ಮೂಲ: ದಿನಕರ್ ಜೋಶಿ ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ವಿಚಿತ್ರ ರೋಗವೊಂದು ಹಿಡಿದಿದೆ. ನನಗೇನೂ ನೆನಪಿರುವುದಿಲ್ಲ. ಮರೆತು ಬಿಡುತ್ತೇನೆ; ಆದರೂ ಈ ಮರೆವು ಒಂದು ರೋಗವಲ್ಲ.

ನನಗೆ ಅನೇಕ ಪ್ರಸಂಗಗಳು, ಘಟನೆಗಳು ನೆನಪಂತೂ ಇರುತ್ತವೆ. ನನಗೆ ಅಗಣಿತ ಮಾತುಕತೆಗಳು ಆರಂಭದಿಂದ ಅಂತ್ಯದವರೆಗೆ ನೆನಪಿವೆ...ಆದರೆ ಆ ಘಟನೆಗಳು, ಆ ಪ್ರಸಂಗಗಳು ಮತ್ತು ಆ ಮಾತುಕತೆಗಳೊಂದಿಗೆ ಕಲೆತ ಮುಖಗಳನ್ನು ಮರೆಯುತ್ತೇನೆ. ಹಾಗಂತ ಆ ಮುಖಗಳು ಸಹ ಮರೆಯುವುದಿಲ್ಲ, ಬದಲಿಗೆ ಅಸ್ತವ್ಯಸ್ತವಾಗುತ್ತವೆ.

ನನಗೆ ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸವಿದೆ. ಅಂದು ಎದ್ದು ಬ್ರಶ್ ಮಾಡುತ್ತಾ ಹೊರಗೆ ಬಂದಾಗ ಎದುರಿನ ಫುಟ್ಪಾತ್ನಲ್ಲಿದ್ದ ಬೀಡಾ ಅಂಗಡಿಯಲ್ಲಿ ನಿಂತಿದ್ದ ಕಾಂತಿಭಾಯಿ ಸಿಗರೇಟ್ ಹೊಗೆಯನ್ನು ಕಾರುತ್ತಾ ನಿಂತಿರುವುದನ್ನು ನೋಡಿದೆ. ಅವರನ್ನು ನೋಡಿ ತುಂಬಾ ಆಶ್ಚರ್ಯವಾಯಿತು. ನಿನ್ನೆ ಸಂಜೆಯೆಷ್ಟೇ ತುದಿ ಮನೆಯ ಸುಧೀರ್ಭಾಯಿಯ ಮನೆಯಲ್ಲಿ ಜನರ ಗುಂಪು ಕಲೆತಿತ್ತು, ಆಗ ಶ್ರೀಯುತರು ಧೂಮ್ರಪಾನವನ್ನು ಮಾಡುವುದಿಲ್ಲವೆಂದು ಹೇಳಿದ್ದರು. ಸುಧೀರ್ಭಾಯಿ ಮತ್ತು ಮಿತ್ರರು ಎಷ್ಟು ಒತ್ತಾಯ ಮಾಡಿದ್ದರು, ಆಗಲೂ ಶ್ರೀಯುತರು ತಮ್ಮ ಮಾತನ್ನು ಮೀರದೆ ಹೇಳಿದ್ದರು, “ಇಲ್ಲ, ಇಲ್ಲಿಯವರೆಗೆ ಬೀಡಿ-ಸಿಗರೇಟನ್ನು ಸೇದಲಿಲ್ಲ, ಹೀಗಿರುವಾಗ ಈಗೇಕೆ? ನನಗೆ ಅದರ ವಾಸ್ನೆ ಕಂಡರಾಗುವುದಿಲ್ಲ!” ಆದರೆ ಈಗ, ಅದೂ ನಡು ರಸ್ತೆಯಲ್ಲಿ...

“ಕಾಂತಿಭಾಯಿ, ನೀವು?” ನಾನು ತಡೆಯಲಾರದೆ ಕೇಳಿದೆ.
“ಏಕೆ, ನಾನಿಲ್ಲಿರಬಾರದೇ?”
“ನೀವಿರುವ ಬಗ್ಗೆ ನನಗೆ ಆಶ್ಚರ್ಯವಿಲ್ಲ, ಆದ್ರೆ ನಿನ್ನೆ ರಾತ್ರಿ ನೀವು ತಂಬಾಕನ್ನು ಕಂಡರೆ ಜುಗುಪ್ಸೆಯಾಗುತ್ತೆ ಅಂತ ಹೇಳಿದ್ದಿರಿ...”
ಕಾಂತಿಭಾಯಿ ಗಟ್ಟಿಯಾಗಿ ನಗುತ್ತಾ ಹೇಳಿದರು, “ನಿಮಗೆ ಪ್ರಜ್ಞೆ ಇದೆ ತಾನೇ? ಅಥವಾ ಇನ್ನೂ ನಿದ್ರೆಯಲ್ಲಿದ್ದೋರೋ?”

ನಾನು ಅತ್ತ-ಇತ್ತ ನೋಡಿ, ತಲೆಯನ್ನು ಅತ್ತ-ಇತ್ತ ಹೊರಳಿಸಿ ನನ್ನನ್ನು ನಾನೇ ಪರೀಕ್ಷಿಸಿಕೊಂಡೆ...ಇಲ್ಲ, ನಾನು ನಿದ್ರೆ ಮಾಡುತ್ತಿಲ್ಲ. ನಾನು ಎಚ್ಚರದಲ್ಲಿಯೇ ಇದ್ದೆ. ಎದುರಿಗಿರುವ ಕಾಂತಿಭಾಯಿಯವರೇ ಸಿಗರೇಟನ್ನು ಬೂದಿ ಮಾಡುತ್ತಿದ್ದರು.

“ಒಳ್ಳೆ ಮನುಷ್ಯ, ನನ್ನಂಥ ಚೈನ್-ಸ್ಮೋಕರ್ ಬಗ್ಗೆ ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದೀರ, ನನಗೆ ನಗು ಬರುತ್ತೆ.”
“ಮತ್ತೆ ನಿನ್ನೆ ರಾತ್ರಿ ಸುಧೀರ್ಭಾಯಿಯವರ ಮನೇಲಿ...” ನನ್ನ ಕಳವಳ ಹೆಚ್ಚುತ್ತಿತ್ತು.

ಈಗ ಕಾಂತಿಭಾಯಿ ಎರಡುಪಟ್ಟು ಗಟ್ಟಿಯಾಗಿ ನಕ್ಕರು. ನಂತರ ಸಿಗರೇಟ್ ತುಂಡಿನಿಂದ ಕೊನೆಯ ದಮ್ ಎಳೆಯುತ್ತಾ, ಹೊಸ ಸಿಗರೇಟನ್ನು ಹೊತ್ತಿಸಿಕೊಂಡು ಹೊಸ ರಹಸ್ಯವನ್ನು ಬಹಿರಂಗಪಡಿಸಿದರು, “ಹಾಗೆ ಪ್ರತಿಜ್ಞೆಯನ್ನು ಶಾಂತಿಭಾಯಿ ಮಾಡುತ್ತಿದ್ದರು. ನಿಜವಾಗಿಯೂ ಶಾಂತಿಭಾಯಿ ಸಾತ್ವಿಕ ಮನುಷ್ಯರು, ಆದರೆ ನಾನು...ಹೋ-ಹೋ...ನೋಡಿ, ನೀವು ಒಪ್ಪರ ಟೋಪಿಯನ್ನು ಇನ್ನೊಬ್ಬರ ತಲೆಗೆ...”

ನಾನು ಮೌನವಹಿಸಿದೆ. ನಿನ್ನೆ ರಾತ್ರಿಯ ಘಟನೆಯನ್ನು ಮೆಲುಕು ಹಾಕಿದೆ. ಚರ್ಚೆ ನೆನಪಿದೆ. ಮುಖಗಳು ಮಾತ್ರ ಅದಲು ಬದಲಾಗಿವೆ...ಹೀಗೆ ಅನೇಕ ಬಾರಿ ಸಂಭವಿಸುತ್ತದೆ. ಕಣ್ಣುಗಳೆದರು ಧೂಮ್ರಪಾನ ಮಡುವ ಕಾಂತಿಭಾಯಿಯನ್ನು ನೋಡಿ ನನಗೆ ಹಿಂದಿನ ರಾತ್ರಿಯ ಘಟನೆ ಕಳವಳಗೊಳಿಸುತ್ತದೆ...ಬೀಡಿ-ಸಿಗರೇಟಿನ ಬಗ್ಗೆ ಜುಗುಪ್ಸೆಯ ಮಾತುಗಳನ್ನಾಡುವ ಇವರ ಮಾತುಗಳು...ಇಲ್ಲ, ಆ ಮಾತುಗಳು ಇವರ ಮಾತುಗಳಲ್ಲ, ಶಾಂತಿಭಾಯಿಯವರ ಮಾತುಗಳು...ನನಗೆ ಇವರ ಬದಲು ಕಾಂತಿಭಾಯಿಯ ಮುಖದಲ್ಲಿ ನನಗೆ ಶಾಂತಿಭಾಯಿ ಕಾಣ ಬರುತ್ತಾರೆ. ಶಾಂತಿಭಾಯಿಯ ಮುಖದಲ್ಲಿ ನಾನು ಕಾಂತಿಭಾಯಿಯನ್ನು ಹುಡುಕಲು ಪ್ರಯತ್ನಿಸುತ್ತೇನೆ. ಕಳವಳ ಹೆಚ್ಚುತ್ತದೆ.

ಮುಖದಲ್ಲಿ ಅದಲು-ಬದಲಾಗುವ ಈ ರೋಗ ನನಗೆ ಹೇಗೆ ಹಿಡಿಯಿತೆಂದು ನೆನಪಿಲ್ಲ. ಆದರೆ ಇದು ಎಂದಿನಿಂದ ಹಿಡಿಯಿತೆಂದು ನೆನಪಿದೆ. ಮೆಟ್ರಿಕ್ನಲ್ಲಿ [ಎಸ್.ಎಸ್.ಸಿ. ಅಲ್ಲ] ಎಪ್ಪತ್ತಮೂರು ಪರ್ಸೆಂಟ್ ಅಂಕಗಳು ಬಂದಿದ್ದವು. ಒಂದೂವರೆ ಪಸೆಂಟ್ ಅಂಕಗಳು ಕಡಿಮೆ ಬಂದಿದ್ದರಿಂದ ರಾಜ್ಯದಿಂದ ಲಭಿಸುವ ಮಾಸಾಶನವನ್ನು ಕಳೆದುಕೊಂಡೆ. ಮಾಸಾಶನ ಪಡೆಯುವ ವಿದ್ಯಾರ್ಥಿಗೆ ಎಪ್ಪತ್ತನಾಲ್ಕೂವರೆ ಪರ್ಸೆಂಟ್ ಅಂಕಗಳು ಲಭಿಸಿದ್ದವು. ಎಪ್ಪತ್ತಮೂರು ಪರ್ಸೆಂಟ್ ಅಂಕಗಳ ಬದಲು ಒಂದೂವರೆ ಪರ್ಸೆಂಟ್ ಅಂಕಗಳಷ್ಟೇ ಕಡಿಮೆ ಪಡೆದಿದ್ದರಿಂದ ದುಃಖವಾಯಿತು. ಪರಿಣಾಮ ಬಂದ ದಿನವೇ ರಾತ್ರಿಯ ವೇಳೆಯಲ್ಲಿ ಅಪ್ಪ ನನ್ನನ್ನು ಕರೆದು ಹೇಳಿದರು, “ನಾಳೆಯಿಂದ ನನ್ನ ಜೊತೆ ಸರ್ಕಾರಿ ನೌಕರಿಗೆ ತೊಡಗಿಸಿಕೋ!”

ಆಗ ನನ್ನ ಕಣ್ಣುಗಳು ಅನಾಯಾಸವಾಗಿಯೇ ದೊಡ್ಡದಾಗಿದ್ದು ನನಗೆ ಚೆನ್ನಾಗಿ ನೆನಪಿದೆ.

“ನಾನು ಹೇಳಿದ್ದು ಅರ್ಥವಾಯ್ತ? ಸಾಹೇಬರು ನಮ್ಮ ಸಂಬಂಧಿಕರು. ನಾನು ಮೊದಲೇ ಎಲ್ಲವನ್ನು ನಿರ್ಧರಿಸಿದ್ದೇನೆ. ಆರಂಭದಲ್ಲಿ ಎಪ್ಪತ್ತೈದು ರೂಪಾಯಿಗಳ ಸಂಬಳ ಕೊಡ್ತಾರೆ.”

“ಅಪ್ಪಾ, ನಾನು ಮುಂದಕ್ಕೆ ಓದಬೇಕು. ಇಂಜಿನೀಯರ್...ಡಾಕ್ಟರ್...ನೀವೇ ಹೇಳ್ತಿದ್ದಿರಿ...”
“ನಾನು ಹೇಳ್ತಿದ್ನ? ಓಹೋ, ಈಗಿನಿಂದಲೇ ಬಿಳಿ ಸುಳ್ಳು ಹೇಳೋದಕ್ಕೆ ಶುರು ಮಾಡಿದೆಯಾ? ನಾನು ಒಂದು ವರ್ಷದಿಂದ ನಿನ್ನ ಮೆಟ್ರಿಕ್ ಮುಗಿಯೋದನ್ನು ಕಾಯ್ತಿದ್ದೇನೆ. ನಾನು ಈ ಮನೆಯ ಭಾರವನ್ನು ಇನ್ನು ಒಂಟಿಯಗಿ ಹೊರಲು ಸಾಧ್ಯವಿಲ್ಲ. ನಿನ್ನ ಸಹಾಯ ಸಿಕ್ಕರೆ...”
“ಆದ್ರೆ ಅಪ್ಪಾ...”

ನನ್ನ ಕಣ್ಣುಗಳೆದುರು ಸರ್ಕಾರಿ ಕಚೇರಿಗಳಲ್ಲಿ ತೂಕಡಿಸುವ, ದಪ್ಪ ಕನ್ನಡಕಗಳನ್ನು ಧರಿಸಿ ರಿಜಿಸ್ಟರ್ಗಳಲ್ಲಿ ಕಳೆದು ಹೋದವರ ಚಿತ್ರಗಳು ಮೂಡಿದವು...
“ಅಂದು ನೀವೇ, ಅಗತ್ಯ ಬಿದ್ದರೆ ನಮ್ಮ ಈ ನಾಲ್ಕಂತಸ್ತಿನ ಮನೆಯನ್ನು ಮಾರಿ ನಿನಗೆ ಮುಂದಕ್ಕೆ ಓದಿಸ್ತೀವಿ ಅಂತ ಹೇಳಿದ್ದಿರಿ...”

ಹೌದು, ಅಪ್ಪ ಹೀಗೆಯೇ ಹೇಳಿದ್ದರು. ಅವರು ತುಂಬಾ ಉತ್ಸಾಹದಿಂದ ಹೇಳಿದ ಅವರ ಸ್ಫೂರ್ತಿದಾಯಕ ಮುಖ ನನಗೆ ಇಂದೂ ಸ್ಪಷ್ಟವಾಗಿ ಕಾಣಿಸುತ್ತಿದೆ.

“ನನಗೆ ತಲೆ ಕೆಟ್ಟಿದೆಯಾ? ಈ ಪಿತ್ರಾರ್ಜಿತ ಮನೆಯನ್ನು ಮಾರಿ ನಿನಗೆ ಓದಿಸಲುವಂಥ ಮೂರ್ಖ ಅಪ್ಪ ನಾನಲ್ಲ! ನಾನು ಹೀಗೆ ಯಾವಾಗ ಹೇಳಿದ್ದೆ?”
ಅಪ್ಪಾ ಹೀಗೆ ಯಾವಾಗ ಹೇಳಿದ್ದರು?

ಹೇಳಿದ್ದರು...ಖಂಡಿತ ಹೇಳಿದ್ದರು. ಆಗ ನಾನು ಶಾಲೆಗೆ ಹೋಗಲು ಆರಂಭಿಸಿ ಹೆಚ್ಚು ದಿನಗಳಾಗಿರಲಿಲ್ಲ, ಅವರ ಈ ಮಾತುಗಳನ್ನು ಕೇಳಿದ್ದೆ, ಇಷ್ಟು ವರ್ಷಗಳಾದರೂ ಅವರ ಮಾತುಗಳನ್ನು ಮರೆತಿರಲಿಲ್ಲ...

ನಾನು ಹೀಗೆ ಹೇಳೇ ಇಲ್ಲ ಎಂದು ಅಪ್ಪ ಹೇಳುತ್ತಿದ್ದರು. ಅಪ್ಪ ಸುಳ್ಳನ್ನಂತೂ ಹೇಳುವುದಿಲ್ಲ...
ಮತ್ತೆ...?

ಕುಟುಂಬದಲ್ಲಿ ದೀರ್ಘ ವರ್ಷಗಳ ನಂತರ ನಾನು ಹುಟ್ಟಿದ್ದೆ, ಆದ್ದರಿಂದ ನನಗೆ ಸಾಕಷ್ಟು ಪ್ರೀತಿ ಲಭಿಸಿದೆ. ಅಜ್ಜ-ಅಜ್ಜಿ, ಚಿಕ್ಕಪ್ಪ-ದೊಡ್ಡಪ್ಪ...ಎಲ್ಲರ ಮುದ್ದಿನ ಮಗುವಾಗಿದ್ದೆ ನಾನು.

ಆದರೆ ಅಪ್ಪ ನಾನು ಹೀಗೆ ಹೇಳಿರಲೇ ಇಲ್ಲ ಎನ್ನುತ್ತಿದ್ದಾರೆ! ನಾನು ನೆನಪಿನ ಮಹಾಸಾಗರದಲ್ಲಿ ಧುಮುಕುತ್ತೇನೆ. ನೆನಪಾಗುತ್ತದೆ...ಈ ಮಾತುಗಳನ್ನು ಕೇಳಿದ್ದೆ. ಖಂಡಿತ ಕೇಳಿದ್ದೆ. ಅಪ್ಪನನ್ನು ಹೊರತುಪಡಿಸಿ ಬೇರಾರು ತಾನೇ ಹೀಗೆ ಹೇಳುತ್ತಾರೆ?

ಅಜ್ಜ ಹೇಳಿರಬಹುದೇ? ದೊಡ್ಡಪ್ಪ ಹೇಳಿರಬಹುದೇ? ಕಾಲಕ್ಕೆ ವಶವಾದ ಆ ಮುಖಗಳು ನೆನಪಾಗುತ್ತವೆ. ಅಪ್ಪನ ಮುಖವನ್ನು ಹೋಲುವಂಥ ಆ ಮುಖಗಳು...ನಾನು ಗಾಬರಿಗೊಂಡೆ. ಸಮಸ್ಯೆಯೊಂದು ಎದುರಾಯಿತು. ಅನೇಕ ವರ್ಷಗಳಿಂದ ಒಳಗಿದ್ದ ಮಾತುಗಳೊಂದಿಗೆ ಕಲೆತ ಒಂದು ಮುಖ...ಈಗ ನನ್ನೆದುರು ನಿಂತ ಇನ್ನೊಂದು ಮುಖ.

ಸರಿ, ಆ ಕ್ಷಣದಿಂದಲೇ ಮುಖಗಳು ಕಣ್ಣುಗಳೆದರು ಸುಳಿಯಲು ಆರಂಭಿಸಿದವು. ಇಂದಿನವರೆಗೆ ಅವು ಕ್ಷಣ-ಕ್ಷಣವೂ ಹೆಚ್ಚುತ್ತಿದ್ದವು...ಹೆಚ್ಚುತ್ತಲೇ ಹೋಗುತ್ತಿದ್ದವು.
ಕೆಲವು ದಿನಗಳ ಹಿಂದೆ ಮಿತಿ ಮೀರಿತು. ಜ್ಯೇಷ್ಠ ಪುತ್ರಿ ಉಮಾ ಏಳನೆಯ ತರಗತಿಯಲ್ಲಿ ತೇರ್ಗಡೆಯಾಗಿದ್ದಳು. ಅವಳು ಎಂಟನೆಯ ತರಗತಿಗೆ ಹೋಗಲು ಶಾಲೆಯನ್ನು ಬದಲಿಸಬೇಕಿತ್ತು. ಚಪ್ಪಲಿ ಸವೆದರೂ, ಯಾವ ಶಾಲೆಯಲ್ಲಿಯೂ ಸೀಟು ಸಿಗಲಿಲ್ಲ. ಕಡೆಗೆ ಒಂದು ಶಾಲೆಯಲ್ಲಿ ಪ್ರಯತ್ನಿಸಬಹುದೆಂದು ಸುದ್ದಿ ಲಭಿಸಿತು. ಆ ಶಾಲೆಯನ್ನು ಪತ್ತೆ ಹಚ್ಚಿದೆ. ಸೀಟು ಭರ್ತಿಯಾಗಿದ್ದವು, ಆದರೆ ಅದರ ಕಾರ್ಯದರ್ಶಿಗಳು ಬಯಸಿದರೆ ಪ್ರವೇಶ ಲಭಿಸಬಹುದು ಎಂಬ ಆಶ್ವಾಸನೆ ಸಿಕ್ಕಿತು. ಕಾರ್ಯದರ್ಶಿಗಳ ಬಗ್ಗೆ ವಿಚಾರಿಸಿದಾಗ, ಅವರ ಹೆಸರು ಕನಕ್ ತ್ರಿವೇದಿ ಎಂದು ತಿಳಿಯಿತು. ಎದೆಯ ಮೇಲಿಂದ ಮಣಭಾರ ಇಳಿದಂತಾಯಿತು. ಶಾಲೆಯ ಕಾರ್ಯದರ್ಶಿಗಳು ಕನಕ್ ತ್ರಿವೇದಿಗಳಾಗಿರುವಾಗ ಇನ್ನೇಕೆ ಚಿಂತೆ? ಇದುವರೆಗೆ ಅವರ ಬಗ್ಗೆ ತಿಳಿದಿರಲಿಲ್ಲ...

ಅದೆಷ್ಟು ವರ್ಷಗಳ ನಂತರ ಕನಕ್ ತ್ರಿವೇದಿಯವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು! ಎಪ್ಪತ್ತಮೂರು ಪರ್ಸೆಂಟ್ ಅಂಕಗಳನ್ನು ಪಡೆದ ನಾನು ರಾಜ್ಯದ ಅರ್ಥ ವಿಭಾಗದ ಗುಮಾಸ್ತನ ಹುದ್ದೆಯನ್ನು ಒಪ್ಪಿದಾಗ, ನನಗಿಂತ ಹೆಚ್ಚು ಆಘಾತ ಕನಕರಿಗೆ ಆಗಿತ್ತು. ನಾವಿಬ್ಬರು ಮುಂದಿನ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಹೋಗುವ ಆಸೆಯನ್ನಿಟ್ಟುಕೊಂಡಿದ್ದೆವು. ಆದರೆ ಕನಕ ಒಬ್ಬನೇ ನಗರಕ್ಕೆ ಹೋದ. ಹೋಗುವಾಗ ರೋದಿಸಿದ್ದ. ನಾನು ರೋದಿಸಬೇಕಿತ್ತು, ಆದರೆ ಅವನು ರೋದಿಸಿದ್ದ. ನನ್ನಿಂದ ಅಗಲಿ ಹೋಗುವಾಗ ಕನಕ ಹೇಳಿದ್ದ, “ನಾನೊಬ್ಬನೇ ಹೋಗೋದು ನನಗೆ ಸ್ವಲ್ಪೂ ಇಷ್ಟವಾಗ್ತಿಲ್ಲ. ನಿನಗೆ ನನ್ನ ಜೊತೆ ಓದುವ ಅವಕಾಶ ಸಿಕ್ಕಿದ್ದರೆ...ನಾನೀಗ ಅಸಹಾಯಕ, ನನಗೆ ತುಂಬಾ ದುಃಖವಾಗ್ತಿದೆ...ಆದರೆ ಭವಿಷ್ಯದಲ್ಲಿ ನಾವು ಭೇಟಿಯದರೆ, ಈಗ ನಾನು ನಿನಗೆ ಮಾಡಲಾಗದ್ದನ್ನು ಬಡ್ಡಿ ಸಮೇತ ಆಗ ಚುಕ್ತಾ ಮಾಡ್ತೀನಿ.” ಹೀಗೆಂದು ಕನಕ ಬಿಕ್ಕಳಿಸುತ್ತಾ ಹೊರಟು ಹೋಗಿದ್ದ. ನಂತರ ಅವನು ವಿಶೇಷ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದ ಎಂದು ಕೇಳಿದ್ದೆ. ನಂತರ ಅವನ ಸಂಪರ್ಕ ಕಡಿದು ಹೋಯಿತು. ಅವನು ಯಾವಾಗ ವಿದೇಶದಿಂದ ಮರಳಿ ಬಂದ, ಯಾವಾಗ ಶಾಲೆಯ ಕಾರ್ಯದರ್ಶಿಯಾದ ಎಂಬುದು ನನಗೆ ತಿಳಿಯಲಿಲ್ಲ.
ನಾನು ತುಂಬು ಉತ್ಸಾಹದಿಂದ ಕನಕ್ ತ್ರಿವೇದಿಯವರ ವಾತಾನುಕೂಲ ಕ್ಯಾಬಿನ್ಗೆ ಹೋದೆ.

“ನನ್ನ ಗುರುತು ಸಿಗ್ತಿದೆಯಲ್ವ?” ನಾನು ಕ್ಯಾಬಿನ್ ಒಳಗೆ ಹೋದಾಗ ಕೇಳಿದೆ.
ಕನಕ ಸುವರ್ಣ ಫ್ರೇಮ್ ಮತ್ತು ನೀಲಿ ಗಾಜಿನ ಕನ್ನಡಕದೊಳಗಿನಿಂದ ನನ್ನನ್ನು ನೋಡಿದ. ನನ್ನ ನಗು ಮುಖವನ್ನು ನೋಡುತ್ತಾ ಹೇಳಿದ, “ನಿಮ್ಮನ್ನೆಲ್ಲೋ ನೋಡಿದಂತಿದೆ!”

“ಮರೆತು ಬಿಟ್ಯಾ?” ಅವನ ಮರೆವಿನ ಬಗ್ಗೆ ಲೇವಡಿ ಮಾಡುತ್ತಾ ನನ್ನ ಪರಿಚಯ ಹೇಳಿದೆ. ಕನಕ ನನ್ನ ಕೈಕುಲುಕುತ್ತಾನೆಂದು ನಿರೀಕ್ಷಿಸಿದೆ.

“ಹಾಂ...ಈಗ ನಿಮ್ಮ ಗುರ್ತು ಸಿಕ್ತು!” ಅವನು ಸುಂದರವಾಗಿದ್ದ ಪಾರ್ಕರ್ ಪೆನ್ನಿನಿಂದ ಕಿವಿಯ ಬುಡವನ್ನು ಸ್ಪರ್ಶಿಸಿಕೊಳ್ಳುತ್ತಾ ಗಂಭೀರವಾಗಿ ಹೇಳಿದ, “ಇದು ಕಚೇರಿ, ಇಲ್ಲಿ ನೀವು ಶಿಷ್ಟಾಚಾರದಿಂದ ವರ್ತಿಸಬೇಕು. ಹೇಳಿ, ಏಕೆ ಬಂದಿರಿ?”

ನನಗೆ ಕನಕ ಅವನ ಹುದ್ದೆಗನುಸಾರವಾಗಿ ವರ್ತಿಸುವಂತೆ ಉಪದೇಶವನ್ನು ಕೊಡುತ್ತಿದ್ದ. ನಾನಿಲ್ಲಿಗೆ ಏಕೆ ಬಂದಿದ್ದೆ ಎಂಬುದನ್ನೇ ನಾನು ಮರೆತಿದ್ದೆ. ನಾನು ನಿಟ್ಟುಸಿರು ಬಿಡುತ್ತಾ, ಉಗುಳು ನುಂಗಿಕೊಳ್ಳುತ್ತಾ, ನಾನು ಬಂದ ಉದ್ದೇಶವನ್ನು ಹೇಳಿದೆ.

“ನೀವು ತಡ ಮಾಡಿದಿರಿ!” ಶಾಲೆಯ ಕಾರ್ಯದರ್ಶಿಗಳು ವಿಷಾದವನ್ನು ವ್ಯಕ್ತಪಡಿಸಿದರು, “ಸ್ಪೆಷಲ್ ಕೇಸ್ ಆಗಿ ಶಿಫಾರಸ್ ಮಾಡುವ ದಿನ ಸಹ ಕಳೆದು ಹೋಗಿದೆ. ಐ ಯಾಮ್ ಸಾರಿ...” ನಂತರ ಕ್ಷಣಕಾಲ ನನ್ನ ಮುಖವನ್ನೇ ನೋಡುತ್ತಾ ಕನಕ ಕೇಳಿದ, “ಮತ್ತೇನಾದ್ರು?”

ಈಗ ಹೇಳಲು ಏನು ತಾನೇ ಉಳಿದಿತ್ತು? ಆದರೂ ಧೈರ್ಯವಹಿಸಿ, ಅನೇಕ ವರ್ಷಗಳ ಹಿಂದಿನ ಘಟನೆಗಳು ಮತ್ತು ಅವನ ಮಾತುಗಳನ್ನು ನೆನಪಿಸಿಕೊಂಡು, ಆ ದಿನಗಳನ್ನು ನೆನಪು ಮಾಡಲಾರಂಭಿಸಿದೆ. ಆ ಹಿಂದಿನ ಕನಕನ ಮುಖವನ್ನು ನೆನೆಯುತ್ತಾ, ಈಗ ಎದುರು ಕೂತ ಕಾರ್ಯದರ್ಶಿ ಕನಕ್ ತ್ರಿವೇದಿಯವರ ಮುಖವನ್ನು ಎವೆಯಿಕ್ಕದೆ ನೋಡುತ್ತಿದ್ದೆ. ಮಗಳಿಗೆ ಬಹುಶಃ ಅನುಕೂಲವಾಗಬಹುದು...

“ನೀವೆಲ್ಲೋ ತಪ್ಪು ಮಾಡುತ್ತಿದ್ದೀರ ಎಂದು ತೋರುತ್ತಿದೆ. ಇವತ್ತು ನೀವು ಯಾವ ಘಟನೆಯನ್ನು ನೆನಪಿಸುತ್ತಿದ್ದೀರೋ, ಅದು ನನಗೆ ಸಂಬಂಧಿಸಿದ್ದಲ್ಲ. ಇಟ್ ಈಸ್ ಇಂಪಾಸಿಬಲ್. ಮೈ ಮೆಮೊರಿ ಈಸ್ ಸೋ ಶಾರ್ಪ್, ಐ ಕೆನಾಟ್ ಫಾರಗೆಟ್! ನನಗೆ ನೆನಪಿದೆ, ನೀವು ಯಾರ ಬಗ್ಗೆ ಪ್ರಸ್ತಾವ ಮಾಡುತ್ತಿರುವಿರೋ, ಅವರು ನಿಮ್ಮ ಆಗಿನ ವಿಶೇಷ ಗೆಳೆಯ ಜನಕ್ ಚತುರ್ವೇದಿಯಾಗಿದ್ದಾರೆ. ಸರಿಯಾಗಿ ನೆನಪಿಸಿಕೊಳ್ಳಿ...ಜನಕ್ ಚತುರ್ವೇದಿಯವರ ಕುರ್ಚಿಯಲ್ಲಿ ನೀವು ಮರೆತು ನನ್ನನ್ನು ಕೂರಿಸುತ್ತಿಲ್ಲ ತಾನೇ?”

ನನಗೆ ಆಶ್ಚರ್ಯವಾಯಿತು. ಜನಕ್ ಚತುರ್ವೇದಿ ಹೆಸರಿನ ಮುಖವುಳ್ಳ ಕಾರ್ಯದರ್ಶಿಯನ್ನು ಸೃಷ್ಟಿಸುವಲ್ಲಿ ನನ್ನ ಬೆವರಿಳಿಯಿತು. ಎದುರಿಗೆ ಕೂತಿರವ ಪ್ರಭಾವಿ ಮುಖ ಕನಕ್ ತ್ರಿವೇದಿ...ಜೀವನದ ಉಷಾಕಾಲದಲ್ಲಿ ಗೆಳೆಯನೆಂದು ಹೇಳುವ, ಕಣ್ಣೀರಿನ ಇನ್ನೊಂದು ಮುಖ...ಅವನು ಜನಕ್ ಚತುರ್ವೇದಿಯಾಗಿದ್ದನೆ? ಒಂದು ಮುಖವಿದ್ದದ್ದು ಮಾತ್ರ ನೆನಪಾಗುತ್ತದೆ...ಪಾರ್ಕರ್ ಪೆನ್ನಿನಿಂದ ಕಿವಿಯ ಬುಡವನ್ನು ಸ್ವರ್ಶಿಸಿಕೊಳ್ಳುತ್ತಾ ಸುವರ್ಣ ಫ್ರೇಮ್ ಮತ್ತು ನೀಲಿ ಕನ್ನಡಕ ಧರಿಸಿ ತೀಕ್ಷ್ಣವಾಗಿ ನೋಡುತ್ತಿರುವ ಈ ಮುಖ...

ನನ್ನೆದೆ ಬಡಿದುಕೊಳ್ಳುತ್ತದೆ. ವಾತಾನುಕೂಲದ ಕೊಠಡಿಯಲ್ಲೂ ನನ್ನ ಶರೀರ ಬೆವರಿನಿಂದ ಒದ್ದೆಯಾಗುತ್ತದೆ. ಹೆಚ್ಚುತ್ತಿರುವ ಕಳವಳ... ಸ್ವಚ್ಛ, ಶುದ್ಧ ನೀರಿನಲ್ಲಿ ಅಗಣಿತ ಕಿರಣಗಳು ಹೊಳೆಯುವಂತೆ, ಒಮ್ಮೆಲೆ ಕಂಪಿಸಿದ ನೀರಿನ ಮೇಲ್ಮೈಯಿಂದಾಗಿ ನಿಜವಾದ ನೆರಳನ್ನು ಮೂಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಈ ಪ್ರಯತ್ನ ತಡ ರಾತ್ರಿಯವರೆಗೂ ಸಾಗುತ್ತಿರುತ್ತದೆ...ಆಗ...

“ನೀವಿನ್ನೂ ನಿದ್ರಿಸಿಲ್ವ?” ಹೆಂಡತಿ ಮಗ್ಗಲಾಗುತ್ತಾ ಕೇಳುತ್ತಾಳೆ.
“ನಿದ್ರೆಯೇ ರ್ತಿಲ್ಲ!” ನಾನು ಮಂದವಾಗಿ ಮುಗುಳ್ನಗುತ್ತಾ ರಗ್ಗನ್ನು ತಲೆಗೆ ಎಳೆದುಕೊಳ್ಳುತ್ತೇನೆ.

ಹೆಂಡತಿ ಸಮೀಪಕ್ಕೆ ಬರುತ್ತಾಳೆ. ನಾನು ಸಜಹವಾಗಿ ಹಿಂದಕ್ಕೆ ಸರಿಯುತ್ತೇನೆ. ನಾನು ನಾಚುತ್ತಿದ್ದ ಹೆಂಡತಿಯ ಮುಖದ ಮೇಲೆ ದೃಷ್ಟಿ ಹರಿಸುತ್ತೇನೆ. ಆದರೆ...
ಕಳೆದ ಅನೇಕ ವರ್ಷಗಳಿಂದ ಹೀಗೇ ನಡೆದುಕೊಂಡು ಬಂದಿದೆ. ರಾತ್ರಿ ವೇಳೆಯಲ್ಲಿ ಎಲ್ಲರೂ ನಿದ್ರಿಸಿದ ನಂತರ ಆಗಾಗ ಕೋಣೆಯ ಅತ್ತ ಕಡೆಯಿಂದ ಬಟ್ಟೆಗಳ ಸರಸರ ಶಬ್ದ ಕೇಳಿಸುತ್ತದೆ...ಒಮ್ಮೊಮ್ಮೆ ಈ ಕಡೆಯಿಂದಲೂ ಕೇಳಿ ಬರುತ್ತದೆ.

ಈ ಬಾರಿ ಬಂದ ಶಬ್ದಗಳನ್ನು ನನ್ನಿಂದ ಸಹಿಸಲಾಗಲಿಲ್ಲ. ರಾತ್ರಿಯ ಅಂಧಕಾರದ ನಡುವೆ ನಾಲ್ಕೂ ಕಡೆ ಹೊಳೆಯುವ ಅಗಣಿತ ಮುಖಗಳ ರೇಖೆಗಳು...
ನಿರಂತರವಾಗಿ ಮೂರ್ನಾಲ್ಕು ಬಾರಿ ಹೀಗಾಯಿತು. ಇನ್ನೊಂದು ತುದಿಯಿಂದ ಆರಂಭವಾಗುವ ಸರಸರ ಶಬ್ದದ ಕೊನೆಯಲ್ಲಿ ಸುಮಾರಾಗಿ ಇಂಥ ಮಾತುಕತೆಗಳು, ಟೇಪ್ ಮಾಡಿದಂತೆ. ಹಿಂದಿನ ರಾತ್ರಿ ಸಹ ಹೀಗೆಯೇ ಆಯಿತು. ವಿಶಾಲ ಕಣ್ಣುಗಳಲ್ಲಿ ಶೂನ್ಯ ತುಂಬಿ, ಡಿಮ್ ಲೈಟಿನ ತೆಳು ಬೆಳಕಿನಲ್ಲಿ ವಿಚಿತ್ರ ನೆರಳುಗಳನ್ನು ಸೃಷ್ಟಿಸುತ್ತಾ ಛಾವಣಿಯನ್ನು ನೋಡುತ್ತಾ, ಅನೇಕ ಮುಖಗಳಲ್ಲಿ ಒಂದು ನಿಜವಾದ ಕಾರ್ಯದರ್ಶಿಯನ್ನು ಪ್ರತ್ಯೇಕ ಮಾಡಲು ಪ್ರಯತ್ನಿಸುತ್ತಿದ್ದೆ, ಆಗಲೇ ‘ಛಾವಣಿಯನ್ನೇಕೆ ನೋಡುತ್ತಿದ್ದೀರ?’ ಎಂದು ಹೆಂಡತಿಯ ಮಾತಿನೊಂದಿಗೆ, ಅವಳ ದೇಹದ ಸದ್ದು ಒಮ್ಮೆಲೆ ಮೂಡಿತು.

“ವಿಶೇಷವಾಗಿ ಏನಿಲ್ಲ...ಹೀಗೇ ಸುಮ್ನೆ!” ಈ ಮೊದಲಿನಂತೆಯೇ ಮೆಲ್ಲನೆ ನಕ್ಕು ರಗ್ಗನ್ನು ಹೊದ್ದುಕೊಳ್ಳುತ್ತೇನೆ.
ಸ್ವಲ್ಪ ಹೊತ್ತು ಮೌನ, ಮತ್ತೆ ಬಟ್ಟೆಗಳ ಸದ್ದು. ಹೆಂಡತಿಯ ಕೈ ಹೆಗಲನ್ನು ಮುಟ್ಟಿದ ಅನುಭವವಾಗುತ್ತದೆ. ಹೆಗಲು ಭಾರವೆನಿಸುತ್ತದೆ. ಮೆಲ್ಲನೇ ಕೈಯನ್ನು ಸರಿಸಿ ಹೆಂಡತಿಯನ್ನು ನೋಡುತ್ತೇನೆ, ಎರಡು ಚಿಕ್ಕ-ಚಿಕ್ಕ ಕಣ್ಣುಗಳಿಂದ ಮೂಡುವ ಪ್ರಶ್ನೆ ಮತ್ತು ಕತ್ತಿನ ಮೇಲೆ ಬಾಗಿದ ಮುಖ...ಆ ಕಣ್ಣುಗಳೊಂದಿಗೆ ನನ್ನ ಕಣ್ಣುಗಳನ್ನು ಕೂಡಿಸಿ ಏನೋ ಹೇಳಲು ಬಯಸುತ್ತೇನೆ. ಆಗಲೇ...

“ನಿಮಗೆ ಇದ್ದಕ್ಕಿದ್ದಂತೆ ಏನಾಗಿದೆ?” ಪ್ರಶ್ನೆಯಲ್ಲಿ ದೂರಿತ್ತು.
“ಏನಾಗಿದೆ?” ನಾನು ಅರ್ಥವಾಗದಂತೆ ಮಾತನಾಡುತ್ತೇನೆ.
“ನೀವು ತುಂಬಾ ದಿನಗಳಿಂದ ಹೀಗೆ ಮಾಡ್ತಿದ್ದೀರ.”
ಹೇಗೆ? ಎಂದು ಕೇಳಲು ಮನಸ್ಸಾದರೂ ಕೇಳುವುದಿಲ್ಲ.

“ನಾನು ಪ್ರೀತಿಯಿಂದ ಕರೆದರೂ ನೀವು...” ಧ್ವನಿಯಲ್ಲಿ ಕರುಣೆ ಮೂಡುತ್ತದೆ, “ಈಗ ನಾನು ನಿಮಗೆ ಕೆಟ್ಟವಳಾಗಿ...ನಿಮಗೆ ಇಷ್ಟವಾಗುವುದಿಲ್ಲ ಎಂಬಂತೆ...”
ರಗ್ಗಿನಿಂದ ಕೈಯನ್ನು ಹೊರಚಾಚಿ ಹೆಂಡತಿಯ ಬೆರಳುಗಳನ್ನು ಸ್ಪರ್ಶಿಸುತ್ತೇನೆ. ನಂತರ ಹಾಗೆಯೇ ಎವೆಯಿಕ್ಕದೆ ಮಲಗಿಯೇ ನೋಡುತ್ತೇನೆ.
“ನಾನು ಹೇಳಿದ್ದು ನಿನಗೆ ಅರ್ಥವಾಗುವುದೇ?” ಸ್ವಲ್ಪ ತಡೆದು ಕೇಳುತ್ತೇನೆ.
“ಎಂಥ ಮಾತಾಡ್ತೀರ?” ಹೆಂಡತಿ ಮುಖವನ್ನು ನೇವರಿಸುತ್ತಾ ನಗುತ್ತಾಳೆ, “ಎಲ್ಲಿದೆ ಅಂತ ನೀವು ಇದೀಗ ತಾನೇ...”
“ನಾನು ನಿಜವಾಗಿ ಏನೂ ಹೇಳಲಿಲ್ಲವೇ?” ಏನೋ ಒಂದು ವಿಧದ ಆಘಾತವಾಗುತ್ತದೆ. ಅದೆಷ್ಟು ಮೌನ ರಾತ್ರಿಗಳು...ಬೆರಳುಗಳಿಂದ ಆಡುವ, ಎದುರಿಗೆ ದೃಷ್ಟಿಯನ್ನು ನೆಟ್ಟು ಒಂದು ಶಬ್ದ ಸಹ ಹೇಳದೆ ಅದೆಷ್ಟೋ ಮಾತುಗಳು...

ಹಾಂ, ಆಗ ಮುಗ್ಧ ಮುಖಗಳ ಎರಡು ಸುಂದರ ಕಣ್ಣುಗಳು ಏನೂ ಕೇಳದೆ ಎಲ್ಲವನ್ನು ಸಹ ಅರ್ಥ ಮಾಡಿಕೊಳ್ಳುತ್ತಿದ್ದವು. ನಂತರ ಹೀಗೆಯೇ ಬೆಳಗಾಗುತ್ತಿತ್ತು.
ಹೆಂಡತಿ ಮೆಲ್ಲನೆ ನಗುತ್ತಾಳೆ, “ನೀವು ಮಾತನಾಡದವರೆಗೆ, ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದು ಹೇಗೆ ಅರ್ಥವಾಗುತ್ತದೆ?”
ನಾನು ಸಹಜವಾಗಿಯೇ ಕಂಪಿಸಿ ದೂರಕ್ಕೆ ಸರಿದುಕೊಳ್ಳುತ್ತೇನೆ.

“ವಾಹ್...ನಿನಗೆ ನೆನಪಿದೆ, ನಾವು ಹೀಗೆಯೇ ಮಲಗಿರುತ್ತಿದ್ದೆವು...ಎರಡು ಗಂಟೆಯವರೆಗೆ...ಆಗ ಎಲ್ಲವೂ ಅರ್ಥವಾಗುತ್ತಿತ್ತು. ನನ್ನ ಮುಖದ ಎದುರು ಅನೇಕ ವರ್ಷಗಳ ಹಿಂದಿನ ಮುಖ ಮೂಡಲಾರಂಭಿಸುತ್ತದೆ.

“ಖಂಡಿತ ನಿಮ್ಮ ಮೇಲೆ ಭೂತವೊಂದರ ನೆರಳು ಬಿದ್ದಿದೆ. ಅಲ್ಲ, ನಾವು ಯಾವತ್ತು ಹೀಗೆ ಮಲಗಿದ್ದೆವು? ಮಾತನಾಡದೆ ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ? ಇನ್ನೊಬ್ಬರ ಮನಸ್ಸಿನೊಳಗೆ ನುಗ್ಗಲು ಸಾಧ್ಯವೇ? ನಿಮ್ಮ ಮಾತುಗಳೆಲ್ಲವೂ ಉಲ್ಟಾ-ಪಲ್ಟಾ...” ಹೀಗೆಂದು ಹೆಂಡತಿ ಎರಡೂ ಕೈಗಳನ್ನು ಚಾಚುತ್ತಾಳೆ. ವಿಶಾಲ ಕಣ್ಣುಗಳಿಂದ ಅವಳ ಮುಖವನ್ನು ನೋಡಿದ ನಂತರ ಛಾವಣಿಯನ್ನು ನೋಡುತ್ತೇನೆ. ಹೊಳೆಯುವ ಚಿತ್ರಗಳು ಅತ್ತ-ಇತ್ತ ಚದುರುತ್ತವೆ.

ಸ್ವಲ್ಪ ಹೊತ್ತಿಗೆ ಎಲ್ಲವೂ ಶಾಂತವಾಗುತ್ತದೆ. ಹೆಂಡತಿ ಗೊರಕೆ ಹೊಡೆಯುವುದು ಕೇಳಿಸುತ್ತದೆ. ಅವಳ ಮುಚ್ಚಿದ ಕಣ್ಣುಗಳುನ್ನ ನೋಡುತ್ತೇನೆ...ಆ ಚಿಂತೆ ಅಸಹ್ಯವಾಗುತ್ತದೆ.

ಬೆಳಿಗ್ಗೆ ತಡವಾಗಿ ಏಳುತ್ತೇನೆ. ಬ್ರಶ್ ಬಾಯಿಗೆ ಹಾಕಿಕೊಂಡಾಗ ಮಗಳು ಉಮಾ ಹೇಳುತ್ತಾಳೆ, ‘ಅಪ್ಪಾ, ನಿಮ್ಮ ಆರೋಗ್ಯ ಸರಿಯಿಲ್ವಾ?”
“ನಾನು ಆರೋಗ್ಯವಾಗಿದ್ದೇನಲ್ಲ...”
ನಿಮ್ಮ ಮುಖದಲ್ಲೇಕೆ ಬೇಸರವಿರುತ್ತದೆ? ನೀವು ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಿ, ನಿಮ್ಮ ಮುಖ ಬದಲಾದಂತಿದೆ.”
ನಾನು ಮುಖವನ್ನು ಸವರಿಕೊಳ್ಳುತ್ತೇನೆ.
“ಅವರಿಗೆ ರಾತ್ರಿ ನಿದ್ರೆ ಸರಿಯಾಗಿ ಬರಲಿಲ್ಲ, ಅದಕ್ಕೇ ಮುಖ ಹೀಗಿದೆ...” ಹೆಂಡತಿ ನಡುವೆ ಬಂದು ಹೇಳಿದಳು.
ಹೌದು, ನನಗೆ ರಾತ್ರಿಯೆಲ್ಲಾ ನಿದ್ರೆ ಬಂದಿಲ್ಲ.

ಇಂದ:
ಡಿ.ಎನ್. ಶ್ರೀನಾಥ್,
ನವನೀತ,
2ನೇ ತಿರುವು, ಅಣ್ಣಾಜಿರಾವ್ ಲೇಔಟ್,
ಮೊದಲ ಹಂತ, ವಿನೋಬಾನಗರ,
ಶಿವಮೊಗ್ಗ-577204
ಮೊ: 9611873310

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.