ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ಗ್ರಾಮಮುಖಿ ಕೆಲಸಗಳಿಗೆ ಕೈದೀವಿಗೆ

Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ

ಅಖಂಡ ಭಾರತದ ಸಂಸ್ಕೃತಿಯ ಜೀವಾಳ– ತಾಯಿ ಬೇರು ಇರುವುದು ಪ್ರತಿ ಹಳ್ಳಿಯಲ್ಲಿ. ಹಳ್ಳಿಗಳು ಸಂಸ್ಕೃತಿಯ ಬೇರುಗಳನ್ನು ಭದ್ರವಾಗಿ ಕಾಪಿಟ್ಟುಕೊಂಡಿವೆ. ಆದರೆ, ಎಷ್ಟೋ ಹಳ್ಳಿಗಳಲ್ಲಿ ಈ ಬೇರು ಒಣಗಿ ಹೋಗಿರುವುದು ಮತ್ತು ಈಗಲೂ ಒಣಗಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ, ಇಂತಹ ದುರಿತ ಕಾಲದಲ್ಲಿ ನಾಗತಿಹಳ್ಳಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ಕ್ಕೆ ನಾಡಿನ ಪ್ರಸಿದ್ದ ಕಲಾವಿದರೆಲ್ಲ ಬಂದು ಊರಿನವರಿಗೆ ಮನೋಲ್ಲಾಸ ನೀಡುವ, ಬೌದ್ಧಿಕವಾಗಿ ಚಿಂತನೆಗೆ ಹಚ್ಚುವ ಜತೆಗೆ ಊರ ಜನರ ಮನಸ್ಸು ಕೂಡ ಸಂಸ್ಕೃತಿಮಯವಾಗುವಂತೆ ಮಾಡುತ್ತಿದ್ದಾರೆ.  

ಇಂತಹ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಪಯಣ ಎರಡು ದಶಕ ಪೂರೈಸಿದೆ. ಈ ಹಬ್ಬದ ಇಪ್ಪತ್ತನೆ ವರ್ಷದ ನೆನಪಿಗಾಗಿ ಸಂಪಾದಿಸಿ ಹೊರತಂದಿರುವ ಕೃತಿಯೇ ‘ಮಣ್ಣಋಣ’. ನಮ್ಮ ಹಳ್ಳಿಗಾಡಿನ ಬದುಕನ್ನು ಚೈತನ್ಯಗೊಳಿಸಲು ಬೇಕಾದ ಚಿಕಿತ್ಸಾತ್ಮಕ ಚಿಂತನೆಗಳ ಬರೆಹಗಳು ಇದರಲ್ಲಿವೆ.

ಕಳೆದ ಎರಡು ದಶಕಗಳಲ್ಲಿ ನಾಗತಿಹಳ್ಳಿಯಲ್ಲಿ ನಡೆದ ಪ್ರಯೋಗಗಳ ಪರಾಮರ್ಶೆಯ ಸಾರವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಇದರಲ್ಲಿ ನಾಲ್ಕು ಭಾಗಗಳಿದ್ದು, 1. ನಮ್ಮ ಗ್ರಾಮ ಬದುಕಿಗೆ ಚಿಂತನೆ, 2. ನಮ್ಮ ಗ್ರಾಮ ಬದುಕಿಗೆ ಚಿಕಿತ್ಸೆ, 3. ನಮ್ಮ ಗ್ರಾಮ ಬದುಕಿಗೆ ಚೈತನ್ಯ ಹಾಗೂ 4ನೇ ಭಾಗದಲ್ಲಿ ಸಂಸ್ಕೃತಿ ಹಬ್ಬದ ರೂವಾರಿ ನಾಗತಿಹಳ್ಳಿ ಚಂದ್ರಶೇಖರ ಅವರೊಡನೆ ಕೃತಿಯ ಸಂಪಾದಕರು ನಡೆಸಿರುವ ಸಂದರ್ಶನದ ಪೂರ್ಣಪಾಠವಿದೆ. ಪ್ರತಿ ಹಳ್ಳಿಯಲ್ಲೂ ಪ್ರಗತಿಪರ ಹಾಗೂ ಗ್ರಾಮಮುಖಿ ಕೆಲಸಗಳನ್ನು ಮಾಡಲು ಬಯಸುವವರಿಗೆ ಈ ಕೃತಿ ಒಂದು ಕೈದೀವಿಗೆಯಾಗುವಂತಿದೆ. 

‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದಲ್ಲಿ ಪಾಲ್ಗೊಂಡವರು, ಅದರ ಮಹತ್ತನ್ನು ಅರಿತವರು, ನಾಡಿನ ಕಲಾವಿದರು, ಬುದ್ಧಿಜೀವಿಗಳು, ರೈತರು, ಸಾಹಿತಿಗಳು, ಪತ್ರಕರ್ತರು ಬರೆದ ಸುಮಾರು 60ಕ್ಕೂ ಹೆಚ್ಚು ಚಿಂತನಾ ಬರೆಹಗಳು ಈ ಕೃತಿಯಲ್ಲಿವೆ. ಈ ಬರೆಹಗಳು ಮುಂದೊಮ್ಮೆ ಹಳ್ಳಿಗಳ ಬಗೆಗಿನ ನೋಟವನ್ನು ಪುನರ್‌ರಚಿಸುವ ಕೆಲಸಕ್ಕೆ ಖಂಡಿತವಾಗಿಯೂ ನೆರವಾಗಬಲ್ಲವು.

ಮಣ್ಣಋಣ

ಗೌರವ ಸಂಪಾದಕ: ಪ್ರೊ.ಎಂ. ಕೃಷ್ಣೇಗೌಡ

ಸಂ: ಶಿಲ್ಪಶ್ರೀ ಹರವು ಶಿವಕುಮಾರ ಕಾರೇಪುರ

ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

ಸಂ: 99005 55255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT