ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಕಾಶಿಗೂ ಸಂಗೀತಕ್ಕೂ ಅವಿನಾಭಾವ ನಂಟು. ಗಂಗೆಯ ಮಡಿಲಲ್ಲಿ ಅರಳಿದ ಅದೆಷ್ಟೊ ಸ್ವರ ಕುಸುಮಗಳು ತಮ್ಮ ಸ್ವರಯಾತ್ರೆ ಮೂಲಕ ದೇಶ–ವಿದೇಶಗಳಲ್ಲಿ ನಾದದ ಘಮಲನ್ನು ಹರಡಿ ದೇಸಿ ಸಂಗೀತವನ್ನು ಸಮೃದ್ಧಗೊಳಿಸಿವೆ. ಏಕೆಂದರೆ ಕಾಶಿ–ಬನಾರಸ್‌ ಎಂದರೆ ಅದು ಸಂಗೀತ ದಿಗ್ಗಜರ ನೆಲೆವೀಡು. ಪಂ. ರವಿಶಂಕರ್, ಪಂ. ಬಿಸ್ಮಿಲ್ಲಾಖಾನ್, ಗಿರಿಜಾದೇವಿ, ಕಿಶನ್ ಮಹಾರಾಜ್, ಪಂ. ರಾಜನ್‌ ಮಿಶ್ರಾ ಮುಂತಾದ ಸಂಗೀತ ಮಾಂತ್ರಿಕರು ತಮ್ಮ ಅತ್ಯುನ್ನತ ಸಾಧನೆಯಿಂದ ದೇಶದ ಸಂಗೀತ ಪರಂಪರೆಯನ್ನು ವಿಶ್ವವ್ಯಾಪಿಗೊಳಿಸಿದ್ದು ಇದೇ ಬನಾರಸ್‌ನಿಂದ ಎಂಬುದು ಸ್ಮರಣಾರ್ಹ. ಹಿಂದೂಸ್ತಾನಿ ಸಂಗೀತದ ಬನಾರಸ್‌ ಘರಾಣೆ ಹುಟ್ಟಿಕೊಂಡದ್ದೇ ಈ ಸುಂದರ ನಗರದಲ್ಲಿ. ಸುಮಧುರ ಗಾನ–ಯಾನದ ತೊಟ್ಟಿಲಲ್ಲಿ ತೊನೆದಾಡಿದ ಸಂಗೀತಗಾರರಿಗೆ ಲೆಕ್ಕವಿಲ್ಲ.

ಗಂಗಾನದಿಯ ತಟದಲ್ಲಿ ಸುಶ್ರಾವ್ಯ ಸಂಗೀತಕ್ಕೆ ಎಂದಿಗೂ ಮಣೆ, ಮನ್ನಣೆ. ಇದೇ ಮಾಧುರ್ಯ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಹೊನಲಾಗಿ ಹರಿಯಿತು. ಭಾರತೀಯ ಸಾಮಗಾನ ಸಭಾದ 15ನೇ ವಾರ್ಷಿಕ ಸಂಗೀತ ಸಮಾರಂಭದಲ್ಲಿ ದೇಶದ ಹಲವು ಪ್ರತಿಭಾವಂತ ಕಲಾವಿದರು ಭಾಗಿಯಾದರು. ಕಾಶಿಯ ಸಂಗೀತ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಸಂಗೀತದ ಮಾಂತ್ರಿಕತೆ ಅನುಭವಿಸಲು ಅನುವು ಮಾಡಿಕೊಟ್ಟ ಈ ಸಂಗೀತ ಹಬ್ಬದಲ್ಲಿ ಗಾಯನ, ವಾದ್ಯ ಸಂಗೀತ, ಜುಗಲಬಂದಿ, ಭಜನೆ ಮತ್ತು ತಾಳವಾದ್ಯ ಮೇಳದಲ್ಲಿ ಕಲಾವಿದರು ತಮ್ಮ ಸಂಗೀತ ಸುಧೆಯನ್ನು ಉಣಬಡಿಸಿದರು. ಭಾರತೀಯ ಸಂಗೀತದ ಅದ್ಭುತವಾದ ನಾದ ಸೌಂದರ್ಯದ ಯಾತ್ರೆಯಲ್ಲಿ ರಂಜನಿ ಗಾಯತ್ರಿ, ಮಹೇಶ್ ಕಾಳೆ, ಸಂದೀಪ್ ನಾರಾಯಣ್, ಶುಭೇಂದ್ರ ರಾವ್, ಸುಮಾ ಸುಧೀಂದ್ರ, ರಾಮಕೃಷ್ಣನ್ ಮೂರ್ತಿ, ವೈಶಾಲಿ, ಜಗದೀಶ್ ಕುರ್ತಕೋಟಿ ಗಾಯನ–ವಾದನವನ್ನು ಪ್ರಸ್ತುತಪಡಿಸಿದರು. ಉದಯೋನ್ಮುಖ ತಾರೆಯರಾದ ಸೂರ್ಯಗಾಯತ್ರಿ ಮತ್ತು ಅನಿರ್ಬನ್ ಅವರ ಸಂಗೀತವೂ ಕೇಳುಗರನ್ನು ಪರವಶರಾಗಿಸಿತು. ಇದೇ ಸಂದರ್ಭದಲ್ಲಿ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪಿಟೀಲು ವಿದ್ವಾಂಸರಾದ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಪಂ. ಶುಭೇಂದ್ರ ರಾವ್ ಅವರ ಸಿತಾರ್ ಹಾಗೂ ಸುಮಾ ಸುಧೀಂದ್ರ ಅವರ ವೀಣಾವಾದನದ ಜುಗಲಬಂದಿ, ಮಹೇಶ್ ಕಾಳೆ, ವೈಶಾಲಿ ಅವರ ಗಾಯನ, ಉದಯೋನ್ಮುಖ ಗಾನ ಪ್ರತಿಭೆ ಸೂರ್ಯ ಗಾಯತ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂದೀಪ್‌ ನಾರಾಯಣ್‌ ಅವರ ಗಾನಲಹರಿ, ಜಗದೀಶ್‌ ಮತ್ತು ತಂಡದವರ ಲಯಮಾಧುರ್ಯ, ರಾಮಕೃಷ್ಣನ್, ರಂಜಿನಿ– ಗಾಯತ್ರಿ ಅವರ ಮಧುರ ಸಂಗೀತ ಕಛೇರಿ
ನಾದಾಮೃತವನ್ನು ಉಣಬಡಿಸಿತು.

ಈಚೆಗೆ ನಡೆದ ಕಾಶಿ ಸ್ವರ ಶಂಕರ; ಮಾಧುರ್ಯ ಮತ್ತು ದೈವತ್ವದ ದಿವ್ಯಸಂಗಮವಾಗಿ ಅನಾವರಣವಾದದ್ದು ಕೇಳುಗರ ಸೌಭಾಗ್ಯ. ಕಾಶಿ– ರಾಮೇಶ್ವರ ಸಂಪೂರ್ಣ ಸ್ವರಯಾತ್ರೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೆರುಗನ್ನು ಪ್ರದರ್ಶಿಸಿದ್ದು ಎಂದೂ ಮರೆಯಲಾಗದ ಅನುಭವವಾಗಿ ಉಳಿಯಿತು. 

ಜಗದೀಶ್‌ ಕುರ್ತಕೋಟಿ ಲಯವಾದ್ಯ

ಜಗದೀಶ್‌ ಕುರ್ತಕೋಟಿ ಲಯವಾದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT