ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಯ್ಯ ದೇವರಮನಿ ಬರೆದ ಕಥೆ: ಕಲ್ಲೇಶಿ ಪ್ರೇಮ ಪುರಾಣ

Last Updated 18 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಪ್ರತಿನಿತ್ಯ ಬೆಳಿಗ್ಗೆ ಬೇಗ ಎದ್ದು ಮನೆ ಮುಂದಿನ ಕಲ್ಲುಗುಂಡಿನ ಒಲೆಗೆ ಜಾಲಿಕಟ್ಟಿಗೆ ಹಾಕಿ ಬೆಂಕಿಮಾಡಿ ಹಳೆಯ ಕಿತ್ತಲಿಯಲ್ಲಿ ಚಹಾ ಕಾಸಿಕೊಂಡು ಕುಡಿಯದಿದ್ದರೆ ಕಲ್ಲೇಶನಿಗೆ ಕೈ ಕಾಲುಗಳೇ ಆಡುವುದಿಲ್ಲ. ಒಂದೊತ್ತು ಕೂಳು ಇಲ್ಲದಿದ್ದರೂ ಪರವಾಗಿಲ್ಲ. ಚಹಾ ಮಾತ್ರ ತಪ್ಪದೆ ಟೈಮ್ ಟೈಮಿಗೆ ಬೇಕು. ಖಾಲಿ ಹೊಟ್ಟೆಗೆ ಚಹಾವನ್ನು ಸುರಿದುಕೊಳ್ಳದೆ ಅವನು ಬಹಿರ್ದೆಸೆಗೆ ಹೋಗುತ್ತಿರಲಿಲ್ಲ. ಎರಡು ಲೋಟ ಚಹಾವನ್ನು ಸೊರ್ ಸೊರ್ ಕುಡಿದನೆಂದರೆ ಎರಡೇ ಎರಡು ನಿಮಿಷಕ್ಕೆ ತುಂಬಿದ ಆಣೆಕಟ್ಟಿನ ಬಾಗಿಲು ತೆರೆದಂತೆ ನೀರುಕಡೆ ಹೋಗಿ ನಿರಾಳನಾಗುತ್ತಿದ್ದ. ಅನಂತರ ದನದ ಕೊಟ್ಟಿಗೆಯಲ್ಲಿನ ಹತ್ತಿಪ್ಪತ್ತು ಹೊತ್ತಲ ಸೆಗಣಿಯನ್ನು ತಿಪ್ಪೆಗಟ್ಟಿ ಬಂದು ತಣ್ಣೀರ ಬಾನಿಯಲ್ಲಿ ಹಲ್ಲುಜ್ಜಿ ಕೈಕಾಲು ಮುಖ ತೊಳೆದು ತನ್ನ ಕಟುಮಾದಲ್ಲಿ (ಮೂರು ಗಾಲಿಯ ಆಟೋರಿಕ್ಷಾ) ಊರಿನವರ ತರಕಾರಿಯನ್ನು ಬ್ಯಾಡಗಿ ಸಂತೆಗೆ ಸುರುವಿ ಬಂದರೆ ನಮ್ಮ ಕಿತ್ತಲಿ ಕಲ್ಲೇಶನ ದಿನದ ಅರ್ಧ ಕೆಲಸ ಮುಗಿದಂತೆ.

ಕಲ್ಲೇಶನಿಗೆ ಊರಿನ ಜನಗಳು ಕಿತ್ತಲಿ ಕಲ್ಲೇಶಿ ಅಂತಲೇ ಕರೆಯುತ್ತಿದ್ದರು. ಕಿತ್ತಲಿಗೂ ಅವನಿಗೂ ಜನ್ಮದಾರಭ್ಯದ ನಂಟು ಅಂತ ಕಾಣಿಸುತ್ತದೆ. ಎಡಗೈಯಲ್ಲಿ ಕಿತ್ತಲಿ ಬಲಗೈಯಲ್ಲಿ ಲೋಟ. ಬೇಕೆಂದಾಗ ಬಗ್ಗಿಸಿಕೊಂಡು ಹಿರುತ್ತಿದ್ದ. ಕಿತ್ತಲಿ ಸದಾ ಅವನ ಬಳಿ ಇರಲೇಬೇಕು. ಚಹಾ ಯಾರು ಮಾಡಿಕೊಟ್ಟರು ಕಲ್ಲೇಶನಿಗೆ ಸುತಾರಾಂ ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ಅವನೇ ಚಂದ್ರಣ್ಣನ ಅಂಗಡಿಯಿಂದ ಸಕ್ಕರೆ ಚಹಾಪುಡಿ ತಂದು, ಹಾಲು ಇದ್ದರೆ ಹಾಲು ಇಲ್ಲದಿದ್ದರೆ ಡಿಕಾಕ್ಷನ್ ಮಾಡಿಕೊಂಡು ಕುಡಿಯುತ್ತಿದ್ದ. ಅವನವ್ವ ಸಣ್ಣಿರವ್ವ ಹಾಲು ಜಾಸ್ತಿ ಹಾಕಿ ಕಾಸಿದ ಚಹಾವನ್ನು ಅವನು ಇಷ್ಟಪಡುತ್ತಿರಲಿಲ್ಲ. ಹಂಗಾಗಿ ಸಣ್ಣಿರವ್ವ ಅವನಿಗಾಗಿ ತುಮ್ಮಿನಕಟ್ಟಿ ಸಂತೆಯಿಂದ ಒಂದು ಅಲ್ಯೂಮೀನಿಯಂ ಕಿತ್ತಲಿ ತಂದುಕೊಟ್ಟಿದ್ದಳು. ಬಹುಕಾಲದಿಂದ ಅದರಲ್ಲೇ ಚಹಾ ಕಾಸುತ್ತಿದ್ದರಿಂದ ಅದು ಮಸಿಗಟ್ಟಿ ಕಪ್ಪಿಟ್ಟು ಹೋಗಿತ್ತು. ಹುಣಸೆಹಣ್ಣು ಇದ್ದಿಲು ಹಚ್ಚಿ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದು ಚಹಾ ಕಾಸಿಕೊಳ್ಳುತ್ತಿದ್ದ. ಚಳಿಗಾಲದಲ್ಲಿ ಒಂದೆರೆಡು ಲೋಟ ಹೆಚ್ಚೆ ಅಂದರೂ ತಪ್ಪಿಲ್ಲ. ಸಣ್ಣೀರವ್ವ ‘ಅದೇನು ತಾಸು ತಾಸಿಗೂ ಎಮ್ಮಿ ಮುಸುರಿ ಸೊರಗುಟ್ಟಿದಂಗೆ ಸೊಟರ್ ಸೊಟರ್ ಅಂತಾ ಕುಡಿತೀಯಾ... ಬಿಸಿರೊಟ್ಟಿ ಎಣ್ಣೆಗಾಯಿ ಪಲ್ಯ ಮಾಡೇನಿ ಉಣ್ಣು ಬಾ...’ ಅಂತ ಕರೆದರೆ ‘ಅಯ್ಯೋ ಬಿಡವ್ವ ಅದೇಕೆಂಗೆಳ್ತಿಯ ನಾನೇನು ಬ್ರ್ಯಾಂಡಿ ಸಾರಾಯಿ ಕುಡಿತಿನಾ...?’ ಎಂದು ಕೇಳುತ್ತಿದ್ದ. ಬೀಡಿ, ಸಿಗರೇಟು, ಎಲೆಡ್ಕಿ ತಂಬಾಕು ಇವತ್ತಿಗೂ ಮುಟ್ದೋನಲ್ಲ. ಚಹಾ ತಾನೇ ಕುಡುದ್ರೆ ಕುಡಿಲಿ ಅಂದಕೊಂಡು ಸಣ್ಣೀರವ್ವಳೂ ಸುಮ್ಮನಾಗುತ್ತಿದ್ದಳು. ಏನಾದ್ರೂ ಕೆಲಸದ ಮೇಲೆ ಬ್ಯಾಡಗಿ ಹೋದ್ರೆ ಸುಕನ್ಯಾ ಹೋಟೆಲ್ಗೆ ಹೋಗಿ ಬಿಸಿ ಬಿಸಿ ಉಪ್ಪಿಟ್ಟು ತಿಂದು ಕೇಟಿ ಕುಡಿಯುತ್ತಿದ್ದ.

ಕಿತ್ತಲಿ ಕಲ್ಲೇಶ ಮರಿಗೂಳಪ್ಪ ಮತ್ತು ಸಣ್ಣೀರವ್ವನ ಒಬ್ಬನೇ ಒಬ್ಬ ಮಗ. ಮದುವೆಯಾಗಿ ಏಳೆಂಟು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಆದ್ದರಿಂದ ಮನೆದೇವ್ರು ಕಲ್ಲೆದೇವರಿಗೆ ಕೈ ಮುಗಿದಿದ್ದರು. ಆಗ ಹುಟ್ಟಿದ ಮಗುವಿಗೆ ಕಲ್ಲೇಶ ಅಂತ ದೇವರ ಹೆಸರನ್ನೆ ಇಟ್ಟಿದ್ದರು. ಕಲ್ಲೇಶ ಸಣ್ಣವನಿದ್ದಾಗ ಹಾಲುಣ್ಣಲು ತುಂಬಾ ಹಠಮಾಡುತಿದ್ದ ಆದ್ದರಿಂದ ಸಣ್ಣೀರವ್ವ ತಾನು ಕುಡಿಯುತ್ತಿದ್ದ ಚಹಾವನ್ನೇ ಬೆರಳಲ್ಲಿ ಅದ್ದಿ ನಾಲಿಗೆಗೆ ಚೀಪುಸುತ್ತಿದ್ದಳು. ಮುಂದೆ ಅದನ್ನೇ ರೂಢಿಮಾಡಿಕೊಂಡ ಕಲ್ಲೇಶ ಹಾಲುಣ್ಣವ ಬದಲು ಚಹಾ ಕುಡಿಯತೊಡಗಿದ. ಅದು ಎಷ್ಟರಮಟ್ಟಿಗೆ ಅಂದರೆ ರಾತ್ರಿ ಚಹಾ ಚಹಾ ಎಂದು ಕನವರಿಸವಷ್ಟು. ಒಮ್ಮೆ ಸರಿಹೊತ್ತಿನಲ್ಲಿ ಬುದುಗ್ಗನೆ ಎದ್ದು ‘ಯವ್ವ ನಂಗೆ ಚಹಾ ಬೇಕು ಕಾಸಿಕೊಡು’ ಎಂದು ನಿದ್ದೇಗಣ್ಣಿನಲ್ಲೇ ಅತ್ತು ಕರೆದು ರಂಪಾಟ ಮಾಡಿದ್ದ. ಇದೊಳ್ಳೆ ಪಜೀತಿಗಿಟ್ಟಕೊಂಡಿತ್ತಲ್ಲ ಎಂದ ಸಣ್ಣಿರವ್ವ ಹಾಲು ಜಾಸ್ತಿ ಹಾಕಿ ಚಹಾ ಸೋಸಿಕೊಟ್ಟಿದ್ದಳು. ಬರು ಬರುತ್ತಾ ಕಲ್ಲೇಶ ಉಣ್ಣೊದು ತಿನ್ನೋದು ಬಿಟ್ಟು ಹೊಟ್ಟೆ ತುಂಬಾ ಬರಿ ಚಹಾ ಕುಡಿಯತೊಡಗಿದ. ಇದರಿಂದ ಹೊಟ್ಟೆಯಲ್ಲಿ ಜಂತುಗಳಾಗಿ ಬಿದ್ದು ಹೊಳ್ಯಾಡಿದ. ಡಾಕ್ಟರ್ ಚಹಾ ಚಟ ಬಿಡಿಸದಿದ್ದರೆ ನಿಮ್ಮ ಮಗ ಏಳಿಗೆಯಾಗಲ್ಲ ನೋಡಿ ಅಂತ ದಂಪತಿಗೆ ಹೇಳಿದ್ದರು. ಹೇಗಾದ್ರು ಮಾಡಿ ಚಹಾ ಕುಡಿಯೋದು ತಪ್ಪಿಸಬೇಕು ಅಂತ ಮಾಡಿದ ಉಪಾಯಗಳೆಲ್ಲ ಬುಡಮೇಲಾದಾಗ ಸಣ್ಣಿರವ್ವ ಕಲ್ಲೇದೇವರಿಗೆ ‘ಮಗ ಚಹಾ ಕುಡಿಯೋದು ಬಿಟ್ಟರೆ ನಿಂಗೆ ಬೆಳ್ಳಿ ಕಿತ್ಲಿ ಮಾಡ್ಸಿಕೊಡ್ತೀನಿ’ ಅಂತ ಹರಕೆ ಹೊತ್ತಳು. ಅದರಂತೆ ಕಲ್ಲೇದೇವರ ಜಾತ್ರೆಗೆ ಮಗನನ್ನು ಕಟ್ಟಿಕೊಂಡು ಹೋಗಿ ಹರಕೆ ತೀರಿಸಿದ್ದು ಆತು. ಆದರೂ ಮಗ ಚಹಾ ಚಹಾ ಅನ್ನೋದು ಬಿಡಲಿಲ್ಲ. ಬದಲಾಗಿ ಮನೆಯಲ್ಲಿದ್ದ ಕಿತ್ಲಿಯನ್ನೇ ತೆಗೆದುಕೊಂಡು ಆಟ ಸುರುವಿಟ್ಟುಕೊಂಡಿದ್ದ. ಮಗ ಖುಷಿಯಾಗಿದ್ರೆ ಸಾಕು ಅಂತ ಸಣ್ಣಿರವ್ವ ಸಂತೆಯಿಂದ ದೊಡ್ಡ ಕಿತ್ತಲಿಯನ್ನೆ ತಂದುಕೊಟ್ಟಿದ್ದಳು. ಅಂದಿನಿಂದ ಊರಲ್ಲಿ ಎಲ್ಲರೂ ಕಲ್ಲೇಶನಿಗೆ ಕಿತ್ತಲಿ ಕಲ್ಲೇಶ ಅಂತ ಕರೆಯಲು ಸುರು ಮಾಡಿದರು.

ಇಂಥ ಕಿತ್ತಲಿ ಕಲ್ಲೇಶಿಗೆ ಈಗ ಇಪ್ಪತ್ತೈದು ವರುಷ. ತನ್ನ ವಾರಿಗೆಯ ಹುಡುಗರೆಲ್ಲಾ ಕಾಲೇಜಿನ ಮೆಟ್ಟಿಲು ತುಳಿದರೆ ಕಲ್ಲೇಶನಿಗೆ ವಿದ್ಯೆ ಹತ್ತದೆ ಹತ್ತನೆ ತರಗತಿಯಲ್ಲಿ ಲಗಾಟ ಹೊಡೆದಿದ್ದ. ಅದಕ್ಕೆ ಕಾರಣ ಹಾಳಾದ ಇಂಗ್ಲಿಷ್. ಅವನಿಗೆ ಇಂಗ್ಲಿಷ್ ಕಂಡರೆ ಆಗಿಬರುತ್ತಿರಲಿಲ್ಲ. ಬರೆಯುವುದು ಒಂದಾದರೆ ಓದುವುದು ಇನ್ನೊಂದು ರೀತಿ. ಹಾಗಾಗಿ ಇಂಗ್ಲಿಷ್ ಅವನಿಗೆ ಬಿದಿರು ಬೊಂಬಿನೊಳಗಿನ ಕರೀಜೀರಿಗೆ ಹುಳುವಾಗಿತ್ತು, ಕಚ್ಚಿಸಿಕೊಂಡಿದ್ದು ಬಂತೇ ಹೊರತು ಸಿಹಿಯಾಗಲಿಲ್ಲ. ಕನ್ನಡವೆಂದರೆ ಸವಿಜೇನು ಸವಿದಂತೆ ಎನ್ನುತ್ತಿದ್ದ. ಅದು ಇರಲಿ ನಮ್ಮ ಕಿತ್ತಲಿ ಕಲ್ಲೇಶ ಫೇಲಾಗಿದ್ದರೆನಂತೆ ದುಡಿಮೆಸ್ತನಾಗಿದ್ದ. ದುಡಿದ ಹಣದಲ್ಲಿ ಮನೆ ಖರ್ಚು ತೆಗೆದು ಉಳಿದ ಹಣವನ್ನು ಬ್ಯಾಡಗಿಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಜಮೆಮಾಡುತ್ತಿದ್ದ ಎಂಬುದನ್ನು ನಿಮಗೆ ಹೇಳಬಯುಸುತ್ತೇನೆ.

ಕಲ್ಲೇಶಿಗೆ ಇವೊತ್ತು ಬ್ಯಾಡಗಿಯ ಶೋಭಾ ಟಾಕೀಸಿನಲ್ಲಿ ಪುನೀತ್ ರಾಜಕುಮಾರನ ಯುವರತ್ನ ಸಿನೆಮಾ ರಿಲೀಸ್ ಅಂತ ಗೊತ್ತಾಗಿತ್ತು. ನಮ್ಮ ಕಲ್ಲೇಶಿ ಪುನೀತ್ ರಾಜಕುಮಾರನ ಬಹುದೊಡ್ಡ ಭಕ್ತ. ಅವನ ಸಿನಿಮಾಗಳನ್ನು ತಪ್ಪದೆ ನೋಡುತ್ತಿದ್ದ. ರಿಲೀಸ್ ಆದ ಪಸ್ಟ್ ಡೇ, ಪಸ್ಟ್ ಶೋ ನೋಡುವುದು ಅವನ ಹ್ಯಾಬಿಟ್ಟು. ಅವತ್ತು ತನ್ನ ಕಟುಮಾ ಗಾಡಿ(ಮೂರು ಗಾಲಿಯ ಆಟೋರಿಕ್ಷಾ)ಯ ಯಾವುದೇ ಬಾಡಿಗೆ ಮೇಲೆ ಹೋಗುವುದಿದ್ದರೂ ರದ್ದು ಮಾಡಿಬಿಡುತ್ತಿದ್ದ. ಈಗೇ ಕಲ್ಲೇಶಿ ಬೆಳಬೆಳೆಗ್ಗೆನೆ ಹೊಸ ಪ್ಯಾಂಟು ಶರ್ಟ್ ಹಾಕಿಕೊಂಡು ಸಿನಿಮಾಗೆ ರೆಡಿಯಾಗಿದ್ದ. ಇದನ್ನು ನೋಡಿದ ಅವನ ಗೆಳೆಯರು ‘ಏನು ಕಲ್ಲೇಶಿ ಸಿನಿಮಾ ನೋಡೋಕೆ ಈ ಪಾಟಿ ರೆಡಿಯಾಗಿದೀಯ. ನೀನೆ ಒಳ್ಳೆ ಹೀರೊ ತರ ಕಾಣ್ತಿಯ. ಸಿನಿಮಾ ಸ್ಟೈಲಲ್ಲೆ ಯಾವುದಾದ್ರೂ ಹುಡುಗಿ ಪಟಾಯಿಸಿ ಬಿಡು’ ಎಂದು ರೇಗಿಸಿದರು. ‘ಓ... ಓ.. ಬಂದು ಬಿಡಿ ನಿಮ್ಮನ್ನು ಕರ್ಕೊಂಡು ಹೋಗ್ತೀನಿ. ಹುಡುಗಿ ಪಟಾಯಿಸೋದು ಅಂದ್ರೆ ಸುಮ್ನೇನಾ...? ಕಾಲೇಜು ಹುಡುಗಿರು ಆಟೋದವರನ್ನೆಲ್ಲಾ ಲವ್ ಮಾಡೋ ಸೀನು ಆಟೋರಾಜ ಶಂಕ್ರಣ್ಣನ ಕಾಲಕ್ಕೆ ಮುಗಿತು ಕಣ್ರೋ...’ ಎಂದು ನಾಚಿಕೊಂಡ. ‘ನಿನ್ನ ನೋಡಿದ್ರೆ ಯಾವ ಹುಡುಗಿ ಬೀಳಲ್ಲ ಹೇಳು’ ಅಂದಿದ್ದಕ್ಕೆ ‘ನಿಯತ್ನಾಗೆ ದುಡಿಯೋ ಹುಡುಗರನ್ನು ಬಿಟ್ಟು ಬೈಕ್ ಹಾಕ್ಕೇಂದು ಪಾಲ್ತು ತಿರುಗಾಡೋ ಚಂಗ್ಲು ಹುಡುಗರಿಗೆ ಈ ಹುಡಿಗೀರು ಬೀಳೋದು’ ಎಂದು ತನ್ನ ಆಟೋದಲ್ಲಿನ ಅನುಭವವನ್ನು ಹೇಳಿದ. ‘ನೀನು ಅವರಂಗೇ ಪಾಲ್ತು ತಿರುಗಾಡು ಯಾಕೆ ಬೀಳಲ್ಲ ನಾವು ನೋಡ್ತೀವಿ. ನಮ್ಮ ಮಹೇಶಿ ನೋಡು ಸ್ಟೈಲಾಗಿ ಹೆಬ್ಬುಲಿ ಕಟಿಂಗ್ ಮಾಡ್ಸಿಗೆಂದು ಹ್ಯಾಂಗೆ ಚಂಗ್ಲು ಮಾಡ್ತವ್ನೆ’.

‘ಅವುಂದೇನು ಹೇಳ್ತಿಯ ಬಿಡು. ನಾನು ನೋಡಿಲ್ವಾ ಅವರಪ್ಪ ಅವರವ್ವ ಕೋಳಿ ಮುಕಳ್ಯಾಗ ಎದ್ದು ಮೆಣಸಿನಕಾಯಿ ತೊಟ್ಟು ಮುರಿಯೋಕೆ, ಹಮಾಲಿ ಮಾಡೋಕೆ ಹೋಗೋದು. ಇವ್ನು ನೋಡಿದ್ರೆ ಕದ್ದ ಮೊಬೈಲ್ ಚೀಫ್ ರೇಟಿಗೆ ತೆಗೊಂಡು ಮಿನಿಷ್ಟ್ರು ಮಗ ಆಡ್ದಂಗೆ ಆಡ್ತಾನೆ’ ಎಂದು ಮಾತು ಸೇರಿಸಿದನು. ಅದೇ ಏನೇ ಇರಲಿ ನಮ್ಮ ಕಿತ್ತಲಿ ಕಲ್ಲೇಶಿ ದುಡಿದು ತಂದೆ ತಾಯಿಗಳನ್ನು ತಕ್ಕಮಟ್ಟಿಗೆ ಸುಖವಾಗಿಟ್ಟಿದ್ದ. ಹತ್ತು ಎಕರೆ ಹೊಲ ಇದ್ದರೂ ಒಬ್ಬಂಟಿ ಕಲ್ಲೇಶಿಗೆ ನುಗ್ಗದಿದ್ದರಿಂದ ಲ್ಯಾವಣಿ ಹಾಕಿ ಒಂದು ಎಕರೆಯಲ್ಲಿ ಮೆಣಸಿನಕಾಯಿ ಇನ್ನೊಂದು ಎಕರೆಯಲ್ಲಿ ಈರುಳ್ಳಿ ಹಚ್ಚಿ ಉಳಿದ ಟೈಮಲ್ಲಿ ಕಟುಮಾ ಓಡಿಸಿ ಸಂಸಾರ ಜವಾಬ್ದಾರಿ ನಿಭಾಯಿಸುವ ಲೆವೆಲ್ಲಿಗೆ ಬೆಳೆದು ನಿಂತಿದ್ದ.

ಅಂದು ಸಿನಿಮಾ ನೋಡಲು ಬಂದಿದ್ದ ಕಲ್ಲೇಶಿ ದಂಗಾಗಿ ಹೋಗಿದ್ದ. ಗಿಜಿ ಗುಟ್ಟುವ ಜನ, ಪುನೀತ್ ರಾಜಕುಮಾರನ ದೊಡ್ಡದಾದ ಕಟೌಟ್, ಅದಕ್ಕೆ ಹಾಕಿದ್ದ ಉದ್ದನೆಯ ಹೂವಿನ ಹಾರ ನೋಡಿ ಕಣ್ತುಂಬಿಕೊಂಡ. ಟಾಕೀಸಿನ ಮುಂದೆ ನೆರೆದಿದ್ದ ಕಾಲೇಜು ಹುಡುಗ ಹುಡುಗಿಯರನ್ನು ನೋಡಿ ಇದೇನು ಟಾಕೀಸಾ ಇಲ್ಲಾ ಕಾಲೇಜವಾ ಅಂತ ಅವಾಕ್ಕಾದ. ಟಾಕೀಸನ್ನೆ ಕಾಲೇಜು ಮಾಡಿದ್ರೆ ಭೇಷ್ ಹಾಕ್ಕೆತಿ ಬಿಡು ಎಂದು ಗೊಣಗಿಕೊಂಡ. ಇದಾದ ಮೇಲೆ ಟಿಕೆಟ್ ಕೌಂಟರ್ ಬಳಿ ಹೋಗಿ ಫಸ್ಟ್ ಕ್ಲಾಸ್ ಟಿಕೆಟ್ ಕೊಡಿ ಎಂದು ಕೇಳಿದಾಗ ಹುಳ್ಳುಮಳ್ಳಾದ. ‘ಪಸ್ಟ್ ಕ್ಲಾಸ್ ಇಲ್ಲ ಥರ್ಡ್ ಕ್ಲಾಸ್ ಇಲ್ಲ’ ಎಂದು ಹೇಳಿದ್ದಕ್ಕೆ ‘ಹೋಗ್ಲಿ ಬಾಲ್ಕನಿ ಆದ್ರೂ ಕೊಡಿ ಸಾಮಿ’ ಎಂದು ಕೇಳಿದ. ಅವನೆಂದು ಬಾಲ್ಕನಿಯಲ್ಲಿ ಕೂತು ಸಿನಿಮಾ ನೋಡಿದವನಲ್ಲ. ಏನಿದ್ರೂ ಮುಂದೆ ಕೂತು ನೋಡಿ ಶಿಳ್ಳೆ ಕೇಕೆ ಹಾಕಿ ಕುಣಿದವನು ಹಾಂಗಾಗಿ ಬಾಲ್ಕನಿ ಹೇಗಿರುತ್ತೆ ಅಂತಾನೆ ನೋಡಿರಲಿಲ್ಲ. ಹೋಗ್ಲಿ ಕೊಡಿ ಅಂತಾ ದುಂಬಾಲು ಬಿದ್ದ. ನಾಲ್ಕು ದಿನದ ಎಲ್ಲ ಶೋಗಳು ಆನ್ಲೈನ್ ಬುಕ್ ಆಗಿದ್ದಾವೆ ಅಂದಿದ್ದಕ್ಕೆ ‘ಇದೇನು ಸಾಮಿ ನಾನು ಪುನೀತಣ್ಣನ ದೊಡ್ಡ ಅಭಿಮಾನಿ, ಪಸ್ಟ್ ಡೇ, ಪಸ್ಟ್ ಶೋ ಎಂದು ತಪ್ಪಿಸಿಲ್ಲ. ನೀವಿಂಗೇಳೆದ್ರೆ ಹ್ಯಾಂಗೆ ಸಾಮಿ ನಮ್ಮೊಂಥೋರು ಏನು ಮಾಡಬೇಕು. ಈ ಆನ್ಲೈನ್ ಗಿನ್ಲೈನ್ ನಮ್ಗೇನು ಗೊತ್ತಿಲ್ಲ’.

‘ಈಗೆಲ್ಲ ಹಿಂಗೇ ಮೊಬೈಲಲ್ಲೆ ಬುಕ್ ಮಾಡಿ ಥೇಟರಿಗೆ ಬರಬೇಕು. ಟಿಕೆಟ್ ಇಲ್ಲ ನಡಿಯಪ್ಪಾ ತೆಲೆ ತಿನ್ನಬೇಡ’ ಎಂದಿದ್ದಕ್ಕೆ ಇದೊಳ್ಳೆ ಸಿಸ್ಟೆಮ್ಮೆ ಆಯ್ತು ಅಂತಾ ಬೇಜಾರಾಗಿ ಬಂದು ಟಾಕೀಸಿನ ಎದುರಿನ ಕಟ್ಟೆಯ ಮೇಲೆ ಪುನೀತ್ ರಾಜಕುಮಾರನ ದೊಡ್ಡ ಕಟೌಟ್ ನೋಡುತ್ತಾ ಕುಳಿತ. ಗೂಡೋಳಗೆ ಇರುವೆಗಳು ನುಸುಳುವಂತೆ ಕಾಲೇಜಿನ ಹುಡುಗ ಹುಡುಗಿಯರು ಟಾಕೀಸಿನ ಒಳಗೆ ನುಸುಳತೊಡಗಿದರು. ಸ್ವಲ್ಪೊತ್ತಿನಲ್ಲಿ ಥೇಟರ್ ಒಳಗಿಂದ ದೊಡ್ಡದಾದ ಸೌಂಡೊಂದು ಕೇಳಿಬಂತು. ಸಿನಿಮಾ ಚಾಲು ಆತು ಅಂತಾ ಕಾಣ್ಸತ್ತದೆ ಎಂದುಕೊಂಡ ಕಲ್ಲೇಶಿ ನಿಧಾನವಾಗಿ ಸಕ್ಕರೆಯಂತೆ ಕರಗಿಹೋದ.

ಜೀನ್ಸ್ ಪ್ಯಾಂಟು ಟಿ ಶರ್ಟ್ ಹಾಕಿ, ಕೂದಲನ್ನು ಎತ್ತಿಕಟ್ಟಿದ್ದ ತೆಳ್ಳೇನೆಯ ಹುಡುಗಿಯೊಬ್ಬಳು ಕಲ್ಲೇಶಿಯ ಮುಂದೆ ಬಂದು ನಿಂತು ‘ಬೈ ದಿ ಬೈ ಸಿನಿಮಾ ನೋಡಲು ಬಂದಿದ್ರಾ, ನಿಮ್ಗೆ ಟಿಕೆಟ್ ಸಿಗಲಿಲ್ವಾ, ನಾನು ಎರಡು ಟಿಕೆಟ್ ಬುಕ್ ಮಾಡಿದೀನಿ ಒಂದು ಬೆಂಕೆಂದ್ರೆ ನಿಮ್ಗೆ ಕೊಡ್ತೀನಿ’ ಎಂದು ವಯ್ಯಾರದಿಂದ ಹೇಳಿದಳು. ಕಲ್ಲೇಶಿ ಪುತಕ್ಕನೆ ಎದ್ದುನಿಂತ. ಅವನ ಮುಗಿನೊಳಗೆ ಹುಡುಗಿ ಹಾಕಿಕೊಂಡಿದ್ದ ಸೆಂಟಿನ ವಾಸನೆ ಒಮ್ಮೆಲೆ ನುಗ್ಗಿತು. ಅದುವರೆಗೂ ಅಂತ ತೆಳ್ಳನೆಯ ಬೆಳ್ಳನೆಯ ವಿಚಿತ್ರ ಡ್ರೆಸ್ ಕೋಡ್ ಹುಡುಗಿಯನ್ನು ಕಲ್ಲೇಶಿ ಎಂದು ನೋಡಿರಲಿಲ್ಲ. ಆ ಕ್ಷಣ ಅವನ ಕಣ್ಣು ಬಾಯಿ ಕೆಲಸ ನಿಲ್ಲಿಸಿದವು. ‘ಹಲೋ ಮಿಸ್ಟರ್ ಟೈಮ್ ಆಗ್ತಿದೆ ನನ್ನ ಜೊತೆ ಮೂವಿಗೆ ಬರ್ತೀರಾ’ ಎಂದು ಕೇಳಿದಾಗ ಮೇಲೆ ಕೆಳಗೆ ನೋಡಿದ ಕಲ್ಲೇಶಿ ಏನು ಮಾತನಾಡದೆ ಆಗಲಿ ಎಂದು ಗುಣ ಹಾಕಿದ. ಕಮ್ ಫಾಸ್ಟ್ ಎಂದವಳೇ ಕಲ್ಲೇಶಿ ಕೈಹಿಡಿದುಕೊಂಡು ಥಿಯೇಟರೊಳಗೆ ನುಗ್ಗಿದಳು. ಬುಕ್ಕಿಂಗ್ ನಂಬರ್ ಒಂದೇ ಆಗಿದ್ದರಿಂದ ಬಾಲ್ಕನಿಯಲ್ಲಿ ಇಬ್ಬರು ಅಕ್ಕ ಪಕ್ಕನೆ ಕುಳಿತರು. ಬಾಲ್ಕನಿಯನ್ನು ಎಂದು ನೋಡದ ಕಲ್ಲೇಶಿಗೆ ಅದು ಇಂದ್ರನ ಮಾಯಾಲೋಕದಂತೆ ರಾರಾಜಿಸಿತು. ಮೆತ್ತನೆಯ, ವರಗಿದರೆ ಹಿಂದಕ್ಕೆ ಬೀಳುವ ಕುಶನ್ ಸೀಟುಗಳು, ಪಳಗುಟ್ಟುವ ಎಲ್ ಇ ಡಿ ಲೈಟುಗಳು, ಬ್ಯಾಸಿಗೆಯಲ್ಲೂ ತಂಪೆರೆಚುವ ಎ ಸಿ ಗಳು, ಗಮ ಗುಡುವ ಸೆಂಟಿನ ವಾಸನೆ, ಆಕಾಶದಲ್ಲಿ ತೇಲಾಡಿದಂತಾಯಿತು. ಕಲ್ಲೇಶಿಯ ಭಾವಕೋಶದಲ್ಲಿ ಭಾವನೆಗಳು ಅಣಬೆಯಂತೆ ಪುತಪುತನೆ ಹುಟ್ಟಿಕೊಳ್ಳತೋಡಗಿದವು. ಇದನ್ನೆಲ್ಲಾ ಅರಗಿಸಿಕೊಳ್ಳಲು ಕಲ್ಲೇಶಿಗೆ ಕೆಲ ಸಮಯವೇ ಬೇಕಾಯಿತು. ನಿಧಾನವಾಗಿ ಸಾವರಿಸಿಕೊಂಡ ಕಲ್ಲೇಶಿ ಯುವರತ್ನ ಸಿನಿಮಾವನ್ನ ತದೇಕಚಿತ್ತದಿಂದ ನೋಡತೊಡಗಿದ. ‘ನಿಮಗೆ ಯಾರಾದರೂ ಗರ್ಲ್ ಫ್ರೆಂಡ್ ಇದ್ದಾರಾ?’ ಹುಡುಗಿಯಿಂದ ತೂರಿಬಂದ ಪ್ರಶ್ನೆಗೆ ಕಲ್ಲೇಶಿ ತಬ್ಬಿಬಾದ ‘ನಮ್ಮ ತಾಯಾಣೆಗೂ, ಕಲ್ಲೇದೇವರ ಸತ್ವಾಗ್ಲೂ ಇದುವರೆಗೂ ಒಂದು ಹುಡುಗಿನೂ ಕಣ್ಣೆತ್ತಿ ಕೂಡಾ ನೋಡಿಲ್ಲ’ ಎಂದು ಸತ್ಯ ನುಡಿದ ‘ಓ ಮೈ ಗುಡ್ ನೆಸ್ಸ್ ನಿಮ್ಮಂಥೋರು ರೇರ್ ಬಿಡಿ, ಸುತ್ತಲೂ ಒಮ್ಮೆ ನೋಡಿ ಗೊತ್ತಾಗುತ್ತೆ’ ಅಂದಳು. ಬಿಟ್ಟ ಕಣ್ಣು ಬಿಟ್ಟಂಗೆ ಪುನೀತ್ ರಾಜಕುಮಾರ ಫೈಟಿಂಗ್ ನೋಡುತ್ತಿದ್ದ ಕಲ್ಲೇಶಿ ಬಾಲ್ಕನಿಯನ್ನೋಮ್ಮೆ ನೋಡಿದ. ಕಾಲೇಜಿನ ಹುಡುಗ-ಹುಡುಗಿಯರು ಒಬ್ಬರನ್ನೊಬ್ಬರು ತಬ್ಬಿ ಕುಳಿತುಕೊಂಡಿದ್ದ ಕಂಡು ಈ ಕರೋನಾ ಟೈಮಲ್ಲೂ ಈ ಪಾಟಿ ಮೈಗಂಟಿಕೊಂಡವರಲ್ಲ ಕಾಲ ಎಕ್ಕುಟ್ಟು ಹೋಗಿದೆ ಬಿಡು ಎಂದು ಮನಸ್ಸಿನಲ್ಲಿ ಹಳಿದುಕೊಂಡನು. ‘ಇವಾಗ ಹೇಳಿ... ನನ್ನ ಗರ್ಲ್ ಫ್ರೆಂಡ್ ಮಾಡ್ಕೋತೀರಾ’ ಕಲ್ಲೇಶಿ ಕೈಯಿಡಿದು ಗಿಳಿಯಂತೆ ನುಲಿದಳು. ಹುಡುಗಿಯ ಕೈ ಸೋಕಿದ್ದರಿಂದ ಕಲ್ಲೇಶ ಜೀವ ಝಲ್ಲೆಂದು ಮೈಯೆಲ್ಲ ಜುಮ್ಮೆಂದು ಕೂದಲುಗಳು ನಿಮಿರಿ ನಿಂತವು. ಒಂದು ಕಡೆ ಸಿನಿಮಾ ಇನ್ನೊಂದು ಕಡೆ ಹುಡುಗಿ ಇಬ್ಬರು ಅರ್ಥವಾಗದೆ ಎಡಬಿಡಂಗಿಯಂತಾದ. ಅವನಿಗೂ ಕೂಡ ಎಲ್ಲರಂತೆ ಹುಡುಗಿಯನ್ನು ತಬ್ಬಿಕೊಳ್ಳಬೇಕೆನಿಸಿದರೂ ಇದು ಗಿಟ್ಟತ್ತೋ ಇಲ್ಲವೋ ಎಂಬ ಅನುಮಾನದಲ್ಲಿ ಸುಮ್ಮನಾದ. ಸಿನಿಮಾ ಮುಗಿದ ಮೇಲೆ ನಿಮ್ಮ ಫೋನ್ ನಂಬರ್ ಇದ್ರೆ ಕೊಡ್ತೀರಾ ಎಂದು ಕೇಳಿದ್ದಕ್ಕೆ ತನ್ನ ಹಳೆಯ ಕೀಪ್ಯಾಡ್ ಫೋನ್ ಹೊರತೆಗೆದು ಹತ್ತು ನಂಬರಗಳನ್ನು ಬಿಡಿಬಿಡಿಯಾಗಿ ಕನ್ನಡದಲ್ಲಿ ಹೇಳಿದ. ಸಿನಿಮಾ ನೋಡಿ ಬಂದ ದಿನ ಕಲ್ಲೇಶಿಗೆ ರಾತ್ರಿಪೂರ್ತಿ ನಿದ್ದೆ ಸುಳಿಯಲಿಲ್ಲ. ಏನೇನೋ ನೆನಸಿಕೊಂಡು ಒಳ್ಯಾಡಿದ. ಕಾಗಿನೆಲೆಯ ಕನಕಲೋಕ ಪಾರ್ಕಿನಲ್ಲಿ ಒಂದು ದೊಡ್ಡ ಬಿದಿರು ಪೆಳೆಯ ಹುಲ್ಲಿನ ಹಾಸಿನ ಮೇಲೆ ಇಬ್ಬರು ಮಲಗಿದ್ದಾರೆ. ತನ್ನ ಪಕ್ಕದಲ್ಲಿಯೆ ಮಲಗಿದ ಅವಳು ತನ್ನ ಎದೆಯ ಕೂದಲಿನ ಮೇಲೆ ಬೆರಳಾಡಿಸಿದಂತೆ, ಎರಡು ಕೈಗಳಿಂದ ತನ್ನ ಒರಟಾದ ಕೆನ್ನೆಗಳನ್ನು ಗಿಂಡಿದಂತೆ, ಕೊನೆಗೆ ಮುಖಕ್ಕೆ ಮುಖವನ್ನು ಹತ್ತಿರ ತಂದು ಬಿರುಸಾದ ತುಟಿಗಳನ್ನೊಮ್ಮೆ ಜೋರಾಗಿ ಕಚ್ಚಿದಂತಾಗಿ ಪಕ್ಕನೆ ಎಚ್ಚೆತ್ತಾಗ ಕನಸಿನ ಜಾತ್ರೆಗೆ ಲಗ್ಗೆ ಹಾಕಿದ್ದನ್ನು ನೆನೆದು ಸರಿಹೊತ್ತಿನಲ್ಲಿಯೆ ನಾಚಿಕೊಂಡ. ವಿಚಿತ್ರವಾದ ಪುಳಕವನ್ನು ನಮ್ಮ ಕಲ್ಲೇಶಿ ಉಂಡನು.

ಇವತ್ತಿನ ದಿನಗಳಲ್ಲಿ ತಂದೆ-ತಾಯಿಗಳಿಗೆ ಯಾಮಾರಿಸಿ ಕದ್ದು ಮುಚ್ಚಿ ಪ್ರೀತಿ ಮಾಡಿ ಓಡಿಹೋಗಿ ಮದುವೆಯಾಗುವ ಇಲ್ಲವೇ ತಂದೆ-ತಾಯಿಗಳಿಗೆ ಅಪಕೀರ್ತಿಯನ್ನು ತರುವ ಮಕ್ಕಳೇ ಜಾಸ್ತಿ ಇರುವಾಗ ನಮ್ಮ ಕಲ್ಲೇಶಿ ಯಾರ ಸುದ್ದಿಗೂ ಹೋಗದೆ ತಾನಾಯ್ತು ತನ್ನ ಕೆಲಸವಾಯಿತು ಎಂದುಕೊಂಡಿದ್ದಾಗ ಮೋಹಕ ಚಿಟ್ಟೆಯೊಂದು ಹಾರಾಡಿ ಮಳ್ಳು ಮಾಡಿದ್ದು ಸೋಜಿಗದ ಸಂಗತಿಯೇ ಸರಿ.

****
ಅಂದು ಇಬ್ಬರೂ ಹಾವೇರಿಯ ಶಿವಶಕ್ತಿ ಮಾಲ್ ಗೆ ಹೋಗಿದ್ದರು. ಕಲ್ಲೇಶಿ ಏನಿದ್ರೂ ಊರಿನ ಸಣ್ಣದಾದ ಚಂದ್ರಣ್ಣನ ಅಂಗಡಿ ಮತ್ತು ಬ್ಯಾಡಗಿಯಲ್ಲಿನ ಬಟ್ಟೆಯಂಗಡಿಗಳನ್ನು ಮಾತ್ರ ನೋಡಿದ್ದನು. ಬ್ಯಾಡಗಿಯನ್ನೇ ಮಹಾನಗರವೆಂದುಕೊಂಡಿದ್ದ ಕಲ್ಲೇಶಿಗೆ ವಿಸ್ಮಯ ಜಗತ್ತೊಂದು ಕಂಡಿತು. ಅವನೆಂದು ಇಂತಹ ದೊಡ್ಡ ಮಾಲ್ ನೋಡಿರಲಿಲ್ಲ. ತರಹೇವಾರಿ ಬಣ್ಣಗಳಿಂದ ಪಳಾರಿಸುವ ಶೋ ರೋಮ್ ಗಳು, ಮೊಬೈಲ್ ಶಾಪ್ಗಳು, ರೆಡಿಮೇಡ್ ಡ್ರೆಸ್, ಲಕ್ ಜೀನ್ಸ್, ಜೂವೇಲರಿ ಶಾಪ್ ಗಳು, ಐಸ್ಕ್ರೀಂ ಪಾರ್ಲರ್ ಗಳು ನೋಡಿ ದಂಗಾಗಿ ಹೋದ. ಎಸ್ಕೇಲೆಟರ್ ಮೇಲೆ ಕಾಲಿಡಲು ತಡವರಿಸಿದ್ದರಿಂದ " ಡೋಂಟ್ ವರಿ ನಾನು ಹೆಲ್ಪ್ ಮಾಡ್ತೀನಿ" ಎಂದ ನಿರ್ಮಲ ಕಲ್ಲೇಶಿ ಕೈಯಿಡಿದು ಎಸ್ಕೇಲೇಟರ್ ಹತ್ತಿಸಿದಳು. ನಿಂತಲ್ಲಿಂದಲೇ ಮೇಲೇರುತ್ತಿದ್ದ ಅದು ಸೋಜಿಗವೇನಿಸಿತು. ತಾನು ಬೋಳ್ಗುಂಟಿ, ಹತ್ತಿಗುಂಟಿ ಮೇಲೆ ನಿಂತು ಎತ್ತಿನ ಹಗ್ಗವಿಡಿದು ಲೀಲಾಜಾಲವಾಗಿ ಬೇಸಾಯ ಮಾಡುತ್ತಿದ್ದದ್ದು ನೆನಪಿಗೆ ಬಂತು. ಮುಂದೆ ನೆಡೆದು ಹೋದಂತೆ ದೊಡ್ಡ ಗಾಜಿನ ಬಾಗಿಲು ತಾನಾಗೇ ತೆರೆದುಕೊಂಡಿತು. 'ಅಲಾ... ಲ... ಲಾ... ಏನು ಮಾಯಕರ ಎಲೆಕ್ಟ್ರಿಕ್ ಬಾಗಿಲುಯಿತಲ್ಲಪ್ಪ ಇದು ನಾವು ಬರ್ತಿದ್ದಂಗೆ ತೆಕ್ಕೊಳ್ಳತ್ತೆ, ನಮ್ಮ ಬಂಡಿಜಾಡು ತೆಗೆಯೋಕೆ ನಾಕು ಮಂದಿಯಾದ್ರು ಬೇಕು' ಅಂದುಕೊಂಡ. ಟೆಕ್ಸಟೈಲ್ ಒಳಗೆ ಕರೆದುಕೊಂಡು ಹೋದ ನಿರ್ಮಲ ತನಗೆ ಬೇಕಾದ ಟಾಪ್, ಜೀನ್ಸ್, ಚೋಡಿದಾರ್, ಲೆಗ್ಗಿನ್ಸ್ ಪ್ಯಾಂಟಿಸ್ ತೆಗೆದುಕೊಂಡು ಟ್ರಯಲ್ ರೋಮ್ ಹೊಕ್ಕಳು. ಒಂದೊಂದಾಗಿ ತೊಟ್ಟು ಕಲ್ಲೇಶಿಗೆ ತೋರಿಸಿದಳು. "ಈ ಡ್ರೆಸ್ ಲಿ ಹೇಗೆ ಕಾಣ್ತಿದೀನಿ, ಈ ಚೋಡಿದಾರ್ ನಂಗೆ ಸೂಟ್ ಆಗುತ್ತಾ, ಇದಕೆ ಮ್ಯಾಚ್ ಆಗೋ ಹೈ ಹಿಲ್ಡ್ ಸ್ಲೀಪ್ಪರ್ ತಗೊಂಡ್ರೆ ಬೆಸ್ಟ್ ಕಾಂಬಿನೇಶನ್" ಮುಂತಾಗಿ ತನ್ನ ಬಗ್ಗೆ ತಾನೇ ಹೇಳಿಕೊಳ್ಳತೊಡಗಿದಳು. ಕಲ್ಲೇಶಿಗೆ ಇವೆಲ್ಲಾ ಏನೊಂದು ಅರ್ಥವಾಗದ ಸಂಗತಿಗಳಾಗಿದ್ದವು. ಅವನೇನಿದ್ರೂ ಎರಡು ಲುಂಗಿ, ಪಟ್ಟೆ ಪಟ್ಟೆ ಚಡ್ಡಿ ಅಷ್ಟೇ. ಹಬ್ಬ ಜಾತ್ರೆಗಳಿಗೆ ಮಾತ್ರ ಪ್ಯಾಂಟು ಶರ್ಟ್ ಹಾಕುತ್ತಿದ್ದ. ಬಿಟ್ಟುಕಣ್ಣು ಬಿಟ್ಟಾಗಿ ತನ್ನ ಹುಡುಗಿಯ ವಯ್ಯಾರವನ್ನು ನೋಡತೊಡಗಿದ. ಬಿಲ್ ಕೌಂಟರ್ ಬಳಿ ಕ್ಯಾಶಿಯರ್ ಒಂದೊಂದಾಗಿ ಲೆಕ್ಕಹಾಕಿದಾಗ ಬರೋಬ್ಬರಿ ಎಂಟು ಸಾವಿರದ ಏಳುನೂರಾ ಎಂಬತ್ತು ರೂಪಾಯಿಯಾಗಿತ್ತು ಕಲ್ಲೇಶಿಯ ಕೈ ನಡುಗತೊಡಗಿದವು. ವಲ್ಲದ ಮನಸ್ಸಿನಿಂದ ಪ್ಯಾಂಟಿನ ಒಳಜೋಬಿನಲ್ಲಿದ್ದ ನೋಟುಗಳನ್ನು ಹೊರತೆಗೆದು ಬಿಲ್ ಪಾವತಿಸಿದ. ಅಲ್ಲಿಂದ ನೇರವಾಗಿ ಶೂ ಮಾರ್ಟ್ ಗೆ ಹೋದರು. ಅಲ್ಲಿ ವಿವಿಧ ರೀತಿಯ ಚಪ್ಪಲಿ ಶೂಗಳನ್ನು ತೂಗು ಹಾಕಲಾಗಿತ್ತು. ನಿರ್ಮಲ ಒಂದು ಜೊತೆ ಶೂ ಒಂದು ಜೊತೆ ಹೈ ಹಿಲ್ಡ್ ಚಪ್ಪಲಿಗಳನ್ನು ಖರೀದಿ ಮಾಡಿದಳು. ಇದಕ್ಕೂ ಕಲ್ಲೇಶಿಯೇ ಬಿಲ್ ಪೇ ಮಾಡಬೇಕಾಯಿತು. ವರ್ಷಪೂರ್ತಿ ಕಷ್ಟಬಿದ್ದು ದುಡಿದ ಹಣವನ್ನು ಹೀಗೆ ಎರಡು ನಿಮಿಷದಲ್ಲಿ ದುಂದುವೆಚ್ಚ ಮಾಡುವುದು ಕಲ್ಲೇಶಿಗೆ ಬಾಯಿಗೆ ಬಂದಂಗಾಯ್ತು. ಒಂದು ರೀತಿಯ ವಿಚಿತ್ರ ತೊಳಲಾಟದಲ್ಲಿ ತೊಡಗಿದ. ನೀವು ಏನು ತೊಗೊಳಲ್ವಾ ಅಂತ ಕೇಳಿದ್ದಕ್ಕೆ ಜೇಬು ಮುಟ್ಟಿ ನೋಡಿಕೊಂಡ ಕಲ್ಲೇಶಿ ಆಮೇಲೆ ತಗೋತೀನಿ ಎಂದು ಜಾರಿಕೊಂಡ. ಕಲ್ಲೇಶ ಜೇಬಿನಲ್ಲಿ ನೋಟಗಳು ಐಸ್ ಕ್ರೀಮ್ ನಂತೆ ಕರಗಿಹೋಗಿ ದ್ದವು. ಇಷ್ಟೆಲ್ಲ ಶಾಪಿಂಗ್ ಮುಗಿದ ಮೇಲೆ ಒಳ್ಳೆಯ ಊಟ ಮಾಡದಿದ್ದರೆ ಹೇಗೆ. ಊಟಕ್ಕೆಂದು ಸುರಭಿ ಗಾರ್ಡನ್ ರೆಸ್ಟೋರೆಂಟ್ ಗೆ ಹೋದರು. ತಣ್ಣನೆರಾತ್ರಿ ಸುತ್ತಲೂ ಶಿಸ್ತುಬದ್ದವಾಗಿ ಕತ್ತರಿಸಿಕೊಂಡ ಗಿಡಗಳು, ಹೂ ಮುಡಿದು ನಿಂತ ಬಳ್ಳಿಗಳು, ಮಿಣಗುಟ್ಟುವ ದೀಪಗಳು, ಅಲ್ಲಲ್ಲಿ ಜೊತೆ ಜೊತೆಯಾಗಿ ಕುಳಿತ ಜೋಡಿಗಳು ಎಲ್ಲವೂ ಪ್ರೀತಿಯ ಬೀಜ ಬಿತ್ತುವ ಕಾರ್ಖಾನೆಯಂತೆ ಕಂಡಿತು ಕಲ್ಲೇಶಿಗೆ. ನನ್ನ ಗದ್ದೆ, ತೋಟ ಮನೆ ಯಾವುದು ಲೆಕ್ಕವಿಲ್ಲವೆ ಈ ಮಾಯಾ ಜಗತ್ತಿನಲ್ಲಿ? ಪ್ರಶ್ನೆಯೊಂದು ಮಿಂಚಿ ಮರೆಯಾಯಿತು. ‘ಕ್ಯಾಂಡಲ್ ಡಿನ್ನರ್ ಅದರ ಮಜಾನೇ ಬೇರೆ’' ಎಂದುಕೊಂಡ ನಿರ್ಮಲ ತುಂಬು ಖುಷಿಯಾಗಿದ್ದಳು. ತನ್ನ ಗಂಡನಾಗುವವನು ಕೇಳಿದ್ದೆಲ್ಲಾ ಇಲ್ಲವೆನ್ನೆದೆ ಕೊಡಿಸಿರುವಾಗ ಸಂತಸದ ತುದಿಗಾಲ ಮೇಲೆ ನಿಂತಿದ್ದಳು. ಸರಿ ಇಬ್ಬರೂ ಮೆನುಕಾರ್ಡ್ ಹಾಗೆ ನೋಡುತ್ತಾ ಕುಳಿತರು. ಕಲ್ಲೇಶಿಗೆ ಅಲ್ಲಿನ ಇಂಗ್ಲಿಷ್ ಅಕ್ಷರಗಳು ಏನೊಂದು ಅರ್ಥವಾಗಲಿಲ್ಲ. ಕಟಿಕಟಿ ರೊಟ್ಟಿ ಕೆಂಪಿಡಿ ಕೆನೆ ಮೊಸರು ಅಂದ್ರೆ ನಮ್ಮ ಕಲ್ಲೇಶಿಗೆ ಪ್ರಾಣ. ನಾಕು ರೊಟ್ಟಿ ತಿಂದು ಮೇಲೆ ಒಂದು ಗಳಾಸ ಚಹಾ ಕುಡಿಯುತ್ತಿದ್ದ. ಅದೇ ಅವನಿಗೆ ಸ್ವರ್ಗವಾಗಿತ್ತು. ಇಂದು ಅರ್ಥವಾಗದ ಅದೇನೋ ರೆಸೆಪಿಗಳನ್ನು ಅವನೆಂದು ತಿನ್ನುವುದು ಇರಲಿ ಕೇಳಿಯೂ ಇರಲಿಲ್ಲ. ನಿರ್ಮಲನೆ ಆರ್ಡರ್ ಮಾಡಿದಳು. ಬಗೆ ಬಗೆಯ ಅಡುಗೆಗಳು ಟೇಬಲ್ ಗೆ ಬಂದವು. ಅಡುಗೆ ತುಂಬಾ ರುಚಿಯಾಗಿತ್ತು.

ಶಾಪಿಂಗ್ ಈಟಿಂಗ್ ಮುಗಿಯೋ ಹೊತ್ತಿಗೆ ಹತ್ತತ್ರ ಹತ್ತು ಗಂಟೆ ಹೊಡೆದಿತ್ತು. ಕರೋನಾ ಎರಡನೇ ಅಲೆ ಜೋರಾಗಿದೆ ಎಂದು ಸರಕಾರ ನೈಟ್ ಕರ್ಪ್ಯು ವಿಧಿಸಿತ್ತು ಆದ್ದರಿಂದ ಕಲ್ಲೇಶಿಗೆ ಊರಿಗೆ ಹೋಗಲು ಯಾವುದೇ ಬಸ್ ಗಳಿರಲಿಲ್ಲ. ಅನಿವಾರ್ಯವಾಗಿ ಅತ್ತೆ ಮನೆಯಲ್ಲೇ ಉಳಿಯಬೇಕಾಯಿತು. ಅವೊತ್ತು ರಾತ್ರಿ ಕಲ್ಲೇಶಿಗೆ ನಿದ್ದೆ ಹತ್ತಲಿಲ್ಲ. ಹೊಸ ಜಾಗವಾಗಿದ್ದರಿಂದಲೋ, ಗಿಣಿಯಂತ ಹೆಂಡತಿ ಹದ್ದಿನಂತೆ ದಾಳಿ ಮಾಡಿದ್ದರಿಂದಲೋ, ವರ್ಷದ ದುಡಿಮೆಯೆಲ್ಲಾ ಒಂದೆ ದಿನದಲ್ಲಿ ಕಲಾಸ್ಸು ಆಗಿದ್ದರಿಂದಲೋ ಚಿಂತೆಗಳು ಮುಕುರಿಕೊಂಡವು. ಅಷ್ಟೇ ಆಗಿದ್ದರೆ ಕಲ್ಲೇಶಿ ಚಿಂತಿಸುತ್ತಿರಲಿಲ್ಲ. ರೆಸ್ಟೋರೆಂಟ್ನಲ್ಲಿ ಊಟ ಆದಮೇಲೆ ನಿರ್ಮಲ ಆಡಿದ ಮಾತುಗಳು ಅವನನ್ನು ಚಡಪಡಿಸುವಂತೆ ಮಾಡಿತ್ತು. 'ಹಾವೇರಿಗೆ ಬಂದು ಬಿಡಿ. ನೀವು ಇಲ್ಲೇ ಆಟೋ ಓಡಿಸವಂತ್ರಿ. ಬಾಡಗಿ ಮನಿ ಮಾಡೋಣ, ಆ ಹಳ್ಳಿಲಿ ಯಾರು ಇರ್ತಾರೆ. ಹಂಗಾದ್ರೆ ಮಾತ್ರ ನಾನು ನಿಮ್ಮನ್ನ ಮದುವೆಯಾಗೋದು’ ಅಂತಾ ನಗು ನಗುತ್ತಲೇ ಕುಟುಂಬ ಡಿವೈಡ್ ಮಾಡೋ ಚಾಕುವನ್ನು ತೋರಿಸಿದ್ದಳು. ಆ ಮಾತುಗಳು ಕಿವಿಯಲ್ಲಿ ಗುಯುಗುಡುತ್ತಿದ್ದವು. ಅಂದು ನಿರ್ಮಲಳ ರೂಪ ಅವನಿಗೆ ಸಹನೀಯವೆನಿಸಲಿಲ್ಲ.
****
ಮಗನ ಈ ನಡವಳಿಕೆಯಿಂದ ಸಣ್ಣೀರವ್ವನಿಗೆ ಹೊಟ್ಟೆಯಲ್ಲಿ ಬೆಂಕಿ ಹತ್ತಿತ್ತು. ‘ವರ್ಷಗಟ್ಟಲೆ ಮಳೆಯಾಗ ಬಿಸಲಾಗ ದೇಖಿದ ದುಡ್ಡನ್ನೆಲ್ಲಾ ಆ ಬಿತ್ರಿಯಂತವಳಿಗೆ ಸುರಿದು ಬಂದ್ರೆ ಮನೆಯಲ್ಲಿ ಏನು ತಿನ್ನಬೇಕು? ಏನೋ ಅಪ್ಪಯ್ಯ ನಿನ್ನ ಮದುವಿಯಾದ್ರೆ ಸಾಕು. ವಂಶ ಬೆಳಗಿದ್ರೆ ಸಾಕು, ನೀನು ಇಷ್ಟಪಟ್ಟಿದಿ ಅಂತಾ ಹುಡುಗಿ ಗುಣ ನಡತೆ ಒಂದು ನೋಡ್ದೆ ಒಪ್ಪಿಗೆಂದ್ವಿ. ನೀನು ನೋಡಿದ್ರೆ ಮದುವೆಗೂ ಮುಂಚೆ ತೆಲಿಮ್ಯಾಲ ಕೂರ್ಸಿಗೆಂದು ಕೋಲೆಬಸವ ಆಗಿದೀಯಾ. ಇಂಗಾದ್ರೆ ಮನಿ ಮನ್ಯಾತನ ಕದ ಕಟ್ಟುತೈತಿ ಬಿಡು’ ಎಂದು ಮಗನಿಗೆ ಬುದ್ದಿವಾದದ ಮಾತು ಹೇಳಿದಳು. ಮರಿಗುಳಪ್ಪನಿಗೂ ಮಗ ಹಾದಿತಪ್ಪುವ ನಡವಳಿಕೆ ಸರಿಬಿದ್ದಿರಲಿಲ್ಲ.

ಪ್ಯಾಟಿ ಹುಡುಗಿಯೊಬ್ಬಳು ಹಳ್ಳಿಯ ನಮ್ಮ ಕಲ್ಲೇಶಿ ಹಿಂದೆ ಬೀಳಲು ಕಾರಣವನ್ನು ಹೇಳದಿದ್ದರೆ ಈ ಕಥೆ ನಿಮ್ಮ ಗೊಂದಲದ ಗೂಡಾಗುವದರಲ್ಲಿ ಸಂದೇಹವಿಲ್ಲ ಆದ್ದರಿಂದ ಹಿನ್ನಲೆಯನ್ನೊಮ್ಮೆ ಹೇಳುತ್ತೇನೆ ಕೇಳಿ...

ಕಲ್ಲೇಶಿಗೆ ತನ್ನೂರಿನಲ್ಲಿ ಹತ್ತು ಎಕರೆ ಜಮೀನಿದೆ ಅಂತಾ ಈ ಹಿಂದೆ ಹೇಳಿದ್ದೆ. ಅದು ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ. ಬೇಡವಾಗಿ ಕೊಟ್ರು ಕಮ್ಮಿ ಕಮ್ಮಿಯಂದ್ರು ಒಂದು ಎಕರೆಗೆ ಎಂಬತ್ತರಿಂದ ತೊಂಬತ್ತು ಲಕ್ಷ ಬೆಲೆ ಗಿಟ್ಟುತ್ತದೆ. ಎರಡೆಕರೆ ಮಾರಿದರೆ ನಮ್ಮ ಕಲ್ಲೇಶಿ ಕೋಟ್ಯಾದೀಶ. ಇದನ್ನು ಬಲ್ಲವಳಾಗಿದ್ದ ನಿರ್ಮಲ ಹೇಗಾದರೂ ಮಾಡಿ ಬುಟ್ಟಿಗಾಕಿಕೊಂಡು ಮದುವೆಯಾಗಿ ತನ್ನಿಷ್ಟದಂತೆ ಬದುಕಬಹುದೆಂಬ ಲೆಕ್ಕಾಚಾರದಲ್ಲಿದ್ದಳು. ಲೆಕ್ಕದಲ್ಲಿ ನಿರ್ಮಲ ಸಣ್ಣೀರವ್ವನ ದೂರದ ಸಂಬಂಧಿ ಪಾಲಾಕ್ಷಯ್ಯನ ಮಗಳು.

ಅವಳ ಸ್ನೇಹಿತೆಯರು ‘ಅಲ್ಲೇ ನಿಮ್ಮಿ ಹೋಗಿ ಹೋಗಿ ಆ ಹಳ್ಳಿಗುಗ್ಗು ಕಲ್ಲೇಶಿ ಕಟ್ಟಿಕೊಳ್ತೀನಿ ಅಂತಿಯೇಲ್ಲಾ... ಬುದ್ದಿಯಿಲ್ವಾ ನಿಂಗೆ’ ಅಂತಾ ಕೇಳಿದಾಗ ‘ನೋಡ್ರೆ ಏನು ಇಲ್ಲದ ಗವರ್ನಮೆಂಟ್ ಎಂಪ್ಲೋಯೀ ಮದ್ವೆ ಆದ್ರೆ ಜೀವನ ಮಾಡೋದು ಕಷ್ಟ ಐತಿ ಇವತ್ತಿನ ದಿನದಾಗ. ಎಲ್ಲ ರೇಟ್ ಹೆಚ್ಚಾಗಿವೆ ಒಂದು ತಗೊಂಡ್ರೆ ಇನ್ನೊಂದು ತಗೋಣೊಕ್ಕಾಗಲ್ಲ ಅಂತದ್ರಾಗ ಅಡುವು ಆಸ್ತಿ ನುಗ್ಗು ಇರೋರ್ನ ಮದ್ವೆಯಾದ್ರೆ ಚಲೋ ಹೌದಲ್ವೋ’ ಎಂದು ಉತ್ತರಿಸಿದ್ದಳು.
‘ಮದ್ವೆ ಆದಮ್ಯಾಗ ನಿನ್ನ ಗಂಡ ಹೊಲ ಮಾರಲ್ಲ ಅಂತಾ ಕುಂತ್ರೆ ಏನು ಮಾಡ್ತಿ’
‘ಕಟ್ಟಿಕೊಂಡ ಹೆಂಡ್ತಿ ಸಾಕೋಕೆ ಆಗೊಲ್ಲ ಅಂದಮ್ಯಾಗ ಹೊಲ ಮನಿ ಇಟ್ಗೊಂಡು ಏನು ಮಾಡ್ತಿ ಅಂತಾ ಕೇಳ್ತೀನಿ’ ಅಂತಾ ಹೇಳಿದ್ದಳು. ಒಟ್ಟಿನಲ್ಲಿ ಕಲ್ಲೇಶಿಯನ್ನು ತನ್ನ ಚಾಣಕ್ಷತನದಿಂದ ಪ್ರೀತಿಯ ಹೊಂಡಕ್ಕೆ ಕೆಡವಿದ್ದಳು.
****
ಮಾತುಕತೆಯಾಗಿ ತಿಂಗಳೊಪ್ಪತ್ತಿನಲ್ಲಿ ಕಲ್ಲೇಶಿ ನಿರ್ಮಲಳ ಮದುವೆ ಆತು. ದೇವ್ರು ದಿಂಡ್ರನ್ನು ಕಂಡು ಅಡ್ಡಬಿದ್ದು ಬೇಡಿಕೊಂಡಿದ್ದು ಆತು, ಹಸಿ ಮೈ ಒಣಗೋಕು ಮುಂಚೆ ಅಲ್ಲಿ ಇಲ್ಲಿ ಸುತ್ತಾಡಿ ದಾಂಪತ್ಯ ಸುಖ ಅನುಭವಸಿದ್ದು ಆತು. ಇನ್ನೇನು ಕಲ್ಲೇಶಿಯ ಜೀವನದ ಬಂಡಿ ಸುಗಮವಾಗಿ ಸಾಗುತ್ತಿದೆ ಎನ್ನುವಾಗ ಬಂಡಿಯ ಉದ್ದುಗಿ ದಡಕ್ಕೆನ ಮುರಿದಂತಾಯಿತು. ಅದಕ್ಕೆ ಕಾರಣ ಮದುವೆಯಾಗಿ ತಿಂಗಳೊಪ್ಪತ್ತಿನಲ್ಲಿ ನಿರ್ಮಲ ಹೊಲ ಮಾರು ಅಂತಾ ಚಂಡಿಯಿಡಿದು ಕುಂತಿದ್ದು. ಇದು ಗೊತ್ತಾಗುತ್ತಲೇ ಸಣ್ಣಿರವ್ವ ‘ಹೋದ್ರೆ ಹೋಗ್ಲಿ ಮಗನ ಮದ್ವಿ ಆದ್ರೆ ಸಾಕು ಅಂತಾ ಮಾಡಿಕೆಂದ್ವಿ. ಈಗ ನೋಡಿದ್ರೆ ಹೊಲ ಮಾರು ಅಂತಾ ಕುಂತಾಳ ನೀನ್ನೆಣ್ತಿ. ಖಬರಗೇಡಿ... ಖಬರೆಗೇಡಿ... ನಿಂಗೇರ ತಿಳಿಯಿದಿಲ್ವಾ... ದುಡ್ಕಂಡು ತಿನ್ರಿ ದುಡಿಲಾರದ ಪಾಪಿಗಳಾಗಬೇಡ್ರಿ, ಹೊಲ ಮಾರೋದಂದ್ರ ಹಡದವ್ವನ ಮಾರಿದಂಗ ತಿಳ್ಕ’ ಅಂತಾ ಗಟ್ಟಿಹಚ್ಚಿದ್ದಳು.

ನಿರ್ಮಲ ತನ್ನ ಮಾತು ನೆಡೆಯದಿದ್ದಕ್ಕೆ ಗಂಡನ ಮೇಲೆ ಸಿಟ್ಟು ಮಾಡಿಕೊಂಡು ತವರು ಸೇರಿದಳು. ಅಲ್ಲಿ ಅವಳ ಸ್ನೇಹಿತೆಯರು ಇವಳನ್ನು ನೋಡಿ ಆಡಿಕೊಂಡು ನಗತೊಡಗಿದರು. ಇತ್ತಕಡೆ ಮರಿಗೂಳಪ್ಪ ತನ್ನ ಮಗನಿಗೆ ‘ರಟ್ಟೆ ಮುರಿದು ರೊಟ್ಟಿ ತಿನ್ನು;ಕಟ್ಟೆ ಹಾಕಿ ಅನ್ನ ಉಣ್ಣು ಅಂತಾ ಗಾದೆನೇ ಐತಿ, ದುಡಿದ್ರೆ ಭೂಮ್ತಾಯಿ ಕೈ ಬಿಡಲ್ಲ’ ಎಂದು ಬುದ್ದಿ ಹೇಳಿದ. ಅದರಂತೆ ಅವರಿವರ ಬಳಿ ಐವತ್ತು ಸಾವಿರ ಕೈಗಡ ತಗೊಂಡು ಬೋರ್ ಕೊರೆಸಿದ ಗಂಗವ್ವ ಉಕ್ಕಿ ಹರಿದಳು. ಹೊಲವೆಂಬ ಹೊಲವೆಲ್ಲ ತೊಯ್ದು ತಣಿಯಿತು. ಜಮೀನು ಜಾಸ್ತಿ ಕಮ್ಮತ ನುಗ್ಗೋದಿಲ್ಲಂತ ಗೊತ್ತಾದದ್ದೆ ಬ್ಯಾಡಗಿ ಸಿಂಡಿಕೆಟ್ ಬ್ಯಾಂಕಿನಲ್ಲಿ ಕೂಡಿಟ್ಟಿದ್ದ ಅಷ್ಟು ಇಷ್ಟು ದುಡ್ಡು ಜಮೆಮಾಡಿಕೊಂಡು ಒಂದಿಷ್ಟು ಲೋನ್ ಮಾಡಿ ಟ್ರ್ಯಾಕ್ಟರ್ ಖರೀದಿಸಿ ಕೊಟ್ಟ. ಕಲ್ಲೇಶಿ ಹೊಲದಲ್ಲಿ ಬೆಳೆದು ನಿಂತಿದ್ದ ಜಾಲಿಗಿಡಗಳನ್ನು ಬುಡಸಮೇತ ಕಿತ್ತೊಗೆದು; ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು ಎನ್ನುವಂಗೆ ಹೊಸ ಕಮ್ಮತಕ್ಕೆ ಕೈ ಹಾಕಿದ.

ಮಳೆ ಪೀಕು ಕೇಡದಂತೆ ಹದಬೆರಸಿ ಬಿದ್ದಿದ್ದರಿಂದ ಕಲ್ಲೇಶಿಯ ಹೊಲದಲ್ಲಿ ರಾಗಿ, ನವಣೆ, ಸಾಮೆ, ಶೇಂಗಾ ಹುಲುಸಾಗಿ ಬೆಳೆದು ನಗುತ್ತಿದ್ದವು. ಉಣ್ಣಲು ಒಂದಿಷ್ಟು ನಾಟಿ ಕೂಡಾ ಮಾಡಿದ್ದ. ಕೈ ಕಾಸಿಗೆ ಹೂವು ಹಚ್ಚಿಕೊಂಡಿದ್ದ. ‘ಅಪ್ಪಣ್ಣಿ ನಾಕು ಮಂದಿಯಂಗ ನಾವು ಆಗಬೇಕು ಏನಾರು ರೊಕ್ಕದ ಪೀಕು ಮಾಡು’ ಅಂತಾ ಮರಿಗೂಳಪ್ಪ ಹೇಳಿದ್ದಕ್ಕೆ ಬಾಳೆ ಕಟ್ಟಿದ್ದ. ಬಾಳೆ ಕೂಡಾ ಹೊತ್ತು ನಿಂತಿತ್ತು. ‘ಉಣ್ಣಾಕ... ಉಡಾಕ... ಯಾದಕ್ಕೂ ಕಮ್ಮಿಯಿಲ್ಲ. ಯಾಕಿಂಗ ನಿನ್ನೇಣ್ತಿ ಚಂಡಿಯಿಡ್ದಾಳ... ಹೋಗಿ ಕರ್ಕಂಡು ಬಾ’ ಅಂತಾ ಸಣ್ಣೀರವ್ವ ಬುದ್ದಿ ಹೇಳಿದ್ದಕ್ಕೆ ಕಲ್ಲೇಶಿ ಹೋಗಿ ನಿರ್ಮಲಳನ್ನು ಕರೆದುಕೊಂಡು ಬಂದ. ಗಂಡನ ದುಡಿಮೆ, ಅತ್ತೆ ಮಾವನ ಕಾಳಜಿಗೆ ನಿರ್ಮಲ ಬದಲಾಗಿ ಹಳ್ಳಿಬಾಳಿಗೆ ಒಗ್ಗಿಕೊಂಡಳು. ‘ಹಬ್ಬ ಹಸನಗಾಲಿ, ಗೋಧಿ ಜಲನಾಗಲಿ, ಬಂದ ಬೀಗರು ಉಂಡು ಹೋಗಲಿ’ ಎಂಬಂತೆ ನಮ್ಮ ಕಲ್ಲೇಶಿ ಕೃಷಿಯಲ್ಲಿ ನೆಮ್ಮದಿಯನ್ನು ಕಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT