ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿಸಿದ ಕೀಲಿಕೈ

ಹಾಸ್ಯ
Last Updated 30 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ನಮ್ಮ ಮದುವೆಯಾಗಿ ಮೂವತ್ತೆರಡು ಸಂವತ್ಸರಗಳೇ ಸಂದಿದ್ದರೂ ಪತಿರಾಯರ ಸ್ವಭಾವವನ್ನು ಮರೆಗುಳಿತನವೆನ್ನಲೋ, ಅಲಕ್ಷ್ಯ ಪ್ರವೃತ್ತಿಯೆನ್ನಲೋ ತಿಳಿಯದೇದ್ವಂದ್ವದಲ್ಲಿದ್ದೇನೆ. ಅಂದಿಗೂಇಂದಿಗೂ ದಿನಕ್ಕೊಂದು ಸಲವಾದರೂ ಏನಾದರೊಂದನ್ನು ಹುಡುಕುವುದೇ ಅವರ ಜಾಯಮಾನ. ಅದು ಕರವಸ್ತ್ರ ಯಾವಾಚ್ ಆಗಿರಬಹುದು; ಪರ್ಸ್ ಅಥವಾ ಸ್ಕೂಟರಿನ ಕೀಲೀಕೈಯೇ ಆಗಿರಬಹುದು... ಹುಡುಕುತ್ತಲೇ ಇರುತ್ತಾರೆ. ಈಗಂತೂ ಚರವಾಣಿಯದ್ದೇ ಎಲ್ಲೆಡೆ ಆರ್ಭಟ. ಅದರಲ್ಲಿ ಮಾತನಾಡುವಾಗಲಂತೂ ಇಡೀ ಮನೆ, ಟೆರೇಸ್, ಅಂಗಳ... ಎಲ್ಲೆಂದರಲ್ಲಿ ತಿರುಗುತ್ತಾ ಮಾತಿನಲ್ಲಿ ತೊಡಗಿದರೆಂದರೆ ಅವರ ಮುಂದೆಯೇ ಕಳ್ಳ ಮನೆಯನ್ನು ಬಳಿದುಕೊಂಡು ಹೋಗುತ್ತಿದ್ದರೂ ಗ್ರಹಿಸಲಾರದಷ್ಟು ಗುಂಗು. ಒಂದು ವೇಳೆ ಈ ಮೊಬೈಲ್ ಮರೆಗೈಯ್ಯಲ್ಲಿ ಇಟ್ಟದ್ದು ಸಿಗಲಿಲ್ಲದಿದ್ದರೆ ಚಡಪಡಿಕೆ ಶುರು. ಹುಡುಕೀಹುಡುಕಿ ಕೊನೆಗೆ ಲ್ಯಾ೦ಡ್ ಲೈನ್‌ನಿಂದ ಅದಕ್ಕೊಂದು ಕರೆ ಕೊಟ್ಟು ಅದರ ಉಲಿಯುವಿಕೆಯ ಜಾಡು ಹಿಡಿದು ಹುಡುಕುವ ಸೀನಂತೂ ಇದ್ದದ್ದೇ. ದಿನನಿತ್ಯದ ವಸ್ತುಗಳನ್ನು ಅವುಗಳನಿಗದಿತ ಜಾಗದಲ್ಲಿಟ್ಟರೆ ಹುಡುಕುವ ಪ್ರಮೇಯವೇ ಇರುವುದಿಲ್ಲವೆಂಬ ನನ್ನದುವ್ಯರ್ಥಾಲಾಪ. 'ಅವನದ್ದು ಮರೆವಲ್ಲ; ಅಲಕ್ಷ್ಯ ಅಷ್ಟೇ. ಯಾವಾಗ್ಲೂ ಎಂತದಾದ್ರೂ ಯೋಚಿಸ್ತಿರ್ತ... ಹೊರಗೆ ದುಡಿಯೋ ಗಂಡಸರಿಗೆ ನೂರೆಂಟು ಚಿಂತೆ ಇರ್ತು... ಅವಂಗೆ ಬೇಕಾದ ವಸ್ತು ತಂದು ಕೈಯ್ಯಲ್ಲಿ ಕೊಟ್ರೆ ನಿನ್ ಗಂಟೇನು ಹೋಗ್ತು...' ಅತ್ತೆಯವರ ಕೊಂಕು. ಸರಿಯೇ ಸರಿ, ನಿವೃತ್ತರಾಗಿ ನಾಲ್ಕೈದು ವರ್ಷಗಳೇಉರುಳಿವೆಯಲ್ಲ ಈಗೆಂಥದ್ದು ಚಿಂತೆ? ಚಿಂತೆ ನನಗಷ್ಟೇ... ಅದ್ಯಾವ ಕೋಣೆಯಲ್ಲಿ ಲೈಟು ಉರೀತಿದೆ; ಫ್ಯಾನು ಗರಗರ ತಿರುಗ್ತಿದೆ ಅಂತ ನೋಡೋದರ ಜೊತೆಗೆ'ವಾಕಿಂಗ್ ಹೋಗ್ರೀ...ತಿಂಡೀಗ್ ಬರ‍್ರೀ...ಸ್ನಾನಕ್ಕೆ ಹೋಗ್ರೀ... ಪೂಜೆ ಮಾಡ್ರಿ...ಊಟಕ್ ಬರ‍್ರೀ' ಮನೆಗೆಲಸ ಸಾಲದು ಅಂತ ಇದು ಬೇರೆ. ಈ ದರ್ದು ಏಕೆಂದರೆ ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲವೂ ಆಗಬೇಕೆಂಬ ನನ್ನ ಸ್ವಭಾವಕ್ಕೆತದ್ವಿರುದ್ಧ ಸ್ವಭಾವ ಅವರದ್ದು. ಇನ್ನು ಒದ್ದೆ ಟವಲ್‌ನ ಕುಪ್ಪೆಯಂತೂ ಕೇಳ್ಬೇಡಿ ಮಂಚ- ಕುರ್ಚಿ- ನೆಲ- ಸೋಫಾ... ಎಲ್ಲೆಂದರಲ್ಲಿ ರಾರಾಜಿಸುತ್ತಿರುತ್ತದೆ! 'ಪಾಪ! ಅವರಿರೋದೇ ಹಾಗೆ, ಮೇಲಾಗಿ ಹಿರಿಯ ನಾಗರಿಕ ಪಟ್ಟ ಅಲಂಕರಿಸಿ ವರ್ಷಗಳೇ ಉರುಳಿವೆ...ನೀವೇ ಸ್ವಲ್ಪ ಅನುಸರಿಸಿಕೊಂಡು ಹೋಗೋದಲ್ವೇ' ಅಂತ ಮರುಕ ಪಡೋರಿಗೆ ಕಾಣಿಸ್ತಿಲ್ವೇ ನಾನೂ ಅದೇ ಹಾದೀಲಿರೋದು...? ಈಗನ್ನಿ ನನಗೂ ಪಾಪ ಅಂತ.

ಬಿಡಿ, ನನ್ನ ಗೋಳು ಇದ್ದದ್ದೇ... ಇಷ್ಟೆಲ್ಲಾ ಪೀಠಿಕೆ ಹಾಕಿದ್ದರ ಉದ್ದೇಶ ಪತಿದೇವರ ಸ್ವಭಾವವನ್ನು ನಿಚ್ಚಳಗೊಳಿಸುವುದಷ್ಟೇ.ವಿಷಯಕ್ಕೆ ಬರುತ್ತೇನೆ. ಮನೆಯ ಚಾವಿ ಕಳೆದುಹೋದಘಟನೆ ಘಟಿಸಿದ್ದು ಸುಮಾರುಒಂದು ವರ್ಷದ ಹಿಂದೆ. ಅದೊಂದು ಕಡೆಗೆ ಹೋಗುವುದಿತ್ತು.ಅಡುಗೆ ಮುಗಿಸಿ ಹನ್ನೊಂದು ಗಂಟೆ ಸುಮಾರಿಗೆ ಬಸ್ಸಲ್ಲಿಹೋಗಿದ್ದೆ.ವಾಪಸ್ಸು ಬರುವಾಗ ಫೋನ್ ಮಾಡು ಬಂದು ಕರೆದೊಯ್ಯುತ್ತೇನೆ ಎಂದಿದ್ದರು. ಈ ವ್ಯವಸ್ಥೆ ಹೊಸದೇನಲ್ಲ, ಪ್ರತೀ ಸೋಮವಾರವೂ ಇದೇ ರೂಢಿ. ಬಿಸಿಲಿನ ಝಳದಮಟಮಟ ಮಧ್ಯಾಹ್ನ ಒಂದೂವರೆಯ ಸಮಯ. ಫೋನಾಯಿಸಿದ್ದರಿಂದ ಸ್ಕೂಟರಿನಲ್ಲಿ ಬಂದು ಮನೆಗೆ ಕರೆದೊಯ್ದರು.‘ಮನೆಯ ಚಾವಿ ಕೊಡಿ ಬೀಗ ತೆಗೆಯುತ್ತೇನೆ’ ಎಂದೆ. ಪ್ಯಾಂಟೊಳಗೆ ಬಲಗೈ ತೂರಿಸಿದರು. ಕೀಲೀಕೈ ಇರಲಿಲ್ಲ. ಎಡಜೇಬಿನೊಳಗೂ ಇರಲಿಲ್ಲ. ಸ್ಕೂಟರಿನ ಸೀಟುತೆಗೆದು ನೋಡಿದರು. ಅಲ್ಲೂ ಇರಲಿಲ್ಲ. ಶರ್ಟಿನ ಕಿಸೆಯಲ್ಲೂ ಇಲ್ಲ... ‘ನಿನಗೇ ಕೊಟ್ಟಿದ್ನಲೇ’ ಅನ್ನೋದೇ! ಇದೀಗ ಗಾಬರಿಗೊಳ್ಳುವ ಸರದಿ ನನ್ನದಾಗಿತ್ತು. ಅವರು ಕೊಟ್ಟಿಲ್ಲ ಎನ್ನುವುದು ಖಂಡಿತವಾಗಿದ್ದರೂ ಬ್ಯಾಗೊಳಗೊಮ್ಮೆ ಹುಡುಕುವಂತೆ ನಟಿಸಿ‘ನನಗೆ ಕೊಟ್ಟಿಲ್ಲ...ಗಾಬ್ರಿಯಾಗ್ಬೇಡಿ, ಸಾವಕಾಶ ಹುಡ್ಕಿ’ ಎಂದೆ. ಮತ್ತೊಮ್ಮೆ ಹುಡುಕಿದರು. ಚಾವಿ ಬಾಗಿಲಿಗೇ ಬಿಟ್ಟಿರಬಹುದೆಂಬ ಗುಮಾನಿಯಿಂದಪರಿಶೀಲಿಸಿದ್ದೂ ಆಯಿತು. ಪ್ಯಾಂಟಿನ ಜೋಬಲ್ಲಿ ಇಟ್ಟಿದ್ದು ಸ್ಕೂಟರ್ ಹೊಡೆಯುವಾಗ ದಾರಿಯಲ್ಲಿ ಬಿದ್ದಿರಬಹುದೆಂದು ತರ್ಕಿಸಿದೆವು. ಸ್ಕೂಟರಿನಲ್ಲಿ ಎರಡೆರಡು ಸಲ ನಿಧಾನವಾಗಿ ಹೋಗಿ ಬಂದದ್ದಾಯಿತು. ಎಕ್ಸರೇ ಕಣ್ಣುಗಳಿಂದರಸ್ತೆಯನ್ನು ಸ್ಕ್ಯಾನ್ ಮಾಡಿದ್ದೂ ಆಯಿತು.ಮಣ್ಣು, ಕಲ್ಲು, ಗಲೀಜು, ಎಲೆ ತಿಂದು ಉಗುಳಿದ ಕೆಂಪು ಚಿತ್ತಾರ, ಕಸ ಕಡ್ಡಿ, ಮುಂತಾದವೆಲ್ಲಾಕಂಡವೇ ಹೊರತು ಕೀಲೀಕೈನ ಸುಳಿವೇ ಇರಲಿಲ್ಲ. ಅದೇನು ಸಣ್ಣ ಚಾವಿಯಾಗಿರದೇ ನಾಲ್ಕಿಂಚು ಉದ್ದದ ಡೋರ್ ಲಾಕ್ ಆಗಿತ್ತು. ಅಲ್ಲಲ್ಲಿ ನಿಲ್ಲಿಸಿ ಅಂಗಡಿಯವರು, ಪಡ್ಡೆ ಹುಡುಗರು ಮುಂತಾದವರನ್ನು ವಿಚಾರಿಸಿದ್ದೂಆಗಿತ್ತು. ಬಿಸಿಲಿನ ಬೇಗೆ, ಹೊಟ್ಟೆ ಹಸಿವಿನ ತಾಳದಜೊತೆಗೆ ಕಳೆದು ಹೋದ ಚಾವಿಯ ಟೆನ್ಷನ್... ಕಾಕೋಳ್ ಅಂಕಲ್ ಹತ್ತಿರ ಡೋರ್ ಲಾಕ್ ತೆಗೆಯುವವನಿಗೆ ಫೋನ್ ಮಾಡಿಸಿ ಕೆಲಸದನೆಪವೊಡ್ಡಿ ನಖರಾ ತೋರಿದವನಿಗೆಡಬಲ್ ಹಣದ ಆಮಿಷ ಒಡ್ಡಿ ಒಪ್ಪಿಸಿದ್ದೆವು.

ಹಸಿವಿನಿಂದ ಹೊಟ್ಟೆಯೊಳಗಿನ ಆಮ್ಲರಸ ಥಕಥೈ ಕುಣಿಯುವ ರಭಸಕ್ಕೆ ಅವರ್ಣನೀಯ ಸಂಕಟ. ಬಿಸಿಲಿನಲ್ಲಿ ತಿರುತಿರುಗಿ ಗ್ಯಾರಂಟೀ ವರ್ಣದ ನನ್ನ ಮುಖ ಸುಟ್ಟಬದನೆಯಂತಾದರೆ ಗೌರವರ್ಣದ ಇವರ ಮುಖ ಕಳಿತ ಪಪ್ಪಾಯಿಯಂತಾಗಿತ್ತು! 'ಬರೀ ಅಲಕ್ಷ್ಯ... ಚಾವಿಯನ್ನು ಸರಿಯಾಗಿಟ್ಟುಕೊಂಡಿದ್ದರೆ ಇಷ್ಟೆಲ್ಲಾ ಪರದಾಡುವ ಪ್ರಸಂಗವೇ ಇರುತ್ತಿರಲಿಲ್ಲ...' ಹಸಿವಿನಿಂದ ಕಂಗಾಲಾಗಿಇವರ ಮೇಲೆ ಕೆಟ್ಟ ಕೋಪ ಬಂದರೂ ತೋರುವಂತಿರಲಿಲ್ಲ. ಮನದಲ್ಲೇ ಬಯ್ದಿದ್ದೆ.ಹಸಿವಿನಿಂದ ಯಜಮಾನರ ದೇಹದಲ್ಲಿನ ಸಕ್ಕರೆ ಅಂಶಕ್ಕೆ ಕುತ್ತು ಬಂದರೆ... ? ಮೊದಲೇ ಟೆನ್ಷನ್ ಆಸಾಮಿ... ಗಡಬಡಿಸಿ ‘ರೀ, ಮೊದಲು ಹತ್ತಿರದ ಹೊಟೇಲಿಗೆ ಹೋಗಿ ಒಂದಷ್ಟು ಹೊಟ್ಟೇಗೆ ಹಾಕ್ಕಂಡು ಬಪ್ಪೋ’ ಎಂದೆ. ಮೊದಲೇ ಕಳ್ಳರಿಗೆ ಪ್ರಿಯವಾದ ಏರಿಯಾ ನಮ್ಮದು. ನಮ್ಮ ಗಾಬರಿ, ಅಲ್ಲಲ್ಲಿ ನಿಂತು ವಿಚಾರಿಸಿದ್ದು... ಗಮನಿಸಿ ಚಾವಿ ದೊರೆತದುರುಳರುನಾವು ಹೋಟೆಲಿಗೆ ಹೋದಾಗ ಮನೆಗೆ ನುಗ್ಗಿ ಗುಡಿಸಿ ಗುಂಡಾಂತರ ಮಾಡಿದರೇನು ಗತಿ... ಗುಂಗಿಹುಳ ತಲೆಹೊಕ್ಕಿದ್ದೇ ತಡ ಪಕ್ಕದ ಮನೆಯವರಲ್ಲಿ ನಮ್ಮ ಮನೆಯೆಡೆಗೆ ಒಂದು ಕಣ್ಣಿಟ್ಟಿರಿ ಊಟ ಮಾಡಿ ಬರುತ್ತೇವೆ ಎಂದು ವಿನಂತಿಸಿ ಸ್ಕೂಟರ್ ಏರಿ ಸಮೀಪದ ಹೋಟೆಲ್‌ಗೆ ಹೋಗಿದ್ದಾಗಿತ್ತು. ಭುಜಕ್ಕೆ ಬ್ಯಾಗು ಜೋತುಹಾಕಿಕೊಂಡ ನಾನು ಸ್ಕೂಟರಿನಿಂದ ಇಳಿದಿದ್ದೆ. ಇವರೋ, ಸ್ಕೂಟರಿಗೆ ಸ್ಟ್ಯಾಂಡ್ ಹಾಕಿ ಅಂಡುಸೊಟ್ಟ ಮಾಡಿಕೊಂಡು ನಿಲ್ಲಿಸುವ ಹವಣಿಕೆಯಲ್ಲಿದ್ದರು. ಡೋರ್ ಲಾಕ್ ಬೀಗತೆಗೆಯುವ ಪುಣ್ಯಾತ್ಮ ಅದ್ಯಾವಾಗ ಬರುತ್ತಾನೋ... ಬೀಗದ ಅಚ್ಚು ತೆಗೆದು ಡೂಪ್ಲಿಕೇಟ್ ಮಾಡಿಕೊಂಡು ಬಂದು ಬಾಗಿಲು ತೆಗೆಯಲು ಸಂಜೆಯಾಗುತ್ತದೋ ಏನೋ...ಮೂತ್ರಬಾಧೆ ನೀಗಿಸಿಕೊಳ್ಳುವುದು ಹೇಗೆ...ಯೋಚನೆಯಿಂದ ಹೈರಾಣಾಗಿ ‘ರೀ..., ಇನ್ನೊಂದ್ಸಲ ಸರಿಯಾಗಿ ಹುಡುಕ್ರಿ...’ ಸ್ಕೂಟರ್ ಸ್ಟ್ಯಾಂಡ್ ಹಾಕುತ್ತಿದ್ದವರ ಎಡ ಅಂಡಿಗೆ ಮೆಲ್ಲನೆ ಹೊಡೆದೆ ಅಷ್ಟೇ, ಕೈಗೇನೋ ತಗುಲಿತು. ಥಟ್ಟನೆ ‘ರೀ, ಚಾವಿ ಅನ್ನಿಸ್ತು ನೋಡ್ರಿ...’ ಉತ್ಸಾಹದಿಂದ ಚೀರಿದ್ದೆ. ಸ್ಟ್ಯಾಂಡ್ ಹಾಕಿದ ಮಹಾರಾಯರು ಎಡಗೈಯಿಂದಪ್ಯಾಂಟಿನ ಎಡ ಅಂಡಿನಜೋಬಲ್ಲಿ ಕೈಹಾಕಿ ಇಷ್ಟುದ್ದ ಚಾವಿಯನ್ನು ಹೊರತೆಗೆದಿದ್ದರು! ಸಂತಸ, ಸಿಟ್ಟು, ಅಳು ಒಟ್ಟೊಟ್ಟಿಗೇ ಮೇಳೈಸಿತ್ತು. ‘ರೀ, ಅದ್ ಎಂತಾ ನಮೂನಿ ಹುಡುಕಿದ್ರಿ... ಸರಿಯಾಗಿ ಹುಡುಕೂಲೂ ಬತ್ತಿಲ್ಯಾ? ಖಾಲಿ ಪುಕ್ಕಟ್ಟೆ ಒಂದ್ ತಾಸು ಬಿಸಿಲಲ್ಲಿ ಅಲ್ದು ಸುಮ್ ಸುಮ್ನೇ ಹೈರಾಣಾದ್ವಲ್ರಿ...’

‘ಥೋ ... ನಂಗೆಂತಕ್ಕೆ ಆವಾಗ್ ಸಿಕ್ಕಿದ್ದಿಲ್ಲೆ ಅದು? ಎಷ್ಟು ಆಟ ಆಡಿಸ್ಬಿಡ್ತು...ನನ್ ಮಗಂದು’ ಕೀಲಿಕೈ ಮೇಲೇ ಗೂಬೆ ಕೂಡಿಸಿದರು. ಅವರು ಹುಡುಕಿದ್ದು ಹೇಗೆಂದರೆ ಬಲಗೈಯ್ಯಿಂದ ಎಲ್ಲ ಜೇಬುಗಳನ್ನೂ ತಡಕಿ ನಂತರ ಎಡಗೈಯಿಂದ ಪ್ಯಾಂಟಿನ ಸೈಡ್ ಜೇಬು ಮಾತ್ರ ನೋಡಿದ್ದರು. ಹಿಂದಿನ ಜೇಬು ನೋಡಿರಲೇ ಇಲ್ಲ. ನನ್ನ ಪ್ರಶ್ನೆ ಏನೆಂದರೆ ಸ್ಕೂಟರ್‌ನಲ್ಲಿ ಕುಳಿತಾಗ ಅವರಿಗೆ ಅದು ಚುಚ್ಚಲಿಲ್ಲವೇ... ಅಷ್ಟು ದೊಡ್ಡ ವಸ್ತು ಅಲ್ಲಿದ್ದದ್ದು ಗೊತ್ತಾಗಲಿಲ್ಲ ಹೇಗೆ? ಮನೆಗೆ ಹಿಂದಿರುಗಿ ಊಟವಾದ ನಂತರ ಅಕ್ಕಪಕ್ಕದವರೊಟ್ಟಿಗೆ ಅವರನ್ನು ಗೇಲಿ ಮಾಡಿ ನಕ್ಕಿದ್ದೆವು. ಮೊದಲ ಸಲ ಅವರೂ ನಮ್ಮೊಟ್ಟಿಗೆ ಮನಸಾರೆ ನಕ್ಕಿದ್ದರು. ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲಾ ಹುಡುಕುವ ಇಂತಹ ಅಸಂಖ್ಯ ಸಂದರ್ಭಗಳು ಮರೆಗುಳಿರಾಯರನ್ನು ಕಟ್ಟಿಕೊಂಡ ನನ್ನ ಜೀವನದಲ್ಲಿ ಆಗಾಗ ಘಟಿಸುತ್ತಿರುತ್ತವೆ. ತಾಳಿ... ತಾಳಿ, ಇದು ಮರೆವಲ್ಲ ಅತ್ತೆಯವರ ಪ್ರಕಾರ ಅಲಕ್ಷ್ಯವಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT