ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಲ್. ವೇಣು ಅವರ ಸಣ್ಣ ಕಥೆ: ಸೋಲೊಪ್ಪದವಳು

Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬಿ.ಎಲ್. ವೇಣು

ಪ್ರಾಯಶ: ಹೆಣ್ಣು ಎಲ್ಲರ ಪಾಲಿನ ಪ್ರಶ್ನೆಯಗೋದು, ಬದುಕಬಾರದ ರೀತಿಯಲ್ಲಿ ಬದುಕುವಂತಾದಾಗ, ಪ್ರಶ್ನೆಯಾದರೆ ಉತ್ತರ ಕಂಡುಕೊಳ್ಳಬಹುದೇನೋ, ಸಮಸ್ಯೆಯಾದರೆ? ನಳಿನಿಯು ಅತ್ತೆ ಜಾನಕಮ್ಮನ ಪಾಲಿಗೆ ಬಿಡಿಸಲಾರದ ಪ್ರಶ್ನೆಯಾಗಿದ್ದರ ಫಲ, ಅತ್ತೆಯ ಅನಾದರ, ನಾದಿನಿಯರ ಸದರ ಗಂಡ ಜಗಧೀಶನ ಪ್ರೀತಿಯಿಂದಲೂ ಬಹುದೂರ. ಅಂದರೆ ಅಂವಾ ಪ್ರೀತಿಸುವುದೇ ಇಲ್ಲವೆಂಬಂತ್ತಿಲ್ಲ. ಏಕೆಂದರೆ ಅವರಿಬ್ಬರೂ ಎಂದಾದರೂ ಯಾತಕ್ಕಾದರೂ, ಜಗಳವಾಡಿದ್ದನ್ನು ಮನೆಯವರೇನು ನೆರೆಹೊರೆಯವರೂ ಕಂಡಿದ್ದಿಲ್ಲ. ಕನಿಷ್ಠ ಮುನಿಸಿಕೊಂಡಿದ್ದನ್ನು ಅರಿಯರು. ಜಗಧೀಶ ಖಂಡಿತ ಪ್ರೀತಿಸುತ್ತಾನೆ. ಮೈನಕಾವು ಎದ್ದಾಗ ಹೆಂಡತಿ ಮಗ್ಗಲಲ್ಲಿ ಮಲಗೇಳುವುದೇ “ಪ್ರೀತಿ” ಎಂದವನ ತಿಳುವಳಿಕೆ ನಳಿನಿಯೋ ಭಾವನೆಗಳ ಮೂಟೆ ಬೇಗನೆ ಅತ್ತು ಬಿಡುತ್ತಾಳೆ. ಅಷ್ಟೇಬೇಗ ನಗಲೂ ಬಲ್ಲಳು. ಸಿನಿಮಾ ಮತ್ತು ಟಿ.ವಿಗಳಲ್ಲಿ ಕಾಣುವ ಗಂಡ ಹೆಂಡರ ಅನ್ಯೋನ್ಯತೆ ಪರವಶತೆ ಹುಡುಗಾಟ ಚಿನ್ನಾಟಗಳನ್ನು ನಿತ್ಯವೂ ನೋಡಿ ದಾಂಪತ್ಯವೆಂದರೆ ಹೀಗೆ ಎಂದು ನಂಬಿದವಳು, ನಂಬಿ ಪುಳಕಗೊಂಡವಳು. ಆದರೆ ತನ್ನ ಅಪ್ಪ ಅಮ್ಮ ಟಿ.ವಿ ದಲ್ಲಿ ಕಾಣುವ ಜೋಡಿಗಳಂತಿರದೆ ಸದಾ ಕಚ್ಚಾಡುವುದನ್ನು ನೋಡಿಯೂ ಭ್ರಮ ನಿರಸನಗೊಂಡವಳಲ್ಲವೇ ಅಲ್ಲ. ಅಪ್ಪನ ಕಡಿಮೆ ಸಂಬಳದಲ್ಲಿ ತನ್ನನ್ನು ಸೇರಿಸಿ ಮೂವರು ತಮ್ಮಂದಿರು ಅಮ್ಮ, ಈ ಎಲ್ಲರ ಬಾಯಿಗಳೂ ಒಬ್ಬರ ದುಡಿಮೆಯಿಂದ ತುಂಬಲಾಗದ ಕಷ್ಟದಿಂದಾಗಿ ಸದಾ ಪ್ಯಾಮಿಲಿ ಪೈಟ್ ನಡೆಯೋದೆಂದು ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಳ್ಳಬಲ್ಲ ವಿವೇಕಿ. ಇಂತಿಪ್ಪ ನಳಿನಿ ಎದೆ ಉದ್ದ ಬೆಳೆದು ನಿಂತಾಗ ಮೊಟ್ಟಮೊದಲ ಸಲ ಹೆತ್ತವರ ಪಾಲಿಗೆ ಪ್ರಶ್ನೆಯಾದಳು. ಮನೆಯ ಕಸ, ಮುಸರೆ, ಬಟ್ಟೆ ಎಲ್ಲಾ ತಾನೆ ನೋಡಿಕೊಂಡು ನಂತರ ಕಾಲೇಜಿಗೆ ಹೋದರೂ ತಾಯಿಗೆ ಅವಳು ಓದುವುದೇ ಅಸಮಾಧಾನ. ಇದೇ ವೆಚ್ಚವನ್ನು ಕೂಡಿಟ್ಟರೆ ಗಂಡು ಮಕ್ಕಳ ಓದಿಗಾದೀತೆಂಬ ಲೆಕ್ಕಾಚಾರ. ಯಾಕಮ್ಮ ಸಿಡಿಸಿಡಿ ? ತಾನು ಓದಿ ಕೆಲಸ ಹಿಡಿದು ತಮ್ಮಂದಿರಿಗೆ ಓದಿಸುತ್ತೇನಲ್ಲ ವೆಂದರೂ ತಾಯಿಯ ಅಸಹನೆಗೆ ಮಿತಿಯಿಲ್ಲ. ‘ಅದೆಲ್ಲಾ ಎಂತಕ್ಕೆ ಯಾರಾಯ್ತಿ? ನೀಸು ಮದುವೆಯಾಗಿ ಗಂಡನ ಮನೆಗೆ ಹೋದರದೇ ಭಾಗ್ಯ ನಮಗಷ್ಟುಸಾಕು’ ಅಮ್ಮನು ಅದೇ ಹಳೆ ರೆಕಾರ್ಡ್ ಅಸಹಕಾರದ ನಡುವೆಯೂ ಪಿಯುಸಿ ಫಸ್ಟ್‍ಕ್ಲಾಸ್‍ನಲ್ಲಿ ಮುಗಿಸಿದರೂ ಅಪ್ಪ ಮುಂದೆ ಓದಲು ಸುತ್ರಾಂ ಒಪ್ಪಲಿಲ್ಲ. ಪೀಡಿಸಿದಾಗ ಅಂದಿದ್ದ “ನೀನು ಹೆಚ್ಚು ಓದಿದರೆ ನಿನಗಿಂತ ಹೆಚ್ಚು ಓದಿದ ವರನನ್ನು ನಾನೆಲ್ಲಿಂದ ತರ್ಲಿ?” ಎಂದು ದುರುಗುಟ್ಟಿದ್ದ ಅಪ್ಪ. ಹೀಗಾಗಿ ಓದು ಕ್ಯಾನ್ಸಲ್ ಆಗಿ ಮನೆ ಕೆಲಸವೇ ಫುಲ್ ಟೈಮಾತು. ಅವಳನ್ನು ನೋಡಲು ವರಗಳೂ ಆಗೀಗ ಬಂದವು ಬಂದವರು ಒಪ್ಪದಷ್ಟು ಅವಳೇನು ಕರಾಬಾಗಿರಲಿಲ್ಲವಾದರೂ ಅವಳಪ್ಪನ ಬಳಿ ಕೇಳಿದಷ್ಟು ವರದಕ್ಷಿಣೆ ಪೀಕಲು ಕಾಸಿಲ್ಲವಾಗಿ ವರ್ಷಗಳುರುಳಿದರೂ ಮನೆಯಲ್ಲೇ ಟೆಂಟ್ ಹೊಡೆದು ಪ್ರಶ್ನೆಯಾಗದೆ ಸಮಸ್ಯೆಯಾದಳು. 
ತಾಯಿಯ ಗೊಣಗಾಟ, ಊಟಕ್ಕೆ ಒದಗಿಸಲಾಗದ ತಂದೆಯ ಪೇಚಾಟ ನೋಡಲಾರದೆ ತಾನೇ ಅಲ್ಲಿಲ್ಲಿ ಎಡತಾಕಿ ಜನತಾ ಬಜಾರ್‍ನಲ್ಲಿ ಕೆಲಸಗಿಟ್ಟಿಸಿಕೊಂಡಳು. ಕೊಡುವ ಆರು ಸಾವಿರ ರೂಪಾಯಿಗೆ ಡೇ ಅಂಡ್ ನೈಟ್ ದುಡಿಯಬೇಕಿತ್ತು. ದುಡಿದಳು. ಕಿಂಚಿತ್ತೂ ಬೇಸರಿಸದೆ ಮನೆಯಲ್ಲೂ ಬೇಯಿಸಿಟ್ಟು ಹೋಗಿ ಜನತಾ ಬಜಾರ್‍ನಲ್ಲೂ ಬೆಂದಳು. ಬೆಂದು ಕರಕಲಾಗುವಷ್ಟರಲ್ಲಿ ಅದೆಷ್ಟೋ ಗಂಡುಗಳು ಅವಳನ್ನು ನೋಡಲು ಬಂದರು ಹೋದರು. ಕೇಸರಿ ಬಾತು, ಉಪ್ಪಿಟ್ಟು ವೇಸ್ಟ್ ಆದವಷ್ಟೆ. ಬಂದವರ ನೋಟಕ್ಕೆ ನಳಿನಿ ಕಲ್ಲಾಗಿದ್ದರೆ ಕರಗಿ ಹೋಗಿಬಿಡುತ್ತಿದ್ದಳೇನೋ. ಅವಳೂ ಕಲ್ಲಗಿಂತ ಸ್ಟ್ರಾಂಗು ಬಂದವರು ನಳಿನಿಯನ್ನೇನು ಅಲ್ಲಗಳೆಯಲಿಲ್ಲವಾದರೂ ಅವಳಪ್ಪ ಚೌಕಾಸಿ ವ್ಯವಹಾರಕ್ಕಿಳಿದಾಗ ತಿಳಿಸುತ್ತೇವೆಂದು ಹೋದವರು ಫೋನ್ ಮಾಡಿದರೂ ಎತ್ತಲಿಲ್ಲ. ಇರುವ ಒಬ್ಬ ಮಗಳನ್ನು ಕಷ್ಟವೋ, ಸುಖವೋ, ಸಾಲವೋ, ಮದುವೆ ಮಾಡಿ ಗಂಡನ ಮನೆಗೆ ದಾಟಿಸೋದು ತಂದೆಯಾದವನ ಕರ್ತವ್ಯ ಎಂದು ನೆರೆಹೊರೆ ಬುದ್ಧಿ ಹೇಳಲಾರಂಭಿಸಿದಾಗ ಬೇಸತ್ತ ಅವಳ ತಾಯಿಯೂ ಗಂಡನ ಮೇಲೆ ಕದನಕ್ಕೆ ನಿಂತಳು. ಒಟ್ಟಿನಲ್ಲಿ ಮನೆಯಲ್ಲಿ ನೆಮ್ಮದಿಯಿಲ್ಲ ಸದಾ ಜಗಳ ಗಂಡ ಹೆಂಡಿರೆಂದರೆ ಹೀಗೆನೆನೋ ಅನ್ನಿಸುವಾಗ ಇಂತಹ ಮದುವೆ ಆಗಬೇಕೆ ಎಂಬಷ್ಟು ಕನಲಿದಳು. ಅವಳು ಹೀಗೆ ಕನಲಿ ಕಂಗಲಾದಾಗ ಅವಳ ಮನದ ಮೇಲೆ ತಂಗಾಳಿ ಬೀಸುತ್ತಿದ್ದವರು ಟಿ.ವಿ ದಾರಾವಾಹಿಗಳಲ್ಲಿ ಸಿಮೆಮಾಗಳಲ್ಲಿ ಮುದ್ದಾಡುವ ಹಿರೋ-ಹಿರೋಯಿನ್‍ಗಳು. ತನ್ನ ತಾಯಿಯ ಬಾಣಂತನ ಮಾಡಿ ತಮ್ಮಂದಿರನ್ನು ಸಾಕಿಸಾಕಿಯೇ ತಾನು ತಾಯಿಯಾಗಬೇಕು ಮಕ್ಕಳನ್ನು ಮುದ್ದಾಡಬೇಕು ಎಂದಾಶೆಯ ಗೋಪುರ ಕಟ್ಟಿಕೊಂಡವಳು.

****

ಇತ್ತೀಚೆಗೆ ನಳಿನಿಯನ್ನು ನೋಡಲು ಗಂಡುಗಳೇ ಬರದಂತಾದಾಗ ಚಿಂತೆಗೆ ಬಿದಿದ್ದು ಅವಳೇ ಅವಳೊಬ್ಬಳೆ. ಅವಳ ದುಡಿಮೆಯಿಂದ ಮನೆ ಪರಿಸ್ಥಿತಿ ಸುಧಾರಿಸುತ್ತಿರುವಾಗ ಆಗೋದೆಲ್ಲಾ ಒಳ್ಳೇದಕ್ಕೆ ಎಂಬ ಅಮೂರ್ತಭಾವ ಹೆತ್ತವರದ್ದು, ದಿನಗಳೆದಂತೆ ಅವಳಿಗೂ ಗಂಡುಗಳ ಎದುರು ಪ್ಯಾಕನ್ ಪರೇಡ್ ಮಾಡುತ್ತಾ ಟಿಫಿನ್ ಸಪ್ಲೆ ಮಾಡೋದು ತಪ್ಪಿಲ್ಲವೆಂಬ ನಿರಾಳ. ಅವಳೆ ವ್ಯಕ್ತಿತ್ವವೇ ಹಾಗೆ – ಯಾವ ಪಾತ್ರೆಗೆ ಹಾಕಿದರೆ ಅದೇ ಆಕಾರ ತಾಳುವ ನೀರಿನಹಾಗೆ. ಎಂತಹ ಕಷ್ಟಕ್ಕಾದರೂ ಅಂಜದ ಯಾರೊಂದಿಗಾದರೂ ಹೊಂದಿಕೊಳ್ಳುವಷ್ಟು ಪ್ಲೇಕ್ಸಿಬಲ್, ಸ್ವಂತಿಕೆಯೇ ಇಲ್ಲವೇನೋ ಎಂಬಷ್ಟು ಡೌಟ್‍ಫುಲ್, ನಳಿನಿಯವರಾನೈಷಣೆಯ ಅವಧಿ ಡೇಟ್ ಎಕ್ಸ್‍ಪೈರ್ ಆದಗಲೂ ಹತಾಶಳಾಗದೆ ಸಿಕ್ಕಿದ ಬದುಕಿನ ನದಿಯಲ್ಲೇ ಹುಟ್ಟು ಹಾಕುತ್ತಾ ಲೈಫು ಇಷ್ಟೇನೆ ಅಂದುಕೊಳ್ಳುವಾಗಲೇ ಅವಳ ದೋಣಿಯನ್ನೇರಲು ಒಬ್ಬ ಎರಡನೇ ದರ್ಜೆ ಗುಮಾಸ್ತ ಬರಬೇಕೆ! ನೋಡಿದ ಒಪ್ಪಿದ ಅವನಿಗೂ ವಯಸ್ಸಾಗಿತ್ತು. ಸದ್ಯ ಸೆಕೆಂಡ್ ಹ್ಯಾಂಡ್ ಆಗಿರಲಿಲ್ಲ. ವರದಕ್ಷಿಣೆ ವರೋಪಚಾರ ಅಂತೆಲ್ಲಾ ತೀರಾ ರಿಜಿಡ್ ಆಗದೆ ಅವನು, ಅವನ ಮನೆಯೋರು ಕೊಟ್ಟಷ್ಟಕ್ಕೇ ರಾಜಿಯಾದ್ದರಿಂದ ಜಗಧೀಶ ವೆಡ್ಸ್‍ನಳಿನಿ ಓಲಗ ಊದಿಸಿಕೊಂಡರು.
ಜಗಧೀಶನ ತುಂಬು ಕುಟುಂಬದ ಮನೆಯಲ್ಲೂ ದಾರಿದ್ರ್ಯ ತುಂಬಿ ತುಳುಕುತ್ತಿರುವುದನ್ನು ಗ್ರಹಿಸಿದರೂ ತೀರಾ ಮುಳಾಗಿದವನಿಗೆ ಚಳಿಯೇನು ಗಾಳಿಯೇನು ಎಂಬ ನಿರ್ಭಾವುಕಳು, ನಳಿನಿ, ಮೊದಲರಾತ್ರಿಯೇ ಗಂಡ ಗೂಟ ಬಿಚ್ಚಿದ ಗೂಳಿಯಂತಾಡಿದಾಗ ಅವನ ಗಾಡ ಹಸಿವು ಅಬ್ಬರ ಆಕ್ರಮಣಕ್ಕೆ ನಳಿನಿಗೆ ಹಿಂಸೆಯೇ ಪ್ರೀತಿನಾ ಎಂಬ ಡೌಟು. ಅದೂ ಅಭ್ಯಾಸವಾಯಿತು. ಮದುವೆಯಾಗೋದೋ ತಡಕಣ್ರಿ ವರ್ಷ ತುಂಬೋದ್ರೋಳಗೆ ಮಕ್ಕಳ ಕಾಟ ಶುರು ಎಂದಾಡಿಕೊಳ್ಳುವ ಜಿಗುಪ್ಸೆಪಡುವ ತನ್ನ ಅತ್ತೆ, ನೆರೆಯವರ ಮಾತು ಕೇಳುವಾಗ ನಳಿನಿಯಲ್ಲೀಗ ಪುಳಕ, ತಾಸೂ ತಾಯಿಯಾಗಬೇಕು. ಮೊಲೆಯುಣಿಸಬೇಕು. ಜೋಪಾನವಾಗಿ ಎತ್ತಾಡಿಸಿ ಜಳಕಮಾಡಿಸಿ ತೊಟ್ಟಲಿಗೆ ಹಾಕಿತೂಗಿ ಜೋಗುಳ ಹಾಡಿ ತಟ್ಟೆ ಮಲಗಿಸಬೇಕೆಂಬ ಕನಸು ಆದರೆ ಆಗಿದ್ದೇಬೇರೆ ತಿಂಗಳು ಕಳೆಯುವುದರಲ್ಲೇ ಗಂಡ, ತಮಗೀಗಲೆ ಮಕ್ಕಳು ಬೇಡವೆಂದು ಹುಕುಂ ಹೊರಡಿಸಿದ. ನಮಗೀಗಿರುವ ಬಡತನದಲ್ಲಿ ಮಗೂಗೆ ಎಲ್ಲಿಂದ ಲೀಟರ್‍ಗಟ್ಟಲೆ ಹಾಲು, ಫೇರೆಕ್ಸ್, ಬೇಬಿ ಜಾನ್ಸನ್, ಕಾಯಿಲೆ ಬಿದ್ದರೆ ಮೆಡಿಸೆನ್ನು ಎಲ್‍ಕೆಜಿ ಆಡ್ಮಿಷನ್ಗೆ ಅರ್ಧಲಕ್ಷ ಡೊನೇಶನ್ ಎಂದೆಲ್ಲಾ ವಾರ್ಷಿಕ ಬಡ್ಜಟ್ ಮಂಡಿಸಿದ. ನಳಿನಿ ತಣ್ಣಗಾದಳು ಸಧ್ಯ ಇನ್ನಾದರೂ ರಾತ್ರಿ ನರಕ ತಪ್ಪಿತಲ್ಲ ಎಂದವಳು ಸಡಗರ ಪಡುವಾಗ ಕಾಂಡೋಮ್ ಪಾಕೇಟ್‍ಗಳನ್ನು ಆಸ್ಪತ್ರೆಯಿಂದ ತಂದಿಟ್ಟುಕೊಂಡ ಜಗಧೀಶ, ಅವಳ ದೇಹ ಪ್ರಾಣತ್ರಾಣ ಎಲ್ಲಾ ತಿಂದ. ಕಾಂಡೋಮ್‍ನಿಂದಾಗಿ ತನಗೆ ತೃಪ್ತಿಸಿಗದೆಂದು. ವರಾತ ತೆಗೆದವನು “ಮಾಲಾ-ಡಿ” ಮಾತ್ರೆಗಳನ್ನು ತಂದಿಟ್ಟು ದಿನವೂ ರಾತ್ರಿ ಮಲಗುವ ಮುನ್ನ ನಳಿನಿಗೆ ಒತ್ತಾಯವಾಗಿ ನುಂಗಿಸಿಯೇ ಕುಸ್ತಿ ಮಾಡಿದ. ಕಾಲುಗಳಿಗೆ ಹಗ್ಗ ಕಟ್ಟಿಸಿಕೊಂಡ ಬೋರಲು ಬಿದ್ದು ಲಾಳಾಕಟ್ಟಿಸಿಕೊಳ್ಳುವ ದನಗಳ ಪರಿಸ್ಥಿತಿಗಿಂತ ಅವಳ ಸ್ಥಿತಿಯೇನು ಭಿನ್ನವಾಗಿರಲಿಲ್ಲ. ಮೊದಲಿನಿಂದಲೂ ಹೊಂದಿಕೊಂಡು ಬಾಳಿದ ನಳಿನಿಗೆ ತಿರುಗಿಬಿದ್ದು ಗೊತ್ತೇ ಇಲ್ಲ. ಅದೇನವಳ ಸ್ಟ್ರೆಂಥೋ ವೀಕ್‍ನೆಸ್ಸೋ ವಿಚಾರ ಕೂಡಮಾಡಿದವಳಲ್ಲ. ದಿನವೂ ಮಾತ್ರೆ ನುಂಗಿದರೆ ಕ್ಯಾನ್ಸರೋ, ಕ್ಷಯವೋ ಬರುತ್ತದೆಂದು ಅದೆಲ್ಲೋ ಓದಿದ್ದ ಅವಳು ಕನಲಿದಳು ಆದರೆ ಕೆಂಡವಾಗಲಿಲ್ಲ. ಮನೆಯಲ್ಲೋ ತಂಗಿಯರಿಬ್ಬರಿಗೆ ಮದುವೆ ಮಾಡುವ ಹೊಣೆ ತಮ್ಮಂದಿರಿಗೆ ಓದಿಸುವ ಜವಾಬ್ದಾರಿ ಗಂಡನ ಮೇಲೆ ಬಿದ್ದಿತ್ತು. ಇವುಗಳ ನಡುವೆ ತನ್ನ ಕುಡಿಯೊಂದು ಹೊರ ಬಂದರೆ ಭಾರವೆ? ತನ್ನನ್ನು ತಾನೇ ಕೇಳಿಕೊಂಡಳೆ ವಿನಹ ಜಗಧೀಶನ ಬಳಿ ಬಾಯಿ ಬಿಡಲಿಲ್ಲ - ನಳಿನಿಯೇ ಹಾಗೆ ಹರಿವ ನೀರಿನ ಹಾಗೆ. ವರ್ಷಗಳು ಉಳಿರುಳಿದವು. ನೆರೆಯವರು ನೀವು ಮೊಮ್ಮಗನನ್ನು ಕಾಣೋದು ಯಾವಾಗ? ಎಂದು ಜಾನಕಮ್ಮನ ಜೀವ ತಿನ್ನುವಾಗ ಐದು ವರ್ಷವಾದರೂ ಮೊಮ್ಮಗನನ್ನು ನೀಡಿದ ಮಡಿಕೋಲಿನ ಪ್ರತಿ ರೂಪದಂತಿರುವ ಜಿರೋಸೈಜಿನ ತನ್ನ ಸೊಸೆಯನ್ನು ಕಂಡಾಗಲೆಲ್ಲಾ ಸಿಡಿದಳು. ಗೊಡ್ಡು ಮುಂಡೇದು ಸಿಗ್ತು ಹಿಂಗಾದ್ರೆ ಜಗಧೀಶನಿಗೆ ಇನ್ನೊಂದು ಮದುವೆ ಮಾಡೋದೆಯಾ ಎಂದೆಲ್ಲಾ ಅಕ್ಕಪಕ್ಕದ ಮನೆಯವರ ಬಳಿ ಜಾನಕಮ್ಮ ಪ್ರಲಾಪಿಸುವಾಗ ಹೌಹಾರಿದ್ದು ನಳಿನಿ. ಯಾರೊಡನೆ ಹೇಳಿಕೊಳ್ಳೊದು? ತವರು ಮನೆಯವರಂತೂ ಮರತೇಬಿಟ್ಟಂತಿದೆ. ಗೌರಿಹಬ್ಬಕ್ಕೂ ಕರೆದವರಲ್ಲ. ಪಾಪ ತಂದೆ ಈಗ ರಿಟೈರ್ಡ್ ಬೇರೆ ಅವರದ್ದೆ ಉಪವಾಸ ವನವಾಸ ಜಾನಕಮ್ಮನ ಮದುವೆವರಾತ ಹೆಚ್ಚಾದಾಗ ತಾಳಲಾರದೆ ತನ್ನ ಹೊಟ್ಟೆಯ ತಳಮಳವನ್ನೆಲ್ಲಾ ಗಂಡನ ಬಳಿ ಹಂಚಿಕೊಂಡಳು. ಅವನೋ ಹರ ಇಲ್ಲ ಶಿವ ಇಲ್ಲ ಮಾತ್ರೆ ನುಂಗಿಸುವುದನ್ನು ಬಿಡಲಿಲ್ಲ. ಮನೆಯಲ್ಲಿ ನೆಲ ಮುಸರೆ ಪಾತ್ರೆ ಅಡಿಗೆಯೆಂದು ಎಷ್ಟು ದೇಖಿದರೂ ಯಾರಿಗೂ ತನ್ನ ಮೇಲೆ ಪ್ರೀತಿಯಿರಲಿ ಅನುಕಂಪವೂ ಇಲ್ಲವೆಂಬುದವಳಿಗೆ ಈ ಮನೆಗೆ ಕಾಲಿಟ್ಟ ತಿಂಗಳಲ್ಲೆ ವೇದ್ಯವಾಗಿತ್ತಾದರೂ ಹತಾಶೆಗೊಳಡವಳಲ್ಲ. ಸಂಬಳವಿಲ್ಲದ ಖಾಯಂ ಸೇವಕಿಯ ತನ್ನ ಸ್ಥಾನವನ್ನಂತೂ ಯಾರು ಕಸಿದುಕೊಳ್ಳಲಾರರೆಂಬ ಅದಮ್ಯ ಭರವಸೆ, ಅತ್ತೆಯ ಚುಚ್ಚು ಮಾತುಗಳನ್ನವಳು ಅರಗಿಸಿಕೊಂಡರೂ ಅತ್ತೆ ಹೆಣ್ಣು ನೋಡ ಹತ್ತಿದಾಗ ಗಾಬರಿಬಿದ್ದವನು ಜಗಧೀಶ, ತಾಯಿಯನ್ನು ಕೂರಿಸಿಕೊಂಡು ತಿಳಿಸಿ ಹೇಳಿದ. ‘ತಂಗಿಯರೂ ಲಗ್ನವಾಗಿ ಹೋಗುವವರೆಗೂ ತನಗೆ ಮಕ್ಕಳು ಬೇಡವೆಂದು ತೀರ್ಮಾನಿಸಿದ್ದೇನೆ ಮಕ್ಕಳು ಮಾಡೋದು ದೊಡ್ಡಸ್ಥಿತಿಕೆಯಲ್ಲ. ಒಡಹುಟ್ಟಿದವರ ಲಗ್ನ ಮಾಡೋದು ಓದಿಸಿ ಒಂದು ಸ್ಥಿತಿಗೆ ತರೋದು ದೊಡ್ಡದು, ಅಂದು ಪ್ರವಚನಗೈದ, ತಾಯಿ ಆನಂದ ತುಂದಿಲಳಾದಳು ಮಗನ ಭುಜ ತಟ್ಟೆದಳು. ಈಕೆ “ಅಲ್ಲಮಗನೆ ತಂಗಿಯರ ಲಗ್ನವಾದ್ರೆ ಮುಗೀತೆ? ಅವರ ಬಸಿರು ಸೀಮಂತ ಬಾಣಂತನ ಅಂತ ನೂರೆಂಟು ಇರ್ತವೇ. ಕೊನೆಗಾಲಕ್ಕೆ ನಿನಗೆ ಮಕ್ಕಳು ಬೇಕೆ ಬೇಕು ಅನ್ನೋದಾದ್ರೆ ನಿಮ್ಮಕ್ಕನಿಗೆ ಆರು ಮಕ್ಕಳು. ಅದ್ರಾಗೆ ಒಂದು ದತ್ತು ತಗೊಂಡ್ರು ಆತು. ಅಷ್ಟು ಹೊತ್ತಿಗೆ ಈ ಸುಪನಾತಿಗೆ ಮುಟ್ಟು ನಿಂತಿರ್ತದೆ” ಎಂದು ನಳಿನಿ ತಲೆಗೆ ಮೊಟಕಿದ ಜಾನಕಮ್ಮ ಮಗನ ಬಕ್ಕತಲೆ ಸವರಿದಳು. ಸಧ್ಯ ತನ್ನ ಗಂಡ ಸತ್ಯವನ್ನು ಹೊರಗೆಡವಿ ತನ್ನ ಹೆಣ್ತನದ ಗೌರವ ಉಳಿಸಿದನೆಂಬ ನಿರಾಳ. ಜೊತೆಗೆ ಬಂಜೆತನದ ಅಪವಾದದಿಂದ ಪಾರಾದ ಸಂಭ್ರಮ. ನಳಿನಿಯ ಮನಸ್ಥಿತಿ ಬಗ್ಗೆ ಕೇಳೋರು ತವರಿನಲ್ಲೂ ಇರಲಿಲ್ಲ. ಇಲ್ಲಿಯೂ ಅದೇ ರಿಪೀಟು ಎಂತಹ ಸ್ವಾರ್ಥಿಗಳಪ್ಪ ಇವರೂವೆ ಅನ್ನಿಸಿತಷ್ಟೇಅಲ್ಲ ತಾನು ಖಾಯಂ ಹೆಂಡ್ತಿಯಷ್ಟೆ ತಾಯಿಯಾಗುವಂತಿಲ್ಲ. ಯಾರಯಾರದ್ದೋ ತೀರ್ಮಾನಗಳಿಗೆ ತನ್ನ ಹೆಣ್ತನದ ಬಲಿ ಅನ್ನಿಸುವಾಗ ಮೊದಲ ಬಾರಿಗೆ ನೊಂದುಕೊಂಡವಳು. ತವರು ಮನೆಯಲ್ಲಿ ಇದ್ದಾಗ ಆಗೀಗ ಅತ್ತರೆ ತಮ್ಮಂದಿರಾದರೂ ವಿಚಾರಿಸುತ್ತಿದ್ದರು. ಇಲ್ಲಿ ತನ್ನ ಕಣ್ಣೀರ ಮಾತಿರಲಿ ತನಗೇ ಬೆಲೆಯಿಲ್ಲವೆಂಬುದನ್ನು ಬಹುಬೇಗ ಅರ್ಥೈಸಿಕೊಂಡ ಅವಳ ಕಣ್ಣೀರಿನಕೊಳ ಸಹ ಎಂದೋ ಬತ್ತಿತ್ತು. ಆದರೂ ಮನಸ್ಸಂತೂ ಗೊಂದಲದ ಗೂಡು ಬೆಳಗಿನ ಜಾವವೇ ಏದ್ದು ಮನೆಯೆಲ್ಲಾ ಗುಡಿಸಿವರೆಸಿ, ನೀರು ತುಂಬಿಸಿ ಇವರಿಗೆಲ್ಲಾ ಕೂಳು ಬೇಯಿಸಿ ರಾತ್ರಿಯಾಗುತ್ತಲೇ ಮಾತ್ರೆ ನುಂಗಿ ಗಂಡನಿಗೆ ಸುಖ ಉಣ್ಣಿಸಲು ಬೆತ್ತಲಾಗಬೇಕು- ಆದಳು. ವಿಪರ್ಯಾಸವೆಂದರೆ ಜಗಧೀಶನ ತಂಗಿಯವರಿಗೆ ಆಗೀಗ ಬರುತ್ತಿದ್ದ ಗಂಡುಗಳು ಇತ್ತೀಚಿಗೆ ಬರದಂತಾದಾಗ ಜಗಧೀಶನ ತಾಯಿಗಿಂತ ಹೆಚ್ಚು ಕೆಂಗೆಟ್ಟವಳು ನಳಿನಿ. ಗಂಡನದೋ ಹ್ಯಾಪ್‍ಮೊರೆ ಅಪರೂಪಕ್ಕಮೆ ಗಂಡ ಚಳಿಜ್ವರ ಬಂದು ತನ್ನ ಪಾಡಿಗೆ ತಾನು ಬಿದ್ದು ಕೊಂಡಾಗ ಅವಳ ಪಾಲಿಗದು ಸುಖದ ರಾತ್ರಿಗಳು. ಮಾತ್ರೆ ನುಂಗುವಂತಿಲ್ಲ ಮೈ ಒಪ್ಪಿಸುವ ಹಿಂಸೆಯೂ ಇಲ್ಲ. ತನ್ನ ಗಂಡ ಮೃಗವಾಗಿ ಹುಟ್ಟಬೇಕಾದವನು ದೈವಶಾಪದಿಂದಾಗಿ ಮನುಷ್ಯನಾಗಿ ಹುಟ್ಟಿರಬಹುದೆಂದು ಅನೇಕ ಸಲ ಅವಳು ಯೋಚಿಸಿದ್ದುಂಟು. ಸೆಕ್ಸ್ ಕೂಡ ಸೂತಕವೆನ್ನಿಸಬಾರದು ಸುಖವೆನ್ನಿಸಬೇಕು. ಅಪೇಕ್ಷೆ ಹುಟ್ಟಿಸುವಷ್ಟು ರಂಜಕವಾಗಿರಬೇಕು. ಮಾರಕವಾಗಿರಬಾರದೆಂದು ನಂಬಿದವಳು. ಅತಿಯಾದರೆ ಯಾವುದೂ ಅಜೀರ್ಣವೆಂದು ಭಾವಿಸಿದವಳು, ಅದರೇನು ಜ್ವರ ಬಿಟ್ಟ ರಾತ್ರಿಯೇ ಜಗಧೀಶ ನಿದ್ದೆಯ ಮಂಡರಿನಲ್ಲಿ ಅಳವ ಮೈ ಮೇಲೆ ಬಿದ್ದು ಮೈಮನವನ್ನು ಗಾಯ ಮಾಡಿದ. ಮಾತ್ರೆ ನುಂಗದೆ ಒಂದಾಗಿದ್ದು ಇಬ್ಬರಿಗೂ ನೆನಪಿಗೆ ಬರಲಿಲ್ಲ ನಂತರ ದಿನಗಳಲ್ಲಿ ಮಾತ್ರೆ ನುಂಗಿ ವಾಂತಿಮಾಡಿಕೊಂಡ ನಳಿನಿ ಮಾತ್ರೆ. ನುಂಗುವುದಿಲ್ಲವೆಂದು ಪ್ರತಿಭಟನೆಗಿಳಿದಳು ಆದರೇನು ಜಗಧೀಶ ಅನ್ಯಥಾ ಶರಣಂ ನಾಸ್ತಿ ಎಂಬಂತೆ ಕಾಂಡೋಮ್ಸ್ ತಂದಿಟ್ಟುಕೊಂಡ ಆದರೇನು ಇಬ್ಬರಿಗೂ ತಿಳಿಯದಂತೆಯೇ ನಳಿನಿ ಗರ್ಭಿಣಿಯಾಗಿ ಬಿಟ್ಟಿದ್ದಳು. ಜಾನಕಮ್ಮನಿಗೆ ವಿಷಯ ತಿಳಿದಾಗ ಆಕೆ ಹೌಹಾರಿದಳು. ಇದೇನ್ಲಾ ಹಿಂದೆ ಮಾಡ್ದೆ? ಎಂದು ಮಗನ ಮೊರೆ ನೋಡಿದಳು ‘ಥುತ್ತೇರಿ ಕಾಂಡೋಮ್‍ನಾಗೂ ಡೂಪ್ಲೀಕೇಟ್ ಬರ್ತಾವಮ್ಮ’ ಅಂತ ಪೆಚ್ಚಾಗಿದ್ದ ಜಗಧೀಶನಿಗೆ. ಜ್ವರ ಬಿಟ್ಟ ರಾತ್ರಿಯ ಪ್ರಭಾವವಿದು ಅನ್ನಿಸಿದರೂ ಬಾಯಿ ಬಿಡಲಿಲ.್ಲ ನಳಿನಿ ಮೌನವಾಗಿ ಸಂತಸವನ್ನು ಹೀರಿದಳು. ಈ ಸಂತಸವೂ ಬಹಳ ದಿನ ಉಳಿಯಲಿಲ್ಲ ನಳಿನಿ ಗರ್ಭಿಣಿ ಎಂದು ತಿಳಿಯುತ್ತಲೇ ಅತ್ತೆ ಅನ್ನ ನೀರು ಬಿಟ್ಟು ನೆಲ ಹಿಡಿದಳು ನಾದಿನಿಯರಂತೂ ಮಾತೇ ಬಿಟ್ಟರು. 
ಮಗನ ಬಕ್ಕvಲೆಗೆ ಜಾನಕಮ್ಮ ಅದೇನು ತಿಕ್ಕಿದಳೋ ಒಂದು ದಿನ ಜಗಧೀಶ ಮನೆಗೆ ಬಂದು  ಅಬಾರ್ಶನ್ ಬಗ್ಗೆ ಲೆಕ್ಚರ್‍ಕೊಟ್ಟ ‘ನಿನಗೆ ಸರಿ ಅನ್ನಿಸಿದ್ದನ್ನು ಮಾಡುಮಗಾ’ ಎಂದಾಕೆ ಅಡ್ಡಗೋಡೆಯ ಮೇಲೆ ದೀಪವಿಟ್ಟಳು ಸಾಧ್ಯವಿಲ್ಲ ತನ್ನದೇ ಆದ ಮಗು ಬೇಕು. ನನ್ನ ತುತ್ತಿನಲ್ಲಿ ತುತ್ತಿಟ್ಟು ಸಾಕುತ್ತೇನೆ ಎಂದು ನಳಿನಿ ಕಾಡಿಬೇಡಿದಳು ಮುಷ್ಕರ ಹಿಡಿದಳು. ತಾಯಿಗೆ ತಕ್ಕ ಮಗನಾಗಿದ್ದ ಜಗಧೀಶ ಹೆಂಡತಿಗೆ ಲಾಯಕ್ಕಾದ ಗಂಡನಾಗಿರಲಿಲ್ಲದ ಕಾರಣ ನಂದಿನಿಗೆ ದಿಕ್ಕು ತೋಚದಂತಾಯಿತು. ಈಗಂತೂ ಅವಳ ಪಾಲಿಗೆ ಅವಳೇ ಒಂದು ದೊಡ್ಡಪ್ರಶ್ನೆಯಾದಳು. ದಿನಗಳೆದಂತೆ ಜಗಧೀಶ, ಅವರ ಮನೆಯವರ ಒತ್ತಡ ಹೆಚ್ಚಿತು. ಸಮಯ ಮೀರಿದರೆ ಅಬಾರ್ಶನ್ನಿಂದ ಜೀವಕ್ಕೆ ಅಪಾಯವೆಂದು ಅವಧಿ ಮೀರಿದರೆ ಕಾನೂನು ಬಾಹಿರವೆಂದು ಜಗಧೀಶ ಕೂಗಾಡಿದ. ಅವಳದ್ದು ನೋ-ರೀ ಆಕ್ಷನ್ ರೇಗಿದ ಅವನೂ ಒಂದೆರಡು ಬಾರಿ ಎಳೆದಾಡಿ ಬಡಿದು ಬೆದರಿಸಿದ ಗದ್ದಲವಾಗಿ ವಿಷಯ ನೆರೆಹೊರೆಯ ಕಿವಿಗೂ ಹೋಯಿತು. ಅವರೂ ನಳಿನಿಯ ಪರವಾಗಿಯೇ ಮತಾನಾಡಿದರು. ‘ಅಯ್ಯೋಶಿವ್ನೆ ನಿಮಗೆ ಮೊಮ್ಮಗ ಬ್ಯಾಡ್ವಾ ಜಾನಕಮ’್ಮ ? ಎಂದು ಅಕ್ಕ ಪಕ್ಕದವರು ಕುಟುಕಿದರೂ ಜಾನಕಮ್ಮ ಜಗ್ಗಲಿಲ್ಲ ನಳಿನಿ ಬಗ್ಗಲಿಲ್ಲ. ತನ್ನ ತವರಿಗೆ ಓಡಿ ಬಚಾವಾಗಲೇ ಎಂದು ಆಕೆ ತಹತಹಿಸಿದಳು. ಕಳ್ಳತನದಲ್ಲಿ ಪತ್ರ ಬರೆದು ಪೋಸ್ಟ್ ಮಾಡಿದಳು ಉತ್ತರವಿಲ್ಲ. ಯಾರದ್ದೋ ಮೊಬೈಲ್‍ನಿಂದ ಕಾಲ್ ಮಾಡಿದಳು-ರಿಸೀವ್ ಮಾಡುವವರೆ ಇಲ್ಲ. ತನಗಿನ್ನೂ “ತವರು” ಇದೆಯೆಂದು ತಿಳಿದಿದ್ದು, ತನ್ನದೇ ತಪ್ಪೆಂದುಕೊಂಡಳು.

****

ಒಂದುದಿನ ಮನೆಯ ಮುಂದೆ ಆಟೋ ತಂದು ನಿಲ್ಲಿಸಿದ ಜಗಧೀಶ, ನರ್ಸಿಂಗ್ ಹೋಮ್ಗೆ ಹೊರಡು ಎಂದು ತಗಾದೆ ಮಾಡಿದ, ಅವಳು ಕುಂತ ಜಾಗದಿಂದ ಕದಲಲಿಲ್ಲ. ಮನೆಯವರೆಲ್ಲಾ ಒಟ್ಟಿಗೆ ನಿಂತರೂ ಹೊಸ್ತಿಲು ಆಚೆ ತಳ್ಳಲಾಗದೆ ಥೂ ಛೀ ಅಂದರು. ಜಗಧೀಶ ಹಲ್ಲೆಗಿಳಿದಾಗ ಗದ್ದಲವಾಗಿ ಕೇರಿ ಜನ ನೆರೆದರು. ಮುದುಕರು ಬುದ್ಧಿ ಹೇಳಿದರು. ‘ಇದು ನಮ್ಮ ಮನೆ ನಮ್ಮ ಸಂಸಾರದ ವಿಷಯ, ಯಾವನೇನ್ ನಮ್ಗೆ ಬುದ್ಧಿ ಹೇಳೋದು? ನಾವೇನ್ ಅನ್ ಎಜುಕೇಟೆಡ್ ಬ್ರೂಟ್ಸಾ?’, ಎಂದೀಗ ಜಗಧೀಶ ಎಗರಲಾಡಿದ, ತಾಯಿ ಮಗನ ವಕಾಲತ್ತಿಗೆ ನಿಂತಳು. ‘ಸುಮ್ಗೆ ಹೋಗ್ರಿ ನಿಮ್ಮ ಎಲೆ ಮೇಲೆ ಕತ್ತೆ ಸತ್ತು ಬಿದ್ದದೆ ಬೇರೇರ ಎಲೆ ಮ್ಯಾಗಿನ ನೊಣ ಜಾಡಿಸಾಕೆ ಬರಬೇಡಿ. ಎಲ್ಲಾÀವಳ ಎಲ್ಲಾವನ ಹಿಸ್ಟರಿ ನಂಗೊತ್ತಿಲ್ವೆ? ಹೇಳ್ಳಾ?’ ಎಂದಾಕೆ ಕಥಕ್ಕಳಿ ಆಡುವಾಗ ಜನ ಹಿಮ್ಮೆಟ್ಟಿದರು. ನಳಿನಿಯ ಕಣ್ಣೀರಿಗೆ ಬರೀ ಲಿಪ್ ಸಿಂಪಥಿ ತೋರಿದರು. ಅದೇನೋ ನೀರಿ ನಂತಹ ನಳಿನಿ ಇಂದೇಕೋ ಧುಮ್ಮಿಕ್ಕುವ ಜಲಪಾತವಾಗ ಬೇಕೆ! ಜಪ್ಪಯ್ಯ ಅಂದ್ರೂ ಆಟೋ ಏರಲಿಲ್ಲ. ಇವರ ಡ್ಯಾಮಾ ನೋಡಿ ಸಾಕಾದ ಆಟೋದವನೂ ಹೇಳದೇ ಕೇಳದೇ ಹೊರಟು ಹೋದ. ಮಧ್ಯಾಹ್ನವಾಗೋಯ್ತು ಹಿಂಗಾದರೆ ಆಗದೆಂದು ಜಾನಕಮ್ಮ ತನ್ನ ಕಡೆಯ ಬ್ರಹ್ಮಾಸ್ತ್ರ ಪ್ರಯೋಗಿಸಿದಳು. ‘ನೋಡೇ ಸುಪನಾತಿ ಹಿಂಗಾಡಿದ್ರೆ ಈ ಮನೇಲಿ ಸ್ಥಾನವಿಲ್ಲ. ಈಗಿಂದೀಗ್ಗೆ ಹೊಂಟೋಗು’, ಎಂದು ಬ್ಲಾಸ್ಟ್ ಆದಳು. ಒಂದು ಹಂತದಲ್ಲಿ ನಳಿನಿಗೆ ಏಟುಗಳೂ ಬಿದ್ದವು. ಇಷ್ಟಾದರೂ ಅಂಜದ ಅವಳು ‘ನೀವೇಳಿದ್ರೆ ಆಯ್ತೆ? ಇದೇ ಮಾತನ್ನು ತಾಳಿಕಟ್ಟಿದ ಗಂಡ ಹೇಳ್ಳಿ? ಅದೆಂತದೋ ಭರವಸೆಯ ಮೇಲೆ ಭಾರಹಾಕಿ z¨ವಣಗೆÉ ನಿಂತು ಜಗಧೀಶನ ಮಾನ ಹರಾಜಿಗಿಟ್ಟಳು. ಕ್ರುದ್ಧನಾದ ಜಗಧೀಶ ಅವಳ ತಲೆಗೂದಲು ಹಿಡಿದು ಎಳೆದಾಡಿದ. “ನಾನು ಬೇರೆ ಸಪರೇಟ್ ಆಗಿ ಹೇಳಬೇಕೆನೆ ಲೌಡಿ ಮುಂಡೆ, ನಮ್ಮಮ್ಮನ ಬಾಯಿಂದ ಬಂದ ಮಾತು ಶಾಸನ ಇದ್ದಂಗೆ ಕಣೆ.... ನಡಿ ಆಚೆ” ಎಂದು ಒದರಾಡಿ ಆಚೆ ತಳ್ಳಿಯೇ ಬಿಟ್ಟ. ನಿಂತವರೆಲ್ಲಾ ಲೊಚ ಲೊಚಗುಟ್ಟಿದರು. ನಳಿನಿ ಅಂಜಲಿಲ್ಲ ಹೋಗ್ತಿನಿ ನನಗೆ ನನ್ನ ಮಗು ಮುಖ್ಯ ಸಾಯಿಸಿ ನಾನ್ಯಾವ ಪಾಪಕ್ಕೆ ಹೋಗ್ಲಿ ಎಂದು ಸಿಡಿಯುತ್ತಾ ತನ್ನ ಬಟ್ಟೆ ಬರೆ ತೆಗೆದುಕೊಳ್ಳಲು ಒಳಗಡಿಯಿಟ್ಟರೆ, ನಾದಿನಿಯರು ಬಿಡಲಿಲ್ಲ. ಉಟ್ಟಬಟ್ಟೆಯಲ್ಲೇ ನಳಿನಿ ಹೊರಟಳು. ಎಲ್ಲಿಗೆ ಎಂಬುದು ಅವಳಿಗೂ ಗೊತ್ತಿಲ್ಲ. ಗೊತ್ತಿದ್ದದು ಇಷ್ಟೆ- ತನಗೆ ತನ್ನ ಕುಡಿಬೇಕು. ನಡೆಯುತ್ತಲೇ ಸೀರೆ ನೆರಿಗೆ ಸರಿಪಡಿಸಿಕೊಂಡಳು. ಬರಿಗೈಲೆ ತಲೆ ಕೂದಲು ಸರಿಪಡಿಸಿಕೊಂಡಳು. ಬಸ್ ನಿಲ್ದಾಣಕ್ಕೆ ಬಂದಳು. ಹೊರಟಿದ್ದ ಬಸ್ ಏರಿ ಕುಂತಳು. ಕಂಡಕ್ಟರ್ ಆಧಾರ್ ಕಾರ್ಡ್ ಕೇಳಿದ, ಮರೆತು ಬಂದೆ ಕಣಣ್ಣಾ ಗೋಗರೆದಳು. ಅವಳ ಮೊರೆ ಕೊಳಕು ಸೀರೆ ನೋಡಿದ ಅವನಿಗೆ ಓಟರ್ ಐಡಿ ಕೇಳಬೇಕೆನಿಸಲಿಲ್ಲ. “ಎಲ್ಲಿಗೆ ಹೋಗಬೇಕಮ್ಮ?” ಪ್ರಶ್ನಿಸಿದ ಕಂಡಕ್ಟರ್ ಈ ಬಸ್ಸು ಎಲ್ಲಿಯವರೆಗೆ ಹೋಗ್ತದೋ ಅಲ್ಲಿವರೆಗೆ ಅಂದಳು. ಟಿಕೇಟ್ ಹರಿದು ಕೊಟ್ಟ ಅವನು ಅವಳನ್ನೆ ತಿನ್ನುವಂತೆ ನೋಡಿದ. ನೋಡುವಂತಾದ್ದಾದರೂ ಏನಿತ್ತವಳಲ್ಲಿ? ತೆಳ್ಳಗೆ ಬೆಳಿಗೆ ಇದ್ದ ವೀಕ್ ಬಾಡಿನಲ್ಲಿ ಬಲ್ಕಿ ಮೊಲೆಗಳಷ್ಟೆ ಅವಳ ಆಸ್ತಿ, ಬಸ್ ತುಂಬಾ ಮಹಿಳೆಯರಾದರೂ. ಐಚಿsಣ ಬಸ್‍ಸ್ಟಾಪ್ ಹತ್ತಿರವಂತೂ ಬಸ್ ಖಾಲಿ ಆಗುವುದೇ ಹೆಚ್ಚು. ಆಗ ಇವಳನ್ನು ನೋಡಿಕೊಂಡ್ರಾಯಿತೆಂದು ಡ್ರೈವರ್ ಜೊತೆ ಮಾತಾಡಿ ಸ್ಕೆಚ್ ರೆಡಿಮಾಡಿಕೊಂಡ. ಒಂದೆರಡು ಕಡೆ ಕಾಫಿ ಕುಡಿಯಲು ಸ್ಟಾಪ್ ಮಾಡಿದಾಗ ನಳಿನಿ ಇಳಿಯಲಿಲ್ಲ. ಬರ್ರೀ ಮೇಡಂ ಕಾಪಿ ಕುಡೀರಂತೆ ಎಂದು ಕಂಡಕ್ಟರ್ ಪೂಸಿ ಹೊಡೆದ. ಇವಳು ತಲೆ ಎತ್ತಲಿಲ್ಲ. ಕಿಟಕಿ ಕಡೆ ಮುಖ ಮಾಡಿಕೂತ ಅವಳು ಅದೆಷ್ಟೋ ಊರನ್ನು ಹಿಂದಟ್ಟಿದಳು. ನಳಿನಿಗೆ ಈಗ ಭಾರಿ ಪ್ಲೈ ಓವರ್ ಕಟ್ಟುತ್ತಿರುವುದು ಕಂಡಿತು. ದುಡಿಯುವ ನೂರಾರು ಜನ ಕಂಡರು. ತನಗೂ ಮೈನಲ್ಲಿ ಕಸುವಿದೆ. ಕೂಲಿನಾಲಿ ಮಾಡಿ ಮಗೀನ ಸಾಕೇನೆಂಬ ಛಲ ಉಸಿದಾಡಿತು. ತಾನು ಇದುವರೆಗೂ ಯಾರೋ ಮನೆಯಲ್ಲಿ ಮಾಡಿದ್ದು ಕೂಲಿ ಕೆಲಸವೆ ಅನ್ನಿಸಿದಾಗ ತಟ್ಟನೆ ನಿರ್ಧಾರಕ್ಕೆ ಬಂದಳು. ತಕ್ಷಣಕ್ಕೆ ಸಿಕ್ಕ ಅವಕಾಶವನ್ನು ಕಡೆಗಣಿಸುವಂತಿಲ್ಲ. ಹಾರೆ ಪಿಕಾಸಿ ಗುದ್ದಲಿ ಹಿಡಿದು ಇಳಿಯವವರೊಡನೆ ಬಸ್ ನಿಂತಾಗ ಇಳಿದಳು. ಅವರೊಂದಿಗೆ ತಾನೂ ಹೊರಟಳು – ತಾನು ಗರ್ಭಿಣಿಯಂತೆ ಕಾಣಲು ಇನ್ನೂ ಸಾಕಷ್ಟು ತಿಂಗಳು ಬೇಕು. ಆಗೊಬ್ಬ  ದೇವರಿದ್ದಾನೆಂದು ಕೊಂಡಳು ಹೊಟ್ಟೆಮುಟ್ಟಿ ನೋಡಿಕೊಂಡಳು. ಮೇಲೆ ಉರಿವ ಬಿಸಿಲು ಕೆಳಗೆ ಸುಡುವ ನೆಲ ಬರಿಗಾಲು ಮಾಸಿದ ಸೀರೆ ಕಂದಿದ ಮೋರೆ, ಥೇಟ್ ಕೂಲಿ ಹೆಂಗಸಿನ ಗೆಟಪ್ಪೇ ತನ್ನದೆಂದೆನಿಸಿದಾಗ ಹಿಂಜರಿಯದೆ ಕೂಲಿ ಕೆಲಸವರೊಂದಿಗೆ ತಾನು ನಡೆದು ಹೋಗಿ ಮೇಸ್ತ್ರಿಯಂತೆ ಕಾಣುತ್ತಿದ್ದ, ತಲೆಗೆ ಹ್ಯಾಟ್ ಹಾಕಿದವನತ್ತ ದಾಪುಗಾಲು ಹಾಕಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT