ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಮಾತು | ಗೋವಾ ಬಡಜನರ ಬದುಕಿಗೆ ಕನ್ನಡಿ

Published 13 ಆಗಸ್ಟ್ 2023, 0:31 IST
Last Updated 13 ಆಗಸ್ಟ್ 2023, 0:31 IST
ಅಕ್ಷರ ಗಾತ್ರ

ಈ ಕೃತಿಯು ಕೊಂಕಣಿ ಲೇಖಕ ಪ್ರಕಾಶ್ ಎಸ್. ಪರಿಯೆಂಕರ್ ಅವರ ಹದಿನೈದು ಸಣ್ಣಕಥೆಗಳ ಅನುವಾದವಾಗಿದೆ. ಇಲ್ಲಿನ ಬಹುತೇಕ ಕಥೆಗಳಲ್ಲಿ ಗೋವಾ ರಾಜ್ಯದ ಗ್ರಾಮೀಣ ಪರಿಸರದಲ್ಲಿನ ಬಡಜನರ ಬದುಕಿನ ಚಿತ್ರಣವಿದೆ. ಅವರ ಕೃಷಿ ಮೂಲ ಬದುಕು, ಹಬ್ಬದ ಆಚರಣೆಗಳು, ಕೆಲವು ವಿಶಿಷ್ಟ ತಳಸಮುದಾಯಗಳು ಜೀವನೋಪಾಯಕ್ಕೆ ಅನುಸರಿಸುವ ವೃತ್ತಿವಿಶೇಷ ಹಾಗೂ ಆಹಾರಕ್ರಮದ ಕುರಿತು ಅಪರೂಪದ ವಿವರಗಳು ಈ ಕಥೆಗಳಲ್ಲಿ ಓದಲು ಸಿಗುತ್ತವೆ.

‘ಬೋನು’ ಕಥೆಯಲ್ಲಿ ನೀರುನಾಯಿಯನ್ನು ಹಿಡಿದು ಅದರ ಚರ್ಮದ ಕೊಬ್ಬಿನ ಎಣ್ಣೆಯಿಂದ ನಾಟಿ ಔಷಧ ತಯಾರಿಸುವ ಅಲೆಮಾರಿ ಜನಾಂಗದ ಬೋನನ್ನು ಕಸಿದುಕೊಳ್ಳುವ ಮೂಲಕ ಊರಿನ ನಾಗರಿಕರು ಅವರ ದಂಧೆಗೆ ಪ್ರಹಾರ ನೀಡುವ ವಿವರಗಳಿವೆ. ‘ಚಂದ್ರಿ’ ಕಥೆಯಲ್ಲಿ ಮಂಗಗಳನ್ನು ಬೇಟೆಯಾಡುವ ಅಮಾಯಕ ಮಂಗಮಾರೊ ಎನ್ನುವವ ಊರಿನವರ ಕೈಸೆರೆಯಾಗಿ ದೈಹಿಕ ಹಿಂಸೆಗೆ ಒಳಗಾಗುವ ಚಿತ್ರಣವಿದೆ. ಸಂಕಲನದ ಶೀರ್ಷಿಕೆ ಕಥೆ ‘ವರ್ಸಲ್’ ಕಥೆಯಲ್ಲಿ ದಲಿತ ಬಾಲಕನೊಬ್ಬ ದಸರಾ ಹಬ್ಬದಂದು ಧೋಲಕ್ ಬಾರಿಸುವ ಪಾಳಿ ತನ್ನ ಪಾಲಿಗೆ ಬಂದರೂ, ಆಮೇಲೆ ಮನೆಮನೆಗೆ ಹೋಗಿ ಅಕ್ಕಿ, ಕಾಯಿಗಳನ್ನು ಬೇಡಿ ಪಡೆಯುವ ಸಂಪ್ರದಾಯವನ್ನು ಧಿಕ್ಕರಿಸಿ ತಾನು ಕಲಿತು ಸ್ವತಂತ್ರವಾಗಿ ಜೀವಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನು ತೋರಿಸುವ ಮಹತ್ವದ ಸಂದೇಶವನ್ನು ಕಾಣಿಸಲಾಗಿದೆ.

ಸ್ವತಃ ಪರಿಸರವಾದಿಯಾಗಿ ಗ್ರಾಮೀಣ ಜನರ ಬದುಕಿನ ಏಳಿಗೆಗಾಗಿ ಯುವಜನರನ್ನು ಸಂಘಟಿಸಿ ಅವರಲ್ಲಿ ಪ್ರೋತ್ಸಾಹ ತುಂಬುವ ಕಾರ್ಯಕರ್ತರಾಗಿ ದುಡಿಯುತ್ತಿರುವ ಲೇಖಕ ಡಾ.ಪ್ರಕಾಶ್ ಎಸ್. ಪರಿಯೆಂಕರ್ ಅವರು ಗೋವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.
ಈ ಸಂಕಲನದ ಕಥೆಗಳು ಓದುಗರಿಗೆ ಹೊಸ ಅನುಭವ ನೀಡುವ ವೈವಿಧ್ಯಪೂರ್ಣ ಅಪರೂಪದ ವಸ್ತುಗಳನ್ನು ಹೊಂದಿವೆ. ಪರಿಸರ ಮತ್ತು ಸಾಮಾಜಿಕ ಕಾಳಜಿಯ ಆಶಯವನ್ನು ಹೊಂದಿರುವ ಈ ಕಥೆಗಳನ್ನು ಈ ಹಿಂದೆ ಹಲವು ಕೊಂಕಣಿ ಕಥೆ ಮತ್ತು ಕಾದಂಬರಿಗಳನ್ನು ಅನುವಾದಿಸಿರುವ ಡಾ. ಗೀತಾ ಶೆಣೈ ಅವರು ಸಮರ್ಥ ರೀತಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿ: ವರ್ಸಲ್ ಮತ್ತು ಇತರ ಕಥೆಗಳು

ಲೇ: ಕೊಂಕಣಿ ಮೂಲ: ಡಾ. ಪ್ರಕಾಶ್ ಎಸ್. ಪರಿಯೆಂಕರ್

ಕನ್ನಡಾನುವಾದ : ಡಾ. ಗೀತಾ ಶೆಣೈ

ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಪು: 150

ದ: ₹120

ಸಂ: 080–23183312

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT