ಹೊಂದಿಕೊಳ್ಳಬೇಕು... ಆಟದಲ್ಲೂ ಬದುಕಿನಲ್ಲೂ!

7

ಹೊಂದಿಕೊಳ್ಳಬೇಕು... ಆಟದಲ್ಲೂ ಬದುಕಿನಲ್ಲೂ!

Published:
Updated:
Deccan Herald

ತಾನು ಬ್ಯಾಟಿಂಗ್ ವರಸೆಗಳನ್ನು ಕಲಿತು, ಆಟದಲ್ಲಿ ಬೇರಿಳಿಸಿಕೊಂಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರುಣ್ ನಾಯರ್ ಮಿಂಚಿದ ಉದಾಹರಣೆಗಳು ಸಾಕಷ್ಟಿವೆ. ಆದರೆ, ವರ್ಷಗಳ ಹಿಂದೆ ಅವರು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಎದುರಿನ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಗಳಿಸಿದಾಗ, ಇಡೀ ವಿಶ್ವವೇ ಅವರನ್ನು ಬೆರಗಿನಿಂದ ನೋಡಿತ್ತು. ಅಷ್ಟೇ ಅಲ್ಲ, ವಿದೇಶಿ ಪತ್ರಿಕೆಗಳೂ ಕರ್ನಾಟಕವೂ ಮುಂಬೈನಂತೆ ಹೇಗೆ ಬ್ಯಾಟ್ಸ್‌ಮನ್ ಷಿಪ್ ರೂಢಿಸುತ್ತಿದೆ ಎನ್ನುವ ವಿಶ್ಲೇಷಣೆ ಪ್ರಕಟಿಸಿದ್ದವು. 

ಈಗ ಕರುಣ್ ಸುದ್ದಿಯಲ್ಲಿದ್ದಾರೆ-ಆಟದಿಂದ ಅಲ್ಲ; ವೆಸ್ಟ್ ಇಂಡೀಸ್ ವಿರುದ್ಧ ಆಡುವ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲಿಲ್ಲ ಎನ್ನುವ ಕಾರಣಕ್ಕೆ. ದೇಸಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕರುಣ್, ಮೊದಲಿನಿಂದಲೂ ಆಗೀಗ ಭಾವಸ್ಫೋಟದಿಂದಾಗಿ ಸದ್ದು ಮಾಡಿದವರು. ಅವರು ಬೇಗ ಹತಾಶರಾಗಿರುವ ಹಲವು ಸಂದರ್ಭಗಳಿವೆ. ತ್ರಿಶತಕ ಗಳಿಸಿದಾಗ ನೀಡಿದ ಸಂದರ್ಶನಗಳಲ್ಲಿಯೂ ಅವರು ಅದನ್ನು ಒಪ್ಪಿಕೊಂಡಿದ್ದರು.

‘ಅಂತರರಾಷ್ಟ್ರೀಯ ತಂಡದ ಪರವಾಗಿ ಆಡುವುದು ಎಲ್ಲರ ಕನಸು. ಅದಕ್ಕಾಗಿ ಮನಸ್ಸು ಸದಾ ತುಡಿಯುತ್ತಿರುತ್ತದೆ. ಈ ದಿನಮಾನದಲ್ಲಿ ಸ್ಪರ್ಧೆ ಜೋರಾಗಿದೆ. ನಾನು ಮೊದಲು ಸಣ್ಣ ಸಣ್ಣ ಬೇಸರವನ್ನೂ ಸಹಿಸದ ಸ್ಥಿತಿಗೆ ಹೋಗುತ್ತಿದ್ದೆ. ದಿನೇ ದಿನೇ ಅದನ್ನು ಮೀರುವುದನ್ನು ಅಭ್ಯಾಸ ಮಾಡಿಕೊಂಡೆ. ಇಷ್ಟಕ್ಕೂ ನಾಳೆ ಎನ್ನುವುದು ಇದ್ದೇ ಇದೆ. ಅದಕ್ಕಾಗಿ ನಾವು ಕಾಯಲೇಬೇಕು. ಇವತ್ತಿನ ಆಟವನ್ನು ನಾಳೆ ಇನ್ನಷ್ಟು ಸುಧಾರಿಸಿಕೊಳ್ಳಬೇಕು’- ಕರುಣ್ ತ್ರಿಶತಕ ಗಳಿಸಿದ ಸಂದರ್ಭದಲ್ಲಿ ಹೀಗೆ ಹೇಳಿಕೊಂಡಿದ್ದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೆರಳಿನ ಬ್ಯಾಟಿಂಗ್ ಶಿಸ್ತಿನಲ್ಲಿ ಬೆಳೆದ ಪ್ರತಿಭಾವಂತರಲ್ಲಿ ಕರುಣ್ ಕೂಡ ಒಬ್ಬರು. ಚಿಕ್ಕ ಪ್ರಾಯದಿಂದಲೂ ಅನೇಕ ಸಹಆಟಗಾರರು ಅವರ ಭಾವತೀವ್ರತೆಯನ್ನು ನೋಡಿದವರೇ. ಈಗ ತಂಡಕ್ಕೆ ಆಯ್ಕೆ ಆಗಲಿಲ್ಲ ಎನ್ನುವುದು ಗೊತ್ತಾದದ್ದೇ ಕರುಣ್ ಮಾಧ್ಯಮದ ಎದುರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹರಭಜನ್ ಸಿಂಗ್ ತರಹದ ಹಿರಿಯ ಆಟಗಾರ ಕೂಡ ಅವರ ಬೆಂಬಲಕ್ಕೆ ನಿಂತಿರುವುದು ಗಮನಾರ್ಹ.

ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಆಟಗಳ ಬದಲಾಗುವ ಸನ್ನಿವೇಶಗಳಿಗೆ ಒಗ್ಗಿಕೊಳ್ಳುವ ಸವಾಲು ಸಮಕಾಲೀನ ಆಟಗಾರರಿಗೆ ಇದೆ. ಕರುಣ್ ಮೂರೂ ಪ್ರಕಾರಗಳಿಗೆ ಹೊಂದಿಕೊಳ್ಳುವ ಪ್ರಕ್ರಿಯೆಯನ್ನೇ ತಮ್ಮ ಭಾವುಕ ವ್ಯಕ್ತಿತ್ವ ನಿಯಂತ್ರಿಸಿಕೊಳ್ಳುವ ಪಾಠವನ್ನಾಗಿ ಪರಿಗಣಿಸಿದರು.

‘ಟೆಸ್ಟ್‌ನಲ್ಲಿ ಕಾಯ್ದು ಆಡಬಹುದು. ಏಕದಿನ ಪಂದ್ಯಗಳು ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹಾಗೆ ಆಗುವುದಿಲ್ಲ. ಅಲ್ಲಿ ಕಡಿಮೆ ಸಮಯದಲ್ಲೇ ಹೆಚ್ಚಿನದನ್ನು ಮಾಡಬೇಕಾದ ರಿಸ್ಕ್ ತೆಗೆದುಕೊಳ್ಳಬೇಕು. ನನಗೆ ಕ್ರಿಕೆಟ್ ಕೆಲವು ಪಾಠಗಳನ್ನು ಕಲಿಸಿದೆ. ಕಾಪಿಬುಕ್ ಹೊಡೆತಗಳನ್ನೇ ನಾನು ನೆಚ್ಚಿಕೊಳ್ಳುವುದು ಅದೇ ಕಾರಣಕ್ಕೆ. ಯಾವ ಪ್ರಕಾರದ ಕ್ರಿಕೆಟ್ ಆದರೂ ಆಟದ ಶೈಲಿ ಬದಲಾಗುವುದಿಲ್ಲ; ಮನಸ್ಥಿತಿಯನ್ನು ಮಾತ್ರ ಬದಲಾಯಿಸಿಕೊಳ್ಳುತ್ತೇವೆ.

ನಾನು ಇದನ್ನೇ ಬದುಕಿಗೂ ಅನ್ವಯಿಸಿದೆ. ಹಾಗಂತ ನಿರಾಸೆ ಆಗದೇ ಇರದು. ಮತ್ತೆ ಮತ್ತೆ ಆಟದ ಸುಧಾರಣೆಯ ಮೇಲೇ ಗಮನಹರಿಸಲು ಮನಸ್ಸನ್ನು ಕೇಂದ್ರೀಕರಿಸಬೇಕು. ಅದರಲ್ಲೇ ಖುಷಿ ಕಂಡುಕೊಳ್ಳಬೇಕು’ ಎಂದು ವರ್ಷದ ಹಿಂದೆ ಈ ಪ್ರತಿಭಾವಂತ ಬ್ಯಾಟ್ಸ್ ಮನ್ ಹೇಳಿದ್ದರು. ಈಗ ಅದೇ ಮಾತನ್ನು ಅನುಷ್ಠಾನಕ್ಕೆ ತರುವ ಕಾಲ ಮತ್ತೆ ಬಂದೊದಗಿದೆ.

‘ತ್ರಿಶತಕ ಗಳಿಸಿದ ಆಟಗಾರನಿಗೂ ತಂಡದಲ್ಲಿ ಸ್ಥಾನ ಭದ್ರ ಮಾಡಿಕೊಳ್ಳುವುದು ಇಷ್ಟು ಕಷ್ಟವಾ’ ಎಂಬ ಪ್ರಶ್ನೆ ಹೋದವರ್ಷವೂ ಅವರಿಗೆ ಎದುರಾಗಿತ್ತು. ಈ ವರ್ಷವೂ ಎದುರಾಗಿದೆ. ಮತ್ತೆ ಆಟದ ಮೂಲಕವೇ ಉತ್ತರಿಸಬೇಕಷ್ಟೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !