ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಮನೆಯಲ್ಲಿ

Last Updated 18 ಮೇ 2019, 19:30 IST
ಅಕ್ಷರ ಗಾತ್ರ

ಬೆಳ್ಳಂಬೆಳಿಗ್ಗೆಯೆ ಫೋನ್ ರಿಂಗಣಿಸಿದರೆ ಯಾರು ಹೋದರೋ ಏನೋ ಎಂಬ ಭೀತಿ ಸದಾ ಕಾಡುತ್ತದೆ. ಅಪರಾತ್ರಿಯಲ್ಲಾದರೂ ಅಷ್ಟೆ.

ಕೊಯಮತ್ತೂರಿನ ಸದ್ಗುರುವಿನ ಆಶ್ರಮದಿಂದ ಗೆಳತಿಯರೊಂದಿಗೆ ಶಿವರಾತ್ರಿ ಆಚರಣೆ ಮುಗಿಸಿ, ಮರುದಿನ ಸತ್ಯಮಂಗಲ ಅರಣ್ಯವಲಯ ದಾಟುತ್ತ ಮುಸ್ಸಂಜೆಯಲ್ಲಿ ಅಲ್ಲಲ್ಲಿ ಸಿಗುವ ಜಿಂಕೆಮರಿಗಳನ್ನು ಕಣ್‍ತುಂಬಿಕೊಳ್ಳುತ್ತ ಪಯಣಿಸುತ್ತಿದ್ದವಳಿಗೆ ಮನೆಯಿಂದ ಬಂದ ಕರೆ ಚಿಕ್ಕಪ್ಪ ತೀರಿಹೋಗಿದ್ದನ್ನು ತಿಳಿಸಿತು. ಮತ್ತೆ ಮನೆ ತಲುಪಿದಾಗ ರಾತ್ರಿ 2.30 ದಾಟಿತ್ತು. ಪರಿವಾರದ ಕೆಲವರು ಮೃತದೇಹದ ಬಳಿ ಕುಳಿತಿದ್ದರು. ಓರಗಿತ್ತಿಯೊಬ್ಬರು ಪಾಳಿ ವರ್ಗಾಯಿಸುವರಂತೆ ನೀನು ಕುಳಿತುಕೊ ನಾನಿನ್ನು ಹೊರಟೆ ಎಂದು ರೂಮು ಸೇರಿದರು. ಬೆಳಗಾಯಿತು, ಸ್ನಾನ ಮಾಡಿಸಿ ಶವದ ಶೃಂಗಾರವಾಯಿತು. ನೆಂಟರಿಷ್ಟರ ಆಗಮನದೊಂದಿಗೆ ಸಾವಿನ ಮನೆಯ ವಿಷಾದ ಮೆಲ್ಲಮೆಲ್ಲನೆ ಕರಗಿ, ಗಿಜಿಗುಡಲಾರಂಭಿಸಿತು.

ನವಿರಾಗಿ ಸಿಂಗರಿಸಿಕೊಂಡವರು, ಯಾವುದೋ ಸಮಾರಂಭಕ್ಕೆಂಬಂತೆ ಅಲಕರಿಸಿಕೊಂಡವರು ಬರಲಾರಂಭಿಸಿದರು. ಸಾವಿನ ಮನೆಯೆಂದರೆ ಸ್ವಲ್ಪ ಹಳೆಯ ಸೀರೆ ಉಟ್ಟು, ಮುಖ ತೊಳೆದು ಕುಂಕುಮ ಇಟ್ಟು ಮನೆಯಂಗಳದಲ್ಲಿಯೋ ಹಿತ್ತಲಲ್ಲಿಯೋ ಬೆಳೆದ ಕನಕಾಂಬರ, ಮಲ್ಲಿಗೆಯನ್ನು ಮಾಲೆ ಮಾಡಿಕೊಂಡು ತೀರಿಕೊಂಡವರಿಗೆ ಹಾಕಿ, ನಮಸ್ಕರಿಸಿ ಬರುತ್ತಿದ್ದ ನನ್ನ ಅತ್ತೆ ಹೇಳುತ್ತಿದ್ದುದು ನನಗೀಗ ನೆನಪಾಗುತ್ತಿದೆ. ಸಾವಿನ ಮನೆಗೆ ಸಾಂತ್ವನ ಹೇಳಹೊರಟಾಗ ಆಡಂಬರ, ಅಲಂಕಾರ ಬೇಡ. ನೊಂದ ಮನಸ್ಸುಗಳೆದುರು ನಾವು ಗಂಭೀರವಾಗಿರಬೇಕು. ಅಂತಃಕರಣದ ಒಂದೆರಡು ಮಾತಾಡಬೇಕು. ನಿಮ್ಮೊಂದಿಗೆ ನಾವಿದ್ದೇವೆಂಬ ಆತ್ಮೀಯ ಸ್ಪರ್ಶ ಇರಬೇಕು ಎಂದು ಅವರು ಹೇಳುತ್ತಿದ್ದರು. ಇಂದು ನಮ್ಮೊಂದಿಗೆ ಅವರೂ ಇಲ್ಲ.

ಹಲವು ಬಗೆಯ ಜನರ ಆಗಮನದೊಂದಿಗೆ ಹಲವು ಬಗೆಯ ಮಾತುಗಳು ಹರಿದಾಡಲಾರಂಬಿಸಿದವು. ಬಹುಕಾಲದಿಂದ ಹಾಸಿಗೆ ಹಿಡಿದಿದ್ದರು, ಹೋಗಿದ್ದು ಒಳ್ಳೆಯದಾಯಿತು ಎಂದು ಮನೆಯೊಡತಿಯನ್ನು ಬಂದವರೊಬ್ಬರು ಸಂತೈಸಿದಾಗ, ‘ಹೌದಕ್ಕ ನನಗೂ ರೋಸಿಹೋಗಿತ್ತು. ಸದ್ಯ ಸತ್ತರು. ಇಲ್ಲವಾದರೆ ಮಾಡಿ ಮಾಡಿ ನಾನೇ ಸಾಯುತ್ತಿದ್ದೆ’ ಎಂದು ಮನಸ್ಸಿನ ಕಹಿ ಸತ್ಯವನ್ನು ಹೊತ್ತುಗೊತ್ತು ಇಲ್ಲದೇ ಆಕೆ ಹೊರಹಾಕಿದರು. ಮುಪ್ಪು, ಸಾವು ಎಲ್ಲರ ಬದುಕಿನ ಕಟು ಸತ್ಯಗಳೆ. ಆದರೆ ವ್ಯಕ್ತಿಯಿಂದ ಯಾವುದೇ ಉಪಯೋಗವಿರದಿದ್ದರೆ ಅವರ ಸಾವು ಮನೆಯವರಿಗೆ ತಟ್ಟುವುದೇ ಇಲ್ಲವೇ? ಈ ಮಟೀರಿಯಲ್ ಯುಗದಲ್ಲಿ ಆತ್ಮೀಯರ ಅಗಲಿಕೆಗೆ ಅಂತಃಕರಣ ಅಳುವುದೇ ಇಲ್ಲವೇ ಎಂದು ಚಿಂತಿಸುತ್ತಾ, ಅಲ್ಲೇ ಗೋಡೆಗೊರಗಿ ನಿಂತೆ. ಬೇಡವೆಂದರೂ ನಗು ಮಾತುಗಳು ಅತ್ತಿತ್ತಲಿಂದ ಕಿವಿಯ ಮೇಲೆ ಬೀಳುತ್ತಲೇ ಇದ್ದವು.

ಮಾವನವರ ಮೊಮ್ಮಕ್ಕಳ ಸೊಸೆಯಂದಿರಿಗೆ ತಾವು ಇತ್ತೀಚೆಗೆ ದುಬೈ ಪ್ರವಾಸ ಹೊರಟಿರುವುದರ ಬಗ್ಗೆ ಮತ್ತು ಮುಂದಿನ ತಿಂಗಳು ನಡೆಯಲಿರುವ ಸಂಬಂಧಿಕರ ಮದುವೆಗೆ ಕಾಂಜೀವರಂ ಸೀರೆಗಳನ್ನು ಕೊಳ್ಳಲು ಕಂಚಿಗೆ ಹೋಗುವುದರ ಬಗ್ಗೆ ಮುಂಬಾಗಿಲ್ಲೆ ಚರ್ಚೆ ಏರ್ಪಟ್ಟಿತ್ತು. ಇನ್ನೊಂದು ಗುಂಪು ಶಾಮಿಯಾನದ ಕೆಳಗೆ ಕುಳಿತು ನಿಂತು ಚರ್ಚಿಸುತ್ತಿದ್ದ ವಿಷಯಗಳಿಗೆ ಕೊನೆಮೊದಲಿರಲಿಲ್ಲ. ಗಂಡಸರ ಗುಂಪಿನಲ್ಲಿ ಕುಸಿಯುತ್ತಿರುವ ಕಾಫಿದಾರಣೆ, ಕಾಳು ಮೆಣಸಿನ ಬಗ್ಗೆ ಚರ್ಚೆ ಏರ್ಪಟ್ಟಿದ್ದರೆ, ಹೆಂಗಸರ ಗುಂಪಿನ ಹರಟೆ ದೀಪಿಕಾ ಪದ್ಮಾವತ್‌ನಲ್ಲಿ ಧರಿಸಿದ ಒಡವೆ ಸೀರೆಗಳಿಂದ ಹಿಡಿದು ಕರೀನಳ ಮಗುವಿನ ದಾದಿಯ ಸಂಬಳದವರೆಗೂ, ಇತ್ತೀಚೆಗೆ ಭೇಟಿಕೊಟ್ಟ ಲ್ಯಾಕ್ಮೆ ಸಲೂನ್‌ವರೆಗೂ ಹರಿದಾಡುತ್ತಿತ್ತು. ಕೆಲವರು ಸೊಸೆಯರ ಬಗ್ಗೆ ತಕರಾರು ಹೇಳುತ್ತಿದ್ದರೆ, ಸೊಸೆಯರು ಕಾಡುವ ಅತ್ತೆಯರ ನಿವಾರಣೆಗೆ ಉಪಾಯ ಹೆಣೆಯುತ್ತಿದ್ದರು.

ನಾನು ಇವರೆಲ್ಲರ ಮಧ್ಯದಲ್ಲಿದ್ದರೂ ಮನಸ್ಸು ಅಸ್ತವ್ಯಸ್ತವಾಗಿತ್ತು. ಅಷ್ಟರಲ್ಲಿ ಚಿಕ್ಕಪ್ಪನ ಮೊದಲನೇ ಸೊಸೆ ರೂಪ ಹೆಗಲ ಮೇಲೆ ಕೈಇಟ್ಟಾಗ ವಾಸ್ತವಕ್ಕೆ ಬಂದೆ.
ನೀನು ಏನೇ ಹೇಳು. ಮಾವನಿಗೆ ಕಿರಿ ಮಗನ ಮೇಲೇ ಪ್ರೀತಿ. ಇಷ್ಟು ದೊಡ್ಡ ಮನೆಯನ್ನು ಹೇಗೆ ಹೊಡೆದುಕೊಂಡ್ರು ನೋಡು. ಒಂದು ಔಷಧಿಗೆ ಖರ್ಚು ಮಾಡಲಿಲ್ಲ. ಆಸ್ಪತ್ರೆ ಬಿಲ್ ಕಟ್ಟಲಿಲ್ಲ. ಮಾತಲ್ಲೆ ಮರುಳು ಮಾಡಿಬಿಟ್ರು ಎಂದಳು. ಅಷ್ಟರಲ್ಲಿ ಅವಳ ಗೆಳತಿ ತಾರಾ ಬಂದಿದ್ದರಿಂದ ಸತ್ತ ಮಾವನ ಮೇಲಿನ ದೂರನ್ನು ಮೊಟಕುಗೊಳಿಸಿ ಹೇಗೆ ನಡಿತಿದೆಯೆ ಮಗಳ ಮದುವೆ ತಯಾರಿ? ಶಾಪಿಂಗ್ ಎಲ್ಲಾ ಮುಗಿತಾ? ಮದುವೆಗೆ ಬಂದವರಿಗೆ ತಾಂಬೂಲದ ಜೊತೆ ಏನು ಉಡುಗೊರೆ ಕೊಡುತ್ತೀಯೆ? ಎಂದು ಪ್ರಶ್ನೆಗಳ ಸುರಿಮಳೆಗೈದಳು. ಅವಳ ಲಹರಿ ಆಕಡೆ ಹರಿದಿದ್ದರಿಂದ ಮೆಲ್ಲನೆ ಪಾರ್ಥಿವ ಶರೀರದತ್ತ ಅಡಿಯಿಟ್ಟೆ. ಶಾಂತವಾಗಿ ಮಲಗಿದ್ದ ಚಿಕ್ಕಪ್ಪನ ಮುಂದೆ ಪೂಜೆಗೆಂದು ಜೋಡಿಸಿಟ್ಟಿದ್ದ ಬೆಳ್ಳಿ ಕಳಸ, ಪೂಜೆಯ ಸಾಮಾನುಗಳನ್ನು ನೋಡಿ ದೂರದ ಸಂಬಂಧದ ಮಹಿಳೆಯರಿಬ್ಬರು ಸಾವಲ್ಲೂ ಇವರ ಆಡಂಬರ ನೋಡಿ ಎಂದು ಪಿಸುಗುಟ್ಟುತ್ತಿದ್ದರು.

25 ವರ್ಷದ ಹಿಂದೆಯೇ ತೀರಿಹೋದ ಚಿಕ್ಕಮ್ಮ ಇನ್ನೂ ಇದ್ದಿದ್ದರೆ ಚಿಕ್ಕಪ್ಪನ ಶರೀರವಿಂದು ಸಿಂಗರಿಸಿಕೊಂಡು ಒಂಟಿಯಾಗಿ ಕೂರುತ್ತಿರಲಿಲ್ಲವೇನೋ ಅನ್ನಿಸಿತು. ಕಳೆದ ವರ್ಷ ಮನೆ ಕೆಲಸಕ್ಕೆಂದು ಬರುವ ಮಣಿಯ ವೃದ್ಧ ತಾಯಿ ತೀರಿ ಹೋದಾಗ ಬಡತನದ ಆ ಮನೆಯವರ ರೋದನ ಹೆಣ ಎತ್ತುವಾಗಲಂತೂ ಮುಗಿಲು ಮುಟ್ಟಿತ್ತು. ಈಗಲೂ ಅಪ್ಪನ ಬಗ್ಗೆ ಮಾತಾಡುವಾಗ ಅವಳ ಕಣ್‍ತುಂಬುತ್ತವೆ. ಪುಟ್ಟ ಮನೆ ಬಿಟ್ಟರೆ ಅವಳಿಗೆ ಅಪ್ಪನಿಂದ ಸಿಕ್ಕಿರುವ ಆಸ್ತಿಯೆಂದರೆ ಕಾಯಿಲೆಯ ಅವ್ವ.

