ಮಸೀದಿಯೊಳಗಿಂದ ಕೇಳುತ್ತಿದ್ದ ಬಿರುಸಾದ ಮಾತುಗಳು ಈಗ ಆವರಣ ದಾಟಿ, ಕಂಪೌಂಡೂ ದಾಟಿ ರಸ್ತೆಯಲ್ಲೂ ಕೇಳಿಸುತ್ತಿತ್ತು. ಭರ್ರೆಂದು ಸದ್ದು ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್, ಕಾರಿನವರೂ ಸದ್ದಿಗೆ ಬೆಚ್ಚಿದಂತಾಗಿ ಮಸೀದಿಯ ಕಿಟಕಿ ಕಡೆ ಒಮ್ಮೆ ಇಣುಕಿ ನೋಡಿ ಮುಂದೆ ಸಾಗುತ್ತಿದ್ದರು. ತನ್ನ ಮನೆಯ ಬೆಲೆಬಾಳುವ ಕಾರು ಮಸೀದಿಯ ಅಂಗಳದಲ್ಲೇ ರಾಜಾರೋಷವಾಗಿ ನಿಂತಿದ್ದರೂ ಸೈಕಲ್ ತುಳಿಯುತ್ತಾ ಬಂದ ಅದ್ರಾಮಾಕ ಸೈಕಲ್ ನಿಲ್ಲಿಸಿ ಒಳಬರುವುದಕ್ಕೂ ‘ಅದೆಲ್ಲಾ ಆಗದು ಮೋನೇ, ತಿಂಗಳಿಗೆ ಮೂರು ಸಾವಿರ ದುಡಿಯುವವನು ಮಸೀದಿ ವಂತಿಗೆ ಐನೂರು ರೂಪಾಯಿ ಹೇಗೆ ಕಟ್ಟೋದು?’ ಅಬ್ಬೋನು ಹಾಜಿ ಕೆಮ್ಮುತ್ತಾ ಎದೆ ನೀವಿ ಮಾತಾಡುವುದೂ ಸರಿಹೋಯ್ತು. ಅವರ ಮಾತನ್ನು ಅರ್ಧಕ್ಕೆ ತುಂಡರಿಸಿದ ರಫೀಕ್ ‘ಹೇಗೆ ಕಟ್ಟೋದು ಅಂದರೆ ಹೇಗೆ ಹಾಜಾರರೇ? ಮಸೀದಿಗಾಗಿ ಅಷ್ಟೂ ತ್ಯಾಗ ಮಾಡಲಾಗುವುದಿಲ್ಲವೇ? ಇನ್ನೆಷ್ಟು ದಿನ ನಾವು ಈ ಔಟ್‌ಡೇಟೆಡ್ ಮಸೀದಿಯಲ್ಲಿ ನಮಾಜು ಮಾಡೋದು? ಮಸೀದಿಗೆ ಮಿನಾರ ಆಗಬೇಡವೇ? ಪಕ್ಕದೂರಿನವರ ಮುಂದೆ ಮರ್ಯಾದೆಯಿಂದ ತಲೆ ಎತ್ತಿ ನಡೆಯಬೇಕು ನಾವು. ಬೇಕಿದ್ದರೆ ಒಂದು ವರ್ಷ ಪ್ರತಿ ತಿಂಗಳು ಎಲ್ಲಾ ಉಸ್ತಾದರ ಸಂಬಳದಲ್ಲೂ ಐನೂರು ರೂಪಾಯಿ ಕಟ್ ಮಾಡೋಣ’ ಎಂದ. ಮಗನ ಪ್ರಸ್ತಾಪದ ಬಗ್ಗೆ ಸಹಮತಿಯಿಲ್ಲದ ತಂದೆ ಅದ್ರಮಾಕ ಅವನ ಮಾತನ್ನು ಒಪ್ಪಿಕೊಳ್ಳಲೂ ಆಗದೆ ಎದುರಿಸಲೂ ಧೈರ್ಯವಿಲ್ಲದೆ ಯಾರಾದರೂ ಅವನ ಮಾತಿಗೆ ವಿರೋಧಿಸುತ್ತಾರೇನೋ ಎಂದು ಆಚೀಚೆ ನೋಡುತ್ತಿದ್ದರೆ ಅವನ ಹಿಂದೆ ಮುಂದೆ ಸುತ್ತುತ್ತಾ, ಅವನು ಫಾರಿನ್‌ನಿಂದ ತಂದ ಪರ್ಫ್ಯೂಮ್ ಹಾಕಿಕೊಂಡು ತಿರುಗುವ ಅವನ ಸ್ನೇಹಿತರು ಅವನ ಮಾತಿಗೆ ದನಿಗೂಡಿಸಿದರು. ಮಸೀದಿಗೆ ಮಿನಾರ ಕಟ್ಟಿಸುವ, ತಾರಸಿ ಹಾಕಿಸುವ ಅದಕ್ಕಿಂತ ಹೆಚ್ಚಾಗಿ ಊರಿನ ಹೊಸ ಶ್ರೀಮಂತ ರಫೀಕ್‌ನನ್ನು ಮೆಚ್ಚಿಸುವ ಉಮೇದಿನಲ್ಲಿದ್ದ ಅವರಿಗೆ ಅಬ್ಬೋನು ಹಾಜಿಯ ಮಾತು ಯಾವುದೋ ಮುದುಕನ ಗೊಣಗಾಟದಂತೆ ಕೇಳಿಸಿದ್ದರಲ್ಲಿ ತಪ್ಪೇ ಇರಲಿಲ್ಲ.

ಐದೋ ಆರೋ ವರ್ಷಗಳ ಹಿಂದೆ ಊರಲ್ಲಿ ಪೋಲಿ ತಿರುಗಿಕೊಂಡಿದ್ದ, ಬೈಕ್ ಕದ್ದು, ಮನೆಯ ಜಗಲಿಯಲ್ಲಿಟ್ಟ ಗ್ಯಾಸ್ ಸಿಲಿಂಡರ್ ಕದ್ದು, ಯಾರದೋ ಅಡಕೆ ತೋಟಕ್ಕೆ ಕನ್ನ ಹಾಕಿಯೂ ಸಿಕ್ಕಿಬಿದ್ದು ಒಂದೆರಡು ಬಾರಿ ಪೊಲೀಸ್ ಸ್ಟೇಷನ್ ಮೆಟ್ಟಿಲೂ ಹತ್ತಿದ್ದ ರಫೀಕ್‌ನನ್ನು ಅವನ ಅಪ್ಪ ಅದ್ರಾಮಾಕ ಯಾರದೋ ಕೈಕಾಲು ಹಿಡಿದು ಒಂದು ವೀಸಾ ಮಾಡಿಸಿ ಸೌದಿಗೆ ಕಳುಹಿಸಿದ್ದರು. ರಫೀಕ್ ಸೌದಿ ತಲುಪುವ ಮುಂಚೆಯೇ ವಿಮಾನದಿಂದ ಹಾರಿಯಾದರೂ ತಪ್ಪಿಸಿಕೊಂಡು ಬಂದಾನು ಎಂದು ಅವತ್ತು ಮಾತಾಡಿಕೊಂಡವರೇ ಹೆಚ್ಚು. ಆದರೆ ಅವನು ಅಲ್ಲಿ ಪೂರ್ತಿ ಐದು ವರ್ಷ ನಿಂತ. ಅಲ್ಲಿ ಯಾವ ಕೆಲಸ ಮಾಡುತ್ತಿದ್ದನೋ ಗೊತ್ತಿಲ್ಲ. ಹೋದ ಎರಡೇ ವರ್ಷಗಳಿಗೆ ಊರಲ್ಲಿ ಎರಡಂತಸ್ತಿನ ಮನೆ ಎದ್ದು ನಿಂತಿತ್ತು. ಅವನು ಊರಿಗೆ ಮರಳುವ ತಿಂಗಳ ಮುಂಚೆ ಫೋರ್ಟಿಕೋದಲ್ಲಿ ದುಬಾರಿ ಕಾರೂ ಬಂದು ನಿಂತಿತ್ತು.

ಬ್ಯಾಂಕ್ ಸಾಲ ಬೆಟ್ಟದಷ್ಟಿದೆ ಎನ್ನುವ ಗುಸು ಗುಸಿನ ನಡುವೆಯೂ ಅವನೀಗ ಊರಲ್ಲಿ ಗಣ್ಯ ವ್ಯಕ್ತಿ. ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾನಂತೆ ಎಂಬ ಸುದ್ದಿ ಊರ ಪರವೂರ ತುಂಬಾ ಹರಡುತ್ತಿದ್ದಂತೆ ಹೆಣ್ಣು ಹೆತ್ತವರು ತಾಮುಂದು ನಾಮುಂದು ಎಂಬಂತೆ ಅವನ ಮನೆಯ ಮುಂದೆ ನಿಲ್ಲಲು ಶುರು ಮಾಡಿದ್ದರು. ‘ಅದ್ಯಾವ ಹರಾಮಿನ ದುಡ್ಡೋ...’ ಎಂದು ಅವನ ಬೆನ್ನ ಹಿಂದೆ ಮಾತಾಡಿಕೊಳ್ಳುವವರಿಗೇನೂ ಕಡಿಮೆ ಇಲ್ಲದಿದ್ದರೂ ಅವನ ಮುಂದೆ ಇದೇ ಮಾತನ್ನು ಹೇಳುವ ಧೈರ್ಯ ಯಾರಿಗೂ ಇದ್ದಿರಲಿಲ್ಲ.

ಹಾಗಾಗಿಯೇ ಕಳೆದ ಬಾರಿಯ ಜಮಾಅತ್ ಮೀಟಿಂಗಿನಲ್ಲಿ ಈ ಬಾರಿಯ ಮಸೀದಿಯ ಅಧ್ಯಕ್ಷತೆ ಯುವಕರಿಗೆ ಬಿಟ್ಟು ಕೊಡಬೇಕು ಎಂದಾಗ ಹಿರಿ ತಲೆಗಳು ಅವನ ಬಗ್ಗೆ ತುಟಿಪಿಟಿಕ್ ಅಂದಿರಲಿಲ್ಲ. ಕಳೆದ ಆರು ವರ್ಷಗಳಿಂದಲೂ ಅಧ್ಯಕ್ಷರಾಗಿರುವ ಅಬ್ಬೋನು ಹಾಜಿಗೂ ಇದು ಒಲ್ಲದ ಪಟ್ಟವೇ. ಹಾಗಾಗಿ ಬಿಟ್ಟು ಕೊಡುವುದಕ್ಕೆ ಅವರ ತಕರಾರೇನೂ ಇರಲಿಲ್ಲ.

ಆರು ವರ್ಷಗಳ ಹಿಂದೆ ಮಸೀದಿಯ ಅಧ್ಯಕ್ಷರು ಅಚಾನಕ್ಕಾಗಿ ತೀರಿ ಹೋದಾಗ ಬೇಡ ಬೇಡ ಎಂದರೂ ಅಧ್ಯಕ್ಷತೆ ಹಾಜಾರರಿಗೆ ಒಲಿದು ಬಂದಿತ್ತು. ಆಮೇಲೆ ಪ್ರತಿ ವರ್ಷದ ಜಮಾಅತಿನ ವಾರ್ಷಿಕ ಮಹಾಸಭೆಯಲ್ಲಿ ಅಲ್ಲಿನ ಜನರೇ ಒತ್ತಾಯ ಮಾಡಿ ಅವರನ್ನು ಅಧ್ಯಕ್ಷರಾಗಿ ಮುಂದುವರಿಸುತ್ತಿದ್ದರು.

ಈ ಬಾರಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಕೇಳಿ ಬಂದಾಗ ಖುಷಿಯಿಂದಲೇ ಅಧ್ಯಕ್ಷತೆ ಬಿಡಲು ಸಿದ್ಧವಾಗಿದ್ದರು ಅಬ್ಬೋನು ಹಾಜಿ. ಆದರೆ ಮಸೀದಿಯ ಮಾಸಿಕ ವಂತಿಗೆ ಕಡ್ಡಾಯವಾಗಿ ಹೆಚ್ಚಳ ಮಾಡುವ ಯೋಜನೆ ಯಾಕೋ ಅವರಿಗೆ ಇಷ್ಟವಾಗಿರಲಿಲ್ಲ.

ಬಡತನದಲ್ಲೇ ಬೆಳೆದು ಬಂದ ಹಾಜಾರರಿಗೆ ಹಾಗನ್ನಿಸಿದ್ದು ಸಹಜ. ಊರು ಪರವೂರಲ್ಲಿ ಹೆಸರು ಗಳಿಸಿದ್ದ ಹುಸೇನ್ ಹಾಜಿಯ ತೋಟದ ಮನೆಯಲ್ಲಿ ಬಾವಿಯಿಂದ ನೀರು ಸೇದಿ ತೆಂಗಿನ ಗಿಡಗಳಿಗೆ ಹಾಕುವ ಕೆಲಸಕ್ಕೆ ಅಬ್ಬೋನರ ಅಪ್ಪ ಸೇರಿಸಿದಂದಿನಿಂದ ಹಾಜಾರಾಗುವವರೆಗಿನ ಅವರ ಬದುಕು ಸರಾಗವಾಗಿಯೇನೂ ಇರಲಿಲ್ಲ.

ಹುಸೇನ್ ಹಾಜಿಯವರು ಕಡು ಕೋಪಿಷ್ಠರಾದರೂ ಊರ ಉಳಿದ ಜಮೀನ್ದಾರರಿಗಿಂತ ಹೆಚ್ಚು ಸಂಬಳ ಕೊಡುತ್ತಾರೆ ಎನ್ನುವುದು ಅವರ ಹೆಗ್ಗಳಿಕೆಯಾದ್ದರಿಂದ ಕೆಲಸಗಾರರು ಅವರ ತೋಟದ ಕೆಲಸಕ್ಕೆ ಹೋಗಲು ತುಂಬ ಸುಲಭವಾಗಿ ಒಪ್ಪಿಕೊಳ್ಳುತ್ತಿದ್ದರು. ಗೇಣಿಗೆ ಬಿಟ್ಟ ಹೊಲದ ಕಥೆಯೂ ಅಷ್ಟೇ, ವರ್ಷಕ್ಕೆ ಇಷ್ಟು ಮೂಡೆ ಅಕ್ಕಿ ಕೊಡಬೇಕೆಂದು ನಿಶ್ಚಯ ಮಾಡಿದ್ದರೂ ಚೂರು ಹೆಚ್ಚು ಕಮ್ಮಿಯಾದರೆ ಅವರು ಆಕಾಶ ಭೂಮಿ ಒಂದು ಮಾಡುತ್ತಿರಲಿಲ್ಲ.

ಹಾಗೆಂದೇ ಕೆಲಸಗಾರರಿಗೆಲ್ಲಾ ಅವರನ್ನು ಕಂಡರೆ ಎಷ್ಟು ಭಯವಿತ್ತೋ ಅಷ್ಟೇ ಪ್ರೀತಿಯೂ ಇತ್ತು. ಹಲವು ಬಾರಿ ಊರ ಮುಖಂಡರು ಅವರನ್ನು ಕರೆಸಿ ಕೂಲಿಯವರಿಗೆ ಅಷ್ಟು ಸಂಬಳ ಕೊಡಬಾರದು ಎಂದು ನಯವಾಗಿಯೂ, ಬೆದರಿಸಿಯೂ ಹೇಳಿ ನೋಡಿದ್ದರು. ಆದರೆ ಹುಸೇನ್ ಹಾಜಿ ಮಾತ್ರ ‘ಹಾಗೆಲ್ಲಾ ಕೂಲಿಯವನ ಬೆವರಿನ ದುಡ್ಡನ್ನು ಕಿತ್ತುಕೊಳ್ಳಬಾರದು’ ಎಂದು ಹೇಳಿ ಎದ್ದು ಬರುತ್ತಿದ್ದರು. ಇಂಥವರ ಗರಡಿಯಲ್ಲಿ ಬದುಕಿನ ಬಾಲಪಾಠ ಕಲಿತ ಅಬ್ಬೋನು ಹಾಜಿಯವರು ಬಡತನಕ್ಕೆ ಮರುಗದೇ ಇರಲು ಹೇಗೆ ಸಾಧ್ಯ?

ಹಾಗಾಗಿಯೇ ಅವರು ಊರ ಮೂರು ರಸ್ತೆ ಸೇರುವಲ್ಲಿನ ಗೂಡಂಗಡಿಯಲ್ಲಿ, ಮಸೀದಿ ಅಂಗಳದಲ್ಲಿ ರಫೀಕ್‌ನ ಪ್ರಸ್ತಾಪದ ಬಗ್ಗೆ ಚರ್ಚೆಯಾದಾಗೆಲ್ಲಾ ಅಂತಹಾ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಬೇಕು ಎಂದು ಹೇಳುತ್ತಿದ್ದುದು. ಅವನ ಈ ಥಳುಕು ಬಳುಕು ಹೆಚ್ಚು ಕಾಲ ಬಾಳಿಕೆ ಬಾರದು ಎನ್ನುವುದು ಅವರು ತಮ್ಮ ಅನುಭವದಿಂದ ಕಂಡುಕೊಂಡಿರುವ ಸತ್ಯ. ಆದರೆ ಊರ ಯುವಕರು, ಅದರಲ್ಲೂ ಅವನಂತೆ ದಿಢೀರ್ ಶ್ರೀಮಂತರಾಗಬಯಸುವವರು ಅವರ ಮಾತುಗಳನ್ನು ಕೇಳಲೇ ಸಿದ್ಧರಿರಲಿಲ್ಲ.

ಒಂದು ಶುಭ ಶುಕ್ರವಾರ ಜುಮ್ಮಾ ನಮಾಜಿನ ನಂತರ ಅಬ್ಬೋನು ಹಾಜಿಯ ಕೈಯಲ್ಲಿದ್ದ ಮಸೀದಿಯ ಅಧ್ಯಕ್ಷತೆ ಯುವಕರಿಗೆ ಹಸ್ತಾಂತರವಾಯಿತು. ಹದಿ ಹರೆಯದವರೆಲ್ಲಾ ಒಟ್ಟು ಸೇರಿ ರಫೀಕನೇ ಅಧ್ಯಕ್ಷನಾಗಲಿ ಎಂದು ಪಟ್ಟು ಹಿಡಿದರು. ಆದರೆ ತನಗೆ ಎರಡು ವಾರಗಳಲ್ಲಿ ಸೌದಿಗೆ ಹಿಂದಿರುಗಲು ಇದ್ದುದರಿಂದಾಗಿ ಅಧ್ಯಕ್ಷತೆ ವಹಿಸಿಕೊಳ್ಳಲಾಗುವುದಿಲ್ಲ ಎಂದು ನಯವಾಗಿಯೇ ತಿರಸ್ಕರಿಸಿದ. ಇನ್ನೊಂದು ವಾರದೊಳಗೆ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳದಿದ್ದರೆ ಕೆಲಸ ಹೋದೀತು ಎಂದು ನಿನ್ನೆ ತಾನೇ ಕಫೀಲ್ ಕರೆ ಮಾಡಿ ಎಚ್ಚರಿಸಿದ್ದು ಗುಂಗಿಹುಳದಂತೆ ಕೊರೆಯುತ್ತಲೇ ಇತ್ತು. ಅಷ್ಟಲ್ಲದೆ ಊರಿಗೆ ಬಂದು ತಿಂಗಳು ಆರಾಯ್ತು. ಸಂಬಳ, ಸಾಲ ಅಂತ ತಂದ ಹಣವೆಲ್ಲಾ ದೌಲತ್ತಿಗೇ ಖರ್ಚಾಗಿ ಹೋಯಿತು. ಮದುವೆ ಯಾವಾಗ ಎಂದು ಊರವರು ಕೇಳುತ್ತಲೇ ಇದ್ದಾರೆ. ಒಂದು ಹದಿನೈದು ಪವನ್ ಆದರೂ ‘ಮಹರ್’ ಕೊಡದಿದ್ದರೆ ತನ್ನ ಪ್ರೆಸ್ಟೀಜ್ ಏನಾಗಬೇಕು? ಮೇಲಾಗಿ ಮನೆ ಸಾಲ, ಕಾರಿನ ಸಾಲ ಅಂತ ಫೈನಾನ್ಸಿನವರೂ ಬೆನ್ನು ಬಿದ್ದಿದ್ದಾರೆ. ಇಲ್ಲಿ ಅಧ್ಯಕ್ಷನಾಗಿ ಕೂತರೆ ಬ್ಯಾಂಕಿನ ಕಂತು ಯಾರು ಕಟ್ಟುವುದು? ಅಪ್ಪ ಆಸ್ತಿ ಮಾಡಿಟ್ಟಿದ್ದರೆ ಒಂದು ಕೈ ನೋಡಬಹುದಿತ್ತು ಎಂದೆಲ್ಲಾ ಅವನ ತಲೆಯಲ್ಲಿ ಯೋಚನೆಗಳು ಓಡುತ್ತಿದ್ದವು.

ಅದೇ ದಿನ ನಡೆದ ಮೀಟಿಂಗಿನಲ್ಲಿ ಮಸೀದಿಯ ತಿಂಗಳ ವಂತಿಗೆ ಐನೂರು ರೂಪಾಯಿಗಳನ್ನು ಕಡ್ಡಾಯವಾಗಿ ಕೊಡಬೇಕೆಂದೂ, ಹಾಗೆ ಕೊಡದಿರುವವರ ಮನೆಯ ಯಾರಾದರೂ ತೀರಿ ಹೋದರೆ ಮಸೀದಿಯ ಖಬರಸ್ತಾನದಲ್ಲಿ ದಫನ ಮಾಡಲು ಅವಕಾಶ ಇಲ್ಲವೆಂದೂ ಠರಾವು ಪಾಸು ಮಾಡಲಾಯಿತು. ಅಬ್ಬೋನು ಹಾಜರಂತಹ ವಯಸ್ಸಾದರವರು ಇದನ್ನು ವಿರೋಧಿಸಿದರೂ ಆ ವಿರೋಧವನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ.

ಅದಾಗಿ ಎರಡೇ ದಿನಗಳಲ್ಲಿ ಊರವರಿಗೆಲ್ಲಾ ಭರ್ಜರಿ ಔತಣ ಕೂಟ ಕೊಟ್ಟು ಸೌದಿಯ ವಿಮಾನ ಹತ್ತಿದ್ದ ರಫೀಕ್. ಮಂಗಳೂರಿನ ಏರ್ಪೋರ್ಟಿಗೆ ಹೋಗುವಾಗಲೂ ತನ್ನ ಗೆಳೆಯರ ಗುಂಪನ್ನು ಕಟ್ಟಿಕೊಂಡೇ ಹೋಗಿದ್ದ. ಆದರೆ ಇಲ್ಲಿಂದ ನೇರ ವಿಮಾನದಲ್ಲಿ ಹೋಗಿ ದಮ್ಮಾಮಲ್ಲಿ ಇಳಿದ ನಂತರ ಕರೆ ಮಾಡುತ್ತೇನೆ ಎಂದವನ ಸುದ್ದಿಯೇ ಇಲ್ಲ. ಮೊದಲ ದಿನ ಹೋದ ಸುಸ್ತು, ಊರಿನ, ಗೆಳೆಯರ ಗೈರು ಅವನನ್ನು ಕಾಡುತ್ತಿರಬಹುದು ಎಂದು ಮನೆಯವರೂ ಗೆಳೆಯರೂ ಅಂದುಕೊಂಡು ಸುಮ್ಮನಾದರೂ. ಮರುದಿನವೂ ಅವನ ಕರೆ ಇಲ್ಲ, ಇವರಾಗಿ ಫೋನ್ ಮಾಡಿದರೆ ಫೋನ್ ಸ್ವಿಚ್ ಆಫ್.

ಸೌದಿಯ ಅವನ ಗೆಳೆಯರಲ್ಲಿ ವಿಚಾರಿಸಿದಾಗ ಅವನು ಅಲ್ಲಿಗೆ ಮರಳಿರುವ ವಿಷಯವೇ ಅವರಿಗೆ ಗೊತ್ತಿಲ್ಲ. ಇಲ್ಲಿಂದ ವಿಮಾನ ಹತ್ತಿ ಹೋದ ರಫೀಕ್ ಆಮೇಲೆ ಏನಾದ ಎಂಬ ಸುದ್ದಿಯೇ ಇಲ್ಲ. ಮೊದಮೊದಲು ಊರವರು ಈ ಪ್ರಕರಣವನ್ನು ಹತ್ತರಲ್ಲಿ ಹನ್ನೊಂದು ಎಂದು ಸುಮ್ಮನಾಗಿದ್ದರು. ಆದರೆ ಅವನು ಕಫೀಲ್‌ಗೆ ವಂಚಿಸಿದ್ದಾನೆ, ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದಾನಂತೆ, ಮಾದಕ ದ್ರವ್ಯ ಸಾಗಾಟದಲ್ಲಿ ಸಿಕ್ಕಿಬಿದ್ದಿದ್ದಾನಂತೆ ಎಂದೆಲ್ಲಾ ಬಗೆ ಬಗೆಯ ಅಂತೆ ಕಂತೆಗಳು ಊರ ತುಂಬಾ ಹರಿದಾಡಲು ಪ್ರಾರಂಭವಾಯಿತು. ತಿಂಗಳು ಒಂದಾಗಿ ಎರಡಾದರೂ ರಫೀಕ್ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುವುದು ಯಾರಿಗೂ ಗೊತ್ತಿಲ್ಲದಂತಾದಾಗ ಜೇನಿಗೆ ಸುತ್ತಿಕೊಳ್ಳುವ ಇರುವೆಯಂತೆ ಸುತ್ತಿಕೊಂಡಿದ್ದ ಅವನ ಗೆಳೆಯರು ಒಬ್ಬೊಬ್ಬರಾಗಿಯೇ ಕಳಚಿಕೊಳ್ಳತೊಡಗಿದರು. ಅಷ್ಟು ಮಾತ್ರ ಅಲ್ಲ, ಅಂವ ಹಾಗಂತೆ ಹೀಗಂತೆ ಎಂದು ಅವರೇ ಗಾಳಿ ಸುದ್ದಿ ಹಬ್ಬತೊಡಗಿದ್ದರು.

ಈ ಮಧ್ಯೆ ರಫೀಕ್ ಮನೆಗೆ ನಿರಂತರವಾಗಿ ಫೈನಾನ್ಸ್‌ನಿಂದ ಫೋನ್, ನೋಟೀಸ್ ಬರತೊಡಗಿದವು. ಒಂದೆಡೆ ಎದೆಯುದ್ದ ಬೆಳೆದ ಮಗನಿಲ್ಲದ ನೋವು, ಮತ್ತೊಂದೆಡೆ ಬ್ಯಾಂಕಿನ ವ್ಯವಹಾರದ ತಲೆ ಬುಡ ಗೊತ್ತಿಲ್ಲದಿದ್ದರೂ ಇವಕ್ಕೆಲ್ಲಾ ತಲೆಕೊಡಬೇಕಾದ ಅನಿವಾರ್ಯತೆ. ಅದ್ರಾಮಾಕನಿಗೆ ಮೊದಲೇ ಇದ್ದ ಬಿ.ಪಿ, ಡಯಾಬಿಟಿಸ್ ಮತ್ತಷ್ಟು ಏರಿತು.

ಒಂದು ಬೆಳಗ್ಗೆ ಬೀಸಿದ ಜೋರು ಗಾಳಿಗೆ ಫೋರ್ಟಿಕೋದಲ್ಲಿ ತಣ್ಣಗಿದ್ದ ಕಾರಿನ ಮೇಲೆ ನಾಲ್ಕಿಂಚು ದಪ್ಪದಲ್ಲಿ ಕುಳಿತಿದ್ದ ಧೂಳು ಹಾರಿ ಮೀನು ತರಲೆಂದು ಪೇಟೆಗೆ ಹೊರಟಿದ್ದ ಅದ್ರಾಮಾಕನ ಬಿಳಿ ಅಂಗಿಯ ತೋಳನ್ನು ಸವರಿ ಕಣ್ಣಲ್ಲಿ ಕುಳಿತುಕೊಂಡಿತು. ಒಂದು ಕೈಯಿಂದ ಕಣ್ಣು ಉಜ್ಜುತ್ತಾ ‘ಇದೊಂದು ಸಾವು’ ಎಂದು ಹಿಡಿ ಶಾಪ ಹಾಕಿ ಮೀನಿನ ಚೀಲ ಕೆಳಗಿಟ್ಟು ಅಲ್ಲೇ ಇದ್ದ ಪೈಪ್‌ನಿಂದ ನೀರು ಹಾಯಿಸಿ ಕಾರು ತೊಳೆಯಲು ಪ್ರಾರಂಭಿಸಿದರು. ರಫೀಕ್‌ನ ಗೆಳೆಯರು ಯಾರಾದರೂ ಇತ್ತ ಕಡೆ ಬಂದರೆ ಒಮ್ಮೆ ಕಾರು ಓಡಿಸಿ ಎಲ್ಲಾ ಸರಿಯಾಗಿದ್ಯಾ ಎಂದು ನೋಡಲು ಹೇಳಬೇಕು ಅಂದುಕೊಳ್ಳುತ್ತಿರುವಾಗ ಕಾಂಪೌಂಡ್ ಒಳಗೆ ಬಿಳಿ ಬಣ್ಣದ ಕಾರೊಂದು ಬಂದು ನಿಂತಿತು.

ಅದ್ರಾಮಾಕ ಪಿಳಿ ಪಿಳಿ ಕಣ್ಣು ಬಿಡುತ್ತಿರುವಾಗಲೇ ಅದರಿಂದ ಇಳಿದ ಸೂಟುದಾರಿಗಳಿಬ್ಬರು ‘ನಿಮ್ಮ ಮನೆ ಸೀಝ್ ಮಾಡಲು ಬಂದಿದ್ದೇವೆ’ ಎಂದು ಕಾಗದ ಪತ್ರದ ದೊಡ್ಡ ಕಟ್ಟೊಂದನ್ನು ಅವರ ಕೈಗಿತ್ತು ಬೂಟುಗಾಲಲ್ಲೇ ಮನೆಯ ಒಳಹೊಕ್ಕರು. ಓದಲು ಬರೆಯಲು ಬಾರದ ಅದ್ರಾಮಾಕ ಕಾಗದವನ್ನು ಹಿಂದಕ್ಕೆ ಮುಂದಕ್ಕೆ ತಿರುಗಿಸಿ ನೋಡಿದರು. ಕಣ್ಣ ಮುಂದೆ ತಾನು, ಪತ್ನಿ ಒಂದು ಜೊತೆ ಬಟ್ಟೆಯೂ ಇಲ್ಲದೆ ಬೀದಿಯಲ್ಲಿ ನಿಂತಂತೆ, ಊರ ಜನ ತಮ್ಮನ್ನು ನೋಡಿ ನಕ್ಕಂತೆ, ‘ಅವನ ಕೊಬ್ಬು ಈಗ ಇಳಿಯಿತು ನೋಡು’ ಎಂದು ಮಾತಾಡಿಕೊಂಡಂತೆ ಚಿತ್ರಣಗಳು ಕದಲತೊಡಗಿದವು. ನೋಡನೋಡುತ್ತಿರುವಂತೆಯೇ ಅವರು ‘ಯಾ ಅಲ್ಲಾಹ್’ ಎಂದು ಚೀರಿ ಅಂಗಳಕ್ಕೆ ಕುಸಿದುಬಿದ್ದರು.

ಸುದ್ದಿ ಊರಿಡೀ ಹಬ್ಬಿತು. ಎರಡೇ ತಿಂಗಳುಗಳ ಹಿಂದೆ ದೊಡ್ಡ ಔತಣಕೂಟ ಏರ್ಪಟ್ಟ ಮನೆಯಲ್ಲಿ ಮತ್ತೆ ಜನ ಸೇರಿದ್ದರು. ಆವತ್ತು ಊಟದ ಬಗ್ಗೆ, ಆತಿಥ್ಯದ ಬಗ್ಗೆ ಮಾತಾಡಿದ್ದ ಜನ ಇವತ್ತು ಸಾಲ, ರಫೀಕ್, ಅವನು ಕಾಣೆಯಾದದ್ದು, ಅದ್ರಾಮಕನ ಒಳ್ಳೆಯತನ, ಮಗನನ್ನು ತಿದ್ದದ ಅವರ ಉಢಾಳತನ ಹೀಗೆ ತರತರ ಮಾತಾಡುತ್ತಿದ್ದರು. ಅಬ್ಬೋನು ಹಾಜಿ ಬಂದು ಮಯ್ಯತ್ ಸ್ನಾನ ಮಾಡಿಸುವವರು ಯಾರು ಎಂದು ಗಟ್ಟಿ ಧ್ವನಿಯಲ್ಲಿ ಕೇಳಿ ಏಳೆಂಟು ಮಂದಿ ಗಟ್ಟಿಮುಟ್ಟಾದ ಯುವಕರನ್ನು ಖಬರ್‌ಸ್ತಾನಕ್ಕೆ ಅಟ್ಟುವವರೆಗೂ ಆ ಬಗ್ಗೆ ಯಾರಿಗೂ ಪರಿವೆಯೇ ಇದ್ದಂತಿರಲಿಲ್ಲ. ಅಂಗಳದಲ್ಲಿ ಬಿದ್ದಂತಿದ್ದ ಅದ್ರಾಮಾಕನ ಮಯ್ಯತ್ತನ್ನು ನಾಲ್ಕೈದು ಯುವಕರ ಸಹಕಾರದಿಂದ ಮನೆಯೊಳಗೆ ತಂದು ಖಿಬ್ಲಾಕ್ಕೆ ಮುಖ ಮಾಡಿ ಮಲಗಿಸಿದ ಅವರು ಮನೆ ಜಪ್ತಿ ಮಾಡಲು ಬಂದವರನ್ನೊಮ್ಮೆ ಆರ್ತ್ರವಾಗಿ ದಿಟ್ಟಿಸಿದರು. ಅನಿರೀಕ್ಷಿತ ಘಟನೆಯಿಂದ ಗಲಿಬಿಲಿಗೊಂಡಂತಿದ್ದ ಅವರೂ ಸುಮ್ಮನೆ ತಲೆತಗ್ಗಿಸಿ ಮನೆಯಿಂದ ಹೊರಟು ಹೋದರು.

ಖಬರ್ ಅಗೆಯುವ ಕೆಲಸ ಮುಗಿದಿತ್ತು. ಅದ್ರಾಮಾಕನ ಏಕಮಾತ್ರ ಮಗ ರಫೀಕ್ ಇಲ್ಲದೇ ಇದ್ದುದರಿಂದ ಮಯ್ಯತ್ ಸ್ನಾನಮಾಡಿಸಲು ಯಾರಿಗೂ ಕಾಯಬೇಕಾಗಿರಲಿಲ್ಲ. ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ ದೇವರ ಹೆಸರಿನೊಂದಿಗೆ ಊರವರು ಮಯ್ಯತನ್ನು ಮಸೀದಿಗೆ ತಂದರು. ಮಯ್ಯತ್ ನಮಾಜೂ ನೆರವೇರಿತು. ಆದರೆ ಅವರನ್ನು ಗೋರಿಯೊಳಗೆ ಇರಿಸಬೇಕು ಎನ್ನುವಷ್ಟರಲ್ಲಿ ಊರೊಳಗೆ ಇದುವರೆಗೆ ಇರದಿದ್ದ ದೊಡ್ಡ ಸಮಸ್ಯೆಯೊಂದು ಎದುರಾಗಿತ್ತು. ಮಸೀದಿ ಕಮಿಟಿಯಲ್ಲಿ ಪಾಸಾಗಿದ್ದ ನಿರ್ಣಯವನ್ನು ಊರವರೆಲ್ಲಾ ಮರೆತೇ ಬಿಟ್ಟಿದ್ದರು. ರಫೀಕ್ ಕಾಣೆಯಾದದ್ದು ಅದಕ್ಕೆ ಒಂದು ಕಾರಣವಾದರೆ ಆ ಬಳಿಕ ಊರಲ್ಲಿ ಮರಣವೇ ಸಂಭವಿಸದೇ ಇದ್ದುದು ಇನ್ನೊಂದು ಕಾರಣ. ಮಸೀದಿಯ ಲೆಕ್ಕ ಪತ್ರ ತೆಗೆದು ನೋಡಿದಾಗ ರಫೀಕ್ ಇದ್ದಾಗಿನ ಒಂದು ತಿಂಗಳ ಮತ್ತು ಹೋದ ನಂತರದ ಎರಡು ತಿಂಗಳ ವಂತಿಗೆ ಬಾಕಿ ಇತ್ತು.

ಅಗೆದಿಟ್ಟ ಖಬರ್, ಕಣ್ಣು ಮುಚ್ಚಿ ನಿಶ್ಚಲವಾಗಿ ಮಲಗಿರುವ ಅದ್ರಾಮಾಕ, ಗಾಳಿಗೆ ಪಟ ಪಟ ಹಾರುತ್ತಿರುವ ಲೆಕ್ಕ ಪುಸ್ತಕ... ವಿಭ್ರಾಂತ ಜನ ಪರಿಹಾರಕ್ಕಾಗಿ ಅಬ್ಬೋನು ಹಾಜಿಯತ್ತ ನೋಡುತ್ತಿದ್ದರು. ಕುಳಿತಲ್ಲಿಂದ ಎದ್ದ ಅವರು ಸುಮ್ಮನೆ ಹೋಗಿ ಲೆಕ್ಕ ಪುಸ್ತಕ ಹರಿದು ಹಾಕಿ ದಿಗಂತದತ್ತ ಎರಡೂ ಕೈ ಎತ್ತಿ ‘ಯಾ ಅಲ್ಲಾಹ್, ಅದ್ರಾಮನ ಎಲ್ಲಾ ಪಾಪಗಳನ್ನು ಮನ್ನಿಸು’ ಎಂದು ನಡುಗುವ ಧ್ವನಿಯಲ್ಲಿ ಪ್ರಾರ್ಥಿಸಿ ಮನೆಯತ್ತ ಹೆಜ್ಜೆ ಬೆಳೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.