ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದು ನಾಯಿ

Last Updated 5 ಜನವರಿ 2019, 19:31 IST
ಅಕ್ಷರ ಗಾತ್ರ

ಅವರು ಹೆಸರಾಂತ ಸ್ವಾಮಿಗಳು.
ಈಗಲೂ ಇದ್ದಾರೆ. ತುಂಬಾ ಭಾವುಕರು.
ಕೆಲವೊಮ್ಮೆ ಗೊತ್ತಿಲ್ಲದೇ ಏನೇನೋ ಮಾತಾಡಿ ಮಾಡಲು ಹೋಗಿ, ಇಲ್ಲದ ತೊಂದರೆ ತಂದುಕೊಳ್ಳುತ್ತಾರೆ
ಅವರಿಗೆ ನಮ್ಮ ಯಕ್ಷಗಾನ ಅಂದರೆ ಪ್ರಾಣ.
ಆಟ ಆಡಿಸುತ್ತಿದ್ದರು.

***
‘ರಾತ್ರಿ ಬೇಗ ಆಟ ಶುರು ಮಾಡಿ ಬೇಗ ಮುಗಿಸಿದರೆ ಒಳ್ಳೆಯದು. ಕೊನೆಯವರೆಗೆ ಜನ ನಿಲ್ಲುವುದಿಲ್ಲ’
ಆಗಲೇ ಟಿ.ವಿ. ಯುಗ ಬಂದಾಗಿತ್ತು.
ನಾನೆಂದರೆ ಆ ಸ್ವಾಮಿಗಳಿಗೆ ಸಲಿಗೆ.
ಯಾವಾಗಲಾದರೂ ಹೊತ್ತು ಗೊತ್ತು ಇಲ್ಲದೇ ಕರೆಯುತ್ತಾರೆ.
‘ಭಟ್ಟರೇ, ಬನ್ನಿ ಕೆಲಸ ಇದೆ’.
ನಾನು ಅವರ ಬಳಿಗೆ ಓಡುವುದು.
ಸುಮ್ಮನೆ ಅವರಿಗೆ ಸಮಯ ಕಳೆಯಲಿಕ್ಕೆ ನಾನು.
ಆದರೆ ಸ್ವಾಮಿಗಳಿಗೆ ಸಂಜೆ ಪೂಜೆಯ ಹೊತ್ತು.
ಬಿಡುವ ಹಾಗಿಲ್ಲ
‘ಇಲ್ಲ’. ಅವರ ಮಾತು ದೃಢ.
‘ರಾತ್ರಿ ಒಂಬತ್ತರ ಮೇಲೆಯೇ ಶುರು ಮಾಡಿ’.
‘ನಾನು ಎಲ್ಲರ ಕುಣಿತವನ್ನು ನೋಡಬೇಕು. ಅವರು
ಆಡುವುದನ್ನು ಕುಣಿಯುವುದನ್ನು ನಾನು ನೋಡಬೇಕು.
ಮತ್ತೆ ನಾನು ನೋಡಲಿಲ್ಲ ಎಂದು ಅವರಿಗೆ ಬೇಸರವಾಗಬಾರದು’.

***
ಹಾಗಾಗಿ ರಾತ್ರಿ ತಡ ಆಟ ಶುರು ಆಗುತ್ತಿತ್ತು.
ಆಟ ಮುಗಿಸಿ ಮನೆಗೆ ಬರುವುದು ಸರಿರಾತ್ರಿಗೆ.
ಆ ದಿನ ಜೋರು ಮಳೆ.
ನಾನು ಮನೆಗೆ ಬರುವಾಗ ಒಂದು ನಾಯಿ ಬಾಗಿಲಲ್ಲಿ ಮಲಗಿದ್ದು,
ನನ್ನನ್ನು ನೋಡಿದ ಕೂಡಲೇ ಓಡಿಹೋಯಿತು.

***
ನನಗೆ, ‘ಪಾಪ. ಯಾರ ಮನೆಯದ್ದೋ ಅಥವಾ ದಾರಿ
ತಪ್ಪಿರಬೇಕು ಬಂದಿರಬೇಕು. ಉಪವಾಸ ಇರಬೇಕು’
ಅನ್ನಿಸಿತು. ಹಾಗಂತ ನನಗೆ ಪ್ರಾಣಿಗಳನ್ನು
ಸಾಕುವುದರಲ್ಲಿ
ಅಂತಹಾ ಆಸಕ್ತಿಯಿಲ್ಲ.
ಆದರೂ ಮನೆಯಲ್ಲಿ ತಂದಿಟ್ಟ ಹಳೆಯ ಬ್ರೆಡ್ ಇತ್ತು.
ತಂದು ಹೊರಗೆ ಇಟ್ಟು ಬಾಗಿಲು ಹಾಕಿ ಮಲಗಿದೆ.

***
ಮರುದಿನವೂ ರಾತ್ರಿ ಆ ನಾಯಿ ಹಾಜರ್!
ನಾನು ಹಾಕುವ ಬ್ರೆಡ್‌ಗಾಗಿ.
ಅಲ್ಲಿಯೇ ಬಾಲ ಅಲ್ಲಾಡಿಸುತ್ತಾ ನಿಂತಿದೆ.
ನೋಡಲೂ ಚೆನ್ನಾಗಿದೆ.
ಯಾರ ಮನೆಯದ್ದೋ ಏನೋ?
ಬಹುಶಃ ಬುದ್ಧಿ ಕಲಿಸಿದ ನಾಯಿ ಇರಬೇಕು.
ಬೇರೆ ಊರಿಗೆ ವರ್ಗವಾಗಿ ಹೋಗುವಾಗ ಸಾಕಿದ್ದ ಇದು ಹೆಚ್ಚಾಗಿರಬೇಕು. ಅದಕ್ಕೇ ಬಿಟ್ಟು ಹೋಗಿರಬೇಕು.

***
ಅದಕ್ಕೆ ಎದುರು ಕೋರೆ ಹಲ್ಲು ಇರಲಿಲ್ಲ.
ಹಾಗಾಗಿ ಕಚ್ಚಿದರೂ ಅಪಾಯ ಇಲ್ಲ.
ಹಾಗೆ ಮನೆ ಸೇರಿದ ಆ ನಾಯಿ, ಅದಕ್ಕೆ ಹೆಸರು ಇಟ್ಟೆನಾ? ಗೊತ್ತಿಲ್ಲ. ಅದು ಬೇಡ.
ಅದಕ್ಕೆ ಅನ್ನ ಕೊಟ್ಟದ್ದಕ್ಕೆ ನಮ್ಮ ಮನೆಯನ್ನು ಕಾಯತೊಡಗಿತು.
ಯಜಮಾನಿಕೆಗೆ ತೊಡಗಿತು.
***

ಒಮ್ಮೆ ಆಕಸ್ಮಿಕವಾಗಿ ಅದು ನೆರೆಮನೆಯ ಹೆಂಗಸಿಗೆ ಕಚ್ಚಿತು ಎಂದು ಹತ್ತಿರದ ನಾಲ್ಕು ಮನೆಯವರು ಬೆಳಿಗ್ಗೆ ಬೆಳಿಗ್ಗೆ ಬಂದು ‘ನಿಮ್ಮ ನಾಯಿಯನ್ನು ನಾವು ಕೊಲ್ಲುತ್ತೇವೆ. ಅದು ದಾರಿಯಲ್ಲಿ ಹೋಗುವವರಿಗೆ ಕಚ್ಚುತ್ತದೆ’
ಎಂದರು.
ನಾನು, ‘ಅಡ್ಡಿಲ್ಲ. ಹಾಗೇ ಮಾಡಿ’
ಅಂದೆ.
ನನಗೆ ನೋವಾಗಿತ್ತು. ಅದು ಆ ಹೆಂಗಸಿಗೆ ಕಚ್ಚಿರಲಿಲ್ಲ.
ಇದು ಬೊಗಳಿದ್ದು ನೋಡಿ ಅವಳಿಗೆ ಗಾಬರಿಯಾಗಿರಬೇಕು. ಓಡಿದಳು. ಬಿದ್ದಳು.
ಆದರೆ ಅಪವಾದ ನಾಯಿಯ ಮೇಲೆ.
ಅದಕ್ಕೆ ಮಾತಾಡಲು ಬರುವುದಿಲ್ಲವಲ್ಲ!

***
ರಾತ್ರಿ ಗೋಳೋ ಎಂದು ಅಳುವ ಶಬ್ದ!
ಎಚ್ಚರಾಯಿತು.
ಏನೆಂದು ನೋಡಲು ಹೊರಗೆ ಬಂದೆ.
ಮಗಳು.
ನಾಯಿಯ ಹತ್ತಿರ ಇದ್ದಾಳೆ.
ಅದರ ಕುತ್ತಿಗೆ ಅಪ್ಪಿ ಹಿಡಿದುಕೊಂಡು ಅಳುತ್ತಿದ್ದಾಳೆ.
ನನ್ನನ್ನು ನೋಡಿ,
‘ಅಪ್ಪಾ, ನಿನಗೆ ಏನೂ ಅನ್ನಿಸುವುದಿಲ್ಲವೆ?
ಅವರೆಲ್ಲ ಸೇರಿ ನಮ್ಮ ನಾಯಿಯನ್ನು ಬಡಿದು ಕೊಲ್ಲುತ್ತಾರೆ’.
ನನಗೆ ತಡೆಯಲಾಗಲಿಲ್ಲ.
‘ಚಿತ್ರಹಿಂಸೆ ಮಾಡುತ್ತಾರಲ್ಲವೆ?’

***
ಮರುದಿನವೇ ಬೆಳಿಗ್ಗೆ.
ಬಾಡಿಗೆ ಕಾರು ತರಿಸಿ ಅದರಲ್ಲಿ ಆ ನಾಯಿಯನ್ನು ಕೂರಿಸಿ ಕೂರಾಡಿಗೆ ಬಂದೆ. ಅಲ್ಲಿ ಬಿಟ್ಟು ತಮ್ಮನಿಗೆ ಹೇಳಿದೆ–
‘ನೀನು ಮಾಡುವ ಊಟದಲ್ಲಿ ಇದಕ್ಕೆ ಒಂದಷ್ಟು ಹಾಕು. ಅದು ಮೋಸ ಮಾಡುವುದಿಲ್ಲ.’
ಪಾಪ. ಅದಕ್ಕೇನು ಗೊತ್ತು? ತನಗೆ ಅನ್ನ ಇತ್ತವನ ಆಜ್ಞೆ.
ಹೇಳಿದ ಕೂಡಲೇ ಬಾಲ ಅಲ್ಲಾಡಿಸುತ್ತಾ ಬಂದು ಕಾರಿನ ಹಿಂದಿನ ಸೀಟಿನಲ್ಲಿ ಹೇಳಿದ ಕೂಡಲೇ ಮನುಷ್ಯರಂತೆ ಬಂದು ಕುಳಿತಿತ್ತು.

***
ಕೂರಾಡಿ.
ಅದು ನಮ್ಮ ಹಿರಿಯರ ಮನೆ.
ಅಲ್ಲಿ ಆ ನಾಯಿ ಬಹಳ ಕಾಲ ಇತ್ತು
ಅನ್ನ ಹಾಕಿದ ಅವರ ಸೇವೆ ಮಾಡುತ್ತಾ.

***
ಒಮ್ಮೆ ಆ ಮನೆಗೆ ಯಾರೋ ಗಿರಾಕಿಗಳು ಬಂದಿದ್ದರು. ಅವರದು ಹುಲ್ಲು ವ್ಯಾಪಾರ. ಹೀಗೇ. ಲಾಭಕ್ಕಲ್ಲ.

***
ಹುಲ್ಲು ಸೂಡಿ ಅವರಿಗೆ ಬೇಕಿತ್ತು.
ಹತ್ತೇ ಸೂಡಿ. ಲೆಕ್ಕ ಮಾಡಿ ಕೊಟ್ಟು ನನ್ನ ತಮ್ಮ ಮನೆಯ ಒಳಗೆ ಬಂದಿದ್ದರು.
ಹೊರಗೆ ಬೊಬ್ಬೆ ಹಾಕಿದ ಶಬ್ದ.
‘ನಾಯಿ ಕಚ್ಚಿದೆ. ಬನ್ನಿ. ಬಿಡಿಸಿ.’
ಭಟ್ಟರ ತಮ್ಮ ಓಡಿದರು.

***

ಹೌದು. ನಾಯಿ ಸರಪಳಿಯನ್ನು ಬಿಡಿಸಿಕೊಂಡು ಹೋಗಿ, ಆ ಹುಲ್ಲು ಸೂಡಿ ಗಿರಾಕಿಯ ಪಂಚೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದೆ. ಕಚ್ಚಲಿಕ್ಕೆ ಅದಕ್ಕೆ ಹಲ್ಲಿಲ್ಲವಲ್ಲ!

***
ಅವನು. ಆ ಗಿರಾಕಿ.
ಹತ್ತು ಸೂಡಿಯ ಬದಲು ಇಪ್ಪತ್ತು ಒಯ್ಯುತ್ತಿದ್ದ.

***
ಮತ್ತೊಮ್ಮೆ ಹೀಗಾಯಿತು.
ಒಬ್ಬ ಕೆಲಸದ ಹೆಂಗಸು. ಮನೆಯ ಎದುರಿನಿಂದ ಹೋಗುತ್ತಿದ್ದಳು.
ಮಧ್ಯಾಹ್ನದ ಹೊತ್ತು.
ಎಲ್ಲರೂ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಸಮಯ.
ಇದ್ದಕ್ಕಿದ್ದಂತೆ ಬೊಬ್ಬೆ! ‘ನಾಯಿ ಕಚ್ಚಿದೆ ಬನ್ನಿ. ಕಾಪಾಡಿ. ಕಾಪಾಡಿ’

***
ಕಚ್ಚಲಿಕ್ಕೆ ಅದಕ್ಕೆ ಚೂಪಾದ ಕೋರೆ ಹಲ್ಲಿದ್ದರಲ್ಲವೆ?
ಮೊದಲೇ ಹೀಗೆಲ್ಲ ಆಗಬಹುದೆಂದು ಕಿತ್ತು ಹಾಕಿದ್ದರಲ್ಲ.

***
ಅದರೂ ಬೊಬ್ಬೆ ಕೇಳಿದ ತಮ್ಮ ಓಡಿದ.
ನಾಯಿ ಅವಳ ಸೀರೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದೆ.
ಮತ್ತೆ ಹೇಳುತ್ತಿದ್ದೇನೆ,
ಅದಕ್ಕೆ ಕಚ್ಚಲು ಕೋರೆ ಹಲ್ಲೇ ಇರಲಿಲ್ಲ.
ಮತ್ತೆ ತನ್ನ ಸರಪಳಿಯನ್ನು ಕುತ್ತಿಗೆಯಿಂದ ಬಿಡಿಸಿಕೊಂಡು ಹೋಗಿ ಬಾಯಿಯಲ್ಲಿ ಅವಳ ಸೀರೆ ಹಿಡಿದು ಎಳೆಯುತ್ತಿದೆ.
ಆ ಕೆಲಸದವಳು ತನ್ನ ಕೈಯ ಕತ್ತಿಯಿಂದ ಅದಕ್ಕೆ ಹೊಡೆಯುತ್ತಿದ್ದರೂ, ಪೆಟ್ಟು ಹಾಕಿದರೂ ಅದು ಬಿಡುವುದಿಲ್ಲ.
ಅವಳ ಸೀರೆಯ ಮರೆಯಲ್ಲಿದ್ದ ಅಡಿಕೆ,
ತೋಟದಿಂದ ಕದ್ದು ಒಯ್ಯುತ್ತಿದ್ದ ಒಣ ಅಡಿಕೆ.
ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಅಂತಹ ನಾಯಿ ಅದು.

***
ತಮ್ಮನ ಮನೆಯ ನಾಯಿ.
ಬಹಳ ಕಾಲ ಅವರ ಸೇವೆ ಮಾಡಿ ಕೊನೆಯುಸಿರೆಳೆಯಿತು.
ನಂತರವೂ ಆ ನಾಯಿ ಇದೆ ಎಂದೇ ಕಳ್ಳಕಾಕರು ಮನೆಯ ಹತ್ತಿರ ಸುಳಿಯುತ್ತಿರಲಿಲ್ಲ.
ಅವರ ಮನೆಯ ಸುತ್ತಮುತ್ತ ಕಾಡು.
ಕುಡುಕನ ಉಪದ್ರವ.
ನಾಯಿ ಸಾಕಿದರೆ ರಾತ್ರಿ ಹೊತ್ತುಕೊಂಡು ಹೋಗುತ್ತದೆ.

***
ಯಾರೋ ಹೇಳಿದರಂತೆ.
ನಮ್ಮ ಮನೆಯಲ್ಲಿ ಒಂದು ನಾಯಿ ಇದೆ.
ಪ್ರೀತಿಯಿಂದ ಸಾಕಿದ್ದೇವೆ.
ನಮಗೆ ಹೆಚ್ಚಲ್ಲ.
ಬೇಕಾದರೆ ಕೊಡುತ್ತೇವೆ.
ಅವರ ತಮ್ಮ ಹೇಳಿದರಂತೆ.
‘ಬೇಡ ನಾವು ನಾಯಿಯನ್ನು ಕೊಲ್ಲುವುದಿಲ್ಲ. ನೀವೇ ಸಾಕಿ’

(ಎಸ್.ವಿ. ಭಟ್ಟರು ಹೇಳಿದ ಕತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT