ಶುಕ್ರವಾರ, ನವೆಂಬರ್ 27, 2020
24 °C
ಬೆಳಗಾವಿಯ ಗ್ರಾಮೀಣ ಪ್ರತಿಭೆಯ ಸೃಜನಶೀಲತೆ

PV Web Exclusive: ಅಕ್ಷಯ್‌ಕುಮಾರ್, ಯಶ್, ಆಶಿಕಾಗೆ ಬೆಳಗಾವಿಯಲ್ಲಿ ‘ಸ್ಕೆಚ್’!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಖ್ಯಾತ ಚಲನಚಿತ್ರ ನಟರಾದ ಅಕ್ಷಯ್‌ಕುಮಾರ್, ಯಶ್, ಆಶಿಕಾ ರಂಗನಾಥ್ ಮೊದಲಾದವರಿಗೆ ‘ಸ್ಕೆಚ್‌’ ಹಾಕಿದ್ದಾರೆ!

ಹೌದು. ಇದು ಸೃಜನಶೀಲತೆಯ ಹಾಗೂ ‘ಜೀವ’ ತುಂಬುವ ಸ್ಕೆಚ್!

ತಾಲ್ಲೂಕಿನ ಕಾಕತಿಯ ಗ್ರಾಮೀಣ ಪ್ರತಿಭೆ, ಎಂಜಿನಿಯರಿಂಗ್‌ ವಿದ್ಯಾರ್ಥಿ ಪವನ್ ಬಾನಿ ಪೆನ್ಸಿಲ್ ಸ್ಕೆಚ್‌ ಕಲಾ ಪ್ರಕಾರದಲ್ಲಿ ಆಕರ್ಷಕ ಚಿತ್ರ ಕಲಾಕೃತಿಗಳಿಗೆ ಜೀವ ನೀಡುವ ಮೂಲಕ ಗಮನಸೆಳೆದಿದ್ದಾರೆ. ನೈಜವಾಗಿ ಕಾಣುವಂತೆ ‘ಸ್ಕೆಚ್‌’ ಹಾಕುವುದು ಅವರ ವಿಶೇಷ.


ಸೈನಿಕನ ಚಿತ್ರ

ಇಲ್ಲಿನ ಕೆಎಲ್‌ಇ ಸಂಸ್ಥೆಯ ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ 7ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಅವರು, ಹವ್ಯಾಸವಾಗಿ ಪೆನ್ಸಿಲ್ ಸ್ಕೆಚ್ ಕಲೆಯನ್ನು ರೂಢಿಸಿಕೊಂಡಿದ್ದಾರೆ. ತನ್ಮತೆಯಿಂದ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಗಮನಸೆಳೆದಿದ್ದಾರೆ.  ಎಲ್ಲಿಯ ಸಿವಿಲ್ ಎಂಜಿನಿಯರಿಂಗ್‌, ಎಲ್ಲಿಯ ಪೆನ್ಸಿಲ್ ಸ್ಕೆಚ್‌? ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಈ ವಿಶೇಷ ಕಲೆಯಿಂದಲೇ ಈಗಾಗಲೇ ಗಳಿಕೆಯನ್ನೂ ಮಾಡುತ್ತಿದ್ದಾರೆ. ತಮ್ಮ ಖರ್ಚಿಗೆ ಪೋಷಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಕಲಿಯುತ್ತಲೇ ಗಳಿಸುತ್ತಿದ್ದಾರೆ; ಗಳಿಸುತ್ತಲೇ ಕಲಿಯುತ್ತಿದ್ದಾರೆ.


ಅಕ್ಷಯ್  ಕುಮಾರ್

ಸಹಜತೆಗಾಗಿ:

ಬಣ್ಣಗಳನ್ನು ಅವರು ಹೆಚ್ಚಾಗಿ ಬಳಸುವುದಿಲ್ಲ. ಪೆನ್ಸಿಲ್‌ ಸ್ಕೆಚ್‌ನಲ್ಲಿ ಸಹಜತೆ ಮೈದಳೆದಿರುತ್ತದೆ ಎನ್ನುವುದು ಅವರ ನಂಬಿಕೆ. ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಆರ್ಡರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಫಾಲೋವರ್ಸ್‌ಗಳನ್ನೂ ಕಂಡುಕೊಂಡಿದ್ದಾರೆ. ಯಾರಾದರೂ ಫೋಟೊ ಕೊಟ್ಟರೆ ತದ್ರೂಪ ಚಿತ್ರ ಬಿಡಿಸಿಕೊಡುವ ಕಲೆ ಅವರಿಗೆ ಸಿದ್ಧಿಸಿದೆ. ತಮ್ಮ ಸ್ಕೆಚ್‌ಗಳ ಮೂಲಕ ಮೋಡಿಕಾರ ಎನಿಸಿದ್ದಾರೆ.


 

ಎಸ್ಸೆಸ್ಸೆಲ್ಸಿಯಲ್ಲಿ ಶೇ 96.8 ಅಂಕ ಗಳಿಸಿದ್ದ ಅವರು, ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯು (ವಿಜ್ಞಾನ) ಪರೀಕ್ಷೆಯಲ್ಲೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಂಜಿನಿಯರಿಂಗ್ ಮುಗಿದ ನಂತರ ಕೆಲಸಕ್ಕೆ ಸೇರಿದ ಬಳಿಕವೂ ಚಿತ್ರ ರಚನೆಯ ಪ್ರವೃತ್ತಿ ಮುಂದುವರಿಸುವ ಇರಾದೆ ಅವರದು.

ಹಲವರಿಗೆ ರೂಪ:

ಕೈಯ್ಯಿಂದ ಮಗುವಿನ ಪಾದ ಹಿಡಿದಿರುವ ಚಿತ್ರ ಫೋಟೊ ತೆಗೆದಷ್ಟೆ ನೈಜವಾಗಿ ಮೂಡಿಬಂದಿದೆ. ಅಂತೆಯೇ ಕೆಜಿಎಫ್‌ ಚಲನಚಿತ್ರದ ರಾಕಿಂಗ್ ಸ್ಟಾರ್ ಯಶ್‌ ಚಿತ್ರ, ಮುದ್ದು ಬಾಲಕಿ, ಸೈನಿಕ, ‘ಕೇಸರಿ’ ಚಲನಚಿತ್ರದ ಅಕ್ಷಯ್‌ಕುಮಾರ್, ಚಲನಚಿತ್ರ ನಟಿ ಆಶಿಕಾ ರಂಗನಾಥ್, ಫುಟ್‌ಬಾಲ್‌ ಆಟಗಾರ ಮೆಸ್ಸಿ ಮೊದಲಾದವರ ಚಿತ್ರಗಳು ಅವರ ಪೆನ್ಸಿಲ್‌ನಲ್ಲಿ ‘ರೂಪ’ ‍ಪಡೆದುಕೊಂಡಿವೆ.


ಮೆಸ್ಸಿ


ಆಶಿಕಾ ರಂಗನಾಥ್


ಯಶ್

‘ನಾನು ಓದುತ್ತಿರುವುದಕ್ಕೂ, ನನ್ನ ‍ಕಲೆಗೂ ಸಂಬಂಧವಿಲ್ಲ. ಪೆನ್ಸಿಲ್ ಸ್ಕೆಚ್ ನನ್ನ ಹವ್ಯಾಸವಷ್ಟೆ. ತಾಯಿಗೆ ಚಿತ್ರಗಳನ್ನು ಬಿಡಿಸುವ ಅಭಿರುಚಿ ಇದೆ. ಬಹುಶಃ ನನಗೆ ಅವರಿಂದಲೇ ಈ ಕಲೆ ಬಂದಿದೆ ಎನಿಸುತ್ತದೆ. ಈ ಹವ್ಯಾಸದಿಂದ ಓದಿಗೆ ತೊಂದರೆಯಾಗದಂತೆ ಮ್ಯಾನೇಜ್ ಮಾಡುತ್ತಿದ್ದೇನೆ. 2–3 ವರ್ಷಗಳಿಂದ ಈ ಕಲೆಯಿಂದ ಗಳಿಕೆಯನ್ನೂ ಕಂಡುಕೊಂಡಿದ್ದೇನೆ. ₹ 15ರಿಂದ ₹ 20 ಸಾವಿರವನ್ನು ಇದರಿಂದಲೇ ಪಡೆದಿದ್ದೇನೆ. ಕಲೆಗೆ ಬೇಕಾಗುವ ಪೆನ್ಸಿಲ್, ಪೇಪರ್‌ ಮೊದಲಾದ ಪರಿಕರಗಳನ್ನು ಈ ಹಣದಿಂದಲೇ ಖರೀದಿಸುತ್ತಿದ್ದೇನೆ.


ಮಗುವಿನ ಚಿತ್ರ

 


ಪೆನ್ಸಿಲ್ ಸ್ಕೆಚ್‌ನಲ್ಲಿ ಮೂಡಿದ ಸುಂದರಿ

‘ನನ್ನ ಚಿತ್ರಗಳನ್ನು ನೋಡಿದವರು ಖುಷಿಪಡುತ್ತಾರೆ. ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಇದರಿಂದ ಖುಷಿಯೊಂದಿಗೆ ಹೆಮ್ಮಯೂ ಆಗುತ್ತದೆ. ಪೋಟ್ರೇಟ್‌ಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇನೆ. ಎ3 ಸೈಜಿನ ಚಿತ್ರಗಳನ್ನು ಬಿಡಿಸುತ್ತೇನೆ. ಛಾರ್ಟ್‌ ಅಳತೆಯ ಚಿತ್ರಗಳನ್ನೂ ಮಾಡಿದ್ದೇನೆ. ಒಂದೊಂದು ಚಿತ್ರ ಅಂತಿಮಗೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ. ಓದಿಗೆ–ಹವ್ಯಾಸಕ್ಕೆ ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ. ತಡರಾತ್ರಿವರೆಗೂ ಚಿತ್ರ ರಚನೆಯಲ್ಲಿ ತಲ್ಲೀನವಾಗಿರುತ್ತೇನ. ಹೀಗಾಗಿ, ವ್ಯಾಸಂಗಕ್ಕೆ ತೊಡಕಾಗುತ್ತಿಲ್ಲ. 50ಕ್ಕೂ ಹೆಚ್ಚಿನ ಚಿತ್ರಗಳನ್ನು ಸಿದ್ಧಪಡಿಸಿದ್ದೇನೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ: 8296350310.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು