ಇಡೀ ವಿಶ್ವವೇ ಕೊರೊನಾ ಸಂಕಷ್ಟದಲ್ಲಿ ಸಿಲುಕಿ ನೊಂದು ಬೆಂದಿರುವಾಗ ಇದೇ ಜಗತ್ತಿಗೆ ಸಂಗೀತದ ಮೂಲಕ ಮದ್ದು ನೀಡಿ ಸಂತೈಸಿದ್ದು ‘ಪ್ರಜಾವಾಣಿ ದಸರಾ ಸಂಗೀತೋತ್ಸವ’. ಹತ್ತು ದಿನಗಳ ಕಾಲ ನಿರಂತರ ನಾದ ಸಿಂಚನ ನೀಡಿದ ಸಂಗೀತೋತ್ಸವ, ಸೋಮವಾರ ‘ಮನೆಗಳೇ ಇಲ್ಲದ ತಂತಿವಾದ್ಯ’ ಸರೋದ್ ತಂತಿಯ ನವಿರಾದ ಮೀಟಿನೊಂದಿಗೆ ಸಂಪನ್ನವಾಯಿತು. ಅಂತಿಮ ದಿನ ಹಿಂದೂಸ್ತಾನಿ ಗಾಯನ, ನೃತ್ಯ, ನೃತ್ಯರೂಪಕ ಹಾಗೂ ಸರೋದ್ ಕಛೇರಿಗಳು ಅಕ್ಷರಶಃ ಸಂಗೀತ ಸಾಂತ್ವನ ನೀಡುವಲ್ಲಿ ಯಶಸ್ವಿಯಾದವು.

ಪದ್ಮಶ್ರೀ ಪಂಡಿತರ ಗಾನಸುಧೆ

ವಿಜಯದಶಮಿಯ ದಿನ ಬೆಳಿಗ್ಗೆ ಧಾರವಾಡದ ಪದ್ಮಶ್ರೀ ಪಂ. ವೆಂಕಟೇಶ್ ಕುಮಾರ್ ಅವರ ಗಾಯನಕ್ಕೆ ನಾಂದಿ ಹಾಡಿದ್ದು ಸುಪ್ರಸಿದ್ಧ ಥಾಟ್ ರಾಗ ಭೈರವ್‌ನ ಬಡಾಖ್ಯಾಲ್‌ನೊಂದಿಗೆ. ವಿಲಂಬಿತ್ ಏಕ್‌ತಾಲ್‌ನಲ್ಲಿ ‘ಬಾಲಮುವಾ ಮೋರೆ ಸೈಯಾ..’ ರಚನೆಯಲ್ಲಿ ಸ್ವರಗಳನ್ನು ವಿಸ್ತರಿಸಿದರು. ರಾಗದ ಚೌಕಟ್ಟಿನೊಳಗೆ ವಾದಿ ಸಂವಾದಿ ಸ್ವರಗಳಿಗೆ ಹೆಚ್ಚು ಒತ್ತು ನೀಡಿ ಮಂದ್ರ ದೈವತದಿಂದ ತಾರಕ ಮಧ್ಯಮದವರೆಗೆ ಲೀಲಾಜಾಲವಾಗಿ ಸ್ವರಗಳೊಂದಿಗೆ ಆಟವಾಡಿದರು. ಮುಂದೆ ಲಯದ ವೇಗ ಹೆಚ್ಚಿಸಿ ಧೃತ್ ಭಾಗದಲ್ಲಿ ಆಕರ್ಷಕ ಸ್ವರತಾನ್, ಆಕಾರ್‌ತಾನ್, ಬೋಲ್‌ತಾನ್‌ಗಳನ್ನು ಹಾಡಿ ಅದ್ಭುತ ಮಾಯಾಲೋಕ ಸೃಷ್ಟಿಸಿದರು. ಇದಾಗಿ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಬಂದೀಶ್ ‘ಜಾಗೊ ಮೋಹನ್ ಪ್ಯಾರಿ...’ಯಲ್ಲಿ ರಾಗ ವಿಭಿನ್ನ ತಿರುವು ಪಡೆದು ಮನಸೋಲ್ಲಾಸ ನೀಡಿತು.

ಭಕ್ತಿಪ್ರಧಾನ ರಾಗ ದುರ್ಗಾದಲ್ಲಿ ‘ಪಾರ್ವತಿಯೇ ದೇವಿ ಕಲ್ಯಾಣಿ..’ ಯನ್ನು ಹಾಡಿದರು.‘ಕೆಹರವಾ’ ತಾಳದ ಅಂಗವಾದ ಭಕ್ತಿಸಂಗೀತಕ್ಕಾಗಿಯೇ ಇರುವ ‘ಭಜನ್‌ಠೇಕಾ’ ತಾಳದಲ್ಲಿ ಈ ರಾಗವನ್ನು ಪ್ರಸ್ತುತಪಡಿಸಿದರು. ಆಕರ್ಷಕ ತಾನ್‌ಗಳು, ಅದ್ಭುತ ಉಸಿರು ನಿಯಂತ್ರಣ ಸಾಮರ್ಥ್ಯ, ರಾಗದ ಸೊಗಸಾದ ನಿರೂಪಣೆ ಕಛೇರಿಯನ್ನು ಕಳೆಕಟ್ಟಿಸಿತು. ತಬಲಾದಲ್ಲಿ ಕೇಶವ ಪ್ರಸಾದ್, ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ ಉತ್ತಮ ಸಾಥಿ ನೀಡಿದರು.

ಹೆಜ್ಜೆ ಗೆಜ್ಜೆಗಳ ರಿಂಗಣ; ಮನಸ್ಸುಗಳ ಧೀಂಗಣ!

ಶಾಸ್ತ್ರೀಯ ನೃತ್ಯ ಎಂದಿಗೂ ಅತ್ಯಾಕರ್ಷಕ. ನಾಟ್ಯ ಮತ್ತು ಸಂಗೀತ ಎರಡರ ಸಮಾಗಮ ಬೇಸರಗೊಂಡ ಮನಸ್ಸನ್ನು ಶಾಂತ ಸರೋವರದ ತಿಳಿಯಾದ ಪರಿಸರಕ್ಕೆ ಕೊಂಡೊಯ್ದಿತು. ಮೈಸೂರಿನ ನೃತ್ಯಗುರು ವಿದುಷಿ ಕೃಪಾ ಫಡ್ಕೆ ತಂಡ ಗಣೇಶನನ್ನು ‘ನಾಟ ರಾಗ’ ತಾಳಮಾಲಿಕೆಯಲ್ಲಿ ಪುಷ್ಪಾಂಜಲಿ ಮೂಲಕ ಸ್ತುತಿಸಿತು. ಅದಾಗಿ ಶಂಕರಾಚಾರ್ಯರ ಅಷ್ಟರಸಗಳ ನಿರೂಪಣೆ ಶ್ಲೋಕದ ಮಾದರಿಯಲ್ಲಿ ವೇದಿಕೆಯ ತುಂಬ ನಲಿದಾಡಿ ವಿಭಿನ್ನ ಅನುಭವ ನೀಡಿತು.

ದೇವಿ ಚಾಮುಂಡೇಶ್ವರಿಯನ್ನು ಭಜಿಸುವ ಬಿಲಹರಿ ರಾಗದ ‘ಶ್ರೀಚಾಮುಂಡೇಶ್ವರಿ ಪಾಲಯಮಾಂ’ ಕೀರ್ತನೆ ನೃತ್ಯ–ನೃತ್ತದ ಮೂಲಕ ಮನಸ್ಸನ್ನು ಧೀಂಗಣಗೊಳಿಸಿತು. ಅಂತ್ಯದಲ್ಲಿ ದುರ್ಗೆಯ ಮೇಲಿನ ತಿಲ್ಲಾನ ಹಿಂದೋಳ ರಾಗ, ಖಂಡ ಏಕತಾಳದಲ್ಲಿ ಮೂಡಿಬಂದು ನಾಟ್ಯದ ಮೂಲಕ ತಂಪೆರೆಯಿತು. ನಟುವಾಂಗದಲ್ಲಿ ಕೃಪಾ ಫಡ್ಕೆ, ಗಾಯನದಲ್ಲಿ ರಾಜೇಶ್ವರಿ ಪಂಡಿತ್, ಮೃದಂಗದಲ್ಲಿ ಶಿವಶಂಕರ್ ಹಾಗೂ ಜನಾರ್ದನ್, ಕೊಳಲಿನಲ್ಲಿ ಕೃಷ್ಣಪ್ರಸಾದ್ ಹಾಗೂ ರಾಕೇಶ್, ಮೋರ್ಚಿಂಗ್‌ನಲ್ಲಿ ದಾಸಪ್ಪ ಕಛೇರಿಯ ಯಶಸ್ಸಿಗೆ ಕಾರಣರಾದರು.

ಹೊಸತನಕ್ಕೆ ತುಡಿದ ನೃತ್ಯರೂಪಕ

ಜಯದುರ್ಗೆ ನೃತ್ಯರೂಪಕ ವಿದುಷಿ ಪ್ರತಿಭಾ ಪ್ರಹ್ಲಾದ ನೇತೃತ್ವದ ತಂಡ ಅತ್ಯಂತ ಸೊಗಸಾಗಿ ಪ್ರಸ್ತುತಪಡಿಸಿ ಅಕ್ಷರಶಃ ಜಗದ ಇರವನ್ನೇ ಮರೆಸಿ ಗಂಧರ್ವ ಲೋಕದಲ್ಲಿ ವಿಹರಿಸಿದಂತೆ ಮಾಡಿತು. ಈ ನೃತ್ಯದಲ್ಲಿ ಭರತನಾಟ್ಯ, ಕಥಕ್ಕಳಿ, ಮೋಹಿನಿಯಾಟ್ಟಂ ಮುಂತಾದ ನೃತ್ಯಪ್ರಕಾರಗಳು ವಿದುಷಿ ಸದಾ ಹೊಸತನಕ್ಕೆ ತುಡಿಯುವ ಮನಸ್ಸುಳ್ಳವರು ಎಂಬುದನ್ನು ಸಾಬೀತುಪಡಿಸಿತು. ಕೊನೆಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ನೃತ್ಯದಲ್ಲಿ ಅಭಿವ್ಯಕ್ತಿಸುವ ಮೂಲಕ ದೇಶಪ್ರೇಮ ಮೆರೆದದ್ದು ಕೂಡ ವಿಶೇಷವಾಗಿತ್ತು.

ಸರೋದ್ ತಂತಿಯಲ್ಲಿ ರಾಗಧಾರೆ!

ಪಂ. ರಾಜೀವ್ ತಾರಾನಾಥ್ ಈ ಸಂಗೀತ ಸರಣಿಯ ಪ್ರಮುಖ ಆಕರ್ಷಣೆ. ಸಂಗೀತೋತ್ಸವ ಉದ್ಘಾಟಿಸುವ ಮೂಲಕ ನಾಂದಿ ಹಾಡಿ ರಾಗಧಾರೆ ಹರಿಸುವ ಮೂಲಕ ಸಂಪನ್ನಗೊಳಿಸಿದ್ದು ಸ್ತುತ್ಯಾರ್ಹ. ಆರಂಭದಲ್ಲಿ ‘ಮಿಶ್ರ ಕಿರವಾಣಿ’ ರಾಗಕ್ಕೆ ಆಲಾಪ ಮಾಡತೊಡಗಿದ ಪಂಡಿತರು, ಮಧ್ಯಲಯ ಝಪ್‌ತಾಲ್‌ನಲ್ಲಿ ಜೋಡ್‌ಜಾಲ ನುಡಿಸಿ ಕಿವಿಗಳಿಗೆ ಸಂಗೀತ ಸಿಂಚನ ನೀಡಿದರು. ಮುಂದೆ ತೀನ್‌ತಾಲ್ ಧೃತ್ ಲಯದಲ್ಲಿ ರಾಗ ವಿಸ್ತರಿಸಿ ಸಂಪೂರ್ಣ ರಾಗದರ್ಶನ ಮಾಡಿಸಿದರು.

‘ಚಾಮುಂಡಮ್ಮ ಎಂದರೆ ಭೈರವಿ. ನಟಭೈರವಿ, ಸಿಂಧೂಭೈರವಿ.. ಮುಂತಾದ ರಾಗಗಳು ಭೈರವಿಯ ಸ್ವರೂಪವೇ ಆಗಿದ್ದರೂ ಶುದ್ಧಭೈರವಿಯನ್ನು ನುಡಿಸುವವರು ಅಥವಾ ಹಾಡುವವರು ಕಡಿಮೆ ಎನ್ನುತ್ತಾ ಅಪರೂಪದ ‘ಶುದ್ಧ ಭೈರವಿ’ ರಾಗಕ್ಕೆ ಹಿತಮಿತವಾದ ಆಲಾಪ ಮಾಡಿ ಕಛೇರಿಗೆ ಅತ್ಯುತ್ತಮ ಅಂತ್ಯ ಹಾಡಿದರು. ತಬಲಾದಲ್ಲಿ ಪಂ. ಭೀಮಾಶಂಕರ ಬಿದನೂರು ಸಮರ್ಥ ಸಾಥಿ ನೀಡಿ ಕಛೇರಿಯ ಸೊಬಗು ಹೆಚ್ಚಿಸಿದರು.

ದಶ ದಿನಗಳ ಎಲ್ಲ ಸಂಗೀತೋಪಾಸನೆಯನ್ನು ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರು ಅಚ್ಚುಕಟ್ಟಾಗಿ ನಿರ್ವಹಿಸಿ ‘ಪ್ರಜಾವಾಣಿ’ಯ ಉತ್ತಮ ಕಾರ್ಯವನ್ನು ಎಂದೆಂದಿಗೂ ನೆನಪಿನಂಗಳದಲ್ಲಿ ಉಳಿಯುವಂತೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.