ಚಿಕ್ಕಪ್ಪ ಕೋಟ್ಯಂತರ ರೂಪಾಯಿಯ ಆಸ್ತಿ ಉಳಿಸಿ ಹೋಗಿದ್ದರೂ ಅವರಿಗಿಲ್ಲಿ ಒಂದು ಹನಿ ಕಣ್ಣೀರು ಮಿಡಿಯುವರಿಲ್ಲ. ನೆರವು ಪಡೆದವರಿಂದ ಸ್ಮರಣೆಯಿಲ್ಲ. ಇಷ್ಟೇನಾ ಜೀವನಾ ಎನ್ನಿಸಿತು. ವೇದನೆಯಿಂದ ಹಿಂದಿನ ಬಾಗಿಲ ಬಳಿ ಬಂದಾಗ ಚಿಕ್ಕಪ್ಪನ ಅನುಗಾಲದ ಸಂಗಾತಿ ಟಾಮಿ ಬಟ್ಟಲಲ್ಲಿದ್ದ ಹಾಲು, ಪಕ್ಕದಲ್ಲಿದ್ದ ಬ್ರೆಡ್ ತುಣುಕುಗಳನ್ನು ಮುಟ್ಟದೇ ಶೋಕ ಆಚರಿಸುತ್ತಿತ್ತು. ಪಕ್ಕದ ಶಾಮಿಯಾನದಲ್ಲಿ ತಮ್ಮೊಳಗೆ ಪ್ರಸ್ತುತ ರಾಜಕಾರಣದ ಬಗ್ಗೆ ಚರ್ಚಿಸುತ್ತಾ ನೆಂಟರೆಲ್ಲಾ ಊಟ ಮಾಡುತ್ತಿದ್ದರು. ಇದೆಲ್ಲಾ ನೋಡಿದ ನನ್ನೊಳಗಿನ ಆತ್ಮ ಸಾಕ್ಷಿ ಕೇಳಿದ್ದಿಷ್ಟೆ: ನಾವೆಲ್ಲಾ ಇಷ್ಟೊಂದು ಸಂವೇದನಾರಹಿತ ಆಗುತ್ತಿದ್ದೇವೆಯೆ? ಸಾವಿನ ಮನೆಯಲ್ಲಿ ಇಷ್ಟೊಂದು ಮಾತುಗಳು ಬೇಕೆ? ಒಂದು ಗಂಟೆಯಾದರೂ ಮೌನವಾಗಿರಲು ಆಗದೇ? ಜೀವನದಲ್ಲಿ ದುಃಖದ ಪ್ರಸಂಗಗಳು ಬರುತ್ತವೆ. ಹಾಗೆಂದು ಜೋರಾಗಿ ಅಳಲೇಬೇಕೆಂದೇನಿಲ್ಲ. ಕ್ಷಣಕಾಲ ಸತ್ತವರ ಬಗ್ಗೆ ಸಂತಾಪ ಬೇಡವೇ? ಜೀವನ ಎಂದರೆ ಕಂಚಿಸೀರೆ, ಒಡವೆ, ವಿದೇಶ ಪ್ರವಾಸವಲ್ಲ; ಅದಕ್ಕೂ ಹಿರಿದಾಗಿಲ್ಲವೆ? ನಾವೇ ಹೀಗಾದರೆ ನಮ್ಮ ಮಕ್ಕಳು ಬಹುಶಃ ಆಸ್ಪತ್ರೆಯಿಂದ ಮೃತ ತಂದೆ ತಾಯಂದಿರ ಶರೀರವನ್ನು ಅಲ್ಲಿಂದಲೇ ಸ್ಮಶಾನಕ್ಕೆ ಸಾಗಿಸಿ ತಿಥಿ ಮುಂತಾದ ಕರ್ಮ ಮಾಡುವವರಿಗೆ ಪ್ಯಾಕೇಜ್ ವ್ಯವಸ್ಥೆ ಮಾಡಿಸಿ; ಅವರ ಕೆಲಸಗಳಿಗೆ ತೆರಳಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT