಪ್ರಕಾರ ಕಾವ್ಯರೂಪದ ಅನುವಾದವು ಅನುವಾದಕನ ಭಾಷೆಯೊಳಗೇ ಒಂದು ಅಪೂರ್ವ ಪಾತ್ರವನ್ನು ನಿರ್ವಹಿಸುತ್ತ ಅವನನ್ನು ಒಳಮುಖವಾಗಿ ನೋಡುವಂತೆ ಮಾಡುತ್ತದೆ. ಒಂದು ಕವನವನ್ನು ಅನುವಾದಿಸುವ ಅಥವಾ ಅನುವಾದಿಸಲು ಪ್ರಯತ್ನಿಸುವ ಯಾರೇ ಆಗಲಿ, ಅವನು ತನ್ನ ಭಾಷೆಯ ಅನನ್ಯತೆಗೆ, ಅದರ ರಾಚನಿಕ ಲಕ್ಷಣಕ್ಕೆ ಹಾಗೂ ಅದರ ಮಿತಿಗೆ ಮುಖಾಮುಖಿಯಾಗುತ್ತಾನೆ. ಯಾಕೆಂದರೆ ಅವನಿಗೆ ಅವನ ಭಾಷೆಯೇ ಒಂದು ನಿರಂತರ ಆಡುಂಬೊಲವಾಗಿರುತ್ತದೆ. ಅನುವಾದ ನಮ್ಮದೇ ಸಂಪನ್ಮೂಲಗಳ ತಃಖ್ತೆ ಮಾಡುವಂತೆ ನಮ್ಮನ್ನು ಪ್ರೇರೇಪಿಸುವುದಲ್ಲದೆ ನಮಗೆ ಲಭ್ಯವಿರದ ಕಚ್ಚಾಪದಾರ್ಥಗಳಿವೆಯೆಂದೂ ಭಾವನೆ, ಅಭಿವ್ಯಕ್ತಿಗಳ ವಿಧಾನವಿದೆಯೆಂದೂ, ನಮ್ಮ ಭಾಷೆಗೆ ಸೇರಿರದ ಅಥವಾ ಅದು ಬಳಸಿಕೊಂಡಿರದ ಒಂದು ಸ್ರೋತವಿದೆಯೆಂದೂ ನಮಗೆ ತಿಳಿಸಿಕೊಡುತ್ತದೆ.

ಮಾಧವ ಚಿಪ್ಪಳಿ ತಮ್ಮ ಅನುವಾದದ ಬಗ್ಗೆ ಹೇಳುತ್ತಾ, ‘ಈ ಮೂರೂ ನಾಟಕಗಳಲ್ಲಿ ಮೇಳದ ಮಾತುಗಳನ್ನು ನಾನು ಮಾತ್ರಾಲಯದಲ್ಲಿ ಅನುವಾದಿಸಿದ್ದೇನೆ. ಲಯದ ನಿರ್ಬಂಧವೆನ್ನುವುದು ನನಗೆ ಎಲ್ಲಿಯೂ ಮಿತಿಯಾಗಿ ಕಾಣಿಸಲಿಲ್ಲ. ಬದಲಿಗೆ ಬಂಧದೊಳಗೆ ಕಾವ್ಯವನ್ನು ಕಟ್ಟುವಾಗ ಭಾಷೆಯೇ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸುತ್ತದೆ. ಗದ್ಯರೂಪದಲ್ಲಿ ಅನುವಾದಿಸತೊಡಗಿದರೆ ನಮಗೆ ಸಾಧ್ಯವಾಗದ ಸ್ವಾತಂತ್ರ್ಯವನ್ನು ಪದ್ಯ ಕೇಳದೆಯೇ ಕೊಟ್ಟುಬಿಡುತ್ತದೆ. ಮೇಳದ ಮಾತುಗಳಲ್ಲಿ ಪದ್ಯವು ತಂದುಕೊಡುವ ಮುಕ್ತತೆಯು ಗದ್ಯದಲ್ಲಿ ಮಾತುಗಳನ್ನು ಅನುವಾದಿಸುವಾಗಲೂ ನಮಗೆ ಅಂಟಿಕೊಂಡಿರುತ್ತದೆ’ ಎಂದಿದ್ದಾರೆ. ಛಂದೋಬದ್ಧ ಕವನಗಳನ್ನು ಅನುವಾದಿಸುವವರಿಗೆ, ಅವರು ಸ್ವತಃ ಕವಿಗಳಲ್ಲದಿದ್ದರೂ, ಕನ್ನಡ ಕಾವ್ಯದಲ್ಲಿ ಈಗಾಗಲೇ ಇರುವ ವಿವಿಧ ಛಂದೋರೂಪಗಳ ಆಳವಾದ ಪರಿಚಯ ಇದ್ದರೆ ಒಳ್ಳೆಯದಷ್ಟೆ. ‘ಮೀಡಿಯಾ’ ನಾಟಕದಲ್ಲಿ ‘ಮತ್ತೆ ಕೇಳಿತು ಉಕ್ಕಿ ಬರುತಿಹ ಎದೆಯ ನೋವಿನ ಸ್ಫೋಟವು/ ಕರುಳ ಕೊಯ್ಯುವ ಕೊರಗಿನಿಂದಲಿ ಮುಗಿಯೆ ಮದುವೆಯ ಆಟವು’ ಎಂಬ ಸಾಲುಗಳಿವೆ. ಇವು ಕುವೆಂಪು ಅವರ ‘ದೋಣಿ ಸಾಗಲಿ’ ಅಥವಾ ಅಡಿಗರ ‘ಮೋಹನ ಮುರಲಿ’ ಕವನಗಳ ಧಾಟಿಯಲ್ಲಿರುವುದು ಸ್ಪಷ್ಟ. ‘ಸಿಟ್ಟನೆಲ್ಲ ಬಿಟ್ಟು ಅವಳ ಎದೆಯು ಹಗುರವಾಗಲಿ/ ಒಳಗೆ ಉರಿಯುತ್ತಿರುವ ಬೆಂಕಿ ಆರಿ ತಣ್ಣಗಾಗಲಿ’ ಎಂಬ ಸಾಲುಗಳಾಗಲೀ ‘ಹೆದರದಿರು ಮೀಡಿಯಾ ನಮ್ಮ ತುಟಿ ಹೊಲಿದಿಹುದು/ ಗಂಡನೆಸಗಿದ ಪಾಪ ಸಣ್ಣದಲ್ಲ / ಇಂಥ ಸಂಕಟದಲ್ಲಿ ನಿನ್ನ ಎದೆ ಕುದಿದಿಹುದು/ ಹಾಗಾಗದಿರುವುದೇ ಸಹಜವಲ್ಲ’ ಎಂಬ ಸಾಲುಗಳಾಗಲೀ ಆಧುನಿಕ ಕನ್ನಡ ಕಾವ್ಯದ ಛಂದೋರೂಪಗಳಲ್ಲಿವೆ; ಪ್ರಾಸಬದ್ಧವಾಗಿಯೂ ಇವೆ. ಕೆ.ವಿ. ಅಕ್ಷರ ಅವರು ಸರಿಯಾಗಿಯೇ ಗುರುತಿಸಿರುವಂತೆ ‘ಪ್ರಸ್ತುತ ಭಾಷಾಂತರವು ಅಲ್ಲಲ್ಲಿ ಛಂದೋಬದ್ಧ ಲಯಗಳನ್ನು ಬಳಸುವ ಪ್ರಯೋಗ ಮಾಡಿದೆ; ಆಡುಮಾತಿಗೆ ಹತ್ತಿರವಿರುವ ಹೊಸಗನ್ನಡದೊಳಗೂ ಕಾವ್ಯದ ಧ್ವನಿಯನ್ನು ಕಟ್ಟಲು ಪ್ರಯತ್ನಿಸಿದೆ.’

ಕೃ: ಯೂರಿಪಿಡೀಸ್ ಮೂರು ನಾಟಕಗಳು

ಕನ್ನಡಕ್ಕೆ: ಮಾಧವ ಚಿಪ್ಪಳಿ

ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು

ಪು: 184

ದ:  ₹235

ಸಂ.:  98442287279

ಯೂರಿಪಿಡೀಸ್ ಮೂರು ನಾಟಕಗಳು ‌

ಕನ್ನಡಕ್ಕೆ: ಮಾಧವ ಚಿಪ್ಪಳಿ

ಪ್ರ: ಅಕ್ಷರ ಪ್ರಕಾಶನ ಹೆಗ್ಗೋಡು

ಸಂ: 94802 80401

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT