ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ಚುಕ್ಕಿಯಲ್ಲಿ ‘ಕವಿ’ ಸೃಷ್ಟಿ

Last Updated 13 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ಚುಕ್ಕಿ ಎಳೆದು ಸುಂದರವಾದ ರಂಗೋಲಿ ಬಿಡಿಸುವುದು ನೋಡಿರುತ್ತೀರಿ. ಆದರೆ, ಇದೇ ಚುಕ್ಕಿಯ ಮೂಲಕ ಕಲಾಕೃತಿ ರಚಿಸುವ ಕಲಾವಿದ ಮೋಹನ್‌ ವೆರ್ಣೇಕರ್‌ , ಕಲಾಪ್ರಪಂಚದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣ ಗ್ರಾಮದ ಮೋಹನ್‌ ವೆರ್ಣೇಕರ್‌ ‘ಚುಕ್ಕಿ ಚಿತ್ರ ಕಲೆ’ ಯನ್ನು ಹವ್ಯಾಸವಾಗಿ ಆರಂಭಿಸಿದರು. ವೃತ್ತಿಯ ಜೊತೆಜೊತೆಗೆ ಹವ್ಯಾಸವಾಗಿ ಮುಂದುವರಿಸಿಕೊಂಡು ಬಂದ ಇವರಿಗೆ ಈ ಕಲೆ ಕೈಹಿಡಿದಿದ್ದು, ಸ್ಥಾನಮಾನವನ್ನು ನೀಡಿದನ್ನು ನೆನಪಿಸಿಕೊಳ್ಳುತ್ತಾರೆ. ಯಾರ ಮಾರ್ಗದರ್ಶನವೂ ಇಲ್ಲದೇ, ಸ್ವತಃ ಈ ಕಲೆಯನ್ನು ರೂಢಿಸಿಕೊಂಡು ಮುನ್ನಡೆದಿದ್ದು, ಇವರಹೆಗ್ಗಳಿಕೆ.

ಕರ್ನಾಟಕ ವಿಧಾನಸಭೆಯ ಸಚಿವಾಲಯದ ರೆಕಾರ್ಡಿಂಗ್‌ ಆಫೀಸರ್‌ (ಅಭಿಲೇಖನಾಧಿಕಾರಿ) ಆಗಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.

ಸಾಮಾನ್ಯ ಚಿತ್ರಗಳನ್ನು ಕೆಲವೇ ನಿಮಿಷಗಳಲ್ಲಿ ಬರೆದು ಮುಗಿಸಬಹುದು. ಇದು ಹಾಗಲ್ಲ. ಮೊದಲಿಗೆ ಸಪೂರವಾದ ರೇಖೆ ಎಳೆದು, ಅದರ ಮೇಲೆ ಕನಿಷ್ಠ 1ರಿಂದ 2 ಕೋಟಿ ಚುಕ್ಕಿಗಳನ್ನು ಇಡಬೇಕು. ಇದಕ್ಕೆ ಕನಿಷ್ಠ 30ರಿಂದ 60 ಗಂಟೆಯಷ್ಟು ಸಮಯ ವ್ಯಯವಾಗುತ್ತದೆ.

ಬರೇ ಚುಕ್ಕಿಗಳನ್ನು ಉಪಯೋಗಿಸಿ, ಚಿತ್ರಗಳನ್ನು ಮೂಡಿಸುವುದು ಈ ಕಲೆಯ ವೈಶಿಷ್ಟ್ಯ. ಚಿತ್ರಕಲೆಯಲ್ಲಿ ಇದನ್ನು ‘ಸ್ಟಿಪ್ಲಿಂಗ್‌’ ಆರ್ಟ್‌ ಎಂದು ಕರೆಯಲಾಗುತ್ತದೆ. ಇಂತಹ, ಚಿತ್ರ ರಚನೆ ಮಾಡುವ ವೇಳೆ ಕೌಶಲದ ಜೊತೆಗೆ ಅಪಾರ ತಾಳ್ಮೆಯೂ ಅಗತ್ಯ. ನೆರಳು ಮತ್ತು ಬೆಳಕು ಸಂಯೋಜನೆಯಲ್ಲಿ ಏಕಾಚಿತ್ತಾಗ್ರತೆಯಿಂದ ಕಲಾವಿದ ಇಲ್ಲಿ ಕಲಾನೈಪುಣ್ಯತೆ ಮೆರೆಯುವುದು ವಿಶೇಷ.

ಕನ್ನಡದ ಆಸ್ತಿಯೆಂದೇ ಸಾರಸ್ವತ ಲೋಕದಲ್ಲಿ ಜನಪ್ರಿಯರಾಗಿರುವ ‘ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌’ ಅವರ ಚಿತ್ರ ಬರೆದು ಅದನ್ನು ತೋರಿಸಿದಾಗ, ಮೆಚ್ಚಿ ಬೆನ್ನುತಟ್ಟಿದ್ದರು. ಅಲ್ಲದೇ, ಇತರೆ ಸಾಹಿತಿಗಳ ಚಿತ್ರವನ್ನು ಇದೇ ರೀತಿ ಬರೆಯುವಂತೆ ಪ್ರೋತ್ಸಾಹಿಸಿದ್ದೇ ಇಲ್ಲಿಯವರೆಗೂ ಬೆಳೆದುಬಂದಿದೆ ಎಂದು ವೆರ್ಣೇಕರ್‌ ನೆನಪಿಸಿಕೊಳ್ಳುತ್ತಾರೆ.

ಹಿರಿಯ ಸಾಹಿತಿಗಳಾದ ಕುವೆಂಪು, ಶಿವರಾಮ ಕಾರಂತ, ಪು.ತಿ.ನರಸಿಂಹಾಚಾರ್ಯ, ಗೌರೀಶ್‌ ಕಾಯ್ಕಿಣಿ, ಪ್ರೊ.ಜಿ. ವೆಂಕಟಸುಬ್ಬಯ್ಯ, ಎಂ.ಕೆ. ಇಂದಿರಾ, ವ್ಯಾಸರಾಯಬಲ್ಲಾಳ, ಜಿ.ಎಸ್‌. ಶಿವರುದ್ರಪ್ಪ, ಚೆನ್ನವೀರಕಣವಿ, ಎಸ್‌.ಎಲ್‌.ಭೈರಪ್ಪ ಸೇರಿದಂತೆ 108ಕ್ಕೂ ಪ್ರಸಿದ್ಧ ಸಾಹಿತಿಗಳ ಚಿತ್ರಗಳನ್ನು ಚುಕ್ಕಿಯಲ್ಲಿ ಮೂಡಿಸಿ, ಅವರ ಸಂಕ್ಷಿಪ್ತ ವಿವರಣೆ ಸಹಿತ ಪುಸ್ತಕ ರೂಪದಲ್ಲಿ
ಹೊರತಂದಿದ್ದಾರೆ.

ಅದರಲ್ಲೂ ಎರಡು ಸಿಂಹಗಳ ಗರ್ಜನೆಯ ಚಿತ್ರವೊಂದನ್ನು ರಚಿಸಿದ್ದು, 3 ಕೋಟಿ ಚುಕ್ಕಿ ಬಳಸಿ ಈ ಚಿತ್ರ ರಚಿಸಿದ್ದಾರೆ. ಬರೋಬ್ಬರಿ 60 ಗಂಟೆ ವ್ಯಯಿಸಿ ಈ ಚಿತ್ರ ರಚಿಸಿದ್ದು, ‘ಫೆರೋಶಿಯಲ್‌ ಬ್ಯೂಟಿ’ (ಉಗ್ರ ಸೌಂದರ್ಯ) ಎಂದು ಶೀರ್ಷಿಕೆ ಇಟ್ಟಿದ್ದಾರೆ.

ಸಾಹಿತ್ಯದಲ್ಲೂ ಸಾಧನೆ: ವೆರ್ಣೇಕರ್‌ ಚುಕ್ಕಿ ಚಿತ್ರದ ಜೊತೆಗೆ ಬರವಣಿಗೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕಥೆ, ಕವನ, ಲೇಖನ, ಆರೋಗ್ಯ ವಿಜ್ಞಾನ, ಮನೋವಿಜ್ಞಾನ, ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಬೆಂಗಳೂರು ಆಕಾಶವಾಣಿ ಕೇಂದ್ರದ ಯುವಜನ, ಮಹಿಳಾ ಮತ್ತು ಮಕ್ಕಳ ವಿಭಾಗದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅನೇಕ ಬಾನುಲಿ ನಾಟಕಗಳನ್ನು ಮಾಡಿದ್ದಾರೆ. ಇವರ ಸ್ವರಚಿತ ನಾಟಕ ಹಾಗೂ 15ಕ್ಕೂ ಹೆಚ್ಚು ರೂಪಕಗಳುಪ್ರಸಾರಗೊಂಡಿವೆ. ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಪಟ್ಟಂತೆ, 57ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ‘ದಿಕ್ಕು’, ‘ಪ್ರೀತಿ–ಪ್ರೇಮಗಳ ನಡುವೆ’, ‘ಸ್ವರ್ಣಮಂದಾರ’, ‘ಕಪ್ಪು ಬಾನಲ್ಲಿ ಚಂದಿರ’ (ಕಾದಂಬರಿ) ‘ಪ್ರಶಸ್ತಿ’, ‘ಪ್ರಾಪ್ತಿ’, ‘ಪ್ರೇಮಿಸಿದವರು’, ‘ಅವಳು ಕ್ಷಮಾತೀತಳು’, ‘ನರಸಿಂಹದೇವರಿಗೆ ಚಿನ್ನದ ಕಿರೀಟ’ (ಕಥಾ ಸಂಕಲನಗಳು) , ‘ನಮ್ಮ ಅಕ್ಕ’, ‘ಬಹುಮಾನ’, ‘ದಶಾವತಾರಗಳು’, ‘ಪ್ರಚಂಡ ಪೋರರು’, ‘ಧೀರಪುಟಾಣಿ’, ‘ಮೂರು ಮಕ್ಕಳ ನಾಟಕಗಳು’, ‘ಬನ್ನಿ ನಗೋಣ’, (ಮಕ್ಕಳ ನಾಟಕ) ‘ಬಂಗಾರದ ಪೆಟ್ಟಿಗೆ’, ‘ನೀತಿ ಬೋಧಕ ಮಕ್ಕಳ ರಾಮಾಯಣ’ ( ಮಕ್ಕಳ ಕಥೆಗಳು) ‘ತಪ್ಪೋತ್ಸವ’(ನಗೆಹನಿಗಳ ಸಂಗ್ರಹ) ಪ್ರಮುಖ ಕೃತಿಗಳು. ಇದಲ್ಲದೇ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ, ಹಲವು ಕೃತಿಗಳನ್ನು ರಚಿಸಿರುವುದು ಇವರಹೆಗ್ಗಳಿಕೆ.

ಮೋಹನ್‌ ವೆರ್ಣೇಕರ್‌

‘ಆಕರ್ಷಕ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಹೇಗೆ’? ‘ಮಾನಸಿಕ ಒತ್ತಡ–ನಿವಾರಣೋಪಾಯಗಳು’, ‘ಮಾನಸಿಕ ಒತ್ತಡ ಕಾಡುತ್ತಿದೆಯೇ’?, ‘ಮನೋಖಿನ್ನತೆ ನಿರ್ಲಕ್ಷ್ಯತೆ ಬೇಡ’, ‘ಆತಂಕದಿಂದ ಹೊರಬನ್ನಿ’, ‘ಅಂತಃಪುರದ ಅಂತರಂಗದ ಮಾತು’ ಸೇರಿದಂತೆ ಹಲವು ಕೃತಿಗಳನ್ನುರಚಿಸಿದ್ದಾರೆ.

ಇವರ ಸಾಧನೆ ಗುರುತಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ನಕ್ಷತ್ರ ಗೌರವ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಡಾ. ರಾಜ್‌ಕುಮಾರ್‌ ಸದ್ಭಾವನಾ ಪುರಸ್ಕಾರ, ಕನ್ನಡ ಸಿರಿ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ಸೂರಜ್‌ ಸೇವಾ ಪ್ರಶಸ್ತಿ, ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನ ಗೌರವ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

‘ಹವ್ಯಾಸಕ್ಕಾಗಿ ಆರಂಭಿಸಿದ ಈ ಕಲೆಯಿಂದ ಪ್ರಶಸ್ತಿ, ಹಣ ಮಾಡುವ ಉದ್ದೇಶವಿಲ್ಲ. ಕನ್ನಡಕ್ಕಾಗಿ ನನ್ನದೊಂದು ಚಿಕ್ಕ ಸೇವೆ’ ಎಂದು ಹೇಳುತ್ತಾರೆ ವೆರ್ಣೇಕರ್‌.

‘ಸಾಹಿತಿಗಳು ಎದುರು ನಿಂತಂತೆ ಅವರ ವ್ಯಕ್ತಿತ್ವವನ್ನು ಚಿತ್ರದಲ್ಲಿ ಸೆರೆಹಿಡಿದಿರುವುದು ಅಮೋಘವಾಗಿದೆ. ಇದು ಕಲೆಗಾರಿಕೆಯ ಸೊಗಸು’ ಎಂದು ಇವರ ಚಿತ್ರಗಳಿಗೆ ಹಿರಿಯ ಸಾಹಿತಿ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

*

ಸಾಹಿತಿಗಳು ಎದುರು ನಿಂತಂತೆ ಅವರ ವ್ಯಕ್ತಿತ್ವವನ್ನು ಚಿತ್ರದಲ್ಲಿ ಸೆರೆಹಿಡಿದಿರುವುದು ಅಮೋಘವಾಗಿದೆ. ಇದು ಕಲೆಗಾರಿಕೆಯ ಸೊಗಸು
–ಪ್ರೊ. ಜಿ. ವೆಂಕಟಸುಬ್ಬಯ್ಯ, ಸಾಹಿತಿ

ದ.ರಾ. ಬೇಂದ್ರೆ
ಕುವೆಂಪು
ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಶಿವರಾಮ ಕಾರಂತ
ಸುಬ್ಬಲಕ್ಷ್ಮೀ
ಸ್ವಾಮಿ ವಿವೇಕಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT