ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅಕಾಡೆಮಿಕ್ ಚೌಕಟ್ಟಿನಲ್ಲಿ ಆಪ್ತ ಕಥನ

ಎನ್‌.ವಿ
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾಜಕುಮಾರ್ ಅಗಲಿ ಕೆಲವು ದಿನಗಳಾಗಿತ್ತಷ್ಟೆ. ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗಿರೀಶ ಕಾರ್ನಾಡರು ಸುದೀರ್ಘವಾಗಿ ಮಾತನಾಡಿ, ಈ ನಟ ಹೇಗೆ ಸಂಸ್ಕೃತಿಯ ಭಾಗ ಎನ್ನುವುದನ್ನು ಬಣ್ಣಿಸಿದ್ದರು. ಕನ್ನಡ ಚೆನ್ನಾಗಿ ಮಾತನಾಡಬೇಕೆಂದು ಎಂಥವರಿಗೂ ಅನಿಸುವಂತೆ ಮಾಡಿದ್ದ, ನಾಡು–ನುಡಿಯ ಕುರಿತ ಆರಾಧನಾಭಾವ ಇಟ್ಟುಕೊಂಡಿದ್ದ, ಜೀವನಮೌಲ್ಯಗಳನ್ನು ಗೌರವಿಸುವ ರಾಜಕುಮಾರ್ ಹೇಗೆಲ್ಲ ಅಸಂಖ್ಯ ಕನ್ನಡಿಗರನ್ನು ಪ್ರಭಾವಿಸಿದ್ದರು ಎಂದು ಅವರು ಬಿಚ್ಚಿಟ್ಟಿದ್ದರು.

ಸಾಮಾನ್ಯವಾಗಿ ಸಿನಿಮಾ ನಟ–ನಟಿಯರ ಕುರಿತು ಸಾಹಿತಿಗಳು ತಲಸ್ಪರ್ಶಿಯಾಗಿ ಮಾತನಾಡುವುದು ಅಥವಾ ಬರೆಯುವುದು ವಿರಳ. ರಾಜಕುಮಾರ್ ಅದಕ್ಕೆ ಅಪವಾದ. ಗಿರೀಶ ಕಾರ್ನಾಡರು ಆ ದಿನ ಮಾತಿನಲ್ಲಿ ಕೇಳಿಸಿದ್ದನ್ನೇ, ‘ಡಾ. ರಾಜಕುಮಾರ್– ನಾಡು ನುಡಿಯ ಅಸ್ಮಿತೆ’ ಕೃತಿಯು ಅಕ್ಷರಗಳಲ್ಲಿ ಕಾಣಿಸಿದೆ.

2016ರಲ್ಲಿ ರಾಜಕುಮಾರ್ ಅವರನ್ನು ಕುರಿತ ರಾಷ್ಟ್ರೀಯ ಉತ್ಸವವೊಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿತ್ತು. ಅಲ್ಲಿ ಸಾಹಿತ್ಯ–ಸಂಶೋಧನಾ ವಲಯದವರು ಮೇರುನಟನ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದ್ದರು. ಅವರ ಆ ಮಾತುಗಳನ್ನು ಅಕ್ಷರರೂಪಕ್ಕೆ ಇಳಿಸುವಂತೆ ಮಾಡಿ, ಜಿ.ವಿ. ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ರಾಜಕುಮಾರ್‌ ಕುರಿತು ಸಮಗ್ರ ಚರಿತ್ರೆಯ ಸಂಪುಟಗಳನ್ನು ಬರೆದಿರುವ ದೊಡ್ಡಹುಲ್ಲೂರು ರುಕ್ಕೋಜಿ ಅವರೇ ಈ ಕೃತಿಯ ಪ್ರಕಾಶಕರು.

ಪ್ರೊ. ಸಿ.ಎನ್. ರಾಮಚಂದ್ರನ್, ಪ್ರೊ. ಷ. ಶೆಟ್ಟರ್, ಎಚ್.ಎಸ್. ರಾಘವೇಂದ್ರ ರಾವ್, ಡಿ.ಎಸ್. ನಾಗಭೂಷಣ, ಕೃಷ್ಣಮೂರ್ತಿ ಹನೂರು, ಉದಯಾದ್ರಿ, ಶ್ಯಾಮಸುಂದರ ಕುಲಕರ್ಣಿ, ಪ್ರೊ. ನಿಸಾರ್ ಅಹಮದ್, ಮೊಗಳ್ಳಿ ಗಣೇಶ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಕೊಂಡವರ ಕಣ್ಣೋಟದಲ್ಲಿ ರಾಜಕುಮಾರ್ ವ್ಯಕ್ತಿತ್ವ ಈ ಕೃತಿಯಲ್ಲಿ ಪಡಿಮೂಡಿದೆ.

ಪುಸ್ತಕದ ಲೇಖನಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಕರ್ನಾಟಕದ ಸಂಸ್ಕೃತಿಯ ಹಿನ್ನೆಲೆಯಲ್ಲಿ ರಾಜಕುಮಾರ್‌ ಅವರನ್ನು ಕಟ್ಟಿಕೊಡುವಂತಹ ಬರಹಗಳಿವೆ. ಎರಡನೇ ಅಧ್ಯಾಯವು ‘ರಾಜಕುಮಾರ್ ಸಮಗ್ರ ಚರಿತ್ರೆ’ಯ ಎರಡು ಸಂಪುಟಗಳ ವಿಮರ್ಶಾ ಬರಹಗಳಿಗೆ ಮೀಸಲು. ಮೂರನೆಯ ಅಧ್ಯಾಯದಲ್ಲಿ ಮನು ಚಕ್ರವರ್ತಿ, ರಾಜೇಂದ್ರ ಚೆನ್ನಿ, ಎನ್. ವಿದ್ಯಾಶಂಕರ್, ಚಂದನ್ ಗೌಡ ಅವರ ಇಂಗ್ಲಿಷ್‌ ಲೇಖನಗಳಿವೆ. ಎಲ್ಲದರಲ್ಲೂ ಕನ್ನಡದ ದಿಗ್ಗಜ ನಟನ ಬದುಕಿನ ಹಲವು ಆಸಕ್ತಿಕರ ಸಂಗತಿಗಳು, ಅವರ ವ್ಯಕ್ತಿತ್ವ ಕುರಿತ ಒಳನೋಟಗಳು ಬಿಚ್ಚಿಕೊಳ್ಳುತ್ತವೆ.

ಹೆಚ್ಚು ಮಹತ್ವಪೂರ್ಣವಾದ ಅಧ್ಯಾಯ ಕೊನೆಯದ್ದು. ಇದರಲ್ಲಿ ವಿ.ಎನ್. ಸುಬ್ಬರಾವ್, ಕೆ.ಎಸ್. ನಾರಾಯಣ ಸ್ವಾಮಿ, ಎಂ.ವಿ. ರಾಮಕೃಷ್ಣಯ್ಯ, ಶ್ಯಾಮಸುಂದರ ಕುಲಕರ್ಣಿ 1980ರಲ್ಲಿ ಮಾಡಿದ್ದ ರಾಜಕುಮಾರ್ ಅವರ ಸಂದರ್ಶನಗಳಿವೆ. ತಾತನಿಂದ ತಂದೆಗೆ, ತಂದೆಯಿಂದ ರಾಜಕುಮಾರ್ ಅವರಿಗೆ ದೊರೆತ ಶಿಕ್ಷಾಪಾಠದ ಆಪ್ತ ಕಥನ ಅದರಲ್ಲಿದೆ. ಮೇರುನಟನ ಮುಗ್ಧತೆ, ಬದ್ಧತೆ, ನಟನೆ ಎನ್ನುವುದು ಕಲೆ ಎನ್ನುವುದು ಅವರಿಗೆ ಸಿದ್ಧಿಸಿದ ಗಳಿಗೆ ಇವೆಲ್ಲವೂ ನಮಗೆ ಈ ಸಂದರ್ಶನದಲ್ಲಿ ದಕ್ಕುತ್ತದೆ. ಈ ನಟ ಬದುಕಿನುದ್ದಕ್ಕು ಅಷ್ಟು ಸರಳವಾಗಿ ಇದ್ದುದು ಹೇಗೆ ಎನ್ನುವುದರ ಮೂಲಕಾರಣವೂ ಸ್ಪಷ್ಟವಾಗುತ್ತದೆ. ಸಂದರ್ಶನ ಎನ್ನುವುದಕ್ಕಿಂತ ಹೆಚ್ಚಾಗಿ, ಇದೊಂದು ಆಪ್ತ ಸಂವಾದದ ಮಾದರಿಯಲ್ಲಿ ಇದೆ.

ಶ್ಯಾಮಸುಂದರ ಕುಲಕರ್ಣಿ ಅವರ ಈ ಒಂದು ಅನುಭವ ಮುದ ನೀಡುವ ಓದಿನ ‘ಟ್ರೇಲರ್’ ತರಹ ಇದೆ: ಒಮ್ಮೆ ಹುಬ್ಬಳ್ಳಿಯಲ್ಲಿ ರಾಜಕುಮಾರ್ ನೆರೆಹಾವಳಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ರಸ್ತೆಗೆ ಇಳಿದಿದ್ದರು. ಆಗ ಶ್ಯಾಮಸುಂದರ್ ಕುಲಕರ್ಣಿ ಇನ್ನೂ ಕಾಲೇಜು ವಿದ್ಯಾರ್ಥಿ. ನಿಧಿ ಸಂಗ್ರಹಿಸಲು ಹೊರಟಿದ್ದ ಲಾರಿಯಿಂದ ರಾಜಕುಮಾರ್‌ ಕೆಳಗಿಳಿದವರೇ, ಕುಲಕರ್ಣಿ ಅವರ ಕೈಯಲ್ಲಿದ್ದ ಕೊಡೆಯನ್ನು ಕೇಳಿ ಪಡೆದರು. ಮರುದಿನ ಅದನ್ನು ಹಿಂದಿರುಗಿಸುವುದಾಗಿ ಹೇಳಿದರು. ಆ ಕೊಡೆಯ ಮೇಲೆ ಕುಲಕರ್ಣಿ ಅವರ ಹೆಸರು ಇದ್ದುದನ್ನೂ ಗಮನಿಸಿದ್ದರು. ಕೊಡೆ ಮರುದಿನ ಮರಳಲಿಲ್ಲ. ಆಪ್ತೇಷ್ಟರೆಲ್ಲ ಛೇಡಿಸಿದ್ದೇ ಬಂತು. ಕೊನೆಗೆ, ಆ ಕ್ಷೇತ್ರದ ಸಂಸದರು ಒಬ್ಬರ ಕೈಲಿ ಆ ಕೊಡೆ ಹಾಗೂ ಒಂದು ಪತ್ರವನ್ನು ಕಳುಹಿಸಿದರು. ಕುಲಕರ್ಣಿ ಅವರಿಗೆ ಆಶ್ಚರ್ಯ. ಪತ್ರದ ಮೇಲೆ ಸಹಿ ಪಡೆದು ಆ ವ್ಯಕ್ತಿ ಮರಳಿದರು. ಕೊಡೆ ಕೊಟ್ಟವರ ವಿಳಾಸ ಪತ್ತೆ ಮಾಡಿ ಅದನ್ನು ತಲುಪಿಸಿ ಎಂದು ಸಂಸದರಲ್ಲಿ ರಾಜಕುಮಾರ್ ವಿನಂತಿಸಿದ್ದರಂತೆ.

ಕುವೆಂಪು ಹಾಗೂ ರಾಜಕುಮಾರ್ ಇಬ್ಬರ ವ್ಯಕ್ತಿತ್ವಗಳನ್ನು ಸಮೀಕರಿಸುವಂತಹ ಅಕಡೆಮಿಕ್ ಬರಹಗಳ ವಿಚಾರಮಂಥನದ ಜೊತೆಗೆ, ಓದಿನ ಖುಷಿಯನ್ನೂ ನೀಡುವ ಪುಸ್ತಕವಿದು.

ಡಾ. ರಾಜಕುಮಾರ್–ನಾಡು ನುಡಿಯ ಅಸ್ಮಿತೆ

ಸಂ: ಜಿ.ವಿ. ಆನಂದಮೂರ್ತಿ

ಪ್ರ: ಪ್ರೀತಿ ಪುಸ್ತಕ ಪ್ರಕಾಶನ

ಸಂ: 9845700747

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT