1924ರ ಕಾಂಗ್ರೆಸ್ ಅಧಿವೇಶನದಲ್ಲಿ ವೀಣೆ ನುಡಿಸಿ ಗಾಂಧೀಜಿ ಮನ ಗೆದ್ದವರು ವೀಣೆ ಶೇಷಣ್ಣ. ಅವರ ವೀಣಾ ವಾದನಕ್ಕೆ ಮನಸೋತಿದ್ದ ಐದನೆಯ ಜಾರ್ಜ್ ದೊರೆಯು ಅವರನ್ನು ಇಂಗ್ಲೆಂಡ್ಗೆ ಕರೆಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ನಡುರಾತ್ರಿಯಲ್ಲಿಯೂ ನಾದಾಮೃತವನ್ನು ಉಣಬಡಿಸುತ್ತಿದ್ದ ಕಲಾವಿದನ ಬದುಕಿನ ಆಯ್ದ ಸನ್ನಿವೇಶಗಳನ್ನು ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ...

ಇಸವಿ 1924. ಭಾರತದ ದೇಶಭಕ್ತರೆಲ್ಲಾ ಸೇರಿ ಕಾಂಗ್ರೆಸ್ ಎಂಬ ಛತ್ರಿಯ ಅಡಿಯಲ್ಲಿ ಬೆಳಗಾವಿಯಲ್ಲಿ ನಡೆಸಿದ ಇಪ್ಪತ್ತನಾಲ್ಕನೆಯ ಅಧಿವೇಶನವು ತನ್ನದೇ ಆದ ರಾಜಕೀಯ, ಐತಿಹಾಸಿಕ ಕಾರಣಗಳಿಗಾಗಿ ಪ್ರಸಿದ್ಧಿಯಾಗಿದೆ. ನಾಡಿನ ಉದ್ದಗಲದಿಂದಲೂ ಬೆಳಗಾವಿಗೆ ಬಂದಿದ್ದ ರಾಜಕೀಯ ಧುರೀಣರ ಸೇವೆಗಾಗಿ ಒಂದು ಸಮಿತಿಯೇ ರಚಿತವಾಗಿತ್ತು. ಮುಂಜಾನೆಯಿಂದ ಒಂದೇ ಸಮನೆ ರಾಜಕೀಯ ಸಮಾಲೋಚನೆ, ಸಭೆ, ಮೀಟಿಂಗುಗಳಲ್ಲಿ ಭಾಗವಹಿಸುತ್ತಿದ್ದ ರಾಜಕೀಯ ಮುಖಂಡರ ಮನಸಿಗೆ ಮುದ ನೀಡುವ, ಮನಸನ್ನು ರಂಜಿಸುವ ಕಲಾ ಪ್ರಕಾರಗಳನ್ನು ಸಂಜೆಯ ವೇಳೆಗೆ ಏರ್ಪಾಟು ಮಾಡಬೇಕೆಂಬ ನಿರ್ಧಾರವನ್ನು ಸಮಿತಿಯು ತೆಗೆದುಕೊಂಡಿತು. ಅದಕ್ಕಾಗಿ ನಾಡಿನ ಖ್ಯಾತ ಕಲಾವಿದರನ್ನು ಆಹ್ವಾನಿಸಬೇಕೆಂದು ನಿಶ್ಚಯಿಸಿತು.

1911ರಲ್ಲಿ ಐದನೆಯ ಜಾರ್ಜ್ ದೊರೆಯ ಪಟ್ಟಾಭಿಷೇಕ ಮಹೋತ್ಸವವು ದೆಹಲಿಯಲ್ಲಿ ವಿಜೃಂಭಣೆಯಿಂದ ನೆರವೇರಿತ್ತು. ದೇಶದ ತುಂಬ ವೀಣೆಯ ಕಂಪನ್ನು ಬೀರಿದ್ದ ಮೈಸೂರಿನ ಹೆಸರಾಂತ ವೈಣಿಕ ವೀಣೆ ಶೇಷಣ್ಣನವರನ್ನು ಆ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿತ್ತು. ಜಾರ್ಜ್ ದೊರೆಯು ಅವರ ವೀಣೆಯನ್ನು ಮನಸಾರೆ ಮೆಚ್ಚಿ, ಅವರನ್ನು ಇಂಗ್ಲೆಂಡಿಗೆ ಆಹ್ವಾನಿಸಿದಾಗ, ಸಮುದ್ರಯಾನ ನಿಷಿದ್ಧವೆಂದು ಭಾವಿಸಿದ್ದ ಆ ಮಹಾನ್ ಕಲಾವಿದ ನಯವಾಗಿ ಅದನ್ನು ನಿರಾಕರಿಸಿದ್ದು, ದೊರೆಯು ಅವರ ಮುಖದ (ಎದೆ ಮಟ್ಟದ) ಪ್ರತಿಮೆಯನ್ನು ಮಾಡಿಸಿ ಬಕಿಂಗ್ಹ್ಯಾಮಿನ ತನ್ನ ಅರಮನೆಯಲ್ಲಿ ಇಡಲು ಒಯ್ದದ್ದು ಎಲ್ಲವೂ ಜನಜನಿತವಾಗಿತ್ತು. ಅವರನ್ನೇ ಕರೆಸುವುದೆಂದು ಸಮಿತಿಯು ತೀರ್ಮಾನ ಮಾಡಿ, ಮೈಸೂರು ಮಹಾರಾಜರಿಗೆ ಅವರನ್ನು ಕಳುಹಿಸಿಕೊಡಬೇಕೆಂಬ ಪ್ರಾರ್ಥನಾ ಪತ್ರವನ್ನು ಕಳುಹಿಸಿತು. ಮಹಾರಾಜರು ಅದಕ್ಕೆ ಒಪ್ಪಿ, ವೀಣೆ ಶೇಷಣ್ಣನವರನ್ನು ಬೆಳಗಾವಿಯ ಅಧಿವೇಶನಕ್ಕೆ ಕಳುಹಿಸಿದರು. ಪ್ರತಿನಿತ್ಯದ ಕಾರ್ಯಕಲಾಪದ ವರದಿಯನ್ನು ಅರಮನೆಗೆ ಕಳುಹಿಸಲು ಅರಮನೆಯ ಭಕ್ಷಿಗಳೂ ಸಹ ಹೋಗಿದ್ದರು.

ಶೇಷಣ್ಣನವರೊಡನೆ ಅವರ ಏಳೆಂಟು ವರ್ಷದ ಮೊಮ್ಮಗ ಸ್ವರಮೂರ್ತಿ ವೆಂಕಟನಾರಾಯಣ ಮತ್ತು ಶಿಷ್ಯರಾಗಿದ್ದ ಭೈರವಿ ಲಕ್ಷ್ಮೀನಾರಣಪ್ಪ ಮತ್ತು ಭೀಮರಾವ್ ಅವರೂ ಜೊತೆಗಿದ್ದರು. ಕಲಾವಿದರಿಗೆ ಪ್ರತ್ಯೇಕ ಬಿಡಾರದ ವ್ಯವಸ್ಥೆ ಆಗಿತ್ತು. ಶೇಷಣ್ಣನವರ ವೀಣಾ ವಾದನಕ್ಕಾಗಿ ಸಂಜೆ ಅರ್ಧ ಗಂಟೆ ನಿಗದಿಯಾಗಿತ್ತು. ಆಗ ಮಹಾತ್ಮ ಗಾಂಧೀಜಿ ಮೌನವ್ರತದಲ್ಲಿದ್ದರು. ಸಂಜೆ ವಿಶೇಷ ಪೆಂಡಾಲಿನಲ್ಲಿ ಗಾಂಧಿ, ನೆಹರು, ವಲ್ಲಭಾಯಿ ಪಟೇಲ್, ಸರೋಜಿನಿದೇವಿ ನಾಯ್ಡು, ರಾಜೇಂದ್ರ ಪ್ರಸಾದ್ ಮುಂತಾದ ನಾಯಕರೆಲ್ಲರೂ ಆಸೀನರಾಗಿದ್ದರು. ಶೇಷಣ್ಣನವರ ವೀಣಾ ವಾದನವು ಎಲ್ಲ ಶ್ರೋತೃಗಳನ್ನೂ ಮುಗ್ಧವಾಗಿಸಿತ್ತು. ಆ ನಾದಲೋಕದಲ್ಲಿ ವಿಹರಿಸುತ್ತಿದ್ದವರಿಗೆ ಸಮಯ ಆದುದು ತಿಳಿಯಲಿಲ್ಲ. ಆದರೆ ಶೇಷಣ್ಣನವರು ತಮ್ಮ ನಿಗದಿತ ಸಮಯ ಮುಗಿದ ಕೂಡಲೇ ವೀಣೆಯನ್ನು ಕೆಳಗಿರಿಸಿದರು. ಕಣ್ಣು ಮುಚ್ಚಿ ಆಸ್ವಾದಿಸುತ್ತಿದ್ದ ಗಾಂಧೀಜಿ ‘ಇದೇಕೆ?’ ಎಂಬಂತೆ ನೋಡಿದರು. ಮತ್ತಷ್ಟು ಸಮಯ ವೀಣಾ ವಾದನವನ್ನು ಮುಂದುವರೆಸುವಂತೆ ಸನ್ನೆ ಮಾಡಿದರು. ಮತ್ತೆ ವೀಣಾ ವಾದನ ಮುಂದುವರೆಯಿತು. ಮತ್ತೆ ಅರ್ಧ ಗಂಟೆ ಆಯಿತು. ಗಾಂಧೀಜಿ ಪಕ್ಕದಲ್ಲಿದ್ದ ಅವರ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿ ಚೀಟಿಯಲ್ಲಿ ‘ತಮ್ಮ ಮುಂದಿನ ಕಾರ್ಯಕ್ರಮಕ್ಕೆ ತಡವಾಗುತ್ತಿದೆ’ ಎಂದು ಬರೆದು ಗಾಂಧೀಜಿ ಮುಂದೆ ಇಟ್ಟರು. ಅದನ್ನು ಓದಿದ ಗಾಂಧೀಜಿ ‘ಅದೆಲ್ಲವನ್ನೂ ರದ್ದು ಮಾಡು. ಇಂತಹ ದೈವಿಕ ವೀಣಾ ವಾದನವು ನಮಗೆ ಬೇಕೆಂದಾಗ ದೊರೆಯುವುದಿಲ್ಲ’ ಎಂದು ಪ್ರತ್ಯುತ್ತರ ಬರೆದು ಕಣ್ಣು ಮುಚ್ಚಿದರು.

ಆದರೂ ಗಾಂಧೀಜಿಗೆ ತೃಪ್ತಿ ಆಗಲಿಲ್ಲ. ಆ ವೀಣಾ ವಾದನವನ್ನು ಮತ್ತಷ್ಟು ಕೇಳಬೇಕೆಂಬ ಆಸೆ. ಮರುದಿನ ಶೇಷಣ್ಣನವರನ್ನು ತಮ್ಮ ಬಿಡಾರಕ್ಕೇ ಕರೆಸಿಕೊಂಡು ಗಂಟೆ ಅದನ್ನು ಸವಿದರು. ಈ ಎಲ್ಲ ಆಗುಹೋಗುಗಳು ದರ್ಬಾರ್ ಭಕ್ಷಿಯವರು ಅರಮನೆಗೆ ಬರೆದ ಪತ್ರಗಳಲ್ಲಿ ದಾಖಲಾಗಿದೆ. ಗಾಂಧೀಜಿಯೊಡನೆ ಅವರ ಪತ್ನಿ ಕಸ್ತೂರಬಾ ಇದ್ದರು. ಅವರು ಶೇಷಣ್ಣನವರ ಮೊಮ್ಮಗನನ್ನು ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡು ಅವನಿಂದ ಹಾಡಿಸಿದುದಲ್ಲದೆ, ಅವನಿಗೆ ತಲೆ ಬಾಚಿ, ಜಡೆ ಹೆಣೆದಿದ್ದುದನ್ನು ದ. ರಾ. ಬೇಂದ್ರೆ ನೆನಪಿಟ್ಟಿದ್ದರು.

ಆಗ ಚಳಿಗಾಲ. ರಾತ್ರಿಯಲ್ಲಿ ವಿಪರೀತ ಥಂಡಿ. ಇರುಳು ಸುಮಾರು ಹನ್ನೆರಡು ಅಥವಾ ಒಂದು ಗಂಟೆಯ ಸಮಯ. ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿ ಶೇಷಣ್ಣನವರ ಶಿಷ್ಯ ಭೀಮರಾವ್ ಹೊರಗೆ ಬಂದು ನೋಡುತ್ತಾರೆ, ಒಬ್ಬ ಪೊಲೀಸ್ ಕಾನ್ಸ್ಟೇಬಲ್. ಆತನಿಗೆ ಶೇಷಣ್ಣನವರ ವೀಣೆ ಕೇಳಬೇಕೆಂಬ ಹೆಬ್ಬಯಕೆ. ಆದರೆ ಇಡೀ ದಿನ ಕೆಲಸದ ಒತ್ತಡದಲ್ಲಿ ಬಿಡುವೆಂಬುದೇ ಇರುತ್ತಿರಲಿಲ್ಲ. ರಾತ್ರಿಯ ಕೆಲವು ಗಂಟೆಗಳಷ್ಟೇ ಬಿಡುವು ದೊರೆಯುತ್ತಿದ್ದುದು. ಅವರು ಮನಸ್ಸು ಮಾಡಿದರೆ, ವೀಣೆಯನ್ನು ಕೇಳಬಹುದೇನೋ ಎಂಬ ಆಸೆ. ಭೀಮರಾವ್ ಈ ಚಳಿಯಲ್ಲಿ ನಿದ್ದೆ ಮಾಡುತ್ತಿರುವ ಗುರುಗಳನ್ನು ಎಬ್ಬಿಸುವುದಂತೂ ಸಾಧ್ಯವಿಲ್ಲದ ಮಾತು ಎಂದು ಆತನನ್ನು ಗದರಿ ವಾಪಸ್ ಕಳುಹಿಸುವ ಯತ್ನದಲ್ಲಿದ್ದಾಗ ಗುರುಗಳಿಗೆ ಎಚ್ಚರವಾಯಿತು. ‘ಭೀಮೂ, ಏನದು’ ಎಂದರು. ಅನಿವಾರ್ಯವಾಗಿ ನಡೆದ ಸಂಗತಿಯನ್ನು ಗುರುಗಳಲ್ಲಿ ನಿವೇದಿಸಿದರು. ‘ಹಾಗೆ ಬಂದವರನ್ನು ಎಂದೂ ವಾಪಸ್ ಕಳುಹಿಸಬಾರದು. ಎಲ್ಲಿ, ವೀಣೆ ತಗೊ’ ಎಂದ ಶೇಷಣ್ಣನವರು ಸುಮಾರು ಒಂದೂವರೆ ಗಂಟೆ ಆ ಕಾನ್ಸ್ಟೇಬಲ್ಗೆ ನಾದಾಮೃತವನ್ನು ಉಣಬಡಿಸಿ ಕಳುಹಿಸಿದರು. ಇದು ಆ ಕಲೋಪಾಸಕನ ಸ್ವಭಾವ.

ಬೆಳಗಾವಿಯ ಆ ಅಧಿವೇಶನದಲ್ಲಿ ಪ್ರಾರ್ಥನೆ ಹಾಡಿದ್ದ ಮತ್ತೊಬ್ಬ ಮೈಸೂರಿಗರೆಂದರೆ ತಿರುಮಲೆ ರಾಜಮ್ಮನವರು. ಪತ್ರಿಕೋದ್ಯಮದ ಭೀಷ್ಮ ಎಂದೇ ಹೆಸರಾಗಿದ್ದ ತಿ.ತಾ.ಶರ್ಮರ ಪತ್ನಿ. ಅವರ ಗಾಯನವನ್ನೂ ಗಾಂಧೀಜಿ ಮೆಚ್ಚಿದ್ದರು. ಈಕೆಯೂ ಶೇಷಣ್ಣನವರಲ್ಲಿ ವೀಣಾಭ್ಯಾಸ ಮಾಡಿದ್ದವರೇ. ಹೀಗೆ 1924ರ ಕಾಂಗ್ರೆಸ್ ಅಧಿವೇಶನಕ್ಕೂ ಮೈಸೂರಿಗೂ ಒಂದು ಅವಿನಾಭಾವ ಸಂಬಂಧ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.