ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ನಮ್ಮ ಮನದ ಪ್ರಿಯ ಬಂಧುವೇ...

Published 13 ಆಗಸ್ಟ್ 2023, 0:31 IST
Last Updated 13 ಆಗಸ್ಟ್ 2023, 0:31 IST
ಅಕ್ಷರ ಗಾತ್ರ

ಡಾ.ನಿಂಗಪ್ಪ ಮುದೇನೂರು

ನೀನು ಆ ಮನೆ ಖಾಲಿಮಾಡಿರಬಹುದು
ಆದರೆ ಈ ಮನವನ್ನಲ್ಲ
ಮುಂದೊಮ್ಮೆ ಮತ್ತೆ ನೀನು ಆ ಮನೆಗೆ ಬರಲೂಬಹುದು
ಹಾಕಿದ ಚಾವಿಯನ್ನು ಅವರಿಗೊಪ್ಪಿಸಿ
ಬಂದಿರುವೆಯಷ್ಟೆ


ಗೋಡೆ ಗಡಿಯಾರ ಅಜ್ಜಿಯ ನೂಲು
ತಾತನ ನೆನಪು ಅಪ್ಪ ಅಮ್ಮರು ಹೇಳಿದ
ಹಿತವಚನಗಳೆಲ್ಲಾ ಇಲ್ಲಿ ಕಾಲದ ಚಿಗುರಾಗಿ 
ಅರಳಿನಿಂತಿರಬಹುದು


ನೀನು ನುಡಿದ ಬಿರುನುಡಿಯೊಂದು
ಮನೆಯಿಂದ ಆಚೆತಳ್ಳಿದರೂ
ಮತ್ತೆ ಜೋಡಿಸುವ ಬಳ್ಳಿ ಹುಡುಕಿ ಹೊರಟೆ
ಹತ್ತು ನೂರು ಸಾವಿರ ಲಕ್ಷ ದನಿಗಳಲ್ಲಿ
ಪ್ರತಿಧ್ವನಿಯಾದೆ


ಎಲ್ಲಿ ರಕ್ತದ ಮಡುವುಗಟ್ಟಿ ಕಣ್ಣೀರಲ್ಲಿ ಬದುಕು 
ತೊಳೆದುಹೋಗಿತ್ತೋ ಅಲ್ಲೊಂದು ನಿನ್ನ 
ಪಾದದ ಗುರುತು ಮಗುವಿನಂತೆ ಉಳಿದಿತ್ತು
ಸರ್ವ ಜನಾಂಗದ ಶಾಂತಿಯ 
ಹೂದೋಟವೊಂದು
ತುಂಬು ಅರಳಿ ನಿನ್ನ ಅಪಮಾನಕೆ 
ಉತ್ತರವಾಯಿತು


ಅವರಂತೆ ನೀನೂ ನಮ್ಮ ಮನೆಯ ಬಂಧುವೇ
ಈ ಮಣ್ಣ ಕಣದಲ್ಲಿ ನಿಂತ ಮಹಾಬಿಂದುವೇ!
ಸೂರ್ಯ ಎಂದಿನಂತೆ ಪೂರ್ವದಲ್ಲಿಯೇ 
ಮೂಡುತ್ತಾನೆ
ಅವನೆಷ್ಟೇ ಉರಿಯುಂಡರೂ ಬೆಳಕ 
ತಂಪುನೀಡುವುದನ್ನು
ಮರೆಯುವುದಿಲ್ಲ
ಚಂದ್ರನ ಜೊತೆ ಅವನು ಮಾತನ್ನೆಂದೂ 
ಬಿಡುವುದಿಲ್ಲ

ನಾವು ಮನುಷ್ಯರು
ಅಂತರಂಗದಲ್ಲಾದರೂ ಪಿಸುಮಾತ 
ನುಡಿಯಬೇಕು
ಬಿರುನುಡಿಯ ಮರೆತು
ಪ್ರೀತಿ ಹಂಚಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT