ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದದಲೆಗಾಗಿ ನೊಂದವರ ಸೊಲ್ಲು

Published 20 ಮೇ 2023, 23:37 IST
Last Updated 20 ಮೇ 2023, 23:37 IST
ಅಕ್ಷರ ಗಾತ್ರ

ನಿರ್ವಹಣೆ: ಉಮಾ ಅನಂತ್

ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಮವೇದ ಕಾಲದಿಂದಲೂ ಅಸ್ಮಿತೆ ಕಾಪಾಡಿಕೊಂಡು ಬಂದಿದೆ. ವಾಗ್ಗೇಯಕಾರರು, ಘನ ವಿದ್ವಾಂಸರು ಈ ಸಾಂಪ್ರದಾಯಿಕ ಸಂಗೀತಕ್ಕೆ ಹೆಚ್ಚಿನ ಗಮನಕೊಟ್ಟು ಪೊರೆಯುತ್ತಾ ಬಂದಿದ್ದಾರೆ. ಲಯಬದ್ಧ, ಶಾಸ್ತ್ರಸಮ್ಮತ ಸಂಗೀತ ಕಛೇರಿಗಳು ಕಾಲಾಂತರದಲ್ಲಿ ವಿಶ್ವಮಟ್ಟದಲ್ಲೂ ಛಾಪು ಮೂಡಿಸಿದವು.

ಇಂದಿಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಶಿಷ್ಟ ಶೈಲಿಯಿಂದ ಕೇಳುಗರನ್ನು ಸೆಳೆಯುತ್ತಿದೆ. ಆದರೂ ಪ್ರತಿಷ್ಠಿತ ಉತ್ಸವಗಳಲ್ಲಿ, ವೇದಿಕೆಗಳಲ್ಲಿ ಕಲಾವಿದರಿಗೆ ಅವಕಾಶ ಮರೀಚಿಕೆಯಾಗುತ್ತಿದೆ ಎನ್ನುವ ಸೊಲ್ಲು ಎದ್ದಿದೆ. ಸರ್ಕಾರಿ ಉತ್ಸವಗಳಲ್ಲಿ ಹೊರನಾಡಿನ ಕಲಾವಿದರಿಗೆ ಅಧಿಕ ಸಂಭಾವನೆ ನೀಡಿ ಅವಕಾಶ ಕಲ್ಪಿಸಿಕೊಡುತ್ತಿರುವುದು, ಕರ್ನಾಟಕ ಸಂಗೀತವನ್ನು ನಿರ್ಲಕ್ಷಿಸುವುದಕ್ಕೆ ಇಲ್ಲಿನ ಕಲಾವಿದರಿಗೆ ಸಹಜವಾಗಿಯೇ ಅಸಮಾಧಾನವಿದೆ.

ಹಿರಿಯ ಕರ್ನಾಟಕ ಸಂಗೀತ ಕಲಾವಿದರೆಲ್ಲ ಒಟ್ಟಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ ಟ್ರಸ್ಟ್) ಅನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿ ಈಚೆಗೆ ಸಭೆ ನಡೆಸಿದರು. ಟ್ರಸ್ಟ್‌ನ ಮೊದಲ ಸಭೆ ಇದು. ಕಲಾವಿದರಾದ ಸುಮಾ ಸುಧೀಂದ್ರ, ನಾಗಮಣಿ ಶ್ರೀನಾಥ್, ಆರ್.ಎಸ್. ನಂದಕುಮಾರ್, ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಪ್ರಶಾಂತ್ ಅಯ್ಯಂಗಾರ್, ವಸಂತ ಮಾಧವಿ, ಟಿ.ಎಸ್. ಸತ್ಯವತಿ, ಎಂ.ಎಸ್‌. ಶೀಲಾ, ಜ್ಯೋತ್ಸ್ನಾ ಶ್ರೀಕಾಂತ್, ಪಿ. ರಮಾ ಸೇರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖರು ಇಲ್ಲಿ ಬಹು ಮುಖ್ಯ ಚರ್ಚೆ ನಡೆಸಿ, ನಿರ್ಣಯಗಳನ್ನು ಕೈಗೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಪಡೆದು ನಡೆಸುವ ಸಂಗೀತ ಕಛೇರಿಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಿಗೆ ಶೇ 80ರಷ್ಟು ಅವಕಾಶ ನೀಡಬೇಕು, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವಕಾಶ ನೀಡಬೇಕು, ಪ್ರಶಸ್ತಿಗಳಿಗೂ ಪರಿಗಣಿಸಬೇಕು, ಸ್ವಜನ ಪಕ್ಷಪಾತವನ್ನು ತಡೆಯಬೇಕು, ಆಕಾಶವಾಣಿಯಲ್ಲಿ ನಡೆಯುವ ಧ್ವನಿ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕು. ಈ ಬಗ್ಗೆ ನವದೆಹಲಿಯ ಕೇಂದ್ರಕ್ಕೂ ಪತ್ರ ಬರೆಯಬೇಕು ಎಂಬುದು ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು. ಕರ್ನಾಟಕ ಶಾಸ್ತ್ರೀಯ ಸಂಗೀತಗಾರರ ಈ ಹೊತ್ತಿನ ಒಳದನಿ ಏನು ಎನ್ನುವುದರನ್ನು ಅರಿಯಲು ’ಭಾನುವಾರದ ಪುರವಣಿ‘ ಕೆಲವರನ್ನು ಮಾತಿಗೆಳೆಯಿತು. ಅದರ ಸಾರ ಇಲ್ಲಿದೆ.

ನಾಗಮಣಿ ಶ್ರೀನಾಥ್
ನಾಗಮಣಿ ಶ್ರೀನಾಥ್
ಪ್ರಶಾಂತ್ ಅಯ್ಯಂಗಾರ್
ಪ್ರಶಾಂತ್ ಅಯ್ಯಂಗಾರ್
ಆನೂರು ಅನಂತಕೃಷ್ಣ ಶರ್ಮ
ಆನೂರು ಅನಂತಕೃಷ್ಣ ಶರ್ಮ
ಎಂ.ಎಸ್‌. ಶೀಲಾ
ಎಂ.ಎಸ್‌. ಶೀಲಾ
ಜ್ಯೋತ್ಸ್ನಾ ಶ್ರೀಕಾಂತ್
ಜ್ಯೋತ್ಸ್ನಾ ಶ್ರೀಕಾಂತ್

ನಿರ್ಲಕ್ಷ್ಯ ಬೇಡ; ಅವಕಾಶ ಕೊಡಿ: ನಾಗಮಣಿ ಶ್ರೀನಾಥ್ (ಟ್ರಸ್ಟ್‌ನ ಉಪಾಧ್ಯಕ್ಷೆ ಗಾಯಕಿ )

ಸಂಗೀತ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಈ ವೇದಿಕೆ ಶುರು ಮಾಡಿದೆವು. ಇದರಲ್ಲಿ ಒಂಬತ್ತು ಜನ ಸದಸ್ಯರಿದ್ದೇವೆ. ನಮ್ಮ ಬೇಡಿಕೆಯಿಷ್ಟೆ: ಸಂಗೀತ ಸಮ್ಮೇಳನ ಉತ್ಸವಗಳಲ್ಲಿ ಕರ್ನಾಟಕ ಸಂಗೀತ ಕಲಾವಿದರನ್ನು ನಿರ್ಲಕ್ಷ್ಯ ಮಾಡಬೇಡಿ ಎಂಬುದು. ಹಾಗೆಂದು ಹೊರರಾಜ್ಯದ ಕಲಾವಿದರನ್ನು ಕರೆಸೋದು ಬೇಡ ಅಂತಲ್ಲ. ಕರ್ನಾಟಕ ಸರ್ಕಾರದ ಸಂಸ್ಕೃತಿ ಇಲಾಖೆ ಸರ್ಕಾರದ ಹಣ ಕೇಂದ್ರದ ಹಣ ಪ್ರಾಯೋಜಕರ ಹಣ ಪಡೆದು ಹೊರಗಡೆ ಕಲಾವಿದರಿಗೆ ಶೇ 80ರಷ್ಟು ಅವಕಾಶ ಕೊಡ್ತಾರೆ. ನಮಗೆ ಶೇ 20ರಷ್ಟು ಕೊಡುವುದು ಯಾವ ನ್ಯಾಯ? ಕನಿಷ್ಠ ಶೇ 50ರಷ್ಟು ಅವಕಾಶವಾದ್ರೂ ನಮಗೆ ಕೊಡಿ ಅಂತ ನಮ್ಮ ಬೇಡಿಕೆ. ರಾಮೋತ್ಸವದಂಥ ಕಾರ್ಯಕ್ರಮ ತಿಂಗಳ ಪೂರ್ತಿ ನಡೆಯುತ್ತೆ. ಒಂದು ತಿಂಗಳ 30 ಕಛೇರಿಗಳಲ್ಲಿ 15 ದಿನ ನಮಗೆ ಕೊಡಿ ಎಂಬುದು ನಮ್ಮ ಮನವಿ. 50 ವರ್ಷ ಸಂಗೀತಕ್ಕಾಗಿ ಸೇವೆ ಸಲ್ಲಿಸಿದ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡದಿದ್ದರೆ ಹೇಗೆ? ಕೇಂದ್ರ ಸಂಗೀತ ಅಕಾಡೆಮಿಯ ಎಕ್ಸಿಕ್ಯುಟಿವ್ ಬೋರ್ಡ್‌ ಮೆಂಬರ್ ನಾನು. ಬಹಳಷ್ಟು ಕಲಾವಿದರಿಗೆ ಇದುವರೆಗೆ ಕೇಂದ್ರ ಪ್ರಶಸ್ತಿ ಸಿಕ್ಕಿರಲೇ ಇಲ್ಲ. ನಾನು ಈ ವರ್ಷ ಜೋರಾಗಿ ಧ್ವನಿ ಎತ್ತಿ ರಾಜ್ಯದ 24 ಕಲಾವಿದರಿಗೆ ಪ್ರಶಸ್ತಿ ಕೊಡಿಸಿರುವೆ. ಕೇಂದ್ರ ಅಕಾಡೆಮಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಶಸ್ತಿಗಳನ್ನು ಕೊಟ್ಟೇ ಇರಲಿಲ್ಲ. ಈ ವರ್ಷ ಒಟ್ಟಿಗೇ ಕೊಟ್ಟಿದೆ. ಸುಗಮ ಸಂಗೀತ ಕರ್ನಾಟಕ ಸಂಗೀತ ನಾಟಕ. ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಸಾಧಕರಿಗೆ ಅದರಲ್ಲೂ 70 ವರ್ಷ ಮೇಲ್ಪಟ್ಟವರಿಗೆ ಪ್ರಶಸ್ತಿ ಕೊಡಿಸಿದ್ದೀವಿ. ಸದ್ಯ ಕೆಸಿಎಂಸಿ ಒಮ್ಮತದಿಂದ ಕರ್ನಾಟಕ ಕಲಾವಿದರ ಪರವಾಗಿ ಕೆಲಸ ಮಾಡ್ತೀವಿ. ಕನ್ನಡನಾಡಿನ ಎಲ್ಲ ಹಿರಿಯ ಕಿರಿಯ ಕಲಾವಿದರು ನಮ್ಮೊಂದಿಗೆ ಕೈಜೋಡಿಸ್ತಾ ಇದ್ದಾರೆ. ಇದು ಸಂತೋಷದ ವಿಷಯ.

ಗಮಕ ಹರಿಕಥೆಗಳೂ ಉಳಿಯಲಿ: ಆನೂರು ಅನಂತಕೃಷ್ಣ ಶರ್ಮ (ಮೃದಂಗ ವಿದ್ವಾಂಸರು)

ಕರ್ನಾಟಕ ಸಂಗೀತ ಕಲಾವಿದರಿಗೆ ಸರ್ಕಾರಿ ಉತ್ಸವಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂಬ ಕೊರಗು ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ನಾವೆಲ್ಲ ಇದನ್ನು ಹೇಳುತ್ತಲೇ ಬಂದಿದ್ದೇವೆ. ದಸರಾ ಉತ್ಸವ ಹಂಪಿ ಉತ್ಸವಗಳಂಥ ವಿಜೃಂಭಣೆಯ ಸಂಗೀತ ಹಬ್ಬದಲ್ಲಿ ಬಾಲಿವುಡ್‌ ಸ್ಯಾಂಡಲ್‌ವುಡ್‌ ಹಾಡು ಹಾಡುವವರಿಗೆ ಮೊದಲ ಆದ್ಯತೆ ಇದೆ. ಇಂಥ ಪ್ರತಿಷ್ಠಿತ ವೇದಿಕೆಗಳಲ್ಲಿ ಕರ್ನಾಟಕ ಸಂಗೀತ ಕಲಾವಿದರ ಹೆಸರುಗಳೇ ಕಾಣಸಿಗಲ್ಲ. ಜಿಲ್ಲಾ ಉತ್ಸವಗಳಲ್ಲೂ ಸಿನಿಮಾ ಸಂಗೀತಕ್ಕೇ ಮೊದಲ ಮಣೆ. ಇದು ಯಾಕೆ ಹೀಗೆ? ನಾವು ಕೇಳಿದರೆ ’ನಿಮ್ಮ ಸಂಗೀತಕ್ಕೆ ಜನ ಬರಲ್ಲ‘ ಎಂಬ ಉತ್ತರ ಬರುತ್ತದೆ. ಹಾಗಾದರೆ ಶಾಸ್ತ್ರೀಯ ಸಂಗೀತಕ್ಕೆಂದೇ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಲಿ. ಅಭಿರುಚಿ ಇರುವವರು ಬಂದೇ ಬರುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ’ಪ್ರಾಯೋಜಕರಿಗೆ ಅವರು ಹೇಳಿದ ಕಲಾವಿದರನ್ನೇ ಕರೆಸಿ ಹಾಡಬೇಕೆಂದಿದೆ. ಹಾಗಾಗಿ ಶಾಸ್ತ್ರೀಯ ಸಂಗೀತಕ್ಕೆ ಅವಕಾಶ ಸಿಗಲ್ಲ‘ ಎನ್ನುತ್ತಾರೆ. ಸರ್ಕಾರ ಲಕ್ಷಾಂತರ ರೂಪಾಯಿ ಅನುದಾನ ಕೊಟ್ಟು ನಡೆಸುವ ಕಾರ್ಯಕ್ರಮಗಳಲ್ಲಿ ಕಳೆದ ನಲವತೈದು ವರ್ಷಗಳಿಂದ ಇರುವ ನಮ್ಮಂಥ ಹಿರಿಯ ಕಲಾವಿದರಿಗೆ ಅವಕಾಶ ಸಿಗದಿದ್ದರೆ ಹೇಗೆ? ಬರೀ ಶಾಸ್ತ್ರೀಯ ಸಂಗೀತಕ್ಕೇ ಕೊಡಬೇಕೆಂದಿಲ್ಲ. ಇತರ ಪ್ರಕಾರಗಳಾದ ಗಮಕ ಹರಿಕಥೆ ಭರತನಾಟ್ಯ ಮುಂತಾದವುಗಳಿಗೂ ಅವಕಾಶ ನೀಡಲಿ ಎಂಬುದು ನನ್ನ ಕಳಕಳಿ.

ರಾಜ್ಯದಾದ್ಯಂತ ಪ್ರತಿಭಾನ್ವೇಷಣೆ: ಪ್ರಶಾಂತ್‌ ಅಯ್ಯಂಗಾರ್ (ವೈಣಿಕ ಕೆಸಿಎಂಸಿ ಕಾರ್ಯದರ್ಶಿ)

ಕರ್ನಾಟಕ ಸಂಗೀತ ಕಲಾವಿದರ ಕುಂದುಕೊರತೆ ನೀಗಿಸುವುದು ಸಂಗೀತ ಶಾಸ್ತ್ರ ಸಂಪ್ರದಾಯ ಕಾಪಾಡುವುದು ಸ್ವಜನ ಪಕ್ಷಪಾತವನ್ನು ತಡೆಯುವುದು ನಾವು ಪರಕೀಯವಾಗಿ ಜೀವನ ಸಾಗಿಸುವಂತಾಗಿರುವುದು... ಇವೇ ಮುಂತಾದ ಹಲವು ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿಯೇ 2021 ಅಕ್ಟೋಬರ್‌ನಲ್ಲಿ ಕರ್ನಾಟಕ ಕ್ಲಾಸಿಕಲ್‌ ಮ್ಯೂಸಿಕ್‌ ಕನ್‌ಫೆಡರೇಷನ್‌ (kcmc) ಸಂಸ್ಥೆ ಶುರು ಮಾಡಿದೆವು. ಈ ಸಂಸ್ಥೆಯಲ್ಲಿ ಒಂಬತ್ತು ಮಂದಿ ಪದಾಧಿಕಾರಿಗಳಿದ್ದೇವೆ. ಮೊದಲ ಕಾರ್ಯಕ್ರಮದಲ್ಲಿ 100 ಕಲಾವಿದರಿಗೆ ಅವಕಾಶ ನೀಡಿದ್ದೆವು. ಬೆಂಗಳೂರಿನ ವಸಂತಪುರದಲ್ಲಿ ರಾಮೋತ್ಸವ ಕಛೇರಿ ನಡೆಸಿಕೊಟ್ಟೆವು. ಆಕಾಶವಾಣಿಯ ಅಮೃತವರ್ಷಿಣಿ ಚಾನಲ್‌ ಸ್ಥಗಿತಗೊಂಡಾಗ ಇದರ ವಿರುದ್ಧ ದನಿ ಎತ್ತಿದೆವು. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ತೀರ್ಮಾನ ಕೈಗೊಂಡೆವು. ಇನ್ನು ಮುಂದೆಯೂ ಅನೇಕ ಕಾರ್ಯಕ್ರಮ ಹಾಕಿಕೊಳ್ಳುವ ಉದ್ದೇಶ ನಮಗಿದೆ. ಮುಖ್ಯವಾಗಿ ನಮ್ಮ ಕಲಾವಿದರಿಗೆ ಸರ್ಕಾರ ನಡೆಸುವ ಉತ್ಸವಗಳಲ್ಲಿ ಶೇ. 80ರಷ್ಟು ಅವಕಾಶ ಕೊಡಿಸಬೇಕು ಎಂಬುದು ನಮ್ಮ ಬೇಡಿಕೆ. ನಮ್ಮ ಸಂಘಟನೆ ಬಲಪಡಿಸುವ ಸಲುವಾಗಿ ಮುಂದೆ ಹಾಸನ ಮೈಸೂರು ಮಂಗಳೂರಿಗಳಲ್ಲಿ ಸಭೆ ನಡೆಸುವ ಉದ್ದೇಶವಿದೆ. ಇದಕ್ಕಾಗಿ ’ಸಂಗೀತಗಾರರ ಏಕೀಕರಣ‘ ಆಗಬೇಕು. ರಾಜ್ಯದಾದ್ಯಂತ ಹೊಸ ಪ್ರತಿಭೆಗಳ ಅನ್ವೇಷಣೆ ನಡೆಸುತ್ತೇವೆ ನಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಮಹತ್ತರ ಉದ್ದೇಶ ಸಂಸ್ಥೆಗಿದೆ. ಇದಕ್ಕಾಗಿ ಎಲ್ಲ ಕಲಾವಿದರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.

ಸಂಗೀತ ಕಲೆಯನ್ನು ಪೋಷಿಸಿ: ಎಂ.ಎಸ್‌. ಶೀಲಾ (ಗಾಯಕಿ)

ನಮ್ಮ ಸಂಗೀತ ಕಲೆ ಒಂದೆರಡು ದಿನಗಳಲ್ಲಿ ಬರುವಂಥದ್ದಲ್ಲ. ಹಲವಾರು ವರ್ಷಗಳಿಂದ ಹುಟ್ಟಿದಾರಭ್ಯ ಸಂಗೀತ ಮನೆತನದಲ್ಲೇ ಬೆಳೆದು ಕಲೆಯನ್ನು ಪೋಷಿಸಿ ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ ನಮ್ಮಂಥವರಿಗೆ ಅವಕಾಶವೇ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಉತ್ಸವಗಳಲ್ಲಿ ನಮಗೆ ಅವಕಾಶವೇ ಸಿಗೋದಿಲ್ಲ. ಹಿಂದೂಸ್ತಾನಿ ಸಂಗೀತ ಕಲಾವಿದರಿಗೂ ಅವಕಾಶ ಸಿಗುತ್ತಿದೆ. ಹೊರನಾಡ ಕಲಾವಿದರನ್ನು ಕರೆಸಲೇ ಬಾರದು ಎಂದು ನಾನು ಹೇಳಲ್ಲ. ಆದರೆ ಅವರೂ ನಮ್ಮನ್ನು ಕರೆಸಿ ಹಾಡಿಸಬೇಕಲ್ಲ? ಹಾಗೆ ಮಾಡ್ತಾರೆಯೇ? ಖಂಡಿತ ಇಲ್ಲ. ಹೀಗಿರುವಾಗ ನಾವು ಎಲ್ಲಿಗೆ ಹೋಗಬೇಕು? ಸರ್ಕಾರ ನಡೆಸಿದ ಉತ್ಸವದಲ್ಲಿ ಎಷ್ಟು ಕರ್ನಾಟಕ ಸಂಗೀತ ಕಲಾವಿದರಿಗೆ ಅವಕಾಶ ಸಿಕ್ಕಿತ್ತು? ಬಹಳ ಕಡಿಮೆ. ಎಲ್ಲ ಉತ್ಸವಗಳಲ್ಲಿ ನಮ್ಮ ಕಲಾವಿದರಿಗೆ ಅವಕಾಶವೇ ಇಲ್ಲ. ಹೊರನಾಡಿನ ಕಲಾವಿದರನ್ನು ಕರೆಸಿ ಲಕ್ಷಗಟ್ಟಲೆ ಸಂಭಾವನೆ ಕೊಟ್ಟು ಅವಕಾಶ ಕೊಡ್ತಾರೆ. ನಮ್ಮ ಕಲಾವಿದರಿಗೆ ಪ್ರೋತ್ಸಾಹ ಕೊಡಬೇಕಾದದ್ದು ಸರ್ಕಾರದ ಕರ್ತವ್ಯ ಅಲ್ಲವೇ? ಇನ್ನು ಖಾಸಗಿ ಸಂಘ ಸಂಸ್ಥೆಗಳು ಯಾರನ್ನು ಬೇಕಾದರೂ ಕರೆಸಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಏಕೆಂದರೆ ಅದು ಅವರ ಇಚ್ಛೆ. ನಾವು ಅವಕಾಶ ಕೊಡಿ ಅಂತ ಮನವಿ ಮಾಡಿಕೊಳ್ಳಬಹುದೇ ಹೊರತು ಬೇಡಿಕೆ ಇಡೋದಕ್ಕೆ ಆಗಲ್ಲ. ಕರ್ನಾಟಕ ಸಂಗೀತದಲ್ಲಿ ಎಷ್ಟೋ ಸಾಧಕರಿದ್ದಾರೆ. ನಮ್ಮಲ್ಲಿ ಏನು ಕೊರತೆ ಇದೆ? ನಮ್ಮ ಕನ್ನಡಿಗರಿಗೆ ಸ್ವಾಭಿಮಾನ ಕಡಿಮೆ ಸಂಕೋಚ ಹೆಚ್ಚು. ನಮಗೆ ಅವಕಾಶ ಸಿಗಬೇಕು ಎಂದಾದರೆ ಅದು ಕೆಸಿಎಂಸಿಯಿಂದಷ್ಟೇ ಸಾಧ್ಯವಾಗಬೇಕಷ್ಟೆ.

ವಾದ್ಯಗಾರರಿಗೂ ಸಿಗಲಿ ಅವಕಾಶ: ಜ್ಯೋತ್ನ್ಸಾ ಶ್ರೀಕಾಂತ್ (ಪಿಟೀಲು ವಾದಕಿ)

ಕರ್ನಾಟಕ ಶಾಸ್ತ್ರೀಯ ಗಾಯಕರಿಗೆ ವಾದ್ಯ ಸಂಗೀತಗಾರರ ಬಗ್ಗೆ ಸಂಸ್ಕೃತಿ ಇಲಾಖೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಎಷ್ಟೋ ವರ್ಷಗಳಿಂದ ನಡೆಯುತ್ತಲೇ ಇದೆ. ಇದರ ವಿರುದ್ಧ ದನಿ ಎತ್ತಿದರೂ ಅದು ನೀರ ಮೇಲೆ ಮಾಡಿದ ಹೋಮದಂತಾಗುತ್ತಿತ್ತು. ಆದರೆ ಈಗ ಎಲ್ಲ ಸಂಗೀತಗಾರರು ಒಟ್ಟಾಗಿದ್ದೇವೆ. ನಮಗೆ ಸಿಗಬೇಕಾದ ಅವಕಾಶಗಳನ್ನು ಹೋರಾಟದ ಮೂಲಕ ಗಳಿಸಿಕೊಳ್ಳಬೇಕಾಗಿದೆ. ಈಗ ನಮ್ಮ ಬೇಡಿಕೆ ಸರ್ಕಾರಿ ಉತ್ಸವಗಳಲ್ಲಿ ಶೇ 80ರಷ್ಟು ಕರ್ನಾಟಕ ಸಂಗೀತ ಕಲಾವಿದರಿಗೆ ನೀಡಬೇಕು. ಅದರಲ್ಲಿ ಸರೀ ಅರ್ಧದಷ್ಟು ವಾದ್ಯಗಾರರಿಗೂ ನೀಡಬೇಕು. ಅಲ್ಲದೆ ನಶಿಸಿಹೋಗುವಂಥ ನಾಗಸ್ವರ ಜಲತರಂಗದಂತಹ ವಾದ್ಯ ನುಡಿಸುವ ಕಲಾವಿದರಿಗೆ ಅವಕಾಶ ಕೊಡಬೇಕು ಎಂಬುದು. ವೀಣೆ ಕಲಾವಿದರಿಗೂ ಅಷ್ಟೆ. ಅವಕಾಶವೇ ಇಲ್ಲ. ಎಲ್ಲೂ ವೀಣೆ ಕಛೇರಿ ನಡೆಸುವುದೇ ಇಲ್ಲ. ಹಾಗಾದರೆ ಪ್ರತಿಭಾವಂತ ವಾದ್ಯ ಕಲಾವಿದರು ಎಲ್ಲಿ ಹೋಗಬೇಕು? ಹೊರರಾಜ್ಯದವರಿಗೆ ವಿಶೇಷ ಮಣೆ ಹಾಕುವ ನಮ್ಮ ಇಲಾಖೆ ಇಲ್ಲಿನ ಕಲಾವಿದರನ್ನು ಕಡೆಗಣಿಸುವುದೇಕೆ ಎಂಬುದೇ ಅರ್ಥವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT