–ಡಿ. ಸುಮನ್ ಕಿತ್ತೂರು
ಕವಿ, ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅವರ ಪುಸ್ತಕ ‘ಟ್ರಂಕು–ತಟ್ಟೆ’ ಹಾಸ್ಟೆಲ್ ಅನುಭವದ ಕಥನ, ಕನ್ನಡ ಸಾಹಿತ್ಯಕ್ಕೆ ದೊರೆತಿರುವ ವಿಶಿಷ್ಟ ಅನುಭವದ ಕೃತಿ.
ಅದೂ, ಸರ್ಕಾರದ ಉಚಿತ ಸೌಲಭ್ಯಗಳ ಕುರಿತು ಏರುದನಿಯಲ್ಲಿ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಹೊರಬಂದಿದೆ. ಬಿಟ್ಟಿ ಸೌಲಭ್ಯಗಳು ಅದೆಷ್ಟು ಕಳಪೆ, ಘನಘೋರವಾಗಿರುತ್ತವೆ ಎನ್ನುವುದು ಕೃತಿಯ ಮೂಲಕ ನಮಗೆ ತಾಕುತ್ತದೆ. ದುಡಿಯುವ ತಳವರ್ಗದ ಕುಟುಂಬದ ಮಗುವೊಂದು ಅಕ್ಷರದ ಕನಸಿಗಾಗಿ ಈ ತರತಮದ ಸಮಾಜದಲ್ಲಿ ನಡೆಸುವ ಹೋರಾಟದ ಮಜಲುಗಳನ್ನು ಕಣ್ಣಿಗೆ ರಾಚುವಂತೆ ಕಟ್ಟಿಕೊಟ್ಟಿದ್ದಾರೆ ಲೇಖಕ ಗುರುಪ್ರಸಾದ್.
ಈ ಕೃತಿ ವಿಶಿಷ್ಟ ಯಾಕೆಂದರೆ, ಗುರುಪ್ರಸಾದ್ ಅವರ ಬಾಲ್ಯದ ಕಣ್ನೋಟದಿಂದ ದಕ್ಕುವ ‘ಟ್ರಂಕು–ತಟ್ಟೆ’ಯು ನಂತರ ಯೌವನಾವಸ್ಥೆಗೆ ತಲುಪುವ ವೇಳೆಗೆ ಸಮುದಾಯದ ಅಂತರಾಳದ ಪ್ರತಿಬಿಂಬವಾಗುತ್ತಾ ಸಾಗುತ್ತದೆ. ಅಂದರೆ, ಲೇಖಕರ ಬಾಲ್ಯ, ಯೌವನಗಳೆರಡೂ ‘ಹಾಸ್ಟೆಲ್’ ಎಂಬ ಉಚಿತ ತಾಣದ ಜಗತ್ತಿನೊಡನೆ ಮಿಳಿತಗೊಂಡ ನಿರೂಪಣೆ ಹೊಸ ರೀತಿಯದು.
‘ಅಪ್ಪ ಒಂದು ದಿನ ನನ್ನನ್ನು ಮತ್ತು ನನ್ನ ತಮ್ಮ ಜೇಪಿಯನ್ನು ಎಡಕ್ಕೆ–ಬಲಕ್ಕೆ ಹಾಕಿಕೊಂಡು, ತಂದಿದ್ದ ಬಟ್ಟೆ ಬರೆಯ ಲಗೇಜನ್ನು ಹೊತ್ತುಕೊಂಡು ತಿಪಟೂರು ಬಸ್‌ಸ್ಟ್ಯಾಂಡಿನಲ್ಲಿ ಇಳಿದು, ರೈಲ್ವೇ ಸ್ವೇಷನ್ ರೋಡಿನಲ್ಲಿದ್ದ ಹಾಸ್ಟೆಲ್ ಕಡೆಗೆ ಮುಖ ಮಾಡಿತು. ರೈಲ್ವೇ ಸ್ಟೇಷನ್ ರೋಡಿನ ಎಡಗಡೆಗಿದ್ದ ತಿಪಟೂರಿನ ಸರ್ಕಾರಿ ಶಾಲೆಗೆ ಊರ ಶಾಲೆಯಿಂದ ಪಡೆದು ತಂದಿದ್ದ ಟೀಸಿಯನ್ನು ಕೊಟ್ಟು ನನ್ನನ್ನು ಏಳನೇ ತರಗತಿಗೆ, ತಮ್ಮನನ್ನು ಐದನೇ ತರಗತಿಗೆ ಅಡ್ಮಿಷನ್ ಮಾಡಿಸಿತು.’ (ಪುಟ–1) ಹೀಗೆ ಆರಂಭವಾಗುವ ಈ ಕಥನ ಮೊದಲಿಗೆ ಕುಟುಂಬದ ಅಂತಃಕರಣ, ತಂದೆ ಮತ್ತು ಮಕ್ಕಳ ಆರ್ದ್ರ ಅನುಭವಗಳನ್ನು ಕಟ್ಟಿಕೊಡುತ್ತದೆ. ಆನಂತರದ್ದು, ‘ನಾವಿದ್ದ ಹಾಸ್ಟೆಲ್ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಹಂದಿಗೂಡಿಗೂ ಕಡೆಯಾಗಿತ್ತು. ಶೌಚಾಲಯ–ಸ್ನಾನಗೃಹವಿರಲಿ, ಕುಡಿಯುವ ನೀರು ಸಹ ಇರಲಿಲ್ಲ...’ (ಪುಟ–7)
ಸಮ ಸಮಾಜದಲ್ಲಿ ಮನುಷ್ಯನ ಇಷ್ಟು ಕನಿಷ್ಠ ಅವಶ್ಯಕತೆಗೂ ಸ್ಪಂದಿಸದ ಕುರುಡುತನ, ಹಸಿವು ನೀಗಿಸಿಕೊಳ್ಳಲು ವಿದ್ಯಾರ್ಥಿಗಳು ನಡೆಸುವ ಹರಸಾಹಸ, ಎಂಜಲು ಉಪಾಯ, ಬಾಲ್ಯ ಕಾಲದ ಹುಡುಗಾಟಿಕೆಗಳು, ಸಿನಿಮಾ, ಚಿತ್ರಾನ್ನದಲ್ಲಿ ಕಡ್ಲೆಬೀಜಕ್ಕಾಗಿ ನಡೆಸುವ ಹೋರಾಟ, ಶಾಲೆಯ ಕಿರಿಕಿರಿ, ಯಾರದೋ ಮದುವೆಗೆ ಹೋಗಿ ಹಸಿವು ನೀಗಿಕೊಳ್ಳುವ ಸಂಕಟ, ಮೊದಲ ಬಾರಿ ಕದ್ದ ಸೋಪು... ಹೀಗೆ ಟ್ರಂಕಿನೊಳಗೆ ತುಂಬಿದ್ದ ಹಲವಾರು ಘಟನೆಗಳು ಮತ್ತು ನೆನಪುಗಳ ತೇರು ಈ ಕಥನದ ಆರಂಭದಲ್ಲಿ ಹಾದು ಹೋಗುತ್ತದೆ.
ದಲಿತ ಮಗುವೊಂದು, ಅಕ್ಷರದ ಕನಸು ಹೊತ್ತು ಸರ್ಕಾರಿ ಸವಲತ್ತುಗಳೆಂಬ ಕ್ರೌರ್ಯದ ಅಂಗಳದಿಂದ ಜಾತಿ ಕಾರಣದ ಬೇಲಿ ದಾಟಿ ಸಮಾಜದ ಪಡಸಾಲೆಗೆ ಬಂದು ನಿಂತುಕೊಳ್ಳುವ ಅನುಭವ ಕಥನವಿದು. ಇದನ್ನು ಗುರುಪ್ರಸಾದ್ ಅವರು ಎಲ್ಲಿಯೂ ಸಂಯಮ ಕಳೆದುಕೊಳ್ಳದೆ, ತಟಸ್ಥರಾಗಿ, ಕಂಡದ್ದನ್ನು ಕಂಡಂತೆಯೇ ನಿರೂಪಿಸಿರುವ ರೀತಿ ನಮ್ಮ ಅಂತಃಕರಣವನ್ನು ಕದಡುತ್ತದೆ.
‘ಟ್ರಂಕು–ತಟ್ಟೆ’ ಕಥನದಲ್ಲಿ ಎದ್ದು ಕಾಣುವ ವ್ಯಕ್ತಿತ್ವವೆಂದರೆ, ಲೆಖಕರ ತಂದೆಯವರಾದ ಚನ್ನಬಸವಯ್ಯನವರು.
ಉಳ್ಳವರೇ ಗಂಡು–ಹೆಣ್ಣಿನ ತರತಮದಲ್ಲಿ ಮುಳುಗಿರುವಾಗ, ದುಡಿತವನ್ನೇ ನಂಬಿರುವ ಚನ್ನಬಸವಯ್ಯನವರು ಐವತ್ತು ತೆಂಗಿನಮರ, ಮೂರು ಮಾವಿನಹಣ್ಣಿನ ಮರಗಳ ನೆರವಿನಿಂದ ಮೂವರು ಗಂಡುಮಕ್ಕಳ ಜೊತೆಗೆ ತಮ್ಮಿಬ್ಬರು ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಅವರ ತ್ಯಾಗ ಅನನ್ಯ ಮತ್ತು ಇಡೀ ಕಥನದಲ್ಲಿ ಕಾರುಣ್ಯದ ಬೆಳದಿಂಗಳಂತೆ ಅವರು ಕಂಗೊಳಿಸುತ್ತಾರೆ.
ತುಮಕೂರು ಸೀಮೆಯ ಆಡುಭಾಷೆಯ ವಾಕ್ಯಗಳ ಸೌಂದರ್ಯ ಈ ಕಥನಕ್ಕಿದೆ. ವಿಷ್ಣುಕುಮಾರ್ ಅವರ ಮುಖಪುಟ ವಿನ್ಯಾಸ ಲೇಖಕರ ಮಕ್ಕಳ ಒಳಪುಟಗಳಲ್ಲಿನ ರೇಖಾಚಿತ್ರಗಳು ಕೂಡ ಇಲ್ಲಿ ಮಾತನಾಡುತ್ತವೆ.
‘ನನ್ನನ್ನು ದ್ವೇಶಿಸುವ
ನನ್ನ ಪ್ರೀತಿಯ ಗೆಳತಿಗೆ
ನಮ್ಮೂರ ಗುಡಿ ಮುಂದೆ
ಬಂಧುಗಳ ಪಂತಿಯಲ್ಲಿ ಬಾಡೂಟ ಇಕ್ಕುವಾಸೆ...’
ಎಂಬ ಸಾಲುಗಳೊಂದಿಗೆ ಪುಸ್ತಕದ ಬರಹ ಮುಕ್ತಾಯಗೊಳ್ಳುತ್ತದೆ.
ದ್ವೇಷಿಸುವ ಗೆಳತಿ ಮಾತ್ರವಲ್ಲ, ಧರ್ಮ, ಜಾತಿ ಎಂದೆಲ್ಲ ಕಾರಿಕೊಳ್ಳುವ, ದ್ವೇಷವನ್ನೇ ಉಸಿರಾಡುವ, ಸರ್ಕಾರಿ ಸೌಲಭ್ಯಗಳನ್ನು ಅಣಕಿಸುವವರಿಗೂ ಈ ಕೃತಿ ಪ್ರೀತಿಯನ್ನೇ ಉಣಿಸುತ್ತದೆ.
ಕೃತಿ:ಟ್ರಂಕು ತಟ್ಟೆ–ಹಾಸ್ಟೆಲ್ ಅನುಭವ ಕಥನ ಲೇ: ಗುರುಪ್ರಸಾದ್ ಕಂಟಲಗೆರೆ ಪ್ರ: ರಂಗಧಾಮಯ್ಯ ಜೆ.ಸಿ. ನಂ.: 9964076203 ದ: ₹180 ಪು: 136
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.