ದಿ ಡೈರಿ ಆಫ್ ಎ ಯಂಗ್ ಗರ್ಲ್

ಮೂಲ: ಆ್ಯನ್ ಫ್ರಾಂಕ್

ಅನುವಾದ: ನಾಗರೇಖಾ ಗಾಂವಕರ

ಪ್ರ: ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ

ಪುಟ: 384, ಬೆಲೆ: 320

1933ರಲ್ಲಿ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಅಧಿಕಾರ ಹಿಡಿದ ಮೇಲೆ ಯಹೂದ್ಯರ ಒಂದು ಕುಟುಂಬ ಆ್ಯಮ್‌ಸ್ಟರ್‌ಡ್ಯಾಮ್‌ಗೆ ವಲಸೆ ಹೋಯಿತು. 1940ರಲ್ಲಿ ಜರ್ಮನಿ, ನೆದರ್ಲೆಂಡ್ಸ್ ಅನ್ನು ಆಕ್ರಮಿಸಿಕೊಂಡಾಗ ಅದೇ ಕುಟುಂಬ 1942ರಿಂದ 1944ರವರೆಗೆ ಎರಡು ವರ್ಷ ಅಡಗಿಕೊಂಡೇ ಇರಬೇಕಾಯಿತು. ಆ ಕುಟುಂಬದ ಸದಸ್ಯರೆಂದರೆ ಆ್ಯನ್ ಎಂಬ ಹುಡುಗಿ, ಅವಳ ತಂದೆ ಓಟ್ಟೊ, ತಾಯಿ ಎಡಿತ್, ಹಿರಿಯಕ್ಕ ಮಾರ್ಗೋಟ್.

ನಾಜಿಗಳು ಅನೇಕ ಯಹೂದ್ಯವಿರೋಧಿ ಕ್ರಮಗಳನ್ನು ಕೈಗೊಂಡರು. ಅವುಗಳಲ್ಲಿ ಆ್ಯನ್ ಮತ್ತು ಮಾರ್ಗೋಟ್ ಯಹೂದ್ಯರಿಗೇ ಮೀಸಲಾದ ಒಂದು ಶಾಲೆಗೆ ಸೇರಿಕೊಳ್ಳಬೇಕೆನ್ನುವುದೂ ಒಂದು. ಮರುವರ್ಷ ಮಾರ್ಗೋಟ್ ಒಂದು ಲೇಬರ್ ಕ್ಯಾಂಪಿಗೆ ಸೇರಬೇಕೆಂಬ ಆಜ್ಞೆ. ಸೇರಿಕೊಳ್ಳದಿದ್ದರೆ ದಸ್ತಗಿರಿಯಾಗಬಹುದೆಂಬ ಭಯದಿಂದ ಇಡೀ ಕುಟುಂಬ ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ಓಟ್ಟೊವಿನ ವ್ಯಾಪಾರ ಕೇಂದ್ರದ ಒಂದು ‘ರಹಸ್ಯ ವಿಭಾಗ’ದಲ್ಲಿ, ಪುಸ್ತಕಗಳ ಒಂದು ಕಪಾಟಿನ ಮರೆಯಲ್ಲಿ ಅಡಗಿಕೊಂಡಿತು. ಬಹುಬೇಗ ಇನ್ನೂ ನಾಲ್ಕು ಮಂದಿ ಯಹೂದ್ಯರು - ಹರ್ಮನ್, ಅಗೂಸ್ತೆ, ವಾನ್ ಪೆಲ್ಸ್, ಅವರ ಪುತ್ರ ಪೀಟರ್ - ಅವರನ್ನು ಸೇರಿಕೊಂಡರು. ಇತರ ಕೆಲವರೂ ಅವರ ನೆರವಿಗೆ ಬಂದರು.

1942ರ ಜೂನ್ 12ರಂದು ಆ್ಯನ್‌ಳ 13ನೆಯ ಹುಟ್ಟುಹಬ್ಬ. ಅಂದು ಅವಳಿಗೊಂದು ಡೈರಿ ಕೊಡುಗೆಯಾಗಿ ಬಂತು. ಆ ದಿನವೇ ಅದರಲ್ಲಿ ಬರೆಯತೊಡಗಿದ ಅವಳಿಗೆ ಮುಂದಿನ ಎರಡು ವರ್ಷ ಆ ಡೈರಿಯೇ ಒಬ್ಬ ಗೆಳೆಯನಂತಿತ್ತು. ಅವಳು ಡೈರಿ ರೂಪದ ಆ ಗೆಳೆಯನನ್ನು ‘ಪ್ರೀತಿಯ ಕಿಟ್ಟಿ’ ಎಂದು ಸಂಬೋಧಿಸಿದಳು. ಉದಾಹರಣೆಗೆ 1943ರ ಆಗಸ್ಟ್ 4ರಂದು ಅವಳು ಬರೆದಿರುವುದನ್ನು ನೋಡಿ: ‘ಗುಪ್ತವಾಸದಲ್ಲಿ ತೊಡಗಿ ಒಂದು ವರ್ಷದ ಮೇಲಾಯ್ತು. ನಮ್ಮ ಬದುಕಿನ ಬಗ್ಗೆ ಕೆಲವೇ ಸಂಗತಿಗಳಷ್ಟೆ ನಿನಗೆ ಗೊತ್ತು. ಅದರಲ್ಲಿ ಕೆಲವು ವರ್ಣಿಸಲು ಆಗದಂತಹ ಸಂಗತಿಗಳು ಇವೆ. ಕಿಟ್ಟಿ, ನಿನ್ನಲ್ಲಿ ನನಗೆ ಬಹಳ ಹೇಳುವುದಿದೆ. ದಿನ ಮತ್ತು ಕಾಲ ಪ್ರತಿನಿತ್ಯವೂ ಭಿನ್ನವಾಗಿರುವಂತೆ ಸಾಮಾನ್ಯ ಜನರ ಬದುಕು ಕೂಡಾ ಭಿನ್ನ ಭಿನ್ನವಾಗಿರುತ್ತದೆ’.

‘ಪ್ರತಿದಿನವೂ ನಿನಗೆ ನಾನು ಹೇಳುವುದು ಬರಿಯ ಹಗಲು ಹೊತ್ತಿನ ಸಾಮಾನ್ಯ ದಿನದ ಬಗ್ಗೆ. ಆದರೆ ಇಂದು ನಿನ್ನೊಂದಿಗೆ ಸಂಜೆಯ ಹೊತ್ತಿನ ಮತ್ತು ರಾತ್ರಿಯ ಸಮಯದ ಸಂಗತಿಗಳನ್ನು ಹೇಳುತ್ತಿದ್ದೇನೆ. ಮೇಲ್ಮಹಡಿಯಲ್ಲಿ ಜೋರಾದ ಗುಡುಗಿನ ಸದ್ದು. ಆದರೆ ಅದು ಗುಡುಗಿನ ಸದ್ದಲ್ಲ. ಶ್ರೀಮತಿ ವ್ಯಾನ್‌ಡ್ಯಾನ್‍ರ ಹಾಸಿಗೆಯ ಸದ್ದು. ಹಾಸಿಗೆಯನ್ನು ಕಿಟಕಿಯ ಪಕ್ಕ ಜರುಗಿಸಲಾಗುತ್ತಿದೆ. ಕಾರಣ ಗೊತ್ತೇ ಕಿಟ್ಟಿ? ಗುಲಾಬಿ ಬಣ್ಣದ ರಾತ್ರಿಯುಡುಗೆ ತೊಟ್ಟ ಈ ಮಹಾರಾಣಿಯ ದೊಡ್ಡ ಮೂಗಿನ ಹೊಳ್ಳೆಗಳು ಶುದ್ಧಗಾಳಿಯನ್ನು ಸೇವಿಸಬೇಕಂತೆ. ಅದಕ್ಕಾಗಿ ಈ ಬದಲಾವಣೆ...’

ಆ್ಯನ್‍ಳ ತಾರುಣ್ಯ ಕಳೆದುಹೋಗುವುದು ಹೊರಜಗತ್ತಿಗೆ ಕಾಣದ ಅಡಗುದಾಣದಲ್ಲಿ. ಅವಳು ಹಗಲುಗಳನ್ನು ಸಣ್ಣ ಸಣ್ಣ ರೂಮುಗಳಲ್ಲಿ ತುದಿಗಾಲಲ್ಲಿ ನಡೆದಾಡುತ್ತ, ರಾತ್ರಿಗಳನ್ನು ಬಾಂಬುಗಳ, ಸಿಡಿಗುಂಡುಗಳ ಸದ್ದುಗಳಿಂದ ಭಯಪಡುತ್ತ ಕಳೆಯುತ್ತಾಳೆ.

ಯುದ್ಧ ಇನ್ನೇನು ಕೊನೆಗೊಳ್ಳಲಿದೆ ಎನ್ನುವಾಗ ಅವಳು ಪ್ರಪಂಚದಲ್ಲಿ ಎಷ್ಟೆಲ್ಲ ನೋವು ಯಾತನೆಗಳಿವೆಯೆಂದು ಕಂಗೆಡುತ್ತಾಳೆ. ಒಮ್ಮೆ ತಾನೂ ತನ್ನ ಕುಟುಂಬದವರೂ ಸತ್ತುಹೋಗಿದ್ದರೆ ಒಳ್ಳೆಯದಾಗುತ್ತಿತ್ತೇನೋ ಎಂದೂ ಯೋಚಿಸುತ್ತಾಳೆ. ಆಮೇಲೆ ಹಾಗೆ ಯೋಚಿಸಿದೆನಲ್ಲ ಎಂದು ಪಶ್ಚಾತ್ತಾಪ. ಅಲ್ಲಿಗೆ ಅವಳ ಡೈರಿ ಮುಗಿಯುತ್ತದೆ.

ಆ್ಯನ್‍ಗೆ ಹದಿನೈದು ವರ್ಷ ತುಂಬುವ ಮೊದಲೇ ಅವಳ ಅಡಗುದಾಣ ಪತ್ತೆಯಾಗಿ ಅವಳನ್ನು, ಇತರರನ್ನು ಜರ್ಮನ್ನರ ವಿವಿಧ ಕೂಡುದೊಡ್ಡಿಗಳಿಗೆ ಅಟ್ಟಲಾಗುತ್ತದೆ. ಅಲ್ಲಿಯೇ ಅವರೆಲ್ಲರೂ ಅಸುನೀಗುತ್ತಾರೆ. ಬದುಕಿ ಉಳಿಯುವವನು ಆ್ಯನ್‍ಳ ತಂದೆ ಓಟ್ಟೊ ಫ್ರಾಂಕ್ ಮಾತ್ರ. ಆತನ ಸತತ ಪ್ರಯತ್ನದಿಂದ ಆ್ಯನ್‍ಳ ಡೈರಿ 1947ರಲ್ಲಿ ಡಚ್ ಭಾಷೆಯಲ್ಲಿ ಪ್ರಕಟಗೊಳ್ಳುತ್ತದೆ.

ಡೈರಿಯಲ್ಲಿ ಅವಳು ತನ್ನ ಅಡಗುತಾಣದ ದಿನದಿನದ ಬದುಕನ್ನು, ಅಲ್ಲಿದ್ದವರ ನಡುವೆ ನಡೆಯುತ್ತಿದ್ದ ವಾದವಿವಾದಗಳನ್ನು, ಯಾರಾದರೂ ತಮ್ಮನ್ನು ಕಂಡುಬಿಟ್ಟಾರೆಂಬ ಭಯವನ್ನು, ತನ್ನ ಸೋದರಿಯ ಬಗೆಗಿನ ಅಸೂಯೆಯನ್ನು, ತನ್ನ ತಾಯಿಯ ಬಗ್ಗೆ ತನ್ನಲ್ಲಿದ್ದ ಸಿಟ್ಟುಸಿಡುಕುಗಳನ್ನು, ತಾನು ಪ್ರಾಪ್ತ ವಯಸ್ಸಿಗೆ ಬರುವಾಗಿನ ದೈಹಿಕ ಪರಿವರ್ತನೆಯಿಂದ ಉಂಟಾಗುವ ಮಾನಸಿಕ ತುಮುಲವನ್ನು ಸಹ ದಾಖಲಿಸಿದ್ದಾಳೆ; ತನ್ನ ದೇಹದಲ್ಲಾಗುತ್ತಿದ್ದ ಪರಿವರ್ತನೆಗಳನ್ನು ಕುರಿತು, ತಾನು ಸ್ವಲ್ಪ ಕಾಲ ಪೀಟರ್ ವಾನ್ ಪೆಲ್ಸ್‌ನನ್ನು ಪ್ರೀತಿಸಿದ್ದರ ಕುರಿತು ನಿರ್ಬಿಢೆಯಿಂದ ಬರೆದಿದ್ದಾಳೆ. ಜೊತೆಗೆ ಭವಿಷ್ಯದಲ್ಲಿ ತಾನೊಬ್ಬ ಪತ್ರಕರ್ತೆಯೋ ಲೇಖಕಿಯೋ ಆಗಬೇಕೆಂಬ ಮಹದಾಸೆಯ ಬಗ್ಗೆ ಕೂಡ.

ನಾವು ಊಹಿಸಲಾಗದ ನೋವು, ಭಯ, ಹಸಿವು, ದಣಿವು, ಮನುಷ್ಯರಿಂದ ಬೇರ್ಪಟ್ಟ ಸ್ಥಿತಿ, ಏಕಾಕಿತನ, ಎಲ್ಲವನ್ನೂ ತಿಳಿಹಾಸ್ಯದಿಂದ, ಬುದ್ಧಿಮತ್ತೆಯಿಂದ, ಅಪರೂಪದ ಒಳನೋಟಗಳಿಂದ ದಾಖಲಿಸಿರುವ ಈ ಡೈರಿ ಎರಡನೆಯ ಮಹಾಯುದ್ಧ ಕಾಲದ ಒಂದು ಕ್ಲಾಸಿಕ್ ಸಾಹಿತ್ಯ ಕೃತಿಯಾಗಿರುವುದಲ್ಲದೆ ನಾಜಿಗಳು ನಡೆಸಿದ ನರಮೇಧವನ್ನು ಕುರಿತ ಒಂದು ವೈಯಕ್ತಿಕ ವ್ಯಾಖ್ಯಾನವಾಗಿಯೂ ಹೆಸರಾಗಿದೆ.

ನಾನು ಸುಮಾರು ನಲವತ್ತು ವರ್ಷಗಳ ಹಿಂದೆ ಇಂಗ್ಲಿಷಿನಲ್ಲಿ ಓದಿದ್ದ, ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದವಾಗಿರುವ ಈ ಪುಸ್ತಕ ಇದೀಗ ಕನ್ನಡಕ್ಕೆ ಬಂದಿದೆ - ನಾಗರೇಖಾ ಗಾಂವಕರ ಅವರ ಸೊಗಸಾದ ಅನುವಾದದಲ್ಲಿ. ಅನುವಾದವೆನ್ನುವುದು ಮೂಲ ಪಠ್ಯದೊಡನೆ ಏಕಾಂಗಿಯಾಗಿ ನಡೆಸುವ ಅನುಸಂಧಾನ. ಆ ಅನುಸಂಧಾನದಲ್ಲಿ ಅನುವಾದಕ ಸ್ವತಃ ಕೊಡುವುದಕ್ಕಿಂತ ಪಡೆಯುವುದೇ ಹೆಚ್ಚು.

ಈ ಪುಸ್ತಕದಲ್ಲಿರುವುದು ಕಿಶೋರಿಯೊಬ್ಬಳ ಮುಗ್ಧತೆ, ಅಂಜಿಕೆ, ಆತಂಕ, ಮಾನಸಿಕ ತೊಳಲಾಟ, ಮನುಷ್ಯ ವರ್ತನೆಯನ್ನು ಕುರಿತ ಕುತೂಹಲ, ವಯೋಸಹಜ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಅನುಭವ ಜಗತ್ತು. ಇವುಗಳನ್ನು ಆಕೆ ಬರೆದಿರುವುದು ತನ್ನ ಕಿಶೋರ ಭಾಷೆಯಲ್ಲಿ. ಈ ಅನುವಾದಕರು ಆ ಭಾಷೆಯನ್ನೇ ಕನ್ನಡದಲ್ಲಿ ಪಡಿಮೂಡಿಸಲು ಪ್ರಯತ್ನಿಸಿ ಸಾಕಷ್ಟು ಯಶಸ್ವಿಯಾಗಿದ್ದಾರೆ ಎನ್ನಬೇಕು. ಅವರ ಅನುವಾದ ಆ್ಯನ್‍ಳ ಸರಳವೂ ಸ್ವಲ್ಪಮಟ್ಟಿಗೆ ನಿಗೂಢವೂ ಆದ ಧ್ವನಿಯನ್ನು ಸೆರೆಹಿಡಿದಿರುವುದರಿಂದ ಓದುಗರೂ ಅವಳ ಅಂತರಂಗದ ತುಮುಲವನ್ನು, ಅದು ಹುಟ್ಟಿಸುವ ಬೇಗುದಿಯನ್ನು ಅನುಭವಿಸುವಂತಾಗಿದೆ. ಆ್ಯನ್‍ಳ ಮನೋಲಹರಿ ಮತ್ತು ನವಿರು ಭಾವಗಳು ಈ ಅನುವಾದದಲ್ಲೂ ಬೆಳಗುತ್ತಿವೆ. ಇದೇನೂ ಕಡಿಮೆ ಸಾಧನೆಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.