ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮೋ’ ವೆಂಕಟೇಶಾ...

Last Updated 29 ಡಿಸೆಂಬರ್ 2018, 4:27 IST
ಅಕ್ಷರ ಗಾತ್ರ

ಮುರಳಿ ಟಾಕೀಸ್‌ನಿಂದ ‘ನಮೋ ವೆಂಕಟೇಶಾ.. ನಮೋ ತಿರುಮಲೇಶಾ... ಮಹಾನಂದಮಾಯೇ...’ ಹಾಡು ಕೇಳಿ ಬರುತ್ತಿದ್ದಂತೆ, ಸಿನಿಮಾ ಶುರು ಆಗುವುದರೊಳಗ್‌ ಟಾಕೀಸ್‌ ತಲುಪಬೇಕು ಅಂತ ಅವ್ಸರದಿಂದಲೆ ಹೊರಟಿದ್ದೆ. ದಾರಿಗೆ ಬೆಕ್‌ ಅಡ್ಡ ಬಂದ್ಹಂಗ್‌ ಪ್ರಭ್ಯಾನ ಬೈಕ್‌ ಅಡ್ಡ ಬಂತು. ಗಕ್ಕನೆ ಬ್ರೇಕ್‌ ಹಾಕಿದಂವ, ‘ಸವಾರಿ ಎಲ್ಲಿಗೋ ಹೊಂಟೈತಲ್ಲ’ ಅಂದ.

ಈ ಅಡ್ಡ ಕಸಬಿ ಅಡ್ಡಬಾಯಿ ಹಾಕಿದ್ನಲ್ಲ, ಇನ್ನ ಸಿನಿಮಾ ನೋಡಿದ್ಹಂಗ್‌ ಅಂತ ಮನಸ್‌ನ್ಯಾಗ್‌ ಬೈಕೊಂಡು, ‘ಸಿನಿಮಾ ನೋಡಾಕ್ ಹೊಂಟೀನಿ. ಬರ್ತಿದ್ರ ಜಲ್ದಿ ಹೇಳ್‌. ಇಲ್ಲಂದ್ರ ಜಾಗಾ ಖಾಲಿ ಮಾಡ್‌’ ಎಂದೆ.

‘ಸಿನಿಮಾ ನಾಳೆ ನೋಡಿದ್ರಾತ್‌. ಇವತ್‌ ಶನಿವಾರ. ಹನಮಪ್ಪನ ಗುಡಿಗಿ ಹೊಂಟೀನಿ. ಹಂಗs ಗಡಂಗಿಗೆ ಹೋಗುದೈತಿ. ಬರತಿದ್ರ ಬಾ’ ಅಂತ ಆಸೆ ತೋರ್ಸಿದ. ಗಡಂಗು ಶಬ್ದ ಕಿವಿಗೆ ಬೀಳುತ್ತಿದ್ದಂತೆ ದಾರು ವಾಸನೆ ಬಡಿದಂಗಾಗಿ ಸಿನಿಮಾ ನೋಡುದಕ್ಕ ಕಲ್‌ ಹಾಕಿ ಬೈಕ್‌ ಏರಿದೆ.

ಕಿಲ್ಲಾದೊಳಗಿನ ಹಳೆ ಹನುಮಪ್ಪನ ಗುಡಿ ಕಡೆ ಪ್ರಭ್ಯಾ ಫಟಫಟಿ ನುಗ್ಗಿಸಿದ.

‘ನಾ ಇಲ್ಲೇ ಹೊರಗ್‌ ನಿನ್ನ ಚಪ್ಲಿ ಕಾಯ್ಕೊಂತ ನಿಂತಿರ್‌ತೀನಿ, ನೀ ದೇವ್ರ ದರ್ಶನಾ ಮಾಡ್ಕೊಂಡ್‌ ಬಾ’ ಎಂದೆ.

‘ಗುಡಿ ತನ್ಕಾ ಬಂದಿ ಮಗ್ನ. ಒಳಗ್ ಬರಾಕ್‌ ಏನ್‌ ಧಾಡಿ’ ಅಂತ ಹೇಳುತ್ತಲೇ ನನ್ನನ್ನ ದರ ದರ ಎಳಕೊಂಡೆ ಒಳಗ್‌ ಹೋದ.

ಗರ್ಭಗುಡಿ ಒಳಗಿನ ಹನಮಪ್ಪನ ಉಬ್ಬಿದ ಮುಖ ನೋಡಿ ನನಗs ಗೊತ್ತಿಲ್ಲದ್ಹಂಗ್‌, ‘ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ.. ಆಕಾರವೇನೊ...’ ಎಂದು ಹಾಡು ಗುನುಗುನಿಸತೊಡಗಿದೆ.

‘ಎಲಾ ಇವ್ನ. ಇದೇನೋ. ನಾಸ್ತಿಕನ ಬಾಯಲ್ಲಿ ಹನಮಪ್ಪನ ಗುಣಗಾನ’ ಎಂದು ಪ್ರಶ್ನಿಸಿದ.

‘ಹ್ಞೂನಪಾ. ನಿಮ್ಮ ಹನಮಪ್ಪಗ ಒದಗಿರೊ ಗತಿ ನೋಡಿಹಾಡ್‌ ನೆನಪಾತು. ಅಂವಾ ಆದಿವಾಸಿ, ದಲಿತ ಅಂತ ಯೋಗಿ ಹೇಳ್ತಾನ್‌. ಭಾಜಪ ಎಂಎಲ್‌ಎನೊಬ್ಬ ಹನಮಪ್ಪ ಮುಸ್ಲಿಂ ಅಂತಾನ. ಜಾಟ್‌ ಜಾತಿಯಂವ ಅಂತ ಮಂತ್ರಿ ಹೇಳ್ತಾನ. ಅಂವಾ ಕ್ರೀಡಾಪಟು ಅಂತ ಮಗದೊಬ್ಬ ಹೇಳ್ತಾನ್‌. ಕಲಿಗಾಲ್‌ದಾಗ್‌ ಇಂಥಾದನ್ನೆಲ್ಲ ಕೇಳೂದು ಬರ್ತದ ಅಂತನs ಹನುಮಪ್ಪ ಅವಾಗ್ಲೆ ಮುಖ ಉಬ್ಬಿಸಿಕೊಂಡು ನಿಂತಾನ್‌ ಅಂತ ಅನಸ್ತದ.

‘ಹನಮಪ್ಪನ ಬಹುರೂಪ; ದಲಿತ, ಮುಸ್ಲಿಂ, ಜಾಟ್‌ ಮತ್ತು ಕ್ರೀಡಾಪಟು– ಒಂದು ಅಧ್ಯಯನ. ಯೋಗಿ ಮಾರ್ಗದರ್ಶನದಾಗ್‌ ಪಿಎಚ್‌.ಡಿ ಕಾರ್ಯಕ್ರಮ ಹಮ್ಮಿಕೊಂಡರೆ ಹನಮಪ್ಪ ಮತ್ತs ಭಾಜಪದ ಬೂತ್‌ಮಟ್ಟದ ಕಾರ್ಯಕರ್ತರ ಸಂಖ್ಯೆ ಇನ್ನೂ ಹೆಚ್ಚತದ ನೋಡ್‌’ ಅಂತ ಕಿಚಾಯಿಸಿದೆ.

‘ಮೊನ್ನೆ, ‘ನಮೋ’ ಆ್ಯಪ್‌ ಮೂಲಕ ಪಕ್ಷದ ತಮಿಳುನಾಡು ಕಾರ್ಯಕರ್ತರ ಜತೆ ಮಾತುಕತೆ ನಡೆಸುವಾಗ ತೂರಿಬಂದ ಪ್ರಶ್ನೆಗೆ ಉತ್ರಾ ಕೊಡಾಕ್‌ ‘ನಮೋ’ ಬೆಬ್ಬೆಬ್ಬೆ ಅಂದ್ರಂತ್‌. ಅದ್ನ ನೋಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಮೋ, ನಮೋ ಆಗೈದಂತಲ್ಲ’ ಎಂದು ಕಾಲೆಳೆದೆ.

‘ಹುಚ್‌ ನನ್ನ ಮಗ್ನ, ಹುಚ್ಚುಚ್ಚಾರ ವ್ಯಾಪಾರಿ ಹಂಗ್‌ ಪ್ರಶ್ನೆ ಕೇಳಿದ್ರ ಯಾರ್‌ ಉತ್ರಾ ಕೊಡ್ತಾರ್‌’ ಎಂದು ಪ್ರಭ್ಯಾ ‘ನಮೋ’ ಸಮರ್ಥಿಸಿಕೊಂಡ.

‘ಅಲ್ಲಲೇ, ಮೌನಿ ಬಾಬಾ ಅಂತ ನೀವೆಲ್ಲ ಕರೀತಿದ್ದ ಮಾಜಿ ಪ್ರಧಾನಿ ‘ಮಮೋ’, ಸುದ್ದಿಗೋಷ್ಠಿಯಲ್ಲಿ ಒಂದು ಬಾರಿಯೂ ಮಾತನಾಡದ ‘ನಮೋ’ ಅವರನ್ನ ಟೀಕಿಸ್ಯಾರ್‌. ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ಮೌನಿ ಬಾಬಾ ಎಂದು ಛೇಡಿಸ್ಯಾರಲ್ಲ ಅದ್ಕ ಏನಂತಿ’ ಎಂದೆ.

ನನ್ನ ಪ್ರಶ್ನೆಗೆ ಉತ್ರಾ ಕೊಡುದನ್ನ ತಪ್ಪಿಸಿಕೊಳ್ಳಾಕ್‌, ‘ಏಯ್‌, ಸಾಕ್‌ ಮಾಡಲೇ ‘ನಮೋ’ ಪುರಾಣ. ಮುಂದಿನ ಎಲೆಕ್ಷನ್‌ದಾಗ್‌ ‘ನಮೋ’ನೊ, ‘ರಾಗಾ’ನೊ ಇಲ್ಲಾ ‘ಮಾಯಾ’ನೊ ಅಂತ ನನ್ನ ತೆಲಿ ಕೆಟ್ಟು ಕೆರಾಹಿಡದೈತಿ’ ಎಂದ.

‘ಯೋಗ ಗುರು ರಾಮ್‌ದೇವ್‌ಗೂ ಇದs ಅನುಮಾನ ಅದ ಅಂತ. ಏನೇ ತಿಪ್ಪರಲಾಗ್ ಹಾಕಿದ್ರೂ ಯಡ್ಡಿ ಸಾಹೇಬ್ರು ‘ಮುಮ’ ಆಗಾಕ್‌ ಬಿಡುದಿಲ್ಲ ಅಂತ ಸಿದ್ದಣ್ಣ ಹಸಿ ಗ್ವಾಡಿಗಿ ಹಳ್‌ ಒಗದ್‌ ಹೇಳ್ಯಾನ್‌. ನಮೋ ಮತ್ತೊಮ್ಮೆ ಪಿಎಂ ಆಗು ಚಾನ್ಸ್‌ ಎಷ್ಟ್‌ ಅದಪಾ. ಚಾಣಕ್ಯನ ವಿರುದ್ಧ ಗಡ್ಕರಿ ಗುಟುರು ಹಾಕಿರೋದು ನೋಡಿದ್ರ ಪರಿವಾರದಾಗೂ ಎಲ್ಲಾ ಸರಿ ಇದ್ಹಂಗ್ ಕಾಣ್ಸಾಕತ್ತಿಲ್ಲ. ಯಾವ ಯೋಗಾಸನ ಹಾಕಿದ್ರ ಮತ್ತ ಪಿಎಂ ಆಗಬಹುದು ಅಂತ ನಮೋ, ಯೋಗ ಗುರು ಹತ್ರ ಪಾಠಾ ಹೇಳಿಸಿಕೊಳ್ಳಬಹುದಲ್ಲ’ ಎಂದೆ.

ನನ್ನ ಮಾತಿನ ಅರ್ಥಾ ಗುರುತಿಸಿದ ಪ್ರಭ್ಯಾ, ಮಾತ್‌ ಬದಲಿಸಿದ. ‘ಸಮ್ಮಿಶ್ರ ಸರ್ಕಾರದಾಗರs ಎಲ್ಲಿ ಎಲ್ಲಾ ಸರಿ ಅದ. ಹದಿನೈದ್‌ ದಿನದಾಗ್‌ ಸರ್ಕಾರ ಬೀಳತೈತಿ ಅಂತ ಕತ್ತಿನೂ ಭವಿಷ್ಯ ಹೇಳು ಕಾಲ ಬಂದೈತಿ’ ಅಂದ.

‘ಬರ್ತಾ ಬರ್ತಾ ರಾಯರ ಕುದುರಿ ಕತ್ತಿ ಆದ್ಹಂಗ್‌, ಸಮ್ಮಿಶ್ರ ಸರ್ಕಾರದ ಪುಢಾರಿಗಳು ಹೀಂಗ್‌ ತಮ್ಮೊಳಗs ಜಗಳಾ ಆಡ್ಕೊತ್ತಿದ್ರ ಸರ್ಕಾರ ಬಿದ್ರೂ ಆಶ್ಚರ್ಯ ಇಲ್ಲ ಬಿಡು’ ಎಂದೆ.

‘ಹೌದಾ, ಹಂಗಂತೀಯಾ’ ಅಂತ ಹೇಳುತ್ತಲೇ ಹುರುಪಿನಿಂದಲೇ ಗರ್ಭಗುಡಿ ಪ್ರದಕ್ಷಿಣೆ ಪೂರ್ಣಗೊಳಿಸಿದ ಪ್ರಭ್ಯಾ, ‘ಹನುಮನ ನೋಡಿದೀರಾ, ನಮ್ಮ ಹನುಮನ ನೋಡಿದೀರಾ... ಅವನ ಸಾಹಸ ಕೇಳಿದೀರಾ.. ಎಂದು ಹಾಡು ಗುನುಗುನಿಸುತ್ತ ಗುಡಿಯಿಂದ ಹೊರ ಬಂದ. ದಾರು ಅಂಗಡಿಯ ಗುಂಗಿನ್ಯಾಗs ಇದ್ದ ನಾನು, ಬೈಕ್‌ ಗಡಂಗಿನ ಕಡೆ ಹೋಗುವ ಖುಷ್ಯಾಗ್‌ ಪ್ರಭ್ಯಾನ ಬೆನ್ನ ಚೆಪ್ಪರಿಸಿ ‘ಬಿಡುಗಾಡಿ’ ಎಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT