ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಕಲೆ | ತೆಯ್ಯಂಗಳ ಅಂಗಳದಲ್ಲಿ

Last Updated 26 ನವೆಂಬರ್ 2022, 19:30 IST
ಅಕ್ಷರ ಗಾತ್ರ

ತೆಯ್ಯಂ ಅಥವಾ ತೆಯ್ಯಾಟ್ಟಂ ಉತ್ತರ ಕೇರಳದ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪ್ರಸಿದ್ಧ ನೃತ್ಯ ಕಲೆ. ಇದು ಕೊಲತನಾಡು ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ತೆಯ್ಯಂನ ಸೊಬಗನ್ನು ಕಣ್ತುಂಬಿಕೊಳ್ಳಲು ಹೋದಾಗಿನ ಅನುಭವದ ಟಿಪ್ಪಣಿಯೊಂದು ಇಲ್ಲಿದೆ.

***

‘ಕಾಂತಾರ’...‘ಕಾಂತಾರ’...! ಸದ್ಯ ಎಲ್ಲಲ್ಲೂ ಈ ಚಲನಚಿತ್ರದ್ದೇ ಮಾತು. ಈ ಸಿನಿಮಾದ ಅಂತ್ಯದಲ್ಲಿ ಬರುವ ದೈವಾರಾಧನೆಯ ದೃಶ್ಯಗಳಲ್ಲಿ ‘ಪಂಜುರ್ಲಿ’ ಮತ್ತು ‘ಗುಳಿಗ’ ದೈವದ ಅಬ್ಬರ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿ ಎದ್ದು ನಿಂತು ಕೈಮುಗಿಯುವಂತೆ ಮಾಡುತ್ತದೆ. ದೈವದ ಶಕ್ತಿಯೇ ಅಂಥದ್ದು. ಇದು ಕನ್ನಡದ ಕಾಂತಾರದ ಸನ್ನಿವೇಶವಾದರೆ ನಾನು ಈಗ ಹೇಳ ಹೊರಟಿರುವುದು ತುಳುನಾಡಿನ ದೈವಾರಾಧನೆಯಂತೆಯೇ ಕೇರಳದ ಕೊಲತನಾಡಿನಲ್ಲಿ ನಡೆಯವ ತೆಯ್ಯಂ ಕುರಿತು.

ನಾನು ಕೊಲತನಾಡು ತಲುಪಿದಾಗ ತಡರಾತ್ರಿ 2 ಗಂಟೆಯಾಗಿತ್ತು. ಆ ಸರಿರಾತ್ರಿಯಲ್ಲೂ ಜನಸಾಗರವೇ ಅಲ್ಲಿ ತುಂಬಿತ್ತು. ನೋಡುಗರು ತಮ್ಮ ಉಸಿರು ಬಿಗಿಹಿಡಿದುಕೊಂಡು ‘ಕಂಟಾರ್ ಕೇಳನ್ ತೆಯ್ಯಂ’ನ ನಿರೀಕ್ಷೆಯಲ್ಲಿದ್ದರು. ಸಣ್ಣ ದೇವಸ್ಥಾನದ ಮುಂದಿರುವ ಆವರಣದ ಜಾಗದಲ್ಲಿ ಜನರು ಭಕ್ತಿಯಿಂದ ಭಾವಪರವಶರಾಗಿ ನಿಂತು ನೋಡುತ್ತಿದ್ದರು. ಪುರೋಹಿತರು ತಾಳೆಗರಿಗಳ ಪಂಜುಗಳನ್ನು ಬೆಳಗಿಸಿ, ಗಾಳಿಯಲ್ಲಿ ಬೆಂಕಿಯನ್ನು ಹಾರಿಸುತ್ತಾ ಅಲ್ಲಿ ಹಾಕಿರುವ ಒಣತೆಂಗಿನಗರಿಗಳ ರಾಶಿಗೆ ಬೆಂಕಿಯನ್ನು ಹಾಕಿದರು. ಅದು ಮೇಲಕ್ಕೆ ಚಿಮ್ಮಿ ಹೊತ್ತಿ ಉರಿಯತೊಡಗಿತು. ಇದ್ದಕ್ಕಿದ್ದಂತೆ ಚೆಂಡೆ, ಮದ್ದಳೆ, ದುಡಿ ಹಿಮ್ಮೇಳದ ಸದ್ದು ಜೋರಾಯಿತು. ಆಗ ಪಾತ್ರಿಗೆ ದೈವದ ಆವೇಶವಾಯಿತು. ತಕ್ಷಣವೇ ಇಬ್ಬರು ಪುರೋಹಿತರು ‘ಕಂಟಾರ್‌ ಕೇಳನ್‌ ತೆಯ್ಯಂ’ ಹಿಡಿದುಕೊಂಡು ಬಂದರು. ಆ ತೆಯ್ಯಂ ಉರಿಯುವ ಬೆಂಕಿಯ ರಾಶಿಯಲ್ಲಿ ಜಿಗಿದು ಇತ್ತ ಬಂದು, ಮತ್ತೆ ಮರಳಿ ಆ ಬೆಂಕಿಯ ರಾಶಿಗೆ ಜಿಗಿದಾಡುತ್ತಾ ಬೆಂಕಿಯೊಂದಿಗೆ ಆಟವಾಡಿತು. ನೆರೆದಿದ್ದವರೆಲ್ಲರೂ ವಿಸ್ಮಯ ಭಾವವನ್ನು ಮನದಲ್ಲಿ ತುಂಬಿಕೊಂಡು ಆಶೀರ್ವಾದಕ್ಕಾಗಿ ಕಾಯುತ್ತಿದ್ದರು. ಹೌದು, ಈ ದೈವದ ಆಚರಣೆಯೇ ಹಾಗೆ. ಅದು ತುಳುನಾಡಿನ ಭೂತಾರಾಧನೆಯ ದೈವವಾದರೂ ಸರಿಯೇ ಅಥವಾ ಕೊಲತನಾಡಿನ ತೆಯ್ಯಂ ಆದರೂ ಸರಿಯೇ. ಇದೊಂದು ರೋಮಾಂಚನ ಅನುಭವ.

ತೆಯ್ಯಂ ಅಥವಾ ತೆಯ್ಯಾಟ್ಟಂ ಉತ್ತರ ಕೇರಳದ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪ್ರಸಿದ್ಧ ನೃತ್ಯ ಕಲೆ. ಇದು ಕೊಲತನಾಡು (ಈಗಿನ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳು) ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಶತಮಾನಗಳಷ್ಟು ಹಳೆಯದಾದ ಸಂಪ್ರದಾಯ, ಪರಂಪರೆ ಮತ್ತು ರೂಢಿಗಳೊಂದಿಗೆ ಬಳಕೆಯಲ್ಲಿರುವ ಈ ವಿಧಿವಿಧಾನ ಕೈಂಕರ್ಯ ಬಹುಮಟ್ಟಿಗೆ ಎಲ್ಲಾ ಜಾತಿ ವರ್ಗದವರ ಮೇಲೆ ತನ್ನ ಛಾಪನ್ನು ಮೂಡಿಸಿದೆ. ತೆಯ್ಯಂ ಎಂಬುವುದು ದೈವಂ ಎಂಬ ಸಂಸ್ಕೃತ ಶಬ್ದದ ಅಪಭ್ರಂಶ. ಅಂದರೆ ದೈವಂ ಶಬ್ದದ ಮಲಯಾಳಂ ರೂಪವೇ ತೆಯ್ಯಂ. ನೃತ್ಯ ಮತ್ತು ಸಂಗೀತದ ಅಪರೂಪ ಸಂಯೋಜನೆ ಇದಾಗಿದೆ. ದೇವಕೂತ್ತು ತೆಯ್ಯಂ ಅನ್ನು ಹೊರತುಪಡಿಸಿ ಎಲ್ಲ ತೆಯ್ಯಂಗಳನ್ನು ಪುರುಷರು ನಿರ್ವಹಿಸುತ್ತಾರೆ. ಅಂದರೆ ದೇವಕೂತ್ತು ತೆಯ್ಯಂ ಮಹಿಳೆಯರು ನಡೆಸುವ ಏಕೈಕ ತೆಯ್ಯಂ ಆಚರಣೆಯಾಗಿದೆ. ಇದನ್ನು ತೆಕ್ಕುಂಬಾಡ್ ಕೂಲಂ ದೇವಸ್ಥಾನದಲ್ಲಿ ಮಾತ್ರ ನಡೆಸಲಾಗುತ್ತದೆ.

ತೆಯ್ಯಂ ಇಲ್ಲಿನ ಮೂಲ ನಿವಾಸಿ ಮತ್ತು ಆದಿವಾಸಿ ಬುಡಕಟ್ಟುಗಳ ಆರಾಧನಾ ಸಂಪ್ರದಾಯ. ತೆಯ್ಯಂ ನೃತ್ಯದ ಹೊಣೆಗಾರಿಕೆಯನ್ನು ಇಲ್ಲಿನ ಪ್ರತ್ಯೇಕ ಪಾನನ್, ವೇಲನ್ ಹಾಗೂ ಮಲಯನ್ ಸಮುದಾಯಕ್ಕೆ ಪರಶುರಾಮ ವಹಿಸಿಕೊಟ್ಟ. ಆತನೇ ಈ ಉತ್ಸವಗಳ ಜನಕ ಎಂಬ ನಂಬಿಕೆ ಇಲ್ಲಿನ ಜನರದ್ದು.

ಪ್ರಾಚೀನ ಕಾಲದಲ್ಲಿ 500ಕ್ಕೂ ಹೆಚ್ಚು ತೆಯ್ಯಂಗಳನ್ನು ಪ್ರದರ್ಶಿಸಲಾಗುತ್ತಿತು. ಈಗ ಅವುಗಳ ಆಚರಣೆಗಳ ಸಂಖ್ಯೆ 120 ಮಾತ್ರ. ಭೂತಂ, ಗುಳಿಕನ್ (ತೆಕ್ಕನ್ ಗುಳಿಕನ್), ಕಂದನಾರ್ ಕೆಲನ್, ಕಂದಕರ್ಣನ್, ಕಿಜಕ್ಕರ ಚಾಮುಂಡಿ, ಕುಟ್ಟಿಚಾತನ್, ತೈಪರದೇವತಾ, ವೀರಕಾಳಿ, ವಿಷ್ಣುಮೂರ್ತಿ, ಭಗವತಿ, ಅಕ್ಕ ಚಾಮುಂಡಿ, ಆಲಿ ತೆಯ್ಯಂ, ಬ್ರಾಹ್ಮಣಮೂರ್ತಿ, ಪಟ್ಟೆನ್ ಚಾಮುಂಡಿ, ತೀಚಾಮುಂಡಿ, ರಕ್ತಚಾಮುಂಡಿ ತೆಯ್ಯಂಗಳು ಪ್ರಸಿದ್ಧ. ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿ ಮಾರ್ಚ್‌ ತಿಂಗಳವರೆಗೆ ಈ ತೆಯ್ಯಂ ದೈವಾಚರಣೆಗಳು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಪ್ರದೇಶಗಳಲ್ಲಿ ನಡೆಯುತ್ತವೆ.

ಕಿಜಕ್ಕರ ಚಾಮುಂಡಿ ತೆಯ್ಯಂ
ಕಿಜಕ್ಕರ ಚಾಮುಂಡಿ ತೆಯ್ಯಂ
ಕಂದಕರ್ಣನ್ ತೆಯ್ಯಂ
ಕಂದಕರ್ಣನ್ ತೆಯ್ಯಂ
ಭೂತಂ ತೆಯ್ಯಂ
ಭೂತಂ ತೆಯ್ಯಂ
ವಿಷ್ಣುಮೂರ್ತಿ ತೆಯ್ಯಂ
ವಿಷ್ಣುಮೂರ್ತಿ ತೆಯ್ಯಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT