ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮರ್ಶೆ | ಸಂವೇದನಾಶೀಲ ಸಂಘರ್ಷದ ಮಾದರಿ

Published : 10 ಡಿಸೆಂಬರ್ 2023, 0:27 IST
Last Updated : 10 ಡಿಸೆಂಬರ್ 2023, 0:27 IST
ಫಾಲೋ ಮಾಡಿ
Comments

ಸಮಕಾಲೀನ ಕರ್ನಾಟಕದ ಸಾಂಸ್ಕೃತಿಕ ಹಾಗೂ ಬೌದ್ಧಿಕ ವಿನ್ಯಾಸಗಳನ್ನು ಕಟ್ಟುತ್ತಿರುವವರಲ್ಲಿ ರಹಮತ್ ಅವರ ಪಾತ್ರ ದೊಡ್ಡದು. ಕಟ್ಟುವುದು ಎಂದಾಗ ಈಗಾಗಲೇ ಇರುವುದನ್ನು ಕೆಡವುವುದು ಎಂದೂ ಅರ್ಥ, ವಿಸ್ತರಿಸುವುದು, ಮುರಿದು ಕಟ್ಟುವುದು ಎಂದೂ ಅರ್ಥ. ರಹಮತ್ ಕನ್ನಡದ ಮಟ್ಟಿಗೆ ಈ ಎಲ್ಲವನ್ನೂ ಮಾಡುತ್ತಾ ಬಂದಿದ್ದಾರೆ. ಭಾರತದ ಬೌದ್ಧಿಕ ಪರಂಪರೆಯನ್ನು, ಅನುಭಾವಿಕ ಪರಂಪರೆಯನ್ನು ಅಲಕ್ಷಿತ ನೆಲೆಗಳ ಮೂಲಕ ಕಟ್ಟುವ ಮಹತ್ವಾಕಾಂಕ್ಷೆಯ ಮಹಾಪ್ರಯಾಣವನ್ನು ಡಿ.ಆರ್.ಎನ್. ಅಪಾರ ತಯಾರಿಯಲ್ಲಿ ಶುರು ಮಾಡಿದರು. ಇದಕ್ಕೆ ಡಿ.ಆರ್. ಅವರ ಸ್ಫೋಟಕ ಪ್ರತಿಭೆ ಮತ್ತು ಅಗಾಧ ಬೌದ್ಧಿಕ ಒಳನೋಟಗಳು ಕಾರಣ. ರಹಮತ್ ಅವರು ಈ ವಿನ್ಯಾಸವನ್ನು ಸಮರ್ಥನೀಯವಾಗಿ ಮುಂದುವರಿಸುತ್ತಾ, ಬಹುನೆಲೆಗಳಲ್ಲಿ ವಿಸ್ತರಿಸುತ್ತಾ ಬರುತ್ತಿದ್ದಾರೆ.

ತರೀಕೆರೆಯಿಂದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ತನಕದ ಇವರ ಪ್ರಯಾಣ ‘ಕುಲುಮೆ’ಯಲ್ಲಿ ಸೃಜನಶೀಲ ಕೃತಿಯಂತೆ ನಿರೂಪಿತವಾಗಿದೆ.

ರಹಮತ್ ತರೀಕೆರೆಯವರ ‘ಬಾಳ ಚಿತ್ರಗಳು’ ಅವರ ಬಾಳಿನದ್ದಷ್ಟೇ ಅಲ್ಲದೆ ಅವರ ಬಾಳನ್ನು ರೂಪಿಸಿದವರ, ಪ್ರಭಾವಿಸಿದ ವ್ಯಕ್ತಿಗಳ, ಸಂಸ್ಥೆಗಳ, ಚಳವಳಿಗಳ, ತಾತ್ವಿಕತೆಗಳ ಚಿತ್ರಗಳೂ ಆಗಿರುವುದೇ ಈ ಕೃತಿಯ ವಿಶೇಷ. ಈ ಕೃತಿಯಲ್ಲಿ ರಹಮತ್ ಅವರು ತಾವು ಕೇಂದ್ರವಾಗಬಹುದಾದ ಸಹಜತೆಯನ್ನು ಉದ್ದೇಶಪೂರ್ವಕವಾಗಿಯೇ ವಿಸರ್ಜಿಸಿದಂತೆ ಕಾಣುತ್ತದೆ. ವ್ಯಕ್ತಿಯೊಬ್ಬನ/ಳ ಬದುಕು ಸ್ವತಂತ್ರವಾಗಿರಲು, ಸ್ವಾಯತ್ತವಾಗಿರಲು ಸಾಧ್ಯವಿಲ್ಲ, ಅದನ್ನು ತನ್ನದು ಮಾತ್ರ ಎಂದು ನೋಡುವುದರಲ್ಲಿಯೇ ಏನೋ ತೊಡಕಿದೆ ಎನ್ನುವುದು ಇವರ ನಂಬಿಕೆಯಾಗಿರುವಂತೆ ತೋರುತ್ತದೆ.

ಈ ಅಂಶವೇ ಒಟ್ಟಾರೆಯಾಗಿ ರಹಮತ್ ಅವರ ಬದುಕು ಮತ್ತು ವ್ಯಕ್ತಿತ್ವವನ್ನು ಧ್ವನಿಸುತ್ತದೆ. ಸಮಕಾಲೀನ ಭಾರತದ ಹುಡುಕಾಟ, ಸವಾಲುಗಳು, ದುರಂತಗಳು ಈ ಎಲ್ಲದರ ಹಿಂದೆ ಭಾರತದ ಪ್ರಜ್ಞಾವಂತ, ಸಂವೇದನಾಶೀಲ ಮನಸ್ಸಿನ ಸಂಘರ್ಷ ಇದ್ದೇ ಇದೆ ಎನ್ನುವುದಾದರೆ ಆ ಸಂಘರ್ಷದ ಒಂದು ಮಾದರಿ ‘ಕುಲುಮೆ’ಯಲ್ಲಿದೆ. ಶಿಕ್ಷಣವೆನ್ನುವ ಮಾಯಾದಂಡವು ಭಾರತದ ಅನೇಕ ಸವಾಲುಗಳಿಗೆ ಉತ್ತರವಾಗಬಲ್ಲದು ಎನ್ನುವ ಘಟ್ಟದಲ್ಲಿ ಶಿಕ್ಷಣವನ್ನು ಪಡೆದ ರಹಮತ್ ಅದೇ ಶಿಕ್ಷಣದ ಬೆಳಕಿಂಡಿಯಿಂದ ಭಾರತದ ವಾಸ್ತವವನ್ನು ನೋಡುತ್ತಾ ಹೋಗುತ್ತಾರೆ. ವಾಸ್ತವದ ಗ್ರಹಿಕೆಯಲ್ಲಿ ರಹಮತರು ತಳೆಯುವ ನಿಲುವು ಈ ಕೃತಿಯ ಮಹತ್ವವನ್ನು ಹೆಚ್ಚಿಸುತ್ತದೆ. ಯಾವುದೇ ಸ್ಥಾಪಿತ ತಾತ್ವಿಕ ನಿಲುವುಗಳಿಂದಾಗಲೀ, ಕಟು ವಾಸ್ತವವನ್ನು ಕುರಿತ ಕಹಿಯಾದ, ಸಿನಿಕ ದೃಷ್ಟಿಯಿಂದಾಗಲೀ ಈ ನಿರೂಪಣೆ ರೂಪುಗೊಂಡಿಲ್ಲ. ಬದಲಿಗೆ ಇದನ್ನು ಎದುರಿಸುವ ಅದಮ್ಯ ಜೀವಶಕ್ತಿಯೊಂದು ಬದುಕಿನ ಎಂಥದ್ದೇ ಕಡುಕಷ್ಟಗಳನ್ನು ನಿಭಾಯಿಸುವ ಛಾತಿಯನ್ನು ಕೊಡುತ್ತದೆ ಎನ್ನುವುದನ್ನು ಹೇಳುವ ಕ್ರಮದಲ್ಲಿಯೇ ಈ ಕೃತಿ ಪ್ರತಿರೋಧದ ಮಾದರಿಯನ್ನು ಕಟ್ಟಿಬಿಡುತ್ತದೆ. ಊರನ್ನೇ ಕೊಳ್ಳುವ ಫ್ಯೂಡಲ್ ಶಕ್ತಿಗಳೆದುರು, ಸಂತೆಯಲ್ಲಿ ತಂದ ಕಾರ ಮಂಡಕ್ಕಿಯನ್ನು ತಿನ್ನುವ ಸಂತೋಷ ಲೋಕದ ಅತಿದೊಡ್ಡ ಸುಖ ಎನ್ನುವಂತೆ ಬದುಕಬಹುದಾದ ಸಾಧ್ಯತೆಯನ್ನು, ಒಂದು ಎಳನೀರು, ಶಾಲೆಯಲ್ಲಿ ಸಿಕ್ಕ ಒಂದು ಮೆಚ್ಚುಗೆ, ಹಾಕಿಕೊಂಡ ಒಂದು ಹೊಸ ಬಟ್ಟೆ... ಈ ಎಲ್ಲವೂ ಬಡತನವನ್ನು ಹುಸಿಭಾವುಕತೆಯಲ್ಲಿ, ಭ್ರಮೆಯಲ್ಲಿ ನೀಗಿಕೊಳ್ಳುವ ಸಂಗತಿಗಳಲ್ಲವೇ ಅಲ್ಲ. ಆ ಬದುಕಿನಲ್ಲಿಯೂ ಇರುವ ಸಮೃದ್ಧತೆ, ಜೀವಂತಿಕೆ, ಬದುಕಿನ ಗುಣಮಟ್ಟ, ಸಂಬಂಧಗಳ ಚೆಲುವು ಇವುಗಳನ್ನು ರಹಮತ್ ಮನದಟ್ಟಾಗುವಂತೆ ಚಿತ್ರಿಸುತ್ತಾರೆ. ಉದ್ದಕ್ಕೂ ಬಳಸಿಕೊಂಡಿರುವ ಲೋಮೈಮೆಸಿಸ್ ಇದಕ್ಕೆ ಪೂರಕವಾಗಿ ಕೃತಿಯನ್ನು ಪರಿಣಾಮಕಾರಿಯಾಗಿಸುತ್ತಾ ಹೋಗಿದೆ. ಇದು ಅಳುನುಂಗಿ ನಗುವ ನಗುವಲ್ಲ, ಅಳಲೇಕೆ, ನಕ್ಕು ಆನಂದಿಸಲು ಕಾರಣಗಳಿರುವಾಗ ಎನ್ನುವ ಜೀವಪ್ರೀತಿಯಿಂದ ಹುಟ್ಟಿದ್ದು. ಹಲವು ಕಡೆಗಳಲ್ಲಿ ವ್ಯಂಗ್ಯ ಇದರ ಸೊಗಸನ್ನು ಹಾಳುಮಾಡುತ್ತದೆ ಎನ್ನಿಸುವುದೂ ಉಂಟು.

ಕೃತಿಯಲ್ಲಿ ರಹಮತ್ ಅವರಿಗೆ ಆತ್ಮರತಿಯನ್ನು ನೀಗಿಕೊಳ್ಳಲು ಸಾಧ್ಯವಾಗಿರುವುದೂ ಈ ಕೃತಿಗೆ ಆತ್ಮಕತೆಯ ಚೌಕಟ್ಟನ್ನು ಮೀರಿ ಬೆಳೆಯಲು ಸಾಧ್ಯವಾಗಿದೆ. 1970-80ರ ದಶಕಗಳಲ್ಲಿ ರಹಮತ್ ಅವರ ಬೌದ್ಧಿಕ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಾದ ಸಂದರ್ಭಗಳನ್ನು ರಹಮತ್‌ರು ತಾವು ಅದರ ಫಲ, ಒಂದು ಭಾಗ ಎನ್ನುವ ವಿಕೇಂದ್ರೀಕೃತ, ಸಾರ್ವಜನಿಕ ನೆಲೆಯಲ್ಲಿ ಪ್ರತಿಪಾದಿಸುತ್ತಾರೆ. ಸ್ವಕೇಂದ್ರೀಕರಣದ ಮಿತಿಯಿಂದ ಆತ್ಮಚರಿತ್ರೆಯನ್ನು ಪಾರು ಮಾಡಿದ್ದಾರೆ. ಇದೊಂದು ಮುಖ್ಯವಾದ ಸಂಗತಿ ಎಂದೇ ಅನ್ನಿಸುತ್ತದೆ. ಗಂಡಸರ ಆತ್ಮಚರಿತ್ರೆಗಳ ವಿನ್ಯಾಸವನ್ನೇ ಪಲ್ಲಟಗೊಳಿಸುವ ತಿರುವಿನ ಕೆಲಸವನ್ನೂ ಈ ಮೂಲಕ ಕುಲುಮೆ ಮಾಡುತ್ತದೆ. ವ್ಯಕ್ತಿ ಚರಿತ್ರೆಯು ಸಮುದಾಯದ ಚರಿತ್ರೆಯೂ, ಕಾಲದ ಕಥನವೂ ಆಗಬಹುದಾದ ಸಾಧ್ಯತೆಯನ್ನು ತೆರೆಯುತ್ತದೆ ‘ಕುಲುಮೆ’. ರೂಪಕದ ಈ ಶೀರ್ಷಿಕೆ ವಾಸ್ತವದ ಸಂಕೇತವೂ ಆಗುವ ಅಪರೂಪದ್ದು ಎನ್ನುವುದು ರಹಮತ್‌ರ ಕವಿಪ್ರತಿಭೆಯ ದ್ಯೋತಕವೇ ಇದ್ದೀತು.

ಕೃ: ಕುಲುಮೆ ಲೇ: ರಹಮತ್ ತರೀಕೆರೆ ಪ್ರ: ಅಹರ್ನಿಶಿ ಪ್ರಕಾಶನ ಶಿವಮೊಗ್ಗ ಪು: 312 ದ: ₹ 330 ಸಂ: 9449174662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT