ಬುಧವಾರ, ಜನವರಿ 22, 2020
27 °C

ಕಲೆಯಾಗಿ‘ಅರಳಿ’ದ ಒಣಗಿದ ಎಲೆ

ಪ್ರಫುಲ್ಲ ಕೋಟ್ಯಾನ್‌ Updated:

ಅಕ್ಷರ ಗಾತ್ರ : | |

Prajavani

ಮರದಿಂದ ಉದುರಿಬಿದ್ದ ಬಳಿಕ ಕಸವಾಗುವ ಅರಳಿ ಮರದ ಎಲೆಗಳನ್ನು ಕಲೆಯ ಅಭಿವ್ಯಕ್ತಿಗೆ ಕ್ಯಾನ್ವಾಸ್‌ನಂತೆ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಕಲಾವಿದ ಬಿ.ಕೆ. ಮಹೇಶ್‌ ತೋರಿಸಿಕೊಟ್ಟಿದ್ದಾರೆ. 

ಬಸವೇಶ್ವರ ನಗರದ ಅವರ ಮನೆಯ ಒಳಹೊಕ್ಕರೆ ಸುಂದರವಾಗಿ ಬಣ್ಣ ಬಳಿದುಕೊಂಡ ನೂರಾರು ಅಶ್ವತ್ಥ ಮರದ ಎಲೆಗಳು ನಿಮ್ಮ ಮುಂದೆ ಹರಡಿಕೊಳ್ಳುತ್ತವೆ. ತೆಳ್ಳನೆಯ ಜೇಡರ ಬಲೆ ಹೆಣೆದಂತೆ ಕಾಣುವ ಎಲೆಗಳ ನರಮಂಡಲಗಳ ಮೇಲೆ ಮಹೇಶ್ ಅವರ ಕೈಚಳಕದ ಜಾದೂ ಎದ್ದು ಕಾಣುತ್ತದೆ. 

ಮೂಲತಃ ಮೈಸೂರಿನವರಾದ ಮಹೇಶ್‌ ವೃತ್ತಿಗಾಗಿ ಬಸವೇಶ್ವರ ನಗರದಲ್ಲಿ ನೆಲೆ ನಿಂತಿದ್ದಾರೆ.  ಅರಳಿ ಎಲೆಗಳ ಮೇಲೆ ಚಿತ್ರಗಳನ್ನು ಬಿಡಿಸುವುದು ಅವರ ಹವ್ಯಾಸ. ಹತ್ತು ವರ್ಷಗಳಲ್ಲಿ 400ಕ್ಕೂ ಹೆಚ್ಚು ಕಲಾಕೃತಿಗಳು ಎಲೆಗಳ ಮೇಲೆ ಅರಳಿ ನಿಂತಿವೆ. 

ಅರಳಿ ಮರದ ಹಸಿರು ಎಲೆಗಳನ್ನು ಒಣಗಿಸಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿದ ನಂತರ ಒಣಗಿದ ಎಲೆಗಳನ್ನು ಕ್ಯಾನ್ವಾಸ್‌ನಂತೆ ಬಳಸುತ್ತಾರೆ. ಪುಟ್ಟ ಎಲೆಗಳ ಮೇಲೆ ಬಣ್ಣ, ಬಣ್ಣದ ಪಕ್ಷಿಗಳು, ಪರಿಸರ,  ದೇವರ ಚಿತ್ರಗಳು, ಟಾಮ್‌ ಆ್ಯಂಡ್‌ ಜೆರಿ, ಡೊರೆಮಾನ್‌, ಮಿಕ್ಕಿ ಮೌಸ್‌ನಂತಹ ಕಾರ್ಟೂನ್‌ಗಳು ಅನಾವರಣಗೊಂಡಿವೆ.

ತಾಜಾ ಎಲೆಗಳಾಗಬೇಕು

ಸೂಕ್ತ ಎಲೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಒಂದು ಜಾಣ್ಮೆಯ ಕೆಲಸ. ಒಣಗಿ ನೆಲದಲ್ಲಿ ಬಿದ್ದಿರುವ ಎಲೆಗಳಲ್ಲಿ ಚಿತ್ರ ಬಿಡಿಸಲು ಸಾಧ್ಯವಿಲ್ಲ. ಮರದಿಂದ ಕಿತ್ತ ತಾಜಾ ಎಲೆಗಳೇ ಆಗಬೇಕು. 

ಮರದಿಂದ ಕಿತ್ತು ತಂದ ತಾಜಾ ಎಲೆಗಳನ್ನು ರಾಸಾಯನಿಕ ಪ್ರಕ್ರಿಯೆಗೆ ಒಳ ಪಡಿಸಲಾಗುವುದು. ಸೋಡಿಯಂ ಹೈಡ್ರಾಕ್ಸೈಡ್‌ ದ್ರಾವಣದಲ್ಲಿ ಎಲೆಗಳನ್ನು ಹದವಾಗಿ ಕುದಿಸಿ, ಹಸಿರು ಭಾಗವನ್ನು ಸೂಕ್ಷ್ಮವಾಗಿ ತೊಳೆದು ತೆಗೆಯುವುದು ಸವಾಲಿನ ಕೆಲಸ. ತೆಳುವಾದ ಸೂಕ್ಷ್ಮಹಂದರ ಹರಿಯದಂತೆ ಎಚ್ಚರಿಕೆ ವಹಿಸಬೇಕು. ಬಳಿಕ ತೆಳುವಾದ ಪೇಪರ್‌ನಿಂದ ಎಲೆಗಳನ್ನು ಒಣಗಿಸಬೇಕು. ಈ ಪ್ರಕ್ರಿಯೆ ಒಟ್ಟು 3 ರಿಂದ 4 ದಿನ ತೆಗೆದುಕೊಳ್ಳುತ್ತದೆ. 

ಎಲೆಯ ನೆಯ್ಗೆ ಹರಿದು ಹೋಗುವ ಕಾರಣ ಪೆನ್ಸಿಲ್‌ ಬಳಸುವಂತಿಲ್ಲ. ನೇರವಾಗಿ ತೆಳುವಾದ ಕುಂಚದಿಂದ ಚಿತ್ರ ಬಿಡಿಸಿ, ಫ್ಯಾಬ್ರಿಕ್‌ ಕಲರ್ ತುಂಬಲಾಗುತ್ತದೆ ಎಂದು ಮಹೇಶ್ ವಿವರಿಸುತ್ತಾರೆ. 

ಎಲೆಗಳ ಮೇಲೆ ಬಣ್ಣದ ಚಿತ್ತಾರ ಬರೆಯುವುದು ಹೇಗೆ ಎಂದು ಇವರಿಗೆ ಹೇಳಿಕೊಟ್ಟವರು ಮೈಸೂರಿನ ಸಿಎಫ್‌ಐಟಿಎಆರ್‌ಐ ಅಧಿಕಾರಿ ವಿಶ್ವನಾಥ್‌. ಸದ್ಯ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹೇಶ್‌ ಅವರು ಬಿಡುವಿನ ವೇಳೆಯನ್ನು ತಮ್ಮ ಹವ್ಯಾಸವಾದ ಚಿತ್ರಕಲೆಗೆ ಮೀಸಲಾಗಿಡುತ್ತಾರೆ.

ಪ್ರತಿಕ್ರಿಯಿಸಿ (+)