ತಾನೇ ಬರೆದ ಕಾಗದವನ್ನು ಎರಡನೆ ಬಾರಿ ಓದಿದ ವಿಷ್ಣು ಭಟ್ಟ. ಸರಿಯಾಗಿಯೆ ಇದೆ ಎನ್ನುವುದು ಮನದಟ್ಟಾದರೂ ತನ್ನಿಂದಾಗಿ ಯಾರಿಗೂ ತೊಂದರೆಯಾಗುವುದು ಅವನಿಗೆ ಇಷ್ಟವಿಲ್ಲ. ಹಾಗಾಗಿ ಅದನ್ನೆ ಮತ್ತೆ ಓದತೊಡಗಿದ.

ʻಪ್ರಿಯ ಬಂಧು,
ಈ ಕತೆಯಲ್ಲಿ ನೀನೂ ಒಂದು ಪಾತ್ರವಾದರೂ, ನೀನೇ ಅರಿಯದ ಎಷ್ಟೋ ಸಂಗತಿಗಳು ಇದರಲ್ಲಿ ಅಡಕವಾಗಿದೆ. ಹಾಗಾಗಿ ಇದನ್ನು ನಿನಗೆಂದೇ ಬರೆದಿದ್ದೇನೆ- ಓದುತ್ತೀಯಾ? ನಿನ್ನ ಅರಿವಿನಾಚೆಯ ಸತ್ಯ ತಿಳಿಯಬೇಕಿದ್ದರೆ ನೀನಿದನ್ನ ಓದಲೇಬೇಕು. ಶುರು ಮಾಡಲೆ?...

ನಾನು ಆದಿ ಇಬ್ಬರೂ ಒಡಹುಟ್ಟಿದವರು, ತಂದೆತಾಯಿಗಳಿಬ್ಬರನ್ನೂ ಎಳವೆಯಲ್ಲೆ ಕಳೆದುಕೊಂಡವರು ಎನ್ನುವುದು ನನ್ನ ಅರಿವಿಗೆ ಬರಲು ನನಗೆ ಸುಮಾರು ಐದು ವರ್ಷಗಳ ಪ್ರಾಯ ಆಗಬೇಕಾಯಿತೇನೋ. ಅಪ್ಪನ ಮುಖದ ನೆನಪಂತೂ ನನಗೆ ಸಲ್ಪವೂ ಇಲ್ಲ. ಅಮ್ಮನ ಆಕಾರ ಚೂರು ಚೂರು ನೆನಪಿಗೆ ಬರುತ್ತದೆ. ಅಮ್ಮನ ಭದ್ರವಾದ ಆಲಿಂಗನ, ಆಗಾಗ ಸಿಗುವ ಸಿಹಿ, ಸಿಹಿ ಮುತ್ತುಗಳು, ನಂತರ ಈ ಆದಿಬಂದು ಆ ಪ್ರೀತಿಯಲ್ಲಿ ಪಾಲು ಪಡೆದಿದ್ದು ಎಲ್ಲ ಮಸುಕು ಮಸುಕಾದ ನೆನಪುಗಳು ಮಾತ್ರ, ನಂತರದ ಸಿಹಿ ನೆನಪೆಂದರೆ ಅಜ್ಜಿ, ಆದಿಯರದು ಮಾತ್ರ!

ನನ್ನ ಪಾಲಿಗೆ ಅಪ್ಪ,ಅಮ್ಮ, ಅಜ್ಜ, ಅಜ್ಜಿ ಎಲ್ಲವೂ ಅವಳೇ! ಎಷ್ಟರ ಮಟ್ಟಿಗೆ ಅವಳನ್ನು ನಾನು, ಆದಿ ಹಚ್ಚಿಕೊಂಡಿದ್ದೆವೆಂದರೆ ನಮಗೆ ಯಾವತ್ತೂ ಅಪ್ಪ ಅಮ್ಮ ಇರಬೇಕಾಗಿತ್ತು ಅನ್ನಿಸಲೇ ಇಲ್ಲ! ಏಕೆಂದರೆ ಅಮ್ಮನ ಮಡಿಲಿನ, ಒಡಲಿನ, ಬೆಚ್ಚನೆಯ ಸೆರಗಿನ ಪ್ರೀತಿಯೆಲ್ಲವನ್ನೂ ಅಜ್ಜಿ ತುಂಬಿಕೊಟ್ಟಿದ್ದಳು. ಇನ್ನು ಅಪ್ಪ ಎಂದರೆ –ದೊಡ್ಡಪ್ಪ ತಮ್ಮ ಮಕ್ಕಳಾದಿಯಾಗಿ ಎಲ್ಲ ಮಕ್ಕಳನ್ನೂ ಕೋಲಿನೊಂದಿಗೇ ಮಾತನಾಡಿಸುತ್ತಿದ್ದ ರೀತಿಯನ್ನ ನೋಡಿರುವ ನಮಗೆ –ಅಪ್ಪನ ಜಾಗ ಖಾಲಿಯಾಗಿರುವುದೇ ಒಳ್ಳೆಯದು ಎನಿಸಿತ್ತು. ದೊಡ್ಡಪ್ಪನ ಅನಾರೋಗ್ಯದ ಕಾರಣದಿಂದಲೋ ಏನೋ ಮನೆಯ ಹಣಕಾಸಿನಾದಿಯಾಗಿ ಸಂಪೂರ್ಣ ಯಜಮಾನಿಕೆ ಅಜ್ಜಿಯದೇ ಆಗಿತ್ತು. ಅದು ನಂಗೆ ಆದಿಗೆ ಇನ್ನೂ ಅನುಕೂಲವಾಗಿತ್ತು.

ದೊಡ್ಡಪ್ಪನ ಕಿರಿಮಗ ನನಗಿಂತ ಒಂದು ತಿಂಗಳು ದೊಡ್ಡವನಾದ ವಿವೇಕ. ಶುದ್ಧ ಅವಿವೇಕಿ. ದೊಡ್ಡಪ್ಪನ ನಾಲ್ಕು ಮಕ್ಕಳಲ್ಲಿ ಮೊದಲಿನ ಮೂರು ಹೆಣ್ಣುಮಕ್ಕಳು; ಕಿರಿಯವನಾದ ತಾನು ಗಂಡೆಂಬ ಜಂಭ. ನನ್ನದೇ ಕ್ಲಾಸಿನವ. ಆಟ ಪಾಠಗಳಲ್ಲಿ ಮುಂದಿರುವ ನನ್ನ ಕಂಡರೆ ಅವನಿಗೆ ಅಸೂಯೆ. ಸಾಲದ್ದಕ್ಕೆ ಶಿಕ್ಷಕರಿಂದ ‘ನಿನ್ನ ತಮ್ಮನ ನೋಡಿ ಕಲಿ’ ಎನ್ನುವ ಉಪದೇಶ ಬೇರೆ. ಹಾಗಾಗಿ ನನ್ನ ಮುಖ ಕಂಡರೆ ಅವನ ಮುಖ ಕೆಂಪೇರುತ್ತಿತ್ತು. ಆದರೆ ಪರೀಕ್ಷೆಯಲ್ಲಿ ಮಾತ್ರ ಯಾವಾಗಲೂ ನನಗಿಂತ ಹೆಚ್ಚಿನ ಅಂಕ ಗಳಿಸಿ ಶಿಕ್ಷಕರಿಂದ ಹೊಗಳಿಸಿಕೊಳ್ಳುತ್ತಿದ್ದ. ಮಾರ್ಕ್ಸ್ ಕಾರ್ಡಿಗೆ ಸಹಿ ಹಾಕಿಸಿಕೊಳ್ಳುವಾಗ ತನ್ನಪ್ಪನಿಂದ ನನಗೆ ಉಗಿಸುತ್ತಿದ್ದ. ಮನೆಯಲ್ಲಿ ನನ್ನ ಅರ್ಧದಷ್ಟೂ ಓದದ, ಹೋಂ ವರ್ಕ್ ಕೂಡ ಸರಿಯಾಗಿ ಮಾಡದ ಇವನು ಪರೀಕ್ಷೆಯಲ್ಲಿ ಹೇಗೆ ಹೆಚ್ಚಿನ ಅಂಕ ಗಳಿಸುತ್ತಾನೆ ಎನ್ನುವುದೇ ನನಗೆ ಬಿಡಿಸಲಾರದ ಒಗಟಾಗಿತ್ತು.

ಅಂದು ಆರನೇ ಕ್ಲಾಸಿನ ವಾರ್ಷಿಕ ಪರೀಕ್ಷೆ. ಗಣಿತವೋ, ವಿಜ್ಞಾನವೋ ಇರಬೇಕು. ನಾನು ಬರೆದು ಮುಗಿಸಿ ಅತ್ತಿತ್ತ ನೋಡುತ್ತಿರುವಾಗ ಥಟ್ಟನೆ ಕಣ್ಣಿಗೆ ಬಿತ್ತು! ವಿವೇಕ ಉತ್ತರ ಪತ್ರಿಕೆಯ ಕೆಳಗೆ ಇಣುಕಿ, ಇಣುಕಿ ನೋಡಿ ಉತ್ತರ ಬರೆಯುತ್ತಿದ್ದ. ನಾನು ಮತ್ತೂ ಗಮನಿಸಿ ನೋಡಿದಾಗ ಅಡಿಯಲ್ಲೊಂದು ಕಾಗದದ ಚೂರು ಕಣ್ಣಿಗೆ ಬಿದ್ದಿತ್ತು. ಅದನ್ನು ಶಿಕ್ಷಕರ ಗಮನಕ್ಕೆ ತಂದು ಅವರು ಅವನನ್ನು ಹಿಡಿದು ಚೆನ್ನಾಗಿ ಬೈದು ಮನೆಗೆ ಕಳುಹಿಸಿದ್ದರು. ನಾನು ಮನೆಗೆ ಬಂದು ಅಜ್ಜಿಯಲ್ಲಿ ನನ್ನ ಪತ್ತೇದಾರಿಕೆಯ ಪ್ರತಾಪವನ್ನು ಕೊಚ್ಚಿಕೊಳ್ಳುವ ಲಹರಿಯಲ್ಲಿದ್ದರೆ ಬಾಗಿಲಲ್ಲೇ ದೊಡ್ಡಪ್ಪನ ಛಡಿ ಏಟು ನನ್ನನ್ನು ಎದುರುಗೊಂಡಿತ್ತು. ದೊಡ್ಡಪ್ಪನ ಕಣ್ಣು ಬೆಂಕಿಯುಂಡೆ ಕಾರುತ್ತಿದ್ದರೆ, ಬಾಯಿ ಕಾರ್ಕೋಟಕ ವಿಷವನ್ನು ಕಕ್ಕುತ್ತಿತ್ತು. “ಅಬ್ಬೇಪಾರಿಗಳು ಪಾಪ ಅಂತ ಆಶ್ರಯ ಕೊಟ್ಟಿದ್ದು ಹಾವಿಗೆ ಹಾಲೆರೆದ ಹಾಗಾಯ್ತು. ಅಂವ ಎಂತಾ ಮಾಡಿದ್ರೆ ನಿಂಗೆಂತಾ ಆಗ್ತು? ಅಧಿಕ ಪ್ರಸಂಗಿ. ಬಿಟ್ಟಿ ಕೂಳ್ ತಿಂದು ಕೊಬ್ಬು ಹೆಚ್ಚಾತು ನಿಂಗೆ…..” ಹೀಗೆ ಸಹಸ್ರನಾಮದೊಂದಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಿದ್ದವನು ಅಜ್ಜಿ ಬಂದು ಛಡಿಯನ್ನು ಕಸಿದಾಗಲೇ ಸುಸ್ತಾಗಿ ಕುಳಿತಿದ್ದು.

ಮೈತುಂಬ ಎದ್ದ ಬಾಸುಂಡೆಗೆ ಕಣ್ಣೀರು ಸುರಿಸುತ್ತಾ ಎಣ್ಣೆ ಸವರಿದ ಅಜ್ಜಿ ಪಿಸುನುಡಿಯಲ್ಲಿ ಉಪದೇಶಿಸಿದ್ದಳು. “ಆ ಅವಿವೇಕಿ ಎಂತಾ ಬೇಕಾರು ಮಾಡ್ಕ್ಯಂಡು ಸಾಯ್ಲಿ, ನೀಮಾತ್ರ ಅವ್ನ ಸುದ್ದಿಗೆ ಹೋಗಡ, ನೀನು ಅವ್ನಪ್ಪನ ಕೈಲಿ ಈ ರೀತಿ ಹೊಡೆತಾ ತಿಂಬದ ನನ್ನ ಕೈಲಿ ನೋಡ್ಲಿಕ್ಕೆ ಆಗಲ್ಲ. ಅಷ್ಟಕ್ಕೂ ನಿಂಗ ತಿಂಬದು ಬಿಟ್ಟಿ ಕೂಳಲ್ಲ, ನಿಂಗ ಅಬ್ಬೆಪಾರಿಗಳೂ ಅಲ್ಲ. ಅವ್ರು ತಿಂತಿರೋದೆ ನಿಮ್ಮಪ್ಪನ ಅನ್ನವನ್ನ. ತನ್ನ ಪಾಲಿಗೆ ಬಂದ ಜಮೀನೆಲ್ಲ ಹಾಳು ಮಾಡ್ಕೊಂಡು ನಿನ್ನಪ್ಪ ಮಾಡಿಟ್ಟ ಜಮೀನಿನಲ್ಲಿಯ ಉತ್ಪನ್ನದಲ್ಲಿ ತನ್ನ ಸಂಸಾರ ನೆಡಸ್ತಾ ಇದ್ದ. ನೀನೊಬ್ಬ ಬೇಗ ದೊಡ್ಡಾಗಿ ಜಮೀನು ಗೈಯ್ಯಿಸ ಹಾಗೆ ಆದ್ರೆ ನಿನ್ನ ತಮ್ಮನ್ನ ನಿನ್ನ ಕೈಯ್ಯಲ್ಲಿ ಹಾಕಿ ನಾನು ನೆಮ್ಮದಿಂದ ಕಣ್ಮುಚ್ತೇನೆ’’ ಅಂದಿದ್ದಳು. ನನಗೂ ಹಾಗೇ ಅನ್ನಿಸಿತ್ತು. ಆ ಊರಲ್ಲಿ ಹೈಸ್ಕೂಲಿಲ್ಲ. ಹಾಗಾಗಿ ಪ್ರೈಮರಿ ಸ್ಕೂಲ್ ಮುಗೀತು ಅಂದ್ರೆ ಶಾಲಾ ಜೀವನ ಮುಗಿದ ಹಾಗೆ. ಮುಂದೆ ನಾನೂ ಒಬ್ಬ ಕೃಷಿಕ ಆಗಬಹುದು. ತಮ್ಮ ಪಾಲನ್ನು ತಗೊಂಡು ಅಜ್ಜಿನ, ಆದೀನ ಕರೆದುಕೊಂಡು ಹೋಗಿ ಬೇರೆ ಮನೆ ಮಾಡಿ ಸಂಸಾರ ಹೂಡಬೇಕು ಎನ್ನುವ ಆಲೋಚನೆ ಪ್ರಥಮ ಬಾರಿಗೆ ಬಂದಿತ್ತು. ಆದರೆ ಆ ಅವಿವೇಕನ ದ್ವೇಷದ ಕಿಡಿ ನನ್ನ ಕನಸನ್ನೆಲ್ಲ ಸುಟ್ಟು ಭಸ್ಮ ಮಾಡಿತು.

ಒಂದಿನ ಏಳನೇ ಕ್ಲಾಸ್ ರೂಮಿನಲ್ಲಿ ಪಾಠ ಕೇಳುತ್ತಾ ಕುಳಿತಿದ್ದೆ. ಹೆಡ್ಮಾಸ್ಟರ್ ರೂಮಿನಿಂದ ಕರೆ ಬಂತು. ವಿವೇಕನ ನಕಲು ಹೊಡೆಯುವುದು ಬಯಲಾದ ನಂತರದ ಎಲ್ಲಾ ಪರೀಕ್ಷೆಗಳಲ್ಲೂ ಫಸ್ಟ್ ಬರುತ್ತಿದ್ದ ನನ್ನನ್ನ ಹೊಗಳಲು ಕರೆಯುತ್ತಿರಬಹುದು ಎನ್ನುವ ಹಮ್ಮಿನಿಂದ ಓಡಿದ ನನಗೆ ಆಫೀಸ್ ರೂಮಿನಲ್ಲಿ ನಮ್ಮದೇ ಕ್ಲಾಸಿನ ಚೆಂದುಳ್ಳಿ ಚಲುವೆ ಪಾವರ್ತಿಯನ್ನು ಅವಳ ಅಪ್ಪನೊಂದಿಗೆ ನೋಡಿ ಆಶ್ಚರ್ಯವಾಯಿತು. ಪಾವರ್ತಿಯ ಕಣ್ಣು ನೀರುತುಂಬಿ ಕೆಂಪಾಗಿದ್ದರೆ ಅವಳಪ್ಪನ ಕಣ್ಣು ಕೋಪದಿಂದ ಕೆಂಡ ಕಾರುತ್ತಿತ್ತು. ಇದೇನಪ್ಪ ಅಂದುಕೊಳ್ಳುತ್ತಾ ಹೆಡ್ ಮಾಸ್ಟರ ಕಡೆ ನೋಡಿದೆ. “ ಅಲ್ವೋ, ಅಪ್ಪ ಅಮ್ಮ ಇಲ್ಲದ ಅನಾಥ, ಇಡೀ ಶಾಲೆಗೆ ಆದರ್ಶ ವಿದ್ಯಾರ್ಥಿ ಅಂತ ನಾನು ಎಲ್ಲರ ಹತ್ರಾನು ಹೊಗಳ್ತಾ ಇದ್ದೆ. ನೀನು ಹೀಗೆ ಮಾನಗೆಟ್ಟ ಕೆಲ್ಸಮಾಡಿ ನನ್ನ ನಂಬಿಕೇನೆ ಬುಡಮೇಲುಮಾಡಿ ಬಿಟ್ಯಲ್ಲೋ” ಕೈಯ್ಯಲ್ಲೊಂದು ಏನೋ ಬರೆದಿರುವ ನೋಟ್ ಬುಕ್ಕಿನ ಹಾಳೆ ಹಿಡಿದು ನನ್ನೆಡೆಗೆ ಉರಿಗಣ್ಣಿನ ನೋಟ ಬೀರುತ್ತಾ ಗುಡುಗಿದರು.

ನಾನು ಏನೊಂದೂ ಬಗೆಹರಿಯದೆ ಹೆದರುತ್ತಲೇ “ಯಾಕೆ ಗುರೂಜಿ, ಏನಾಯ್ತು”? ಕೇಳಿದೆ.

“ನೋಡು ಮಾಡೋದೆಲ್ಲಾ ಮಾಡಿ ಈಗ ಏನೂ ಅರಿಯದ ಮಳ್ಳನ್ಹಾಂಗೆ ಕೇಳೋದ”? ಹಂಗಿಸಿದ ಪಾವರ್ತಿಯ ಅಪ್ಪ.
“ನೋಡು ಈ ಪಾರ್ವತಿಗೆ ನೀನು ಪ್ರೇಮ ಪತ್ರ ಬರೆದಿದ್ದೀಯಾ. ಅದಕ್ಕೆ ಅವಳ ಅಪ್ಪ ನನ್ನ ಹತ್ತಿರ ಪುಕಾರು ತಂದಿದ್ದಾರೆ. ಇನ್ನೂ ಮೀಸೆ ಮೂಡಿಲ್ಲ, ಆಗಲೇ ನಿನಗೆ ಪ್ರೀತಿ, ಪ್ರೇಮದ ಗೀಳು ಹತ್ತಿದೆ. ಇನ್ನು ನೀನು ಉದ್ದಾರ ಆಗ್ತೀಯಾ? ನೀನು ಹಾಳಾಗ್ ಹೋಗು. ಆದ್ರೆ ಆ ಮರ್ಯಾದಸ್ಥ ಹುಡುಗಿಯ ಮಾನ ಕಳಿತಾ ಇದೀಯಲ್ಲ ಅದ್ಕೇನು ಮಾಡೋಣ?” ಮಾಸ್ಟರ್ ಮತ್ತೆ ಪ್ರಶ್ನಿಸಿದರು.

‘‘ಏನ್ ಮಾಡೋದು ಅಂದರೆ, ಅವನನ್ನ ಈ ಶಾಲೆಯಿಂದ ಹೊರಗೆ ಹಾಕಬೇಕು” ಹೂಂಕರಿಸಿದರು ಪಾವರ್ತಿಯ ಅಪ್ಪ.

ನಾನು “ಇಲ್ಲಪ್ಪಾ ಇಲ್ಲ, ನಾನು ಅಂತಾ ಕೆಲ್ಸ ಮಾಡಿಲ್ಲ” ಗಾಬರಿಯಿಂದ ನುಡಿದೆ.

“ನೀನಲ್ದೆ ನಿನ್ನ ಅಪ್ಪನಾ ಮಾಡಿದ್ದು? ಮಾಡಬಾರದ್ದು ಮಾಡಿ ಈಗ ಜಾರಿಕೊಳ್ಳೋ ಉಪಾಯ ಮಾಡ್ತ್ಯ” ಉರಿ ಕಾರಿದರು ಶೆಟ್ರು

“ಶೆಟ್ರೆ, ಸಲ್ಪ ಸಮಾಧಾನ ಮಾಡ್ಕ್ಯಳಿ ನಾನೆಲ್ಲಾ ವಿಚಾರಿಸ್ತೆ. ಇನ್ನು ಹುಡಗಾಟ್ಕೆ ಬುದ್ಧಿ, ತಿದ್ದಿ ಹೇಳಿದರೆ ತಿದ್ಕೋತಾನೆ” ಹೆಡ್ ಮಾಸ್ಟ್ರು ಸಮಾಧಾನ ಮಾಡಲು ಯತ್ನಿಸಿದರು.

ಹೆಡ್ ಮಾಸ್ಟರ್ ಅಷ್ಟು ಹೇಳಿದ್ದೆ ಶೆಟ್ರು ಸಿಟ್ಟು ಬಂದು ದೂರ್ವಾಸರೆ ಆಗಿಬಿಟ್ರು. “ಅದೆಲ್ಲಾ ಆಗೋದಲ್ಲ ಮಾಸ್ತರೆ, ಅವನನ್ನ ಶಾಲೆಯಿಂದ ಹೊರಹಾಕಬೇಕು, ಇಲ್ಲ ನನ್ನ ಮಗಳನ್ನ ಶಾಲೆ ಬಿಡಸ್ತೀನಿ. ಇಷ್ಟು ಮುಂದುವರೆದವನು ನಾಳೆ ನನ್ನ ಮಗಳು ಮರ್ಯಾದೆಯಿಂದ ಬದುಕಲು ಬಿಡ್ತಾನೆ ಅನ್ನೋ ಗ್ಯಾರೆಂಟಿ ಏನು?” ಅವರ ಅಷ್ಟು ಕೂಗಾಟದ ಮಧ್ಯವೇ ಹೆಡ್ ಮಾಸ್ಟರು ಆ ಕಾಗದವನ್ನು ನನ್ನ ಮುಂದೆ ಹಿಡಿದು ನೋಡು ಅಕ್ಷರವೂ ನಿನ್ನ ಕೈ ಬರಹದ ಹಾಗೇ ಇದೆ. ಕೆಳಗಡೆ ನಿನ್ನ ಹೆಸರನ್ನೂ ಬರೆದಿದ್ದೀಯಾ. ಈಗ ನಾನಲ್ಲ ಅಂದ್ರೆ ಯಾರು ನಂಬ್ತಾರೆ? ಯಾಕೆ ಹೀಂಗೆ ಮಾಡ್ದೆ?” ಅವರಿಗಾದ ಬೇಜಾರು ಅವರ ಮಾತಿನಲ್ಲಿ ಪ್ರತಿಧ್ವನಿಸುತ್ತಿತ್ತು.

“ನಿಜವಾಗಲೂ ನಾನು ಬರೆದಿಲ್ಲ ಗುರೂಜಿ, ಬೇಕಾದರೆ ಧರ್ಮಸ್ಥಳ ದೇವರ ಮೇಲೆ ಆಣೆ ಮಾಡಿ ಹೇಳತೇನೆ” ನಾನು ಕೈ ಮುಗಿದು ಹೇಳಿದೆ. ಅವರಿಗೂ ಸ್ವಲ್ಪ ನಂಬಿಕೆ ಬಂದಿರಬೇಕು. ಶೆಟ್ಟರ ಕಡೆ ತಿರುಗಿ “ಇದು ಹೀಗೆ ನಿಂತ ಕಾಲಲ್ಲಿ ನಿರ್ಣಯಿಸುವ ವಿಷಯವಲ್ಲ, ಅವನ ಪಾಲಕರನ್ನೂ ಕರೆಸೋಣ, ನೀವೂ ನಾಳೆ ಬನ್ನಿ. ಮತ್ತೆ ಈ ವಿಷಯವನ್ನು ಯಾರಲ್ಲೂ ಬಾಯಿ ಬಿಡಬೇಡಿ, ಯಾಕೆಂದರೆ ಇದು ನಿಮ್ಮ ಮಗಳ ಮರ್ಯಾದೆಯ ಪ್ರಶ್ನೆಯೂ ಹೌದು. ನಾಳೆ ನಾಲ್ಕು ಜನರ ನಾಲಿಗೆ ನಾಲ್ಕುತರ ಹೊರಳಬಾರದು ನೋಡಿ” ಎಂದು ನಮ್ಮನ್ನು ಹೊರಗೆ ಕಳಿಸಿದರು.

ಶಾಲೆ ಬಿಟ್ಟು ಮನೆ ದಾರಿ ಹಿಡಿದಾಗ ಯಾವಾಗಲೂ ನಮ್ಮೊಂದಿಗೆ ಸೇರದ ವಿವೇಕ ಇವತ್ತು ನಮ್ಮೊಂದಿಗೆ ಸೇರಿಕೊಂಡ. ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾಯ್ತರೆದ ವಿವೇಕ “ವಿಷ್ಣುಂಗೆ ಇವತ್ತು ಸರೀ ಮಂಗಳಾರತಿ ಆಯ್ತೇನೋ?” ಹಂಗಿಸುವ ಧಾಟಿಯಲ್ಲಿ ಕೇಳಿದ. ಯಾರಿಗೂ ವಿಷಯ ತಿಳಿಯಬಾರದೆಂದು ಆಫೀಸು ರೂಮಿನ ಬಾಗಿಲು ಹಾಕಿಕೊಂಡು ಸಿಟ್ಟಿನಲ್ಲೂ ಧ್ವನಿ ಎತ್ತರಿಸದೇ ವಿಚಾರಣೆ ಮುಗಿಸಿದರೂ ಇವನಿಗೆ ಹೇಗೆ ವಿಷಯ ಗೊತ್ತಾಯಿತೆಂದು ನನಗೆ ಆಶ್ಚರ್ಯವಾಯಿತು. “ಮಂಗಳಾರತಿ ಯಾಕಾಗತ್ತೆ? ಚೆನ್ನಾಗಿ ಓದುತ್ತಿದ್ದೀಯಾ ಅಂತ ಹೊಗಳಿದರು” ಅಂದೆ.

“ಹೂಂ, ಹೊಗಳ್ತಾರೆ, ಬಾಯಿಗೆ ಬಂದ್ಹಾಗೆ ಉಗಿದ್ರು ಅನ್ನು, ನನ್ನನ್ನ ಪರೀಕ್ಷೆಯಲ್ಲಿ ಹಿಡ್ಕೊಟ್ಯಲ್ಲ, ನಿನ್ನನ್ನ ಸುಮ್ನೆ ಬಿಡ್ತೀನಿ ಅದ್ಕೊಂಡ್ಯ, ಮನೆಗೆ ಬಾ ನಿಂಗೆ ಮಾಡಸ್ತೀನಿ. ಅಪ್ಪಂಗೆ ಹೇಳಿ ಇವತ್ತು ನಿನ್ನ ಕಾಲು ಮುರಿಸಿ ಕೈಗೆ ಕೊಡ್ಸಿಲ್ಲಾ ಅಂದ್ರೆ ನಾನು ಅಪ್ಪನಿಗೆ ಹುಟ್ಟಿದವ್ನೇ ಅಲ್ಲ” ಅಂತ ಧಮ್ಕಿ ಹಾಕಿದ. ಆಗ ನನಗೆ ಗೊತಾಯ್ತು ಎಲ್ಲಾ ಇವಂದೇ ಕಿತಾಪತಿ ಅಂತ! ಇಂಥ ಬುದ್ಧಿವಂತಿಕೆಯನ್ನೆಲ್ಲ ಒಳ್ಳೆಯದಕ್ಕೆ ಉಪಯೋಗಿಸಿದ್ದರೆ…. ಅನ್ನಿಸಿತು. ಜೊತೆ ಜೊತೆಗೆ ಇನ್ನು ಮನೆಗೆ ಹೋಗಿ ಅಲ್ಲಿ ಅನುಭವಿಸುವ ದೊಡ್ಡಪ್ಪನ ಛಡಿಯೇಟಿನ ನೋವು, ಅಜ್ಜಿಯ ಪ್ರಲಾಪ, ಆದಿಯ ತುಂಬಿದ ಕಂಗಳ ಭಯದ ನೋಟ ಎಲ್ಲವನ್ನು ಎದುರಿಸುವುದು ಹೇಗೆ? ಅಲ್ಲದೆ ನಾಳೆ ನನ್ನನ್ನ ಶಾಲೆಯಿಂದಲೇ ಹೊರಹಾಕಿದರೆ ಆಗುವ ಅವಮಾನ, ವಿಷಯ ತಿಳಿದ ಊರವರೆಲ್ಲರ ಪ್ರತಿಕ್ರಿಯೆ ಎಲ್ಲ ವಿಚಾರಗಳು ಒಮ್ಮೆಲೆ ಕಟ್ಟಿರುವೆ ಎರೆಹುಳಕ್ಕೆ ಮುತ್ತುವಂತೆಯೇ ನನ್ನನ್ನು ಮುತ್ತಿ ಕಚ್ಚತೊಡಗಿದಾಗ ನಾನು ಭಯದಿಂದ ನಡುಗಿಹೋದೆ.ʼ

ಸತ್ಯವನ್ನು ಬಿಚ್ಚಿಟ್ಟೆ ಹೋಗಬೇಕು ಎನ್ನುವ ಧೃಡ ನಿರ್ಧಾರ ಮಾಡಿದ್ದ ವಿಷ್ಣು ಭಟ್ಟನಿಗೆ ಈ ಕ್ಷಣದಲ್ಲೂ ಕಾಲಿನಮೇಲೆ ಛಡಿಏಟು ಬೀಳುತ್ತಿರುವ ಅನುಭವವಾಗಿ ಹಾಯ್ ಎಂದು ಕೈಯಿಂದ ಕಾಲನ್ನು ಸವರಿದ. ಕೈಗೆ ಏನೋ ಸಿಲುಕಿದಂತಾಗಿ ವಾಸ್ತವಕ್ಕೆ ಬಂದು ಕಾಲಿನ ಕಡೆಗೆ ನೋಡಿದಾಗ ಎಂತಾ ಕಾಕತಾಳೀಯ ಎನ್ನಿಸಿತು! ತುಂಬಾ ಹೊತ್ತು ಒಂದೇ ಕಡೆ ಕುಳಿತಿದ್ದರಿಂದ ವಾಸನೆಯನ್ನು ಹಿಡಿದ ಕಟ್ಟಿರುವೆಗಳು ಅವನ ಕಾಲಿಗೆ ಬಂದು ಮುತ್ತಿದ್ದವು. ತಥ್ ಎನ್ನುತ್ತಾ ಎದ್ದು ಬೇರೆ ಜಾಗದಲ್ಲಿ ಕುಳಿತು ಓದನ್ನು ಮುಂದುವರೆಸಿದ.

ಮನೆಯ ಹತ್ತಿರ ಬರುತ್ತಿದ್ದಂತೆ ಫರ್ಲಾಂಗು ದೂರದಿಂದಲೆ ದೊಡ್ಡಪ್ಪನ ಗುಡುಗು ಕೇಳಿಸುತ್ತಿತ್ತು! ಒಮ್ಮೆಲೆ ನನ್ನನ್ನ ತಬ್ಬಿ ಹಿಡಿದ ಆದಿ “ಅಣ್ಣಾ, ನೀನು ಈಗಲೆ ಮನೆಗೆ ಬರಬೇಡ, ಬಂದರೆ ದೊಡ್ಡಪ್ಪ ನಿನಗೆ ತುಂಬಾ ಹೊಡಿತಾರೆ, ನಿಂಗೆ ನೋವಾದರೆ ನಂಗೆ ಅಳುಬರತ್ತೆ. ನೀನು ಈಗ ಇಲ್ಲೇ ಎಲ್ಲಾದರೂ ಅಡಗಿರು ರಾತ್ರಿಯಾದ ಮೇಲೆ ಬಾ. ನಾನು ಅಜ್ಜಿಗೆ ಬಾಗಿಲು ತೆರೆಯಲು ಹೇಳ್ತೇನೆ. ಬೇಗ ಹೋಗಣ್ಣ” ಎನ್ನುತ್ತ ತನ್ನ ಅಪ್ಪುಗೆಯನ್ನ ಸಡಲಿಸಿ ಜೋರಾಗಿ ನನ್ನ ತಳ್ಳತೊಡಗಿದ. ಅಡಗಿರು ಎನ್ನುವ ಶಬ್ಧ ಕೇಳುತ್ತಿದ್ದಂತೆ ನನಗೆ ಮುಂದಿನ ದಾರಿ ಗೋಚರಿಸಿತು. ಅಲ್ಲೇ ಕುಳಿತು ಒಂದು ಹಾಳೆಯ ಮೇಲೆ ಗೀಚಿದೆ.

“ಅಜ್ಜಿ, ನನ್ನಾಣೆ, ನಿನ್ನಾಣೆ, ದೇವರಾಣೆಯಾಗಿಯೂ ನಾನು ಯಾವ ತಪ್ಪನ್ನೂ ಮಾಡಿಲ್ಲ, ಆ ಚೀಟಿ ಬರೆದವನು ನಾನಲ್ಲ. ಅದನ್ನ ನೀನು ಮತ್ತು ಆದಿ ನಂಬಿದರೆ ಸಾಕು. ನಾನು ಎಲ್ಲಿದ್ದರೂ ನೀತಿಯಿಂದ ಬದುಕುತ್ತೇನೆ. ಅದೃಷ್ಟ ಇದ್ದರೆ ನಿಮ್ಮನ್ನ ಮತ್ತೆ ನೋಡ್ತೀನಿ. ನೀವು ನನ್ನನ್ನ ನಂಬ್ತೀರಲ್ಲ ಅಜ್ಜಿ? ನಮಸ್ಕಾರಗಳು, ಕ್ಷಮಿಸು ಆದಿ” ಇಷ್ಟನ್ನ ಬರೆದು ಆ ಚೀಟಿಯನ್ನ ಆದಿಯ ಕೈಯ್ಯಲ್ಲಿತ್ತು ಅಜ್ಜಿಗೆ ಕೊಡಲು ಹೇಳಿ ಮತ್ತೊಮ್ಮ ಅವನ ಮೈದಡವಿ ಬೀಳ್ಕೊಟ್ಟೆ. ರಾತ್ರಿಯಾಗ್ತಿದ್ಹಾಗೆ ಬರಬೇಕು ಮತ್ತೆ ಎನ್ನುತ್ತ ಮನೆಯತ್ತ ಹೊರಟ ಆದಿಗೆ ಕೈ ಬೀಸಿ ತುಟಿಕಚ್ಚಿ ಮನೆಯತ್ತ ಬೆನ್ನುಹಾಕಿದೆ.

ಆವತ್ತು ಹೊರಟಾಗ ನನ್ನ ಬಳಿ ಇದ್ದದ್ದು ಬಗಲಲ್ಲಿ ನೇತಾಡುತ್ತಿದ್ದ ಪಾಟೀಚೀಲ, ಶಾಲೆಯ ವಾರ್ಷಿಕ ಫೀಗೆಂದು ಅಜ್ಜಿ ಕೊಟ್ಟ ಇಪ್ಪತ್ತು ರೂಪಾಯಿಗಳು. ನನ್ನ ಅದೃಷ್ಟಕ್ಕೆ ಒಂದು ಪೈಸೆ ಖರ್ಚಿಲ್ಲದೆ ಒಬ್ಬ ಲಾರಿ ಡ್ರೈವರ್ -ನನ್ನ ಕತೆ ಕೇಳುತ್ತಾ ನನ್ನನ್ನು ಚೆನ್ನೈಗೆ ಕರೆತಂದು ಒಂದು ಹೋಟೆಲ್ನಲ್ಲಿ ಟೇಬಲ್ ಒರೆಸುವ ಕೆಲಸ ಕೊಡಿಸಿದ.

ಅಲ್ಲಿಂದ ಮುಂದೆ ಹೋಟೆಲ್ ಓನರ್ ಅಲ್ಲೇ ಸಪ್ಲೈಯರ್ ಆಗಿ ಪ್ರಮೋಶನ್ ಕೊಟ್ಟ. ನಂತರ ಹೊಟೆಲಿನ ಪಕ್ಕದಲ್ಲೇ ಒಂದು ಬೀಡಾ ಅಂಗಡಿ ಹಾಕಿಕೊಳ್ಳಲು ಫ್ರೀಯಾಗಿ ಜಾಗ ಕೊಟ್ಟ. ಅಲ್ಲಿಗೆ ಬದುಕಿಗೊಂದು ಭದ್ರ ನೆಲೆಯಾಯಿತು. ಕ್ರಮೇಣ ನಾಲ್ಕಾರು ಸಮಾನಮನಸ್ಕರ ಗೆಳೆತನವಾಯಿತು. ಅವರಲ್ಲೇ ತುಂಬಾ ಆತ್ಮೀಯನಾದವನು ನಾಗೇಂದ್ರ. ನನ್ನ ಊರಿನ ಮೂಲದವನೇ. ಅಪ್ಪನ ಎರಡನೆಯ ಹೆಂಡತಿಯ ಉಪಟಳ ಸಹಿಸದೇ ಊರುಬಿಟ್ಟು ಬಂದಿರುವುದಾಗಿ ತಿಳಿಸಿದ್ದ. ನಾನೂ ನನ್ನ ಹಿನ್ನೆಲೆಯನ್ನೆಲ್ಲ ಅವನಿಗೆ ತಿಳಿಸಿದ್ದೆ. ಇಬ್ಬರೂ ಅನಿವಾರ್ಯತೆಯಿಲ್ಲದೇ ಬೇರೆ ಯಾರಿಗೂ ನಮ್ಮ ಅಸಲಿ ವಿಷಯವನ್ನು ತಿಳಿಸಬಾರದೆಂದು ಒಪ್ಪಂದ ಮಾಡಿಕೊಂಡೆವು.

ಹೀಗೆ ಕರೋನಾ ಬಂದು ತಿಂಗಳಾನುಗಟ್ಟಲೆ ಲಾಕ್ಡೌನ್ ಆಗುವವರೆಗೂ ಜೀವನ ಸರಾಗವಾಗಿ ಸಾಗುತ್ತಿತ್ತು. ನಾಗೇಂದ್ರ ಸುಮಾರು ಮೂವತ್ತು ವರ್ಷಗಳಾಗುವವರೆಗೂ ಮದುವೆಯಾಗಲು ಹೆಣ್ಣುಗಳನ್ನು ಹುಡುಕಿ ಸಿಗದಾದಾಗ ತಡೆಯಲಾಗದೆ ಹಣಕೊಟ್ಟು ದೇಹದ ದಾಹ ತೀರಿಸಿಕೊಳ್ಳತೊಡಗಿದ. ತಪ್ಪಲ್ವಾ ಕೇಳಿದರೆ “ಅದರಲ್ಲಿ ತಪ್ಪೇನಿದೆ? ನಾನೇನು ಯಾರನ್ನು ಬಲಾತ್ಕಾರ ಮಾಡುತ್ತಿಲ್ಲವಲ್ಲ. ಅವರ ಒಪ್ಪಿಗೆಯ ಮೇರೆಗೆ ಉಳಿದ ವಸ್ತುಗಳಂತೆ ಸುಖವನ್ನೂ ಕೊಂಡುಕೊಳ್ಳುತ್ತಿದ್ದೇನೆ. ನೀನೂ ಎಷ್ಟುದಿನಾ ಅಂತ ಆಸೆಗಳನ್ನೆಲ್ಲ ಕಟ್ಟಿಟ್ಟು ಬದುಕುತ್ತೀಯಾ? ನನ್ನೊಂದಿಗೆ ಒಮ್ಮೆ ಬಂದು ಅನುಭವಿಸಿ ನೋಡು, ಒಂದು ರೀತಿಯಲ್ಲಿ ಯಾವುದೇ ಬಂಧನವಿಲ್ಲದ ಸುಲಭದ ವ್ಯವಹಾರ. ಕೆಲಸ ಮುಗಿದ ಮೇಲೆ ನಾವ್ಯಾರೋ ಅವರ್ಯಾರೋ. ಬೇಕೆನಿಸಿದಾಗೆಲ್ಲ ಹೊಸ ಹೊಸ ದೇಹಗಳು, ಹೊಸ ಹೊಸ ಅನುಭವಗಳು, ಒಮ್ಮೆ ರುಚಿ ಕಂಡರೆ ಮತ್ತೆ ಬಿಡುವುದಿಲ್ಲ” ಎಂದು ಒತ್ತಾಯಿಸುತ್ತಿದ್ದ. ನನಗೂ ಒಮ್ಮೆ ರುಚಿನೋಡುವ ಆಸೆಯಾದರೂ ತಕ್ಷಣ ಅಜ್ಜಿ, ಆದಿಯರ ನೆನಪಾಗಿ ಅಂತಹ ಕೀಳುಮಟ್ಟದ ಸುಖವನ್ನು ಅನುಭವಿಸುವುದಕ್ಕಿಂತ ಅಜ್ಜಿಗೆ ಕೊನೆಯದಾಗಿ ಬರೆದ ಮಾತನ್ನು ಉಳಿಸಿಕೊಳ್ಳುವುದರಲ್ಲೇ ಸುಖವಿದೆ ಎನ್ನಿಸಿ ಆ ವಿಷಯಾಸಕ್ತಿಯೇ ಮನದಲ್ಲಿ ಮೂಡದಂತೆ ಎಚ್ಚರಿಕೆ ವಹಿಸತೊಡಗಿದೆ. ಗಳಿಕೆ ಕಡಿಮೆಯಾದರೂ ಏಕಾಂಗಿಯಾಗಿರುವುದರಿಂದ ಹಣಕಾಸಿನ ತೊಂದರೆಯೇನೂ ಇರಲಿಲ್ಲ. ಗೆಳೆಯರ ಹಣಕಾಸಿನ ತೊಂದರೆಗೆ ನಾನೇ ಆಧಾರವಾಗಿದ್ದೆ. ಆದರೆ ಅನವಶ್ಯಕ ಯಾರ ಮನೆಗೂ ಹೋಗುವ ಪರಿಪಾಠ ಇಟ್ಟುಕೊಂಡಿರಲಿಲ್ಲ, ಹಾಗಾಗಿ ಬೇಸರ ಕಳೆಯಲು ಸಿನೆಮಾ, ನಾಟಕ, ಭರತನಾಟ್ಯಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಯಾವಾಗಲಾದರೂ ಕರ್ನಾಟಕದಿಂದ ಯಕ್ಷಗಾನದ ತಂಡದವರು ಬಂದು ನಡೆಸಿಕೊಡುವ ಆಟಕ್ಕೆ ತಪ್ಪದೇ ಹೋಗುತ್ತಿದ್ದೆ. ಅದಕ್ಕೆಲ್ಲ ಸುಮಾರು ಹಣ ಖರ್ಚಾದರೂ ಅಲ್ಪ, ಸ್ವಲ್ಪ ಉಳಿಯುತ್ತಿತ್ತು. ಸಾಕು, ಹೆಚ್ಚುಗಳಿಸಿ ಏನಾಗಬೇಕಾಗಿದೆ ಅನ್ನೋ ಉದಾಸೀನಭಾವ.

ಈಗ ಈ ಲಾಕ್ಡೌನ್ ಸಮಯದಲ್ಲಿ ಉಳಿತಾಯದ ಕೊರತೆ ಕಾಣತೊಡಗಿತು. ಅಂಗಡಿಯಲ್ಲಿ ವ್ಯಾಪಾರವಿರಲಿ, ಅಂಗಡಿಯ ಬಾಗಿಲನ್ನೇ ತೆಗೆಯಲು ಅವಕಾಶವಿರಲಿಲ್ಲವಲ್ಲ! ಹಾಲು, ಅಡಿಗೆಮನೆ, ಬೆಡ್ ರೂಂ ಎಲ್ಲವೂ ತಾನೇ ಆಗಿರುವ ನಾಲ್ಕು ಗೋಡೆಗಳಿರುವ ಒಂದೇ ಕೋಣೆಯ ಮನೆಯಲ್ಲಿ ಇಡೀ ದಿನ ಏಕಾಂಗಿಯಾಗಿ ಕಳೆಯುವುದು ನರಕಯಾತನೆಯಾಗಿತ್ತು. ಜೀವನಾವಶ್ಯಕ ಸಾಮಗ್ರಿಗಳ ಬೆಲೆ ಗಗನಕ್ಕೇರತೊಡಗಿತು. ಕೂಡಿಟ್ಟ ಹಣ ಬಿಸಿಲಿಗಿಟ್ಟ ಬೆಣ್ಣೆಯಂತೆ ಕರಗ ತೊಡಗಿತು. ಅತಿಯಾದ ಬೇಸರ, ಅದರಿಂದಾಗಿ ಆಹಾರ ಸೇರದಿರುವಿಕೆ, ಆರ್ಥಿಕ ಮುಗ್ಗಟ್ಟಿನ ಭಯ ಈ ಎಲ್ಲ ಕಾರಣದಿಂದ ಅತಿಯಾದ ನಿಶ್ಶಕ್ತಿ ಕಾಡತೊಡಗಿ ಒಂದುದಿನ ಇದ್ದಕ್ಕಿದ್ದಂತೆ ಜೋರು ಜ್ವರ ಶುರುವಾಯಿತು. ಇನ್ನೇನು ತಡೆಯಲಿಕ್ಕೇ ಸಾಧ್ಯವಿಲ್ಲ ಎನಿಸಿದಾಗ ನಾಗೇಂದ್ರನಿಗೆ ಫೋನಾಯಿಸಿದೆ. ಅಷ್ಟುಮಾತ್ರ ನೆನಪು….

“ದೊಡ್ಡಪ್ಪಾ, ದೊಡ್ಡಪ್ಪಾ…” ಎಲ್ಲಿಂದಲೋ ಬಂದ ಇಂಪಾದ ಕರೆಯಿಂದಾಗಿ ಎಚ್ಚರಗೊಂಡು ಕಣ್ಣುತರೆದೆ. ನಾನು ಮಲಗಿದ್ದ ಮಂಚದ ಪಕ್ಕದಲ್ಲೇ ನಿಂತು ಸುಮಾರು ಹದಿನಾಲ್ಕು ಹದಿನೈದರ ಬಾಲೆ ನನ್ನನ್ನೇ ಪ್ರೀತಿಯಿಂದ ಕರೆಯುತ್ತಿದ್ದಳು. ಇಲ್ಲಿಯವರೆಗೆ ಯಾವತ್ತೂ ನೋಡದ ಮುಖ! ಯಾರಿವಳು? ಮನಸ್ಸು ಯೋಚಿಸುತ್ತಿದ್ದಂತೆ ಮತ್ತೆ ಕರೆದಳು. “ ದೊಡ್ಡಪ್ಪಾ, ನಾನು, ನಿನ್ನ ತಮ್ಮ ಆದಿಯ ಮಗಳು ರಚಿತಾ” ಸವಿಜೇನಿನ ಮಳೆಯೇ ಸುರಿದಂತಿತ್ತು! ಆಂ! ಹಾಗಿದ್ದರೆ ನಾನೀಗ ಎಲ್ಲಿದ್ದೀನಿ? ನನ್ನ ಊರಲ್ಲಿದ್ದೀನಾ? ನಾನಿಲ್ಲಿಗೆ ಹೇಗೆ ಬಂದೆ? ದಂಗಾಗಿ ಯೋಚಿಸುತ್ತಿದ್ದಂತೆ ನಾಗೇಂದ್ರ ಮತ್ತೊಬ್ಬನ ಜೊತೆಯಲ್ಲಿ ನನ್ನೆದುರು ಬಂದ. ಹೆದರ ಬೇಡ, ನಿನ್ನನ್ನ ಎಲ್ಲಿಗೆ ಕರೆತರಬೇಕೋ ಅಲ್ಲಿಗೆ ತಂದು ಒಪ್ಪಿಸಿದ್ದೇನೆ. ಮುಂದಿನದನ್ನು ನೀವೇ ಮಾತಾಡಿಕೊಳ್ಳಿ ಎನ್ನುತ್ತಾ ಹಿಂದಕ್ಕೆ ಸರಿದ. ನಾಗೇಂದ್ರನ ಜೊತೆಗಿದ್ದವನು ಮುಂದೆ ಬಂದು ನನ್ನ ಮಂಚದ ಮೇಲೆಯೇ ಕುಳಿತು “ಸದ್ಯ ಈಗಲಾದರೂ ಸಿಕ್ಕಿದೆಯಲ್ಲ ಅಣ್ಣ. ಇಷ್ಟು ವರ್ಷಗಳ ಕಾಲದ ನನ್ನ ಪ್ರಯತ್ನ ಈಗ ಫಲಕೊಟ್ಟಿತು. ಕರೋನಾ ಯಾರಿಗೆ ಏನೇನು ತೊಂದರೆ ಕೊಟ್ಟಿತೋ ಏನೋ ನನಗಂತೂ ವರದಾನವಾಯಿತು! ತುಂಬಾ ಸುಸ್ತಾಗಿದ್ದೀಯಾ. ಸ್ವಲ್ಪ ಸುಧಾರಿಸಿಕೋ, ಆಸ್ಪತ್ರೆಯಿಂದ ಮನೆಗೆ ಹೋದಮೇಲೆ ಮಾತಾಡೋಣ” ಎಂದ.

ಕರೋನಾ ಮುಗಿದು ಈಗ ನಾಲ್ಕು ವರ್ಷಗಳೇ ಕಳೆದಿವೆ. ನಗುಮುಖದ ಅಜ್ಜಿ, ತಮ್ಮ ಆದಿ, ಅವನ ಹೆಂಡತಿ, ಇಬ್ಬರು ಮುದ್ದಾದ ಮಕ್ಕಳ ಪ್ರೀತಿ, ವಿಶ್ವಾಸ, ಕಳಕಳಿಯೊಂದಿಗೆ ನನ್ನದು ಸುಖೀ ಜೀವನ. ಆದಿಯಂತೆಯೆ ನಾನು ಕೂಡ ಕರೋನಾ ತಂದ ಭಾಗ್ಯಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೆ. ಯಾವ ಜನ್ಮದ ಫಲವೋ ದೇವರು ಆ ಸುಖವನ್ನೂ ನನ್ನಿಂದ ಇಷ್ಟು ಬೇಗ ಕಸಿದುಕೊಂಡನೋ ಗೊತ್ತಾಗುತ್ತಿಲ್ಲ.

ಮೊನ್ನೆ ರಾತ್ರಿ ಮಂಚದ ಮೇಲೆ ಮಲಗಿ ರಚಿತಾ ತರುವ ಹಾಲಿಗಾಗಿ ಕಾಯುತ್ತಿದ್ದೆ. ಆದರೆ ಆವತ್ತು ಆದಿಯೇ ಹಾಲು ಹಿಡಿದು ಬಂದಿದ್ದ. ಆಶ್ಚರ್ಯದಿಂದ ಅವನ ಮುಖ ನೋಡಿದೆ. ಅದು ದುಗುಡದಿಂದ ತುಂಬಿತ್ತು. “ಅರೇ ರಚಿತಾ ಎಲ್ಲಿ? ನೀನ್ಯಾಕೆ ತಂದೆ?” ಕೇಳಿದೆ ಹಾಲನ್ನು ತೆಗೆದು ಕೊಳ್ಳುತ್ತ. ಇನ್ನು ಮುಂದೆ ನಾನೇ ತಂದು ಕೊಡುವುದು ಎಂದ. “ಯಾಕೆ?” ಅಯಾಚಿತವಾಗಿ ಹೊರಟಿತ್ತು ಧ್ವನಿ. “ವಯಸ್ಸಿಗೆ ಬಂದ ಹುಡುಗಿಯಲ್ವಾ? ಈಗಿನ ಕಾಲದಲ್ಲಿ ಯಾರನ್ನೂ ನಂಬಲಿಕ್ಕಾಗೋದಿಲ್ಲ, ಅದಕ್ಕೆ” ಅಂದ ಕಟುವಾಗಿ. “ಅಂತಾದ್ದೇನಾಯಿತೀಗ?” ಆತಂಕದಿಂದ ಕೇಳಿದೆ. “ನಾಳೆ ದೇವಸ್ಥಾನದಲ್ಲಿ ಪಂಚಾಯತಿಗೆ ಕರೆದಿದ್ದಾರೆ ಬಾ, ಅಲ್ಲೇ ಗೊತ್ತಾಗುತ್ತೆ ಯಾಕೆ ಅಂತ” ಅಂದವನೇ ಸರ ಸರ ಮೆಟ್ಟಿಲಿಳಿದು ಹೊರಟುಹೋದ!

ರಾತ್ರಿಯೆಲ್ಲ ನಿದ್ದೆಯಿಲ್ಲ, ನನ್ನಿಂದೇನು ತಪ್ಪಾಗಿದೆ? ಎನ್ನುವ ಚಿಂತೆಯಲ್ಲಿಯೇ ಬೆಳಗಾಯಿತು. ಬೆಳಗಿಂದ ಯಾರದ್ದೂ ಮಾತಿಲ್ಲ ಕತೆಯಿಲ್ಲ! ಸಂಜೆ ಐದು ಗಂಟೆಗೆಲ್ಲ ಪಂಚಾಯತಿ ಶುರುವಾಗಿತ್ತು. ಪ್ರಮುಖ ಆರೋಪಿಯ ಸ್ಥಾನದಲ್ಲಿ ನಾನಿದ್ದೆ. ಸಂತ್ರಸ್ತೆಯ ಸ್ಥಾನದಲ್ಲಿ ಹುಚ್ಚಿ ಮೂಕಾಂಬೆಯಿದ್ದಳು. ಪ್ರಮುಖ ಸಾಕ್ಷಿಯಾಗಿ ವಿವೇಕನಿದ್ದ. ಆಗಲೇ ನನಗೆ ಅರಿವಾಗಿದ್ದು ಮತ್ತೆ ಅವನೇ ನನ್ನ ವಿರುದ್ಧವಾಗಿ ಏನೋ ಪಿತೂರಿ ನಡೆಸಿದ್ದಾನೆ ಎಂದು. ಏನೆಂದು ತಿಳಿಯಲು ಕಾದು ನೋಡಬೇಕಾಗಿತ್ತು.

ಮುಖ್ಯಸ್ಥರು ಮಾತನಾಡಿದರು. “ನಮ್ಮ ಊರಿನ ಮಗಳಾದ ಹುಚ್ಚಿ ಮೂಕಾಂಬೆ ಈಗ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಯಾರೋ ನೀಚನೊಬ್ಬ ಇದಕ್ಕೆ ಕಾರಣನಾಗಿದ್ದಾನೆ. ಅದು ಯಾರೆಂದು ಪತ್ತೆಹಚ್ಚಲು ಈ ಸಭೆಯನ್ನು ಕರೆಯಲಾಗಿದೆ. ಮೂಕಾಂಬೆಯನ್ನು ತಾಯಿಯಂತೆ ಸಲಹುತ್ತಿರುವ ಸರೋಜಕ್ಕ ಅವಳನ್ನು ಅನುನಯಿಸಿ ಅವಳಿಂದ ಇದಕ್ಕೆ ಕಾರಣರಾದವರು ಇಲ್ಯಾರಾದರೂ ಇದ್ದರೆ ತೋರಿಸಲು ಹೇಳಬೇಕು” ಎಂದರು. ಸರೋಜಕ್ಕ ಅವಳ ಕೈಹಿಡಿದು ಅವಳ ಹತ್ತಿರ “ನಿನಗೆ ಹೊಟ್ಟೆ ಬಂದಿರುವುದಕ್ಕೆ ಯಾರು ಕಾರಣರು ತೋರಿಸು” ಎನ್ನುತ್ತಾ ಸೇರಿರುವ ಎಲ್ಲ ಗಂಡಸರ ಮುಂದೂ ಕರೆತಂದು ಕೇಳತೊಡಗಿದಳು. ಅವಳಿಗೆ ಏನು ಅರ್ಥವಾಯಿತೋ ದೇವರಿಗೇ ಗೊತ್ತು. ಎಲ್ಲರ ಮುಖವನ್ನು ನೋಡಿ ಅಲ್ಲ ಎನ್ನುವಂತೆ ತಲೆ ಅಲ್ಲಾಡಿಸುತ್ತಿದ್ದವಳು ವಿವೇಕನ ಹತ್ತಿರ ಬರುತ್ತಿದ್ದಂತೆ ಹೆದರಿದ ಹರಿಣಿಯಂತೆ ದೂರಕ್ಕೆ ಸರಿದಿದ್ದಳು. ನನ್ನ ಹತ್ತಿರ ಬರುತ್ತಿದ್ದಂತೆ ನನ್ನ ಮುಖನೋಡಿ ನಕ್ಕು ಕತ್ತು ಕೊಂಕಿಸಿ ನನ್ನಡೆಗೆ ಕೈ ತೋರಿಸಿದಳು..

ಅವಳು ಅಷ್ಟು ಮಾಡಿದ್ದೆ ವಿವೇಕ ಜೋರಾಗಿ ಮಾತನಾಡಲು ಶುರುಮಾಡಿದ. “ಈಗಲಾದರೂ ನಂಬ್ತೀರಾ? ನಾನು, ಆ ದಿನ ಸೊಪ್ಪಿನ ಬೆಟ್ಟದಲ್ಲಿ ಅಗಳದಿಂದ ಅವಳನ್ನು ಕೈ ಹಿಡಿದು ಮೇಲೆತ್ತಿದ್ದು, ಅಗಳದಲ್ಲಿ ಸೊಪ್ಪಿನ ಹಾಸಿಗೆಯಿದ್ದಿದ್ದು ಕಣ್ಣಾರೆ ಕಂಡಿದ್ದೇನೆ ಎಂದರೂ ಯಾರೂ ನಂಬಿರಲಿಲ್ಲ. ಅಷ್ಟೇ ಅಲ್ಲ ಆ ಘಟನೆಯ ನಂತರ ಅವನು ಮೂಕಾಂಬೆಯನ್ನು ನೋಡುವ ರೀತಿಯೇ ಬೇರೆಯಾಗಿದೆ. ಪೇಟೆಯಿಂದ ಬರುವಾಗಲೆಲ್ಲ ಬಗೆ ಬಗೆಯ ತಿಂಡಿ ತಿನಿಸು, ಬಟ್ಟೆಗಳನ್ನು ತಂದು ಕೊಡುವುದೇನು? ಮೈ ಮುಟ್ಟಿಮುಟ್ಟಿ ಮಾತನಾಡಿಸುವುದೇನು? ಅಬ್ಬಬ್ಬಬ್ಬ! ಕಟ್ಟಿಕೊಂಡ ಹೆಂಡತಿಗೂ ಯಾರೂ ಅಷ್ಟು ಮಾಡುವುದಿಲ್ಲವೇನೋ! ಇವತ್ತು ಅವಳು ಹಾಕಿಕೊಂಡ ಬಟ್ಟೆಯೂ ಅವನೇ ತಂದುಕೊಟ್ಟಿದ್ದು. ಸುಳ್ಳಾದರೆ ಸರೋಜಕ್ಕನ್ನೇ ಕೇಳಿ ಬೇಕಾದ್ರೆ. ತೀಟೆ ತೀರಿಸಿಕೊಳ್ಳಲು ಸುಲಭಕ್ಕೆ ಸಿಕ್ಕಿದಳಲ್ಲ, ಅನುಭವಿಸಿದ” ಎನ್ನುತ್ತಾ ಅಸ್ಪಷ್ಟವಾಗುವ ಒಬ್ಬ ಗಂಡಸು ಹುಡುಗಿಯೊಬ್ಬಳ ಕೈ ಹಿಡಿದು ಎಳೆಯುತ್ತಿರುವ ಫೋಟೋವನ್ನು ತನ್ನ ಮೊಬೈಲಿನಲ್ಲಿ ತೋರಿಸುತ್ತಾ ಮೊದಲೇ ತಯಾರಿ ಮಾಡಿಕೊಂಡ ಭಾಷಣದಂತೇ ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದ. ಸರೋಜಕ್ಕಳಿಂದ ಅದು ನಾನು ತಂದುಕೊಟ್ಟ ಬಟ್ಟೆ ಹೌದು ಎನ್ನುವ ಉತ್ತರ ಬರುತ್ತಿದ್ದಂತೆ ನನಗೆ ಮಾತನಾಡಲು ಅವಕಾಶವನ್ನೇ ಕೊಡದೆ ಮಾಡಿದ ತಪ್ಪಿಗಾಗಿ ಮೂಕಾಂಬೆಯನ್ನು ನಾನೇ ಮದುವೆ ಮಾಡಿಕೊಳ್ಳಬೇಕು, ಅವಳ ಸಂಪೂರ್ಣ ಜವಾಬ್ದಾರಿಯನ್ನ ಇನ್ನು ಮುಂದೆ ನಾನೇ ಹೊರಬೇಕು ಎಂಬೆಲ್ಲ ನಿರ್ಣಯ ಆಗಿ ಹೋಯ್ತು.
ನಾನು ಮಾತೇ ಬಾರದ ಮೂಕನಂತಾಗಿದ್ದೆ. ಯಾಕೆಂದರೆ ವಿವೇಕ ಹೇಳಿದ್ದೆಲ್ಲ ನಿಜವೇ ಆಗಿತ್ತು! ಆದರೆ ಹಿಂದಿರುವ ಕತೆಯೇ ಬೇರೆಯಿತ್ತು!

ಆವತ್ತು ನಾನು ಬಾಲ್ಯದ ಸವಿ ನೆನಪಲ್ಲಿ ಅಲ್ಲಿಯ ಬೆಟ್ಟಗುಡ್ಡಗಳಲ್ಲಿ ಓಡಾಡುತ್ತಿದ್ದೆ. ಸ್ವಲ್ಪ ದೂರದಲ್ಲೆ ಹೆಂಗಸೊಬ್ಬಳ ಚೀರಾಟ ಕೇಳಿಸಿತು. ಹತ್ತಿರ ಹೋಗುತ್ತಿದ್ದಂತೆ ಪೊದೆಯ ಸಂದಿಯಲ್ಲಿ ಏನೋ ಸರ ಸರ ಸರಿದಂತಹ ಶಬ್ಧ. ಹತ್ತಿರದ ಅಗಳದಲ್ಲಿ ಮೂಕಾಂಬೆ ಕುಳಿತಲ್ಲೆ ಬೊಬ್ಬೆಯಿಡುತ್ತಿದ್ದಳು. ಇವಳು ಇಲ್ಲಿಗೆ ಯಾಕೆ ಬಂದಳು? ಬಂದಾಗ ಯಾವುದೋ ಕಾಡು ಪ್ರಾಣಿ ಅಟ್ಯಾಕ್ ಮಾಡಿರಬೇಕು. ಏನೂ ಅರಿಯದ ಪಾಪದ ಹುಡುಗಿ ಎನ್ನುತ್ತಾ ಹತ್ತಿರ ಹೋಗಿ ನೋಡಿದೆ. ಮೂಕಾಂಬೆಯ ಬಟ್ಟೆಯೆಲ್ಲ ಅಸ್ತವ್ಯಸ್ತವಾಗಿತ್ತು, ಅಲ್ಲಲ್ಲಿ ಚಿಕ್ಕಪುಟ್ಟ ಕೆಂಪು ಕಲೆಗಳಿದ್ದವು. ಸದ್ಯ, ದೊಡ್ಡಪ್ರಮಾಣದ ಅನಾಹುತವಾಗಲಿಲ್ಲವಲ್ಲ ಎಂದುಕೊಳ್ಳುತ್ತಾ ಅವಳ ಕೈಹಿಡಿದು ಮೇಲಕ್ಕೆಳೆದುಕೊಳ್ಳುವಾಗ ಅವಳು ಬಿದ್ದ ಜಾಗದಲ್ಲಿದ್ದ ಹಸೀ ಸೊಪ್ಪಿನ ಹಾಸನ್ನು ನೋಡಿ ಎದೆ ಧಸಕ್ಕೆಂದಿತು.! ಇದು ಕಾಡು ಪ್ರಾಣಿಯ ಅಟ್ಯಾಕಲ್ಲ. ಪುರುಷ ರಾಕ್ಷಸಂದು ಎಂದು ಅರಿವಾಯಿತು. ಕನಿಕರದಿಂದ ಅವಳನ್ನು ಸರೋಜಕ್ಕಳಿಗೆ ಒಪ್ಪಿಸಿ ಅಗಳದಲ್ಲಿ ಬಿದ್ದ ವಿಷಯವನ್ನು ಮಾತ್ರ ಹೇಳಿದೆ. ಅವಳನ್ನು ಒಳಗೆ ಕರೆದುಕೊಂಡು ಹೋಗಿ ಅವಳಿಗೆ ಸ್ನಾನ ಮಾಡಿಸುತ್ತಾ “ಇದ್ದಿದ್ದೆ ಒಂದು ಜೊತೆ ಬಟ್ಟೆ, ಅದರಲ್ಲು ಒಂದನ್ನ ಹರಿದುಕೊಂಡು ಬಂದಿದ್ದೀಯಲ್ಲ ನಾಳೆ ಏನು ಹಾಕ್ಕೋತೀಯಾ? ನಾನೇ ಯಾರೂ ಗತಿಯಿಲ್ಲದ ಅಬ್ಬೇಪಾರಿ, ಜೊತೆಗೆ ನೀನೊಬ್ಬ ಅನಾಥ ಹುಚ್ಚಿ, ಸರಿ ಇದೆ ನಮ್ಮ ಜೋಡಿ” ಎಂದು ಅಲವತ್ತುಕೊಳ್ಳುವುದು ಕೇಳಿಸಿತು. ಅವಳ ಉದಾತ್ತ ಭಾವಕ್ಕೆ ಮನತುಂಬಿ ಬಂತು. ಅದಕ್ಕೇ ಪೇಟೆಗೆ ಹೋದಾಗ ಅವಳಿಗೊಂದು ಜೊತೆ ಬಟ್ಟೆ ತಂದುಕೊಟ್ಟಿದ್ದೆ. ಸರೋಜಕ್ಕ ಅವಳ ಹೊಟ್ಟೆಯನ್ನು ಮುಟ್ಟಿ ಇದಕ್ಕೆ ಯಾರು ಕಾರಣ ಎಂದು ಕೇಳಿದಾಗ ಅವಳು ಹಾಕಿಕೊಂಡ ಬಟ್ಟೆ ಯಾರು ಕೊಡಿಸಿದ್ದಾರೆಂದು ಕೇಳುತ್ತಿದ್ದಾರೆ ಅಂದುಕೊಂಡು ಖುಷಿಯಿಂದ ನನ್ನನ್ನು ತೋರಿಸಿರಬಹುದು. ಮತ್ತೆಮತ್ತೆ ಆ ದುರುಳನ ದಾಹಕ್ಕೆ ಇವಳು ಬಲಿಯಾಗದಿರಲಿ ಎಂದು ಆಗಾಗ ಅವಳಿಗೆ ಸಿಹಿ ತಿಂಡಿಯ ಆಸೆ ತೋರಿಸಿ ಊರಿಂದ ಹೊರಗೆ ಹೋಗದಂತೆ ತಿಳಿ ಹೇಳುತ್ತಿದ್ದೆ. ಆವತ್ತಿನಿಂದ ನನ್ನನ್ನು ಕಂಡರೆ ಅವಳಿಗೇನೋ ಭದ್ರತಾ ಭಾವ, ನನಗೆ ಅರಿಯದ ಕೂಸೆಂಬ ಮಮತೆ. ಆದರೂ ಎಲ್ಲರೆದುರು ಶಾಸ್ತ್ರಕ್ಕೊಂದು ತಾಳಿಕಟ್ಟಿ ಅವಳನ್ನು ಮಗುವಂತೆ ಸಲಹೋಣವೆಂಬ ಯೋಚನೆ ಒಂದುಗಳಿಗೆ ಮನದಲ್ಲಿ ಸುಳಿದಿತ್ತು. ಆದರೆ ಅವಳಿನ್ನು ಇಪ್ಪತ್ತೋ ಇಪ್ಪತ್ತೆರಡರ ಮಗು, ನಾನೋ ಅರವತ್ತು ದಾಟುತ್ತಿರುವ ಮುದುಕ. ಈ ವಯಸ್ಸಿನಲ್ಲಿ ಅವಳ ಜವಾಬ್ದಾರಿಯನ್ನು ಇನ್ನೆಷ್ಟುದಿನ ಹೊರಬಲ್ಲೆ? ನನ್ನ ಜೊತೆಗೆ ಆ ಹುಚ್ಚಿ ಮತ್ತು ಅವಳಿಗೆ ಹುಟ್ಟುವ ಮಗುವಿನ ಜವಾಬ್ದಾರಿಯನ್ನೂ ಆದಿಯಮೇಲೆ ಹೇರಲು ನನಗೇನು ಅರ್ಹತೆಯಿದೆ ಎಂಬ ಯೋಚನೆಯಿಂದ ಆ ವಿಚಾರವನ್ನ ಕೈಬಿಟ್ಟೆ. ಮನಸ್ಸಿನ ನೋವು, ಅವಮಾನ, ಸತ್ಯ ಗೊತ್ತಿದ್ದೂ ಹೇಳಿ ಜಯಿಸಲಾಗದ ಹತಾಶ ಭಾವದಿಂದಾಗಿ ನಲುಗಿ ಹೋಗಿದ್ದೇನೆ. ಸಿಡಿಯುತ್ತಿರುವ ತಲೆಗೆ ಶಾಂತಿ ಬೇಕಾಗಿತ್ತು. ಸೀದಾ ಮಹಡಿಗೆ ಹೋಗಿ ಮಲಗಿಬಿಟ್ಟೆ.

ರಾತ್ರಿ ಊಟಕ್ಕೆ ಕರೆಯಲು ಬಂದ ಆದಿ ತಲೆ ತಗ್ಗಿಸಿ ಪಿಸುಗುಟ್ಟಿದ “ಅಣ್ಣಾ ನಿನಗೆ ಮದುವೆಯಾಗಿಲ್ಲ ಎನ್ನುವುದು ನನ್ನ ಲಕ್ಷ್ಯಕ್ಕೆ ಬಂದಿರಲಿಲ್ಲ, ನೀನಾದರೂ ಹೇಳಬಹುದಿತ್ತಲ್ಲಾ, ಎಲ್ಲಾದ್ರೂ ಹುಡುಕಿ ಒಂದು ಹೆಣ್ಣನ್ನು ತಂದು ಮದುವೆ ಮಾಡಿಸುತ್ತಿದ್ದೆ. ಅದು ಬಿಟ್ಟು ಪಾಪ ಆ ಹುಚ್ಚಿಯ ಹಿಂದೆ ಬಿದ್ದೆಯಲ್ಲ…. ನಾಳೆ ಬೆಳಗಾದರೆ ಅವಳನ್ನ ನಿನ್ನ ಕುತ್ತಿಗೆಗೆ ಕಟ್ಟುತ್ತಾರೆ. ಅವಳನ್ನು ಈ ಮನೆಯಲ್ಲಿ ಇಟ್ಟುಕೊಂಡು ನಮಗಿರಲಿಕ್ಕಾಗುವುದಿಲ್ಲ. ನನಗೂ ಮದುವೆಗೆ ಬಂದ ಮಗಳಿದ್ದಾಳೆ. ನಾಳೆ ಅವಳನ್ನೂ ಒಂದು ಯೋಗ್ಯ ಕುಟುಂಬಕ್ಕೆ ಸೇರಿಸಬೇಕಲ್ಲ? ಅದಕ್ಕೆ ನಿಮ್ಮಿಬ್ಬರಿಗೆ ಬೇರೆ ಮನೆ ಮಾಡಿ ಕೊಡುತ್ತೇನೆ. ನಾನೇ ಸ್ವಾಯಾರ್ಜಿತಗೊಳಿಸಿದ ಜಮೀನಾದರೂ ನಿನಗೂ ಅದರಲ್ಲಿ ಸಮಪಾಲು ಕೊಡುತ್ತೇನೆ. ಇನ್ನು ಮುಂದೆ ನಿನ್ನ ಜೀವನ ನಿನಗೆ, ನನ್ನ ಜೀವನ ನನಗೆ. ನಿನ್ನನ್ನು ಹುಡುಕಿಸಿ ಆಸ್ತಿಯಲ್ಲಿಯ ನಿನ್ನ ಪಾಲನ್ನು ನಿನಗೆ ಕೊಟ್ಟು ಅಜ್ಜಿಯ ಮಾತನ್ನು ನಡೆಸಿಕೊಟ್ಟೆನಲ್ಲ, ಅಷ್ಟರಲ್ಲೇ ಸಮಾಧಾನ ಮಾಡಿಕೊಳ್ಳುತ್ತೇನೆ” ಅನ್ನುತ್ತ ನಿಟ್ಟುಸಿರು ಬಿಟ್ಟ. ಅವನಿಗೆಷ್ಟು ನೋವಾಗಿರಬಹುದು ಎನ್ನುವ ಅರಿವಿನಿಂದ ನನ್ನ ಬಾಯಿ ಕಟ್ಟಿ ಹೋಗಿದ್ದರೂ ಈಗಲೂ ನಾನು ಸುಮ್ಮನಿರುವುದು ಸರಿಯಲ್ಲ ಅನ್ನಿಸಿ ದೈನ್ಯದಿಂದ ಕೇಳಿದೆ- “ನೀನೂ ಇದನ್ನೆಲ್ಲ ನಿಜ ಅಂತ ನಂಬ್ತೀಯಾ ಆದಿ?”

“ನಿಜಾನೋ ಸುಳ್ಳೋ, ಇಲ್ಲಿ ಮಾತಾಡಿ ಏನು ಉಪಯೋಗ? ಸುಳ್ಳಾದರೆ ಅಲ್ಲಿ ಪಂಚರ ಎದುರು ಹೇಳಬೇಕಾಗಿತ್ತು?” ಅಂದ.
ಅದೂ ನಿಜವೆನ್ನಿಸಿ ಮೌನವಾದೆ.

ಎರಡು ದಿನಗಳಿಂದ ಮುದ್ದು ಮಗಳು ರಚಿತಾಳ ದರ್ಶನ ಭಾಗ್ಯವೂ ಇಲ್ಲ. ಅವಳೆಷ್ಟು ನೊಂದುಕೊಳ್ಳುತ್ತಿದ್ದಾಳೋ ಕಾಣೆ, ಮಗ ರಜನೀಶನನ್ನೂ ನನ್ನ ಹತ್ತಿರ ಸೇರಿಸುತ್ತಿಲ್ಲ, ಇನ್ನು ನಾದಿನಿ ಸುಜಾತಾಳೋ ಕಿಮ್ ಕುರ್ ಅನ್ನದೆ ಮಾಡಿದ್ದನ್ನು ನೀಡುತ್ತಿದ್ದಾಳೆ. ಈಗ ಎರಡು ಮೂರು ವರ್ಷಗಳಿಂದ ಅನುಭವಿಸಿದ ಸಂತೋಷ, ನೆಮ್ಮದಿಯೆಲ್ಲಾ ಒಂದೇ ದಿನದಲ್ಲಿ ಸುಟ್ಟು ಭಸ್ಮವಾಗಿದೆ. ಇನ್ನು ಈ ಮನೆಯಲ್ಲಿ ಹೀಗಿರಲು ನನ್ನಿಂದ ಸಾಧ್ಯವಿಲ್ಲ, ಹಾಗಂತ ಎಲ್ಲರೆದುರು ಸತ್ಯವನ್ನು ಹೇಳಿ ಅವರೆಲ್ಲ ನಂಬುವಂತೆ ಮಾಡುತ್ತೇನೆ ಎನ್ನುವ ನಂಬಿಕೆಯೂ ಇಲ್ಲ. ಸುಳ್ಳನ್ನೇ ಸತ್ಯವೆಂದು ಒಪ್ಪಿಕೊಂಡು ಊರಿನಲ್ಲಿ ತಪ್ಪಿತಸ್ಥನಂತೆ ತಲೆತಗ್ಗಿಸಿ ಬದುಕುವ ಮನಸ್ಸೂ ಇಲ್ಲ. ಉಳಿದಿರುವುದೊಂದೇ ದಾರಿ. ಅಜ್ಜಿ ಯಾವಾಗಲೂ ಹೇಳುತ್ತಿದ್ದಳು. ನಿನ್ನ ತಮ್ಮನಿಗೆ ನೀನೇ ಆಧಾರವಾಗಿರಬೇಕು ಅಂತ. ಅದಂತೂ ಆಗಲಿಲ್ಲ. ಮುಳ್ಳಾದರೂ ಆಗಬಾರದೆಂದು ದೂರ ಸರಿಯುತ್ತಿದ್ದೇನೆ. ತಡೆಯಲಾರದೆ ಕಡೆಯಬಾರಿ ಮಕ್ಕಳ ಮುಖವನ್ನು ಅವರು ಮಲಗಿದಲ್ಲಿಯೇ ಹೋಗಿ ನೋಡಿ ಬಂದಿದ್ದೇನೆ ಕ್ಷಮಿಸಿಬಿಡು ಆದಿ. ನಿಮಗೆಲ್ಲ ಏನನ್ನೂ ನೀಡದ ನನ್ನನ್ನು ಕರೆತಂದು ಇಷ್ಟೆಲ್ಲ ಪ್ರೀತಿ ತೋರಿದ ನಿನ್ನ ಸಂಸಾರಕ್ಕೆ ನಾನು ಚಿರಋಣಿ ಆದಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. ನಿನ್ನ ನತದೃಷ್ಟ ಅಣ್ಣ ವಿಷ್ಣು.ʼ

ಓದಿ ಮುಗಿಸಿದ ವಿಷ್ಣು ಭಟ್ಟನಿಗೆ ಎಲ್ಲ ಸರಿಯಾಗಿದೆ ಎನ್ನಿಸಿತು. ಈಗಾಗಲೆ ಹೊತ್ತು ಏರುತ್ತಿದೆ. ಮನೆಯಲ್ಲಿ ನನ್ನನ್ನು ಕಾಣದ ಆದಿ ಈಗಾಗಲೇ ಹುಡುಕಲು ಶುರುಮಾಡಿರಬಹುದು. ಇನ್ನು ತಡಮಾಡಿದರೆ ಮತ್ತೆ ಆದಿಯ ಕೈಗೆ ಸಿಕ್ಕಿ ಬೀಳುವ ಸಂಭವವಿದೆ. ಇನ್ನು ತಡಮಾಡುವುದಲ್ಲ, ಎಂದುಕೊಳ್ಳುತ್ತಾ ಕಾಗದವನ್ನು ಬ್ಯಾಗಿನೊಳಗೆ ತುಂಬಿ ಬ್ಯಾಗಿನಿಂದ ಲುಂಗಿಯನ್ನ ತೆಗೆದು ಒಂದು ತುದಿಗೆ ಕುಣಿಕೆ ಬಿಗಿದು ಇನ್ನೊಂದು ತುದಿಯನ್ನು ಹಿಡಿದು ಹತ್ತಿರದ ಮರವನ್ನು ಏರತೊಡಗಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.