“ದೇಹದ ಉಬ್ಬುತಗ್ಗುಗಳೆಲ್ಲ ಮಾಂಸದ ಮುದ್ದೆಗಳು. ಆಕರ್ಷಣೆ, ಪ್ರೀತಿ, ಕಾಮ, ಮೋಹ ಇವೆಲ್ಲ ಹಾರ್ಮೋನುಗಳ ಹಾರಾಟ. ಇವುಗಳ ಮೆರೆದಾಟವೆಲ್ಲ ಮುಗಿದಮೇಲೇನೇ ಪರಸ್ಪರರು ಅರ್ಥವಾಗೋದು. ನನ್ನ ಪ್ರಕಾರ ನಿಜವಾದ ದಾಂಪತ್ಯ ಶುರುವಾಗೋದೇ ಐವತ್ತರ ನಂತರ”

“ಆಮೇಲೆ?”
“ಆ ಆಮೇಲೇನಿಲ್ಲ” ಎದುರಿಗಿದ್ದ ಲೇಖಕ ಆಂಜನಪ್ಪ ತಡಬಡಿಸಿದ. ಕಳೆದವಾರವಷ್ಟೇ ಅವನ, “ಸತ್ತು ಹುಟ್ಟಬೇಕೆಂದರೆ ಮದುವೆಯಾಗಿ” ಪುಸ್ತಕ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಪತ್ರಿಕೆಯಲ್ಲಿ ಅದರ ವಿಮರ್ಶೆ ಪ್ರಕಟವಾಗಬೇಕೆಂಬ ಉದ್ದೇಶದಿಂದ ಸುಮಾರು ಐದು ನಿಮಿಷಗಳಿಂದ ಪೀಠಿಕೆ ಹಾಕುತ್ತಲೇ ಇದ್ದ. ನಾನು ಕಂಪ್ಯೂಟರ್ ಪರದೆಯಿಂದ ತಲೆ ಎತ್ತದೇ ಮಾತನಾಡತೊಡಗಿದಾಗ, ತನ್ನ ಬ್ಯಾಗಿನಿಂದ ಇಣುಕುತ್ತಿದ್ದ ಪುಸ್ತಕದ ನೆತ್ತಿ ಒತ್ತಿ ಒಳಗೆ ಕಳಿಸಿ, ಬರುತ್ತೇನೆಂದು ಎದ್ದು ಹೋದ.

ನಾನು ಹೊಸ ಕಥಾಅಂಕಣದ ಕೆಲಸವನ್ನು ಮುಂದುವರಿಸಿದೆ; ಒಂದು ಕಥೆ, ಭಿನ್ನ ಲೇಖಕರು. ಒಬ್ಬರು ಶುರು ಮಾಡಿದ ಕಥೆಯನ್ನು ಇನ್ನೊಬ್ಬರು ಮುಂದುವರಿಸಿ ಮತ್ತೊಬ್ಬರಿಗೆ ದಾಟಿಸುತ್ತಾ ಹೋಗುವುದು.
“ಮೊದಲ ಕಂತು ನಿಮ್ಮಿಂದಲೇ ಶುರುವಾಗಲಿ” ಲೇಖಕಿಯೊಬ್ಬರಿಗೆ ಮೆಸೇಜ್ ಮಾಡಿದೆ.
“ಒಂದು ಪಾತ್ರವನ್ನು ಇತ್ತ ಕಳಿಸಬಹುದೇ?” ಅತ್ತಕಡೆಯಿಂದ ಮೆಸೇಜ್ ಬಂದಿತು.
“ಖಂಡಿತ! ಮೇಡ್ ಮಿನುಗುತಾರೆ. ವಯಸ್ಸು ಸುಮಾರು ಮೂವತ್ತೈದು”
ನಾಲ್ಕು ದಿನಗಳ ನಂತರ ಮೊದಲ ಕಂತು ಬಂದಿತು.

ಗಂಟೆ ಬೆಳಗಿನ ಎಂಟಾಗುತ್ತಿತ್ತು. ಮೆಲ್ಲಗೆ ಹನ್ನೆರಡೂ ಮೆಟ್ಟಿಲುಗಳನ್ನು ಏರಿ ಬೆಡ್ರೂಮಿನ ಬಳಿ ಬಂದೆ. ಯಾರೋ ಒಳಗಿದ್ದಂತೆನ್ನಿಸಿತು. ಬಾಗಿ ನೋಡಿದೆ, ಒಳಗಿದ್ದ ಆಕೆ ಎಳ್ಳಷ್ಟೂ ವಿಚಲಿತಳಾಗಲಿಲ್ಲ. ಕನ್ನಡಿಯಲ್ಲಿನ ತನ್ನ ಬಿಂಬಕ್ಕೇ ದೃಷ್ಟಿನೆಟ್ಟು, “ಬನ್ನಿ, ನಿಮ್ಮ ರೂಮಲ್ಲಿ ಡ್ರೆಸ್ಸಿಂಗ್ ಟೇಬಲ್ ಮುಂದಿರೋ ಈ ಮಾಯಿಸ್ಚರೈಸರ್ನಾ ದಿನಾ ಇಂಗೆ ಮೈಗೆ ಕೈಗೆ ಗಲ್ಲಕ್ಕೆ ಮಕಕ್ಕೆ ಅಚ್ಚಿಕೊಳ್ತಿರೋದು ನಾನೇಯಾ” ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು, ಕೂದಲನ್ನು ಮೇಲಕ್ಕೆತ್ತಿ ಕಟ್ಟಿಕೊಂಡಿದ್ದ ಮಿನುಗುತಾರೆ ಕತ್ತು ಕೊಂಕಿಸಿ ತನ್ನ ನೀಳವಾದ ಕೈಗಳನ್ನು ಸವರಿಕೊಂಡಳು.

“ಏನಿದು, ಇಲ್ಲೇನು ಮಾಡುತ್ತಿದ್ದೀ?” ತುಸು ಜೋರಾಗಿಯೇ ಕಿರುಚಿದೆ.
“ಕಾಣಾಕಿಲ್ವೇ?” ಹಕ್ಕುಮಿಶ್ರಿತ ಧಾಟಿಯಲ್ಲಿ ಕೇಳಿದಳು.
“ಅದೇ, ದಿನವೂ ನೋಡುತ್ತಿದ್ದೆ. ಮಾಯಿಶ್ಚರೈಸರ್ನ ಮುಚ್ಚಳ ಯಾವಾಗಲೂ ತೆರೆದೇ ಇರುತ್ತಿತ್ತು. ನೀಲ್ಗೆ ಕೇಳಿದರೆ, ನನಗೇ ಮರೆವು ಎನ್ನುತ್ತಿದ್ದ. ಹಾಗಿದ್ದರೆ ಇದೆಲ್ಲ ನಿನ್ನದೇ ಕಿತಾಪತಿ. ಬೆಡ್ರೂಮಿಗೆ ಬಂದು ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದಲ್ಲದೇ ಹೀಗೆ ಧಿಮಾಕಿನಿಂದ ಬೇರೆ ಮಾತಾಡ್ತಿದ್ದೀಯಾ?”
“ತೆಪ್ಪೇನೈತೆ? ನನ್ನ ಮೈಕೈನೂವೇ ಸಂದಾಗಿಟ್ಕೊಬೇಕಂತ ಆಸೆ ಪಡೋದ ತೆಪ್ಪಾ? ಅಷ್ಟಕ್ಕೂ ಇದೊಂದ ಮಾಯಿಸ್ಚರೈಸರ್ ಡಬ್ಬಿ. ಅಲ್ಲಾ… ನಿಮ್ಮ ಆಸ್ತಿಪಾಸ್ತಿಯನ್ನೇನಾರಾ ಕೊಳ್ಳೆ ಒಡೀತಿದೀನಾ, ಯಾಕಂಗ ಅರಚ್ಕಂತಿದೀರಾ?” ಎಡಗಿವಿ ಜಾಡಿಸಿಕೊಂಡಳು.

ಇನ್ನೇನು ಮಾತಾಡಿದರೂ ಅಷ್ಟೇ ಎನ್ನಿಸಿ ಬಾಲ್ಕನಿಗೆ ಹೋದೆ. ಕ್ಷಮೆ ಕೇಳಿಯಾಳೆಂದುಕೊಂಡು ಸ್ವಲ್ಪ ಕಾಯ್ದೆ. ಆಕೆ ರೂಮಿನಿಂದ ಹೊರಗೇ ಬರಲಿಲ್ಲ. ತನ್ನ ವರ್ತನೆಯ ಬಗ್ಗೆ ತನಗೇ ನಾಚಿಕೆ ಅನ್ನಿಸಿರಬಹುದೇನೋ, ಹೋಗಿ ಸಮಾಧಾನ ಮಾಡಿದರಾಯಿತೆಂದು ಒಳಬಂದೆ. ನೋಡಿದರೆ ಆಕೆ ಡ್ರೆಸ್ಸಿಂಗ್ ಟೇಬಲ್ಲಿನ ಪಕ್ಕದಲ್ಲಿದ್ದ ರಾಕಿಂಗ್ ಚೇರ್ನಲ್ಲಿ ತೂಗಿಕೊಂಡು ಕುಳಿತಿದ್ದಳು. ನೋಡನೋಡುತ್ತಿದ್ದಂತೆ ವೇಗ ಹೆಚ್ಚಿಸಿಕೊಂಡು ಲಗಾಮು ಕಳಚಿಕೊಂಡ ಕುದುರೆಯಂತೆ ಅನ್ನಿಸತೊಡಗಿದಳು. ದವಡೆ ಕಚ್ಚಿಕೊಂಡು ಸ್ನಾನಕ್ಕೆ ಹೋದೆ. ಹೊರಬಂದಾಗ ಫ್ಯಾನ್ ಕೊನೆಯ ನಂಬರಿನಲ್ಲಿ ತಿರುಗುತ್ತಿತ್ತು. ಒರೆಸಿ ಹೋದ ನೆಲ ಆರಿ ಥಣ್ಣಗಾಗಿತ್ತು. ಆದರೆ ನನ್ನೊಳಗಿನ ನಾನು ಕುದಿಯುತ್ತಲೇ ಇದ್ದೆ. ಫ್ಯಾನ್ ಬಂದ್ ಮಾಡಿ, ಡ್ರೆಸ್ಸಿಂಗ್ ಟೇಬಲ್ ಮುಂದೆ ನಿಂತೆ.

ಬಾಯಿತೆರೆದುಕೊಂಡಿದ್ದ ಮಾಯಿಶ್ಚರೈಸರ್ ಅಣಕಿಸುತ್ತಿತ್ತು. ಅದರ ಮುಚ್ಚಳವನ್ನು ಬಿಗಿಗೊಳಿಸಿದೆ. ಅದನ್ನೆತ್ತಿಕೊಂಡು ಕೆಳಗೆ ಬಂದೆ. ಆಕೆ ಟಾಯ್ಲೆಟ್ ಸ್ವಚ್ಛಗೊಳಿಸುತ್ತಿದ್ದಳು. ಹೊರಗಿನ ಕಿಟಕಿಯ ಮಾಮೂಲಿ ಜಾಗದಲ್ಲಿ ಅವಳ ಚೀಲ ನೇತಾಡುತ್ತಿತ್ತು. ಮೆಲ್ಲಗೆ ಮಾಯಿಶ್ಚರೈಸರ್ಅನ್ನು ಆ ಚೀಲದೊಳಗೆ ತುರುಕಿದೆ. ನೀಲ್ನ ತಾಯಿಗೆ ಮೀಟಿಂಗ್ ನೆಪ ಹೇಳಿ, ತಿಂಡಿ ತಿನ್ನದೇ ಮೆಟ್ರೋ ಏರಿ ಆಫೀಸಿಗೆ ಹೊರಟೆ.

ಕಬ್ಬನ್ ಪಾರ್ಕ್ನಿಂದ ಹತ್ತಿದ ಹುಡುಗಿಯೊಬ್ಬಳ ಬ್ಯಾಗ್ ಗೀರಿಕೊಂಡು ಹೋಯಿತು. ತೋಳಿನ ಮೇಲೆ ಸಮಾನಾಂತರದಲ್ಲಿ ಎರಡಿಂಚಿನಷ್ಟು ಕೆಂಪು ಗೆರೆಗಳು ಮೂಡಿ ಚುರುಗುಟ್ಟುತ್ತಿದ್ದರೂ ಮನಸ್ಸಿನೊಳಗೆ ಉರಿಯುತ್ತಿದ್ದ ಮಿನುಗುತಾರೆಯ ಮುಂದೆ ಇದೇನೂ ಅಲ್ಲ ಅನ್ನಿಸಿಬಿಟ್ಟಿತು. ಟ್ರಿನಿಟಿ ಸರ್ಕಲ್ ಬದಲಾಗಿ ಎಂ.ಜಿ. ರೋಡಿಗೇ ಇಳಿದುಬಿಟ್ಟೆ.
ರೋಡ್ ಕ್ರಾಸ್ ಮಾಡಲೆಂದು ನಿಂತಾಗ, ಕಣ್ಣು ತುಳುಕಿಯೇ ಬಿಟ್ಟಿತು. ಸದ್ಯ ಅಲ್ಲಿದ್ದವರೆಲ್ಲ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಅವರವರ ಲೋಕದಲ್ಲಿದ್ದರು. ನಡೆದುಕೊಂಡೇ ಆಫೀಸು ತಲುಪಿದೆ. ಹಸಿವು ಸಂಕಟವಾಗಿ ಪ್ಯಾಂಟ್ರಿಯತ್ತ ಓಡಿ ಸ್ಯಾಂಡ್ವಿಚ್ ತಿಂದು ಕಾಫಿಗಾಗಿ ಕಾಯುತ್ತಾ ಕುಳಿತೆ.

ಅಮ್ಮನಿಗೆ ಮೆಸೇಜ್ ಮಾಡಿ ವರದಿ ಒಪ್ಪಿಸಿದೆ. ಅದಕ್ಕವರು “ಓಹ್ ಹೂಂ” ಎಂದಷ್ಟೇ ಉತ್ತರಿಸಿದರು. ಸಮಾಧಾನವಾಗದೆ ಅಪ್ಪನಿಗೆ ಫೋನ್ ಮಾಡಿ ಹೇಳಿದೆ. “ತಾಳ್ಮೆ! ಎಲ್ಲವನ್ನೂ ಎಲ್ಲರನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವಂಥ ಛಾತಿ ಬೆಳೆಸಿಕೊಳ್ಳಬೇಕು. ಮನೆಮಂದಿಯೆಲ್ಲ ಎಲ್ಲದಕ್ಕೂ ನಿನ್ನನ್ನು ಕೇಳಿಯೇ ಮುಂದುವರಿಯಬೇಕು, ಅಂಥ ಪ್ರಬುದ್ಧತೆಯನ್ನು ನೀನು ತಂದುಕೊಳ್ಳಬೇಕು. ಇಂಥ ಸಣ್ಣಪುಟ್ಟ ವಿಷಯಗಳಿಗೆ ಯಾರಾದರೂ ಕುಗ್ಗುತ್ತಾರೆಯೇ” ಕರುಣ ರಸದೊಳಗೆ ಮಿಂದುಬಂದ ಅಪ್ಪನ ಉಪದೇಶದ ಮುಂದೆ ಹಾಂ ಹೂಂ ಎನ್ನಲು ಕೂಡ ಧ್ವನಿ ಹೊಮ್ಮಲಿಲ್ಲ.

“ನೋಡಿ, ನೀವು ಉಪದೇಶ ಶುರು ಮಾಡಿದಿರೋ ಇಂದಿನ ಪೀಳಿಗೆ ನಿಮ್ಮಿಂದ ಮೈಲಿದೂರ. ಈಗೇನಿದ್ದರೂ ಎಕ್ಸ್ಪೀರಿಯನ್ಶಿಯಲ್ ಯುಗ. ಹತ್ತಿರವಿದ್ದೇ ಅಂತರ ಕಾಯ್ದುಕೊಂಡು ಹುರಿದುಂಬಿಸುತ್ತಿರಬೇಕು.”
“ನಿಮಗೊಂದು ಮಾತು ಹೇಳಲೇ”
“ಅವಶ್ಯ!”
“ಲೇಖಕರು ಹೀಗೆ ಎಂದಿಗೂ ಯಾರ ಮುಂದೆಯೂ ತಮ್ಮ ಮುಂದಿನ ಪುಸ್ತಕದ ವಿಷಯವನ್ನು ಬಿಟ್ಟುಕೊಡಬಾರದು, ಅದರಲ್ಲೂ ಪತ್ರಕರ್ತರೆದುರು!”
ಆಂಜನಪ್ಪ ತನ್ನ ಹೊಸ ಪುಸ್ತಕವನ್ನು ಟೇಬಲ್ ಮೇಲೆ ಪೇರಿಸಿದ್ದ ಒಂದಿಷ್ಟು ಪುಸ್ತಕಗಳ ನಡುವೆ ತುರುಕಿಟ್ಟು ಮೆಲ್ಲಗೆ ಜಾಗ ಖಾಲಿ ಮಾಡಿದ.

ಕಥೆಯ ಮೊದಲ ಕಂತಿಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅವುಗಳನ್ನು ಲೇಖಕಿಗೆ ರವಾನಿಸಿ, ಮತ್ತೊಬ್ಬ ಕಥೆಗಾರರು ಕಳಿಸಿದ ಮುಂದಿನ ಕಂತನ್ನು ಓದತೊಡಗಿದೆ.

ನಾನು ನೀಲ್ನ ಮನೆಗೆ ಬಂದು ಮೂರು ದಿನಗಳಾಗಿದ್ದವು. ಬೆಳಗ್ಗೆ ನಡೆದ ಘಟನೆಯಿಂದಾಗಿ ಮನಸ್ಸು ತಲ್ಲಣಿಸಿತ್ತು. ಅಂದು ಸಂಜೆ ನೀಲ್ ನೈಟ್ ಶಿಫ್ಟ್ಗೆ ಹೊರಡುವ ಮುನ್ನ ಈವತ್ತೊಂದಿನ ರಜೆ ಹಾಕಬಾರದಾ? ಅಂದೆ. ಇದ್ದಕ್ಕಿದ್ದ ಹಾಗೆ ರಜೆ ಕಷ್ಟ. ಒಂದು ರೌಂಡ್ ವಾಕ್ ಹೋಗಿಬರೋಣವಾ? ಅಂದ. ವಾಪಾಸು ಬರುವಾಗ ಐಸ್ಕ್ರೀಮ್ ತಿಂದುಬಂದೆವು. ಹಾಗಾಗಿ ಹಸಿವಿಲ್ಲ ಎನ್ನುವ ನೆಪವೊಡ್ಡಿ ರೂಮಿಗೆ ಬಂದೆ. ಮಬ್ಬೆಳಕಿನಲ್ಲಿ ರಾಕಿಂಗ್ ಚೇರ್ ತೂಗಾಡುತ್ತಿದೆ ಎನ್ನಿಸಿತು. ಲೈಟ್ ಆನ್ ಮಾಡಿದೆ, ಅದರ ಪಾಡಿಗೆ ಅದಿತ್ತು. ಕಣ್ಣು ಎಳೆಯಹತ್ತಿದವು ಲೈಟ್ ಆಫ್ ಮಾಡಿದೆ. ಮತ್ತೆ ಅದು ತೂಗಾಡುತ್ತಿದೆ ಎನ್ನಿಸಿತು. ಕೊನೆಗೆ ಲೈಟ್ ಆನ್ ಮಾಡಿಕೊಂಡೇ ಮಲಗಿದೆ, ನಿದ್ದೆ ಬಂದಾಗ ಗಂಟೆ ಮೂರಾಗಿತ್ತು.

ಮರುದಿನ ಬೆಳಗ್ಗೆ ಮಿನುಗುತಾರೆ ಪಾತ್ರೆ ತೊಳೆಯುತ್ತಿರುವ ಸದ್ದು ಕೇಳಿಸುತ್ತಿತ್ತು. ಟೆರೇಸಿಗೆ ಹೋದೆ. ನೀಲ್ನ ಅಪ್ಪ ಗುಡ್ ಮಾರ್ನಿಂಗ್ ಎನ್ನುತ್ತ ಹುರಿದ ಗೋಡಂಬಿಗಳ ಬಟ್ಟಲನ್ನು ಮುಂದೆ ಚಾಚಿದರು. ನಾನಿನ್ನೂ ಬ್ರಷ್ ಮಾಡಿಲ್ಲವೆಂದು ಸನ್ನೆ ಮಾಡಿದೆ. ಅವರು ಬಾಯಾಡಿಸುತ್ತ ಪೇಪರ್ನಲ್ಲಿ ಮುಳುಗಿದರು. ಸಣ್ಣ ಕತ್ತರಿಯಿಂದ ತಮಗೆ ಬೇಕಾದದ್ದೇನೋ ಕತ್ತರಿಸಿಟ್ಟುಕೊಳ್ಳುತ್ತಿದ್ದರು. ಅವರ ಹಿಂದೆ ಇದ್ದ ಬಳ್ಳಿಯಲ್ಲಿ ಶಂಖದಹುಳುವೊಂದು ಅಂಟಿಕೊಂಡಿತ್ತು. ಅದರ ಫೋಟೊ ತೆಗೆಯಬೇಕೆನ್ನುವಷ್ಟರಲ್ಲಿ ಅದು ಅವರ ಭುಜದ ಮೇಲೆ ಬಿದ್ದಿತು. ಏನೋ ಬಿದ್ದಿತೆಂದು ಜಾಡಿಸಿಕೊಂಡರಾದರೂ ಅದು ಅಲ್ಲಿಯೇ ಅಂಟಿಕೊಂಡಿದ್ದು ಅವರ ಅರಿವಿಗೆ ಬಂದಿರಲಿಲ್ಲ. ಶಂಖದಹುಳು ಅಲ್ಲಿಂದಲೇ ಮೊಬೈಲಿಗೆ ಒಂದಷ್ಟು ಪೋಸು ಕೊಟ್ಟು ನೆಲಕ್ಕೆ ಬಿದ್ದಿತು.

ಕೆಳಗಿಳಿದು ಬರುತ್ತಿದ್ದಂತೆ ನೀಲ್ನ ಅಮ್ಮ ಬಾತ್ರೂಮಿನಿಂದ ಹೊರಬಂದರು. ಡ್ರೆಸ್ಸಿಂಗ್ ಟೇಬಲ್ನತ್ತ ಬಂದು ಏನನ್ನೋ ಹುಡುಕತೊಡಗಿದರು. ಹತ್ತಿರ ಹೋದೆ. “ಬಳೆಗಳನ್ನು ಬಿಚ್ಚಿಟ್ಟು ಸ್ನಾನಕ್ಕೆ ಹೋಗಿದ್ದೆ, ಈಗವು…” ಗಾಬರಿಗೊಂಡಿದ್ದರು. ರೂಬಿ ಕೂರಿಸಿದ ಐವತ್ತೈವತ್ತು ಗ್ರಾಮಿನ ಎರಡು ಬಳೆಗಳನ್ನು ನಮ್ಮತ್ತೆ ನನ್ನ ಮದುವೆಯಲ್ಲಿ ಕೊಟ್ಟಿದ್ದರೆಂದು ಪಿಸುಗುಟ್ಟಿದರು. ಸ್ವಲ್ಪ ಹೊತ್ತು ಮಂಚದ ಮೇಲೆ ಕುಳಿತುಕೊಳ್ಳಲು ಹೇಳಿ ಕುಡಿಯಲು ನೀರು ಕೊಟ್ಟೆ. ಆದರೆ ಅವರು ಇದ್ದಕ್ಕಿದ್ದಂತೆ ಅಲ್ಲಿಂದ ಎದ್ದು ಅಡುಗೆಕೋಣೆಯನ್ನು ಇಣುಕಿದರು, ಮಿನುಗುತಾರೆ ತನ್ನ ಕೆಲಸದಲ್ಲಿ ಮುಳುಗಿದ್ದಳು. ಹೊರಬಂದು ಮೆಲ್ಲಗೆ ಮುಂಬಾಗಿಲನ್ನು ಎಳೆದು ಚಿಲಕ ಹಾಕಿಕೊಂಡರು. ನನಗೋ ತಳಬುಡ ಗೊತ್ತಾಗುತ್ತಿಲ್ಲ. ಆದರೂ ಸುಮ್ಮನೇ ಹಿಂಬಾಲಿಸಿದೆ.

ಕಿಟಕಿಯ ಪಕ್ಕದ ಮಾಮೂಲಿ ಜಾಗದಲ್ಲಿ ಮಿನುಗುತಾರೆಯ ಚೀಲ ಜೋತುಬಿದ್ದಿತ್ತು. ಅದಕ್ಕೆ ಕೈಹಾಕಿ ಉದ್ದನೆಯ ಟಿಫಿನ್ ಬಾಕ್ಸ್ ಹೊರತೆಗೆದರು. ಒತ್ತೊತ್ತಿ ಪುಲಾವ್ ತುಂಬಿಕೊಂಡ ಆ ಬಾಕ್ಸ್ಅನ್ನು ಟೀಪಾಯಿ ಮೇಲಿಟ್ಟು ಅಗಳು ಕೆಳಗೆ ಬೀಳದಂತೆ ಮೆಲ್ಲಗೆ ಕೆದಕುತ್ತ ಹೋದರು. ತಳದಲ್ಲಿದ್ದ ಬಳೆಗಳು ಕೈಗೆ ಹತ್ತಿದವು. ಭರಭರನೆ ಪುಲಾವನ್ನು ಮೊದಲಿನಂತೆ ಬಾಕ್ಸ್ಗೆ ಒತ್ತೊತ್ತಿ ತುಂಬಿ ಮುಚ್ಚಳ ಮುಚ್ಚಿ ಚೀಲದೊಳಗಿಟ್ಟರು. ನಂತರ ಮೆಲ್ಲಗೆ ಮುಂಬಾಗಿಲ ಚಿಲಕ ತೆರೆದು, ನೇರ ಬಾತ್ರೂಮಿಗೆ ಹೋಗಿ ಬಳೆಗಳನ್ನು ತೊಳೆದು, ಲಾಕರಿನಲ್ಲಿ ಭದ್ರವಾಗಿಟ್ಟರು. ಅವರ ಈ ನಡೆ ನಿಜಕ್ಕೂ ಗೊಂದಲವನ್ನುಂಟು ಮಾಡಿತು. ಮೀಟಿಂಗ್ ಇದ್ದುದರಿಂದ ಹೆಚ್ಚು ಮಾತನಾಡದೇ ಆಫೀಸಿಗೆ ಹೊರಟೆ. ಮಾರನೇ ದಿನ ಕೂಡ ಎಂದಿನಂತೆ ಮೀನುಗುತಾರೆ ಮನೆಗೆಲಸ ಮುಗಿಸಿಕೊಂಡು ಹೊರಟಳು. ಅದರ ಮರುದಿನ ಕೂಡ ನೀಲ್ನ ಅಮ್ಮ ಮಿನುಗುತಾರೆಯೊಂದಿಗೆ ಈ ವಿಷಯವನ್ನು ಎತ್ತಲೇ ಇಲ್ಲ. ಮಿನುಗುತಾರೆಯೂ ಏನೂ ನಡೆದೇ ಇಲ್ಲವೆಂಬಂತೆ ಇದ್ದಳು.

“ಅಳಿಸುವುದು, ಅಳಿಸಿಕೊಳ್ಳುವುದು ಗೊತ್ತಿರಬೇಕು. ಅಂದಂದಿನದನ್ನು ಅಂದಂದಿಗೇ ಅಳಿಸಿ ಒರೆಸಿ ಝಾಡಿಸಿಬಿಡಬೇಕು. ಇದು ಯಾವ ಸಂಬಂಧಕ್ಕೂ, ವಿಚಾರಕ್ಕೂ ಅನ್ವಯ.”
“ನೀವು ಯಾವ ಎರೇಸರ್ ಉಪಯೋಗಿಸುತ್ತೀರಿ?”
“ರೇಸರ್? ಬಿಟ್ಟು ಬಹಳ ವರ್ಷಗಳಾದವು” ಗಡ್ಡದ ಮೇಲೆ ಕೈಯ್ಯಾಡಿಸಿಕೊಂಡ ಆಂಜನಪ್ಪ ಹಲ್ಲುಗಿಂಜಿದ.
“ಹಾಗಾದರೆ ನಿಮ್ಮ ಮುಂದಿನ ಪುಸ್ತಕ?”
ಕಳೆದ ಸಲ ಬಂದಾಗ ಆಂಜನಪ್ಪ ತಾನಾಗಿಯೇ ಪುಸ್ತಕಗಳ ರಾಶಿಗಳ ಮಧ್ಯೆ ತನ್ನ ಪುಸ್ತಕವನ್ನು ತೂರಿಸಿಟ್ಟು ಹೋಗಿದ್ದ. ಅದನ್ನೀಗ ಹೊರತೆಗೆದು ಮೇಲೆ ಕಾಣುವಂತೆ ಇಟ್ಟ. ನಾನು ಕಂಪ್ಯೂಟರ್ನಿಂದ ತಲೆ ಎತ್ತುವ ಹೊತ್ತಿಗೆ ಅವ ಎಂದಿನಂತೆ ಅಲ್ಲಿರಲಿಲ್ಲ.

ಕಥೆಯ ಮುಂದಿನ ಕಂತಿನ ಬಗ್ಗೆ ತೀವ್ರ ಕುತೂಹಲವಿತ್ತು. ಫೈಲ್ ಓಪನ್ ಮಾಡಿದೆ.

ಆಫೀಸಿನ ಲಿಫ್ಟ್ಗಾಗಿ ಕಾಯುತ್ತಿದ್ದಾಗ ಯಾವುದೋ ಕಾಲ್ ಬಂದು ಕಟ್ ಆಯಿತು. ಟ್ರ್ಯೂ ಕಾಲರ್, ಕಲ್ಪನಾ ಎಂದಿತು. ಯಾರೋ ಏನೋ, ಸುಮ್ಮನಾದೆ. ಮತ್ತೆ ಬಂತು, ರಿಸೀವ್ ಮಾಡಿದೆ. ಹಿನ್ನೆಲೆಯಲ್ಲಿ ವಾತಾವರಣ ಪ್ರಕ್ಷುಬ್ಧಗೊಂಡಂತಿತ್ತು. ರಾಂಗ್ ನಂಬರ್ ಹೇಳಿ ಕಟ್ ಮಾಡಬೇಕೆನ್ನುವಷ್ಟೊತ್ತಿಗೆ, ಕೇಳಿಬರುತ್ತಿದ್ದ ಧ್ವನಿಗಳು ಪರಿಚಿತವೆನ್ನಿಸತೊಡಗಿದವು.
“ನನ್ನೊಳಗಿನದಿನ್ನೂ ಉಡುಗಿಲ್ಲ ಕಣೇ! ತೌಡಿನ ಚಟ್ನೀಪುಡಿ ಮಾಡಿಡು ಅಂತ ನೂರು ಸಲ ಹೇಳಿದರೂ ಜಾಣಕಿವುಡಲ್ವಾ ನಿನಗೆ? ನಾನು, ನನ್ನ ಆಸೆಗಳು, ಬಯಕೆಗಳೆಂದರೆ ನಿನಗೆ ಮೊದಲಿನಿಂದಲೂ ಅಸಡ್ಡೆ” ನೀಲ್ನ ಅಪ್ಪ.
“ಮತ್ತೆ ಅಸ್ವಗಂದಾ, ಸತಾವ್ರಿ, ಸಿಲಾಜಿತ್ ಮುಗದು ವಾರದ ಮ್ಯಾಲಾತು. ಗ್ವಾಡಂಬಿ ಬಾದಾಮು ದ್ರಾಕ್ಸಿ ಕಾಲಿಯಾಗಿದ್ಕೆ ಹುರದಿಟ್ಟಿಲ್ಲ” ಮಿನುಗುತಾರೆ.
“ಆಹ್ ಮಿನುಗುತಾರೆ! ಈ ಬಿರುದಾಂಕಿತಕ್ಕೆ ಅನ್ವರ್ಥ ನೀನು. ಅದೆಷ್ಟು ಛಂದ ಕಣ್ಣಲ್ಲಿ ಕಣ್ಣಿಟ್ಟು ಇಂದ್ರಕುಮಾರರ ಬೇಕುಬೇಡಗಳನ್ನೆಲ್ಲ ನೋಡಿಕೊಳ್ಳುತ್ತಿದ್ದೀ. ಇಷ್ಟು ವರ್ಷಗಳಿಂದ ಅಡಗಿದ್ದ ಅವರ ಶಕ್ತಿಯೆಲ್ಲ ನಿನ್ನ ಕಾಳಜಿ, ಉಪಚಾರಗಳಿಂದಲೇ ಮಿನುಗುತ್ತಿರುವುದು. ಹಾಂ! ಅದು ಇಡೀ ಮನೆಯನ್ನೇ ಆವರಿಸಿಕೊಂಡು ಪ್ರಜ್ವಲಿಸಲಿ. ಸಾಗಲಿ ನಿಮ್ಮಗಳ ಶಕ್ತಿಸಂಶೋಧನಾ ಯಾತ್ರೆ. ಇಗೋ ನಿನ್ನ ರಥವನ್ನು ಪಂಡಿತರ ಅಂಗಡಿಯೆಡೆ ತಿರುಗಿಸು” ನೀಲ್ನ ಅಮ್ಮ.
ಅಷ್ಟೊತ್ತಿಗೆ ಫೋನ್ ಕಟ್. ಈ ತೌಡಿನ ಚಟ್ನಿ, ಪಂಡಿತರ ಅಂಗಡಿ, ಮಿನುಗುತಾರೆಯ ನಾಮಕರಣ ತಲೆಯನ್ನು ಗಿರಗಿಟ್ಲೆಯಾಗಿಸಿದವು. ಸಂಜೆ ಆಫೀಸು ಮುಗಿಸಿ ಮರಳಿದಾಗ ನೀಲ್ನ ಅಮ್ಮ, ಕಮ್ಯೂನಿಟಿ ಮೀಟಿಂಗ್ಗೆ ಹೊರಡಲು ತಯಾರಾಗುತ್ತಿದ್ದರು. ಆಗಷ್ಟೇ ಹಾಸಿಗೆಯಿಂದ ಎದ್ದ ನೀಲ್ ಹಲ್ಲುಜ್ಜುತ್ತಿದ್ದ. ಅವನ ಅಪ್ಪ ತಮ್ಮ ರೂಮಿನಲ್ಲಿ ಹೂಂಕರಿಸುತ್ತ ಸಾಮು ತೆಗೆಯುತ್ತಿದ್ದರು. ಈ ವಯಸ್ಸಿನಲ್ಲಿ… ಭಲೇ! ಕೈಕಾಲು ಮುಖ ತೊಳೆದುಕೊಂಡು ಡೈನಿಂಗ್ ಟೇಬಲ್ ಮೇಲಿದ್ದ ಬಾಳೆಕಾಯಿ ಚಿಪ್ಸ್ ತಿನ್ನುತ್ತ ಮೊಬೈಲ್ನಲ್ಲಿ ಹುದುಗಿದೆ. ಗ್ಯಾಲರಿ ಓಪನ್ ಮಾಡಿ ಶಂಖದಹುಳುವಿನ ಫೋಟೋಗಳನ್ನು ಇನ್ಸ್ಟಾಗ್ರಾಮಿಗೆ ಅಪ್ಲೋಡ್ ಮಾಡಲೆಂದು ಎಡಿಟ್ ಮಾಡಬೇಕೆನ್ನಿಸಿತು. ಒಂದಂತೂ ತುಂಬಾ ಚೆನ್ನಾಗಿ ಬಂದಿತ್ತು. ಆದರೆ ಅದರ ಬ್ಯಾಕ್ಗ್ರೌಂಡಿನಲ್ಲಿ ನೀಲ್ನ ಅಪ್ಪ ಹಿಡಿದುಕೊಂಡಿದ್ದ ಪೇಪರ್ ಕೂಡ ಕ್ಯಾಪ್ಚರ್ ಆಗಿತ್ತು. ಎಡಿಟ್ ಮಾಡಲೆಂದು ಝೂಮ್ ಇನ್ ಮಾಡಿದೆ. ಅಷ್ಟೊತ್ತಿಗೆ ಮಿನುಗುತಾರೆ ಪಂಡಿತರ ಅಂಗಡಿಯ ಮುದ್ರೆಯಿದ್ದ ಕೈಚೀಲದೊಂದಿಗೆ ನೀಲ್ನ ಅಪ್ಪನ ರೂಮಿಗೆ ಹೊಕ್ಕಳು.
“ನೀನೊಬ್ಬಳೇ ನೋಡು ಈತನಕ ನನ್ನನ್ನು ಅರ್ಥ ಮಾಡಿಕೊಂಡಿದ್ದು”
“ಆ ತೌಡಿನ ಚಟ್ನೀಪುಡೀನಾ ನಾಳೆ ಮಾಡ್ಕಂಬತ್ತೀನಿ. ಆವೊತ್ತು ಆ ಸೊಪ್ಪು ತತ್ತೀನಿ ಅಂದಿದ್ನಲ್ಲಾ, ಅದನ್ನೂವೆಯಾ”
“ಹೌದಾ! ಆ ನವಧಾನ್ಯಗಳನ್ನೆಲ್ಲ ನೀನೇ ಇಟ್ಕೊಂಬಿಡು, ನನಗೆ ತೌಡಿನ ಚಟ್ನಿ ಮಾತ್ರಾ ತಂದ್ಕೊಡು”
ಒಂದಿಷ್ಟು ನೋಟುಗಳನ್ನು ಬ್ಲೌಸಿನಲ್ಲಿ ಸಿಕ್ಕಿಸಿಕೊಳ್ಳುತ್ತ ಹೊರಬಂದಳು. ಅವಳ ಕಂಕುಳಲ್ಲಿ ಕಂದುಬಣ್ಣದ ಡೈರಿ ಇತ್ತು. ಎರಡು ಹೆಜ್ಜೆ ಮುಂದೆ ಹೋದವಳು ಮತ್ತೆ ಹಿಂದೆ ಬಂದು ನನ್ನ ಕಣ್ಣಿಗೆ ಬೀಳುವಂತೆ ಅದನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಮನೆಗೆ ಹೋದಳು.

ಡೈರಿಯೊಂದಿಗೆ ಬೆಡ್ರೂಮಿಗೆ ಬಂದೆ. ನೀಲ್ ಶೇವ್ ಮಾಡಿಕೊಳ್ಳುತ್ತಿದ್ದ. ಅವ ಸ್ನಾನಗೀನ ಮುಗಿಸುವ ತನಕ ಶಂಖದಹುಳುವಿನ ಫೋಟೋ ಎಡಿಟಿಂಗ್ ಮುಂದುವರಿಸಿದೆ. ಝೂಮ್ ಮಾಡಿದಾಗ- ಕ್ಷಣಾರ್ಧದಲ್ಲಿ ಆನೆಬಲ ದೀರ್ಘ ಸುಖ ಎಂಬ ಶೀರ್ಷಿಕೆಯುಳ್ಳ ಜಾಹೀರಾತು ಕಂಡಿತು. ಇದನ್ನು ಅಪ್ಲೋಡ್ ಮಾಡಿದರೆ ಟ್ರೋಲ್ ಗ್ಯಾರಂಟೀ ಎನ್ನಿಸಿ ಅಲ್ಲಿಗೇ ಕೈಬಿಟ್ಟೆ. ಏನಾದರೂ ಒಂದು ಕೆಲಸ ಹುಡುಕಿಕೊಂಡರೆ ಸರಿ ಈಗ ಅನ್ನಿಸಿ, ಬಾಲ್ಕನಿಯಲ್ಲಿದ್ದ ಕುಂಡಗಳಿಗೆ ನೀರು ಹಾಕತೊಡಗಿದೆ. ಕ್ಯಾಬ್ ಬರುತ್ತಿದ್ದಂತೆ ನೀಲ್ ಕೈಬೀಸಿ ಹೋದ.

ರೂಮಿನ ಬಾಗಿಲನ್ನು ಹಾಕಿಕೊಂಡು ಆ ಡೈರಿಯನ್ನು ತೆರೆದೆ. ಮೊದಲ ಪುಟಕ್ಕೆ ಅರಿಷಿಣ ಕುಂಕುಮ ಹಚ್ಚಲಾಗಿತ್ತು.
“1960ರ ಮೇ 9ರಂದು ನನ್ನ ಮದುವೆ ಅವಧೇಶ್ವರಿಯೊಂದಿಗೆ ನಡೆಯಿತು. ಸಂಸಾರ ರಗಳೆಯಲ್ಲಿ ನಮ್ಮ ದಾಂಪತ್ಯ ಸುಖ ಸೊರಗಬಾರದು, ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಬ್ಬರದೂ ಎಂದು ಮೊದಲ ರಾತ್ರಿಯಲ್ಲಿಯೇ ಅವಧೇಶ್ವರಿಗೆ ಹೇಳಿದೆ. ಆಕೆ ಮೆಲ್ಲಗೆ ತುಟಿಯರಳಿಸಿದಳು. ನಮ್ಮ ರಾತ್ರಿಗಳು ಹೇಗಿರಬೇಕು, ಅವುಗಳಿಗೆ ತಕ್ಕಂತೆ ನಮ್ಮ ಬದುಕು ಹೇಗೆ ಯೋಜಿತವಾಗಿರಬೇಕು ಎನ್ನುವ ಪಟ್ಟಿಯನ್ನು ಅವಳ ಕೈಗಿತ್ತೆ. ಆದರೆ ಕ್ರಮೇಣ ನನ್ನೆಲ್ಲಾ ಆಸೆ ಕನಸುಗಳು ಭಗ್ನವಾಗುತ್ತಾ ಹೋದವು. ಅವಳಿಂದಾಗಿ ಈತನಕ ನಾನು ಅದೆಷ್ಟು ಲಕ್ಷ ಸಾವಿರ ನೂರಾರು ರಾತ್ರಿಗಳನ್ನು ಒಂಟಿಯಾಗಿ ಕಳೆದೆ ಮತ್ತು ನನ್ನೊಳಗಿನ ಶಕ್ತಿಯನ್ನು ವ್ಯರ್ಥ ಮಾಡಿಕೊಂಡೆ.. ಲೆಕ್ಕವೇ ಇಲ್ಲ.”
ಪುಟ ತಿರುಗಿಸಿದೆ.

“ಪ್ರಸ್ತದ ಮರುದಿನವೇ ಮುಟ್ಟು. ನಾಲ್ಕನೇ ದಿನಕ್ಕೆ ತವರು. ಶೂನ್ಯ ಮಾಸವೂ ಮುಗಿಯಿತು. ಮರ್ಹೊತ್ತೂ ಅಡುಗೆ, ಮನೆಗೆಲಸ. ಶ್ರಾವಣಪೂರ್ತಿ ವ್ರತ. ನಾಗರಪಂಚಮಿಗೆಂದು ವಾರಗಟ್ಟಲೆ ತವರು. ದೀಪಾವಳಿಗೆ ಮತ್ತೆ ತವರು. ತುಳಸಿ ಹಬ್ಬಕ್ಕೆಂದು ಮತ್ತೆ ತವರು. ಅದಾಗಲೇ ನೀಲ್ ಅವಳ ಹೊಟ್ಟೆಯಲ್ಲಿ ಮೂಡಲಾರಂಭಿಸಿದ್ದ. ಸಂಕ್ರಮಣಕ್ಕೆಂದು ಹೋದವಳು ಮರಳಿ ಬಂದಿದ್ದು ಮುಂದಿನ ಶ್ರಾವಣ ಮುಗಿಸಿ, ನೀಲ್ನನ್ನು ಎತ್ತಿಕೊಂಡು. ಉಳಿದಂತೆ ಹಿರಿಯರ ಸೇವೆ ಶ್ರಾದ್ಧ ಕರ್ಮ ತಿಥಿ ಗೃಹಪ್ರವೇಶ ಅನಾರೋಗ್ಯ ನೆಂಟರಿಷ್ಟರ ಉಪಚಾರ ಪ್ರವಾಸ ಇನ್ನೂ ಏನೇನೋ”
ಒಂದಿಷ್ಟು ಪುಟ ಹಾರಿಸಿದೆ.

“ಮಗ ಶಾಲೆಗೆ ಹೋಗಲು ಶುರು ಮಾಡುತ್ತಿದ್ದಂತೆ ಬದಲಾಗತೊಡಗಿದಳು. ಕಮ್ಯೂನಿಟಿ ಮೀಟಿಂಗ್ಗಳಿಂದ ಆಕೆಯ ಸ್ವಪ್ರಜ್ಞೆ ಹೆಚ್ಚತೊಡಗಿತು. ಮುರುಟಿದ್ದ ಅವಳ ಭಾಷಣ ಕಲೆ ಚಿಗಿಯತೊಡಗಿತು. ವೇದಿಕೆಗಳಲ್ಲಿ, ಟಿವಿ ಕಾರ್ಯ ಕ್ರಮಗಳಲ್ಲಿ ರಾರಾಜಿಸತೊಡಗಿದಳು. ಅಷ್ಟೊತ್ತಿಗೆ ಸಮಾಜಸೇವಕಿ ಎಂಬ ಐಡೆಂಟಿಟಿ ಪಡೆದುಕೊಂಡಿದ್ದಳು. ಒಂದಿಷ್ಟು ಅವಾರ್ಡುಗಳು ಬಂದವು. ಮಗ ಅವನ ಪಾಡಿಗೆ ಅವ ಬೆಳೆಯುತ್ತಿದ್ದ. ಆದರೆ ನಾನು? ಆಫೀಸಿನಲ್ಲಿ ನಾಲ್ಕು ಮನೆಯಲ್ಲಿ ನಾಲ್ಕು ಒಟ್ಟು ಎಂಟುಗೋಡೆಗಳ ಮಧ್ಯೆ.”
ಮತ್ತೊಂದಿಷ್ಟು ಪುಟಗಳನ್ನು ಹಾರಿಸಿದೆ. ಅದರಲ್ಲಿ ಆ ಪುಡಿ, ಈ ರಸ, ಲೇಹ್ಯ ಮತ್ತು ತೌಡಿನ ಚಟ್ನೀಪುಡಿ ರೆಸಿಪಿಯ ಪೇಪರ್ ಕಟಿಂಗ್ ಕೂಡ ಸಿಕ್ಕಿತು. ಇನ್ನಷ್ಟು ಪುಟಗಳನ್ನು ಹಾರಿಸಿದೆ, “ಇವಳ ಅಹಂಕಾರಕ್ಕೆ ನನ್ನ ಶಕ್ತಿಯೇನೂ ಉಡುಗಿಲ್ಲ, ಅದು ಭದ್ರವಾಗಿ ನನ್ನೊಳಗೇ ಅಡಗಿದೆ…” ಈ ಸಾಲನ್ನು ಸ್ಕೆಚ್ಪೆನ್ನಲಿ ಬರೆದು, ಅದರ ಮುಂದೆ ಸಣ್ಣದಾಗಿ ಸಿಂಹದ ಮುಖ ಬಿಡಿಸಲಾಗಿತ್ತು.

“ವಿಚ್ಛೇದನವೆಂದರೆ ಅಂತ್ಯವಲ್ಲ. ಆರಂಭ, ಸಂಭ್ರಮ. ಇಂದು ಯಾವುದೇ ಕ್ಷೇತ್ರ ಗಮನಿಸಿ, ಒಬ್ಬಂಟಿಗರಿಂದಲೇ ಸಾಮಾಜಿಕ ಕೊಡುಗೆ ಹೆಚ್ಚು ಲಭಿಸಿರುವುದು”

ಆಂಜನಪ್ಪ ಜೇಬಿನಿಂದ ಮೆಲ್ಲಗೆ ಕರ್ಚೀಫು ತೆಗೆದು, ಕಳೆದವಾರ ನನ್ನ ಟೇಬಲ್ ಮೇಲೆ ಪೇರಿಸಿಟ್ಟಿದ್ದ ಪುಸ್ತಕಗಳ ಮೇಲೆ ತಾನೇ ಇಟ್ಟು ಹೋಗಿದ್ದ ತನ್ನ ಪುಸ್ತಕದ ಧೂಳನ್ನು ಮೆಲ್ಲಗೆ ಒರೆಸಿದ.

ಕಥೆಯ ಮುಂದಿನ ಕಂತು ಕಾಫಿಯೊಂದಿಗೆ ಕಾಯುತ್ತಿತ್ತು.

ಮಿನುಗುತಾರೆ ರಾತ್ರಿಯ ಅಡುಗೆ ಮಾಡುತ್ತ ಯಾರೊಂದಿಗೋ ಫೋನಿನಲ್ಲಿ, “ಏನೂ ಯೋಚ್ನೆ ಮಾಡ್ಬೇಡಿ ಆರಾಮಾಗಿದ್ದ ಬನ್ನಿ” ಅನ್ನುತ್ತಿದ್ದಳು. ಅರ್ಧಗಂಟೆಯ ನಂತರ ಡೈನಿಂಗ್ ಟೇಬಲ್ ಮೇಲೆ ಅಡುಗೆ ಇಟ್ಟು ತನ್ನ ಮನೆಗೆ ಹೋದಳು. ನೀಲ್ನ ಅಪ್ಪನನ್ನು ಊಟಕ್ಕೆ ಕರೆಯೋಣವೆಂದು ರೂಮಿನ ಬಳಿ ಹೋದೆ. ನಾನು ಬಂದಿದ್ದು ಗೊತ್ತಾಗಿ ಅವರು ತಕ್ಷಣವೇ ಚಾನೆಲ್ ಬದಲಿಸಿ, “ಏ ಏನಾದರೂ ಬೇಕಿತ್ತಾ?”, ನೀಲ್ನ ಅಮ್ಮ… ಅಂದೆ. “ಓಹ್ ಹೇಳುವುದು ಮರೆತೆ, ಆಕೆಯ ಮೀಟಿಂಗ್ ಮುಗಿಯೋದು ತಡವಾಯ್ತಂತೆ ಗೆಳತಿಯ ಮನೆಯಲ್ಲಿದ್ದು ನಾಳೆ ಬರ್ತೀನಿ ಅಂತ ಮಿನುಗುತಾರೆಗೆ ಫೋನ್ ಮಾಡಿದ್ದಳಂತೆ. ನೀನು ಊಟ ಮಾಡಿ ಮಲಗಿಕೋ” ಅಂದರು.

ವೀಕೆಂಡ್ ಕಾಲಿಡುತ್ತಿದ್ದರೂ ನಿದ್ರೆ ಮಾತ್ರ ದೂರವೇ ಸರಿಯುತ್ತಿತ್ತು. ಹಾಗಾಗಿ ವೆಬ್ ಸೀರೀಸ್ ನೋಡುತ್ತ ತಡವಾಗಿ ನಿದ್ರೆ ಹೋದೆ. ನೀಲ್ ಬಂದಾಗಲೇ ಬೆಳಗಾಗಿದೆ ಎಂಬ ಅರಿವಾಗಿದ್ದು. ಬಾಲ್ಕನಿಯಲ್ಲಿ ಅವ ಯಾರೊಂದಿಗೋ, “ಬೇಡ, ನನಗೆ ನೈಟ್ ಶಿಫ್ಟೇ ಇರಲಿ. ನನಗದೇ ಕಂಫರ್ಟೇಬಲ್” ಅನ್ನುತ್ತಿದ್ದ. ಅವನ ಮಾತು ಮುಗಿದ ಮೇಲೆ ಎದ್ದು ಬಾಲ್ಕನಿಗೆ ಹೋದೆ. “ಎಲ್ಲರೂ ಡೇ ಶಿಫ್ಟಿಗೆ ಕಾಯ್ತೀರ್ತಾರೆ. ನೀನ್ಯಾಕೆ ನೈಟ್ ಶಿಫ್ಟೇ ಇರಲಿ ಅಂತಿದೀಯಾ?”, “ಈಗ ನಿದ್ರೆ ಬರ್ತಿದೆ, ತಿಂಡಿ ತಿಂದು ಮಲಗೆದ್ದು ಮಾತಾಡ್ತೀನಿ” ಅಂದ. ಕನ್ನಡಿಯ ಮುಂದೆ ನಿಂತೆ. ತಲೆಗೂದಲೆಲ್ಲ ಒಣಗಿ ಸಿಕ್ಕುಸಿಕ್ಕಾಗಿದ್ದವು. ಎಣ್ಣೆ ಹಚ್ಚಿ ತಲೆಸ್ನಾನ ಮಾಡುವುದು ಬೋರ್ ಎನ್ನಿಸಿ ಸ್ಪಾಗೆ ಹೋದೆ. ಮನೆಗೆ ಬಂದಾಗ ಮಧ್ಯಾಹ್ನ ಮೂರಾಗಿತ್ತು. ನೀಲ್ ಆಗಷ್ಟೇ ಎದ್ದು ಊಟ ಮಾಡುತ್ತಿದ್ದ. ಬೇಗ ಊಟ ಮಾಡು ಆಚೆ ಹೋಗೋಣ ಅಂದ.

ಕಾರು ಕನಕಪುರ ರಸ್ತೆಯ ಮಾಮೂಲಿ ಕೆಫೆಯ ಮುಂದೆ ನಿಂತಿತು. ಒಮ್ಮೆ ಆಕಾಶವನ್ನೂ ನೀಲ್ನ ಮುಖವನ್ನೂ ನೋಡಿದೆ. ಮಳೆಬರುವ ಎಲ್ಲಾ ಲಕ್ಷಣಗಳೂ ಇದ್ದವು. ಎದುರು ಕುಳಿತು ಕಾಫೀ ಹೀರುತ್ತಿದ್ದವ ಸ್ವಲ್ಪಹೊತ್ತಿಗೆ ಎದ್ದು ಬಂದು ಪಕ್ಕದಲ್ಲಿ ಕುಳಿತ. ಅವನ ತಲೆಗೂದಲಿನಲ್ಲಿ ಕೈಯ್ಯಾಡಿಸಿದೆ. ಆತುಕೊಂಡು ಕುಳಿತ.
“ನಾಳೆ ನೀ ನಿಮ್ಮ ಮನೆಗೆ ಹೊರಡಬೇಕಲ್ಲ?”
“ಹೌದು ಅದಕ್ಕಿನ್ನೂ ಸಮಯವಿದೆಯಲ್ಲ”
“ಸುಮಾರು ಎಂಟು ತಿಂಗಳ ಈ ಡೇಟಿಂಗ್ ಮತ್ತು ಒಂದು ವಾರದ ತನಕ ನಮ್ಮ ಮನೆಯಲ್ಲಿ ನನ್ನೊಂದಿಗೆ ವಾಸ. ಈಗಲಾದರೂ ಹೇಳು, ನನ್ನ ಬಗ್ಗೆ ನಿನಗೆ ಏನು ಅಭಿಪ್ರಾಯ ಮೂಡಿದೆ?”
“ಏಯ್ ಅದು ನಂತರ ಮಾತನಾಡೋಣ. ಆದರೆ, ಬೆಳಗ್ಗೆ ನೀನು ಫೋನ್ನಲ್ಲಿ ನೈಟ್ ಶಿಫ್ಟೇ ಕಂಫರ್ಟೇಬಲ್ ಎಂದು ಯಾರಿಗೋ ಹೇಳುತ್ತಿದ್ದೆಯಲ್ಲ, ಏನದು?”
“ಅದಾ, ನನ್ನ ಮ್ಯಾನೇಜರ್ಗೆ”
“ಆರ್ ಯೂ ಓಕೆ?”
“ಹಾಂ ನನಗೇನಾಗಿದೆ?”
“ಅಲ್ಲಾ ನಾಳೆ ನಾವು ಮದುವೆಯಾದಮೇಲೂ ನೀನು ನೈಟ್ ಶಿಫ್ಟ್ನಲ್ಲಿಯೇ?”
“ಅದು ಬಿಡು ನಿನಗೆ ನಮ್ಮ ಮನೆ, ಮನೆಮಂದಿಯೆಲ್ಲ ಇಷ್ಟವಾದರಾ?”

ಅವನ ಕಣ್ಣೊಳಗೆ ಮೋಡ ಕಟ್ಟಿಕೊಳ್ಳತೊಡಗಿತು. ಹೊರಗೆ ಧಾರಾಕಾರ ಮಳೆ ಸುರಿಯುತ್ತಿತ್ತು. ನನ್ನ ಕೈ ಹಿಡಿದುಕೊಂಡ.

“ನಾನು ಆರು ವರ್ಷದವನಿದ್ದಾಗ ಅಜ್ಜಿ ತೀರಿದರು. ಆನಂತರವಷ್ಟೇ ಅಪ್ಪ ಅಮ್ಮನೊಂದಿಗೆ ಮಲಗಲು ಶುರು ಮಾಡಿದ್ದು. ಒಮ್ಮೊಮ್ಮೆ ಮಧ್ಯೆ ಎಚ್ಚರವಾಗಿ ಅಮ್ಮ ಅಪ್ಪನನ್ನು ಹುಡುಕಿದರೆ ಇಬ್ಬರೂ ಇರುತ್ತಿರಲಿಲ್ಲ. ನನ್ನ ಅಳುವ ದನಿ ಕೇಳಿ ಅಮ್ಮ ಮಾತ್ರ ಓಡಿ ಬರುತ್ತಿದ್ದರು. ಅಮ್ಮನ ಕೂದಲೆಲ್ಲಾ ಕೆದರಿರುತ್ತಿತ್ತು, ಗಾಬರಿಯಲ್ಲಿರುತ್ತಿದ್ದಳು. ಎಷ್ಟೋ ಸಲ ಅಪ್ಪ ಗೊರಕೆ ಹೊಡೆಯುತ್ತಿದ್ದರೆ ಅಮ್ಮ ರಾತ್ರಿಯೆಲ್ಲಾ ಕುರ್ಚಿಯಲ್ಲಿ ಅಳುತ್ತ ಕುಳಿತಿರುತ್ತಿದ್ದರು. ಒಮ್ಮೆ ಏನಾಯಿತೆಂದರೆ, ಮಧ್ಯರಾತ್ರಿ ಅಪ್ಪ ಮನೆಬಿಟ್ಟು ಹೊರಟಿದ್ದರು. ಅಮ್ಮ ಅವರ ಕಾಲುಹಿಡಿದು ಕುಳಿತಿದ್ದರು. ಮುಂದೆ ಒಂದು ವರ್ಷದ ನಂತರ ನನ್ನನ್ನು ಬೇರೆ ಕೋಣೆಯಲ್ಲಿ ಮಲಗಿಸಲಾರಂಭಿಸಿದರು. ಅಮ್ಮ ನನ್ನೊಂದಿಗೆ ಮಲಗಿದರೆ ಅಪ್ಪ ಅವಳ ಕೈಹಿಡಿದು ತಮ್ಮ ರೂಮಿಗೆ ಎಳೆದೊಯ್ಯಲು ನೋಡುತ್ತಿದ್ದರು. ಆದರೆ ಆಕೆ ನನಗೆ ಇಷ್ಟವಿಲ್ಲ ಎಂದು ಬೇಡಿಕೊಳ್ಳುತ್ತಿದ್ದಳು.”
ಹೊರಗೆ ಮಳೆ ನಿಂತಿತು. ನೀಲ್ನ ಕಣ್ಣುಗಳಲ್ಲಿನ ಮೋಡ ಕರಗಿದವು.

“ನನ್ನ ಪುಸ್ತಕ ಮರುಮುದ್ರಣಕ್ಕೆ ಹೋಗುತ್ತಿದೆ ಇದೇ ಖುಷಿಗೆ ಒಂದೊಳ್ಳೆ ಊಟ ಮಾಡೋಣ್ವಾ?” ಆಂಜನಪ್ಪ ಡ್ರೈಫ್ರೂಟ್ಸ್ ಗಿಫ್ಟ್ ಪ್ಯಾಕ್ ತಂದು ಟೇಬಲ್ ಮೇಲಿಟ್ಟ.
“ಡೆಡ್ಲೈನ್ ಇದೆ”
“ಅರೆ! ನಿಮ್ಮ ಚೇಂಬರ್ನಲ್ಲಿ ಏನೋ ಬದಲಾವಣೆ”
“ಪುಸ್ತಕಗಳ ಮೇಲಿನ ಧೂಳಿನಿಂದಾಗಿ ಅಲರ್ಜಿ ಶುರುವಾಯ್ತು. ಹಾಗಾಗಿ ನಿನ್ನೆಯಷ್ಟೇ ಎಲ್ಲವನ್ನೂ ಸಾಗಿಸಿಬಿಟ್ಟೆ”
ಪಿಡಿಎಫ್ ಫೈನಲ್ ಮಾಡಿ ಚೇಂಬರ್ಗೆ ಮರಳುವಷ್ಟರಲ್ಲಿ ಕೊನೆಯ ಕಂತನ್ನು ಬರೆಯಬೇಕಿದ್ದ ಕಥೆಗಾರರಿಂದ ಮೆಸೇಜ್, ಮಿಸ್ಡ್ ಕಾಲ್ಗಳಿದ್ದವು. ವಾಪಾಸು ಫೋನ್ ಮಾಡಿದೆ.

ಕಥೆಗಾರರು ನಿರುತ್ಸಾಹದಿಂದ ಮಾತನಾಡಿದರು. “ಈವರೆಗೆ ಬರೆದವರಿಗೆ ಪಾತ್ರಗಳ ಭವಿಷ್ಯದ ಬಗ್ಗೆ ಜವಾಬ್ದಾರಿಯಿರಲಿಲ್ಲ. ಅದನ್ನು ಬೇರೆ ಯಾರೋ ಬರೀತಾರಲ್ಲ. ನಿನ್ನೆಯೂ ಇಲ್ಲ ನಾಳೆಯೂ ಇಲ್ಲ ಅನ್ನೋ ಹಾಗೆ ಪಾತ್ರಗಳ ಸ್ವೇಚ್ಛೆ.”
“ಹೊಸ ಕಾಲದ ಕಥೆಯಲ್ವ? ಈವತ್ತಿನದು ಈವತ್ತಿಗೆ.”
“ಆದರೆ ಮುಗಿಸುವ ಸಮಯ ಬಂದಾಗ ಹಿಂದಿನದಕ್ಕೆಲ್ಲ ಜವಾಬ್ದಾರಿ ತಗೋಬೇಕಲ್ಲ. ಈ ಕ್ಷಣವೂ ಬರತ್ತೆ ಅನ್ನೋದು ವರ್ತಮಾನವಷ್ಟೇ ಜೀವನ ಅಂತ ಬದುಕೋವಾಗ ಗೊತ್ತಿರಬೇಕು ಅಂತನ್ನೋದು ನಾನು. ಇರಲಿ ಬಿಡಿ ಬೇಗ ಕಳಸ್ತೀನಿ.”

ನಾಲ್ಕು ದಿನಗಳ ನಂತರ ಕೊನೆಯ ಕಂತು ಕೈಸೇರಿಯೇ ಬಿಟ್ಟಿತು.

ಮರುದಿನ ನನ್ನ ಲಗೇಜ್ಅನ್ನು ನೀಲ್ ಕಾರಿನೊಳಗೆ ಇಡಲು ಹೋದ. ಮಿನುಗುತಾರೆ ತಟ್ಟೆಯಲ್ಲಿ ಫಲತಾಂಬೂಲವನ್ನು ತಂದಳು. ನೀಲ್ನ ಅಮ್ಮ ಕೆಂಪು ಮೈಸೂರು ಸಿಲ್ಕ್ ಸೀರೆಯನ್ನು ಹಿಡಿದು ಮುಂದೆ ಬಂದರು. ಟೀ ಶರ್ಟ್ನ ತುದಿ ಚಾಚಿ ಇಸಿದುಕೊಂಡೆ. ಮಿನುಗುತಾರೆ ತಟ್ಟೆಯಲ್ಲಿದ್ದ ಫಲತಾಂಬೂಲವನ್ನು ಚೀಲಕ್ಕೆ ಹಾಕಿ ಕೊಟ್ಟಳು. ನನ್ನ ಬ್ಯಾಗ್ನಲ್ಲಿದ್ದ ಮೇಕಪ್ ಕಿಟ್ ಅನ್ನು ಅವಳ ಕೈಲಿದ್ದ ತಟ್ಟೆಗೆ ಇಟ್ಟೆ. ಆಕೆ ಸೊಂಟಕ್ಕೆ ಸಿಕ್ಕಿಸಿದ ಸೆರಗಿನ ತುದಿಯನ್ನು ಬಿಚ್ಚಿಕೊಂಡಳು. ಅದು ಮುರಿಗೆ ಬಿಚ್ಚಿಕೊಳ್ಳುತ್ತ ಭೂಮುಖವಾಗಿ ಇಳಿಬಿದ್ದಿತು. ಒಳಗೆ ಬಂದ ನೀಲ್ ಮೆಟ್ಟಿಲು ಹತ್ತುತ್ತಿದ್ದ. ಏನು ಅಂದೆ. ಕಣ್ಣಲ್ಲೇ ಸನ್ನೆ ಮಾಡಿ, ವಾಪಾಸು ಬರುವುದಾಗಿ ಹೇಳಿದ.

ನೀಲ್ನ ಅಮ್ಮ ರೂಮಿಗೆ ಕರೆದೊಯ್ದು ಕಪಾಟಿನಿಂದ ರೂಬಿ ಬಳೆಗಳಲ್ಲಿ ಒಂದನ್ನು ನನ್ನ ಕೈಗೆ ಹಾಕಿ ಇನ್ನೊಂದನ್ನು ತಾವು ಹಾಕಿಕೊಂಡರು. ನೀಲ್ ತನ್ನ ಲಗೇಜ್ ಸಮೇತ ಕೆಳಗೆ ಬಂದ! ನೀಲ್ನ ಅಪ್ಪನಿಗೆ ಬೈ ಹೇಳಲೆಂದು ಇಬ್ಬರೂ ಅವರ ರೂಮಿಗೆ ಹೋದೆವು. ಅವರು ಸಾಮು ತೆಗೆಯುತ್ತಲೇ ಕೈಸನ್ನೆಯಲಿ ವಿದಾಯ ಹೇಳಿದರು.

“ಅಮ್ಮಾ, ಇನ್ನು ಮೇಲಿಂದ ಗಮ್ಯಾ ಮತ್ತವಳ ಅಪ್ಪ ಅಮ್ಮನೊಂದಿಗೆ ಇರಬೇಕೆಂದು ತೀರ್ಮಾನಿಸಿದ್ದೇನೆ. ಗಮ್ಯಾ, ಇದಕ್ಕೆ ನಿನ್ನ ಮತ್ತು ನಿಮ್ಮ ಮನೆಯವರಿಂದ ಒಪ್ಪಿಗೆ ಸಿಗಬಹುದಲ್ಲವೆ?” ನೀಲ್ ಇಬ್ಬರ ಒಪ್ಪಿಗೆಗಾಗಿ ಮುಖ ನೋಡಿದ. ನನ್ನ ಖುಷಿಯನ್ನು ಹತ್ತಿಕ್ಕಲಾಗದೇ ಮೆಲ್ಲಗೆ ಅವನ ಕೈಯನ್ನು ಹಿಸುಕಿದೆ. ಅವನ ಅಮ್ಮನ ಮುಖ ಏಳುಸುತ್ತಿನ ಮಲ್ಲಿಗೆಯಂತೆ ಒಂದೊಂದೇ ಸುತ್ತು ಅರಳುತ್ತಿತ್ತು.

ನಾವಿಬ್ಬರೂ ಸೇರಿ ಮದುವೆ ಡೇಟ್ ಫಿಕ್ಸ್ ಮಾಡಿ ತಿಳಿಸುತ್ತೇವೆ ಎಂದು ಹೇಳುತ್ತ ಕಾರ್ ಏರಿ ಹೊರೆಟೆವು. ಐದು ನಿಮಿಷಕ್ಕೆ ಇಬ್ಬರ ಮೊಬೈಲ್ಗೂ ಅವಧೇಶ್ವರಿಯವರ ಮೆಸೇಜ್ ಬಂದಿತು; “ಮುಂದಿನ ವಾರದಿಂದ ನನ್ನ ವಿಳಾಸ ಬದಲಾಗುತ್ತದೆ, ಪ್ರೀತಿಯಿರಲಿ.” ಕೆಳಗೆ ತೋಟದ ಮನೆಯ ವಿಳಾಸವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.