ಕವಿಯಾಗಿ ಛಾಪು ಮೂಡಿಸಿರುವ ಸುಬ್ರಾಯ ಚೊಕ್ಕಾಡಿ ಅವರು ಕಥೆ, ಕಾದಂಬರಿ ಪ್ರಕಾರಗಳಲ್ಲೂ ಕೈಯಾಡಿಸಿದವರು. ವಿಮರ್ಶಾ ಕೃಷಿಯನ್ನೂ ಮಾಡಿರುವ ಅವರು, ಸಾಹಿತ್ಯ ಪ್ರವೇಶಿಸುವವರಿಗೆ ಮೂಲಪಾಠ ಹೇಳುವ ಬಗೆಯಲ್ಲಿ ವಿಮರ್ಶಾ ಪಠ್ಯ ಕಟ್ಟಿಕೊಟ್ಟವರು. ರೂಪ ಪ್ರಕಾಶನವು ಅವರ ಸಮಗ್ರ ಬರಹಗಳನ್ನು ಮೂರು ಕೃತಿಗಳ ರೂಪದಲ್ಲಿ ಹೊರತಂದಿದೆ.
ಅರವಿಂದ ಚೊಕ್ಕಾಡಿ ಇವನ್ನು ಸಂಪಾದಿಸಿದ್ದಾರೆ. ಮೊದಲ ಸಂಪುಟದ ಶೀರ್ಷಿಕೆ ‘ಬಂಟಮಲೆಯ ಧ್ಯಾನ’–ಕಾವ್ಯ ಸಂಕಲನ (ಪುಟ: 868, ಬೆಲೆ: ₹950). ಆರು ದಶಕಗಳ ಕಾಲ ಸುಬ್ರಾಯ ಚೊಕ್ಕಾಡಿಯವರು ಬರೆದ 400ಕ್ಕೂ ಹೆಚ್ಚು ಕವನಗಳು ಇದರಲ್ಲಿವೆ. ಎರಡನೆಯ ಸಂಪುಟ ‘ಕಥಾಲೋಕ’ (ಪುಟ: 284, ಬೆಲೆ: ₹300). ಇದರಲ್ಲಿ ಹತ್ತು ಕಥೆಗಳಿವೆ. ‘ಸಂತೆಮನೆ’ ಎನ್ನುವ ಕಾದಂಬರಿಯೂ ಸೇರಿದೆ.
ಮೂರನೇ ಸಂಪುಟ ‘ಅವಲೋಕನ’ (ಪುಟ: 580, ಬೆಲೆ: ₹600). ಇದರಲ್ಲಿ ‘ದಕ್ಷಿಣ ಕನ್ನಡ ಕಾವ್ಯ ಸಮೀಕ್ಷೆ–ಕೃತಿ ಶೋಧ’, ‘ಒಳಹೊರಗು’ (ವಿಮರ್ಶಾ ಲೇಖನಗಳ ಸಂಕಲನ), ‘ಸಮಾಲೋಕ’ ಎಂಬ ಮೂರು ವಿಭಾಗಗಳಿವೆ. ಗಂಗಾಧರ ಚಿತ್ತಾಲರ ಸಮಗ್ರ ಕಾವ್ಯದ ಹೊಸ ಓದಿಗೆ ಸಂಬಂಧಿಸಿದ ಒಂದು ಲೇಖನವಲ್ಲದೆ, ಕೆ.ಟಿ. ಗಟ್ಟಿ, ವೈದೇಹಿ, ಕುಸುಮಾ ಶಾನುಭಾಗ ಮೊದಲಾದವರ ಸಾಹಿತ್ಯದ ಬಗೆಗಿನ ವಿಮರ್ಶೆಗಳಿವೆ.
ಜಯಂತ ಕಾಯ್ಕಿಣಿಯವರ ಅಂಕಣ ಬರಹಗಳು ಹಾಗೂ ಜೋಗಿ ಕತೆಗಳಿಗೆ ಸಂಬಂಧಿಸಿದ ವಿಮರ್ಶಾ ಬರಹವೂ ಮೂರನೇ ಸಂಪುಟದಲ್ಲಿದೆ. ಸಾಹಿತ್ಯವನ್ನು ಅಭ್ಯಾಸ ಮಾಡುವವರಿಗೆ ಈ ಸಂಪುಟದ ಎಷ್ಟೋ ಲೇಖನಗಳು ಹೊಸ ಹೊಳಹುಗಳನ್ನು ನೀಡಬಲ್ಲವು.