ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನ್ಸುರಿ ವಾದಕ ಪಂ. ರಾಕೇಶ್‌ ಚೌರಾಸಿಯ ಸಂದರ್ಶನ

Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ
ಬಾನ್ಸುರಿಯ ಮೇರು ಶಿಖರ ಪಂ. ಹರಿಪ್ರಸಾದ್‌ ಚೌರಾಸಿಯ ಅವರ ಗರಡಿಯಲ್ಲಿ ಪಳಗಿರುವ ರಾಕೇಶ್‌ ಚೌರಾಸಿಯ ಬಾಲ ಪ್ರತಿಭೆ. ಬಾನ್ಸುರಿಯಲ್ಲಿ ಸ್ವರ, ತಾಳ, ಲಯ ಮಾಧುರ್ಯವನ್ನು ಹದವರಿತಂತೆ ಮೂಡಿಸುತ್ತಾ ಭಾವದಲೆಯನ್ನು ಶ್ರವಣಾನಂದಕರವಾಗಿ ಪ್ರಸ್ತುತಪಡಿಸುವ ಪರಿ ಅನನ್ಯ. ಅವರು ತಮ್ಮ ಸಂಗೀತ ಯಾನದ ಅನುಭವಗಳನ್ನು ಹಂಚಿಕೊಂಡರು...

ಬಾನ್ಸುರಿ ಮಾಂತ್ರಿಕ ಪಂ. ಹರಿಪ್ರಸಾದ್‌ ಚೌರಾಸಿಯ ಅವರು ನಿಮ್ಮ ಸಮೀಪದ ಬಂಧು. ಅವರಿಂದಲೇ ಬಾನ್ಸುರಿ ನುಡಿಸಾಣಿಕೆ ಕಲಿತಿರುವ ನೀವು, ಅವರ ವಾದನ ಕ್ರಮವನ್ನು ಹೇಗೆ ಮೈಗೂಡಿಸಿಕೊಂಡಿದ್ದೀರಿ?

ಪಂ. ಹರಿಪ್ರಸಾದ್ ಚೌರಾಸಿಯ ಅವರ ಬಳಿ ನಾನು ಚಿಕ್ಕ ಮಗು ಇರುವಾಗಲೇ ಬಾನ್ಸುರಿ ಕಲಿಯಲಾರಂಭಿಸಿದೆ. ಅವರನ್ನು ನಾನು ‘ಬಾಬೂಜಿ’ ಎಂದೇ ಕರೆಯುವುದು. ಅವರಿಂದ ವಾದ್ಯ ಕಲಿಯಲಾರಂಭಿಸಿದ್ದೇ ರೋಚಕ ಅನುಭವ. ಅವರು ಸದಾ ಕಛೇರಿ, ಪ್ರಯಾಣದಲ್ಲೇ ಬ್ಯುಸಿ ಇರುತ್ತಿದ್ದರು. ಅವರು ಮನೆಯಲ್ಲಿದ್ದಾಗ ನುಡಿಸಾಣಿಕೆಯ ವಿಧಾನ, ಬೆರಳಿನ ತಂತ್ರಗಾರಿಕೆ, ಲಯದೊಂದಿಗೆ ಹೊಂದಾಣಿಕೆ, ಗಮಕಗಳ ಪ್ರಯೋಗ ಮುಂತಾದವುಗಳನ್ನು ಕಲಿತೆ. ಅವರ ನುಡಿಸಾಣಿಕೆ ವಿಧಾನವನ್ನು ನೋಡುತ್ತಲೇ, ಕೇಳುತ್ತಲೇ ಬಹಳಷ್ಟು ಕಲಿತೆ. ಆರನೇ ವಯಸ್ಸಿಗೇ ದೂರದರ್ಶನದಲ್ಲಿ ನುಡಿಸಿದೆ, ಒಂಬತ್ತನೇ ವಯಸ್ಸಿನಲ್ಲಿ ಮುಂಬೈಯ ಜೇವಿಯಸ್‌ ಶಾಲೆಯಲ್ಲಿ ಮೊದಲ ಸಾರ್ವಜನಿಕ ಕಛೇರಿ ನೀಡಿದೆ. ಮೊದಲ ಕಛೇರಿಯಲ್ಲಿ ರಾಗ ‘ಭಾಗೇಶ್ರೀ’ ಹಾಗೂ ‘ಯಮನ್‌’ ಅನ್ನು ನುಡಿಸಿದೆ. ಇದು ಬಾಬೂಜಿ ಅವರಿಗೆ ಬಹಳ ಖುಷಿ ಕೊಟ್ಟಿತು. ನನ್ನ ಹದಿಮೂರನೇ ವಯಸ್ಸಿನಲ್ಲಿ ರಷ್ಯಾದಲ್ಲಿ ಬಾಬೂಜಿ ಜೊತೆ ಸೇರಿ ಬಾನ್ಸುರಿ ನುಡಿಸಿದ್ದು ಇನ್ನು ನೆನಪಿನಾಳದಲ್ಲಿ ಹಾಗೆಯೇ ಇದೆ.


ಹಿಂದೆ ಬರೀ ಸಾಥಿ ವಾದ್ಯವಾಗಿದ್ದ ಬಾನ್ಸುರಿ ಕ್ರಮೇಣ ಸೋಲೊ ವಾದ್ಯವಾಗಿಯೇ ಖ್ಯಾತಿ ಗಳಿಸಿತು. ಇದರಿಂದಾಗಿ ಜುಗಲ್‌ಬಂದಿ ಪರಿಕಲ್ಪನೆ ಗರಿಗೆದರಿತು. ನಿಮ್ಮ ಜುಗಲ್‌ಬಂದಿ ಕಛೇರಿಗಳಲ್ಲಿ ವಾದ್ಯದ ಹೊಂದಾಣಿಕೆ ಹೇಗೆ ಮಾಡಿಕೊಳ್ಳುತ್ತೀರಿ?

ಹಿಂದೂಸ್ತಾನಿ– ಕರ್ನಾಟಕ ಸಂಗೀತ ಕಛೇರಿ ನೀಡುವಾಗ ಎರಡೂ ಪ್ರಕಾರಗಳಲ್ಲಿ ಸಾಮಾನ್ಯ ಇರುವ ರಾಗಗಳ ಆಯ್ಕೆ ಮಾಡಿಕೊಳ್ಳುತ್ತೇವೆ. ಹಿಂದೂಸ್ತಾನಿಯ ಭೂಪಾಲಿ, ಕರ್ನಾಟಕ ಸಂಗೀತದ ಮೋಹನ, ಯಮನ್‌ ರಾಗ ಕಲ್ಯಾಣಿಗೆ ಸಮನಾದುದು.. ಹೀಗೆ ಅನೇಕ ರಾಗಗಳು ಎರಡೂ ಪ್ರಕಾರಗಳಲ್ಲಿವೆ. ನುಡಿಸುವ ಶೈಲಿ ಮಾತ್ರ ಬೇರೆ ಬೇರೆ. ರಾಗ–ಲಯ ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಾ ಕೇಳುಗರಿಗೆ ಹೊಸ ಅನುಭವ ಆಗುವಂತೆ ಮಾಡುವುದು ಮುಖ್ಯ. ಬಾನ್ಸುರಿ ಜೊತೆಗೆ ಸಂತೂರ್‌, ಸಿತಾರ್‌, ತಬಲಾ ವಾದ್ಯಗಳ ಜೊತೆ ಜುಗಲ್‌ಬಂದಿ ನುಡಿಸಿದ್ದೇನೆ. ಘಟಾನುಘಟಿ ಗಾಯಕರ ಜೊತೆಗೂ ಗಾಯನ–ವಾದನ ಜುಗಲ್‌ಬಂದಿ ನಡೆಸಿಕೊಟ್ಟಿದ್ದೇನೆ. ಇತ್ತೀಚೆಗೆ ಉಸ್ತಾದ್‌ ಜಾಕೀರ್ ಹುಸೇನ್‌ ಅವರೊಂದಿಗೆ ಜುಗಲ್‌ಬಂದಿಯ ಹೊಸ ಆಲ್ಬಂ ‘As we speak’ ಅನ್ನು ಹೊರತಂದಿದ್ದೇವೆ.

ಬಾನ್ಸುರಿಯಲ್ಲಿ ಮೀಂಡ್‌, ಗಮಕ, ಮನೋಧರ್ಮ ಪ್ರಯೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತವೆ. ನಿಮ್ಮ ನುಡಿಸಾಣಿಕೆಯ ಶೈಲಿಯನ್ನು ವಿವರಿಸುವುದಾದರೆ...

ಬಾನ್ಸುರಿಯಲ್ಲಿ ನನ್ನ ಗುರು ಹರಿಪ್ರಸಾದ್‌ ಚೌರಾಸಿಯ ಅವರು ಎಲ್ಲವನ್ನೂ ಕ್ರಮಬದ್ಧಗೊಳಿಸಿದ್ದಾರೆ. ರಾಗ, ನುಡಿಸಾಣಿಕೆ ಕ್ರಮ, ಗಮಕಗಳ ಪ್ರಯೋಗಗಳನ್ನು ಮಾಡುವ ಬಗೆಯನ್ನು ಹೇಳಿಕೊಟ್ಟಿದ್ದಾರೆ. ಈಗ ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ಮೀಂಡ್‌, ವಿಬ್ರಟೊಗಳನ್ನು ನಾವು ಪ್ರಯೋಗಿಸಿಕೊಳ್ಳುತ್ತಿದ್ದೇವೆ, ಕೇಳುಗನಿಗೆ ವಿಶಿಷ್ಟ ಅನುಭೂತಿ ಮೂಡಿಸಿ ನಾದಮಾಧುರ್ಯದಿಂದ ಸಮ್ಮೋಹನಗೊಳಿಸಲು ಈ ಎಲ್ಲ ಅಂಶಗಳನ್ನು ಅಗತ್ಯವಾಗಿ ನುಡಿಸಾಣಿಕೆಯಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.

ನಿಮ್ಮ ಫ್ಯೂಷನ್‌ ಸಂಗೀತದ ಬಗ್ಗೆ ಹೇಳಿ?

ಒಂದೇ ಬಗೆಯ ಸಂಗೀತ ಕೇಳುಗರಿಗೆ ನೀಡುವುದಕ್ಕಿಂತ ಬೇರೆ ಪ್ರಕಾರಗಳತ್ತಲೂ ಗಮನಹರಿಸುವುದು ಕಲಾವಿದನಿಗೆ ಸವಾಲೇ ಹೌದು. ಆದರೆ ಶಾಸ್ತ್ರೀಯ ಸಂಗೀತ ಭದ್ರ ಬುನಾದಿ ಇದ್ದರೆ ಬೇರೆ ಯಾವ ಪ್ರಕಾರಗಳನ್ನೂ ಸುಲಭವಾಗಿ ಒಲಿಸಿಕೊಳ್ಳಬಹುದು. ಜಾಗತಿಕ ನೆಲೆಯಲ್ಲಿ ಸಂಗೀತವನ್ನು ನೋಡಿದರೆ ಫ್ಯೂಷನ್ ಸಂಗೀತ ಎಲ್ಲ ವಯೋಮಾನದವರಿಗೆ ಇಷ್ಟವಾಗುತ್ತದೆ. ಹೀಗಾಗಿ ‘ರಾಕೇಶ್‌ ಅಂಡ್‌ ಫ್ರೆಂಡ್ಸ್‌’ ಹೆಸರಿನಲ್ಲಿ ಫ್ಯೂಷನ್‌ ಬ್ಯಾಂಡ್‌ ಕಟ್ಟಿ ಹಲವು ದೇಶಿ–ವಿದೇಶಿ ಕಲಾವಿದರೊಂದಿಗೆ ಫ್ಯೂಷನ್‌ ಸಂಗೀತ ನಡೆಸಿಕೊಡುತ್ತಿದ್ದೇನೆ. ಇದರೊಂದಿಗೆ ಬಾಲಿವುಡ್‌ ಸಂಗೀತ ನಿರ್ದೇಶಕರೊಂದಿಗೆ ಸಹ ಕೆಲಸ ಮಾಡಿದ್ದೇನೆ. ಹಲವು ಸಿನಿಮಾಗಳಿಗೆ ಹಿನ್ನೆಲೆ ಸಂಗೀತವನ್ನೂ ನೀಡಿದ್ದೇನೆ. ನನ್ನ ಮಗ ರಿತಿಕ್‌ ಚೌರಾಸಿಯ ಕೂಡ ನನ್ನೊಂದಿಗೆ ಬಾನ್ಸುರಿ ನುಡಿಸುತ್ತಿದ್ದು, ಎಲ್ಲ ಪ್ರಕಾರಗಳತ್ತಲೂ ಆಸಕ್ತನಾಗಿದ್ದಾನೆ. ಮುಂಬೈಯಲ್ಲಿರುವ ‘ಬೃಂದಾವನ’ ಎಂಬ ಬಾಬೂಜಿ ಅವರ ಗುರುಕುಲದಲ್ಲೂ ಶಾಸ್ತ್ರೀಯ, ಫ್ಯೂಷನ್‌ ಸಂಗೀತ ಕಲಿಯುತ್ತಿದ್ದಾನೆ. ನಾನೂ ಹಲವು ಮಕ್ಕಳಿಗೆ ಅಲ್ಲಿ ಬಾನ್ಸುರಿ ಕಲಿಸುತ್ತಿದ್ದೇನೆ.‌  

ಡಿ. 10ಕ್ಕೆ ಜುಗಲ್‌ಬಂದಿ
ಬೆಂಗಳೂರಿನ ವಿವಿಢ್‌ ಆರ್ಟ್ಸ್‌ ಸಾಂಸ್ಕೃತಿಕ ಸಂಘಟನೆ ಡಿ. 10ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ‘ಉತ್ತರ–ದಕ್ಷಿಣ ಜುಗಲ್‌ಬಂದಿ’ ಕಛೇರಿ ಆಯೋಜಿಸಿದೆ. ಬಾನ್ಸುರಿ ವಾದಕರಾದ ಪಂ. ರಾಕೇಶ್‌ ಚೌರಾಸಿಯ ಹಾಗೂ ಕೊಳಲು ವಾದಕ ವಿದ್ವಾನ್‌ ಶಶಾಂಕ್‌ ಸುಬ್ರಹ್ಮಣ್ಯ ಅವರಿಂದ ಹಿಂದೂಸ್ತಾನಿ–ಕರ್ನಾಟಕ ಶಾಸ್ತ್ರೀಯ ವೇಣುವಾದನ ಕೇಳುಗರನ್ನು ಸಮ್ಮೋಹನಗೊಳಿಸಲಿದೆ. ಸಂಜೆ 6,30ರಿಂದ ಕಛೇರಿ ಆರಂಭ. ಪ್ರವೇಶ ಶುಲ್ಕವಿದೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT